ಜಾರ್ಖಂಡ್‌ನ ಚೆಚರಿಯಾ ಗ್ರಾಮದ ಸವಿತಾ ದೇವಿ ಅವರ ಮಣ್ಣಿನ ಮನೆಯ ಗೋಡೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಫೋಟೋ ಕಾಣುತ್ತಿದೆ. "ಬಾಬಾಸಾಹೇಬರು ನಮಗೆ [ಮತದಾನದ ಹಕ್ಕು] ಕೊಟ್ಟಿದ್ದಾರೆ, ಅದಕ್ಕಾಗಿಯೇ ನಾವು ವೋಟ್ ಮಾಡುತ್ತಿದ್ದೇವೆ," ಎಂದು ಸವಿತಾ ಹೇಳುತ್ತಾರೆ.
ಸವಿತಾರವರಲ್ಲಿ ಒಂದು ಬಿಘಾ (0.75 ಎಕರೆ) ಜಮೀನು ಇದೆ. ಖಾರಿಫ್ ಋತುವಿನಲ್ಲಿ ಇವರು ಇದರಲ್ಲಿ ಭತ್ತ ಮತ್ತು ಜೋಳವನ್ನು ಹಾಗೂ ರಬಿ ಋತುವಿನಲ್ಲಿ ಗೋಧಿ, ಕಪ್ಪು ಕಡಲೆ ಮತ್ತು ಎಣ್ಣೆಕಾಳುಗಳನ್ನು ಬೆಳೆಯುತ್ತಾರೆ. ತಮ್ಮ ಹಿತ್ತಲಿನಲ್ಲಿ ತರಕಾರಿ ಬೆಳೆಯಬೇಕು ಅಂದುಕೊಂಡಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ನೀರಿಲ್ಲದೆ ಸಮಸ್ಯೆಯಾಗಿದೆ. ಸತತವಾಗಿ ಬರಗಾಲ ಬಂದು ಇವರ ಇಡೀ ಕುಟುಂಬವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದೆ.
ಮೂವತ್ತೆರಡು ವರ್ಷ ಪ್ರಾಯದ ಸವಿತಾ ಪಲಾಮು ಜಿಲ್ಲೆಯ ಈ ಹಳ್ಳಿಯಲ್ಲಿ ತಮ್ಮ ನಾಲ್ಕು ಮಂದಿ ಮಕ್ಕಳೊಂದಿಗೆ ವಾಸಿಸುತ್ತಾರೆ. ಇವರ ಪತಿ 37 ವರ್ಷ ಪ್ರಾಯದ ಪ್ರಮೋದ್ ರಾಮ್ 2,000 ಕಿಲೋಮೀಟರ್ ದೂರದಲ್ಲಿರುವ ಬೆಂಗಳೂರಿನಲ್ಲಿ ವಲಸೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. "ಸರ್ಕಾರ ನಮಗೆ ಯಾವುದೇ ಉದ್ಯೋಗ ನೀಡುತ್ತಿಲ್ಲ. ದುಡಿದದ್ದು ಮಕ್ಕಳ ಹೊಟ್ಟೆ ತುಂಬಿಸಲೂ ಸಾಕಾಗುತ್ತಿಲ್ಲ," ಎಂದು ಈ ದಲಿತ ದಿನಗೂಲಿ ಕಾರ್ಮಿಕ ಹೇಳುತ್ತಾರೆ.
ಕಟ್ಟಡ ನಿರ್ಮಾಣ ಸೈಟ್‌ಗಳಲ್ಲಿ ಕೆಲಸ ಮಾಡುವ ಪ್ರಮೋದ್ ತಿಂಗಳಿಗೆ ಸುಮಾರು 10,000-12,000 ರುಪಾಯಿ ಸಂಪಾದನೆ ಮಾಡುತ್ತಾರೆ. ಕೆಲವೊಮ್ಮೆ ಟ್ರಕ್ ಡ್ರೈವರ್ ಆಗಿಯೂ ಕೆಲಸ ಮಾಡುತ್ತಾರೆ, ಆದರೆ ಆ ಕೆಲಸ ವರ್ಷಪೂರ್ತಿ ಸಿಗುವುದಿಲ್ಲ. “ಗಂಡಸರು ನಾಲ್ಕು ತಿಂಗಳು ಮನೆಯಲ್ಲಿ ಕುಳಿತರೆ ನಾವು ಭಿಕ್ಷೆಯೆತ್ತಬೇಕಾಗುತ್ತದೆ. ನಾವು ಏನು ಮಾಡಬಹುದು [ವಲಸೆಯಲ್ಲದೇ]?" ಎಂದು ಸವಿತಾ ಕೇಳುತ್ತಾರೆ.
960 ಮಂದಿ ನಿವಾಸಿಗಳಿರುವ (2011 ರ ಜನಗಣತಿ) ಚೆಚರಿಯಾ ಗ್ರಾಮದ ಹೆಚ್ಚಿನ ಪುರುಷರು ಕೆಲಸ ಹುಡುಕಲು ಬೇರೆ ಕಡೆಗೆ ಹೋಗುತ್ತಾರೆ. ಏಕೆಂದರೆ “ಇಲ್ಲಿ ಉದ್ಯೋಗಾವಕಾಶಗಳಿಲ್ಲ. ಇಲ್ಲಿ ಕೆಲಸಗಳಿದ್ದರೆ ಜನ ಏಕೆ ಹೊರಗಡೆ ಹೋಗುತ್ತಾರೆ?” ಎಂದು ಸವಿತಾರ ಅತ್ತೆ 60 ವರ್ಷ ಪ್ರಾಯದ ಸುರಪತಿ ದೇವಿ ಹೇಳುತ್ತಾರೆ.












