ನಾನು ನಾಲ್ಕನೇ ದಿನ ಅಲ್ಲಿಗೆ ತಲುಪಿದ್ದೆ; ಅಲ್ಲಿಗೆ ತಲುಪುವಾಗ ಮಧ್ಯಾಹ್ನವಾಗುವುದರಲ್ಲಿತ್ತು.
ಚೆನ್ನೈಯಿಂದ ವಯನಾಡಿಗೆ ಸ್ವಯಂಸೇವಕರ ತಂಡವೊಂದರ ಜೊತೆ ಹೊರಟಿದ್ದೆ. ಬಸ್ಸುಗಳಿರದ ಕಾರಣ ಅಪರಿಚಿರಿಂದ ಲಿಫ್ಟ್ ಪಡೆಯಬೇಕಾಯಿತು.
ದುರಂತ ನಡೆದ ಸ್ಥಳವು ಯುದ್ಧಭೂಮಿಯಂತಿತ್ತು. ಆಂಬುಲೆನ್ಸ್‌ಗಳು ಒಂದೇ ಸಮನೇ ಬಂದು ಹೋಗುತ್ತಿದ್ದವು. ಜನರು ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿ ಹೆಣಗಳನ್ನು ಹುಡುಕುವುದರಲ್ಲಿ ನಿರತರಾಗಿದ್ದರು. ಚೂರಮಲಾ, ಅಟ್ಟಮಲಾ ಮತ್ತು ಮುಂಡಕ್ಕೈ ಪಟ್ಟಣಗಳು ಹೇಳ ಹೆಸರಿಲ್ಲದಂತಾಗಿದ್ದವು. ಅಲ್ಲಿ ಜನಜೀವನ ಇದ್ದ ಕುರುಹುಗಳೇ ಇರಲಿಲ್ಲ. ಅಲ್ಲಿನ ನಿವಾಸಿಗಳು ಯಾವ ಮಟ್ಟಕ್ಕೆ ಕುಸಿದು ಹೋಗಿದ್ದರೆಂದರೆ ಅವರಿಗೆ ತಮ್ಮ ಪೀತಿಪಾತ್ರರ ದೇಹವನ್ನು ಗುರುತಿಸುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ.
ನದಿಯ ದಡದಲ್ಲಿ ಅವಶೇಷಗಳು ಮತ್ತು ಮೃತ ದೇಹಗಳು ಬಿದ್ದಿದ್ದವು. ಪರಿಹಾರ ಕಾರ್ಯಕರ್ತರು ಹಾಗೂ ಕುಟುಂಬಗಳು ಮಣ್ಣಿನಡಿ ಹೂತು ಹೋಗುವ ಭಯದಿಂದ ಕೋಲು ಹಿಡಿದುಕೊಂಡೇ ಹುಡುಕಾಟದಲ್ಲಿ ತೊಡಗಿದ್ದರು. ನನ್ನ ಕಾಲು ಮಣ್ಣಿನಲ್ಲಿ ಹೂತುಕೊಂಡಿತ್ತು. ದೇಹಗಳನ್ನು ಗುರುತು ಹಿಡಿಯುವುದು ಬಹಳ ಕಷ್ಟವಿತ್ತು. ದೇಹದ ಭಾಗಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪ್ರಕೃತಿಯೊಂದಿಗೆ ನನಗೆ ಬಹಳ ಆಪ್ತ ಸಂಬಂಧವಿದೆ. ಆದರೆ ಇಲ್ಲಿನ ದೃಶ್ಯಗಳು ನನ್ನನ್ನು ದಂಗಬಡಿಸಿದವು.
ಭಾಷೆಯ ಸಮಸ್ಯೆಯಿಂದಾಗಿ ನನಗೆ ಅಲ್ಲಿನ ಜನರ ಭಾವನೆಗಳಷ್ಟೇ ಅರ್ಥವಾಗುತ್ತಿದ್ದವು. ನಾನು ಅವರನ್ನು ಡಿಸ್ಟರ್ಬ್ ಮಾಡಲು ಹೋಗಲಿಲ್ಲ. ನಾನು ಇಲ್ಲಿಗೆ ಮೊದಲೇ ಬರುವವನಿದ್ದೆ, ಆದರೆ ಆರೋಗ್ಯ ಅದಕ್ಕೆ ಆಸ್ಪದ ನೀಡಿರಲಿಲ್ಲ.
ಹರಿಯುವ ನೀರನ್ನು ಅನುಸರಿಸಿ ಕೆಲವು ಕಿಲೋಮೀಟರ್ ದೂರವನ್ನು ನಡೆದೆ. ಮನೆಗಳು ಮಣ್ಣಿನಲ್ಲಿ ಹೂತು ಹೋಗಿದ್ದವು. ಇನ್ನೂ ಕೆಲವು ಪೂರ್ತಿಯಾಗಿ ಕಾಣೆಯಾಗಿದ್ದವು. ಎಲ್ಲೆಡೆಯೂ ಸ್ವಯಂಸೇವಕರು ಮೃತ ದೇಹಗಳಿಗಾಗಿ ಹುಡುಕುತ್ತಿರುವುದು ಕಾಣುತ್ತಿತ್ತು. ಜೊತೆಗೆ ಸೈನ್ಯವೂ ಪರಿಹಾರ ಕಾರ್ಯದಲ್ಲಿ ತೊಡಗಿತ್ತು. ನಾನು ಅಲ್ಲಿ ಎರಡು ದಿನಗಳ ಕಾಲ ಉಳಿದಿದ್ದೆ ಆದರೆ ಯಾವುದೇ ಮೃತ ದೇಹ ಕಂಡುಬಂದಿರಲಿಲ್ಲ. ಆದರೆ ಹುಡುಕಾಟ ಮಾತ್ರ ಬಿಡುವಿಲ್ಲದೆ ಸಾಗಿತ್ತು. ಅವರು ಚಹಾ ಮತ್ತು ಊಟದ ಸಲುವಾಗಿಯಷ್ಟೇ ವಿರಮಿಸುತ್ತಿದ್ದರು. ಅಲ್ಲಿನ ಜನರ ಒಗ್ಗಟ್ಟು ನನ್ನನ್ನು ನಿಜಕ್ಕೂ ಅಚ್ಚರಿಯಲ್ಲಿ ದೂಡಿತು.































