ಒಂದು ಉತ್ತಮವಾಗಿ ನೇಯಲ್ಪಟ್ಟ ಕಮಲ್‌ಕೊಶ್ ಚಾಪೆಯನ್ನು ಎಲ್ಲೋ ಕೆಲವರಷ್ಟೇ ಗುರುತಿಸಿ ಹೊಗಳಬಲ್ಲರು.
ಮತ್ತೆ ಅದನ್ನು ನೇಯಲು ಕೆಲವೇ ಕೆಲವರಿಗಷ್ಟೇ ಸಾಧ್ಯ.
ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ತಯಾರಿಸಲಾಗುವ ಈ ವಿವರಪೂರ್ಣ ಬೆತ್ತದ ಚಾಪೆಗಳನ್ನು ಗಂಜಿ ಹಾಕಿದ ಬೆತ್ತದ ಎಳೆ ಬಳಸಿ ನೇಯಲಾಗುತ್ತದೆ. ಈ ಚಾಪೆಗಳ ಮೇಲಿನ ಸಾಂಸ್ಕೃತಿಕ ಲಕ್ಷಣಗಳು ಈ ಚಾಪೆಯನ್ನು ಇತರ ಚಾಪೆಗಳಿಂಗಿಂತಲೂ ಭಿನ್ನವೆನ್ನಿಸುವಂತೆ ಮಾಡುತ್ತವೆ.
"ಸಾಂಪ್ರದಾಯಿಕ ಕಮಲಕೊಶ್ ಅನ್ನು ಕೋಲಾ ಗಾಚ್ [ಬಾಳೆ ಗಿಡ], ಮಯೂರ್ [ನವಿಲು], ಮಂಗಲ್ ಘಾಟ್ [ತೆಂಗಿನಕಾಯಿ ಹೊಂದಿರುವ ಕಲಶ], ಸ್ವಸ್ತಿಕ್ [ಯೋಗಕ್ಷೇಮದ ಸಂಕೇತ] ನಂತಹ ಮಂಗಳಕರ ಅಂಶಗಳಿಂದ ಅಲಂಕರಿಸಲಾಗುತ್ತದೆ" ಎಂದು ಪ್ರಭತಿ ಧರ್ ಹೇಳುತ್ತಾರೆ.
ಇವುಗಳನ್ನು ಚಾಪೆಯ ಮೇಲೆ ಮೂಡಿಸಬಲ್ಲ ಬೆರಳೆಣಿಕೆಯಷ್ಟು ಕಮಲಕೊಶ್ ನೇಕಾರರಲ್ಲಿ ಪ್ರಭತಿ ಕೂಡ ಒಬ್ಬರು, ಮತ್ತು ಅವರು ತನಗೆ 10 ವರ್ಷವಿರುವಾಗ ಈ ನೇಯ್ಗೆಯನ್ನು ಆರಂಭಿಸಿದರು. "ಈ ಹಳ್ಳಿಯ [ಘೇಗಿರ್‌ಘಾಟ್ ಗ್ರಾಮ] ಪ್ರತಿಯೊಬ್ಬರೂ ಚಿಕ್ಕ ವಯಸ್ಸಿನಿಂದಲೇ ಚಾಪೆ ನೇಯಲು ಆರಂಭಿಸುತ್ತಾರೆ" ಎಂದು 36 ವರ್ಷದ ಅವರು ಹೇಳುತ್ತಾರೆ. "ನನ್ನ ತಾಯಿ ಕಮಲಕೊಶ್ವನ್ನು ಭಾಗಶಃ ಮಾತ್ರ ನೇಯಬಲ್ಲರು, ಆದರೆ ತಂದೆಯವರಿಗೆ ವಿನ್ಯಾಸದ ಕುರಿತು ಉತ್ತಮ ಗ್ರಹಿಕೆಯಿತ್ತು ಮತ್ತು 'ಈ ವಿನ್ಯಾಸವನ್ನು ಈ ರೀತಿ ನೇಯ್ಗೆ ಮಾಡಲು ಪ್ರಯತ್ನಿಸಿ' ಎಂದು ಚೆನ್ನಾಗಿ ವಿವರಿಸುತ್ತಿದ್ದರು. ಅವರಿಗೆ ನೇಯ್ಗೆ ಮಾಡಲು ಸಾಧ್ಯವಿರಲಿಲ್ಲವಾದರೂ ಅವರು ಅವರ ವಿವರಪೂರ್ಣ ಹೇಳಿಕೊಡುವಿಕೆ ತನಗೆ ಇದನ್ನು ಕಲಿಯುವಲ್ಲಿ ಹೆಚ್ಚು ಸಹಾಯ ಮಾಡಿತು ಎನ್ನುವುದು ಪ್ರಭತಿಯವರ ನಂಬಿಕೆ.
ನಾವು ಘೇಗಿರ್‌ಘಾಟ್ ಗ್ರಾಮದಲ್ಲಿರುವ ಪ್ರಭತಿಯವರ ಮನೆಯ ವರಾಂಡದಲ್ಲಿ ಕುಳಿತಿದ್ದೆವು. ಇಲ್ಲಿನ ಜನರು ಸಾಮನ್ಯವಾಗಿ ಮುಚ್ಚಿದ ಮಾಡಿರುವ ಅಂಗಳವನ್ನು ತಮ್ಮ ಕೆಲಸಕ್ಕೆ ಆಯ್ದುಕೊಳ್ಳುತ್ತಾರೆ. ಅವರ ಸುತ್ತ ಅವರ ಕುಟುಂಬವೂ ಇತ್ತು. ಅವರೆಲ್ಲರೂ ಪ್ರಭತಿಯವರ ನೇಯ್ಗೆಗೆ ಸಂಬಂಧಿಸಿದ ವಿವಿಧ ಕೆಲಸಗಳಿಗೆ ಸಹಾಯ ಮಾಡುತ್ತಾರೆ. ಚಾಪೆಯ ಎಳೆಗಳ ಒಳಗೆ ಮೂಡಬೇಕಿರುವ ಚಿತ್ರಗಳ ನೇಯ್ಗೆಯನ್ನು ಮಾತ್ರ ತಮ್ಮದೇ ಪರಿಕಲ್ಪನೆಯನ್ನು ಗಳಸಿ ಅವರೇ ಮಾಡಿದರು. “ಇದನ್ನು ನಮ್ಮ ನೆನಪಿನಿಂದ ಮಾಡುವ ಮೂಲಕ ಅಭ್ಯಾಸ ಮಾಡಿಕೊಂಡಿದ್ದೇವೆ” ಎಂದು ಅವರು ತಮ್ಮ ವಿನ್ಯಾಸ ಪ್ರಕ್ರಿಯೆಯ ಬಗ್ಗೆ ಹೇಳುತ್ತಾರೆ.


























