ಸೌದೆಯ ಸಂಗ್ರಹವನ್ನು ಸಾಲಾಗಿ ಜೋಡಿಸಿಟ್ಟಿದ್ದ ಎರಡು ಪಕ್ಕಾ ಮನೆಗಳ ಧೂಳು ತುಂಬಿದ ರಸ್ತೆಗೆ ಪ್ರವೇಶಿಸುತ್ತಿದ್ದಂತೆಯೇ ನಲ್ಲಮ್ಮ, ದ್ರವರೂಪದ ಹೊಲಸು ಮಡುಗಟ್ಟಿದ ತೊರೆಯ ಆಚೆಯ ಬದಿಗೆ ಹೆಜ್ಜೆಯಿಟ್ಟರು. ನೀಲಿ ಹೂಗಳ ಶಿಫಾನ್ ಸೀರಿಯುಟ್ಟಿದ್ದ ಆಕೆ ಹೆಚ್ಚು ಬಳಕೆಯಲ್ಲಿರುವಂತೆ ಕಾಣುತ್ತಿದ್ದ ಮಾರ್ಗವೊಂದರಲ್ಲಿ ದಾರಿಮಾಡಿಕೊಳ್ಳುತ್ತ ಬರಿಗಾಲಿನಲ್ಲಿ ತೆರಳಿದರು.
ನಾವು ಈಗ ತಾನೆ ಸಾಗಿ ಬಂದ ಗುಡಿಕಲ್ ಗ್ರಾಮದ ಮನೆಗಳತ್ತ ಬೊಟ್ಟು ಮಾಡುತ್ತ, “ಪೊದೆ, ಒಣ ಹುಲ್ಲು, ಕಸದಿಂದ ತುಂಬಿದ ತೆರೆದ ಸ್ಥಳವನ್ನು ತಲುಪಿ, ಜಾಗವಿರುವ ಕಡೆ ನಾವು ಕುಳಿತುಕೊಳ್ಳುತ್ತೇವೆ (ಶೌಚಕ್ಕೆ). ನಮ್ಮ ಯಾವುದೇ ಮನೆಗಳಿಗೆ ಶೌಚಾಲಯವಿಲ್ಲ. ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರಲಿ, ಬಸಿರು ಅಥವಾ ಋತುಕಾಲವಿರಲಿ ನಾವು ಇಲ್ಲಿಗೇ ಬರಬೇಕು” ಎಂದು ಆಕೆ ನಿಶ್ಚಯಪೂರ್ವಕವಾಗಿ ಹೇಳಿದರು.
ಕೆಲವು ವರ್ಷಗಳಿಂದಲೂ, ಇಂತಿ ವೆನುಕ (ಮನೆಯ ಹಿಂಭಾಗ), ಬಯಲು ಶೌಚಕ್ಕೆಂದು ಗೊತ್ತುಪಡಿಸಿದ ಜಾಗವಾಗಿದೆ. “ನನ್ನ ಬೀದಿಯ ಪ್ರತಿಯೊಬ್ಬ ಮಹಿಳೆಯೂ ಇಲ್ಲಿಗೆ ಬರುತ್ತಾರೆ. ಬೀದಿಯ ಮತ್ತೊಂದು ಕಡೆಯಲ್ಲಿ ಪುರುಷರಿಗೆ ಇಂಥದ್ದೇ ಜಾಗವಿದೆ” ಎಂಬುದಾಗಿ ನಲ್ಲಮ್ಮ ವಿವರಿಸಿದರು.
ಕರ್ನೂಲ್ ಜಿಲ್ಲೆಯ ಎಮ್ಮಿಗನೂರು ವಲಯದ ಗುಡಿಕಲ್ ಗ್ರಾಮದ ಜನಸಂಖ್ಯೆ 11,213 (ಜನಗಣತಿ 2011). 2019ರಲ್ಲಿ ಕೇಂದ್ರ ಸರ್ಕಾರ ಮತ್ತು ನಂತರದಲ್ಲಿ ರಾಜ್ಯ ಸರ್ಕಾರದಿಂದ “ಬಯಲು ಶೌಚ – ಮುಕ್ತ”ವೆಂದು ಇದನ್ನು ಘೋಷಿಸಲಾಯಿತು. ಆದರೆ ನಲ್ಲಮ್ಮ ವಾಸಿಸುವ ಗುಡಿಕಲ್‌ನ ಮೂರನೆ ವಾರ್ಡ್, ಖಂಡಿತವಾಗಿಯೂ ಬಯಲು ಶೌಚ – ಮುಕ್ತವಲ್ಲವೆಂದು ನಿವಾಸಿಗಳು ತಿಳಿಸುತ್ತಾರೆ. ವಾಸ್ತವವಾಗಿ, ಇಲ್ಲಿನ ಎಂಟು ವಾರ್ಡ್‌ಗಳಲ್ಲಿನ ಆರು ವಾರ್ಡ್‌ಗಳಿಗೆ ಶೌಚಾಲಯವಿಲ್ಲ. (ಅಧಿಕೃತ ದತ್ತಾಂಶವು 20 ವಾರ್ಡುಗಳೆಂಬುದಾಗಿ ತಿಳಿಸುತ್ತದೆಯಾದೂ, ಸ್ಥಳೀಯ ಆಡಳಿತಾಧಿಕಾರಿ ಮತ್ತು ಆಕೆಯ ಸಹಾಯಕನನ್ನು ಒಳಗೊಂಡಂತೆ ಸ್ಥಳೀಯ ಸರ್ಕಾರಿ ನೌಕರರು ಎಂಟು ವಾರ್ಡುಗಳೆಂದು ತಿಳಿಸುತ್ತಾರೆ.)
ಸ್ಥೂಲವಾಗಿ ಹೇಳುವುದಾದರೆ, ಗುಡಿಕಲ್‌ನ 25% ಮನೆಗಳು ದಿನಗೂಲಿ ಕಾರ್ಮಿಕರದ್ದು; ಜನಸಂಖ್ಯೆಯ ಅರ್ಧದಷ್ಟು ಕೃಷಿಕರು. ಬಹುತೇಕ ರೈತರು ಮೆಣಸಿನಕಾಯಿ, ಹತ್ತಿಯಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ. ಈ ಪ್ರದೇಶದಲ್ಲಿ ಮುಂದುವರಿಯುತ್ತಿರುವ ನೀರಿನ ಸಮಸ್ಯೆಯಿಂದಾಗಿ, ಒಟ್ಟಾರೆ 1420 ಹೆಕ್ಟೇರ್ ನೀರಾವರಿ ಭೂಮಿಯು ಪ್ರಮುಖವಾಗಿ, ಮಳೆ-ಸಿಂಚಿತ(rain-fed) ಜಾಗವಾಗಿದೆ.
ಹಳೆಯ ಬನ್ನಿ ಮರವೊಂದರ ನೆರಳಿನಲ್ಲಿ ವಿಶ್ರಮಿಸುತ್ತಿದ್ದ ಕಾಡು ಹಂದಿಗಳತ್ತ ಬೊಟ್ಟು ಮಾಡುತ್ತ, “ಬಿಳಿಯ ಕೊಕ್ಕರೆ ಮತ್ತು ಹಾವುಗಳೊಂದಿಗೆ ಇವೂ ಇಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ನಾವು ಬರುವಾಗ, ಮುಂಜಾನೆ ಕಗ್ಗತ್ತಲಿರುತ್ತದೆ. ಇಲ್ಲಿಯವರೆಗೂ ಏನೂ ಆಗಿಲ್ಲವಾದರೂ ಭಯವಂತೂ ಇದೆ” ಎಂದರು ನಲ್ಲಮ್ಮ.








