ಪಾಟಲ್ಪರುದಲ್ಲಿ ಉಳಿದಿರುವ ಕೊನೆಯ ರೈತನೆಂದರೆ ಅದು ಉಜ್ವಲ್ ದಾಸ್. ಅಥವಾ ಅಲ್ಲಿ ಉಳಿದಿರುವ ಕೊನೆಯ ಕುಟುಂಬವೆಂದರೆ ಅವರ ಕುಟುಂಬ.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಆನೆಗಳು ಅವರ ಮನೆಯ ಗೋಡೆಯನ್ನು ಬೀಳಿಸುವುದರೊಂದಿಗೆ ಈ ದಾಳಿಕೋರ ಆನೆಗಳು ಇದುವರೆಗೆ ಎಂಟು ಸಲ ಅವರ ಮನೆಯ ಗೋಡೆಯನ್ನು ಬೀಳಿಸಿದಂತಾಗಿದೆ.
ಅದು ಕೊಯ್ಲಿನ ಸಮಯ. ಅಷ್ಟೊತ್ತಿಗೆ ಆಷಾಢ ಮತ್ತು ಶ್ರಾವಣ ಮಾಸದ ಮಾನ್ಸೂನ್ ಕೂಡಾ ಬಂದಿತ್ತು. ಈ ಆನೆಗಳ ಹಿಂಡು ಬೆಟ್ಟ ಮತ್ತು ಕಾಡುಗಳ ಮೂಲಕ 200 ಕಿಲೋಮೀಟರ್ ನಡೆದು ಬೆಟ್ಟಗಳ ತಪ್ಪಲಿನಲ್ಲಿದ್ದ ಪಾಟಲ್ಪುರವನ್ನು ತಲುಪಿದ್ದವು. ಅವು ಮೊದಲಿಗೆ ಮಯೂರಾಕ್ಷಿಯ ಉಪನದಿಯಾದ ಸಿದ್ಧೇಶ್ವರಿ ದಡದಲ್ಲಿ ನಿಂತು ವಿಶ್ರಾಂತಿ ಪಡೆದವು. ಈ ಸ್ಥಳವು ಹಳ್ಳಿಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದೆ. ಸರಿಸುಮಾರು 200 ಕಿ.ಮೀ. ನಡಿಗೆಯ ದಣಿವನ್ನು ಆರಿಸಿಕೊಂಡ ನಂತರ ಆನೆಗಳು ಬೆಳೆದು ನಿಂತಿದ್ದ ಬೆಳೆಗಳ ಕಡೆ ಮುಖ ಮಾಡಿದವು.
ಚಂದನಾ ಮತ್ತು ಉಜ್ವಲಾ ದಾಸ್ ಅವರ ಕಿರಿಯ ಮಗ ಪ್ರೊಸೇನ್‌ಜೀತ್ ಹೇಳುತ್ತಾರೆ, “ನಾವು ನಮ್ಮ ಜೀವ ಪಣಕ್ಕಿಟ್ಟು ಅವುಗಳನ್ನು ಓಡಿಸಲು ಪಂಜು ಹಿಡಿದು ಓಡಿದೆವು. ಹಲವು ಬಾರಿ ಈ ಆನೆಗಳು ಬಂದು ಗದ್ದೆಗಳಲ್ಲಿನ [ಬೆಳೆದು ನಿಂತ] ಭತ್ತವನ್ನು ನಾಶಗೊಳಿವೆ. ಆನೆಗಳೇ ಪೂರ್ತಿ ಬೆಳೆಯನ್ನು ತಿಂದರೆ, ನಾವು ಏನನ್ನು ತಿನ್ನುವುದು?”
ದಾಸ್ ಕುಟುಂಬ ಕೇವಲ ಭತ್ತದ ನಷ್ಟದ ಬಗ್ಗೆ ಮಾತ್ರ ಚಿಂತಿಸುತ್ತಿಲ್ಲ. ಕುಟುಂಬವು ತಮ್ಮ 14 ಬಿಘಾ ಜಮೀನಿನಲ್ಲಿ (ಸುಮಾರು 8.6 ಎಕರೆ) ಆಲೂಗಡ್ಡೆ, ಸೋರೆಕಾಯಿ, ಟೊಮೆಟೊ ಮತ್ತು ಕುಂಬಳ, ಜೊತೆಗೆ ಬಾಳೆ ಮತ್ತು ಪಪ್ಪಾಯಿಯನ್ನು ಸಹ ಬೆಳೆಯುತ್ತದೆ.
ಹಾಗೆಯೇ ಉಜ್ವಲ್ ದಾಸ್ ತೀರಾ ಸಾಮಾನ್ಯ ರೈತರಲ್ಲ. ಅವರು ಬೆಳೆದ ಕುಂಬಳ ಬೆಳೆ ಅವರಿಗೆ ರಾಜ್ಯ ಪ್ರಶಸ್ತಿಯನ್ನು ತಂದು ಕೊಟ್ಟಿದೆ. ರಾಜ್ಯದ ಪ್ರತಿ ಬ್ಲಾಕ್‌ನ ಉತ್ತಮ ಕೃಷಿಕರನ್ನು ಗುರುತಿಸಿ ನೀಡಲಾಗುವ ಕೃಷಕ್ ರತ್ನ ಪ್ರಶಸ್ತಿ ಅವರಿಗೆ ದೊರಕಿದೆ. ಅವರು 2016 ಮತ್ತು 2022ರಲ್ಲಿ ರಾಜ್‌ನಗರ್ ವಿಭಾಗದ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಪ್ರಶಸ್ತಿಯು 10,000 ರೂ.ಗಳ ನಗದು ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ಒಳಗೊಂಡಿದೆ.
ಪಾಟಲ್ಪುರ ಗ್ರಾಮವು ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಪಶ್ಚಿಮ ತುದಿಯಲ್ಲಿದೆ. ಜಾರ್ಖಂಡ್ ರಾಜ್ಯದ ಗಡಿಯು ಇಲ್ಲಿಂದ ಕೂಗಳತೆ ದೂರದಲ್ಲಿದೆ. ಈ ಪ್ರದೇಶದಲ್ಲಿ ಆನೆಗಳು ಪ್ರತಿವರ್ಷ ಬರುತ್ತವೆ. ಮೊದಲಿಗೆ ಬೆಟ್ಟಗಳಿಗೆ ಹೊಂದಿಕೊಂಡಿರುವ ಕಾಡುಗಳಲ್ಲಿ ಬಂದು ತಂಗುವ ಅವು ನಂತರ ಬೆಟ್ಟಕ್ಕೆ ಹತ್ತಿರದಲ್ಲಿರುವ ಹೊಲಗಳಿಗೆ ದಾಳಿಯಿಡುತ್ತವೆ.
ಅವು ಹೀಗೆ ಭೇಟಿ ನೀಡುವ ಊರುಗಳಲ್ಲಿ ಪಾಟಲ್ಪುರವೂ ಒಂದು. ಅವುಗಳ ಭೇಟಿಯ ಪರಿಣಾಮವನ್ನು ಊರಿನ ಶಿಥಿಲಗೊಂಡು ಪಾಳುಬಿದ್ದಿರುವ ಮನೆಗಳು, ತುಳಸಿ ಮಂಚಾಗಳು ಮತ್ತು ಖಾಲಿ ಅಂಗಳಗಳಲ್ಲಿ ನೋಡಬಹುದು.
ಸರಿಸುಮಾರು 12-13 ವರ್ಷಗಳ ಹಿಂದೆ, ಎಂದರೆ ಆನೆಗಳು ದಾಳಿ ಮಾಡುವುದಕ್ಕೂ ಮೊದಲು ಈ ಊರಿನಲ್ಲಿ 337 ಜನರು ವಾಸವಿದ್ದರು (ಜನಗಣತಿ 2011). ನಂತರ ಕಳೆದ ಒಂದು ದಶಕದಲ್ಲಿ ಜನರ ಸಂಖ್ಯೆ ಕಡಿಮೆಯಾಗುತ್ತಾ ಈಗ (2023) ರಾಜ್ ನಗರ್ ವಿಭಾಗದ ಈ ಊರಿನಲ್ಲಿ ಕೇವಲ ಒಂದು ಕುಟುಂಬವಷ್ಟೇ ವಾಸಿಸುತ್ತಾ ತಮ್ಮ ಮನೆ ಮತ್ತು ಭೂಮಿಗೆ ಅಂಟಿಕೊಂಡಿದೆ. ಪದೇಪದೇ ನಡೆಯುತ್ತಿದ್ದ ಆನೆಗಳ ದಾಳಿಯಿಂದ ಹೆದರಿದ ಗ್ರಾಮಸ್ಥರು ನೆರೆಯ ಪಟ್ಟಣಗಳು ಮತ್ತು ನಗರಗಳಾದ ಸೂರಿ, ರಾಜನಗರ ಮತ್ತು ಜಯಪುರಗಳಿಗೆ ವಲಸೆ ಹೋಗಿದ್ದಾರೆ.
“ಅನುಕೂಲ ಇರುವವರು ಊರು ಬಿಟ್ಟು ಬೇರೆಡೆ ಹೋಗಿದ್ದಾರೆ” ಎಂದು ಊರಿನ ಒಂದು ತುದಿಯಲ್ಲಿರುವ ಒಂದು ಅಂತಸ್ಥಿನ ಮನೆಯ ಮಣ್ಣಿನ ಅಂಗಳದಲ್ಲಿ ಕುಳಿತು ಮಾತನಾಡುತ್ತಿದ್ದ ಉಜ್ವಲ್ ದಾಸ್ ಹೇಳಿದರು. “ನನಗೆ ದೊಡ್ಡ ಕುಟುಂಬವಿದೆ. ನನಗೆ ಬೇರೆಡೆ ಯಾರೂ ಇಲ್ಲ. ಇಲ್ಲಿಂದ ಹೋದರೆ ಊಟಕ್ಕೆ ಏನು ಮಾಡುವುದು?” ಎಂದು ಕೇಳುತ್ತಾರೆ ಈ 57 ವರ್ಷದ ರೈತ. ಉಜ್ವಲ್ ಅವರ ಕುಟುಂಬವು ಇಲ್ಲಿ ವಾಸವಿದ್ದ ಬಹುತೇಕ ಇತರ ಕುಟುಂಬಗಳಂತೆ ಬೈರಾಗಿ ಸಮುದಾಯಕ್ಕೆ ಸೇರಿದವರು. ಈ ಸಮುದಾಯವನ್ನು ಪಶ್ಚಿಮ ಬಂಗಾಳದಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ) ದಡಿ ಪಟ್ಟಿ ಮಾಡಲಾಗಿದೆ.
ಚಂದನಾ ದಾಸ್ (53) ಆನೆಗಳ ಘೀಳಿಡುವಿಕೆ ಕೇಳಲು ಆರಂಭಿಸಿದ ಕೂಡಲೇ ಊರಿನಿಂದ ಐದು ಕಿಲೋಮೀಟರ್ ದೂರದಲ್ಲಿರುವ ಜಯಪುರಕ್ಕೆ ಹೋಗುವುದಾಗಿ ಹೇಳುತ್ತಾರೆ. ಒಂದು ವೇಳೆ ಹಾಗೆ ಹೋಗಲು ಸಾಧ್ಯವಾಗದೆ ಹೋದಾಗ “ನಾವೆಲ್ಲರೂ ಮನೆಯ ಒಳಗೇ ಉಳಿದುಬಿಡುತ್ತೇವೆ” ಎನ್ನುತ್ತಾರೆ.
ಈ ಊರಿನಲ್ಲಿ ಬೇರೆ ಸಮಸ್ಯೆಗಳೂ ಇವೆ ಎನ್ನುತ್ತದೆ ಈ ಊರಿನ ಏಕೈಕ ಕುಟುಂಬ. ಗಂಗಾಮುರಿ-ಜಯಪುರ ಪಂಚಾಯತ್ ವ್ಯಾಪ್ತಿಯ ಈ ಊರಿಗೆ ಹೋಗುವ ರಸ್ತೆಯು ಅಪಾಯಕಾರಿಯಾಗಿ ಕಾಡಿಗೆ ಹತ್ತಿರದಲ್ಲಿದೆ. ಆನೆಗಳ ದಾಳಿ ಆರಂಭವಾದಾಗಿನಿಂದ ಜನರು ಈ ಪ್ರದೇಶದಲ್ಲಿ ಭೂಮಿ ಖರೀದಿಸಲು ಮುಂದೆ ಬರುತ್ತಿಲ್ಲ. ಇದು ಅನಿವಾರ್ಯವಾಗಿ ಈ ಊರಿನಲ್ಲೇ ಉಳಿಯುವಂತೆ ಮಾಡಿದೆ. “ಹೀಗಿರುವಾಗ ಭೂಮಿ ಮಾರಿ ಹೋಗುವುದು ಅಷ್ಟು ಸುಲಭವಲ್ಲ" ಎಂದು ಉಜ್ವಲ್ ಹೇಳುತ್ತಾರೆ.
ಈ ಕುಟುಂಬದ ಇತರ ಸದಸ್ಯರೆಂದರೆ ಉಜ್ವಲ್ ಅವರ ಪತ್ನಿ ಚಂದನಾ ದಾಸ್ ಮತ್ತು ಅವರ ಇಬ್ಬರು ಪುತ್ರರಾದ ಚಿರಂಜಿತ್ ಮತ್ತು ಪ್ರೊಸೇನ್ಜಿತ್. ಅವರ ಮಗಳು 37 ವರ್ಷದ ಬೈಶಾಖಿ 10 ವರ್ಷಗಳ ಹಿಂದೆ ಮದುವೆಯಾಗಿದ್ದು, ಪಾಟಲ್ಪಪುರದಿಂದ 50 ಕಿ.ಮೀ ದೂರದಲ್ಲಿರುವ ಸೈಂಥಿಯಾದಲ್ಲಿ ವಾಸಿಸುತ್ತಿದ್ದಾರೆ.
27 ವರ್ಷದ ಪ್ರೊಸೇನ್ಜಿತ್ ಮಾರುತಿ ಕಾರೊಂದನ್ನು ಹೊಂದಿದ್ದು, ಅದನ್ನು ನೆರೆಹೊರೆಯ ಹಳ್ಳಿಗಳಲ್ಲಿ ಬಾಡಿಗೆ ಮಾಡಿ ತಿಂಗಳಿಗೆ 10,000 ರೂ.ಗಳನ್ನು ಗಳಿಸುವುದಾಗಿ ಹೇಳುತ್ತಾರೆ. ಕುಟುಂಬದ ಉಳಿದವರಂತೆ ಅವರೂ ಸಹ ಕುಟುಂಬದ ಭೂಮಿಯಲ್ಲಿ ದುಡಿಯುತ್ತಾರೆ. ಈ ಭೂಮಿಯಲ್ಲಿ ಮಳೆಯಾಧರಿತ ಬೆಳೆಗಳನ್ನು ಬೆಳೆಯುತ್ತಾರೆ. ಅವರು ಉತ್ಪನ್ನದ ಒಂದು ಭಾಗವನ್ನು ಕುಟುಂಬದ ಬಳಕೆಗೆ ಇಟ್ಟುಕೊಂಡು ಉಳಿದಿದ್ದನ್ನು ಉಜ್ವಲ್ ದಾಸ ರಾಜ್‌ನಗರದಲ್ಲಿ ಪ್ರತಿ ಗುರುವಾರ ಮತ್ತು ಭಾನುವಾರ ನಡೆಯುವ ವಾರಕ್ಕೆರಡು ಬಾರಿಯ ಹಾಟ್ (ಸಂತೆ) ಗೆ ತೆಗೆದುಕೊಂಡು ಹೋಗಿ ಮಾರುತ್ತಾರೆ. ವಾರದ ಉಳಿದ ದಿನಗಳಲ್ಲಿ ಅವರು ತಮ್ಮ ಸೈಕಲ್ ಅಥವಾ ಕಿರಿಯ ಮಗನ ಮೋಟಾರ್ ಬೈಕಿನಲ್ಲಿ ಊರಿಂದ ಊರಿಗೆ ತರಕಾರಿ ಮಾರಲು ಹೋಗುತ್ತಾರೆ. ಭತ್ತವನ್ನು ಸಹ ತಮಗೆ ಬೇಕಿರುವುದನ್ನು ಇಟ್ಟುಕೊಂಡು ಉಳಿದಿದ್ದನ್ನು ಮಾರುತ್ತಾರೆ.
“ನನ್ನ ಬೆಳೆಗಳ ಮೇಲಿನ ಪ್ರೀತಿಯಿಂದಾಗಿ ಆನೆಗಳ ದಾಳಿಯ ಭಯದ ನಡುವೆಯೂ ಇಲ್ಲೇ ಉಳಿದುಕೊಂಡಿದ್ದೇನೆ” ಎನ್ನುತ್ತಾರೆ ಉಜ್ವಲ್ ದಾಸ್. ಅವರಿಗೆ ಊರು ಬಿಡಲು ಇಷ್ಟವಿಲ್ಲ
ರಾಜ್‌ನಗರ್ ಹೈಸ್ಕೂಲಿನ ಮಾಜಿ ಇತಿಹಾಸ ಶಿಕ್ಷಕರಾದ ಸಂತೋಷ್ ಕರ್ಮಾಕರ್ ಅವರ ಪ್ರಕಾರ ಕೃಷಿ ಪ್ರದೇಶಗಳಿಗೆ ಆನೆ ನುಗ್ಗುವುದಕ್ಕೆ ಕಾರಣವಾಗಿರುವುದು ಕಾಡುಗಳ ಕುಗ್ಗುವಿಕೆ. ಜಾರ್ಖಂಡ್ ದಾಟಿದ ನಂತರ ಸಿಗುವ ಪುರುಲಿಯಾದಲ್ಲಿನ ದಾಲ್ಮಾ ಶ್ರೇಣಿಯು ಈ ಮೊದಲು ದಟ್ಟವಾದ ಮರಗಳ ಹೊದಿಕೆ ಮತ್ತು ಆನೆಗಳಿಗೆ ಸಾಕಾಗುವಷ್ಟು ಆಹಾರವನ್ನು ಹೊಂದಿತ್ತು ಎಂದು ಅವರು ಹೇಳುತ್ತಾರೆ.
"ಇಂದು, ಆನೆಗಳು ಅಪಾಯದಲ್ಲಿವೆ. ಅವು ಆಹಾರವನ್ನು ಹುಡುಕುತ್ತಾ ಬೆಟ್ಟಗಳಿಂದ ಹೊರಡುತ್ತಿವೆ" ಎಂದು ಕರ್ಮಾಕರ್ ಹೇಳುತ್ತಾರೆ. ಐಷಾರಾಮಿ ರೆಸಾರ್ಟುಗಳನ್ನು ನಿರ್ಮಿಸಲು ಮಿತಿಮೀರಿದ ಅರಣ್ಯನಾಶ ಮತ್ತು ಹೆಚ್ಚಿದ ಮಾನವ ಉಪಸ್ಥಿತಿಯು ಆನೆಗಳ ಆಹಾರದ ಕೊರತೆಗೆ ಕಾರಣವಾಗಿರುವುದರ ಜೊತೆಗೆ ಅವುಗಳ ಆವಾಸಸ್ಥಾನದ ಮೇಲೂ ಪರಿಣಾಮ ಬೀರುತ್ತಿದೆ.
ಈ ವರ್ಷ (2023) ಗ್ರಾಮದಲ್ಲಿ ಯಾವುದೇ ಆನೆಗಳು ಕಂಡುಬಂದಿಲ್ಲ ಎಂದು ಪ್ರೊಸೇನ್ಜಿತ್ ಹೇಳುತ್ತಾರೆ. ಆದರೆ ಚಿಂತೆ ಉಳಿದಿದೆ: "ಅವು ಈಗ ಬಂದರೆ, ಬಾಳೆ ತೋಟವನ್ನು ಮುಗಿಸುತ್ತವೆ." ಅವರ ಬಾಳೆ ತೋಪು 10 ಕಾಠಾಗಳಲ್ಲಿ (0.16 ಎಕರೆ) ಹರಡಿದೆ.
ಪಶ್ಚಿಮ ಬಂಗಾಳ ಅರಣ್ಯ ಇಲಾಖೆಯ ಈ ವರದಿಯ ಪ್ರಕಾರ, ರೈತರಿಗೆ "ಮನುಷ್ಯರ ಸಾವು / ಗಾಯಗಳು ಮತ್ತು ಕಾಡು ಪ್ರಾಣಿಗಳಿಂದ ಉಂಟಾಗುವ ಮನೆಗಳು / ಬೆಳೆಗಳು / ಜಾನುವಾರುಗಳ ಹಾನಿಯ ವಿರುದ್ಧ" ಪರಿಹಾರ ಸಿಗಬೇಕಿದೆ. ಉಜ್ವಲ್ ದಾಸ್ ಬಳಿ ಕೇವಲ ನಾಲ್ಕು ಬಿಘಾ ಭೂಮಿಗೆ ದಾಖಲೆಗಳಿವೆ. ಉಳಿದವು (10 ಬಿಘಾಗಳು) ಅವರು ತನ್ನ ಪೂರ್ವಜರಿಂದ ಆನುವಂಶಿಕವಾಗಿ ಪಡೆದಿದ್ದು. ಆದರೆ ಅದಕ್ಕೆ ಪುರಾವೆಯಾಗಿ ಯಾವುದೇ ದಾಖಲೆಗಳಿಲ್ಲ ಮತ್ತು ಈ ಕಾರಣ್ಕಕಾಗಿ ಅವರು ತನ್ನ ಬೆಳೆ ನಷ್ಟಕ್ಕೆ ಪರಿಹಾರ ಪಡೆಯಲು ಸಾಧ್ಯವಿಲ್ಲ. "ಆನೆಗಳು 20,000-30,000 ರೂಪಾಯಿ ಮೌಲ್ಯದ ಬೆಳೆಗಳನ್ನು ನಾಶಪಡಿಸಿದರೆ, ಸರ್ಕಾರವು 500ರಿಂದ 5,000 ರೂಪಾಯಿಗಳವರೆಗೆ ನೀಡುತ್ತದೆ" ಎಂದು ಅವರು ಹೇಳುತ್ತಾರೆ.
2015ರಲ್ಲಿ, ಅವರು ರಾಜ್‌ನಗರದ ಬ್ಲಾಕ್ ಡೆವಲಪ್ಮೆಂಟ್ ಅಧಿಕಾರಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು ಮತ್ತು 5,000 ರೂ.ಗಳನ್ನು ಪಡೆದಿದ್ದರು. ಮೂರು ವರ್ಷಗಳ ನಂತರ, 2018ರಲ್ಲಿ, ಅವರು ಸ್ಥಳೀಯ ರಾಜಕೀಯ ನಾಯಕರಿಂದ ಪರಿಹಾರವಾಗಿ 500 ರೂ.ಗಳನ್ನು ಪಡೆದರು.
ಗ್ರಾಮಸ್ಥರ ಸುರಕ್ಷತೆ ಮತ್ತು ಭದ್ರತೆಗಾಗಿ ಅವರು ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದಾಗಿ ಸ್ಥಳೀಯ ಅರಣ್ಯ ಇಲಾಖೆಯ ರೇಂಜರ್ ಕುದ್ರತೆ ಖೋದಾ ಹೇಳುತ್ತಾರೆ. "ನಮ್ಮ ಬಳಿ 'ಐರಾವತ್' ಎಂಬ ಕಾರು ಇದೆ. ಆನೆಗಳನ್ನು ಓಡಿಸಲು ಈ ಕಾರನ್ನು ಬಳಸುತ್ತೇವೆ. ಯಾವುದೇ ದೈಹಿಕ ಹಾನಿಯಾಗದಂತೆ ಅವುಗಳನ್ನು ಕೇವಲ ಸೈರನ್ ಸದ್ದಿನಿಂದ ಓಡಿಸುತ್ತೇವೆ."
ಅರಣ್ಯ ಇಲಾಖೆಯಲ್ಲಿ ಸ್ಥಳೀಯ ಗಜಮಿತ್ರರೂ ಇದ್ದಾರೆ. ಪಾಟಲ್ಪಪುರದಿಂದ ಏಳು ಕಿಲೋಮೀಟರ್ ದೂರದಲ್ಲಿರುವ ಬಗಾನ್ ಪಾರಾದ ಐವರು ಯುವಕರನ್ನು ಗಜಮಿತ್ರರಾಗಿ ಕೆಲಸ ಮಾಡಲು ಅರಣ್ಯ ಇಲಾಖೆ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿದೆ. ಇವರು ಆನೆಗಳು ಬಂದಾಗ ಅರಣ್ಯ ಇಲಾಖೆಗೆ ಮಾಹಿತಿ ಕಳುಹಿಸುತ್ತಾರೆ.
ಆದರೆ ಪಾಟಲ್ಪುರದ ಕೊನೆಯ ಕೆಲವು ನಿವಾಸಿಗಳು ಇದನ್ನು ಒಪ್ಪುವುದಿಲ್ಲ. “ನಮಗೆ ಅರಣ್ಯ ಇಲಾಖೆಯಿಂದ ಯಾವುದೇ ಸಹಾಯ ದೊರಕುವುದಿಲ್ಲ” ಎಂದು ಚಂದನಾ ದಾಸ್ ವಾದಿಸುತ್ತಾರೆ. ಊರಿನ ಪಾಳುಬಿದ್ದ ಮನೆಗಳು ಮತ್ತು ಖಾಲಿ ಅಂಗಳಗಳು ಅವರ ಅಸಹಾಯಕತೆಯನ್ನು ಎತ್ತಿ ತೋರಿಸುತ್ತವೆ.
ಅನುವಾದ: ಶಂಕರ. ಎನ್. ಕೆಂಚನೂರು