ಜಿ20 ಶೃಂಗಸಭೆಗೆ ಬರುತ್ತಿರುವ ಜಗತ್ತಿನ ನಾಯಕರನ್ನು ಸ್ವಾಗತಿಸಲು ದೇಶದ ರಾಜಧಾನಿ ಪ್ರಜ್ವಲಿಸುವಾಗ,  ದೆಹಲಿಯಲ್ಲಿರುವ ಸದ್ಯ ಯುಮುನಾ ನದಿ ನೆರೆ ಸಂತ್ರಸ್ತರಾಗಿರುವ ವಲಸಿಗ ರೈತರ ಬಾಳಿನಲ್ಲಿ ಕತ್ತಲು ಕವಿದಿದೆ. ಗೀತಾ ಕಾಲೋನಿ ಫ್ಲೈ ಓವರ್ ಅಡಿಯಲ್ಲಿ ಬದುಕುತ್ತಿದ್ದ ಇವರನ್ನು ಯಮುನಾ ನದಿ ದಂಡೆಯ ಕಾಡಿಗೆ ಓಡಿಸಲಾಗಿದೆ. ಮಾತ್ರವಲ್ಲ, ಮೂರು ದಿನಗಳ ಕಾಲ ಎಲ್ಲೂ ಕಾಣಿಸಿಕೊಳ್ಳದಂತೆ ಒತ್ತಡ ಹಾಕಲಾಗಿದೆ.

" ನಮ್ಮಲ್ಲಿ ಕೆಲವರನ್ನು ಬಲವಂತವಾಗಿ ಪೊಲೀಸರು ಒಕ್ಕಲೆಬ್ಬಿಸಿದರು. ಹದಿನೈದು ನಿಮಿಷಗಳಲ್ಲಿ ಜಾಗ ಖಾಲಿ ಮಾಡದೆ ಇದ್ದರೆ ಫೋರ್ಸ್ - ಪವರ್ ಬಳಸಿ ಓಡಿಸಲಾಗುವುದು ಎಂದು ಹೆದರಿಸಿದರು," ಎಂದು ಪರಿಗೆ ಹರಿಲಾಲ್ ಹೇಳಿದರು.

ಹಾವುಗಳು, ಚೇಳುಗಳು ಮತ್ತು ಏನೇನೋ ಅಪಾಯಗಳು ಆ ಕಾಡಿನ ತುಂಬಾ ಬೆಳೆದಿರುವ ಹುಲ್ಲಿನಲ್ಲಿವೆ. "ನಮ್ಮ ಕುಟುಂಬಗಳಿಗೆ ವಿದ್ಯುತ್, ನೀರು ಏನೂ ಇಲ್ಲ. ನಮ್ಮವರಿಗೆ ಏನಾದರೂ ಕಚ್ಚಿದರೆ, ಕುಟುಕಿದರೆ ಪಕ್ಕದಲ್ಲಿ ಆಸ್ಪತ್ರೆಗಳೂ ಇಲ್ಲ," ಹಿಂದೊಮ್ಮೆ ತನ್ನನ್ನು ಹೆಮ್ಮೆಯ ರೈತ ಎಂದು ಕರೆದುಕೊಳ್ಳುತ್ತಿದ್ದ ಇವರು ಹೇಳುತ್ತಾರೆ.

*****

ಹೀರಾಲಾಲ್‌ ತನ್ನ ಕುಟುಂಬದ ಅಡುಗೆ ಅನಿಲದ ಸಿಲಿಂಡರ್‌ ಎತ್ತಿಕೊಂಡು ಬರಲೆಂದು ದೌಡಾಯಿಸಿದರು. ರಾಜ್‌ಘಾಟ್‌ ಬಳಿಯ ಬೇಲಾ ಎಸ್ಟೇಟಿನಲ್ಲಿರುವ ತಮ್ಮ ಮನೆಗೆ ಕಪ್ಪು ನೀರು ದೈತ್ಯ ಹಾವಿನಂತೆ ನುಗ್ಗುತ್ತಿರುವುದನ್ನು ಕಂಡ ಅವರು ಎರಡನೇ ಆಲೋಚನೆ ಮಾಡಲೇ ಇಲ್ಲ.

ಅದು ಜುಲೈ 12, 2023ರ ರಾತ್ರಿ. ಅಂದು ದಿನಗಟ್ಟಲೆ ಸುರಿದ ಭಾರಿ ಮಳೆಯಿಂದಾಗಿ ಯಮುನಾ ನದಿ ಉಕ್ಕಿ ಹರಿದಿತ್ತು, ಮತ್ತು ದೆಹಲಿಯ ಅದರ ದಡದಲ್ಲಿ ವಾಸಿಸುತ್ತಿದ್ದ ಹೀರಾಲಾಲ್ ಅವರಂತಹವರ ಪಾಲಿಗೆ ಸಮಯ ಮುಗಿಯುತ್ತಾ ಬಂದಿತ್ತು.

ಮಯೂರ ವಿಹಾರದ ಯಮುನಾ ಪುಸ್ತಾ ನಿವಾಸಿ 60 ವರ್ಷದ ಚಮೇಲಿ (ಗೀತಾ ಎಂದು ಕರೆಯಲಾಗುತ್ತದೆ) ತಮ್ಮ ನೆರೆಮನೆಯ ಒಂದು ತಿಂಗಳ ಕೂಸಾದ ರಿಂಕಿಯನ್ನು ಗಡಿಬಿಡಿಯಿಂದ ಬಾಚಿಕೊಂಡರು. ಈ ನಡುವೆ ಅವರ ಸುತ್ತಲಿನ ಜನರು ಭಯಗೊಂಡ ಆಡುಗಳು, ಹೆದರಿದ ನಾಯಿಗಳನ್ನು ಹೆಗಲ ಮೇಲಿರಿಸಿಕೊಂಡು ಪ್ರವಾಹವನ್ನು ದಾಟುತ್ತಿದ್ದರು. ಅವುಗಳಲ್ಲಿ ಕೆಲವನ್ನು ಅವರು ದಾರಿಯಲ್ಲೇ ಕಳೆದುಕೊಂಡರು. ರಭಸವಾಗಿ ಹರಿಯುತ್ತಿರುವ ನೆರೆ ನೀರು ಏರುವ ಮೊದಲು ತಮ್ಮ ಪಾತ್ರೆ ಪಗಡಿ, ವಸ್ತ್ರಗಳನ್ನು ಎತ್ತಿಕೊಳ್ಳಲು ಅಲ್ಲಿನ ನಿವಾಸಿಗಳು ಪರದಾಡುತ್ತಿದ್ದರು.

“ಬೆಳಗಾಗುವುದರೊಳಗೆ ಎಲ್ಲೆಡೆ ನೀರು ತುಂಬಿಕೊಂಡಿತ್ತು. ನಮ್ಮನ್ನು ರಕ್ಷಿಸಲು ಯಾವ ದೋಣಿಯೂ ಬಂದಿರಲಿಲ್ಲ. ಜನ ಫ್ಲೈ ಓವರ್‌ ಸೇರಿದಂತೆ ನೀರಿಲ್ಲದ ಜಾಗ ಕಂಡಲ್ಲೆಲ್ಲ ಹೋಗಿ ನಿಂತರು” ಬೇಲಾ ಎಸ್ಟೇಟ್‌ ಪ್ರದೇಶದಲ್ಲಿ ಹೀರಾಲಾಲ್‌ ಅವರ ಪಕ್ಕದ ಮನೆಯವರಾಗಿದ್ದ 55 ವರ್ಷದ ಶಾಂತಿ ದೇವಿ ಹೇಳಿದರು. “ನಮ್ಮ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸುವುದು ನಮ್ಮ ಮೊದಲ ಆದ್ಯತೆಯಾಗಿತ್ತು. ಕೊಳಕು ನೀರಿನಲ್ಲಿ ಹಾವು ಇತ್ಯಾದಿ ಜೀವಿಗಳಿದ್ದರೆ ಕಾಣುವುದಿಲ್ಲ.”

ತನಗೆ ಸೇರಿದ ಆಹಾರ ಪಡಿತರಗಳು ಮತ್ತು ಮಕ್ಕಳ ಶಾಲೆಯ ಪುಸ್ತಕಗಳು ತೇಲಿ ಹೋಗುತ್ತಿದ್ದರೆ ಅವರು ಅದನ್ನು ಅಸಹಾಯಕತೆಯಿಂದ ನಿಂತು ನೋಡುತ್ತಿದ್ದರು. “ನಾವು 25 ಕೇಜಿ ಗೋಧಿ ಕಳೆದುಕೊಂಡೆವು. ಬಟ್ಟೆಗಳು ತೇಲಿ ಹೋದವು…”

ಇದಾದ ಕೆಲವು ವಾರಗಳ ನಂತರ, ಗೀತಾ ಕಾಲೋನಿಯ ಫ್ಲೈ ಓವರ್‌ ಅಡಿಯಲ್ಲಿನ ತಾತ್ಕಾಲಿಕ ಮನೆಗಳಲ್ಲಿ ನೆಲೆಗೊಂಡಿರುವ ಕೆಲವು ಸಂತ್ರಸ್ಥರನ್ನು ಪರಿ ಮಾತನಾಡಿಸಿತು. “ಪ್ರಶಾಸನ್‌ ನೇ ಸಮಯ್‌ ಸೇ ಪೆಹಲೇ ಜಗಾಹ್‌ ಖಾಲಿ ಕರ್ನೇ ಕೀ ಚೇತ್ವಾನಿ ನಹೀ ದೀ. ಕಪ್ಡೇ ಪೆಹಲೇ ಸೇ ಬಾಂಧ್‌ ಕೇ ರಖ್ಖೇ ಥೇ, ಗೋಧ್‌ ಮೇ ಉಠಾ-ಉಠಾ ಕೇ ಬಕ್ರಿಯಾ ನಿಕಾಲೀಂ… ಹಮೇ ನಾವ್‌ ಭೀ ಮಾಂಗೀ ಜಾನ್ವಾರೋಂ ಕೋ ಬಚಾನೇ ಕೇಲಿಯೆ, ಪರ್‌ ಕುಚ್‌ ನಹೀ ಮಿಲಾ [ಆಡಳಿತವು ಸಮಯಕ್ಕೆ ಸರಿಯಾಗಿ ಸ್ಥಳವನ್ನು ಬಿಡಲು ಮಾಹಿತಿಯನ್ನು ಸಹ ನೀಡಲಿಲ್ಲ. ಬಟ್ಟೆಗಳನ್ನು ಮೊದಲೇ ಕಟ್ಟಿಟ್ಟಿದ್ದೆವು. ಸಾಧ್ಯವಿರುವಷ್ಟು ಆಡುಗಳನ್ನು ಕಾಪಾಡಿದೆವು. ಆಡುಗಳನ್ನು ಕಾಪಾಡುವ ಸಲುವಾಗಿ ದೋಣಿ ಕೇಳಿದೆವು ಆದರೆ ಏನೂ ಸಿಗಲಿಲ್ಲ” ಎಂದು ಹೀರಾಲಾ ಆಗಸ್ಟ್‌ ತಿಂಗಳ ಮೊದಲ ವಾರದಲ್ಲಿ ಮಾತನಾಡುತ್ತ ತಿಳಿಸಿದರು.

Hiralal is a resident of Bela Estate who has been displaced by the recent flooding of the Yamuna in Delhi. He had to rush with his family when flood waters entered their home in July 2023. They are currently living under the Geeta Colony flyover near Raj Ghat (right) with whatever belongings they could save from their flooded homes
PHOTO • Shalini Singh
Hiralal is a resident of Bela Estate who has been displaced by the recent flooding of the Yamuna in Delhi. He had to rush with his family when flood waters entered their home in July 2023. They are currently living under the Geeta Colony flyover near Raj Ghat (right) with whatever belongings they could save from their flooded homes
PHOTO • Shalini Singh

ಹೀರಾಲಾಲ್ ಬೇಲಾ ಎಸ್ಟೇಟ್ ನಿವಾಸಿಯಾಗಿದ್ದು, ಇತ್ತೀಚೆಗೆ ದೆಹಲಿಯಲ್ಲಿ ಯಮುನಾ ಪ್ರವಾಹದಿಂದಾಗಿ ಸ್ಥಳಾಂತರಗೊಂಡಿದ್ದಾರೆ. ಜುಲೈ 2023ರಲ್ಲಿ ಪ್ರವಾಹದ ನೀರು ಅವರ ಮನೆಗೆ ನುಗ್ಗಿದಾಗ ಅವರು ತಮ್ಮ ಕುಟುಂಬದೊಂದಿಗೆ ಅಲ್ಲಿಂದ ಹೊರಡಬೇಕಾಯಿತು. ಅವರು ಪ್ರಸ್ತುತ ರಾಜ್ ಘಾಟ್ (ಬಲ) ಬಳಿಯ ಗೀತಾ ಕಾಲೋನಿ ಫ್ಲೈಓವರ್ ಅಡಿಯಲ್ಲಿ ಪ್ರವಾಹದಲ್ಲಿ ಅಳಿದುಳಿದ ವಸ್ತುಗಳೊಡನೆ ಬದುಕು ನಡೆಸುತ್ತಿದ್ದಾರೆ

Geeta (left), holding her neighbour’s one month old baby, Rinky, who she ran to rescue first when the Yamuna water rushed into their homes near Mayur Vihar metro station in July this year.
PHOTO • Shalini Singh
Shanti Devi (right) taking care of her grandsons while the family is away looking for daily work.
PHOTO • Shalini Singh

ಈ ವರ್ಷದ ಜುಲೈ ತಿಂಗಳಿನಲ್ಲಿ ಮಯೂರ್ ವಿಹಾರ್ ಮೆಟ್ರೋ ನಿಲ್ದಾಣದ ಬಳಿ ಯಮುನಾ ನದಿಯ ನೀರು ಅಲ್ಲಿನ ಮನೆಗಳಿಗೆ ನುಗ್ಗಿದಾಗ ಗೀತಾ (ಎಡ) ತನ್ನ ನೆರೆಮನೆಯಯ ಒಂದು ತಿಂಗಳ ಮಗು ರಿಂಕಿಯನ್ನು ಬಾಚಿ ಎತ್ತಿಕೊಂಡು ರಕ್ಷಿಸಿದರು. ಕುಟುಂಬವು ದಿನಗೂಲಿ ಹುಡುಕಿಕೊಂಡು ಹೋದರೆ, ಶಾಂತಿ ದೇವಿ (ಬಲ) ತನ್ನ ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಾರೆ

ಹೀರಾಲಾಲ್ ಮತ್ತು ಶಾಂತಿ ದೇವಿ ಅವರ ಕುಟುಂಬಗಳು ಈಗ ಸುಮಾರು ಎರಡು ತಿಂಗಳಿನಿಂದ ಗೀತಾ ಕಾಲೋನಿ ಫ್ಲೈ ಓವರ್ ಕೆಳಗೆ ವಾಸಿಸುತ್ತಿವೆ. ಫ್ಲೈ ಓವರ್‌ ಕೆಳಗಿನ ತಮ್ಮ ತಾತ್ಕಾಲಿಕ ಮನೆಗಳಿಗೆ ವಿದ್ಯುತ್‌ ಪಡೆಯುವ ಸಲುವಾಗಿ ಬೀದಿ ದೀಪಗಳಿಂದ ರಾತ್ರಿ ಒಂದು ಬಲ್ಬ್‌ ಬೆಳಗುವಷ್ಟು ವಿದ್ಯುತ್‌ ಪಡೆಯಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ. ಕುಡಿಯುವ ನೀರಿನ ಸಲುವಾಗಿ ಹೀರಾಲಾಲ್‌ ಇಲ್ಲಿಂದ 4ರಿಂದ 5 ಕಿಲೋಮೀಟರ್‌ ದೂರದಲ್ಲಿರುವ ದರಿಯಾಗಂಜ್‌ ಪ್ರದೇಶಕ್ಕೆ ದಿನಕ್ಕೆ ಎರಡು ಬಾರಿ 20 ಲೀಟರ್‌ ಕ್ಯಾನ್‌ ಕಟ್ಟಿಕೊಂಡು ಹೋಗಿ ಸಾರ್ವಜನಿಕ ಸಾರ್ವಜನಿಕ ನಲ್ಲಿಯಲ್ಲಿ ನೀರನ್ನು ಹಿಡಿದು ತರುತ್ತಾರೆ.

ಅವರಿಗೆ ತಮ್ಮ ಬದುಕನ್ನು ಮರಳಿ ಕಟ್ಟಿಕೊಳ್ಳುವ ಸಲುವಾಗಿ ಯಾವುದೇ ಪರಿಹಾರವನ್ನು ನೀಡಲಾಗಿಲ್ಲ. ಒಂದು ಕಾಲದಲ್ಲಿ ಯಮುನೆಯ ದಡದಲ್ಲಿ ಹೆಮ್ಮೆಯಿಂದ ಬೇಸಾಯ ಮಾಡುತ್ತಿದ್ದ ಹೀರಾಲಾಲ್‌ ಈಗ ನಿರ್ಮಾಣ ಕಾರ್ಮಿಕನಾಗಿ ದುಡಿಯುತ್ತಿದ್ದಾರೆ. ಅವರ ಪಕ್ಕದ ಮನೆಯವರಾದ ಶಾಂತಿದೇವಿಯವರ ಪತಿ, ಒಂದು ಕಾಲದ ರೈತ ಈಗ ಜನನಿಬಿಡ ರಸ್ತೆಯೊಂದರ ಬದಿಯಲ್ಲಿ ನಿಂತು ಕಚೋರಿ (ತಿನಿಸು) ಮಾರಾಟಗಾರರ ಸಾಲಿನಲ್ಲಿ ನಿಂತು ವ್ಯಾಪಾರ ಮಾಡುತ್ತಿದ್ದಾರೆ.

ಆದರೆ ಜಿ20 ಸಭೆಯ ಆತಿಥ್ಯಕ್ಕಾಗಿ ಸರ್ಕಾರ ಹಾಗೂ ದೆಹಲಿ ಸಜ್ಜಾಗುತ್ತಿರುವ ಕಾರಣ ಅವರ ಈ ತಕ್ಷಣದ ಭವಿಷ್ಯವೂ ಅಪಾಯಕ್ಕೆ ಸಿಲುಕಿದೆ. ಮುಂದಿನ ಎರಡು ತಿಂಗಳ ಕಾಲ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವಂತೆ ಆಡಳಿತ ಆದೇಶ ನೀಡಿದೆ. ”ಕಾಣಿಸಿಕೊಳ್ಳದಿರಿ” ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. “ನಾವು ಹೊಟ್ಟೆಪಾಡಿಗೆ ಏನು ಮಾಡುವುದು?” ಎನ್ನುವುದು ಶಾಂತಿಯವರ ಪ್ರಶ್ನೆ. “ಜಗತ್ತಿಗೆ ದೇಶವನ್ನು ತೋರಿಸುವ ಹೆಸರಿನಲ್ಲಿ ನೀವು ನಿಮ್ಮ ದೇಶದ ಜನರ ಮನೆಗಳು ಮತ್ತು ಜೀವನೋಪಾಯಗಳನ್ನು ನಾಶಗೊಳಿಸುತ್ತಿದ್ದೀರಿ.”

ಜುಲೈ 16ರಂದು ದೆಹಲಿ ಸರ್ಕಾರವು ಪ್ರವಾಹ ಪೀಡಿತ ಕುಟುಂಬಕ್ಕೆ 10,000 ರೂ.ಗಳ ಪರಿಹಾರವನ್ನು ಘೋಷಿಸಿತು. ಆ ಮೊತ್ತವನ್ನು ಕೇಳಿ ಹೀರಾಲಾಲ್ ಒಂದು ಕ್ಷಣ ಅವಕ್ಕಾದರು. "ಇದು ಯಾವ ರೀತಿಯ ಪರಿಹಾರ? ಯಾವ ಆಧಾರದ ಮೇಲೆ ಈ ಮೊತ್ತವನ್ನು ನಿರ್ಧರಿಸಿದರು? 10,000 ರೂಪಾಯಿಗಳು ನಮ್ಮ ಜೀವಕ್ಕೆ ಬೆಲೆಯೇ? ಒಂದು ಮೇಕೆಯ ಬೆಲೆ 8,000-10,000 ರೂಪಾಯಿಗಳಷ್ಟಿವೆ. ತಾತ್ಕಾಲಿಕ ಮನೆಯನ್ನು ನಿರ್ಮಿಸಲು ಸಹ 20,000-25,000 ರೂಪಾಯಿಗಳು ಬೇಕಾಗುತ್ತದೆ."

ಇಲ್ಲಿ ಬದುಕುತ್ತಿರುವ ಸಾಕಷ್ಟು ಜನರು ಮೊದಲು ತಾವು ಕೃಷಿ ಮಾಡುತ್ತಿದ್ದ ಭೂಮಿಯನ್ನು ಕಳೆದುಕೊಂಡು ಈ ಮಜ್ದೂರಿ (ದಿನಗೂಲಿ ಕೆಲಸ), ರಿಕ್ಷಾ ಎಳೆಯುವುದು ಅಥವಾ ಮೆನಗೆಲಸಗಳನ್ನು ಹತಾಶೆಯಿಂದ ಹುಡುಕುವುದನ್ನು ಮಾಡುತ್ತಿದ್ದಾರೆ.

Several families in Bela Estate, including Hiralal and Kamal Lal (third from right), have been protesting since April 2022 against their eviction from the land they cultivated and which local authorities are eyeing for a biodiversity park.
PHOTO • Shalini Singh

ಹೀರಾಲಾಲ್ ಮತ್ತು ಕಮಲ್ ಲಾಲ್ (ಬಲದಿಂದ ಮೂರನೆಯವರು) ಸೇರಿದಂತೆ ಬೇಲಾ ಎಸ್ಟೇಟಿನ ಹಲವಾರು ಕುಟುಂಬಗಳು ಏಪ್ರಿಲ್ 2022ರಿಂದ ತಾವು ಕೃಷಿ ಮಾಡುತ್ತಿದ್ದ ಭೂಮಿಯಿಂದ ತಮ್ಮನ್ನು ಹೊರಹಾಕುವುದರ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ ಮತ್ತು ಸ್ಥಳೀಯ ಅಧಿಕಾರಿಗಳು ಜೀವವೈವಿಧ್ಯ ಉದ್ಯಾನ ನಿರ್ಮಾಣಕ್ಕಾಗಿ ಈ ನೆಲದ ಮೇಲೆ ಕಣ್ಣಿಟ್ಟಿದ್ದಾರೆ

Most children lost their books (left) and important school papers in the Yamuna flood. This will be an added cost as families try to rebuild their lives. The solar panels (right) cost around Rs. 6,000 and nearly every flood-affected family has had to purchase them if they want to light a bulb at night or charge their phones
PHOTO • Shalini Singh
Most children lost their books (left) and important school papers in the Yamuna flood. This will be an added cost as families try to rebuild their lives. The solar panels (right) cost around Rs. 6,000 and nearly every flood-affected family has had to purchase them if they want to light a bulb at night or charge their phones.
PHOTO • Shalini Singh

ಹೆಚ್ಚಿನ ಮಕ್ಕಳು ಯಮುನಾ ಪ್ರವಾಹದಲ್ಲಿ ತಮ್ಮ ಶಾಲಾ ಪುಸ್ತಕಗಳು (ಎಡ) ಹಾಗೂ ಶಾಲಾ ಪತ್ರಿಕೆಗೆಳನ್ನು ಕಳೆದುಕೊಂಡಿದ್ದಾರೆ. ತಮ್ಮ ಬದುಕನ್ನು ಪನರ್‌ ನಿರ್ಮಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕುಟುಂಬಗಳ ಪಾಲಿಗೆ ಇದು ಹೆಚ್ಚುವರಿ ಹೊರೆಯಾಗಿದೆ. ಸೌರಫಲಕಗಳಿಗೆ (ಬಲ) 6,000 ರೂಪಾಯಿಗಳಷ್ಟು ವೆಚ್ಚವಾಗುತ್ತದೆ. ಪ್ರವಾಹ ಸಂತ್ರಸ್ಥ ಕುಟುಂಬಗಳಿಗೆ ರಾತ್ರಿ ಬೆಳಕು ಹೊತ್ತಿಸಲು ಮತ್ತು ಫೋನ್‌ ಚಾರ್ಜ್‌ ಮಾಡಲು ಇದನ್ನು ಖರಿದಿಸಲೇಬೇಕಾಗಿದೆ

ಈಗ ಆರು ವಾರಗಳ ನಂತರ ನೆರೆ ನೀರು ಇಳಿದಿದೆ, ಆದರೆ ಎಲ್ಲರಿಗೂ ಪರಿಹಾರ ದೊರೆತಿಲ್ಲ. ಇಲ್ಲಿನ ನಿವಾಸಿಗಳು ಈ ಪರಿಹಾರ ಪಡೆಯಲು ಬೇಕಾಗುವ ಕಾಗದ ಪತ್ರಗಳು ಮತ್ತು ತಿರುಗಾಟದ ಕುರಿತು ದೂರುತ್ತಾರೆ. “ಮೊದಲು ಅವರು ಆಧಾರ್‌ ಕಾರ್ಡ್‌, ಬ್ಯಾಂಕ್‌ ಪೇಪರುಗಳು, ಫೋಟೊ ತರಲು ಹೇಳಿದರು. ಮತ್ತೆ ರೇಷನ್‌ ಕಾರ್ಡ್‌ ತರಲು ಹೇಳಿದರು…”‌ ಎನ್ನುತ್ತಾರೆ ಕಮಲ್‌ ಲಾಲ್. ತಪ್ಪಿಸಬಹುದಾಗಿದ್ದ, ಮಾನವ ನಿರ್ಮಿತ ದುರಂತದ ಸಂತ್ರಸ್ತರಾದ ಈ ಪ್ರದೇಶದ 150ಕ್ಕೂ ಹೆಚ್ಚು ಕುಟುಂಬಗಳಿಗೆ ಅಂತಿಮವಾಗಿ ಹಣ ಬರುತ್ತದೆಯೇ ಎನ್ನುವುದರ ಕುರಿತು ಅವರಿಗೆ ಖಚಿತವಿಲ್ಲ.

ಸರಕಾರಿ ಯೋಜನೆಗಳಿಗೆ ತಮ್ಮ ಕೃಷಿ ಭೂಮಿಯನ್ನು ಕಳೆದುಕೊಂಡ ಈ ಪ್ರದೇಶದಲ್ಲಿ ವಾಸಿಸುವ 700ಕ್ಕೂ ಹೆಚ್ಚು ಹಳೆಯ ಕೃಷಿ ಕುಟುಂಬಗಳಿಗೆ ಪುನರ್ವಸತಿ ಕೋರಿದ್ದ ಹಿಂದಿನ ಪ್ರಯತ್ನಗಳು ಸ್ಥಗಿತಗೊಂಡಿವೆ. ಅವುಗಳನ್ನು ತೆರವುಗೊಳಿಸಬೇಕೆಂದು ಬಯಸುವ ಅಧಿಕಾರಿಗಳೊಂದಿಗೆ ನಿರಂತರ ಜಗಳ ನಡೆಯುತ್ತಿದೆ. 'ಅಭಿವೃದ್ಧಿ', ಸ್ಥಳಾಂತರ, ವಿಪತ್ತು ಅಥವಾ ಪ್ರದರ್ಶನವಾಗಲಿ, ಈ ರೈತರು ಯಾವಾಗಲೂ ಯೋಜನೆಗಳ ಬಲಿಪಶುಗಳಾಗಿದ್ದಾರೆ. ಕಮಲ್ ಬೇಲಾ ಎಸ್ಟೇಟ್ ಮಜ್ದೂರ್ ಬಸ್ತಿ ಸಮಿತಿ ಗುಂಪಿನ ಭಾಗವಾಗಿದ್ದಾರೆ, ಅದು ಪರಿಹಾರವನ್ನು ಕೇಳುತ್ತಿದೆ ಆದರೆ, "ಪ್ರವಾಹವು ನಮ್ಮ ಪ್ರತಿಭಟನೆಯನ್ನು ನಿಲ್ಲಿಸಿತು" ಎಂದು 37 ವರ್ಷದ ಅವರು ಹೇಳುತ್ತಾರೆ.

*****

45 ವರ್ಷಗಳ ನಂತರ ಇದೀಗ ದೆಹಲಿ ಮತ್ತೆ ಮುಳುಗಿದೆ. 1978ರಲ್ಲಿ ಯಮುನಾ ತನ್ನ ಅಧಿಕೃತ ಸುರಕ್ಷತಾ ಮಟ್ಟಕ್ಕಿಂತ 1.8 ಮೀಟರ್ ಎತ್ತರಕ್ಕೆ ಏರುವ ಮೂಲಕ, 207.5 ಮೀಟರ್ ತಲುಪಿತು; ಈ ವರ್ಷದ ಜುಲೈನಲ್ಲಿ ಇದು 208.5 ಮೀಟರ್ ದಾಟಿತು - ಇದು ಸಾರ್ವಕಾಲಿಕ ದಾಖಲೆಯಾಗಿದೆ. ಹರಿಯಾಣ ಮತ್ತು ಉತ್ತರ ಪ್ರದೇಶದ ಬ್ಯಾರೇಜುಗಳನ್ನು ಸಮಯಕ್ಕೆ ಸರಿಯಾಗಿ ತೆರೆಯದ ಕಾರಣ ಉಕ್ಕಿದ ನದಿಯು ದೆಹಲಿಯನ್ನು ಪ್ರವಾಹಕ್ಕೆ ಸಿಲುಕಿಸಿತು, ಇದರಿಂದಾಗಿ ಜೀವಗಳು, ಮನೆಗಳ ಜೊತೆಗೆ ಜೀವನೋಪಾಯವೂ ನಷ್ಟವಾಯಿತು; ಬೆಳೆಗಳು ಮತ್ತು ಇತರ ಜಲಮೂಲಗಳು ಸಹ ವ್ಯಾಪಕ ಹಾನಿಗೊಳಗಾದವು.

1978ರ ಪ್ರವಾಹದ ಸಮಯದಲ್ಲಿ, ದೆಹಲಿಯ ಎನ್‌ಸಿಟಿ ಸರ್ಕಾರದ ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆ , 'ಸುಮಾರು 10 ಕೋಟಿ ರೂ.ಗಳ ಹಾನಿಯನ್ನು ಅಂದಾಜಿಸಿದೆ, ಇದರಲ್ಲಿ 18 ಜೀವಗಳು ನಷ್ಟವಾದವು ಮತ್ತು ಸಾವಿರಾರು ಜನರು ನಿರಾಶ್ರಿತರಾದರು' ಎಂದು ಹೇಳಿದೆ.

Homes that were flooded near Pusta Road, Delhi in July 2023
PHOTO • Shalini Singh

ಜುಲೈ 2023ರಲ್ಲಿ ದೆಹಲಿಯ ಪುಸ್ತಾ ರಸ್ತೆಯ ಬಳಿ ಪ್ರವಾಹಕ್ಕೆ ಒಳಗಾದ ಮನೆಗಳು

Flood waters entered homes under the flyover near Mayur Vihar metro station in New Delhi
PHOTO • Shalini Singh

ನವದೆಹಲಿಯ ಮಯೂರ್ ವಿಹಾರ್ ಮೆಟ್ರೋ ನಿಲ್ದಾಣದ ಬಳಿಯ ಫ್ಲೈಓವರ್ ಕೆಳಗೆ ಪ್ರವಾಹದ ನೀರು ಮನೆಗಳಿಗೆ ನುಗ್ಗಿದೆ

ಈ ವರ್ಷ, ಜುಲೈನಲ್ಲಿ ಪ್ರವಾಹಕ್ಕೆ ಕಾರಣವಾದ ಹಲವಾರು ದಿನಗಳ ಮಳೆಯ ನಂತರ, 25,000ಕ್ಕೂ ಹೆಚ್ಚು ಜನರು ನೇರವಾಗಿ ಅಥವಾ ಪರೋಕ್ಷವಾಗಿ ಬಾಧಿತರಾಗಿದ್ದಾರೆ ಎಂದು ಪಿಐಎಲ್ ಅರ್ಜಿಯಲ್ಲಿ ಹೇಳಲಾಗಿದೆ. ಯಮುನಾ ನದಿ ಯೋಜನೆ : ನವದೆಹಲಿ ನಗರ ಪರಿಸರ ವಿಜ್ಞಾನದ ಪ್ರಕಾರ, ಪ್ರವಾಹ ಪ್ರದೇಶದ ನಿರಂತರ ಅತಿಕ್ರಮಣವು ತೀವ್ರ ಪರಿಣಾಮಗಳನ್ನು ಬೀರುತ್ತದೆ, "... ಪ್ರವಾಹ ಪ್ರದೇಶದ ತಗ್ಗು ಪ್ರದೇಶಗಳಲ್ಲಿ ನಿರ್ಮಿಸಲಾದ ಕಟ್ಟಡಗಳನ್ನು ಅಳಿಸಿಹಾಕುವುದರ ಜೊತೆಗೆ ಪೂರ್ವ ದೆಹಲಿಯನ್ನು ನೀರಿನಿಂದ ಮುಳುಗಿಸುತ್ತದೆ.”

ಯಮುನಾ ದಡದಲ್ಲಿನ ಸುಮಾರು 24,000 ಎಕರೆ ಪ್ರದೇಶದಲ್ಲಿ ಕೃಷಿ ಮಾಡಲಾಗಿದೆ ಮತ್ತು ರೈತರು ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಇಲ್ಲಿ ಕೃಷಿ ಮಾಡುತ್ತಿದ್ದಾರೆ. ಆದರೆ ದೇವಾಲಯ, ಮೆಟ್ರೋ ನಿಲ್ದಾಣ, ಕಾಮನ್ವೆಲ್ತ್ ಗೇಮ್ಸ್ ವಿಲೇಜ್ (ಸಿಡಬ್ಲ್ಯೂಜಿ) - ಪ್ರವಾಹ ಪ್ರದೇಶಗಳ ಕಾಂಕ್ರೀಟೀಕರಣವು ಪ್ರವಾಹದ ನೀರು ನೆಲೆಗೊಳ್ಳಬೇಕಿದ್ದ ಜಾಗವನ್ನು ಆಕ್ರಮಿಸಿಕೊಂಡಿವೆ. ಓದಿ: ದೊಡ್ಡ ನಗರ, ಚಿಕ್ಕ ರೈತರು ಹಾಗೂ ಅವಸಾನದಂಚಿನಲ್ಲಿರುವ ನದಿ

"ನಾವು ಏನೇ ಮಾಡಿದರೂ ಪ್ರಕೃತಿ ತನ್ನ ಹಾದಿಯನ್ನು ತಾನೇ ನಿರ್ಧರಿಸುತ್ತದೆ. ಈ ಹಿಂದೆ ಮಳೆ ಮತ್ತು ಪ್ರವಾಹದ ಸಮಯದಲ್ಲಿ ನೀರು ಹರಡಿಕೊಳ್ಳುತ್ತಿತ್ತು, ಮತ್ತು ಈಗ [ಪ್ರವಾಹ ಪ್ರದೇಶಗಳಲ್ಲಿ] ಕಡಿಮೆ ಸ್ಥಳಾವಕಾಶವಿರುವುದರಿಂದ, ಅದು ಹರಿಯಲು ತನ್ನ ಮಟ್ಟವನ್ನು ಏರಿಸಿಕೊಳ್ಳಬೇಕಾಯಿತು, ಮತ್ತು ಈ ಪ್ರಕ್ರಿಯೆಯಲ್ಲಿ ಅದು ನಮ್ಮನ್ನು ನಾಶಪಡಿಸಿತು" ಎಂದು 2023ರ ಪ್ರವಾಹಕ್ಕೆ ಬೆಲೆ ತೆರುತ್ತಿರುವ ಬೇಲಾ ಎಸ್ಟೇಟಿನ ಕಮಲ್ ಹೇಳಿದರು. "ಸಾಫ್ ಕರ್ನಿ ಥೀ ಯಮುನಾ, ಲೇಕಿನ್ ಹಮೇ ಹಿ ಸಾಫ್ ಕಾರ್ ದಿಯಾ [ಅವರು ಯಮುನಾವನ್ನು ಸ್ವಚ್ಛಗೊಳಿಸಬೇಕಾಗಿತ್ತು ಅದರ ಬದಲಿಗೆ ನಮ್ಮನ್ನು ಸ್ವಚ್ಛಗೊಳಿಸಿದರು]!"

"ಯಮುನಾ ಕೆ ಕಿನಾರೆ ವಿಕಾಸ್ ನಹೀಂ ಕರ್ನಾ ಚಾಹಿಯೇ. ಯೇ ಡೂಬ್ ಕ್ಷೇತ್ರ್ ಘೋಷಿತ್ ಹೈ. ಸಿಡಬ್ಲ್ಯೂಜಿ, ಅಕ್ಷರಧಾಮ, ಮೆಟ್ರೋ ಯೇ ಸಬ್ ಪ್ರಕೃತಿ ಕೆ ಸಾಥ್ ಖಿಲ್ವಾದ್ ಹೈ. ಪ್ರಕೃತಿ ಕೋ ಜಿತ್ನಿ ಜಗಹ್ ಚಾಹಿಯೆ, ವೋಹ್ ತೋ ಲೆಗಿ. ಪಹ್ಲೆ ಪಾನಿ ಫೇಲ್ಕೆ ಜಟಾ ಥಾ, ಔರ್ ಅಬ್ ಕ್ಯುಂಕಿ ಜಗಹ್ ಕಾಮ್ ಹೈ, ತೋಹ್ ಉತ್ ಕೆ ಜ ರಹಾ ಹೈ, ಜಿಸ್ಕಿ ವಾಜಾ ಸೆ ನುಕ್ಸಾನ್ ಹುಮೇನ್ ಹುವಾ ಹೈ [ಯಮುನಾಗೆ ಹತ್ತಿರವಿರುವ ಪ್ರವಾಹ ಪ್ರದೇಶಗಳ ಪ್ರದೇಶವನ್ನು ಅಭಿವೃದ್ಧಿಪಡಿಸಬಾರದು. ಇದನ್ನು ಈಗಾಗಲೇ ಪ್ರವಾಹ ಪೀಡಿತ ಪ್ರದೇಶವೆಂದು ಗೊತ್ತುಪಡಿಸಲಾಗಿದೆ. ಪ್ರವಾಹ ಪ್ರದೇಶದಲ್ಲಿ ಕಾಮನ್ವೆಲ್ತ್ ಗೇಮ್ಸ್, ಅಕ್ಷರಧಾಮ ದೇವಾಲಯ, ಮೆಟ್ರೋ ನಿಲ್ದಾಣವನ್ನು ನಿರ್ಮಿಸುವುದು ಪ್ರಕೃತಿಯೊಂದಿಗೆ ಆಟವಾಡಿದಂತೆ" ಎಂದು ಕಮಲ್ ಹೇಳುತ್ತಾರೆ.

"ದಿಲ್ಲಿ ಕೋ ಕಿಸ್ನೆ ಡುಬಾಯಾ [ದೆಹಲಿಯನ್ನು ಮುಳುಗಿಸಿದವರು ಯಾರು]? ದೆಹಲಿ ಸರ್ಕಾರದ ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆ ಪ್ರತಿ ವರ್ಷ ಜೂನ್ 15-25ರ ನಡುವೆ ಸಿದ್ಧತೆ ನಡೆಸಬೇಕಾಗಿತ್ತು. ಅವರು ಬ್ಯಾರೇಜ್ ಗೇಟುಗಳನ್ನು [ಸಮಯಕ್ಕೆ ಸರಿಯಾಗಿ] ತೆರೆದಿದ್ದರೆ, ನೀರು ಈ ರೀತಿ ಪ್ರವಾಹಕ್ಕೆ ಒಳಗಾಗುತ್ತಿರಲಿಲ್ಲ. ಪಾನಿ ನ್ಯಾಯ ಮಾಂಗ್ನೆ ಸುಪ್ರೀಂ ಕೋರ್ಟ್ ಗಯಾ [ನ್ಯಾಯ ಕೇಳಲು ನೀರು ಸುಪ್ರೀಂ ಕೋರ್ಟ್ ತಲುಪಿತು]" ಎಂದು ರಾಜೇಂದ್ರ ಸಿಂಗ್ ಹೇಳಿದ್ದು ತಮಾಷೆಗಲ್ಲ.

Small time cultivators, domestic help, daily wage earners and others had to move to government relief camps like this one near Mayur Vihar, close to the banks of Yamuna in Delhi.
PHOTO • Shalini Singh

ಸಣ್ಣ ಕೃಷಿಕರು, ಮನೆಕೆಲಸದವರು, ದಿನಗೂಲಿ ಕಾರ್ಮಿಕರು ಮತ್ತು ಇತರರು ದೆಹಲಿಯ ಯಮುನಾ ದಡಕ್ಕೆ ಹತ್ತಿರವಿರುವ ಮಯೂರ್ ವಿಹಾರ್ ಬಳಿಯ ಈ ರೀತಿಯ ಸರ್ಕಾರಿ ಪರಿಹಾರ ಶಿಬಿರಗಳಿಗೆ ಹೋಗಬೇಕಾಯಿತು

Left: Relief camp in Delhi for flood affected families.
PHOTO • Shalini Singh
Right: Experts including Professor A.K. Gosain (at podium), Rajendra Singh (‘Waterman of India’) slammed the authorities for the Yamuna flood and the ensuing destruction, at a discussion organised by Yamuna Sansad.
PHOTO • Shalini Singh

ಎಡ: ಪ್ರವಾಹ ಪೀಡಿತ ಕುಟುಂಬಗಳಿಗೆಂದು ರಚಿಸಲಾದ ದೆಹಲಿಯಲ್ಲಿನ ಪರಿಹಾರ ಶಿಬಿರ. ಬಲ: ಯಮುನಾ ಸಂಸದ್ ಆಯೋಜಿಸಿದ್ದ ಚರ್ಚೆಯಲ್ಲಿ ಪ್ರೊಫೆಸರ್ ಎ.ಕೆ.ಗೋಸೈನ್ (ವೇದಿಕೆಯಲ್ಲಿ), ರಾಜೇಂದ್ರ ಸಿಂಗ್ ('ವಾಟರ್ ಮ್ಯಾನ್ ಆಫ್ ಇಂಡಿಯಾ') ಸೇರಿದಂತೆ ತಜ್ಞರು ಯಮುನಾ ಪ್ರವಾಹ ಮತ್ತು ನಂತರದ ವಿನಾಶಕ್ಕಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು

ಅಲ್ವಾರ್ ಮೂಲದ ಪರಿಸರವಾದಿ, "ಇದು ನೈಸರ್ಗಿಕ ವಿಪತ್ತಲ್ಲ. ಈ ಹಿಂದೆಯೂ ಅನಿಯಮಿತ ಮಳೆಯಾಗಿದೆ.” ಎಂದು ಹೇಳುತ್ತಾರೆ. ಜುಲೈ 24, 2023ರಂದು 'ದೆಹಲಿಯ ಪ್ರವಾಹ: ಅತಿಕ್ರಮಣವೋ ಅಥವಾ ಹಕ್ಕೋ?' ಎಂಬ ಸಾರ್ವಜನಿಕ ಚರ್ಚೆಯನ್ನುದ್ದೇಶಿಸಿ ಮಾತನಾಡಿದ ಅವರು ಮೇಲಿನ ಮಾತುಗಳನ್ನು ಹೇಳಿದರು. ಯಮುನಾ ನದಿಯನ್ನು ಮಾಲಿನ್ಯದಿಂದ ಉಳಿಸುವ ಜನರ ಉಪಕ್ರಮವಾದ ಯಮುನಾ ಸಂಸದ್ ಇದನ್ನು ದೆಹಲಿಯಲ್ಲಿ ಆಯೋಜಿಸಿತ್ತು.

“ಈ ವರ್ಷ ಯಮುನೆಯ ತಟದಲ್ಲಿ ನಡೆದ ಘಟನೆಗಳಿಗೆ ಹಲವರಿಗೆ ಶಿಕ್ಷೆಯಾಗಬೇಕಿತ್ತು” ಎಂದು ಡಾ. ಅಶ್ವಾನಿ ಕೆ. ಗೋಸೈನ್‌ ಚರ್ಚೆಯಲ್ಲಿ ಹೇಳಿದರು. ಅವರು 2018ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸ್ಥಾಪಿಸಿದ ಯಮುನಾ ಮೇಲ್ವಿಚಾರಣಾ ಸಮಿತಿಯ ತಜ್ಞ ಸದಸ್ಯರಾಗಿದ್ದರು.

“ನೀರಿಗೆ ವೇಗವೂ ಇರುತ್ತದೆ. ಒಡ್ಡುಗಳಿಲ್ಲದೆ ಹೋದಾಗ ನೀರು ಎಲ್ಲಿಗೆ ಹೋಗುತ್ತದೆ?” ಎಂದು ಬ್ಯಾರೇಜುಗಳ ಬದಲು ಜಲಾಶಯಗಳನ್ನು ನಿರ್ಮಿಸಬೇಕೆಂದು ಪ್ರತಿಪಾದಿಸುವ ಗೋಸೈನ್ ಕೇಳುತ್ತಾರೆ. ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಿವಿಲ್ ಎಂಜಿನಿಯರಿಂಗ್‌ ವಿಭಾಗದ ನಿವೃತ್ತ ಪ್ರಾಧ್ಯಾಪಕರಾಗಿರುವ ಅವರು, 1,500 ಅನಧಿಕೃತ ಕಾಲೋನಿಗಳು ಮತ್ತು ಬೀದಿ ಮಟ್ಟದ ಚರಂಡಿಗಳ ಕೊರತೆಯು ಒಳಚರಂಡಿ ಮಾರ್ಗಗಳಿಗೆ ನೀರನ್ನು ಕಳುಹಿಸುತ್ತವೆ ಮತ್ತು "ಇದು ರೋಗಗಳನ್ನು ಸಹ ತರುತ್ತದೆ" ಎಂದು ಗಮನಸೆಳೆದರು

*****

ಬೇಲಾ ಎಸ್ಟೇಟ್ ಪ್ರದೇಶದ ರೈತರು ಈಗಾಗಲೇ ಹವಾಮಾನ ಬದಲಾವಣೆ, ಕೃಷಿ ಸ್ಥಗಿತ, ಪುನರ್ವಸತಿಯಿಲ್ಲದೆ ಇಲ್ಲಿಂದ ಹೊರಬೀಳುವ ಬೆದರಿಕೆಯೊಂದಿಗೆ ಅನಿಶ್ಚಿತವಾಗಿ ಬದುಕುತ್ತಿದ್ದಾರೆ. ಓದಿ: 'ದೆಹಲಿಯಲ್ಲಿ ರೈತರನ್ನು ನಡೆಸಿಕೊಳ್ಳುವುದು ಹೀಗೆ !' ಇತ್ತೀಚಿಗೆ ಎದುರಾದ ಪ್ರವಾಹಗಳು ನಷ್ಟಗಳ ಸರಣಿಯಲ್ಲಿ ಇತ್ತೀಚಿನವು.

"10*10 ಜುಗ್ಗಿ [ತಾತ್ಕಾಲಿಕ ಮನೆ]ಯಲ್ಲಿ ವಾಸಿಸುವ 4-5 ಜನರಿರುವ ಒಂದು ಕುಟುಂಬಕ್ಕೆ, ಒಂದು ಜುಗ್ಗಿ ನಿರ್ಮಿಸಲು 20,000-25,000 ರೂಪಾಯಿಗಳಷ್ಟು ಖರ್ಚಾಗುತ್ತದೆ. ಕೇವಲ ವಾಟರ್ ಪ್ರೂಫಿಂಗ್ ಶೀಟ್ ಒಂದಕ್ಕೇ 2,000 ರೂಪಾಯಿ ವೆಚ್ಚವಾಗುತ್ತದೆ. ನಮ್ಮ ಮನೆಗಳನ್ನು ನಿರ್ಮಿಸಲು ಕಾರ್ಮಿಕರನ್ನು ನೇಮಿಸಿಕೊಂಡರೆ, ದಿನಕ್ಕೆ 500-700 [ರೂಪಾಯಿ] ಪಾವತಿಸಬೇಕಾಗುತ್ತದೆ. ನಾವೇ ಅದನ್ನು ಮಾಡಿದರೆ, ನಮ್ಮ ಅಂದಿನ ದಿನದ ದುಡಿಮೆಯನ್ನು ಕಳೆದುಕೊಂಡಂತೆ" ಎಂದು ಪತ್ನಿ ಮತ್ತು 17, 15, 10, 8 ವರ್ಷದ ನಾಲ್ಕು ಮಕ್ಕಳೊಂದಿಗೆ ವಾಸಿಸುತ್ತಿರುವ ಹೀರಾಲಾಲ್ ಹೇಳುತ್ತಾರೆ. ಬಿದಿರಿನ ಕಂಬಗಳಿಗೆ ಸಹ ತಲಾ 300 ರೂ.ಗಳ ವೆಚ್ಚವಾಗುತ್ತದೆ, ಒಂದು ಮನೆಗೆ ಕನಿಷ್ಠ 20 ಕಂಬಗಳು ಬೇಕಾಗುತ್ತವೆ ಎಂದು ಅವರು ಹೇಳುತ್ತಾರೆ. ಸ್ಥಳಾಂತರಗೊಂಡ ಕುಟುಂಬಗಳಿಗೆ ತಮ್ಮ ನಷ್ಟವನ್ನು ಯಾರು ತುಂಬಿಸಿಕೊಡುತ್ತಾರೆ ಎನ್ನುವ ಕುರಿತು ಸ್ಪಷ್ಟತೆಯಿಲ್ಲ.

Hiralal says the flood relief paperwork doesn’t end and moreover the relief sum of Rs. 10,000 for each affected family is paltry, given their losses of over Rs. 50,000.
PHOTO • Shalini Singh
Right: Shanti Devi recalls watching helplessly as 25 kilos of wheat, clothes and children’s school books were taken away by the Yamuna flood.
PHOTO • Shalini Singh

ಪ್ರವಾಹ ಪರಿಹಾರ ಪಡೆಯಲು ನೀಡಬೇಕಿರುವ ಕಾಗಪತ್ರಗಳ ಪಟ್ಟಿ ಕೊನೆಗೊಳ್ಳುವುದೇ ಇಲ್ಲ ಮತ್ತು ಇದಲ್ಲದೆ 50,000 ರೂ.ಗಿಂತ ಹೆಚ್ಚಿನ ನಷ್ಟವನ್ನು ಗಮನಿಸಿದರೆ ಪ್ರತಿ ಸಂತ್ರಸ್ತ ಕುಟುಂಬಕ್ಕೆ ನಿಗದಿಪಡಿಸಲಾಗಿರುವ 10,000 ರೂ.ಗಳ ಪರಿಹಾರ ಮೊತ್ತವು ಅತ್ಯಲ್ಪವಾಗಿದೆಯೆಂದು ಹೀರಾಲಾಲ್ ಹೇಳುತ್ತಾರೆ. ಬಲ: ಯಮುನಾ ಪ್ರವಾಹದಲ್ಲಿ 25 ಕಿಲೋ ಗೋಧಿ, ಬಟ್ಟೆಗಳು ಮತ್ತು ಮಕ್ಕಳ ಶಾಲಾ ಪುಸ್ತಕಗಳು ಕೊಚ್ಚಿಹೋಗಿದ್ದನ್ನು ಅಸಹಾಯಕತೆಯಿಂದ ನೋಡಿದ್ದನ್ನು ಶಾಂತಿ ದೇವಿ ನೆನಪಿಸಿಕೊಳ್ಳುತ್ತಾರೆ

The makeshift homes of the Bela Esate residents under the Geeta Colony flyover. Families keep goats for their domestic consumption and many were lost in the flood.
PHOTO • Shalini Singh

ಗೀತಾ ಕಾಲೋನಿ ಫ್ಲೈಓವರ್ ಅಡಿಯಲ್ಲಿರುವ ಬೇಲಾ ಎಸ್ಟೇಟ್ ನಿವಾಸಿಗಳ ತಾತ್ಕಾಲಿಕ ಮನೆಗಳು. ಕುಟುಂಬಗಳು ತಮ್ಮ ಮನೆಬಳಕೆಗಾಗಿ ಆಡುಗಳನ್ನು ಸಾಕುತ್ತವೆ ಮತ್ತು ಅವುಗಳಲ್ಲಿ ಬಹಳಷ್ಟು ಪ್ರವಾಹದಲ್ಲಿ ತೇಲಿ ಹೋದವು

ಇಲ್ಲಿನ ಜನರಿಗೆ ಪ್ರವಾಹದಲ್ಲಿ ಕಳೆದುಹೋದ ತಮ್ಮ ಜಾನುವಾರುಗಳ ಬದಲಿಗೆ ಬೇರೆಯವನ್ನು ಮತ್ತೆ ಖರೀದಿಸಿ ತಂದು ಸಾಕಬೇಕಿದೆ. "ಒಂದು ಎಮ್ಮೆಯ ಬೆಲೆ 70,000 ರೂಪಾಯಿಗಳಿಗಿಂತ ಹೆಚ್ಚು. ಅದು ಆರೋಗ್ಯವಾಗಿದ್ದು ಹಾಲು ನೀಡಲು ನಾವು ಅದಕ್ಕೆ ಮೇವು ನೀಡಬೇಕು. ನಮ್ಮ ಮಕ್ಕಳ ದೈನಂದಿನ ಹಾಲಿನ ಅಗತ್ಯಕ್ಕಾಗಿ ಹಾಗೂ ಚಹಕ್ಕಾಗಿ ನಾವು ಇಟ್ಟುಕೊಳ್ಳುವ ಮೇಕೆ ಖರೀದಿಸಲು 8,000-10,000 ರೂಪಾಯಿಗಳು ಖರ್ಚಾಗುತ್ತವೆ" ಎಂದು ಅವರು ಹೇಳುತ್ತಾರೆ.

ಅವರ ನೆರೆಮನೆಯವರಾದ ಶಾಂತಿದೇವಿಯವರ ಪತಿ ಈ ಹಿಂದೆ ಯಮುನೆಯ ದಡದಲ್ಲಿ ಭೂಮಾಲೀಕ ಮತ್ತು ಕೃಷಿಕನಾಗಿ ಗುರುತಿಸಿಕೊಳ್ಳುತ್ತಿದ್ದರು. ಆದರೆ ಈ ಗುರುತನ್ನು ಉಳಿಸಿಕೊಳ್ಳುವಲ್ಲಿ ಸೋತ ಅವರು ಪ್ರಸ್ತುತ ಸೈಕಲ್ಲಿನಲ್ಲಿ ಕಚೋರಿ ವ್ಯಾಪಾರ ಮಾಡುತ್ತಾರೆ. ಆದರೆ ಅದರಿಂದ ದಿನಕ್ಕೆ 200-300 ರೂ.ಗಳನ್ನು ಸಹ ಗಳಿಸಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಶಾಂತಿದೇವಿ. “ನೀವು ಮೂರು ದಿನ ವ್ಯಾಪಾರ ಮಾಡಿ ಅಥವಾ 30 ದಿನ ವ್ಯಾಪಾರ ಪೊಲೀಸರಿಗೆ ಪ್ರತಿ ತಿಂಗಳು 1,500 ರೂಪಾಯಿ ಕೊಡಲೇಬೇಕು” ಎನ್ನುತ್ತಾರವರು.

ಈಗ ಪ್ರವಾಹದ ನೀರು ಕಡಿಮೆಯಾಗಿದೆ, ಆದರೆ ಇತರ ಅಪಾಯಗಳು ಅಡಗಿ ಕಾಯುತ್ತಿವೆ: ಮಲೇರಿಯಾ, ಡೆಂಗ್ಯೂ, ಕಾಲರಾ, ಟೈಫಾಯಿಡ್ ರೀತಿಯ ನೀರಿನಿಂದ ಹರಡುವ ರೋಗಗಳು ಅಪಾಯವನ್ನುಂಟುಮಾಡುತ್ತವೆ, ಆದರೆ ಪರಿಹಾರ ಶಿಬಿರಗಳಲ್ಲಿ ದಿನಕ್ಕೆ 100ಕ್ಕೂ ಹೆಚ್ಚು ಕಣ್ಣಿನ ಜ್ವರದ ಪ್ರಕರಣಗಳು ವರದಿಯಾಗುತ್ತಿವೆ. ನಾವು ಅವರನ್ನು ಭೇಟಿಯಾದಾಗ ಹೀರಾಲಾಲ್ ಕೆಂಪು ಕಣ್ಣಿಗೆ (ಮದ್ರಾಸ್‌ ಐ) ಶುಶ್ರೂಷೆ ಪಡೆಯುತ್ತಿದ್ದರು. ಅವರು ಒಂದು ಜೋಡಿ ದುಬಾರಿ ಸನ್‌ಗ್ಲಾಸುಗಳನ್ನು ಎತ್ತಿ ಹಿಡಿದರು: "ಇವುಗಳ ಬೆಲೆ 50 ರೂಪಾಯಿ ಆದರೆ ಬೇಡಿಕೆಯ ಕಾರಣದಿಂದಾಗಿ 200 ರೂಪಾಯಿಗಳಿಗೆ ಮಾರಾಟವಾಗುತ್ತಿವೆ."

ಪರಿಹಾರಕ್ಕಾಗಿ ಕಾಯುತ್ತಿರುವ ಕುಟುಂಬಗಳ ಪರವಾಗಿ ಮಾತನಾಡಿದ ಅವರು, "ಕಥೆ ಹೊಸದೇನಲ್ಲ, ಜನರು ಯಾವಾಗಲೂ ಇತರರ ನೋವಿನಿಂದ ಲಾಭ ಪಡೆಯುತ್ತಾರೆ" ಎಂದು ನಸುನಗುತ್ತಾ ಹೇಳುತ್ತಾರೆ.

ಈ ವರದಿಯನ್ನು ಸೆಪ್ಟೆಂಬರ್ 9,2023ರಂದು  ಅಪ್ಡೇಟ್ ಮಾಡಲಾಗಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Shalini Singh

ਸ਼ਾਲਿਨੀ ਸਿੰਘ ਕਾਊਂਟਰਮੀਡਿਆ ਟਰੱਸਟ ਦੀ ਮੋਢੀ ਟਰੱਸਟੀ ਹਨ ਜੋ ਪਾਰੀ ਪ੍ਰਕਾਸ਼ਤ ਕਰਦੀ ਹੈ। ਦਿੱਲੀ ਅਧਾਰਤ ਇਹ ਪੱਤਰਕਾਰ, ਵਾਤਾਵਾਰਣ, ਲਿੰਗ ਤੇ ਸੱਭਿਆਚਾਰਕ ਮਸਲਿਆਂ 'ਤੇ ਲਿਖਦੀ ਹਨ ਤੇ ਹਾਵਰਡ ਯੂਨੀਵਰਸਿਟੀ ਵਿਖੇ ਪੱਤਰਕਾਰਤਾ ਲਈ 2017-2018 ਵਿੱਚ ਨੀਮਨ ਫ਼ੈਲੋ ਰਹੀ ਹਨ।

Other stories by Shalini Singh
Editor : Priti David

ਪ੍ਰੀਤੀ ਡੇਵਿਡ ਪੀਪਲਜ਼ ਆਰਕਾਈਵ ਆਫ਼ ਇੰਡੀਆ ਦੇ ਇਕ ਪੱਤਰਕਾਰ ਅਤੇ ਪਾਰੀ ਵਿਖੇ ਐਜੁਕੇਸ਼ਨ ਦੇ ਸੰਪਾਦਕ ਹਨ। ਉਹ ਪੇਂਡੂ ਮੁੱਦਿਆਂ ਨੂੰ ਕਲਾਸਰੂਮ ਅਤੇ ਪਾਠਕ੍ਰਮ ਵਿੱਚ ਲਿਆਉਣ ਲਈ ਸਿੱਖਿਅਕਾਂ ਨਾਲ ਅਤੇ ਸਮਕਾਲੀ ਮੁੱਦਿਆਂ ਨੂੰ ਦਸਤਾਵੇਜਾ ਦੇ ਰੂਪ ’ਚ ਦਰਸਾਉਣ ਲਈ ਨੌਜਵਾਨਾਂ ਨਾਲ ਕੰਮ ਕਰਦੀ ਹਨ ।

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru