ಅದು ಮೇ ತಿಂಗಳ ಬಿರು ಬಿಸಿಲಿನ ಒಂದು ಮಧ್ಯಾಹ್ನವಾಗಿತ್ತು. ಆದರೆ ಆ ಬಿಸಿಲಿನಲ್ಲೂ ಮೊಹ್ ಎನ್ನುವ ಊರಿನಲ್ಲಿನ ಹಜರತ್ ಸೈಯದ್ ಅಲ್ವಿ (ರಹಮತುಲ್ಲಾ ಅಲೆಹಿ) ದರ್ಗಾದಲ್ಲಿ ಜನ ಜಂಗುಳಿ ಸೇರುತ್ತಿತ್ತು. ನಲವತ್ತು ಕುಟುಂಬಗಳು ಕಂದೂರಿ ಎನ್ನುವ ವಾರ್ಷಿಕ ಹಬ್ಬದ ತಯಾರಿಲ್ಲಿದ್ದವು. ಇಲ್ಲಿ ವಿಶೇಷವೆಂದರೆ ಮುಸ್ಲಿಮರ ಕುಟುಂಬಗಳಿಗಿಂತಲೂ ಹಿಂದೂ ಕುಟುಂಬಗಳೇ ಹೆಚ್ಚಿದ್ದವು. ಧೊಬಾಲೆ ಕುಟುಂಬವೂ ಇಲ್ಲಿ ಹಬ್ಬ ಮಾಡಲು ಬಂದಿದ್ದ ಕುಟುಂಬಗಳಲ್ಲಿ ಒಂದಾಗಿದ್ದವು. ನಾವು ಅವರ ಅತಿಥಿಗಳಾಗಿ ಅಲ್ಲಿಗೆ ಹೋಗಿದ್ದೆವು.
ಬೇಸಿಗೆ ತಿಂಗಳುಗಳಲ್ಲಿ ರೈತರು ಬಿಡುವಾಗಿರುತ್ತಾರೆ. ಈ ತಿಂಗಳುಗಳಲ್ಲಿ ಒಸ್ಮನಾಬಾದ್, ಲಾತೂರ್, ಮತ್ತು ಇತರ ಆರು ಜಿಲ್ಲೆಗಳಾದ ಬೀಡ್, ಜಲ್ನಾ, ಔರಂಗಾಬಾದ್, ಪರ್ಭಾನಿ, ನಾಂದೇಡ್ ಹಾಗೂ ಹಿಂಗೋಲಿಯಲ್ಲಿನ ಪೀರ್‌ಗಳ ದರ್ಗಾಗಳು ಚಟುವಟಿಕೆಯಿಂದ ಕೂಡಿರುತ್ತವೆ. ಗುರುವಾರ ಮತ್ತು ಭಾನುವಾರಗಳಂದು ಇಲ್ಲಿ ಕುಟುಂಬಗಳು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಸೇರುತ್ತವೆ. ಗಂಡು ಕುರಿಯನ್ನು ಇಲ್ಲಿ ಬಲಿ ಕೊಟ್ಟು ಅದನ್ನು ಬೇಯಿಸಿ ನೈವೇದ್ಯವಾಗಿ ಸಂತರಿಗೆ (ಪೀರ್) ಅರ್ಪಿಸಿ ನಂತರ ಎಲ್ಲರೂ ಸೇರಿ ಊಟ ಮಾಡಿ ಇತರರಿಗೂ ಬಡಿಸುತ್ತಾರೆ.
“ನಾವು ಇದನ್ನು [ ಕಂದೂರಿ] ತಲೆಮಾರುಗಳಿಂದ ಮಾಡಿಕೊಂಡು ಬಂದಿದ್ದೇವೆ” ಒಸ್ಮನಾಬಾದ್ ಬಳಿಯ ಯೇದ್ಶಿ (ಯೆಡ್ಸಿ ಎಂದೂ ಕರೆಯಲಾಗುತ್ತದೆ) ನಮ್ಮ ಸಂಬಂಧಿಯಾದ ಭಾಗೀರತಿ ಕದಮ್ ಹೇಳುತ್ತಾರೆ. ಈ ಮರಾಠವಾಡಾ ಭಾಗವು ಆರು ನೂರು ವರ್ಷಗಳ ಕಾಲ (224 ವರ್ಷಗಳ ಕಾಲದ ಹೈದರಾಬಾದ್ ನಿಜಾಮರ ಆಡಳಿತವೂ ಸೇರಿ) ಇಸ್ಲಾಮಿಕ್ ಆಡಳಿತಕ್ಕೆ ಒಳಪಟ್ಟಿತ್ತು. ಈ ದರ್ಗಾಗಳಿಗೆ ನಡೆದುಕೊಳ್ಳುವುದು ಮತ್ತು ಅದರ ಆಚರಣೆಗಳು ಜನರ ಬದುಕಿನಲ್ಲಿ ಮಿಳಿತಗೊಂಡಿದ್ದು, ಸೌಹಾರ್ದ ಪರಂಪರೆಯ ಪ್ರತೀಕವಾಗಿ ಉಳಿದುಕೊಂಡಿದೆ.
"ನಾವು ಗಡ್ ದೇವದರಿಯಲ್ಲಿ ಪೂಜಿಸುತ್ತೇವೆ. ತವರಾಜ್ ಖೇಡಾದಿಂದ ಬಂದವರು ಇಲ್ಲಿಗೆ ಬರುತ್ತಾರೆ ಮತ್ತು ನಿಮ್ಮ ಊರಿನ (ಲಾತೂರ್ ಜಿಲ್ಲೆಯ ಬೊರ್ಗಾಂವ್ ಬಿಕೆ) ಜನರು ಶೇರಾಗೆ ಭೇಟಿ ನೀಡಬೇಕಾಗುತ್ತದೆ" ಎಂದು ಭಾಗ ಮಾವ್ಶಿ ಎಂದು ಪ್ರೀತಿಯಿಂದ ಕರೆಯಲ್ಪಡುವ ಭಾಗೀರಥಿ ಹೇಳುತ್ತಾರೆ.
ಇಲ್ಲಿನ ಮೊಹಾದ ರೆಹಮತುಲ್ಲಾ ದರ್ಗಾದಲ್ಲಿ, ಪ್ರತಿ ಮರದ ಕೆಳಗೆ ಮತ್ತು ತಗಡಿನ ಛಾವಣಿಗಳು ಅಥವಾ ಟಾರ್ಪಾಲಿನ್ ಶೀಟುಗಳ ಆಶ್ರಯದಲ್ಲಿ, ಜನರು ಚುಲ್ಹಾಗಳನ್ನು (ತಾತ್ಕಾಲಿಕ ಒಲೆಗಳು) ಸ್ಥಾಪಿಸಿದ್ದಾರೆ ಮತ್ತು ದರ್ಗಾದಲ್ಲಿ ಆಚರಣೆಗಳ ಸಮಯದಲ್ಲಿ ಇಲ್ಲಿ ಆಹಾರವನ್ನು ಬೇಯಿಸಲಾಗುತ್ತದೆ. ಈ ನಡುವೆ ಪುರುಷರು ಮತ್ತು ಮಹಿಳೆಯರು ಮಾತಿನಲ್ಲಿ ಮುಳುಗಿದ್ದರೆ ಮಕ್ಕಳು ಓಡಾಡುತ್ತಾ ಆಟವಾಡುತ್ತಿದ್ದರು. ವಾತಾವರಣದ ಗಾಳಿಯಲ್ಲಿ ಬಿಸಿಯ ಅಂಶವಿತ್ತಾದರೂ ಆಕಾಶದಲ್ಲಿ ಒಟ್ಟುಗೂಡುತ್ತಿದ್ದ ಮೋಡಗಳು ಹಾಗೂ ಪ್ರವೇಶದ್ವಾರದಲ್ಲಿ ಸಾಲಾಗಿ ನಿಂತಿದ್ದ ಹುಣಿಸೆ ಮರಗಳು ಸಾಕಷ್ಟು ನೆರಳು ನೀಡಿದ್ದವು. ದರ್ಗಾದ ನೀರಿನ ಮೂಲವಾದ ಅಲ್ಲಿನ 90 ಅಡಿ ಆಳದ ಬಾರವ್ ಎಂದು ಕರೆಯಲ್ಪಡುವ ಬಾವಿಯ ನೀರು ಒಣಗಿತ್ತು. “ಮಳೆಗಾಲದಲ್ಲಿ ಈ ಬಾವಿ ತುಂಬಿರುತ್ತದೆ” ಎಂದು ಭಕ್ತರೊಬ್ಬರು ಹೇಳಿದರು.




















