ಉತ್ತರ ಪ್ರದೇಶದ ಲಕ್ನೋದಲ್ಲಿದ್ದ ತನ್ನ ಬಾಡಿಗೆ ಮನೆಯ ಹಿತ್ತಲಿನಲ್ಲಿ ತನ್ನ ಮೂರು ವರ್ಷದ ಅತ್ತೆಯ ಮಗಳೊಂದಿಗೆ ಆಡುತ್ತಿದ್ದ 7 ವರ್ಷದ ಕಜ್ರಿಯನ್ನು ಯಾರೋ ಇಬ್ಬರು ಅಪಹರಿಸಿದ್ದರು.
ಇದು ನಡೆದ ಹತ್ತು ವರ್ಷಗಳ ನಂತರ, 2020ರ ಡಿಸೆಂಬರ್ ತಿಂಗಳಿನಲ್ಲಿ ಆಕೆಯ ಇನ್ನೊಬ್ಬ ಸೋದರಸಂಬಂಧಿ – ಬ್ಯಾಂಕ್ ಏಜೆಂಟ್ - ಕೆಲಸದ ಮೇಲೆ ನಗರದಲ್ಲಿರುವ ಮನೆಯೊಂದಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರಿಗೆ ಕಜ್ರಿಯಂತೆ ಕಾಣುವ ಹುಡುಗಿಯೊಬ್ಬಳು ನೆಲ ಒರೆಸುತ್ತಿರುವುದು ಕಾಣಿಸಿತು. ಅವರು ಆಗ ಆ ಹುಡುಗಿಯನ್ನು ಮಾತನಾಡಿಸಿ ಅವಳ ಅಪ್ಪನ ಹೆಸರನ್ನು ಕೇಳಲು ಪ್ರಯತ್ನಿಸಿದರು. ಆದರೆ ಓರ್ವ ಮಹಿಳೆ ಆ ಹುಡುಗಿಯ ಜೊತೆ ಮಾತನಾಡದಂತೆ ತಡೆದಳು. ಆಗ ಅಲ್ಲಿಂದ ಮನೆಗೆ ಮರಳಿದ ಕಜ್ರಿಯ ಸಂಬಂಧಿ ಹಿಂಸಾಚಾರದಿಂದ ಪೀಡಿತ ಮಹಿಳೆಯರು ಮತ್ತು ಬಾಲಕಿಯರ ಸಹಾಯಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸ್ಥಾಪಿಸಿದ ಲಕ್ನೋದ ಒನ್-ಸ್ಟಾಪ್ ಕೇಂದ್ರಕ್ಕೆ ಕರೆ ಮಾಡಿದರು. ಕೆಲವೇ ಗಂಟೆಗಳಲ್ಲಿ ಮೋಹನ್ ಲಾಲ್ ಗಂಜ್ ಪೊಲೀಸ್ ಠಾಣೆ ಮತ್ತು ಒನ್ ಸ್ಟಾಪ್‌ಗೆ ಸೇರಿದ ಪೊಲೀಸ್ ತಂಡವು ಆ ಮನೆಯ ಮೇಲೆ ದಾಳಿ ಮಾಡಿ ಕಜ್ರಿಯನ್ನು ರಕ್ಷಿಸಿ, ಅವಳನ್ನು ತನ್ನ ಕುಟುಂಬದೊಡನೆ ಸೇರಿಸಿದರು.
ಪ್ರಸ್ತುತ 21 ವರ್ಷದ ಕಜ್ರಿ ಮಾನಸಿಕ ಅಸಮರ್ಥತೆಯಿಂದ ಬಳಲುತ್ತಿದ್ದಾರೆ. ಅವರ ಬಾಯಿಯ ಮುಂಭಾಗದ ಕೆಳಗಿನ ಸಾಲಿನ ಹಲ್ಲುಗಳು ಕಾಣುತ್ತಿಲ್ಲ. ಕಳ್ಳಸಾಗಣೆ, ಲೈಂಗಿಕ ದೌರ್ಜನ್ಯ ಮತ್ತು ಬಾಲಕಾರ್ಮಿಕ ಕಿರುಕುಳಕ್ಕೆ ಬಲಿಯಾದ ಅವರಿಗೆ ಆ 10 ವರ್ಷಗಳ ಬಗ್ಗೆ ನೆನಪುಗಳು ಮಸುಕು ಮಸುಕಾಗಿ ಉಳಿದಿವೆ.











