ಹಸಿವೆಯೇ ಜಲಾಲ್ ಅಲಿಯವರಿಗೆ ಬಿದಿರಿನ ಮೀನು ಹಿಡಿಯುವ ಬಲೆಗಳನ್ನು ತಯಾರಿಸುವುದನ್ನು ಕಲಿಸಿದ್ದು.
ಯುವಕನಾಗಿದ್ದಾಗ ದಿನಗೂಲಿಗೆ ಕೆಲಸ ಮಾಡಿ ಬದುಕುತ್ತಿದ್ದರು. ಮಳೆಗಾಲ ಬಂದಾಗ ಆ ಕೆಲಸವೂ ಇರುತ್ತಿರಲಿಲ್ಲ: "ಮಳೆಗಾಲ ಬಂದರೆ ಭತ್ತದ ಸಸಿಗಳನ್ನು ನಾಟಿ ಮಾಡುವುದನ್ನು ಬಿಟ್ಟು ಬೇರೆ ಯಾವುದೇ ಕೆಲಸ ಸಿಗುತ್ತಿರಲಿಲ್ಲ," ಎಂದು ಅವರು ಹೇಳುತ್ತಾರೆ.
ಆದರೆ ಮಳೆಗಾಲದಲ್ಲಿ ದರ್ರಾಂಗ್ ಜಿಲ್ಲೆಯ ಮೂವ್‌ಸಿತಾ-ಬಲಬರಿಯ ಕಾಲುವೆಗಳು ಮತ್ತು ಜೌಗು ಪ್ರದೇಶಗಳಿಗೆ ಮೀನುಗಳು ಬರುತ್ತವೆ. ಆಗ ಅವುಗಳನ್ನು ಹಿಡಿಯಲು ಈ ಬಿದಿರಿನ ಬಲೆಗಳಿಗೆ ಹೆಚ್ಚಿನ ಬೇಡಿಕೆಯಿರುತ್ತದೆ. "ನಾನು ಬಿದಿರಿನ ಮೀನು ಹಿಡಿಯುವ ಬಲೆಗಳನ್ನು ತಯಾರಿಸುವುದು ಹೇಗೆ ಎಂಬುದನ್ನು ಕಲಿತಿದ್ದೇನೆ, ಈ ಕೆಲಸ ಮಾಡಿಯಾದರೂ ನನ್ನ ಮನೆಯನ್ನು ನಾನು ನೋಡಿಕೊಳ್ಳಬಹುದು. ನಿಮಗೆ ಹಸಿವಾದಾಗ ಹೊಟ್ಟೆ ತುಂಬಿಸಿಕೊಳ್ಳಲು ಸುಲಭವಾದ ದಾರಿಯೇನಾದರೂ ಇದೆಯೇ ಎಂದು ನೀವು ಯೋಚಿಸುತ್ತೀರಿ ಅಲ್ವೇ?’ ಎನ್ನುತ್ತಾ 60ರ ಪ್ರಾಯದ ಈ ವ್ಯಕ್ತಿ ತಮ್ಮ ಯವ್ವನದ ದಿನಗಳನ್ನು ನೆನೆದು ನಗುತ್ತಾರೆ.
ಸದ್ಯ ಜಲಾಲ್ ಅವರು ಜಲಮೂಲಗಳಲ್ಲಿರುವ ಬೇರೆ ಬೇರೆ ಜಾತಿಯ ಮೀನುಗಳನ್ನು ಹಿಡಿಯಲು ಬಳಸುವ ಸೆಪ್ಪ, ಬೊಸ್ನಾ ಮತ್ತು ಬೈರ್ ಎಂದು ಕರೆಯುವ ಸ್ಥಳೀಯ ಬಿದಿರಿನ ಬಲೆಗಳನ್ನು ತಯಾರಿಸುವ ಮಾಸ್ಟರ್ ಕುಶಲಕರ್ಮಿ. ಈ ಕೆಲಸವನ್ನು ಅವರು ಅಸ್ಸಾಂನ ಮೂವ್‌ಸಿತಾ-ಬಲಬರಿ ಜೌಗುಪ್ರದೇಶದಲ್ಲಿರುವ ಪಬ್-ಪದೊಖಾಟ್ ಎಂಬ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಮಾಡುತ್ತಾರೆ.
"ಎರಡೇ ಎರಡು ದಶಕಗಳ ಹಿಂದೆ ನನ್ನ ಹಳ್ಳಿಯ ಮತ್ತು ಹತ್ತಿರದ ಹಳ್ಳಿಗಳ ಬಹುತೇಕ ಪ್ರತಿಯೊಂದು ಮನೆಯಲ್ಲಿ ಮೀನು ಹಿಡಿಯಲು [ಬಿದಿರು] ಬಲೆಯನ್ನು ಬಳಸುತ್ತಿದ್ದರು. ಒಂದೋ ಬಿದಿರಿನ ಬಲೆಗಳು ಇಲ್ಲವೇ, ಕೈಯಿಂದ ತಯಾರಿಸಿದ ಶಿವ್ ಜಾಲ್,” ಎಂದು ಜಲಾಲ್ ನೆನಪಿಸಿಕೊಳ್ಳುತ್ತಾರೆ. ಈ ಬಲೆಗಳನ್ನು ಸ್ಥಳೀಯರು ಟೊಂಗಿ ಜಾಲ್ ಅಥವಾ ಝೆಟ್ಕಾ ಜಾಲ್ ಎಂದೂ ಕರೆಯುತ್ತಾರೆ. ಇದು ಬಿದಿನ ಕೋಲುಗಳು ಅಥವಾ ಕಡ್ಡಿಗಳನ್ನು ನಾಲ್ಕು ಮೂಲೆಗಳಲ್ಲಿ ಕಟ್ಟಲಾಗಿರುವ ಚೌಕಾಕಾರದ ಒಂದು ಬಲೆ.
ಸ್ಥಳೀಯರು ಮೀನು ಹಿಡಿಯುವ ಬಿದಿರಿನ ಬಲೆಗಳಿಗೆ ಅವುಗಳ ಆಕಾರಕ್ಕೆ ಅನುಗುಣವಾಗಿ ಹೆಸರು ಕೊಟ್ಟಿದ್ದಾರೆ: “ಸೆಪ್ಪ ಎಂಬುದು ಡ್ರಮ್‌ನಂತಿರುವ ಉದ್ದನೆಯ ಬಲೆ. ಬೈರ್ ಕೂಡ ಆಯತಾಕಾರದಲ್ಲಿರುತ್ತದೆ, ಆದರೆ ಇದು ತುಂಬಾ ಎತ್ತರ ಮತ್ತು ಅಗಲವಾಗಿರುತ್ತದೆ. ದರ್ಕಿ ಒಂದು ಆಯತಾಕಾರದ ಪೆಟ್ಟಿಗೆಯಂತಿರುವ ಬಲೆ,” ಎಂದು ಅವುಗಳ ಬಗ್ಗೆ ಜಲಾಲ್ ವಿವರಿಸುತ್ತಾರೆ. ಡೂಯರ್, ಡಯಾರ್ ಮತ್ತು ಬೋಯಿಷ್ನೋ ಎಂಬ ಬಲೆಗಳನ್ನು ಹರಿಯುವ ನೀರಿನಲ್ಲಿ, ಹೆಚ್ಚಾಗಿ ನೀರಿನಿಂದ ತುಂಬಿದ ಭತ್ತ ಮತ್ತು ಸೆಣಬಿನ ಗದ್ದೆಗಳಲ್ಲಿ, ಸಣ್ಣ ಕಾಲುವೆಗಳಲ್ಲಿ, ನೀರು ಸೇರಿದ ಜಾಗಗಳಲ್ಲಿ, ಜೌಗು ಪ್ರದೇಶಗಳು ಅಥವಾ ನದಿ ಸೇರುವ ಜಾಗಗಳಲ್ಲಿ ಬಳಸಲಾಗುತ್ತದೆ.














