“ನಾವು ದೆಹಲಿಯಿಂದ ವಾಪಾಸ್ ಬಂದು ಎರಡು ವರ್ಷಗಳಾಗಿವೆ. ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಮಾತು ಕೊಟ್ಟಿತ್ತು, ಆದರೆ ಆ ಬೇಡಿಕೆಗಳ ಬಗ್ಗೆ ಚರ್ಚಿಸಲು ಯಾರೂ ನಮ್ಮನ್ನು ರೈತರೆಂದು ಪರಿಗಣಿಸಲಿಲ್ಲ,” ಎಂದು ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ನಿವಾಸಿ 60 ವರ್ಷದ ಚರಣಜಿತ್ ಕೌರ್ ಹೇಳುತ್ತಾರೆ. ಅವರ ಕುಟುಂಬ ತಮ್ಮ ಎರಡು ಎಕರೆ ಜಮೀನಿನಲ್ಲಿ ಗೋಧಿ, ಭತ್ತ ಮತ್ತು ಮನೆಯ ಬಳಕೆಗಾಗಿ ಬೇಕಾದ ಕೆಲವು ತರಕಾರಿಗಳನ್ನು ಬೆಳೆಯುತ್ತದೆ. "ನಾವು ಎಲ್ಲಾ ರೈತರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದೇವೆ," ಎಂದು ಚರಣಜಿತ್ ಕೌರ್ ಹೇಳುತ್ತಾರೆ.
ಪಟಿಯಾಲ ಜಿಲ್ಲೆಯ ಶಂಭು ಗಡಿಯಲ್ಲಿ ಜಮೆಯಾಗಿರುವ ಮಹಿಳೆಯರ ಗುಂಪಿನ ಮಧ್ಯೆ ತಮ್ಮ ಸ್ನೇಹಿತೆ ಗುರ್ಮೀತ್ ಕೌರ್ ಜೊತೆಗೆ ಚರಣಜಿತ್ ಕುಳಿತಿದ್ದಾರೆ. ಉರಿಉರಿಯಾದ ಮಧ್ಯಾಹ್ನದ ಬಿಸಿಲು ಈ ಗುಂಪಿನ ಮೇಲೆ ಬೀಳುತ್ತಿದೆ. "ಅವರು [ಸರ್ಕಾರ] ನಮ್ಮನ್ನು ದೆಹಲಿಯ ಕಡೆಗೆ ಹೋಗಲು ಬಿಡಲಿಲ್ಲ," ಎಂದು ಗುರ್ಮೀತ್ ಹೇಳುತ್ತಾರೆ. ಕಾಂಕ್ರೀಟ್ ಗೋಡೆಗಳು, ಕಬ್ಬಿಣದ ಮೊಳೆಗಳು ಮತ್ತು ಮುಳ್ಳಿನ ತಂತಿಗಳ ಬ್ಯಾರಿಕೇಡ್‌ಗಳನ್ನು ಹರಿಯಾಣ-ಪಂಜಾಬ್ ಗಡಿಗಳಲ್ಲಿ ಮತ್ತು ದೆಹಲಿ-ಹರಿಯಾಣ ಗಡಿಗಳಲ್ಲಿರುವ ರಸ್ತೆಗಳಲ್ಲಿ ಹಾಕಿದ್ದಾರೆ. ಹೀಗೆ ಪ್ರತಿಭಟನಾ ನಿರತ ರೈತರನ್ನು ದೆಹಲಿಯ ಕಡೆಗೆ ಪ್ರಯಾಣ ಬೆಳೆಸದಂತೆ ತಡೆದು ನಿಲ್ಲಿಸಿದ್ದಾರೆ. ಓದಿ: ‘ನಾನು ಶಂಭು ಗಡಿಯಲ್ಲಿ ಬಂಧಿಯಾಗಿದ್ದೇನೆʼ
ಸ್ವಾಮಿನಾಥನ್ ಆಯೋಗ ನೀಡಿದ ಶಿಫಾರಸ್ಸಿನಂತೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿ, ರೈತರು ಮತ್ತು ರೈತ ಕಾರ್ಮಿಕರ ಸಂಪೂರ್ಣ ಸಾಲ ಮನ್ನಾ, ಸಂತ್ರಸ್ತ ರೈತರಿಗೆ ನ್ಯಾಯ ನೀಡುವುದು, ಲಖಿಂಪುರ-ಖೇರಿ ಹತ್ಯಾಕಾಂಡದ ಅಪರಾಧಿಗಳ ಬಂಧನ, ರೈತರು ಮತ್ತು ಕಾರ್ಮಿಕರಿಗೆ ಪಿಂಚಣಿ ನೀಡುವುದು ಮತ್ತು 2020-2021ರ ಪ್ರತಿಭಟನೆಯಲ್ಲಿ ಹುತಾತ್ಮರಾದ ರೈತರ ಕುಟುಂಬಗಳಿಗೆ ಪರಿಹಾರ ನೀಡುವುದು: ಇಂತಹ ಕೆಲವು ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಇಲ್ಲಿ ನೆರೆದಿರುವ ರೈತರು ಹೇಳುತ್ತಾರೆ.
ಕಳೆದ ಕೆಲ ವಾರಗಳ ಹಿಂದೆ, ಫೆಬ್ರವರಿ 13 ರಂದು, ರೈತರು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಷ್ಟ್ರ ರಾಜಧಾನಿಗೆ ಶಾಂತಿಯುತವಾಗಿ ಮೆರವಣಿಗೆ ಹೊರಟರು. ಅವರ ಮೇಲೆ ಅಶ್ರುವಾಯು, ಜಲಫಿರಂಗಿಗಳು, ಪೆಲೆಟ್ ಗನ್‌ಗಳು, ರಬ್ಬರ್ ಬುಲೆಟ್‌ಗಳಿಂದ ದಾಳಿ ಮಾಡಲಾಯಿತು. ಅವರನ್ನು ಮುಂದೆ ಸಾಗದಂತೆ ತಡೆಯಲು ಹರ್ಯಾಣ ಪೊಲೀಸರು ಗುಂಡು ಹಾರಿಸಿದ್ದರು.
ಹರ್ಯಾಣ ಮತ್ತು ಪಂಜಾಬ್ ನಡುವಿನ ಶಂಭು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸುರೀಂದರ್ ಕೌರ್ ಅವರ ಮಗ ಕೂಡ ಇದ್ದಾರೆ. “ಸಾಡೆ ತೇ ಮೊಬೈಲ್, ಟೆಲಿವಿಷನ್ ಬ್ಯಾಂಡ್ ಹಾಯ್ ನಹೀ ಹೋಂಡೆ. ಅಸಿ ದೇಖದೇ ಹೈ ನಾ ಸಾರಾ ದಿನ್ ಗೋಲೇ ವಾಜದೇ, ತದೋ ಮನ್ ವಿಚ್ ಹೌಲ್ ಜೇಯಾ ಪೇಂದಾ ಹೈ ಕಿ ಸಾದೇ ಬಚೇ ತೇ ವಜೇ ನಾ. [ನಮ್ಮ ಮೊಬೈಲ್‌ಗಳು ಮತ್ತು ಟೆಲಿವಿಷನ್‌ಗಳು ಯಾವಾಗಲೂ ಆನ್ ಆಗಿರುತ್ತವೆ. ದಿನವಿಡೀ ನಡೆಯುವ ಅಶ್ರುವಾಯು ಶೆಲ್ ದಾಳಿಯನ್ನು ನೋಡುವಾಗ, ನಮ್ಮ ಮಕ್ಕಳ ಸುರಕ್ಷತೆಯ ಚಿಂತೆಯಾಗುತ್ತದೆ,]” ಎಂದು ಅವರು ಹೇಳುತ್ತಾರೆ.
ಖೋಜೆ ಮಜ್ರಾ ಗ್ರಾಮದ ಸುರೀಂದರ್ ಕೌರ್, ಫೆಬ್ರವರಿ 24, 2024ರ ಬೆಳಿಗ್ಗೆ ಶುಭಕರನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ನಡೆದ ಕ್ಯಾಂಡಲ್ ಲೈಟ್ ಮರವಣಿಗೆಯಲ್ಲಿ ಭಾಗವಹಿಸಲು ಬಂದಿದ್ದರು. 22 ವರ್ಷ ಹರೆಯದ ಶುಭಕರಣ್ ಹರಿಯಾಣ-ಪಂಜಾಬ್ ನಡುವಿನ ಇನ್ನೊಂದು ಗಡಿ ಖಾನೌರಿಯಲ್ಲಿ ನಡೆದ ಭದ್ರತಾ ಸಿಬ್ಬಂದಿ ಮತ್ತು ಪ್ರತಿಭಟನಾ ನಿರತ ರೈತರ ನಡುವಿನ ಘರ್ಷಣೆಯಲ್ಲಿ ಸಾವನ್ನಪ್ಪಿದರು.
"ನಾವು ನಮ್ಮ ಹಕ್ಕುಗಳಿಗಾಗಿ (ಹಕ್) ಹೋರಾಡುತ್ತಿದ್ದೇವೆ, ನಮ್ಮ ಹಕ್ಕುಗಳು ಈಡೇರುವ ವರೆಗೆ ನಾವು ಮರಳಿ ಹೋಗುವುದಿಲ್ಲ," ಎಂದು ಅವರು ಪಟ್ಟುಹಿಡಿಯುತ್ತಾರೆ. 64 ವರ್ಷ ಪ್ರಾಯದ ಇವರು ತಮ್ಮ ಸೊಸೆ ಮತ್ತು ಮೊಮ್ಮಕ್ಕಳೊಂದಿಗೆ ಇಲ್ಲಿಗೆ ಬಂದಿದ್ದಾರೆ.
ಸುರೀಂದರ್ ಕೌರ್ ಅವರ ಆರು ಮಂದಿ ಸದಸ್ಯರಿರುವ ಕುಟುಂಬ ಫತೇಘರ್ ಸಾಹಿಬ್ ಜಿಲ್ಲೆಯಲ್ಲಿರುವ ತಮ್ಮ ಎರಡು ಎಕರೆ ಜಮೀನಿನನ್ನು ಅವಲಂಬಿಸಿ ಬದುಕುತ್ತಿದೆ. ಈ ಜಮೀನಿನಲ್ಲಿ ಅವರು ಗೋಧಿ ಮತ್ತು ಭತ್ತವನ್ನು ಬೆಳೆಯುತ್ತಾರೆ. ಕೇವಲ ಐದು ಬೆಳೆಗಳಿಗೆ ಎಂಎಸ್‌ಪಿ ನೀಡಿದರೆ ಸಾಕಾಗುವುದಿಲ್ಲ ಎಂದು ಅವರು ಹೇಳುತ್ತಾರೆ. "ಮಿಟ್ಟಿ ದೇ ಭಾವ ಲಾಂದೆ ಹೈ ಸಾದಿ ಫಸಲ್ [ಅವರು ನಮ್ಮ ಬೆಳೆಗಳನ್ನು ಪ್ರಯೋಜನಕ್ಕೆ ಬಾರದ ಬೆಲೆಗೆ ಖರೀದಿಸುತ್ತಾರೆ]," ಎಂದು ಅವರು ತಮ್ಮ ಹೊಲಗಳು ಮತ್ತು ಸುತ್ತಮುತ್ತ ಬೆಳೆಯುವ ಸಾಸಿವೆಯಂತಹ ಇತರ ಬೆಳೆಗಳ ಬಗ್ಗೆ ಹೇಳುತ್ತಾರೆ.
"ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರೂ, ಪೊಲೀಸರು ಇಂತಹ ಕಠಿಣ ಕ್ರಮಗಳನ್ನು ಏಕೆ ತೆಗೆದುಕೊಳ್ಳುತ್ತಾರೆ?" ಎಂದು ಪ್ರತಿಭಟನೆಯ ಆರಂಭದಿಂದಲೂ ಸ್ಥಳದಲ್ಲಿರುವ ತಮ್ಮ ಮಗನ ಬಗ್ಗೆ ಆತಂಕಗೊಂಡಿರುವ ದೇವಿಂದರ್ ಕೌರ್ ಕೇಳುತ್ತಾರೆ. ಪಂಜಾಬ್‌ನ ಸಾಹಿಬ್ಜಾದಾ ಅಜಿತ್ ಸಿಂಗ್ ನಗರ ಜಿಲ್ಲೆಯ ಲ್ಯಾಂಡ್ರಾನ್ ಗ್ರಾಮದ ದೇವಿಂದರ್ ಕೌರ್ ಕೂಡ ತನ್ನ ಸೊಸೆಯಂದಿರು ಮತ್ತು 2, 7 ಮತ್ತು 11 ವರ್ಷ ಪ್ರಾಯದ ಮೊಮ್ಮಕ್ಕಳು ಜೊತೆಗೆ ಇಲ್ಲಿಗೆ ಬಂದಿದ್ದಾರೆ.
"ಸರ್ಕಾರ ಕೇವಲ ಗೋಧಿ ಮತ್ತು ಭತ್ತಕ್ಕೆ ಮಾತ್ರ ಎಂಎಸ್‌ಪಿ ನೀಡಿದೆ. ಹೀಗೆ ಮಾಡಿದ ನಂತರ ಅವರು ನಮ್ಮನ್ನು ಬೇರೆ ಬೇರೆ ಬೆಳೆಗಳನ್ನು ಬೆಳೆಯಲು ಹೇಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನಾವು ಹೇಗೆ ವಿವಿಧ ಬೆಳೆಗಳನ್ನು ಬೆಳೆಯುಲು ಸಾಧ್ಯ?" ಎಂದು ದೇವಿಂದರ್ ಕೇಳುತ್ತಾರೆ. “2022-2023 ರಲ್ಲಿ ಭಾರತೀಯ ಆಹಾರ ನಿಗಮವು ಮೆಕ್ಕೆಜೋಳಕ್ಕೆ ಕ್ವಿಂಟಾಲ್‌ಗೆ 1,962 ರುಪಾಯಿ ಎಂಎಸ್‌ಪಿ ನಿಗದಿಪಡಿಸಿದರೂ, ನಾವು ಬೆಳೆದ ಮೆಕ್ಕೆಜೋಳವನ್ನು ಕ್ವಿಂಟಾಲ್‌ಗೆ 800ರಿಂದ 900 ರೂಪಾಯಿ ಬೆಲೆಗೆ ತೆಗೆದುಕೊಳ್ಳುತ್ತಾರೆ,” ಎಂದು ಅವರು ಹೇಳುತ್ತಾರೆ.
ಬ್ಯಾರಿಕೇಡ್‌ಗಳಿಂದ ಸುಮಾರು 200 ಮೀಟರ್ ದೂರದಲ್ಲಿ ಟ್ರಾಲಿಯಲ್ಲಿ ನಿರ್ಮಿಸಲಾದ ತಾತ್ಕಾಲಿಕ ವೇದಿಕೆಯ ಮೇಲೆ ನಿಂತು ರೈತ ಮುಖಂಡರು ಭಾಷಣಗಳನ್ನು ಮಾಡುತ್ತಿದ್ದಾರೆ. ಇವರು ಮುಂದಿನ ಕಾರ್ಯಕ್ರಮಗಳ ಕುರಿತು ಪ್ರತಿಭಟನಾ ನಿರತ ರೈತರಿಗೆ ತಿಳಿಸುತ್ತಿದ್ದಾರೆ. ಹೆದ್ದಾರಿಯಲ್ಲಿ ಹಾಸಿರುವ ಚಾದರಗಳ ಮೇಲೆ ರೈತರು ಕುಳಿತಿದ್ದಾರೆ. ಸಾವಿರಾರು ಟ್ರಾಕ್ಟರ್ ಟ್ರಾಲಿಗಳ ಕಾರವಾನ್ ಪಂಜಾಬ್ ಕಡೆಗೆ ನಾಲ್ಕು ಕಿಲೋಮೀಟರ್ ವರೆಗೆ ಹಬ್ಬಿದೆ.
ಪಂಜಾಬ್‌ನ ರಾಜ್‌ಪುರದ 44 ವರ್ಷ ಪ್ರಾಯದ ರೈತ ಪರಮಪ್ರೀತ್ ಕೌರ್ ಫೆಬ್ರವರಿ 24 ರಿಂದ ಶಂಭುನಲ್ಲಿದ್ದಾರೆ. ಅಮೃತಸರ ಮತ್ತು ಪಠಾಣ್‌ಕೋಟ್‌ನ ಹಳ್ಳಿಗಳಿಂದ ಬಂದಿರುವ ಪ್ರತೀ ಟ್ರ್ಯಾಕ್ಟರ್ ಟ್ರಾಲಿಗಳಲ್ಲಿ ನಾಲ್ಕರಿಂದ ಐದು ಮಂದಿ ಮಹಿಳೆಯರಿದ್ದಾರೆ. ಅವರು ಇತರ ಮಹಿಳಾ ಗುಂಪುಗಳ ಜೊತೆಗೆ ಇಡೀ ಹಗಲು ಮತ್ತು ಮಾರನೇ ದಿನ ಹಗಲು ಕೂಡ ಇಲ್ಲೇ ಇರುತ್ತಾರೆ. ಪ್ರತಿಭಟನಾ ಸ್ಥಳದಲ್ಲಿ ಶೌಚಾಲಯದ ಸಮಸ್ಯೆ ಇರುವುದರಿಂದ ರಾತ್ರಿಯಿಡೀ ತಂಗಲು ಇವರಿಗೆ ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳುತ್ತಾರೆ. "ಕುಟುಂಬದಿಂದ ಒಬ್ಬರಾದರೂ ಹೋರಾಟಕ್ಕೆ ಬೆಂಬಲ ನೀಡಲು ಬರಬೇಕು ಎಂದು ನಾನು ಭಾವಿಸಿದೆ," ಎಂದು ಪರಮಪ್ರೀತ್ ಹೇಳುತ್ತಾರೆ. ಅವರ 21 ವರ್ಷದ ಮಗ ಅನಾರೋಗ್ಯದಿಂದ ಬಳಲುತ್ತಿದ್ದು, ಅವರೊಂದಿಗೆ ಬರಲು ಸಾಧ್ಯವಾಗದ ಕಾರಣ ತಮ್ಮ ಸಂಬಂಧಿಕರೊಂದಿಗೆ ಬಂದಿದ್ದಾರೆ. ಇವರ ಕುಟುಂಬಕ್ಕೆ 20 ಎಕರೆ ಜಮೀನಿದೆ. ಅದರಲ್ಲಿ ಅವರು ಗೋಧಿ ಮತ್ತು ಭತ್ತ ಬೆಳೆಯುತ್ತಾರೆ, ಆದರೆ 2021 ರಲ್ಲಿ ಇವರ ಗಂಡನಿಗೆ ಪಾರ್ಶ್ವವಾಯು ಬಡಿದು, ಈ ಜಮೀನಿನಲ್ಲಿ ಯಾವುದೇ ಉತ್ಪತ್ತಿ ಬೆಳೆಯಲು ಸಾಧ್ಯವಾಗಲಿಲ್ಲ.
"ಜಮೀನಿನಲ್ಲಿರುವ ಅಂತರ್ಜಲ ಹತ್ತಿರದ ಕಾರ್ಖಾನೆಯಿಂದ ಬರುವ ರಾಸಾಯನಿಕದಿಂದ ಕಲುಷಿತಗೊಂಡು, ನಮ್ಮ ಜಮೀನನ್ನು ಲೀಸಿಗೆ ತೆಗೆದುಕೊಂಡು ಕೃಷಿ ಮಾಡಲು ಯಾರೂ ಮುಂದೆ ಬರುತ್ತಿಲ್ಲ," ಎಂದು ಅವರು ಹೇಳುತ್ತಾರೆ.
ಅಮನ್‌ದೀಪ್ ಕೌರ್ ಮತ್ತು ಅವರ ಕುಟುಂಬಕ್ಕೆ ಪಟಿಯಾಲ ಜಿಲ್ಲೆಯ ಭತೇಹ್ರಿ ಗ್ರಾಮದಲ್ಲಿ 21 ಎಕರೆ ಕೃಷಿಭೂಮಿಯಿದೆ. ಅವರು ಅದರಲ್ಲಿ ಗೋಧಿ ಮತ್ತು ಭತ್ತ ಬೆಳೆಯುತ್ತಾರೆ. "ನಾವು ಬೆಳೆದ ಬೆಳೆಗಳು ನಮ್ಮ ಹೊಲಗಳಲ್ಲಿದ್ದಾಗ ಅವುಗಳ ಬೆಲೆ ಅತ್ಯಂತ ಕಡಿಮೆ. ಆದರೆ, ಒಮ್ಮೆ ಅವು ನಮ್ಮ ಕೈಯಿಂದ ಹೋದರೆ, ಮಾರ್ಕೆಟ್‌ನಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತವೆ,” ಎಂದು ಅವರು ಹೇಳುತ್ತಾರೆ.
ಪ್ರತಿಭಟನೆಯ ಬಗ್ಗೆ ಮಾತನಾಡುತ್ತಾ ಅವರು, “ಪ್ರತಿಭಟನಾಕಾರರಲ್ಲಿ ಯಾವುದೇ ಆಯುಧವಿಲ್ಲ, ಆದರೂ ಸರ್ಕಾರ ತನ್ನದೇ ನಾಗರಿಕರ ವಿರುದ್ಧ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದೆ. ಭಾರತದಲ್ಲಿ ಉಳಿದು ಬದುಕಲು ಕಾರಣಗಳೇ ಇಲ್ಲವಾಗುತ್ತಿದೆ. ಯುವಕರು ದೇಶ ಬಿಟ್ಟು ಹೋದರೆ ಅಚ್ಚರಿಯೇನಿಲ್ಲ. ಇಲ್ಲಿ ಉದ್ಯೋಗಗಳು ಕಡಿಮೆಯಾಗಿದೆ ಮಾತ್ರವಲ್ಲ, ನಾವು ನಮ್ಮ ಹಕ್ಕುಗಳಿಗೆ ಹೋರಾಡಿದರೂ ಈ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದಾರೆ,” ಎಂದು ಹೇಳುತ್ತಾರೆ.
ಅನುವಾದ: ಚರಣ್ ಐವರ್ನಾಡು