“ನಾನು ಈ ಊರಿಗೆ ಯಾಕಾದರೂ ಮದುವೆಯಾದೆನೋ ಎಂದು ಪರಿತಪಿಸುತ್ತಿದ್ದೇನೆ.”
29 ವರ್ಷದ ನವ ವಧುವಾಗಿ ತನ್ನ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಇದು ಅವರೊಬ್ಬರ ಅಭಿಪ್ರಾಯವಷ್ಟೇ ಅಲ್ಲ. ಶ್ರೀನಗರ ದಾಲ್ ಸರೋವರ ಪ್ರದೇಶದ ನಿವಾಸಿಗಳು ಇಲ್ಲಿಗೆ ಮದುವೆಯಾಗಿ ಬರಲು ಯಾರಿಗೂ ಇಷ್ಟವಿಲ್ಲ ಎನ್ನುತ್ತಾರೆ. “ನಾವು ಈಗಾಗಲೇ ಮೂರು ಕಡೆಯಿಂದ ಇಲ್ಲ ಅನ್ನಿಸಿಕೊಂಡಿದ್ದೇವೆ” ಎನ್ನುತ್ತಾರೆ ತನ್ನ ಹಿರಿಯ ಮಗನಿಗಾಗಿ ಹೆಣ್ಣು ಹುಡುಕುತ್ತಿರುವ ಗುಲ್ಷನ್ ನಜೀರ್. “ಮದುವೆ ದಲ್ಲಾಳಿಗಳು ಸಹ ಇಲ್ಲಿಗೆ ಬರುವುದನ್ನು ನಿಲ್ಲಿಸಿದ್ದಾರೆ.”
ಇದಕ್ಕೆ ಕಾರಣವೆಂದರೆ ನೀರಿನ ಕೊರತೆ ಎನ್ನುತ್ತಾರೆ ಈ ಬಾರೋ ಮೊಹಲ್ಲಾದ ತಾಯಿ. ತಮಾಷೆಯೆಂದರೆ ಈ ಊರು ರಾಜ್ಯದ ಅತಿದೊಡ್ಡ ಸಿಹಿ ನೀರಿನ ಸರೋವರನ್ನು ಹೊಂದಿದೆ.
"ಒಂಬತ್ತು ವರ್ಷಗಳ ಹಿಂದೆ, ನಾವು ನಮ್ಮ ದೋಣಿಗಳನ್ನು ತೆಗೆದುಕೊಂಡು ಹೋಗಿ ದಾಲ್ ಸರೋವರದ ವಿವಿಧ ಸ್ಥಳಗಳಿಂದ ನೀರನ್ನು ಸಂಗ್ರಹಿಸುತ್ತಿದ್ದೆವು" ಎಂದು ಬಡಗಿಯಾಗಿ ಕೆಲಸ ಮಾಡುತ್ತಿರುವ ಮುಷ್ತಾಕ್ ಅಹ್ಮದ್ ಹೇಳುತ್ತಾರೆ. "ಆಗೆಲ್ಲ ನೀರಿನ ಟ್ಯಾಂಕರುಗಳು ಇರಲಿಲ್ಲ."
ಆದರೆ ಕಳೆದ ಒಂದು ದಶಕದಿಂದೀಚೆಗೆ, ಮುಷ್ತಾಕ್, ಬೆಳಿಗ್ಗೆ 9 ಗಂಟೆಗೆ ಮುಖ್ಯ ರಸ್ತೆಯಲ್ಲಿ ಬರುವ ಸರ್ಕಾರಿ ನೀರಿನ ಟ್ಯಾಂಕರುಗಳಿಗಾಗಿ ಕಾಯುತ್ತಿದ್ದಾರೆ. ಗುಡೂ ಮೊಹಲ್ಲಾದಲ್ಲಿ ವಾಸಿಸುವ ಅವರ 10 ಸದಸ್ಯರ ಕುಟುಂಬವು ಅವರನ್ನು ಅವಲಂಬಿಸಿದೆ. ಪರಿಸ್ಥಿತಿಯನ್ನು ಸರಾಗವಾಗಿಸಲು, ಅವರು 20,000-25,000 ರೂ.ಗಳನ್ನು ಖರ್ಚು ಮಾಡಿ ನೀರು ಶೇಖರಣಾ ಟ್ಯಾಂಕುಗಳನ್ನು ಸಹ ಖರೀದಿಸಿದರು ಮತ್ತು ಪೈಪ್ ಲೈನ್ ಹಾಕಿಸಿದರು. "ಕಾಶ್ಮೀರದಲ್ಲಿ ಚಳಿಗಾಲದಲ್ಲಿ ದೊಡ್ಡ ಸಮಸ್ಯೆಯಾಗಿರುವ ವಿದ್ಯುತ್ ಇದ್ದರೆ ಮಾತ್ರ ಈ ವ್ಯವಸ್ಥೆ ಕಾರ್ಯನಿರ್ವಹಿಸುತ್ತದೆ" ಎಂದು ಅವರು ಹೇಳುತ್ತಾರೆ. ಈ ತಿಂಗಳು (ಮಾರ್ಚ್) ಟ್ರಾನ್ಸ್‌ಫಾರ್ಮರಿನಲ್ಲಿನ ದೋಷದಿಂದಾಗಿ ಅವರು ನೀರನ್ನು ಮತ್ತೆ ಬಕೆಟ್ ಮೂಲಕ ಸಾಗಿಸಬೇಕಾಯಿತು.
ಮುರ್ಷಿದಾಬಾದ್ ಜಿಲ್ಲೆಯ ಬೆಗುನ್ ಬಾರಿ ಗ್ರಾಮ ಪಂಚಾಯತಿನ ಹಿಜುಲಿ ಎನ್ನುವ ಕುಗ್ರಾಮದಲ್ಲಿನ ನಿವಾಸಿಗಳು ನೀರಿಗಾಗಿ ಟ್ಯಾಂಕರುಗಳನ್ನು ಅವಲಂಬಿಸಿದ್ದಾರೆ. ಆದರೆ ಇಲ್ಲಿ ನೀರು ಪೂರೈಕೆ ಖಾಸಗಿಯವರದು. ಪಶ್ಚಿಮ ಬಂಗಾಳದಲ್ಲಿ 20 ಲೀಟರ್ ನೀರಿನ 10 ರೂಪಾಯಿ.
“ನಮಗೆ ಬೇರೆ ಆಯ್ಕೆಯೇ ಇಲ್ಲ. ಇದೇ ನೀರನ್ನು ನಾವು ಖರೀದಿಸುವುದು. ಒಂದು ವೇಳೆ ನೀರು ಬಂದಾಗ ತಪ್ಪಿ ಹೋದರೆ ಮತ್ತೆ ಕುಡಿಯಲು ನೀರಿರುವುದಿಲ್ಲ” ಎನ್ನುತ್ತಾರೆ ಲಾಲ್ ಬಾನು ಬೀಬಿ.
ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯ ಪ್ರಯೋಜನ ಸಿಗದವರಲ್ಲಿ ರೋಜಿ, ಮುಷ್ತಾಕ್ ಮತ್ತು ಲಾಲ್ ಬಾನು ಸೇರಿದ್ದಾರೆ ಎಂಬುದು ಸ್ಪಷ್ಟವಾಗಿದೆ. 75ರಷ್ಟು ಗ್ರಾಮೀಣ ಕುಟುಂಬಗಳು (19 ಕೋಟಿ) ಸುರಕ್ಷಿತ ಕುಡಿಯುವ ನೀರನ್ನು ಹೊಂದಿವೆ ಎಂದು ಜೆಜೆಎಂ ವೆಬ್ಸೈಟ್ ಹೇಳುತ್ತದೆ. 2019ರ 3.5 ಲಕ್ಷ ಕೋಟಿ ರೂ.ಗಳ ವೆಚ್ಚವು ಐದು ವರ್ಷಗಳಲ್ಲಿ ನಲ್ಲಿಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಿದೆ, ಮತ್ತು ಈ ಮೂಲಕ ಇಂದು ಶೇಕಡಾ 46ರಷ್ಟು ಗ್ರಾಮೀಣ ಕುಟುಂಬಗಳು ನಲ್ಲಿ ನೀರಿನ ಸಂಪರ್ಕವನ್ನು ಹೊಂದಿವೆ ಎಂದು ಅದು ಹೇಳುತ್ತದೆ.
ಬಿಹಾರ ರಾಜ್ಯ ಸರ್ಕಾರದ ಸಾತ್ ನಿಶ್ಚಯ್ ಯೋಜನೆಯಡಿ 2017-18ರಲ್ಲಿ ಬಿಹಾರದ ಅಕ್ಬರ್ ಪುರದ ಚಿಂತಾ ದೇವಿ ಮತ್ತು ಸುಶೀಲಾ ದೇವಿ ಅವರ ಊರಿನಲ್ಲಿ ನಲ್ಲಿಗಳನ್ನು ಸ್ಥಾಪಿಸಲಾಯಿತು. "ನಾಲ್ [ನಲ್ಲಿ] ಯನ್ನು ಆರೇಳು ವರ್ಷಗಳ ಹಿಂದೆ ಹಾಕಲಾಯಿತು. ಒಂದು ಟ್ಯಾಂಕನ್ನು ಕೂಡ ಕಟ್ಟಿಸಲಾಯಿತು. ಆದರೆ ಇಲ್ಲಿಯವರೆಗೆ ಈ ನಲ್ಲಿಗಳಿಂದ ಒಂದು ಹನಿ ನೀರು ಹೊರಬಂದಿಲ್ಲ" ಎಂದು ಚಿಂತಾ ದೇವಿ ಹೇಳುತ್ತಾರೆ.
ಹೀಗೆ ಅವರಿಗೆ ನೀರು ಸಿಗದಿರಲು ಕಾರಣ ಅವರು ದಲಿತರಾಗಿರುವುದು. ಚಿಂತಾ, ಸುಶೀಲ ಅವರಂತಹ 40 ದಲಿತ ಕುಟುಂಬಗಳಿಗೆ ಇಂದಿಗೂ ನೀರಿನ ಸಂಪರ್ಕ ದೊರೆತಿಲ್ಲ. ಆದರೆ ಊರಿನ ಮೇಲ್ಜಾತಿಗಳ ಮನೆಗಳಿಗೆ ನೀರಿನ ಸಂಪರ್ಕ ದೊರೆತಿದೆ. ನೀರು ಬಾರದ ನಲ್ಲಿಗಳು ಈಗ ಊರಿನಲ್ಲಿ ಜಾತಿಯ ಗುರುತಾಗಿ ನಿಂತಿವೆ.
ಅವರು ನೆಲೆಸಿರುವ ಅಕ್ಬರ್ ಪುರದ ದಲಿತ ಕಾಲೋನಿಯಲ್ಲಿ ಒಂದೇ ಒಂದು ಹ್ಯಾಂಡ್ ಪಂಪ್ ಇದ್ದು ಅದನ್ನು ಹೆಚ್ಚಾಗಿ ಮುಸಹರ್ ಮತ್ತು ಚಮಾರ್ ಸಮುದಾಯದವರು ಬಳಸುತ್ತಿದ್ದಾರೆ. (ರಾಜ್ಯದಲ್ಲಿ ಕ್ರಮವಾಗಿ ಅತ್ಯಂತ ಹಿಂದುಳಿದ ಜಾತಿ ಮತ್ತು ಪರಿಶಿಷ್ಟ ಜಾತಿ ಎಂದು ಪಟ್ಟಿ ಮಾಡಲಾಗಿದೆ).
ಈ ಹ್ಯಾಂಡ್ ಪಂಪ್ ಆಗಾಗ ಕೆಟ್ಟು ಹೋಗುತ್ತಿರುತ್ತದೆ. ಅಂತಹ ಸಂದರ್ಭಗಳಲ್ಲಿ, “ನಾವು ಎಲ್ಲರೂ ಒಂದಷ್ಟು ಹಣ ಹಾಕಿ ರಿಪೇರಿ ಮಾಡಿಸುತ್ತೇವೆ” ಎಂದು ನಳಂದ ಜಿಲ್ಲೆಯ ಈ ಕಾಲೋನಿಯ ನಿವಾಸಿ 60 ವರ್ಷದ ಚಿಂತಾ ಹೇಳುತ್ತಾರೆ. ಉಳಿದಂತೆ ನೀರಿಗಾಗಿ ಅವರು ಊರಿನ ಮೇಲ್ಜಾತಿಯಾದ ಯಾದವರ ಮೊರೆ ಹೋಗುವುದು ಉಳಿದಿರುವ ಇನ್ನೊಂದೇ ಆಯ್ಕೆ. ಆದರೆ ಅವರು ಮೊದಲಿನಿಂದಲೂ ನೀರು ಕೊಟ್ಟವರಲ್ಲ ಎಂದು ಅವರು ಹೇಳುತ್ತಾರೆ.
ನ್ಯಾಷನಲ್ ಕ್ಯಾಂಪೇನ್ ಆನ್ ದಲಿತ್ ಹ್ಯೂಮನ್ ರೈಟ್ಸ್ (ಎನ್‌ಸಿಡಿಎಚ್ಆರ್) ನಡೆಸಿದ ಅಧ್ಯಯನದ ಪ್ರಕಾರ, ಭಾರತದಲ್ಲಿ, ಎಲ್ಲಾ ಹಳ್ಳಿಗಳಲ್ಲಿ ದಲಿತರಿಗೆ ಸುಮಾರು ಅರ್ಧದಷ್ಟು (48.4 ಪ್ರತಿಶತ) ನೀರಿನ ಮೂಲಗಳಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ ಮತ್ತು ಶೇಕಡಾ 20ಕ್ಕಿಂತ ಹೆಚ್ಚು ಜನರಿಗೆ ಸುರಕ್ಷಿತ ಕುಡಿಯುವ ನೀರಿನ ಲಭ್ಯತೆಯಿಲ್ಲ.
ಮಹಾರಾಷ್ಟ್ರದ ಪಾಲ್ಘರ್ ನಿವಾಸಿ ಕೆ ಠಾಕೂರ್ ಬುಡಕಟ್ಟು ಜನಾಂಗದ ರಾಕು ನಾಡಗೆ ಅವರ ಪ್ರಕಾರ, ಆದಿವಾಸಿಗಳು ಸಹ ಇದೇ ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಗೊಂಡೆ ಖ್ ಗ್ರಾಮದಲ್ಲಿ, “ನೀರು ಒದಗಿಸಲು ಟ್ಯಾಂಕರುಗಳು ಬಂದಿದ್ದೇ ಇಲ್ಲ” ಎಂದು ಅವರು ಉಲ್ಲೇಖಿಸುತ್ತಾರೆ. ಬೇಸಿಗೆಯಲ್ಲಿ 1,137 ಜನರಿಗೆ ನೀರು ಒದಗಿಸುವ ಸ್ಥಳೀಯ ಬಾವಿ ಒಣಗಿದಾಗ, “ಎರಡು ಕಲ್ಶಿಗಳನ್ನು (ನೀರಿನ ಮಡಕೆಗಳು) ಹೊತ್ತುಕೊಂಡು ಕಾಡಿನ ದಾರಿಯ ಮೂಲಕ ಹೊತ್ತು ತರುವುದನ್ನು ಬಿಟ್ಟು ಬೇರೆ ದಾರಿಯಿಲ್ಲ - ಒಂದನ್ನು ತಲೆಯ ಮೇಲೆ ಮತ್ತು ಇನ್ನೊಂದು ತೋಳಿನಲ್ಲಿ” ಎಂದು ಅವರು ಹೇಳುತ್ತಾರೆ
ನೀರು ತರಲು ಒಟ್ಟು ಮೂರು ಬಾರಿ ಹೋಗಬೇಕು – ಸುಮಾರು 30 ಕಿಲೋಮೀಟರ್ ದೂರದ ನಡಿಗೆ – ಅದು ರಾಕು ಅವರ ಕುಟುಂಬದ ಒಂದು ದಿನದ ಬಳಕೆಗೆ ಸಾಕಾಗುತ್ತದೆ.
*****
ಕಕ್ರಂಬ ಗ್ರಾಮದ ನಿವಾಸಿ, ಶಿವಮೂರ್ತಿ ಸಾಠೆಯವರು ತಮ್ಮ ಬದುಕಿನ ಆರು ದಶಕಗಳಲ್ಲಿ ಐದು ಬರಗಾಲಗಳನ್ನು ಕಂಡಿದ್ದಾರೆ.
ಮಹಾರಾಷ್ಟ್ರದ ತುಳಜಾಪುರ ಪ್ರದೇಶದಲ್ಲಿ, ಕಳೆದ ಎರಡು ದಶಕಗಳಲ್ಲಿ ಫಲವತ್ತಾದ ಭೂಮಿ ಬಂಜರು ಭೂಮಿಯಾಗಿ ಮಾರ್ಪಟ್ಟಿದೆ ಎಂದು ಅವರು ಹೇಳುತ್ತಾರೆ; ಒಂದು ಕಡ್ಡಿ ಹುಲ್ಲು ಕೂಡ ಬೆಳೆಯುವುದಿಲ್ಲ. ಇದಕ್ಕೆ ಟ್ರಾಕ್ಟರುಗಳ ಬಳಕೆಯನ್ನು ಅವರು ದೂಷಿಸುತ್ತಾರೆ: "ನೇಗಿಲು ಮತ್ತು ಎತ್ತುಗಳನ್ನು ಬಳಸುತ್ತಿದ್ದಾಗ ಮಣ್ಣಿನಲ್ಲಿನ ಹುಲ್ಲು ವಾಸನ್ [ನೈಸರ್ಗಿಕ ಕಟ್ಟೆಗಳನ್ನು] ಸೃಷ್ಟಿಸುತ್ತಿತ್ತು, ಅದು ನೀರಿನ ಹರಿವನ್ನು ನಿಧಾನಗೊಳಿಸಿ ಮಣ್ಣು ನೀರು ಹೀರಿಕೊಳ್ಳುವಂತೆ ಮಾಡಿ. ಟ್ರಾಕ್ಟರುಗಳು ಮಣ್ಣನ್ನು ಪೂರ್ತಿಯಾಗಿ ಬಗೆದು ನೀರು ನೇರ ಇನ್ನೊಂದು ತುದಿಗೆ ಹೋಗುವಂತೆ ಮಾಡುತ್ತದೆ.”
1972ರಲ್ಲಿ ಬಂದ ಬರ “ತನ್ನ ಬದುಕಿನಲ್ಲೇ ಕಂಡ ಮೊದಲ ಮತ್ತು ಅತಿ ದೊಡ್ಡ ಬರ. ಆಗ ನೀರಿತ್ತು ಆದರೆ ಆಹಾರ ಸಿಗುತ್ತಿರಲಿಲ್ಲ. ಅದರ ನಂತರ ಪರಿಸ್ಥಿತಿ ಮತ್ತೆ ಸಹಜ ಸ್ಥಿತಿಗೆ ಬರಲೇ ಇಲ್ಲ ಎನ್ನುತ್ತಾರೆ” ಎಂದು ಅವರು ಹೇಳುತ್ತಾರೆ. ಸಾಠೆ ಕಾಕಾ ತುಳಾಜಾಪುರ ಪಟ್ಟಣದ ಭಾನುವಾರದ ಮಾರುಕಟ್ಟೆಯಲ್ಲಿ ತರಕಾರಿ ಮತ್ತು ಸಪೋಟಾ ಹಣ್ಣು ಮಾರುತ್ತಾರೆ. 2014ರ ಬರಗಾಲದಲ್ಲಿ ಅವರು ತಮ್ಮ ಒಂದು ಎಕರೆ ಮಾವಿನ ತೋಟವನ್ನು ಕಳೆದುಕೊಂಡರು. "ನಾವು ಅಂತರ್ಜಲವನ್ನು ಅತಿಯಾಗಿ ಬಳಸಿದ್ದೇವೆ ಮತ್ತು ಎಲ್ಲಾ ರೀತಿಯ ವಿಷಕಾರಿ ರಾಸಾಯನಿಕಗಳನ್ನು ಬಳಸುವ ಮೂಲಕ ನಮ್ಮ ಭೂಮಿಯನ್ನು ಹಾಳು ಮಾಡಿದ್ದೇವೆ."
ನಾವು ಅವರನ್ನು ಮಾರ್ಚ್ ತಿಂಗಳಿನಲ್ಲಿ ಮಾತನಾಡಿಸಿದ್ದೆವು. ಅವರು “ಮೇ ತಿಂಗಳಿನಲ್ಲಿ ಮುಂಗಾರಿಗೂ ಮೊದಲಿನ ಮಳೆ ಬರಬೇಕು. ಒಂದು ವೇಳೆ ಅದು ಬರದೆ ಹೋದರೆ ಈ ವರ್ಷ ಪರಿಸ್ಥಿತಿ ಕಷ್ಟವಾಗಲಿದೆ” ಎನ್ನುತ್ತಾರೆ. ಇಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, “ನಾವು ಒಂದು ಸಾವಿರ ಲೀಟರ್ ನೀರಿಗೆ 300 ರೂಪಾಯಿ ಕೊಟ್ಟು ಖರೀದಿಸುತ್ತಿದ್ದೇವೆ. ಮನುಷ್ಯರಾದ ನಮಗೆ ಮಾತ್ರವಲ್ಲದೆ ಜಾನುವಾರಿಗೂ ನೀರು ಬೇಕಾಗುತ್ತದೆ.”
ಜಾನುವಾರುಗಳ ಸಾವಿಗೆ ಕಾರಣವಾಗುವ ಮೇವಿನ ಕೊರತೆಯು ಮುಂದಿನ ಋತುವಿನಲ್ಲಿ ಉಂಟಾಗುವ ಅನಿರೀಕ್ಷಿತ ಪರಿಸ್ಥಿತಿಗಳನ್ನು ನಿಭಾಯಿಸುವುದು ಕೃಷಿಕರಿಗೆ ಇನ್ನಷ್ಟು ಕಷ್ಟಕರವಾಗಿದೆ ಎಂದು ಸ್ವಾಮಿನಾಥನ್ ಆಯೋಗದ ಮೊದಲ ವರದಿಯು ಸೂಚಿಸುತ್ತದೆ. "ಈ ರೀತಿಯಾಗಿ ಬರವು ತಾತ್ಕಾಲಿಕ ವಿದ್ಯಮಾನವಾಗಿ ಉಳಿಯುವುದಿಲ್ಲ, ಶಾಶ್ವತವಾಗಿ ಪರಿಸರವನ್ನು ದುರ್ಬಲಗೊಳಿಸುತ್ತದೆ" ಎಂದು ವರದಿ ಹೇಳುತ್ತದೆ.
2023ರಲ್ಲಿ ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತನಕ, ಧಾರಾಶಿವ್ (ಹಿಂದೆ ಒಸ್ಮಾನಾಬಾದ್) ಜಿಲ್ಲೆಯ ತುಳಜಾಪುರ ಬ್ಲಾಕಿನಲ್ಲಿ 570.3 ಮಿ.ಮೀ ಮಳೆಯಾಗಿತ್ತು (ಸಾಮಾನ್ಯ 653 ಮಿ.ಮೀ ವಾರ್ಷಿಕ ಮಳೆಯಾಗುತ್ತದೆ). ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಮಳೆ ಜುಲೈ ತಿಂಗಳಿನಲ್ಲಿ ಕೇವಲ 16 ದಿನಗಳಲ್ಲಿ ಬಿದ್ದಿದೆ. ಜೂನ್, ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ 3-4 ವಾರಗಳ ಕಾಲ ಇದ್ದ ಒಣ ಹವೆಯು ಭೂಮಿಯನ್ನು ಅಗತ್ಯವಾದ ತೇವಾಂಶದಿಂದ ವಂಚಿತಗೊಳಿಸಿತು; ಇದರಿಂದಾಗಿ ಜಲಮೂಲಗಳು ಮರುಪೂರಣಗೊಳ್ಳಲಿಲ್ಲ.
ಪರಿಣಾಮವಾಗಿ ಕಕ್ರಂಬದ ಜನರು ಪರದಾಡುತ್ತಿದ್ದಾರೆ: “ಪ್ರಸ್ತುತ ನಮಗೆ ದಿನ ಬಳಕೆಗೆ ಅಗತ್ಯವಿರುವ ನೀರಿನ 5 – 10 ಶೇಕಡಾ ಮಾತ್ರ ಸಿಗುತ್ತಿದೆ. ಊರಿನ ತುಂಬಾ ನೀವು ಹಂಡಾ ಮತ್ತು ಬಿಂದಿಗೆಗಳ ಸಾಲನ್ನು ನೋಡಬಹುದು” ಎಂದು ಅವರ ಈ ಪರಿ ವರದಿಗಾರರ ಬಳಿ ಹೇಳಿದರು.
“ಇದನ್ನು [ಬರದಂತಹ ಪರಿಸ್ಥಿತಿ] ಮನುಷ್ಯನೇ ಸೃಷ್ಟಿಸಿದ್ದು” ಎನ್ನುತ್ತಾರೆ ಸಾಠೆ ಕಾಕಾ.
ಮುರ್ಷಿದಾಬಾದ್ ಜಿಲ್ಲೆಯಲ್ಲಿ ಅಂತರ್ಜಲವು ಆರ್ಸೆನಿಕ್ ಅಂಶದಿಂದ ಕಲುಷಿತಗೊಂಡಿರುವಂತೆಯೇ ಪಶ್ಚಿಮ ಬಂಗಾಳದ ವಿಶಾಲವಾದ ಗಂಗಾ ಬಯಲಿನ ಭಾಗೀರಥಿ ನದಿಯ ದಡದಲ್ಲಿರುವ ಒಂದು ಕಾಲದ ಸಿಹಿನೀರಿನ ಕೊಳವೆ ಬಾವಿಗಳು ವೇಗವಾಗಿ ಒಣಗುತ್ತಿವೆ.
ಬೇಗುನ್ ಬಾರಿ ಗ್ರಾಮ ಪಂಚಾಯಿತಿಯಲ್ಲಿ ನಲ್ಲಿ ನೀರಿನ ಸೌಲ್ಯವಿಲ್ಲದ ಕಾರಣ ಜನರು ಕೊಳವೆ ಬಾವಿಗಳನ್ನು ಅವಲಂಬಿಸಿದ್ದರು (ಜನಸಂಖ್ಯೆ:10,983, ಜನಗಣತಿ 2011). "ನಾವು ಕೊಳವೆ ಬಾವಿಗಳನ್ನು ಬಳಸುತ್ತಿದ್ದೆವು, ಆದರೆ ಈಗ [2023] ಎಲ್ಲವೂ ಒಣಗಿಹೋಗಿವೆ" ಎಂದು ರೋಶನಾರಾ ಬೀಬಿ ಹೇಳುತ್ತಾರೆ. "ಬೆಲ್ದಂಗಾ 1 ಬ್ಲಾಕಿನ ಜಲಮೂಲಗಳು ಸಹ ಹಾಗೆಯೇ ಇದ್ದವು. ಇಲ್ಲಿನ ಕೊಳಗಳು ಸಹ ವೇಗವಾಗಿ ಕ್ಷೀಣಿಸುತ್ತಿವೆ." ಮಳೆಯ ಕೊರತೆ, ಅಂತರ್ಜಲವನ್ನು ಹೊರತೆಗೆಯುವ ಆಳವಿಲ್ಲದ ಪಂಪುಗಳ ಮಿತಿಮೀರಿದ ಅನಿಯಂತ್ರಿತ ಬಳಕೆ ಇದಕ್ಕೆ ಕಾರಣ ಎಂದು ಅವರು ಹೇಳುತ್ತಾರೆ.
ಅಂತರ್ಜಲವು ಭಾರತದಲ್ಲಿ ಕೃಷಿ ಮತ್ತು ಗೃಹ ಬಳಕೆ ಎರಡಕ್ಕೂ ಪ್ರಮುಖ ಮೂಲವಾಗಿದೆ, ಇದು ಗ್ರಾಮೀಣ ನೀರು ಸರಬರಾಜಿನಲ್ಲಿ ಶೇಕಡಾ 85ರಷ್ಟು ಕೊಡುಗೆ ನೀಡುತ್ತದೆ ಎಂದು ಈ 2017ರ ವರದಿ ಹೇಳುತ್ತದೆ.
ಇಲ್ಲಿನ ಅಂತರ್ಜಲದ ಅತಿಯಾದ ಬಳಕೆಯು ಸತತ ಮುಂಗಾರು ಮಳೆಯ ಕೊರತೆಯ ನೇರ ಪರಿಣಾಮವಾಗಿದೆ ಎಂದು ಜಹಾನಾರಾ ಬೀಬಿ ವಿವರಿಸುತ್ತಾರೆ. ಹಿಜುಲಿ ಕುಗ್ರಾಮದ 45 ವರ್ಷದ ನಿವಾಸಿಯಾದ ಇವರು ಸೆಣಬಿನ ಕೃಷಿಕರ ಕುಟುಂಬಕ್ಕೆ ಮದುವೆಯಾಗಿದ್ದಾರೆ. "ಮುಂದಿನ ಕೊಯ್ಲಿನ ಸಮಯದಲ್ಲಿ ಸಾಕಷ್ಟು ನೀರಿದ್ದರೆ ಮಾತ್ರ ಕೊಯ್ಲು ಮಾಡಲು ಸಾಧ್ಯವಾಗುತ್ತದೆ. ಸೆಣಬನ್ನು ಕೊಯ್ಲು ಮಾಡಿದ ನಂತರ ಕಾಯುವಂತಿಲ್ಲ. ಅದು ನಾಶವಾಗುತ್ತದೆ." ಆಗಸ್ಟ್ 2023ರ ಕೊನೆಯಲ್ಲಿ ಬೆಲ್ದಂಗಾ 1 ಬ್ಲಾಕ್ ಪ್ರದೇಶದ ಹೊಲಗಳಲ್ಲಿ ನೀರಿಲ್ಲದೆ ಬೆಳೆದು ನಿಂತಿರುವ ಸೆಣಬಿನ ಬೆಳೆ ಮಾನ್ಸೂನ್ ಮಳೆಯ ತೀವ್ರ ಕೊರತೆಯ ಪುರಾವೆಯಾಗಿದೆ.
ಆರ್ಸೆನಿಕ್ ಮಾಲಿನ್ಯದ ಕಾರಣದಿಂದಾಗಿ ಈ ಪ್ರದೇಶಗಳಲ್ಲಿನ ಕೊಳವೆ ಬಾವಿಗಳ ನೀರನ್ನು ನಂಬುವಂತಿಲ್ಲ ಎಂದು ಇಲ್ಲಿನ ನಿವಾಸಿಗಳು ಪರಿಗೆ ತಿಳಿಸಿದರು. ಅಂತರ್ಜಲದಲ್ಲಿ ಆರ್ಸೆನಿಕ್ ಅಂಶದ ವಿಷಯಕ್ಕೆ ಬಂದಾಗ ಮುರ್ಷಿದಾಬಾದ್ ಹೆಚ್ಚು ಪೀಡಿತ ಜಿಲ್ಲೆಗಳಲ್ಲಿ ಒಂದಾಗಿದೆ , ಇದು ಚರ್ಮರೋಗ, ನರ ಮತ್ತು ಹೆರಿಗೆ ಸಂಬಂಧಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಆರ್ಸೆನಿಕ್ ಮಾಲಿನ್ಯದ ಕುರಿತಾದ ಹೆಚ್ಚುತ್ತಿರುವ ಜಾಗೃತಿಯಿಂದಾಗಿ ಈಗ ಅಂತಹ ನೀರಿನ ಬಳಕೆ ನಿಂತಿದೆ. ಆದರೆ ಜನರು ಈಗ ನೀರಿಗಾಗಿ ಸಂಪೂರ್ಣವಾಗಿ ಖಾಸಗಿಯವರನ್ನೇ ಅವಲಂಬಿಸಿದ್ದು ಅವರು ತರುವ ನೀರು ಸುರಕ್ಷಿತವೇ ಎನ್ನುವುದು ಯಾರಿಗೂ ತಿಳಿದಿಲ್ಲ.
ನೀರಿನ ಟ್ಯಾಂಕರುಗಳು ಬೇಗುನ್ ಬಾರಿ ಪ್ರೌಢಶಾಲೆಯ 5ನೇ ತರಗತಿ ವಿದ್ಯಾರ್ಥಿ ಮತ್ತು ಹಿಜುಲಿ ನಿವಾಸಿ ರಜ್ಜುವಿನಂತಹ ವಿದ್ಯಾರ್ಥಿಗಳನ್ನು ಮನೆಗೆ ತಂದು ಬಿಡುತ್ತವೆ, ರಜ್ಜು ಟ್ಯಾಂಕರ್ ಬಳಿಯಿಂದ ಮನೆಗೆ ನೀರು ತಂದು ಕೊಡುತ್ತಾನೆ. ಈ ವರದಿಗಾರರ ಕಡೆಗೊಮ್ಮೆ ನೋಡಿದ ರಜ್ಜು “ಮನೆಯಲ್ಲಿ ಓದುವುದಕ್ಕಿಂತಲೂ ಇದು ಚೆನ್ನಾಗಿರುತ್ತೆ” ಎಂದು ಕಣ್ಣು ಹೊಡೆಯುತ್ತಾನೆ.
ಈ ಭಾಗದಲ್ಲಿ ಈ ರೀತಿಯ ಸಂತೋಷವನ್ನು ಆನಂದಿಸುವುದು ಅವನು ಮಾತ್ರವಲ್ಲ. ಹಿಜುಲಿಯಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಕಾಜಿಸಾಹಾದಲ್ಲಿ (ಜನಸಂಖ್ಯೆ 13,489, ಜನಗಣತಿ 2011) ಕೆಲವು ಉತ್ಸಾಹಿ ಹುಡುಗರು ನೀರಿನ ವ್ಯಾಪಾರಿಯ ಮಾರ್ಗದರ್ಶನದಲ್ಲಿ ಹಿರಿಯರಿಗೆ ತಮ್ಮ ಬಿಂದಿಗೆಗಳು ಮತ್ತು ಕ್ಯಾನುಗಳಿಗೆ ನೀರು ತುಂಬಿಸಲು ಸಹಾಯ ಮಾಡುತ್ತಾರೆ. “ವ್ಯಾನ್ ಹಿಂಭಾಗದಲ್ಲಿ ಕುಳಿತು ಹಳ್ಳಿಯ ಸುತ್ತ ತಿರುಗುವುದು ಖುಷಿ ಕೊಡುತ್ತದೆ” ಎಂದು ಮಕ್ಕಳು ಹೇಳುತ್ತಾರೆ.
ಮುರ್ಷಿದಾಬಾದ್ ಪ್ರದೇಶದಲ್ಲಿ ಆರ್ಸೆನಿಕ್ ನೀರಿನ ತೊಂದರೆಗೆ ಕಾರಣವಾಗಿದ್ದರೆ ಪಾಲ್ಘರ್ ಪ್ರದೇಶದಲ್ಲಿ ಅತಿಸಾರ ನೀರಿನ ಸಮಸ್ಯೆಗೆ ಕಾರಣವಾಗಿದೆ. ಸಾವಿರಾರು ಕಿಲೋಮೀಟರ್ ದೂರದ ಈ ಊರಿನಲ್ಲೂ ನೀರಿನ ಸಂಗ್ರಹ ಕಡಿಮೆಯಾಗಿದೆ.
ರಾಕು ನಾಡಗೆ ತನ್ನ ಗ್ರಾಮವಾದ ಗೊಂಡೆ ಕೆ.ಎಚ್.ನ ಬಾವಿಯಲ್ಲಿ ನೀರಿನ ಮಟ್ಟವು ವೇಗವಾಗಿ ಕುಸಿಯುತ್ತಿದೆ ಮತ್ತು 227 ಕುಟುಂಬಗಳು ಈ ಒಂದು ಮೂಲವನ್ನು ಅವಲಂಬಿಸಿವೆ ಎಂದು ಹೇಳುತ್ತಾರೆ. "ಇದು ನಮಗಿರುವ ಹತ್ತಿರದ ಮತ್ತು ಏಕೈಕ ನೀರಿನ ಮೂಲವಾಗಿದೆ" ಎಂದು ಅವರು ಹೇಳುತ್ತಾರೆ. ಮೊಖಡಾ ತಾಲ್ಲೂಕಿನ ಈ ಗ್ರಾಮದ ಹೆಚ್ಚಿನ ಜನರು ಕೆ ಠಾಕೂರ್ ಬುಡಕಟ್ಟಿಗೆ ಸೇರಿದವರು.
ಎರಡು ವರ್ಷಗಳ ಹಿಂದೆ, ಅವರ ಮಗ ದೀಪಕ್ ಅತಿಸಾರದಿಂದ ಬಳಲುತ್ತಿದ್ದರು, ಇದು ಅವರು ಕುಡಿಯಲು ಬಳಸಿದ ನೀರಿನಿಂದ ಉಂಟಾಗಿರಬಹುದು. ಪಾಲ್ಘರ್ ಜಿಲ್ಲೆಯ ಒಂಬತ್ತು ಹಳ್ಳಿಗಳ ಮಕ್ಕಳಲ್ಲಿ ಅತಿಸಾರದ ಹರಡುವಿಕೆಯು ಶೇಕಡಾ 33.4ರಷ್ಟಿದೆ ಎಂದು 2018ರ ಅಧ್ಯಯನವು ದಾಖಲಿಸಿದೆ. ಮಗನ ಅನಾರೋಗ್ಯದ ನಂತರ, ರಾಕು ಪ್ರತಿದಿನ ಕುದಿಯುವ ನೀರನ್ನು ಕುಡಿಯುತ್ತಿದ್ದಾರೆ.
ಆದರೆ ಆ ನೀರನ್ನು ತರಲು ಅವರು ದೂರದವರೆಗೆ ಹೋಗಬೇಕು. ಬೇಸಗೆಯಲ್ಲಿ ಬಾವಿ ಒಣಗಿದ ಸಮಯದಲ್ಲಿ ಮಹಿಳೆಯರು ನೀರು ಹುಡುಕಿಕೊಂಡು ಹಳ್ಳಿಯಿಂದ ಸುಮಾರು ಒಂಬತ್ತು ಕಿಲೋಮೀಟರ್ ದೂರದಲ್ಲಿರುವ ವಾಘ್ ನದಿಗೆ ಹೋಗುತ್ತಾರೆ, ಮತ್ತು ಅವರು ದಿನಕ್ಕೆ ಎರಡರಿಂದ ಮೂರು ಬಾರಿ ಮೂರು ಗಂಟೆಗಳ ಪ್ರಯಾಣವನ್ನು ಪುನರಾವರ್ತಿಸುತ್ತಾರೆ, ಮುಂಜಾನೆ ಅಥವಾ ಮುಸ್ಸಂಜೆಯ ನಂತರ ಬಿಸಿಲು ಕಡಿಮೆಯಿರುವ ಹೊತ್ತು ನೋಡಿಕೊಂಡು ಹೋಗುತ್ತಾರೆ.
ಯುನಿಸೆಫ್ ವರದಿಯ ಪ್ರಕಾರ, ಭಾರತ ಉಪಖಂಡದಾದ್ಯಂತ, ನೀರಿಗೆ ಸಂಬಂಧಿಸಿದ ಮನೆಕೆಲಸಗಳ ಹೊರೆ ಅನ್ಯಾಯವಾಗಿ ಮಹಿಳೆಯರ ಮೇಲೆ ಬೀಳುತ್ತದೆ ಮತ್ತು "ಸುಮಾರು 54 ಪ್ರತಿಶತದಷ್ಟು ಗ್ರಾಮೀಣ ಮಹಿಳೆಯರು ಮತ್ತು ಕೆಲವು ಹದಿಹರೆಯದ ಹುಡುಗಿಯರು ಪ್ರತಿದಿನ ಅಂದಾಜು 35 ನಿಮಿಷಗಳ ಕಾಲವನ್ನು ನೀರು ಸಂಗ್ರಹಿಸಲು ಕಳೆಯುತ್ತಾರೆ" ಎಂದು ಯುನಿಸೆಫ್ ವರದಿ ತಿಳಿಸಿದೆ. ಇದು ಒಂದು ವರ್ಷದಲ್ಲಿ 27 ದಿನಗಳ ವೇತನದ ನಷ್ಟಕ್ಕೆ ಸಮನಾಗಿದೆ ಎಂದು ಅದು ಹೇಳಿದೆ.
"ಪುರುಷರು ಕೆಲಸಕ್ಕೆ [ಹೊರಗೆ] ಹೋಗಬೇಕು, ಹೀಗಾಗಿ ಅಡುಗೆ ಮಾಡಲು ನೀರನ್ನು ನಾವೇ ತರಬೇಕು. ಬೆಳಿಗ್ಗೆ, ಹ್ಯಾಂಡ್ ಪಂಪ್ ತುಂಬಾ ಜನಸಂದಣಿಯಿಂದ ಕೂಡಿರುತ್ತದೆ" ಎಂದು ಚಿಂತಾ ದೇವಿ ಹೇಳುತ್ತಾರೆ. "ಮಧ್ಯಾಹ್ನ, ಸ್ನಾನ ಮಾಡಲು ಮತ್ತು ಬಟ್ಟೆ ಒಗೆಯಲು ಇತ್ಯಾದಿಗೆ ನಮಗೆ ನೀರು ಬೇಕು ಮತ್ತು ನಂತರ ಸಂಜೆ ಅಡುಗೆ ಮಾಡಲು ಸಹ ನಮಗೆ ನೀರು ಬೇಕು" ಎಂದು ಅವರು ಹೇಳುತ್ತಾರೆ.
ಯುನಿಸೆಫ್ ವರದಿಯ ಪ್ರಕಾರ, ಭಾರತ ಉಪಖಂಡದಾದ್ಯಂತ, ನೀರಿಗೆ ಸಂಬಂಧಿಸಿದ ಮನೆಕೆಲಸಗಳ ಹೊರೆ ಅನ್ಯಾಯವಾಗಿ ಮಹಿಳೆಯರ ಮೇಲೆ ಬೀಳುತ್ತದೆ ಮತ್ತು "ಸುಮಾರು 54 ಪ್ರತಿಶತದಷ್ಟು ಗ್ರಾಮೀಣ ಮಹಿಳೆಯರು ಮತ್ತು ಕೆಲವು ಹದಿಹರೆಯದ ಹುಡುಗಿಯರು ಪ್ರತಿದಿನ ಅಂದಾಜು 35 ನಿಮಿಷಗಳ ಕಾಲವನ್ನು ನೀರು ಸಂಗ್ರಹಿಸಲು ಕಳೆಯುತ್ತಾರೆ" ಎಂದು ಯುನಿಸೆಫ್ ವರದಿ ತಿಳಿಸಿದೆ. ಇದು ಒಂದು ವರ್ಷದಲ್ಲಿ 27 ದಿನಗಳ ವೇತನದ ನಷ್ಟಕ್ಕೆ ಸಮನಾಗಿದೆ ಎಂದು ಅದು ಹೇಳಿದೆ.
ಈ ದಲಿತ ಕಾಲೋನಿಯ ನೀರಿನ ಏಕೈಕ ಮೂಲವೆಂದರೆ ಚಂಪಕಲ್ (ಹ್ಯಾಂಡ್ ಪಂಪ್), ಮತ್ತು ನೀರಿಗಾಗಿ ಸರತಿ ಸಾಲು ಬೆಳೆಯುತ್ತದೆ. "ಇಷ್ಟು ದೊಡ್ಡ ತೋಲಾದಲ್ಲಿ [ಕಾಲೋನಿ] ಒಂದೇ ಒಂದು ಹ್ಯಾಂಡ್ ಪಂಪ್ ಇದೆ. ನಾವು ಟೋಕ್ನಾ-ಬಾಲ್ಟಿ [ಪಾತ್ರೆಗಳನ್ನು] ಹೊತ್ತುಕೊಂಡು ಕ್ಯೂ ನಿಲ್ಲುತ್ತೇವೆ" ಎಂದು ಸುಶೀಲಾ ದೇವಿ ಹೇಳುತ್ತಾರೆ.
ಬೇಸಗೆಯಲ್ಲಿ ಹ್ಯಾಂಡ್ ಪಂಪ್ ಒಣಗಿದಾಗ, ಈ ಮಹಿಳೆಯರು ಬೆಳೆಗಳಿಗೆ ನೀರು ಹಾಯಿಸಲು ಪಂಪ್ ಮಾಡಿದ ನೀರನ್ನು ತರಲು ಹೊಲಗಳಿಗೆ ಹೋಗುತ್ತಾರೆ. "ಇದು ಕೆಲವೊಮ್ಮೆ ಒಂದು ಕಿಲೋಮೀಟರ್ ದೂರದಲ್ಲಿರುತ್ತದೆ. ನೀರು ತರಲು ಸಾಕಷ್ಟು ಸಮಯ ವ್ಯರ್ಥವಾಗುತ್ತದೆ" ಎಂದು 45 ವರ್ಷದ ಸುಶೀಲಾ ದೇವಿ ಹೇಳುತ್ತಾರೆ.
“ಗರ್ಮಿ ಬಡ್ತಾ ಹೈ ತೋ ಹಮ್ ಲೋಗೋಂ ಕೋ ಪ್ಯಾಸೇ ಮರ್ನೆ ಕಾ ನೌಬತ್ ಆ ಜಾತಾ ಹೈ [ಬೇಸಗೆಯಲ್ಲಿ ಸೆಕೆ ಹೆಚ್ಚಾದಂತೆ ನಾವು ಬಾಯಾರಿಕೆಯಿಂದ ಸಾಯುವಂತಾಗುತ್ತದೆ]” ಎಂದು ಸಿಟ್ಟಿನಿಂದ ಹೇಳಿದ ಅವರು ಸಂಜೆಯ ಅಡುಗೆಯ ತಯಾರಿಗೆ ತೊಡಗಿದರು.
ಈ ಬಹು ಪ್ರಾದೇಶಿಕ ವರದಿಯನ್ನು ಕಾಶ್ಮೀರದ ಮುಜಾಮಿಲ್ ಭಟ್, ಪಶ್ಚಿಮ ಬಂಗಾಳದ ಸ್ಮಿತಾ ಖಾಟೋರ್, ಬಿಹಾರದ ಉಮೇಶ್ ಕೆ ರೇ, ಮಹಾರಾಷ್ಟ್ರದ ಮೇಧಾ ಕಾಳೆ ಮತ್ತು ಜ್ಯೋತಿ ಶಿನೋಲಿ ಮತ್ತು ಛತ್ತೀಸ್ಗಢದ ಪುರುಷೋತ್ತಮ್ ಠಾಕೂರ್ ವರದಿ ಮಾಡಿದ್ದಾರೆ. ಪರಿ ಗ್ರೈಂಡ್ ಮಿಲ್ ಸಾಂಗ್ಸ್ ಪ್ರಾಜೆಕ್ಟ್ ಮತ್ತು ಸಾಂಗ್ಸ್ ಆಫ್ ದಿ ರಣ್: ಕಚ್ಛೀ ಜಾನಪದ ಹಾಡುಗಳ ಸರಣಿಯಿಂದ ಹಾಡುಗಳನ್ನು ಕೊಡುಗೆಯಾಗಿ ಪಡೆಯಲಾಗಿದೆ, ಇದನ್ನು ಕ್ರಮವಾಗಿ ನಮಿತಾ ವಾಯ್ಕರ್ ಮತ್ತು ಪ್ರತಿಷ್ಠಾ ಪಾಂಡ್ಯ ಸಂಯೋಜಿಸಿದ್ದಾರೆ ಮತ್ತು ಸಾನ್ವಿತಿ ಅಯ್ಯರ್ ಈ ವರದಿಗಾಗಿ ಗ್ರಾಫಿಕ್ಸ್ ರಚಿಸಿದ್ದಾರೆ.
ಕವರ್ ಫೋಟೋ: ಪುರುಷೋತ್ತಮ್ ಠಾಕೂರ್
ಅನುವಾದ: ಶಂಕರ. ಎನ್. ಕೆಂಚನೂರು