"ಕೋಲ್ಕತ್ತಾ, ಜೈಪುರ, ದೆಹಲಿ ಅಥವಾ ಬಾಂಬೆ, ಇಲ್ಲಿಗೆಲ್ಲಾ ಬಿದಿರಿನಿಂದ ತಯಾರಿಸಿದ ಪೊಲೊ ಚೆಂಡುಗಳು ನೇರವಾಗಿ ದಿಯೋಲ್‌ಪುರಿಂದ ಹೋಗುತ್ತವೆ," ಎಂದು ಭಾರತದಲ್ಲಿ ಪೋಲೋ ಆಟವನ್ನು ಆಡುವ ಸ್ಥಳಗಳನ್ನು ಹೆಸರಿಸುತ್ತಾ ರಂಜಿತ್ ಮಾಲ್ ಹೇಳುತ್ತಾರೆ.
ಪಶ್ಚಿಮ ಬಂಗಾಳದ ದಿಯೋಲ್‌ಪುರ್ ಪಟ್ಟಣದ ಪೋಲೋ ಬಾಲ್ ತಯಾರಕ 71 ವರ್ಷ ಪ್ರಾಯದ ರಂಜಿತ್ ಸುಮಾರು 40 ವರ್ಷಗಳಿಂದ ಗಾಡುವಾ ಬಿದಿರಿನ ಕಾಂಡಗಳಿಂದ ಚೆಂಡುಗಳನ್ನು ತಯಾರಿಸುತ್ತಿದ್ದಾರೆ. ಬಿದಿರು ಹಿಂಡು ಹಿಂಡಾಗಿ ಹರಡುತ್ತಾ ಬೆಳೆಯಲು ನೆರವಾಗುವ, ಮಣ್ಣಿನ ಅಡಿಯಲ್ಲಿರುವ ಈ ಬೇರಿನ ಕಾಂಡಗಳನ್ನು ಸ್ಥಳೀಯರು ಬಾನ್‌ಷೇರ್ ಗೋರ್ಹಾ ಎಂದು ಕರೆಯುತ್ತಾರೆ. ಚರಿತ್ರೆಯ ಪುಟಗಳನ್ನು ಸೇರಿರುವ ಈ ಚೆಂಡುಗಳನ್ನು ತಯಾರಿಸುವ ರಂಜಿತ್, ಸದ್ಯ ಉಳಿದಿರುವ ಏಕೈಕ ಶಿಲ್ಪಕಾರ (ಕುಶಲಕರ್ಮಿ).
160 ವರ್ಷಗಳಿಂದ ಮಾಡರ್ನ್ ಪೋಲೋ ಆಟವನ್ನು ಆಡಲಾಗುತ್ತಿದೆ. ಮೊದಮೊದಲು ಮಿಲಿಟರಿಯವರು, ರಾಜಮನೆತನದವರು ಮತ್ತು ದೊಡ್ಡ ದೊಡ್ಡ ಕ್ಲಬ್‌ಗಳಲ್ಲಿ ಸಿರಿವಂತರು ಆಡುತ್ತಿದ್ದರು. ಇಲ್ಲಿಗೆಲ್ಲಾ ಬಿದಿರಿನ ಚೆಂಡುಗಳನ್ನು ದಿಯೋಲ್‌ಪುರ್‌ನಿಂದ ತರಿಸಲಾಗುತ್ತಿತ್ತು. ಜಗತ್ತಿನ ಮೊದಲ ಪೋಲೋ ಕ್ಲಬ್ 1859 ರಲ್ಲಿ ಅಸ್ಸಾಂನ ಸಿಲ್ಚಾರ್‌ನಲ್ಲಿ ಸ್ಥಾಪಿಸಲಾಗಿತ್ತು. ಇದರ ನಂತರ, 1863ರಲ್ಲಿ ಕಲ್ಕತ್ತಾದಲ್ಲಿ ಎರಡನೇ ಪೋಲೋ ಕ್ಲಬ್ ಹುಟ್ಟಿಕೊಂಡಿತು. ಈ ಮಾಡರ್ನ್ ಪೋಲೋ ಆಟದ ಮೂಲ ಸಾಗೋಲ್ ಕಾಂಗ್ಜೆ ಎಂಬ ಮಣಿಪುರದ ಮೈತೇಯಿ ಸಮುದಾಯದ ಸಾಂಪ್ರದಾಯಿಕ ಆಟದಲ್ಲಿದೆ. ಮೈತೇಯಿಗಳು ಬಿದಿರಿನ ಕಾಂಡದಿಂದ ತಯಾರಿಸಿದ ಚೆಂಡುಗಳನ್ನು ಬಳಸಿ ಆಡುತ್ತಿದ್ದರು.
1940ರ ದಶಕದ ಆರಂಭದಲ್ಲಿ, ದಿಯೋಲ್‌ಪುರ್ ಗ್ರಾಮದಲ್ಲಿ ಆರರಿಂದ ಏಳು ಕುಟುಂಬಗಳು 125ಕ್ಕೂ ಹೆಚ್ಚು ಕುಶಲಕರ್ಮಿಗಳಿಗೆ ಕೆಲಸ ನೀಡಿ, ವರ್ಷಕ್ಕೆ ಸರಿಸುಮಾರು ಒಂದು ಲಕ್ಷ ಪೋಲೋ ಬಾಲ್‌ಗಳನ್ನು ತಯಾರಿಸುತ್ತಿದ್ದವು. "ನಮ್ಮ ನುರಿತ ಶಿಲ್ಪಕಾರರಿಗೆ ಪೋಲೋ ಮಾರ್ಕೆಟ್ ಬಗ್ಗೆ ತಿಳಿದಿತ್ತು," ಎಂದು ರಂಜಿತ್ ಹೇಳುತ್ತಾರೆ. ಇವರ ಅಭಿಪ್ರಾಯಕ್ಕೆ ಪೂರಕವಾಗಿ ಬ್ರಿಟಿಷರ ಕಾಲದ ಹೌರಾ ಜಿಲ್ಲೆಯ ಸಮೀಕ್ಷೆ ಮತ್ತು ವಸಾಹತುಶಾಹಿ ವರದಿಗಳೂ ಇದನ್ನು ಹೇಳುತ್ತವೆ: "ಭಾರತದಲ್ಲಿ ಪೋಲೋ ಬಾಲ್‌ಗಳನ್ನು ತಯಾರಿಸುವ ಏಕೈಕ ಸ್ಥಳ ದಿಯೋಲ್‌ಪುರ್."
ರಂಜಿತ್ ಅವರ ಪತ್ನಿ ಮಿನೋತಿ ಮಾಲ್, " ಬೆಳೆಯುತ್ತಿರುವ ಪೋಲೋ ಬಾಲ್ ವ್ಯಾಪಾರವನ್ನು ನೋಡಿ, ನನ್ನ ಅಪ್ಪ ಕೇವಲ 14 ವರ್ಷ ಪ್ರಾಯದಲ್ಲಿಯೇ ಇಲ್ಲಿಗೆ ನನ್ನನ್ನು ಮದುವೆ ಮಾಡಿ ಕೊಟ್ಟರು," ಎಂದು ಹೇಳುತ್ತಾರೆ. ಅರವತ್ತರ ಹರೆಯದಲ್ಲಿರುವ ಇವರು ಒಂದು ದಶಕದ ಹಿಂದಿನವರೆಗೂ ತಮ್ಮ ಪತಿಗೆ ಕೆಲಸದಲ್ಲಿ ನೆರವಾಗುತ್ತಿದ್ದರು. ಇವರ ಕುಟುಂಬ ಪಶ್ಚಿಮ ಬಂಗಾಳದಲ್ಲಿ ಪರಿಶಿಷ್ಟ ಜಾತಿ ಎಂದು ಪರಿಗಣಿಸಲಾಗಿರುವ ಮಾಲ್ ಸಮುದಾಯಕ್ಕೆ ಸೇರಿದೆ. ರಂಜಿತ್ ತನ್ನ ಇಡೀ ಜೀವನವನ್ನು ದಿಯೋಲ್‌ಪುರ್‌ನಲ್ಲಿ ಕಳೆದಿದ್ದಾರೆ.
ಮನೆಯಲ್ಲಿ ಮದುರ್ ಹುಲ್ಲಿನ ಚಾಪೆಯ ಮೇಲೆ ಕುಳಿತುಕೊಂಡು, ತಾವು ಸಂಗ್ರಹಿಸಿದ ಹಳೆಯ ದಿನಪತ್ರಿಕೆ ಕಟ್ಟಿಂಗ್‌ಗಳು ಮತ್ತು ನಿಯತಕಾಲಿಕದ ಲೇಖನಗಳ ಮೇಲೆ ರಂಜಿತ್ ಕಣ್ಣುಹಾಯಿಸುತ್ತಿದ್ದರು. "ಈ ಜಗತ್ತಿನಲ್ಲಿ ಎಲ್ಲಿಯಾದರೂ ಲುಂಗಿಯಲ್ಲಿ ಪೋಲೋ ಬಾಲ್ ತಯಾರಿಸುವ ಮನುಷ್ಯನ ಫೋಟೋವನ್ನು ನೀವು ನೋಡಿದ್ದರೆ, ಅದು ನನ್ನದೇ" ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.














