ವಿಜಯ್‌ ಮರೋತ್ತರ್‌ ಮೊಣಕಾಲು ಮಟ್ಟದ ನೀರಿನಲ್ಲಿ ಮುಳುಗಿದ್ದ ತನ್ನ ಹತ್ತಿ ಹೊಲದತ್ತ ನೋಡುತ್ತಿದ್ದರು. ಈ ಭಾರಿ ಮಳೆ ಬರದೆ ಹೋಗಿದ್ದರೆ ಅವರ ಹೊಲದ ತುಂಬಾ ಹಾಲು ಬಿಳುಪಿನ ಚಂದ್ರನಂತಹ ಹತ್ತಿಯ ಹೂಗಳನ್ನು ನೋಡಬಹುದಿತ್ತು. “ಸುಮಾರು 1.25 ರೂ.ಗಳನ್ನು ಈ ಬೆಳೆಗೆ ಹೂಡಿಕೆ ಮಾಡಿದ್ದೆ. ಈಗ ಅದರಲ್ಲಿ ಬಹುತೇಕ ಕಳೆದುಕೊಂಡಂತಾಗಿದೆ” ಎಂದು 25 ವರ್ಷದ ವಿಜಯ್‌ ತನ್ನ ಬೆಳೆಗಾದ ಪರಿಸ್ಥಿತಿಯನ್ನು ವಿವರಿಸುತ್ತಾ ಹೇಳಿದರು. ಅದು 2022ರ ಸೆಪ್ಟೆಂಬರ್‌ ತಿಂಗಳು. ಎಲ್ಲವೂ ಸರಿಯಿದ್ದಿದ್ದರೆ ವಿಜಯ್‌ ಮೊದಲ ಹಂತದ ಬೆಳೆ ಕೊಯ್ಲು ಆರಂಬಿಸಿರುತ್ತಿದ್ದರು. ದುರಂತವೆಂದರೆ ಈ ಬಾರಿ ಅವರಿಗೆ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದಾದವರು ಕೂಡಾ ಇದ್ದಿರಲಿಲ್ಲ.

ಅವರ ತಂದೆ ಘನಶ್ಯಾಮ್‌ ಮರೋತ್ತರ್‌ ಐದು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲದೆ ಎರಡು ವರ್ಷಗಳ ಹಿಂದೆ ಅವರ ಅಮ್ಮ ಹಠಾತ್‌ ಹೃದಯಾಘಾತಕ್ಕೆ ಬಲಿಯಾಗಿದ್ದರು. ಇಲ್ಲಿನ ಅನಿಯಮಿತ ಹವಾಮಾನ ಮತ್ತು ಸರಣಿ ಬೆಳೆನಷ್ಟದ ಹಂಗಾಮುಗಳು ಅವರ ಪೋಷಕರನ್ನು ವಿಧರ್ಭದ ಇತರ ರೈತರಂತೆ ಒತ್ತಡಕ್ಕೆ ಸಿಲುಕಿಸಿದ್ದವು. ಮತ್ತು ಅವರಿಗೆ ಸಣ್ಣ ಸಹಾಯವೂ ದೊರಕಿರಲಿಲ್ಲ.

ಆದರೆ ವಿಜಯ್‌ ಅವರಿಗೆ ತನ್ನ ತಂದೆಯಂತೆ ಸಮಸ್ಯೆಗಳಿಗೆ ಬೆನ್ನು ಮಾಡುವುದು ಸುಲಭವಲ್ಲವೆನ್ನುವುದು ತಿಳಿದಿತ್ತು. ಅವರು ಮುಂದಿನ ಎರಡು ತಿಂಗಳ ಕಾಲ ತಮ್ಮ ಹೊಲದಲ್ಲಿದ್ದ ನೀರನ್ನು ಹೊರಹಾಕುವುದರಲ್ಲಿ ಕಳೆದರು. ದಿನಾಲೂ ಎರಡು ಗಂಟೆಗಳ ಕಾಲ ಕೇವಲ ಒಂದು ಬಕೆಟ್‌ ಬಳಸಿ ನೀರನ್ನು ಹೊರ ಚೆಲ್ಲುತ್ತಿದ್ದರು. ಅವರ ಜಡ ಹೊಲದಲ್ಲಿ ತಮ್ಮ ಟ್ಟ್ಯಾಕ್‌ ಪ್ಯಾಂಟುಗಳನ್ನು ಮೊಣಕಾಲಿನ ತನಕ ಮಡಚಿಕೊಂಡು ಉಳುಮೆ ಮಾಡುತ್ತಿದ್ದರು. ಅವರು ಧರಿಸಿದ್ದ ಟೀಶರ್ಟ್‌ ಬೆವರಿನಿಂದ ಒದ್ದೆಯಾಗಿರುತ್ತಿತ್ತು. ಅವರು ಬೆನ್ನು ಮುರಿಯುವಂತೆ ಬಾಗಿಕೊಂಡು ನೀರು ಹೊರಹಾಕುತ್ತಿದ್ದರು. “ನನ್ನ ಹೊಲ ಇಳಿಜಾರಿನಲ್ಲಿರುವುದರಿಂದಾಗಿ, ಈ ಹೆಚ್ಚುವರಿ ಮಳೆ ನನ್ನನ್ನು ಇನ್ನಷ್ಟು ಸಮಸ್ಯೆಗೀಡುಮಾಡಿದೆ. ಸುತ್ತಮುತ್ತಲಿನ ಹೊಲದ ನೀರೆಲ್ಲ ನನ್ನ ಹೊಲಕ್ಕೆ ನುಗ್ಗುತ್ತದೆ. ಅದನ್ನು ಖಾಲಿ ಮಾಡುವುದು ಕಷ್ಟ” ಎನ್ನುತ್ತಾರೆ ವಿಜಯ್.‌

ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು - ಅತಿಯಾದ ಮಳೆ, ದೀರ್ಘಕಾಲದ ಶುಷ್ಕತೆ ಮತ್ತು ಆಲಿಕಲ್ಲು ಮಳೆಯು ಅಪಾರ ಕೃಷಿ ಸಂಕಟವನ್ನು ಉಂಟುಮಾಡಿ, ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾದರೂ, ಈ ಬಿಕ್ಕಟ್ಟನ್ನು ಎದುರಿಸಲು ಸರ್ಕಾರ ರೈತರಿಗೆ ಸಾಕಷ್ಟು ಸಹಾಯ ಒದಗಿಸುತ್ತಿಲ್ಲ. (ಓದಿ: ವಿದರ್ಭ: ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಕೃಷಿ ಬಿಕ್ಕಟ್ಟು ) ಮಾನಸಿಕ ಆರೋಗ್ಯ ಕಾಯ್ದೆ, 2017 ರ ಅಡಿಯಲ್ಲಿ ಲಭ್ಯವಿರುವ ಮಾನಸಿಕ ಒತ್ತಡ ಮತ್ತು ಅಸ್ವಸ್ಥತೆ ಹೊಂದಿರುವ ಜನರಿಗೆ ಸೇವೆಗಳ ಪ್ರವೇಶ ಅಥವಾ ಅದರ ಒದಗಿಸುವಿಕೆಯ ಬಗೆಗಿನ ಯಾವುದೇ ಮಾಹಿತಿಯು ವಿಜಯ್ ಅಥವಾ ಅವರ ತಂದೆ ಘನಶ್ಯಾಮ್ ಅವರಿಗೆ ತಲುಪಿಲ್ಲ. 1996ರ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಲಾಗುವ ಔಟ್‌ರೀಚ್‌ ಕಾರ್ಯಕ್ರಮಗಳ ಕುರಿತಾಗಿಯೂ ಅವರಿಗೆ ಮಾಹಿತಿಯಿಲ್ಲ.

ನವೆಂಬರ್ 2014ರಲ್ಲಿ, ಮಹಾರಾಷ್ಟ್ರ ರಾಜ್ಯವು 'ಪ್ರೇರಣಾ ಪ್ರಕಲ್ಪ ರೈತ ಸಮಾಲೋಚನೆ ಆರೋಗ್ಯ ಸೇವಾ ಕಾರ್ಯಕ್ರಮ'ವನ್ನು ಜಾರಿಗೆ ತಂದಿತು. ಈ ಉಪಕ್ರಮವು ಯವತ್ಮಾಲ್ ಮೂಲದ ಎನ್‌ಜಿಒ - ಇಂದಿರಾಬಾಯಿ ಸೀತಾರಾಮ್ ದೇಶಮುಖ್ ಬಹುದೇಶಿಯ ಸಂಸ್ಥೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿಯ ಮೂಲಕ ನಡೆಯುತ್ತಿತ್ತು ಮತ್ತು ಸಾರ್ವಜನಿಕ-ಖಾಸಗಿ (ನಾಗರಿಕ ಸಮಾಜ) ಸಹಭಾಗಿತ್ವದ ಮಾದರಿಯನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿನ ಚಿಕಿತ್ಸೆಯ ಅಂತರವನ್ನು ನಿವಾರಿಸುವ ಗುರಿಯನ್ನು ಇದು ಹೊಂದಿತ್ತು. ಆದರೆ 2022ರಲ್ಲಿ ವಿಜಯ್ ತನ್ನ ತಂದೆಯನ್ನು ಕಳೆದುಕೊಳ್ಳುವ ಹೊತ್ತಿಗೆ, ಸರ್ಕಾರದ ಬಹು ನಿರೀಕ್ಷಿತ ಪ್ರೇರಣಾ ಯೋಜನೆಯೂ ಸ್ಥಗಿತಗೊಂಡಿತ್ತು.

Vijay Marottar in his home in Akpuri. His cotton field in Vidarbha had been devastated by heavy rains in September 2022
PHOTO • Parth M.N.

ಅಕ್ಪುರಿಯಲ್ಲಿರುವ ತಮ್ಮ ಮನೆಯಲ್ಲಿ ವಿಜಯ್ ಮರೋತ್ತರ್. ಸೆಪ್ಟೆಂಬರ್ 2022ರಲ್ಲಿ ಭಾರಿ ಮಳೆಯಿಂದಾಗಿ ವಿದರ್ಭದಲ್ಲಿನ ಅವರ ಹತ್ತಿ ಹೊಲವು ನಾಶವಾಗಿತ್ತು

ಈ ಯೋಜನೆಯ ಹಿಂದಿದ್ದ ಈ ಪ್ರದೇಶದ ಪ್ರಸಿದ್ಧ ಮನೋವೈದ್ಯ ಪ್ರಶಾಂತ್ ಚಕ್ಕರ್‌ವಾರ್ ದೂರದೃಷ್ಟಿಯುಳ್ಳವರು, ಅವರು ಹೇಳುವಂತೆ; "ನಾವು ರಾಜ್ಯ ಸರ್ಕಾರಕ್ಕೆ ಬಹುಮುಖಿ ಬಿಕ್ಕಟ್ಟು ಮಧ್ಯಪ್ರವೇಶದ ತಂತ್ರವನ್ನು ಒದಗಿಸಿದ್ದೆವು. ಮಾನಸಿಕ ಸಮಸ್ಯೆಗಳನ್ನು ನಿಭಾಯಿಸಬಹುದಾದ ತಂತ್ರಗಳ ಮೇಲೆ ಗಮನಹರಿಸಿದ್ದೆವು. ಮತ್ತು ಭಾವನಾತ್ಮಕ ವಿಷಯಗಳ ನಿಭಾವಣೆಯ ತರಬೇತಿ ಪಡೆದ ಕಾರ್ಯಕರ್ತರು ತೀವ್ರ ಪ್ರಕರಣಗಳನ್ನು ಗುರುತಿಸಿ ಅವುಗಳನ್ನು ಜಿಲ್ಲಾ ಸಮಿತಿಗೆ ವರದಿ ಮಾಡುತ್ತಿದ್ದರು. ಆಶಾ ಕಾರ್ಯಕರ್ತರನ್ನು ಸಹ ನಮ್ಮೊಂದಿಗೆ ಸೇರಿಸಿಕೊಂಡಿದ್ದೆವು. ಏಕೆಂದರೆ ಸಮುದಾಯದ ಸಂಪರ್ಕದ ವಿಷಯದಲ್ಲಿ ಅವರು ಮುಖ್ಯವಾಗಿದ್ದರು. ನಮ್ಮ ಕಾರ್ಯ ವಿಧಾನವು ಚಿಕಿತ್ಸೆ, ಔಷಧಿ ಮತ್ತು ಸಮಾಲೋಚನೆಯನ್ನು ಒಳಗೊಂಡಿತ್ತು.”

2016ರಲ್ಲಿ ಈ ಯೋಜನೆಯು ಯವತ್ಮಾಲ್‌ನಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನೀಡಿತ್ತು. ಇತರ ಪೀಡಿತ ಪ್ರದೇಶಗಳಿಗೆ ಹೋಲಿಸಿದರೆ ಈ ಪ್ರದೇಶದಲ್ಲಿ ಆತ್ಮಹತ್ಯೆಗಳ ಸಂಖ್ಯೆಯಲ್ಲಿ ಗಮನಾರ್ಹ ಕುಸಿತ ಕಂಡುಬಂದಿತ್ತು. 2016ರ ಮೊದಲ ಮೂರು ತಿಂಗಳಿನಲ್ಲಿ 48 ಆತ್ಮಹತ್ಯೆಗಳು ದಾಖಲಾಗಿದ್ದರೆ ಹಿಂದಿನ ವರ್ಷ ಇದೇ ಅವಧಿಯಲ್ಲಿ 96 ಆತ್ಮಹತ್ಯೆಗಳು ದಾಖಲಾಗಿದ್ದವು ಎಂದು ಸರ್ಕಾರದ ದಾಖಲೆಗಳು ಹೇಳುತ್ತವೆ. ಇತರ ಪ್ರದೇಶಗಳಲ್ಲಿ ಈ ಸಂಖ್ಯೆಗಳು ಒಂದೋ ಹೆಚ್ಚಿವೆ ಅಥವಾ ಯಥಾಸ್ಥಿತಿಯಲ್ಲಿವೆ. ಯವತ್ಮಾಲ್‌ ಜಿಲ್ಲೆಯ ಯಶಸ್ಸು ಈ ಯೋಜನೆಯನ್ನು ಇತರ 13 ಪೀಡಿತ ಜಿಲ್ಲೆಗಳಲ್ಲಿ ಅದೇ ವರ್ಷ ಆಳವಡಿಸಿಕೊಳ್ಳಲು ಸರ್ಕಾರವನ್ನು ಉತ್ತೇಜಿಸಿತು.

ಆದರೆ ಯೋಜನೆ ಮತ್ತು ಅದರ ಯಶಸ್ಸು ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಶೀಘ್ರದಲ್ಲೇ ಕುಸಿಯಲು ಪ್ರಾರಂಭಿಸಿತು.

"ಅಧಿಕಾರಶಾಹಿ ನಾಗರಿಕ ಸಮಾಜವನ್ನು ಬೆಂಬಲಿಸಿದ್ದರಿಂದ ಈ ಯೋಜನೆ ಉತ್ತಮವಾಗಿ ಪ್ರಾರಂಭವಾಯಿತು" ಎಂದು ಚಕ್ಕರ್‌ವಾರ್ ಹೇಳುತ್ತಾರೆ, "ಇದು ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಾಗಿತ್ತು. ಯೋಜನೆಯು ರಾಜ್ಯದಾದ್ಯಂತ ಪ್ರಾರಂಭವಾದ ಸ್ವಲ್ಪ ಸಮಯದ ನಂತರ, ತಂಡಗಳ ನಡುವೆ ಆಡಳಿತಾತ್ಮಕ ಮತ್ತು ಸಮನ್ವಯ ಸಮಸ್ಯೆಗಳು ತಲೆಯೆತ್ತಲು ಪ್ರಾರಂಭವಾದವು. ಅಂತಿಮವಾಗಿ, ನಾಗರಿಕ ಸಮಾಜ ಸಂಸ್ಥೆಗಳು ಹಿಂದೆ ಸರಿದವು, ಮತ್ತು ಪ್ರೇರಣಾ ಯೋಜನೆಯು ಪರಿಣಾಮಕಾರಿ ಅನುಷ್ಠಾನದ ಕೊರತೆಯೊಂದಿಗೆ ಸಂಪೂರ್ಣವಾಗಿ ಸರ್ಕಾರಿ ನಿಯಂತ್ರಿತ ಕಾರ್ಯಕ್ರಮವಾಗಿ ಮಾರ್ಪಟ್ಟಿತು."

ಆಶಾ ಕಾರ್ಯಕರ್ತರನ್ನು ಈ ಯೋಜನೆಗೆ ಸೇರಿಸಿಕೊಳ್ಳುವ ಮೊದಲು ಅವರಿಗೆ ಹೆಚ್ಚುವರಿ ಪರಿಹಾರ ಹಾಗೂ ಪ್ರಯೋಜನಗಳನ್ನು ನೀಡುವುದಾಗಿ ಭರವಸೆ ನೀಡಲಾಗಿತ್ತು. ಸಂಭಾವ್ಯ ಖಿನ್ನತೆ ಮತ್ತು ಆತಂಕದಿಂದ ಬಳಲುತ್ತಿರುವವರನ್ನು ಪತ್ತೆಹಚ್ಚುವುದು ಅವರ ಕೆಲಸವಾಗಿತ್ತು. ಆದರೆ ಸರಕಾರವು ತಾನು ನೀಡಿದ ಭರವಸೆಗಳನ್ನು ಈಡೇರಿಸಲು ವಿಳಂಬ ಮಾಡುತ್ತಿದ್ದಂತೆ ಆಶಾ ಕಾರ್ಯಕರ್ತರು ಈ ಕೆಲಸದಲ್ಲಿ ಆಸಕ್ತಿ ಕಳೆದುಕೊಂಡರು. ಈ ಕಾರಣದಿಂದಾಗಿ “ಅವರು ಕ್ಷೇತ್ರ ಸಮೀಕ್ಷೆಗಳನ್ನು ಪ್ರಾಮಾಣಿಕವಾಗಿ ನಡೆಸುವ ಬದಲು ನಕಲಿ ಪ್ರಕರಣಗಳನ್ನು ವರದಿ ಮಾಡತೊಡಗಿದರು” ಎನ್ನುತ್ತಾರೆ ಚಕ್ಕರ್‌ವಾರ್.

Left: Photos of Vijay's deceased parents Ghanshyam and Kalpana. Both of whom died because of severe anxiety and stress caused by erratic weather, crop losses, and mounting debts .
PHOTO • Parth M.N.
Right: Vijay knew he could not afford to break down like his father
PHOTO • Parth M.N.

ಎಡ: ವಿಜಯ್ ಅವರ ಮೃತ ಪೋಷಕರಾದ ಘನಶ್ಯಾಮ್ ಮತ್ತು ಕಲ್ಪನಾ ಅವರ ಫೋಟೋಗಳು. ಅನಿಯಮಿತ ಹವಾಮಾನ, ಬೆಳೆ ನಷ್ಟ ಮತ್ತು ಹೆಚ್ಚುತ್ತಿರುವ ಸಾಲಗಳಿಂದ ಉಂಟಾದ ತೀವ್ರ ಆತಂಕ ಮತ್ತು ಒತ್ತಡದಿಂದಾಗಿ ಇಬ್ಬರೂ ನಿಧನರಾದರು. ಸರಿ: ವಿಜಯ್‌ ಅವರಿಗೆ ತನಗೆ ತಂದೆಯ ದಾರಿ ಹಿಡಿಯಲು ಸಾಧ್ಯವಿಲ್ಲವೆನ್ನುವುದು ತಿಳಿದಿತ್ತು

2022ರಲ್ಲಿ ಘನಶ್ಯಾಮ್‌ ಮರೋತ್ತರ್‌ ಆತ್ಮಹತ್ಯೆ ಮಾಡುಕೊಳ್ಳುವ ಹೊತ್ತಿಗೆ ಪ್ರೇರಣಾ ಯೋಜನೆಯು ವಿಫಲ ಸರ್ಕಾರಿ ಯೋಜನೆಯಾಗಿ ಮಾರ್ಪಟ್ಟಿತ್ತು. ಪರಿಣಾಮವಾಗಿ ಈ ಯೋಜನೆಯಡಿಯ ಮನೋವೈದ್ಯಕೀಯ ವೃತ್ತಿಪರರು ಮತ್ತು ಸ್ಥಳೀಯ ಸ್ವಯಂಸೇವಕರು ಮತ್ತು ತರಬೇತಿ ಪಡೆದ ಆಶಾ ಕಾರ್ಯಕರ್ತರ ಹುದ್ದೆಗಳು ಹೆಚ್ಚು ಹೆಚ್ಚು ಖಾಲಿ ಉಳಿದಿದ್ದವು. ಇದರೊಂದಿಗೆ ಆ ವರ್ಷ ಯವತ್ಮಾಲ್ ತೀವ್ರವಾದ ಕೃಷಿ ಬಿಕ್ಕಟ್ಟಿಗೆ 355 ರೈತರು ತಮ್ಮ ಪ್ರಾಣವನ್ನು ತೆತ್ತರು.

ಮಾನಸಿಕ ಆರೋಗ್ಯ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಸರ್ಕಾರದ ಅಸಮರ್ಥತೆಯ ಕಾರಣದಿಂದಾಗಿ ಈ ಪ್ರದೇಶಕ್ಕೆ ಒಂದಕ್ಕಿಂತ ಹೆಚ್ಚು ಸರ್ಕಾರೇತರ ಸಂಸ್ಥೆ ಈ ಪ್ರದೇಶಕ್ಕೆ ಕಾಲಿಡಬೇಕಾಯಿತು. ಟಾಟಾ ಟ್ರಸ್ಟ್ ಮಾರ್ಚ್ 2016ರಿಂದ ಜೂನ್ 2019ರವರೆಗೆ ಯವತ್ಮಾಲ್ ಮತ್ತು ಘಟಾಂಜಿ ತಾಲೂಕಿನ 64 ಹಳ್ಳಿಗಳಲ್ಲಿ ವಿದರ್ಭ ಸೈಕಲಾಜಿಕಲ್ ಸಪೋರ್ಟ್ ಮತ್ತು ಕೇರ್ ಪ್ರೋಗ್ರಾಂ ಎಂಬ ಪ್ರಾಯೋಗಿಕ ಯೋಜನೆಯನ್ನು ನಡೆಸಿತು. "ನಮ್ಮ ಉಪಕ್ರಮವು ಜನರಲ್ಲಿ ಸಹಾಯ ಪಡೆಯುವ ಮನಸ್ಥಿತಿಯನ್ನು ಹೆಚ್ಚಿಸಿದೆ" ಎಂದು ಯೋಜನೆಯ ಮುಖ್ಯಸ್ಥರಾದ ಪ್ರಫುಲ್ ಕಾಪ್ಸೆ ಹೇಳುತ್ತಾರೆ. "ಹೆಚ್ಚು ರೈತರು ತಮ್ಮ ಸಮಸ್ಯೆಗಳೊಂದಿಗೆ ಮುಂದೆ ಬರಲು ಪ್ರಾರಂಭಿಸಿದರು. ಈ ರೈತರು ಮೊದಲು ಮಾನಸಿಕ ಆರೋಗ್ಯ ಅಸ್ವಸ್ಥತೆಗಳ ಪರಿಹಾರಕ್ಕೆ ತಾಂತ್ರಿಕರ ಮೊರೆ ಹೋಗುತ್ತಿದ್ದರು."

2018ರ ಖಾರಿಫ್‌ ಹಂಗಾಮಿನಲ್ಲಿ ಟಾಟಾ ಟ್ರಸ್ಟ್‌ ಜೊತೆಗೂಡಿ ಕೆಲಸ ಮಾಡುವ ಮನಶಾಸ್ತ್ರಜ್ಞರು ಶಂಕರ್‌ ಪಂತಂಗ್ವಾರ್‌ ಅವರ ಸಂಪರ್ಕಕ್ಕೆ ಬಂದರು. ಘಟಂಜಿ ತಾಲ್ಲೂಕಿನ ಹತ್ಗಾಂವ್ ಗ್ರಾಮದಲ್ಲಿ ಮೂರು ಎಕರೆ ಭೂಮಿಯನ್ನು ಹೊಂದಿದ್ದ ಈ 64 ವರ್ಷದ ರೈತ ಆತ್ಮಹತ್ಯೆಯ ಆಲೋಚನೆಗಳ ಜೊತೆಗೆ ಖಿನ್ನತೆಗೆ ಜಾರಿದ್ದರು. “ಆ ದಿನಗಳಲ್ಲಿ ನಾನು ಒಂದು ತಿಂಗಳ ಕಾಲ ನನ್ನ ಕೃಷಿಭೂಮಿಯತ್ತ ಹೋಗಿರಲಿಲ್ಲ” ಎಂದು ಅವರು ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. “ಸುಮ್ಮನೆ ನನ್ನ ಗುಡಿಸಲಿನಲ್ಲಿ ಮಲಗಿರುತ್ತಿದ್ದೆ. ಬದುಕಿಡೀ ಕೃಷಿ ಮಾಡಿರುವ ನಾನು ಯಾವತ್ತೂ ಅಷ್ಟು ದಿನಗಳ ಕಾಲ ಹೊಲದಿಂದ ದೂರವುಳಿದಿರಲಿಲ್ಲ. ನಮ್ಮ ಆತ್ಮ ಮತ್ತು ಹೃದಯವನ್ನು ಹೊಲದಲ್ಲಿ ಬಸಿದು ಪ್ರತಿಯಾಗಿ ಏನೂ ಸಿಗದಿದ್ದಾಗ ಒಬ್ಬರು ಖಿನ್ನತೆಗೊಳಗಾಗದಿರಲು ಹೇಗೆ ಸಾಧ್ಯ?”

ಎರಡರಿಂದ ಮೂರು ಹಂಗಾಮಿನಲ್ಲಿ ಶಂಕರ್‌ ಅವರು ತಮ್ಮ ಹೊಲದಲ್ಲಿ ಹತ್ತಿ ಮತ್ತು ತೊಗರಿ ಬೆಳೆಯುವ ಮೂಲಕ ತೀವ್ರ ನಷ್ಟವನ್ನುಎದುರಿಸಿದ್ದರು. 2018ರ ಮೇ ತಿಂಗಳಿನಲ್ಲಿ ಮತ್ತೆ ಬೆಳೆ ಬೆಳೆಯಲು ಪೂರ್ವ ತಯಾರಿ ನಡೆಸುವ ಆಲೋಚನೆಯು ಹೆದರಿಸುವಂತಿತ್ತು. ಅವರಿಗೆ ಬೆಳೆ ಬೆಳೆಯುವುದರಲ್ಲಿ ಯಾವ ಅರ್ಥವೂ ಕಾಣಲಿಲ್ಲ. "ನಾನು ಭರವಸೆ ಕಳೆದುಕೊಳ್ಳಬಾರದೆಂದು ನನಗೆ ನಾನೇ ಹೇಳಿಕೊಂಡೆ. ನಾನು ಕುಸಿದರೆ ನಮ್ಮ ಇಡೀ ಕುಟುಂಬ ಕುಸಿಯುವ ಸಾಧ್ಯತೆಯಿತ್ತು” ಎನ್ನುತ್ತಾರೆ ಈ ಹಿರಿಯ ರೈತ.

Shankar Pantangwar on his farmland in Hatgaon, where he cultivates cotton and tur on his three acre. He faced severe losses for two or three consecutive seasons
PHOTO • Parth M.N.

ಶಂಕರ್ ಪಂತಂಗ್ವಾರ್ ಅವರು ಹತ್ಗಾಂವ್‌ ಎನ್ನುವಲ್ಲಿರುವ ತಮ್ಮ ಮೂರು ಎಕರೆ ಭೂಮಿಯಲ್ಲಿ ಹತ್ತಿ ಮತ್ತು ತೊಗರಿಯನ್ನು ಬೆಳೆಯುತ್ತಾರೆ. ಅವರು ಸತತ ಎರಡು ಅಥವಾ ಮೂರು ಹಂಗಾಮಿನಲ್ಲಿ ತೀವ್ರ ನಷ್ಟವನ್ನು ಎದುರಿಸಿದರು

ಶಂಕರ್ ಪಂತಂಗ್ವಾರ್ ಅವರ ಪತ್ನಿ ಅನುಶಯ ಅವರಿಗೆ 60 ವರ್ಷ ವಯಸ್ಸಾಗಿದ್ದು, ಹವಾಮಾನ ವೈಪರೀತ್ಯದಿಂದಾಗಿ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದು ಹಿರಿಯ ಮಗಳು ರೇಣುಕಾ (22) ಮದುವೆಯಾಗಿದ್ದು, ಅವರ 20 ವರ್ಷದ ಮಗನಿಗೆ ಬೌದ್ಧಿಕ ಅಂಗವೈಕಲ್ಯವಿದೆ. 2018ರ ಖಾರಿಫ್ ಋತುವು ಸಮೀಪಿಸುತ್ತಿದ್ದಂತೆ ಶಂಕರ್ ತಮ್ಮ ಒಳಗಿನ ಶತ್ರುಗಳೊಡನೆ ಹೋರಾಡಲು ನಿರ್ಧರಿಸಿದರು.

ಇದೇ ಸಮಯದಲ್ಲಿ ಅವರು ಮನಶಾಸ್ತ್ರಜ್ಞರ ಸಂಪರ್ಕಕ್ಕೆ ಬಂದಿದ್ದು. "ಅವರು ನನ್ನೊಂದಿಗೆ ಮೂರು-ನಾಲ್ಕು ಗಂಟೆಗಳ ಕಾಲ ಬಂದು ಕುಳಿತುಕೊಳ್ಳುತ್ತಿದ್ದರು" ಎಂದು ಅವರು ನೆನಪಿಸಿಕೊಳ್ಳುತ್ತಾರೆ. "ನನ್ನನ್ನು ಕಾಡುತ್ತಿದ್ದ ಎಲ್ಲಾ ಸಮಸ್ಯೆಗಳನ್ನೂ ನಾನು ಅವರಲ್ಲಿ ಹೇಳಿಕೊಳ್ಳುತ್ತಿದ್ದೆ. ಮುಕ್ತವಾಗಿ ಮಾತನಾಡುವ ಮೂಲಕ ನಾನು ಕೆಟ್ಟ ಕಾಲದಿಂದ ಹೊರಬಂದೆ." ಮುಂದಿನ ಕೆಲವು ತಿಂಗಳ ನಿಯಮಿತ ಭೇಟಿಗಳು ಅವರಿಗೆ ಅಗತ್ಯವಿರುವ ಪರಿಹಾರವನ್ನು ನೀಡುತ್ತಿರುವಂತೆ ಕಂಡಿತು. "ನಾನು ಅವರೊಂದಿಗೆ ಮುಕ್ತವಾಗಿ ಮಾತನಾಡುತ್ತಿದ್ದೆ. ಯಾವುದೇ ಮುಚ್ಚುಮರೆಯಿಲ್ಲದೆ ಒಬ್ಬರೊಡನೆ ಮಾತನಾಡುವುದು ನಿಜಕ್ಕೂ ಆಹ್ಲಾದಕರ ಅನುಭವ" ಎಂದು ಅವರು ವಿವರಿಸುತ್ತಾರೆ. ಇದನ್ನೆಲ್ಲ ನಾನು ನನ್ನ ಸ್ನೇಹಿತರು ಅಥವಾ ಕುಟುಂಬದೊಡನೆ ಹಂಚಿಕೊಂಡರೆ ಅವರು ಒತ್ತಡಕ್ಕೆ ಒಳಗಾಗುವ ಸಾಧ್ಯತೆಯಿತ್ತು."

ಶಂಕರ್‌ ಕ್ರಮೇಣ ಪ್ರತಿ ಎರಡು ತಿಂಗಳಿಗೊಮ್ಮೆ ಈ ಸಂಭಾಷಣೆಯನ್ನು ಎದುರು ನೋಡುವ ಅಭ್ಯಾಸಕ್ಕೆ ಜಾರಿದರು. ಆದರೆ ಇದೆಲ್ಲವೂ ಇದ್ದಕ್ಕಿದ್ದಂತೆ ಒಂದು ದಿನ ನಿಂತುಹೋಯಿತು. ಈ ಕುರಿತು ಅವರಿಗೆ ಯಾವ ವಿವರಣೆಯೂ ದೊರಕಲಿಲ್ಲ. ಕಾಪ್ಸೆ ಹೇಳುವಂತೆ ಆಡಳಿತಾತ್ಮಕ ಕಾರಣಗಳಿಗಾಗಿ ಇದು ನಿಂತುಹೋಗಿರಬಹುದು.

ಅವರ ಕೊನೆಯ ಭೇಟಿಯಲ್ಲಿ ಮನಶಾಸ್ತ್ರಜ್ಞರಿಗಾಗಲೀ ಶಂಕರ್‌ ಅವರಿಗಾಗಲೀ ಇದು ತಮ್ಮ ಕೊನೆಯ ಭೇಟಿಯೆಂದು ತಿಳಿದಿರಲಿಲ್ಲ. ಈ ಮಾತುಕತೆಗಳನ್ನು ಶಂಕರ್‌ ಈಗಲೂ ಬಯಸುತ್ತಾರೆ. ಅದಕ್ಕಾಗಿ ತಪಿಸುತ್ತಾರೆ. ಪ್ರಸ್ತುತ ಅವರು ತಿಂಗಳಿಗೆ 5 ಶೇಕಡಾ ಅಥವಾ ವಾರ್ಷಿಕ 60 ಶೇಕಡಾ ಬಡ್ಡಿಗೆ 50,000 ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದು ಈ ಕುರಿತಾಗಿ ಯಾರೊಂದಿಗಾದರೂ ಮಾತನಾಡುವ ಬಯಕೆಯಲ್ಲಿದ್ದಾರೆ. ಆದರೆ ಈಗ ಅವರಿಗೆ ಉಳಿದಿರುವ ಏಕೈಕ ಮಾರ್ಗವೆಂದರೆ 2014ರಲ್ಲಿ ಪರಿಚಯಿಸಲಾದ ಮಾನಸಿಕ ಆರೋಗ್ಯ ಸಮಸ್ಯೆಗಳ ಟೋಲ್ ಫ್ರೀ ಸರ್ಕಾರಿ ಸಹಾಯವಾಣಿ 104 ಸಂಖ್ಯೆಗೆ ಡಯಲ್ ಮಾಡುವುದು. ಆದರೆ ಇದು ಕೂಡಾ ಅಸ್ತಿತ್ವದಲ್ಲಿರುವ ಆದರೆ ಕಾರ್ಯನಿರ್ವಹಿಸದ ಇತರ ಸೇವೆಗಳಲ್ಲಿ ಒಂದಾಗಿದೆ.

'When we pour our heart and soul into our farm and get nothing in return, how do you not get depressed?' asks Shankar. He received help when a psychologist working with TATA trust reached out to him, but it did not last long
PHOTO • Parth M.N.

ʼನಮ್ಮ ಆತ್ಮ ಮತ್ತು ಹೃದಯವನ್ನು ಹೊಲದಲ್ಲಿ ಬಸಿದು ಪ್ರತಿಯಾಗಿ ಏನೂ ಸಿಗದಿದ್ದಾಗ ಒಬ್ಬರು ಖಿನ್ನತೆಗೊಳಗಾಗದಿರಲು ಹೇಗೆ ಸಾಧ್ಯ?ʼ ಎಂದು ಕೇಳುತ್ತಾರೆ ಶಂಕರ್.‌ ಟಾಟಾ ಟ್ರಸ್ಟ್ ಸಂಸ್ಥೆಯೊಂದಿಗೆ ಕೆಲಸ ಮಾಡುವ ಮನಶ್ಶಾಸ್ತ್ರಜ್ಞರ ಸಂಪರ್ಕದಿಂದಾಗಿ ಅವರಿಗೆ ಸಹಾಯ ಸಿಕ್ಕಿತು, ಆದರೆ ಅದು ಹೆಚ್ಚು ಕಾಲ ಉಳಿಯಲಿಲ್ಲ

ಸೆಪ್ಟೆಂಬರ್‌ 2022ರಲ್ಲಿ ಪ್ರಾದೇಶಿಕ ದಿನಪತ್ರಿಕೆಯಾದ ದಿವ್ಯ ಮರಾಠಿಯು ರೈತನೊಬ್ಬನಂತೆ ನಟಿಸಿ ಸಹಾಯವಾಣಿ 104 ಸಂಖ್ಯೆಗೆ ಕರೆ ಮಾಡಿತ್ತು. ಪ್ರತಿಕ್ರಿಯೆಯಾಗಿ ಸಲಹೆಗಾರರು ಇನ್ನೊಂದು ರೋಗಿಯೊಡನೆ ಮಾತುಕತೆಯಲ್ಲಿ ತೊಡಗಿರುವುದಾಗಿ ಬಂದಿತು. ಪ್ರತಿನಿಧಿಯು ಆಕೆಯ ಹೆಸರು, ಊರು ಮತ್ತು ಜಿಲ್ಲೆಯನ್ನು ಬರೆದುಕೊಂಡು ಅರ್ಧ ಗಂಟೆಯ ನಂತರ ಕರೆ ಮಾಡುವಂತೆ ವಿನಂತಿಸಿದರು. “ಕೆಲವೊಮ್ಮೆ ಕರೆ ಮಾಡಿದವರಿಗೆ ಅವರ ಮಾತುಗಳನ್ನು ಕೇಳುವವರು ಬೇಕಿರುತ್ತದೆ. ಅವರ ಮಾತುಗಳನ್ನು ಆಲಿಸಿದರೆ ಅವರು ಶಾಂತಗೊಳ್ಳಬಹುದು” ಎನ್ನುತ್ತಾರೆ ಕಾಪ್ಸೆ.” ಆದರೆ ಸಹಾಯ ಕೋರುವವರು ತೀವ್ರ ಸಂಕಷ್ಟದಲ್ಲಿದ್ದರೆ, ಅಲ್ಲಿ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, 108 ಆಂಬ್ಯುಲೆನ್ಸ್ ಸೇವೆಗೆ ಕರೆ ಮಾಡಲು ಸಲಹೆಗಾರರು ವ್ಯಕ್ತಿಯನ್ನು ಮನವೊಲಿಸುವುದು ಬಹಳ ಮುಖ್ಯ. ಅಂತಹ ಪ್ರಕರಣಗಳನ್ನು ಪರಿಹರಿಸಲು ಸಹಾಯವಾಣಿಯನ್ನು ನಿರ್ವಹಿಸುವ ಸಮಾಲೋಚಕರಿಗೆ ತರಬೇತಿ ನೀಡಬೇಕು" ಎಂದು ಅವರು ಹೇಳುತ್ತಾರೆ.

ರಾಜ್ಯ ಸರ್ಕಾರದ ಅಂಕಿಅಂಶಗಳ ಪ್ರಕಾರ, ಸಹಾಯವಾಣಿಗೆ 2015-16ರಿಂದ ಮಹಾರಾಷ್ಟ್ರದಾದ್ಯಂತದ 13,437 ಕರೆಗಳು ಬಂದಿವೆ. ಮುಂದಿನ ನಾಲ್ಕು ವರ್ಷಗಳಲ್ಲಿ ವರ್ಷಕ್ಕೆ ಸರಾಸರಿ 9,200 ಕರೆಗಳು ಬರುತ್ತಿದ್ದವು. ಆದಾಗ್ಯೂ, 2020-21ರಲ್ಲಿ ಕೋವಿಡ್ -19 ಪ್ರಾರಂಭವಾಗಿ ಮಾನಸಿಕ ಆರೋಗ್ಯ ಬಿಕ್ಕಟ್ಟು ಉತ್ತುಂಗಕ್ಕೇರಿದ ಸಮಯದಲ್ಲಿ, ಕರೆಗಳ ಸಂಖ್ಯೆ ನಾಟಕೀಯ ಕುಸಿತವನ್ನು ಕಂಡಿತು, ವರ್ಷಕ್ಕೆ 3,575 ಕರೆಗಳು – ಆಶ್ಚರ್ಯಕರವಾಗಿ ಇದು ಶೇಕಡಾ 61ರಷ್ಟು ಕುಸಿತವಾಗಿದೆ. ಮುಂದಿನ ವರ್ಷ, ಇದು 1,963ಕ್ಕೆ ಕುಸಿಯಿತು - ಇದು ಹಿಂದಿನ ನಾಲ್ಕು ವರ್ಷಗಳ ಸರಾಸರಿಗಿಂತ ಶೇಕಡಾ 78ರಷ್ಟು ಕುಸಿತವಾಗಿದೆ.

ಮತ್ತೊಂದೆಡೆ, ಗ್ರಾಮೀಣ ಪ್ರದೇಶಗಳಲ್ಲಿನ ಸಂಕಷ್ಟವು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿತ್ತು ಮತ್ತು ಮಹಾರಾಷ್ಟ್ರದಾದ್ಯಂತ ರೈತರ ಆತ್ಮಹತ್ಯೆ ಸಂಖ್ಯೆಗಳು ಸಹ ಅದೇ ಮಟ್ಟದಲ್ಲಿದ್ದವು. ಮಹಾರಾಷ್ಟ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ, ಜುಲೈ 2022 ಮತ್ತು ಜನವರಿ 2023ರ ನಡುವೆ 1,023 ರೈತರು ತಮ್ಮ ಬದುಕನ್ನು ಕೊನೆಗೊಳಿಸಿದ್ದಾರೆ. ಜುಲೈ 2022ರ ಹಿಂದಿನ ಎರಡೂವರೆ ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 1,660. ಎಂದರೆ ರೈತರ ಸಾವಿನ ಸಂಖ್ಯೆಯಲ್ಲಿ ವಿಪರೀತ ಏರಿಕೆ ಕಂಡಿದೆ.

ಅಕ್ಟೋಬರ್ 30, 2022ರಂದು, ಕೇಂದ್ರ ಸರ್ಕಾರವು 104 ಸಂಖ್ಯೆಯನ್ನು ನಿಧಾನವಾಗಿ ಬದಲಾಯಿಸಲು ಹೊಸ ಸಹಾಯವಾಣಿ - 14416 ಅನ್ನು ಘೋಷಿಸಿತು. ಹೊಸ ಸಹಾಯವಾಣಿಯ ಪರಿಣಾಮವನ್ನು ಈಗಲೇ ಅಳೆಯುವುದು ಆತುರದ ನಿರ್ಧಾರವಾದರೂ. ಬಿಕ್ಕಟ್ಟು ಈಗಲೂ ಮುಂದುವರೆದಿದೆ.

Farming is full of losses and stress, especially difficult without a mental health care network to support them. When Vijay is not studying or working, he spends his time reading, watching television, or cooking.
PHOTO • Parth M.N.
Farming is full of losses and stress, especially difficult without a mental health care network to support them. When Vijay is not studying or working, he spends his time reading, watching television, or cooking.
PHOTO • Parth M.N.

ಬೇಸಾಯವೆಂದರೆ ನಷ್ಟ ಮತ್ತು ಒತ್ತಡವೆಂಬಂತಾಗಿದೆ. ಈ ನಡುವೆ ಅವರನ್ನು ಬೆಂಬಲಿಸಲು ಇರಬೇಕಿದ್ದ ಮಾನಸಿಕ ಆರೋಗ್ಯ ರಕ್ಷಣಾ ಜಾಲದ ಅನುಪಸ್ಥಿತಿಯು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ವಿಜಯ್ ಕಾಲೇಜಿನ ಓದು ಮತ್ತು ಕೆಲಸದಿಂದ ವಿರಾಮ ಸಿಕ್ಕಾಗ ಪುಸ್ತಕಗಳನ್ನು ಓದುವುದು, ಟಿವಿ ನೋಡುವುದು ಮತ್ತು ಅಡುಗೆ ಮಾಡುವುದರ ಮೂಲಕ ಸಮಯ ಕಳೆಯುತ್ತಾರೆ

2022ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಸುರಿದ ಮಳೆಯು ಶಂಕರ್‌ ಅವರ ಫಸಲನ್ನು ಪೂರ್ತಿಯಾಗಿ ಮಣ್ಣುಪಾಲು ಮಾಡಿತು. ಈಗ ಅವರ ಸಾಲವೂ ಬೆಳೆದಿದ್ದು ಅದು ಒಂದು ಲಕ್ಷ ರೂಪಾಯಿಗಳನ್ನು ತಲುಪಿದೆ. ಅವರು ಈಗ ಕಾರ್ಮಿಕರಾಗಿ ಕೆಲಸ ಮಾಡಲು ಯೋಜಿಸುತ್ತಿದ್ದು, ಇದರೊಂದಿಗೆ ಅವರ ಪತ್ನಿಯ ಸಂಪಾದನೆಯೂ ಸೇರಿದರೆ ಮುಂದಿನ 2023ರ ಖಾರಿಫ್‌ ಬೆಳೆಗೆ ಬಂಡವಾಳ ಒಟ್ಟುಗೂಡಿಸಬಹುದೆನ್ನುವುದು ಅವರ ಆಲೋಚನೆ.

ಇತ್ತ ಅಕ್ಪುರಿಯಲ್ಲಿ, ವಿಜಯ್ ಈಗಾಗಲೇ ತಮ್ಮ ನಿರ್ಗಮನ ಯೋಜನೆಯನ್ನು ರೂಪಿಸಿದ್ದು, ಅವರು ಹತ್ತಿ ಬೆಳೆಯುವುದನ್ನು ಹಂತ ಹಂತವಾಗಿ ನಿಲ್ಲಿಸಲು ನಿರ್ಧರಿಸಿದ್ದಾರೆ ಮತ್ತು ಅದರ ಬದಲಿಗೆ ಸೋಯಾಬೀನ್ ಮತ್ತು ಚನಾ [ಕಡಲೆ] ಯತಹ ಹೆಚ್ಚು ಹೊಂದಿಕೊಳ್ಳುವ ಬೆಳೆಗಳನ್ನು ಬೆಳೆಯಲು ನಿರ್ಧರಿಸಿದ್ದಾರೆ, ಅವು ಸಣ್ಣ ಹವಾಮಾನ ಬದಲಾವಣೆಗಳನ್ನು ಉತ್ತಮವಾಗಿ ತಡೆದುಕೊಳ್ಳಬಲ್ಲವು. ಜೊತೆಗೆ ಅವರು ಹಾರ್ಡ್‌ ವೇರ್ ಅಂಗಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದು ಆ ಮೂಲಕ ತಿಂಗಳಿಗೆ 10,000 ರೂ.ಗಳನ್ನು ಸಂಪಾದಿಸುತ್ತಿದ್ದಾರೆ. ಜೊತೆಗೆ ಎಂಎ ಪದವಿಯನ್ನು ಸಹ ಓದುತ್ತಿದ್ದಾರೆ. ವಿಜಯ್‌ ತಮ್ಮ ಬಿಡುವಿನ ಸಮಯದಲ್ಲಿ ಟಿವಿ ನೋಡುವುದು ಅಥವಾ ಅಡುಗೆ ಮಾಡುವ ಮೂಲಕ ಸಮಯ ಕಳೆಯುತ್ತಾರೆ.

ತನ್ನ 25 ವಯಸ್ಸಿನ ಯುವಕರಿಗಿಂತಲೂ ಚುರುಕಾಗಿರುವ ಅವರು ಹೊಲ ಮತ್ತು ಮನೆಯ ಕೆಲಸಗಳನ್ನು ಒಬ್ಬರೇ ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ. ವಿಜಯ್‌ ತನ್ನ ಆಲೋಚನೆಗಳು ಅತ್ತಿತ್ತ ಸರಿಯದಂತೆ ಸದಾ ಎಚ್ಚರವಾಗಿರುತ್ತಾರೆ. ಏಕೆಂದರೆ ಹಾಗೆ ಮನಸ್ಸು ಹೆಚ್ಚು ಯೋಚಿಸತೊಡಗಿದಾಗ ಅದು ತಂದೊಡ್ಡುವ ಆತಂಕಗಳನ್ನು ಸಹ ಅವರೊಬ್ಬರೇ ಎದುರಿಸಬೇಕಿದೆ. ಅದಕ್ಕೆ ಅವರು ಸಿದ್ಧರಿಲ್ಲ.

“ನಾನು ಕೇವಲ ಹಣಕ್ಕಾಗಿ ಕೆಲಸವನ್ನು ಒಪ್ಪಿಕೊಂಡಿಲ್ಲ” ಎನ್ನುತ್ತಾರವರು. “ಇದು ನನ್ನ ಮನಸ್ಸನ್ನು ಕಾರ್ಯನಿರತವಾಗಿರಿಸುತ್ತದೆ. ನಾನು ಓದಿ ಒಂದು ಸ್ಥಿರ ಉದ್ಯೋಗವನ್ನು ಪಡೆದು ಒಳ್ಳೆಯ ಕಾರಣಕ್ಕಾಗಿ ಬೇಸಾಯ ಬಿಟ್ಟ ನೆಮ್ಮದಿಯನ್ನು ಪಡೆಯಬೇಕಿದೆ. ನಾನು ನನ್ನಪ್ಪ ಮಾಡಿದ್ದನ್ನು ಮಾಡಲಾರೆ. ಆದರೆ ಈ ಅನಿಶ್ಚಿತ ಹವಾಮಾನವನ್ನು ನಂಬಿಕೊಂಡು ಜೀವನಪೂರ್ತಿ ಏಗುವುದು ನನ್ನಿಂದ ಸಾಧ್ಯವಿಲ್ಲ.”

ಠಾಕೂರ್ ಫ್ಯಾಮಿಲಿ ಫೌಂಡೇಶನ್ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಮೂಲಕ ಪಾರ್ಥ್ ಎಂ.ಎನ್ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯಗಳ ಬಗ್ಗೆ ವರದಿ ಮಾಡುತ್ತಾರೆ. ಠಾಕೂರ್ ಫ್ಯಾಮಿಲಿ ಫೌಂಡೇಶನ್ ಈ ವರದಿಯ ವಿಷಯಗಳ ಮೇಲೆ ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಚಲಾಯಿಸಿಲ್ಲ.

ನಿಮ್ಮಲ್ಲಿ ಆತ್ಮಹತ್ಯೆಯ ಭಾವ ಮೂಡುತ್ತಿದ್ದಲ್ಲಿ ಅಥವಾ ತೊಂದರೆಯಲ್ಲಿರುವ ಯಾರಾದರೂ ತಿಳಿದಿದ್ದರೆ ದಯವಿಟ್ಟು ರಾಷ್ಟ್ರೀಯ ಸಹಾಯವಾಣಿ ಕಿರಣ್, 1800-599-0019 (24/7 ಟೋಲ್ ಫ್ರೀ) ಗೆ ಕರೆ ಮಾಡಿ, ಅಥವಾ ನಿಮ್ಮ ಹತ್ತಿರದ ಈ ಯಾವುದೇ ಸಹಾಯವಾಣಿಗೆ ಕರೆ ಮಾಡಿ. ಮಾನಸಿಕ ಆರೋಗ್ಯ ವೃತ್ತಿಪರರು ಮತ್ತು ಸೇವೆಗಳ ಬಗ್ಗೆ ಮಾಹಿತಿಗಾಗಿ, ದಯವಿಟ್ಟು ಎಸ್‌ಪಿಐಎಫ್‌ನ ಮಾನಸಿಕ ಆರೋಗ್ಯ ಡೈರೆಕ್ಟರಿಗೆ ಭೇಟಿ ನೀಡಿ.

ಅನುವಾದ: ಶಂಕರ. ಎನ್. ಕೆಂಚನೂರು

Parth M.N.

ਪਾਰਥ ਐੱਮ.ਐੱਨ. 2017 ਤੋਂ ਪਾਰੀ ਦੇ ਫੈਲੋ ਹਨ ਅਤੇ ਵੱਖੋ-ਵੱਖ ਨਿਊਜ਼ ਵੈੱਬਸਾਈਟਾਂ ਨੂੰ ਰਿਪੋਰਟਿੰਗ ਕਰਨ ਵਾਲੇ ਸੁਤੰਤਰ ਪੱਤਰਕਾਰ ਹਨ। ਉਨ੍ਹਾਂ ਨੂੰ ਕ੍ਰਿਕੇਟ ਅਤੇ ਘੁੰਮਣਾ-ਫਿਰਨਾ ਚੰਗਾ ਲੱਗਦਾ ਹੈ।

Other stories by Parth M.N.
Editor : Pratishtha Pandya

ਪ੍ਰਤਿਸ਼ਠਾ ਪਾਂਡਿਆ PARI ਵਿੱਚ ਇੱਕ ਸੀਨੀਅਰ ਸੰਪਾਦਕ ਹਨ ਜਿੱਥੇ ਉਹ PARI ਦੇ ਰਚਨਾਤਮਕ ਲੇਖਣ ਭਾਗ ਦੀ ਅਗਵਾਈ ਕਰਦੀ ਹਨ। ਉਹ ਪਾਰੀਭਾਸ਼ਾ ਟੀਮ ਦੀ ਮੈਂਬਰ ਵੀ ਹਨ ਅਤੇ ਗੁਜਰਾਤੀ ਵਿੱਚ ਕਹਾਣੀਆਂ ਦਾ ਅਨੁਵਾਦ ਅਤੇ ਸੰਪਾਦਨ ਵੀ ਕਰਦੀ ਹਨ। ਪ੍ਰਤਿਸ਼ਠਾ ਦੀਆਂ ਕਵਿਤਾਵਾਂ ਗੁਜਰਾਤੀ ਅਤੇ ਅੰਗਰੇਜ਼ੀ ਵਿੱਚ ਪ੍ਰਕਾਸ਼ਿਤ ਹੋ ਚੁੱਕਿਆਂ ਹਨ।

Other stories by Pratishtha Pandya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru