ಎದೆ ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆಯ ಬಗ್ಗೆ ವಿಚಾರಿಸಲು 18 ವರ್ಷದ ಸುಮಿತ್ (ಹೆಸರು ಬದಲಾಯಿಸಲಾಗಿದೆ) ಮೊದಲ ಬಾರಿಗೆ ಹರಿಯಾಣದ ರೋಹ್ಟಕ್ ನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಹೋದಾಗ, ಅವರಿಗೆ ಸುಟ್ಟ ಗಾಯದ ರೋಗಿಯಾಗಿ ದಾಖಲಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಲಾಯಿತು.
ಆದರೆ ಅದೊಂದು ಸುಳ್ಳಾಗಿತ್ತು. ಟ್ರಾನ್ಸ್‌ಜೆಂಡರ್ ಸಮುದಾಯವು ಭಾರತದಲ್ಲಿ ತಮ್ಮ ಜನ್ಮದತ್ತ ದೇಹದಿಂದ ತಾವು ಬಯಸಿದ ದೇಹಕ್ಕೆ ಪರಿವರ್ತನೆ ಹೊಂದಲು ಬಯಸಿದಲ್ಲಿ ಬಹಳಷ್ಟು ವೈದ್ಯಕೀಯ-ಕಾನೂನು ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಆದರೆ ಆ ಸುಳ್ಳು ಸಹ ಅಂದು ಕೆಲಸ ಮಾಡಿರಲಿಲ್ಲ.
ಸುಮಿತ್‌ಗೆ ಅಂತಿಮವಾಗಿ 'ಟಾಪ್ ಸರ್ಜರಿ' (ಸ್ತನವನ್ನು ತೆಗೆಸುವ ಶಸ್ತ್ರ ಚಿಕಿತ್ಸೆಗೆ ಈ ಹೆಸರಿದೆ) ಗೆ ಒಳಗಾಗಲು ಇನ್ನೂ ಎಂಟು ವರ್ಷಗಳ ಕಾಲ ದಾಖಲೆಗಳು, ಅಂತ್ಯವಿಲ್ಲದ ಮಾನಸಿಕ ಮೌಲ್ಯಮಾಪನಗಳು, ವೈದ್ಯಕೀಯ ಸಮಾಲೋಚನೆಗಳು ಎಂದು ಓಡಾಡಬೇಕಾಯಿತು. ಜೊತೆಗೆ ಸಾಲಗಳು ಸೇರಿದಂತೆ ಒಂದು ಲಕ್ಷ ರೂಪಾಯಿಯಷ್ಟು ಹಣ, ಹದಗೆಟ್ಟ ಕೌಟುಂಬಿಕ ಸಂಬಂಧಗಳು ಮತ್ತು ತನ್ನ ಸ್ತನಗಳ ಕುರಿತಾದ ಬೇಸರವೂ ಇತ್ತು. ಕೊನೆಗೆ ಅವರು ಸರ್ಜರಿ ಮಾಡಿಸಿಕೊಂಡಿದ್ದು ರೋಹ್ಟಕ್ ನಗರದಿಂದ 100 ಕಿಲೋಮೀಟರ್ ದೂರದ ಹಿಸ್ಸಾರ್ ಎನ್ನುವಲ್ಲಿ.
ಸರ್ಜರಿ ಮಾಡಿಸಿಕೊಂಡು ಒಂದೂವರೆ ವರ್ಷ ಕಳೆದ ನಂತರವೂ 26 ವರ್ಷದ ಸುಮಿತ್ ಸ್ತನವಿದ್ದ ಕಾಲದ ನಾಚಿಕೆ ಮತ್ತು ಆತಂಕವನ್ನು ಮರೆತಿಲ್ಲ. ಅವರು ಈಗಲೂ ನಡೆಯುವಾಗ ತೋಳುಗಳನ್ನು ಕುಗ್ಗಿಸಿಕೊಂಡು ನಡೆಯುತ್ತಾರೆ.
ಸುಮಿತ್ ರೀತಿಯಲ್ಲಿ ಭಾರತದಲ್ಲಿ ಎಷ್ಟು ಜನರು ತಮ್ಮ ಜನ್ಮದತ್ತ ಲಿಂಗಕ್ಕಿಂತ ಭಿನ್ನ ಲಿಂಗದೊಂದಿಗೆ ಗುರುತಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಇತ್ತೀಚಿನ ಗಣತಿ ಲಭ್ಯವಿಲ್ಲ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸಹಯೋಗದೊಂದಿಗೆ ನಡೆಸಿದ ಅಧ್ಯಯನದ ಪ್ರಕಾರ, 2017ರಲ್ಲಿ ಭಾರತದಲ್ಲಿ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ಸಂಖ್ಯೆ 4.88 ಲಕ್ಷ.
2014ರಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು. ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ "ತೃತೀಯ ಲಿಂಗಿ" ಜನರು ಮತ್ತು ಅವರ "ಸ್ವಯಂ-ಗುರುತಿಸಿಕೊಳ್ಳಲಿಚ್ಛಿಸುವ" ಲಿಂಗದೊಂದಿಗೆ ಗುರುತಿಸಿಕೊಳ್ಳುವ ಅವರ ಹಕ್ಕನ್ನು ಗುರುತಿಸಿತು ಮತ್ತು ಅವರಿಗೆ ಆರೋಗ್ಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರಗಳಿಗೆ ನಿರ್ದೇಶನ ನೀಡಿತು. ಐದು ವರ್ಷಗಳ ನಂತರ, ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019 ಲಿಂಗ-ದೃಢೀಕರಿಸುವ ಶಸ್ತ್ರಚಿಕಿತ್ಸೆಗಳು, ಹಾರ್ಮೋನ್ ಚಿಕಿತ್ಸೆ ಮತ್ತು ಮಾನಸಿಕ ಆರೋಗ್ಯ ಸೇವೆಗಳಂತಹ ಸಮಗ್ರ ಆರೋಗ್ಯ ಸೇವೆಗಳನ್ನು ಸಮುದಾಯಕ್ಕೆ ಒದಗಿಸುವಲ್ಲಿ ಸರ್ಕಾರಗಳ ಪಾತ್ರವನ್ನು ಮತ್ತೆ ಒತ್ತಿಹೇಳಿತು.









