ಅದು ಬೆಳಗ್ಗಿನ ಒಂಬತ್ತು ಗಂಟೆ, ಮುಂಬೈಯ ಆಜಾದ್ ಮೈದಾನದಲ್ಲಿ ವಾರಾಂತ್ಯದಲ್ಲಿ ಕ್ರಿಕೇಟ್ ಆಡಲು ಯುವಕರು ಸಿದ್ಧರಾಗುತ್ತಿದ್ದರು. ಮೈದಾನದ ತುಂಬಾ ಆಟ ಆಡುತ್ತಾ ಅವರು ಹಾಕುತ್ತಿದ್ದ ಗೆಲುವು ಸೋಲಿನ ಕೇಕೆ ಕೇಳಿಬರುತ್ತಿತ್ತು.
ಕೇವಲ 50 ಮೀಟರ್ ದೂರದಲ್ಲಿ ಇನ್ನೊಂದು 'ಆಟ' ನಡೆಯುತ್ತಿತ್ತು. ಇದರಲ್ಲಿ ಸೇರಿದ್ದ 5,000 ಮಂದಿ ಮೌನವಾಗಿ ಕುಳಿತಿದ್ದರು. ಇದು ಸುಮಾರು ಸಮಯದಿಂದ ನಡೆಯುತ್ತಿದೆ. ತಮ್ಮ ಹಕ್ಕನ್ನು ಪ್ರತಿಪಾದಿಸಲು ಸಾವಿರಾರು ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರು (ಆಶಾ) ಕಳೆದ ತಿಂಗಳು ಮುಂಬೈನ ಆಜಾದ್ ಮೈದಾನದಲ್ಲಿ ಪ್ರತಿಭಟನೆ ನಡೆಸಿದ್ದರು. ಫೆಬ್ರವರಿ 9 ರಂದು ಪ್ರಾರಂಭವಾದ ಈ ಆಂದೋಲನದ ಮೊದಲ ವಾರದಲ್ಲೇ 50 ಕ್ಕೂ ಹೆಚ್ಚು ಮಹಿಳಾ ಆರೋಗ್ಯ ಕಾರ್ಯಕರ್ತೆಯರು ಆಸ್ಪತ್ರೆಗೆ ದಾಖಲಾದರು.
ಬಿಡುವಿಲ್ಲದ ರಸ್ತೆಯನ್ನು ನೋಡುತ್ತಾ 30 ರ ಹರೆಯದ ಆಶಾ ಕಾರ್ಯಕರ್ತೆಯೊಬ್ಬರು ಮೈದಾನದಲ್ಲಿ ಕುಳಿತುಕೊಳ್ಳುತ್ತಾರೆ. ಅವರು ಭಯದಿಂದ ಸುತ್ತಮುತ್ತ ನೋಡುತ್ತಾರೆ, ಹಾದುಹೋಗುವ ಜನರು ತನ್ನ ಕಡೆ ನೋಡದಂತೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ತಕ್ಷಣ ಅವರ ಸುತ್ತ ಮಹಿಳೆಯರ ಗುಂಪೊಂದು ಬಂದು ದುಪ್ಪಟ್ಟಾ ಮತ್ತು ಹೊದಿಕೆಯಿಂದ ಮುಚ್ಚುವಾಗ, ಅವರು ತಮ್ಮ ಬಟ್ಟೆ ಬದಲಾಯಿಸುತ್ತಾರೆ.
ಕೆಲ ಗಂಟೆಗಳ ನಂತರ, ಊಟದ ಸಮಯದಲ್ಲಿ ಸುಡುವ ಮಧ್ಯಾಹ್ನದ ಬಿಸಿಲಿನಲ್ಲಿ ತನ್ನ ಸಹೋದ್ಯೋಗಿ ರೀಟಾ ಚಾವ್ರೆ ಅವರ ಸುತ್ತ ಕುಳಿತಿರುವ ಇತರ ಆಶಾಗಳ ಜೊತೆಗೆ ಸೇರಿಕೊಳ್ಳುತ್ತಾರೆ. ಪ್ರತಿಯೊಬ್ಬರೂ ಖಾಲಿ ಟಿಫಿನ್ ಬಾಕ್ಸ್‌ಗಳು, ಪ್ಲೇಟ್‌ಗಳು ಮತ್ತು ಬಾಕ್ಸಿನ ಮುಚ್ಚಳಗಳನ್ನು ಹಿಡಿದು ಕುಳಿತುಕೊಳ್ಳುತ್ತಾರೆ. 47 ವರ್ಷ ವಯಸ್ಸಿನ ರೀಟಾ ತಮ್ಮ ಮನೆಯಲ್ಲಿ ತಯಾರಿಸಿ ತಂದ ಊಟವನ್ನು ಎಲ್ಲರಿಗೂ ಬಡಿಸುವಾಗ ತಾಳ್ಮೆಯಿಂದ ತಮ್ಮ ಸರದಿಯಲ್ಲಿ ಕಾಯುತ್ತಾರೆ. "ನಾನು ಇಲ್ಲಿ ಪ್ರತಿಭಟನೆ ನಡೆಸುತ್ತಿರುವ ಸುಮಾರು 80-100 ಆಶಾ ಕಾರ್ಯಕರ್ತೆಯರಿಗೆ ಊಟ ನೀಡುತ್ತೇನೆ," ಎಂದು 17 ಇತರ ಆಶಾಗಳೊಂದಿಗೆ ಥಾಣೆ ಜಿಲ್ಲೆಯ ಟಿಸ್‌ಗಾಂವ್‌ನಿಂದ ಆಜಾದ್ ಮೈದಾನಕ್ಕೆ ಪ್ರತಿದಿನ ಸುಮಾರು ಎರಡು ಗಂಟೆಗಳ ಕಾಲ ಪ್ರಯಾಣಿಸಿ ಪ್ರತಿಭಟನೆಗೆ ಬಂದಿರುವ ರೀಟಾ ಹೇಳುತ್ತಾರೆ.
“ಯಾವುದೇ ಆಶಾ ಹಸಿವಿನಿಂದ ಬಳಲದಂತೆ ನೋಡಿಕೊಳ್ಳುತ್ತೇವೆ. ಆದರೆ ನಾವೂ ಅನಾರೋಗ್ಯಕ್ಕೆ ಒಳಗಾಗುತ್ತಿದ್ದೇವೆ. ಮತ್ತು ನಾವು ದಣಿದಿದ್ದೇವೆ,” ಎಂದು ಅವರು 2024ರ ಫೆಬ್ರವರಿ ತಿಂಗಳ ಕೊನೆಯಲ್ಲಿ ಪರಿಗೆ ಹೇಳುತ್ತಾರೆ.



















