“ಗುಲಾಂ ನಬಿ ಏನು ಮಾಡುತ್ತಿರುವೆ? ಹೋಗಿ ಮಲಗಿಕೋ! ನಿನ್ನ ಕಣ್ಣುಗಳನ್ನು ನೋಡು ಹೇಗಾಗಿವೆ.”
ಹಿಂದೆ ನಾನು ತಡರಾತ್ರಿಯವರೆಗೂ ಮರದ ಕೆತ್ತನೆ ಮಾಡುವುದನ್ನು ನೋಡಿ ಅಮ್ಮ ಹೀಗೆ ಬೈಯುತ್ತಿದ್ದರು. ಅವರು ಬೈದ ನಂತರವೂ ನಾನು ಕೆಲಸ ಮುಂದುವರಿಸುತ್ತಿದೆ. ನನ್ನ ಹಿಂದಿನ ಅನುಭವದ ಹಿಂದೆ ಅರವತ್ತು ವರ್ಷಗಳ ಶ್ರಮವಿದೆ. ನನ್ನ ಹೆಸರು ಗುಲಾಂನಬಿದಾರ್. ನಾನು ಕಾಶ್ಮೀರ ಶ್ರೀನಗರದ ಕಾಷ್ಠ ಶಿಲ್ಪಿ.
ನಾನು ಯಾವಾಗ ಹುಟ್ಟಿದ್ದು ಎನ್ನುವ ನಿಖರ ದಾಖಲೆಗಳಿಲ್ಲ ಆದರೆ ನನಗೀಗ 70 ಚಿಲ್ಲರೆ ವಯಸ್ಸಾಗಿದೆ ಹಾಗೂ ನನ್ನ ಇಡೀ ಬದುಕನ್ನು ಈ ನಗರದ ಮಲ್ಲಿಕ್ ಸಾಹೇಬ್ ಸಫಕಡಲ್ ಪ್ರದೇಶದಲ್ಲಿ ಕಳೆದಿದ್ದೇನೆ. ನಾನು ಓದಿದ್ದು ಇಲ್ಲೇ ಹತ್ತಿರದ ಖಾಸಗಿ ಶಾಲೆ ಎಂದರೆ. ನನ್ನ ಕುಟುಂಬದ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ಮೂರನೇ ತರಗತಿಗೆ ಶಾಲೆಯನ್ನು ಬಿಡಬೇಕಾಗಿ ಬಂತು. ನನ್ನ ತಂದೆ ಅಲೀ ಮೊಹಮದ್ ದಾರ್ ಪಕ್ಕದ ಅನಂತನಾಗ್ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ನನಗೆ ಹತ್ತು ವರ್ಷವಿರುವಾಗ ಅವರು ಶ್ರೀನಗರಕ್ಕೆ ಮರಳಿದರು.
ಊರಿಗೆ ಬಂದವರು ಕುಟುಂಬ ನಿರ್ವಹಣೆಗಾಗಿ ತರಕಾರಿ ಮತ್ತು ತಂಬಾಕು ವ್ಯಾಪಾರ ಮಾಡುತ್ತಿದ್ದರು ನನ್ನ ತಾಯಿ ಅಝಿ ಮತ್ತು ನಾವು 12 ಮಕ್ಕಳು ಕುಟುಂಬದಲ್ಲಿದ್ದೆವು. ಹಿರಿಯ ಮಗನಾದ ನಾನು ಮತ್ತು ನನ್ನ ತಮ್ಮ ಬಶೀರ್ ಅಹ್ಮದ್ ದಾರ್ ನಮ್ಮ ತಂದೆಗೆ ವ್ಯಾಪಾರದಲ್ಲಿ ಸಹಾಯ ಮಾಡುತ್ತಿದ್ದೇವೆ. ಹೆಚ್ಚು ಕೆಲಸವಿಲ್ಲದ ಸಮಯದಲ್ಲಿ ನಾವು ತಿರುಗಾಡಲು ಹೋಗುತ್ತಿದ್ದೆವು. ನನ್ನ ಮಾಮು [ತಾಯಿಯ ತಮ್ಮ] ಒಮ್ಮೆ ಈ ಕುರಿತು ಅಪ್ಪನ ಬಳಿ ದೂರು ಹೇಳಿದರು. ಇದಾದ ನಂತರ ಮಾಮು ನನ್ನನ್ನು ಮರದ ಕೆತ್ತನೆಯ ಕೆಲಸಕ್ಕೆ ಸೇರಿಸಲು ಸಲಹೆ ನೀಡಿದರು.














