“ಆಸಾರಿಗಳು ವಿಶ್ವಕರ್ಮ ಸಮುದಾಯಕ್ಕೆ ಸೇರಿದವರು. ಲೋಹ, ಕಲ್ಲು, ಮತ್ತು ಮರದಿಂದ ವಿವಿಧ ಬಗೆಯ ವಸ್ತುಗಳನ್ನು ತಯಾರಿಸುವ ಕೌಶಲ ಅವರಲ್ಲಿದೆ. ಅವರು ಈಗೀಗ ತಮ್ಮ ಸೃಜನಶೀಲ ಅನ್ವೇಷಣಾ ಪ್ರವೃತ್ತಿಯನ್ನು ತೊರೆದು ಜಾತಿ ಆಧಾರಿತ ಕೆಲಸಕ್ಕೆ ಸೀಮಿತರಾಗಿ ಉಳಿದಿದ್ದಾರೆ. ಈಗಿನ ಯುವ ಪೀಳಿಗೆ ವೈಟ್ ಕಾಲರ್ ಕೆಲಸಗಳತ್ತ ಹೋಗುತ್ತಿದೆ ಎಂದು ಟಿ.ಎಂ. ಕೃಷ್ಣ ತಮ್ಮ ಪುಸ್ತಕ ಸೆಬಾಸ್ಟಿಯನ್ ಅಂಡ್ ಸನ್ಸ್ ಪುಸ್ತಕದಲ್ಲಿ ಬರೆದಿದ್ದಾರೆ.
“ನಾವು ಅನುವಂಶಿಕ, ಜಾತಿ-ಸಂಬಂಧಿತ ಉದ್ಯೋಗಗಳ ಕುರಿತು ಮಾತನಾಡುವಾಗ ಅದನ್ನು ಜ್ಞಾನ ಸೃಷ್ಟಿಯಲ್ಲಿ ಅಂತರ-ಪೀಳಿಗೆಯ ನಿರಂತರತೆ ಎಂದು ರೊಮ್ಯಾಂಟಿಸೈಸ್ ಮಾಡದೆ ನೋಡಬೇಕಾಗುತ್ತದೆ. ಯಾಕೆಂದರೆ ಏಕೆಂದರೆ ನಮ್ಮ ಸಾಮಾಜಿಕ ಏಣಿ-ಶ್ರೇಣಿಯಲ್ಲಿ ಎಲ್ಲಾ ಬಗೆಯ ಜನರು ಮತ್ತು ಉದ್ಯೋಗಗಳನ್ನು ಸಮಾನವಾಗಿ ನೋಡಲಾಗುವುದಿಲ್ಲವೆನ್ನುವುದನ್ನು ನಾನು ನೆನಪಿನಲ್ಲಿಟ್ಟುಕೊಳ್ಳಬೇಕು” ಎಂದು ಕೃಷ್ಣ ಒತ್ತಿ ಹೇಳುತ್ತಾರೆ. "ಜಾತಿ-ಸವಲತ್ತು ಪಡೆದ ಕುಟುಂಬಗಳ ಪಾರಂಪರಿಕ ಕೆಲಸವನ್ನು ಜ್ಞಾನವೆಂದು ಪರಿಗಣಿಸಲಾಗುತ್ತದೆ ಮತ್ತು ಸಂರಕ್ಷಣೆಯಂತಹ ವಿಷಯದಲ್ಲಿ ಜಾತಿ-ಸೀಮಿತ ಹಂಚಿಕೆಯ ಶಾಶ್ವತತೆಯನ್ನು ಪರಿಗಣಿಸಲಾಗುತ್ತದೆ. ಮತ್ತು ಅದನ್ನು ಅಭ್ಯಾಸ ಮಾಡುವವರು ಯಾವುದೇ ರೀತಿಯ ದಬ್ಬಾಳಿಕೆಯನ್ನು ಅನುಭವಿಸುವುದಿಲ್ಲ. ಆದರೆ ತುಳಿತಕ್ಕೊಳಗಾದ ಅಥವಾ ಅಂಚಿನಲ್ಲಿರುವ ಸಮುದಾಯಗಳಲ್ಲಿ ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯುವ ಉದ್ಯೋಗಗಳು ಮತ್ತು ಕೆಲಸದ ರೂಪಗಳನ್ನು ಜ್ಞಾನವೆಂದು ಪರಿಗಣಿಸಲಾಗುವುದಿಲ್ಲ. ಜನರನ್ನು ಜ್ಞಾನ ಸೃಷ್ಟಿಕರ್ತರು ಎಂದು ಪರಿಗಣಿಸಲಾಗುವುದಿಲ್ಲ. ಅವರನ್ನು ಕೀಳಾಗಿ ನೋಡಲಾಗುತ್ತದೆ, ಕಡೆಗಣಿಸಲಾಗುತ್ತದೆ ಮತ್ತು ಅವರ ಕೆಲಸವನ್ನು ದೈಹಿಕ ಶ್ರಮ ಎಂದು ವರ್ಗೀಕರಿಸಲಾಗುತ್ತದೆ. ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ಈ ಉದ್ಯೋಗಗಳನ್ನು ಅಭ್ಯಾಸ ಮಾಡುವವರು ಜಾತಿ ಆಧಾರಿತ ದಬ್ಬಾಳಿಕೆ ಮತ್ತು ಹಿಂಸಾಚಾರವನ್ನು ಅನುಭವಿಸುತ್ತಾರೆ. ಅನೇಕ ಸಂದರ್ಭಗಳಲ್ಲಿ ಸಾಮಾಜಿಕ ಪರಿಸ್ಥಿತಿಗಳಿಂದಾಗಿ ಅವರಿಗೆ ಕುಟುಂಬ-ಜಾತಿ-ಗೊತ್ತುಪಡಿಸಿದ ಕೆಲಸವನ್ನು ತೆಗೆದುಕೊಳ್ಳುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲ."
"ಈ ದೇಶದ ಎಲ್ಲಾ ವಾದ್ಯ ತಯಾರಕರ ಬಗ್ಗೆಯೂ ತಾಂತ್ರಿಕ ಪರಿಭಾಷೆಯಲ್ಲಿ ಮಾತನಾಡಲಾಗುತ್ತದೆ" ಎಂದು ಕೃಷ್ಣ ಹೇಳುತ್ತಾರೆ. "ಅವರನ್ನು ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುವ ಮೇಸ್ತ್ರಿ (ಬಡಗಿ) ಯಂತೆ ನೋಡಿದರೆ ಅದನ್ನು ನುಡಿಸುವವರನ್ನು ವಾಸ್ತುಶಿಲ್ಪಿಯಂತೆ ನೋಡಲಾಗುತ್ತದೆ. ಅವರಿಗೆ ಸಲ್ಲಬೇಕಾದ ಖ್ಯಾತಿಯನ್ನು ನೀಡಲು ನಿರಾಕರಿಸಿರುವುದರ – ಅಥವಾ ಚೂರು ಪಾರು ನೀಡಿರುವುದರ – ಹಿಂದೆ ಜಾತಿ ರಾಜಕಾರಣವಿದೆ.”
ಮೃದಂಗ ತಯಾರಿಕೆ ಬಹುತೇಕ ಪುರುಷ ಪ್ರಾಬಲ್ಯವನ್ನು ಹೊಂದಿಯೆಂದು ಕುಪ್ಪುಸ್ವಾಮಿ ಹೇಳುತ್ತಾರೆ. “ಚರ್ಮದ ಕೆಲಸದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿದ್ದಾರೆ. ಆದರೆ ಮರದ ಕೆಲಸವನ್ನು ಗಂಡಸರಷ್ಟೇ ಮಾಡುತ್ತಾರೆ. ಸಾಮಾನ್ಯವಾಗಿ ಉಪಕರಣಗಳಿಗೆಂದು ಕಾಯಿ ಬಿಡುವುದನ್ನು ನಿಲ್ಲಿಸಿರುವ ಮರಗಳನ್ನು ಕಡಿಯಲಾಗುತ್ತದೆ. “ಬೆಳೆಗಾರರು ಅನುತ್ಪಾದಕ ಮರವನ್ನು ಕಡಿಯುತ್ತಾರೆ” ಎನ್ನುತ್ತಾರೆ ಕುಪ್ಪುಸ್ವಾಮಿ. “ಹತ್ತು ಮರ ಕಡಿದರೆ ಅದಕ್ಕೆ ಬದಲಾಗಿ ಅವರು 30 ಸಸಿಗಳನ್ನು ನೆಡುತ್ತಾರೆ.”
ಕುಪ್ಪುಸ್ವಾಮಿ ಮರದ ಆಯ್ಕೆಯಲ್ಲಿ ಒಂದಷ್ಟು ಮಾನದಂಡಗಳನ್ನು ಹೊಂದಿದ್ದಾರೆ. ಅವರಿಗೆ ಸುಮಾರು 9 ಅಥವಾ 10 ಅಡಿ ಎತ್ತರವಿರುವ, ಸಾಕಷ್ಟು ಅಗಲ ಮತ್ತು ಬಲವಾದ ಮರಗಳು ಬೇಕು ಮತ್ತು ಅದು ಬೇಲಿಯ ಬಳಿ ಅಥವಾ ರಸ್ತೆಯ ಪಕ್ಕದಲ್ಲಿ ಬೆಳೆದಿರಬೇಕು. ಸಾಮಾನ್ಯವಾಗಿ ಅವರು ಮರದ ಬುಡದ ಭಾಗವನ್ನು ತೆಗೆದುಕೊಳ್ಳುತ್ತಾರೆ. ಅದರ ಗಾಢ ಬಣ್ಣ ಉತ್ತಮ ಅನುರಣನವನ್ನು ಹೊಂದಿರುತ್ತದೆ ಎನ್ನುವುದು ಅವರ ಅನುಭವದ ಮಾತು.
ಒಂದೇ ದಿನದಲ್ಲಿ ಅವರು ಸುಮಾರು ಆರು ಮೃದಂಗಗಳಿಗಾಗುವಷ್ಟು ಮರವನ್ನು ಕತ್ತರಿಸಿ ಸೈಜ್ ಮಾಡಬಲ್ಲರು. ಆದರೆ ಫಿನಿಶಿಂಗ್ ಕೆಲಸಕ್ಕೆ ಇನ್ನೂ ಎರಡು ದಿನ ಬೇಕಾಗುತ್ತದೆ. ಇಷ್ಟೆಲ್ಲ ಶ್ರಮ ಬೇಡುವ ಈ ಮೃದಂಗದ ಮಾರಾಟದಿಂದ ಬರುವ ಲಾಭ ಅತ್ಯಲ್ಪ – ಒಂದು ಮೃದಂಗ ಮೇಲೆ 1,000 ರೂಪಾಯಿ ಸಿಕ್ಕರೆ ನಮಗೆ ಅದೇ ದೊಡ್ಡದು ಎಂದು ಅವರು ಹೇಳುತ್ತಾರೆ. ಕೆಲಸಗಾರರಿಗೆ 1,000 ರೂಪಾಯಿ ಪಾವತಿಸಬೇಕು. ಇದು ಬಹಳ ಕಷ್ಟದ ಕೆಲಸ, ಅಷ್ಟು ಕೊಡದಿದ್ದರೆ ಅವರು ಬರುವುದಿಲ್ಲ.”
ಮರದ ಲಭ್ಯತೆ ವರ್ಷವಿಡೀ ಇರುವುದಿಲ್ಲ. ಹಣ್ಣು ಬಿಡುವ ಮರಗಳನ್ನು ಯಾರೂ ಮರವನ್ನು ಕಡಿಯುವುದಿಲ್ಲ ಎಂದು ಅವರು ಒತ್ತಿ ಹೇಳುತ್ತಾರೆ. “ಹೀಗಾಗಿ ಯಾವಾಗಲೂ ಮರವನ್ನು ಸಂಗ್ರಹಿಸಿ ಇಟ್ಟುಕೊಂಡಿರಬೇಕು.” ತಲಾ 25,000 ರೂಪಾಯಿಗಳ ಬೆಲೆಯ 20 ದಿಮ್ಮಿಗಳನ್ನು ಖರೀದಿಸಲು ಅವರು ಐದು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡುತ್ತಾರೆ. ಮತ್ತು ಈ ವಿಷಯದಲ್ಲಿ ಅವರು ಸರ್ಕಾರದ ನೆರವನ್ನು ಬಯಸುತ್ತಾರೆ. “ಸರ್ಕಾರವು ಮರವನ್ನು ಖರೀದಿಸಲು ನಮಗೆ ಸಬ್ಸಿಡಿ ಅಥವಾ ಸಾಲವನ್ನು ನೀಡಿದರೆ... ತುಂಬಾ ಒಳ್ಳೆಯದು!"
ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಂದ ಮೃದಂಗಗಳಿಗೆ ಬೇಡಿಕೆ ಉತ್ತಮವಾಗಿದೆ ಎಂದು ಕುಪ್ಪುಸಾಮಿ ಹೇಳುತ್ತಾರೆ. "ಒಂದು ತಿಂಗಳಲ್ಲಿ, ನಾನು 50 ಮೃದಂಗಗಳು ಮತ್ತು 25 ತವಿಲ್‌ಗಳನ್ನು ಮಾರಾಟ ಮಾಡುತ್ತೇನೆ." ಸರಿಯಾದ ಮರವನ್ನು ಹುಡುಕುವುದು ಮತ್ತು ಅದನ್ನು ಸುಮಾರು ನಾಲ್ಕು ತಿಂಗಳ ಕಾಲ ಒಣಗಿಸುವುದು ಕಷ್ಟದ ಕೆಲಸ. ಪನ್ರುಟ್ಟಿಯ ಹಲಸಿನ ಮರ “ಉತ್ತಮ ಗುಣಮಟ್ಟ ಹೊಂದಿವೆಯಾದ್ದರಿಂದ ಅವುಗಳಿಗೆ ಬಹಳ ಬೇಡಿಕೆಯಿದೆ” ಎನ್ನುತ್ತಾರೆ ಕುಪ್ಪುಸ್ವಾಮಿ. ಅದು ಕೆಂಪು ಮಣ್ಣಿನಲ್ಲಿ ಬೆಳೆಯುತ್ತದೆಯಾದ್ದರಿಂದ ಉತ್ತಮ ನಾದವನ್ನು ಹೊಮ್ಮಿಸುತ್ತದೆ ಎನ್ನುವುದು ಅವರ ಅಭಿಪ್ರಾಯ.