ಕೆಲವು ತಿಂಗಳ ಹಿಂದೆ, ಮೋಹನ್ ಚಂದ್ರ ಜೋಶಿಯವರ ಸಹೋದರನು ಭಾರತೀಯ ಸೇನೆಗೆ ಆಯ್ಕೆಯಾದಾಗ, ತಕ್ಷಣವೇ ಅವರು, ಅಲ್ಮೋರಾ ಅಂಚೆ ಕಛೇರಿಯಲ್ಲಿನ ಪರಿಚಯಸ್ಥರೊಬ್ಬರಿಗೆ ನೇಮಕಾತಿಯ ಪತ್ರವನ್ನು “ನಮ್ಮ ಮನೆಗೆ ಕಳುಹಿಸದೆ,” ಹಾಗೆಯೇ ಇಟ್ಟುಕೊಳ್ಳಬೇಕೆಂದು ತಿಳಿಸಿದ್ದರು. ಮೋಹನ್ ಚಂದ್ರ ಅವರು ತಮ್ಮ ಸಹೋದರನು ಸೇನೆಗೆ ಸೇರುವುದನ್ನು ತಡೆಯಲು ಪ್ರಯತ್ನಿಸುತ್ತಿರಲಿಲ್ಲ. ಅಂಚೆಯು ತಡವಾಗಿ ತಲುಪಬಹುದು ಅಥವಾ ತಲುಪದೇ ಇರಬಹುದೆಂದು ಚಿಂತಿತರಾಗಿದ್ದರಷ್ಟೇ. ಉತ್ತರಾಖಂಡ್ನ ಪಿತೋರಾಗಢ್ನಲ್ಲಿನ ಭನೋಲಿ ಗುಂಠ್ ಗ್ರಾಮಸ್ಥರಿಗೆ ಇದು ಸರ್ವೇಸಾಮಾನ್ಯ. ಅವರ ಸಮೀಪದ ಅಂಚೆ ಕಛೇರಿಯು ಮತ್ತೊಂದು ಜಿಲ್ಲೆಯಲ್ಲಿದೆ.
ಮೋಹನ್ ಚಂದ್ರ, “ಸಂದರ್ಶನದ ಪತ್ರವು ಅತ್ಯಂತ ತಡವಾಗಿ ತಲುಪಿದ ಕಾರಣ ಅನೇಕ ಜನರು ನೌಕರಿಯನ್ನು ಕಳೆದುಕೊಂಡಿದ್ದಾರೆ. ಆಗಾಗ್ಗೆ ಅಂಚೆಯವನು ಸಂದರ್ಶನದ ದಿನಾಂಕವು ಮುಗಿದ ನಂತರದ ದಿನಗಳಲ್ಲಿ ಟಪಾಲನ್ನು ತಲುಪಿಸುತ್ತಾನೆ. ಉದ್ಯೋಗಗಳಿಲ್ಲದ ದೂರದಲ್ಲೆಲ್ಲೋ ಇರುವ ಇಂತಹ ಸ್ಥಳಗಳಲ್ಲಿ ಅಂತಹ ಪತ್ರವನ್ನು ಅದೂ ಸರ್ಕಾರಿ ನೇಮಕಾತಿಯ ಪತ್ರವನ್ನು ಕಳೆದುಕೊಳ್ಳಲು ಯಾರಿಗೆ ತಾನೇ ಸಾಧ್ಯ? ಎಂದು ಕೇಳಿದರು. ಬಹುತೇಕ ಮಾತುಗಳನ್ನು ಅವರ ಕಣ್ಣುಗಳೇ ಹೇಳುತ್ತಿದ್ದವು.
ಪತ್ರವನ್ನು ಖುದ್ದಾಗಿ ಪಡೆಯಲು ಮೋಹನ್, ೭೦ ಕಿ.ಮೀ. ದೂರದ ಅಲ್ಮೋರಾದ ಜನರಲ್ ಪೋಸ್ಟ್ ಆಫೀಸ್ಗೆ ತೆರಳಿದರು. ಹೌದು, “ಅಂಚೆ ಕಚೇರಿಯಿಂದ ನಾವು ಅವನ್ನು ತೆಗೆದುಕೊಳ್ಳಬಾರದೆಂದು ನನಗೆ ಗೊತ್ತು. ಅಂಚೆಯವನು ನಮ್ಮ ಮನೆಗೆ ಅವನ್ನು ತಲುಪಿಸಬೇಕು. ಆದರೆ ನಮಗೆ ಇಂತಹ ಸವಲತ್ತಿನ ಅವಕಾಶವಿಲ್ಲ. ನಾವೇ ಪತ್ರಗಳನ್ನು ಪಡೆದುಕೊಳ್ಳದಿದ್ದಲ್ಲಿ, ಅವನ್ನು ಪಡೆಯಲು ಒಂದು ತಿಂಗಳಾದರೂ ಆಗಬಹುದು (ಅವು ತಲುಪಿದ್ದೇ ಆದರೆ). ಅಷ್ಟರಲ್ಲಿ, ನನ್ನ ಸಹೋದರನು ಉದ್ಯೋಗಕ್ಕೆ ಸೇರುವ ಸಮಯವು ಮುಗಿದಿರುತ್ತದೆ” ಎಂದರವರು.
ಉತ್ತರಾಖಂಡದ ಪಿತೋರಾಗಡ್ ಜಿಲ್ಲೆಯ ಭನೋಲಿ ಸೆರ ಗುಂಠ್ನಲ್ಲಿನ (ಭನೋಲಿ ಸೆರ ಎಂದೂ ಇದನ್ನು ಕರೆಯಲಾಗುತ್ತದೆ.) ಚಹಾದ ಅಂಗಡಿಯಲ್ಲಿ ಮೋಹನ್ ಚಂದ್ರ ಮತ್ತು ಇತರೆ ಕೆಲವರು ನಮ್ಮೊಂದಿಗೆ ಮಾತನಾಡುತ್ತಿದ್ದರು. ಇತರೆ ಐದು ಗ್ರಾಮಗಳ ಅಂಚೆಯ ಸ್ಥಿತಿಯು ಇದೇ ರೀತಿಯಿದೆ – ಪತ್ರಗಳು ತಡವಾಗಿ ತಲುಪುತ್ತವೆ ಅಥವಾ ತಲುಪುವುದೇ ಇಲ್ಲ. ಈ ಗ್ರಾಮಗಳೆಂದರೆ, ಸೆರ (ಉರುಫ್) ಬಡೋಲಿ, ಸರ್ತೋಲ, ಚೌನಾ ಪಾಟಲ್, ನೈಲಿ ಹಾಗೂ ಇದೇ ರೀತಿ ಧ್ವನಿಸುವ ಆದರೆ ಬೇರೆಯದೇ ಆದ ಬಡೋಲಿ ಸೆರ ಗುಂಠ್.








