“ಮೊದಲ ಸಲ ಹಂಗುಲ್ ನೋಡಿದ ಸಂದರ್ಭದಲ್ಲಿ ಒಂದು ಕ್ಷಣ ಅದರತ್ತ ಎಷ್ಟು ಆಕರ್ಷಿತನಾಗಿದ್ದೆ ಎಂದರೆ ನನಗೆ ಸ್ವಲ್ಪ ಹೊತ್ತು ಮುಂದಕ್ಕೆ ಹೋಗಲು ಸಾಧ್ಯವಾಗಲೇ ಇಲ್ಲ” ಎಂದು ನೆನಪಿಸಿಕೊಳ್ಳುತ್ತಾರೆ ಶಬೀರ್ ಹುಸೇನ್ ಭಟ್. ಅದರ ಇನ್ನೊಂದು ನೋಟಕ್ಕಾಗಿ ಅವರು ಆ ಸ್ಥಳಕ್ಕೆ ಮತ್ತೆ ಮತ್ತೆ ಹೋಗುತ್ತಲೇ ಇದ್ದರು. ಈ ಜಿಂಕೆ (ಸೆರ್ವಸ್ ಎಲಾಫಸ್ ಹಂಗ್ಲು/ Cervus elaphus hanglu) ಜಾತಿಯ ಪ್ರಾಣಿ ಕಾಶ್ಮೀರಕ್ಕೆ ಸ್ಥಳೀಯವಾಗಿದ್ದು ಪ್ರಸ್ತುತ ತೀವ್ರ ಅಳಿವಿನಂಚಿನಲ್ಲಿದೆ.
ಈಗ ಸುಮಾರು 20 ವರ್ಷಗಳ ನಂತರವೂ 41 ಚದರ ಕಿಲೋಮೀಟರ್ ವಿಸ್ತೀರ್ಣದ ಈ ಉದ್ಯಾನದಲ್ಲಿನ ಪ್ರಾಣಿ, ಪಕ್ಷಿ, ಮರ ಮತ್ತು ಹೂವುಗಳ ಮೇಲಿನ ಮೋಹ ಕಡಿಮೆಯಾಗಿಲ್ಲ ಎನ್ನುತ್ತಾರೆ ಶಬೀರ್. "ನನ್ನೊಳಗೆ ಕಿಡಿಯನ್ನು ಹೊತ್ತಿಸಿದ್ದು ಹಂಗುಲ್ ಮತ್ತು ಹಿಮಾಲಯನ್ ಬ್ಲ್ಯಾಕ್ ಕರಡಿ ನನ್ನ ದೃಢ ಅಭಿಪ್ರಾಯ."
ಈ ಅಭಯಾರಣ್ಯದಲ್ಲಿ, ಅವರನ್ನು ಪ್ರೀತಿಯಿಂದ 'ದಶಿಗಾಮ್ ವಿಶ್ವಕೋಶ' ಎಂದು ಕರೆಯಲಾಗುತ್ತದೆ. "ನಾನು ಇಲ್ಲಿಯವರೆಗೆ ಈ ಪ್ರದೇಶದಲ್ಲಿ 400 ಜಾತಿಯ ಸಸ್ಯಗಳು, 200ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು ಮತ್ತು ಬಹುತೇಕ ಎಲ್ಲಾ ಪ್ರಾಣಿ ಪ್ರಭೇದಗಳನ್ನು ಗುರುತಿಸಿದ್ದೇನೆ" ಎಂದು ಅವರು ಹೇಳುತ್ತಾರೆ. ಈ ಅಭಯಾರಣ್ಯದಲ್ಲಿ ಕಂಡುಬರುವ ಇತರ ಕಾಡು ಪ್ರಾಣಿಗಳೆಂದರೆ: ಕಸ್ತೂರಿ ಜಿಂಕೆ, ಹಿಮಾಲಯನ್ ಕಂದು ಕರಡಿ, ಹಿಮ ಚಿರತೆ ಮತ್ತು ಗೋಲ್ಡನ್ ಈಗಲ್.
















