ಮೂರು ದಶಕಗಳ ಹಿಂದೆ, ಸಂಜಯ್ ಯುವಕರಿದ್ದ ಸಮಯದಲ್ಲಿ ಅವರಿಗೆ ಬಿದಿರು ಕೆಲಸವನ್ನು ಕಲಿಸಲು ಯಾರೂ ಸಿದ್ಧರಿರಲಿಲ್ಲ. ಆದರೆ ಈಗ ಅಳಿವಿನಂಚಿಗೆ ಸಾಗಿರುವ ಈ ಕರಕುಶುಲತೆಯನ್ನು ಕಲಿಸುತ್ತೇನೆಂದರೆ ಕಲಿಯುವುದಕ್ಕೆ ಯಾರೂ ಮುಂದೆ ಬರುತ್ತಿಲ್ಲ. “ಈ ರೀತಿ ಕಾಲ ಬದಲಾಗಿರುವುದು ನಿಜಕ್ಕೂ ವಿಪರ್ಯಾಸ” ಎಂದು 50 ವರ್ಷದ ಅವರು ಹೇಳುತ್ತಾರೆ.
ತಮ್ಮ ಒಂದು ಎಕರೆ ಹೊಲದಲ್ಲಿ ಬೆಳೆಯುವ ಬಿದಿರು ಬಳಸಿಕೊಂಡು ಕಾಂಬ್ಳೆ ಮುಖ್ಯವಾಗಿ ಇರ್ಲಾ ತಯಾರಿಸುತ್ತಾರೆ. ಇದೊಂದು ಭತ್ತದ ಗದ್ದೆಯಲ್ಲಿ ಬಳಸುವ ಮಳೆಯಿಂದ ರಕ್ಷಣೆ ನೀಡುವ ಉಪಕರಣ. ಹೆಚ್ಚಾಗಿ ಇದನ್ನು ಪಶ್ಚಿಮ ಮಹಾರಾಷ್ಟ್ರದ ಈ ಪ್ರದೇಶದ ರೈತರು ಬಳಸುತ್ತಾರೆ. "ಸುಮಾರು ಇಪ್ಪತ್ತು ವರ್ಷಗಳ ಹಿಂದೆ, ನಮ್ಮ ಶಾಹುವಾಡಿ ತಾಲ್ಲೂಕಿನಲ್ಲಿ ಸಾಕಷ್ಟು ಮಳೆಯಾಗುತ್ತಿದ್ದ ಕಾರಣ ಪ್ರತಿಯೊಬ್ಬ ರೈತನೂ ಹೊಲಗಳಲ್ಲಿ ಕೆಲಸ ಮಾಡುವಾಗ ಇರ್ಲಾ ಬಳಸುತ್ತಿ" ಎಂದು ಕೆರ್ಲೆ ಗ್ರಾಮದ ಈ ನಿವಾಸಿ ಹೇಳುತ್ತಾರೆ. ಜಮೀನಿನಲ್ಲಿ ಕೆಲಸ ಮಾಡುವಾಗ ಅವರು ಅದನ್ನು ಬಳಸುತ್ತಿದ್ದರು. “ಒಂದು ಇರ್ಲಾ ಕನಿಷ್ಠ ಏಳು ವರ್ಷ ಬಾಳಿಕೆ ಬರುತ್ತದೆ. ನಂತರವೂ ಅದನ್ನು ಸುಲಭವಾಗಿ ದುರಸ್ತಿ ಮಾಡಬಹುದು” ಎಂದು ಅವರು ಹೇಳುತ್ತಾರೆ.
ಆದರೆ ಈಗ ಸಂಗತಿಗಳು ಬದಲಾಗಿವೆ.
ಕೊಲ್ಹಾಪುರ ಜಿಲ್ಲೆಯಲ್ಲಿ ಜುಲೈ ಮತ್ತು ಸೆಪ್ಟೆಂಬರ್ ನಡುವೆ ಬೀಳುವ ಮಳೆಯ ಪ್ರಮಾಣದಲ್ಲಿ ಕಳೆದ 20 ವರ್ಷಗಳಲ್ಲಿ ಕಡಿಮೆಯಾಗಿದೆ ಎಂದು ಸರ್ಕಾರಿ ಅಂಕಿ ಅಂಶಗಳು ಹೇಳುತ್ತವೆ – 2003ರಲ್ಲಿ 1,308 ಮಿ.ಮೀ ಇದ್ದ ಮಳೆ ಪ್ರಮಾಣ 2023ರಲ್ಲಿ 973 ಮಿ.ಮೀಗೆ ಇಳಿದಿದೆ.
“ಮುಂದೊಂದು ದಿನ ಇಲ್ಲಿ ಮಳೆ ಕಡಿಮೆಯಾಗಿ ನನ್ನ ಕಲೆಗೆ ಅದು ಎರವಾಗಬಹುದು ಎಂದು ಯಾರು ಯೋಚಿಸಿದ್ದರು? ಎಂದು ಇರ್ಲಾ ತಯಾರಕ ಸಂಜಯ್ ಕಾಂಬ್ಳೆ ಪ್ರಶ್ನಿಸುತ್ತಾರೆ.
“ನಮ್ಮ ಮಳೆ ಅವಲಂಬಿತ ಕೃಷಿಯಾಗಿರುವ ಕಾರಣ ನಾವು ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತನಕವಷ್ಟೇ ಕೃಷಿ ಮಾಡುತ್ತೇವೆ” ಇತ್ತೀಚಿನ ವರ್ಷಗಳಲ್ಲಿ, ಮಳೆಯ ವೈಪರೀತ್ಯವು ಹೆಚ್ಚಿನ ಗ್ರಾಮಸ್ಥರನ್ನು ಮುಂಬೈ ಮತ್ತು ಪುಣೆಯಂತಹ ನಗರಗಳಿಗೆ ವಲಸೆ ಹೋಗುವಂತೆ ಮಾಡಿದೆ, ಅಲ್ಲಿ ಅವರುಹೋಟೆಲ್ಲುಗಳಲ್ಲಿ ಕೆಲಸ ಮಾಡುತ್ತಾರೆ, ಖಾಸಗಿ ಬಸ್ ಕಂಪನಿಗಳಲ್ಲಿ ಕಂಡಕ್ಟರುಗಳಾಗಿ, ಮೇಸ್ತ್ರಿಗಳಾಗಿ, ದಿನಗೂಲಿ ಕಾರ್ಮಿಕರಾಗಿ ಮತ್ತು ಬೀದಿ ಬದಿ ವ್ಯಾಪಾರಿಗಳಾಗಿ ದುಡಿಯುತ್ತಾರೆ ಅಥವಾ ಮಹಾರಾಷ್ಟ್ರದಾದ್ಯಂತ ಹೊಲಗಳಲ್ಲಿ ದುಡಿಯುತ್ತಾರೆ.


















