ಪೂರ್ವಭಾರತದ ಈ ಕಡಲ ತೀರದಲ್ಲಿ ಆಗಷ್ಟೇ ಬೆಳಗಿನ ಜಾವದ 3 ಗಂಟೆಯಾಗುತ್ತಿತ್ತು. ರಾಮೋಲು ಲಕ್ಷ್ಮಯ್ಯ ಫ್ಲ್ಯಾಶ್ ಲೈಟ್ ಬಳಸಿ ಆಲಿವ್ ರಿಡ್ಲೆ ಆಮೆ ಮೊಟ್ಟೆಗಳನ್ನು ಹುಡುಕುತ್ತಿದ್ದಾರೆ. ಅವರ ಕೈಯಲ್ಲೊಂದು ಕೋಲು ಮತ್ತು ಬಕೆಟ್ ಹಿಡಿದಿದ್ದ ಅವರು ಜಲಾರಿಪೇಟಾದಲ್ಲಿರುವ ತನ್ನ ಮನೆ ಮತ್ತು ಆರ್ ಕೆ ಬೀಚ್ ನಡುವಿನ ಸಣ್ಣ, ಮರಳು ದಾರಿಯನ್ನು ನಿಧಾನವಾಗಿ ದಾಟತೊಡಗಿದರು.
ಹೆಣ್ಣು ಆಲಿವ್ ರಿಡ್ಲೆ ಆಮೆಗಳು ಮೊಟ್ಟೆಯಿಡುವ ಸಲುವಾಗಿ ಕಡಲ ತೀರಕ್ಕೆ ಬರುತ್ತವೆ. ವಿಶಾಖಪಟ್ಟಣದಲ್ಲಿನ ಮರಳಿನಿಂದ ಕೂಡಿದ ಇಳಿಜಾರು ಕಡಲ ತೀರ ಅವುಗಳಿಗೆ ಗೂಡು ಮಾಡಿ ಮೊಟ್ಟೆಯಿಡಲು ಪ್ರಶಸ್ತ ಸ್ಥಳವೆನ್ನಿಸಿಕೊಂಡಿದೆ. 1980ರ ದಶಕದಿಂದಲೂ ಅವು ಇಲ್ಲಿಗೆ ಬರುತ್ತಿವೆ. ಆದಾಗ್ಯೂ, ಇಲ್ಲಿಂದ ಉತ್ತರಕ್ಕೆ ಕೆಲವು ಕಿಲೋಮೀಟರ್ ದೂರದಲ್ಲಿರುವ ಒಡಿಶಾ ಕರಾವಳಿಯು ದೇಶದ ಅತಿದೊಡ್ಡ ಕಡಲಾಮೆಗಳ ಗೂಡು ಕಟ್ಟುವ ತಾಣವನ್ನು ಹೊಂದಿದೆ. ಹೆಣ್ಣು ಆಮೆಗಳು ಒಮ್ಮೆಗೆ 100-150 ಮೊಟ್ಟೆಗಳನ್ನು ಬಿಡುಗಡೆ ಮಾಡುತ್ತವೆ ಮತ್ತು ಅವುಗಳನ್ನು ಮರಳಿನ ಗುಂಡಿಗಳಲ್ಲಿ ಆಳವಾಗಿ ಹೂಳುತ್ತವೆ.
"ತಾಯಿ ಆಮೆ ಮೊಟ್ಟೆಯಿಟ್ಟ ಜಾಗದಲ್ಲಿ ಮರಳು ಸಡಿಲವಾಗಿರುತ್ತದೆ" ಎಂದು ಲಕ್ಷ್ಮಯ್ಯ ವಿವರಿಸುತ್ತಾರೆ. ಅಂದು ಲಕ್ಷ್ಮಯ್ಯ ಅವರೊಂದಿಗೆ ಜಲಾರಿ ಸಮುದಾಯದ (ಆಂಧ್ರಪ್ರದೇಶದಲ್ಲಿ ಇತರ ಹಿಂದುಳಿದ ವರ್ಗದಡಿ ಪಟ್ಟಿ ಮಾಡಲಾಗಿದೆ) ಮೀನುಗಾರರಾದ ಕರಿ ಜಲ್ಲಿಬಾಬು, ಪುಟ್ಟಿಯಪ್ಪನ ಯರ್ರಣ್ಣ ಮತ್ತು ಪುಲ್ಲಾ ಪೊಲಾರಾವ್ ಇದ್ದರು. ಕಡಲಾಮೆ ಸಂರಕ್ಷಣಾ ಯೋಜನೆಯ ಅಡಿಯಲ್ಲಿ ಆಲಿವ್ ರಿಡ್ಲೆ ಆಮೆ ಮೊಟ್ಟೆಗಳನ್ನು ಸಂರಕ್ಷಿಸುವ ಪ್ರಯತ್ನದ ಭಾಗವಾಗಿ 2023ರಲ್ಲಿ ಅವರು ಆಂಧ್ರಪ್ರದೇಶ ಅರಣ್ಯ ಇಲಾಖೆಯಲ್ಲಿ (ಎಪಿಎಫ್‌ಡಿ) ಕಾವಲುಗಾರರಾಗಿ ಅರೆಕಾಲಿಕ ಕೆಲಸವನ್ನು ವಹಿಸಿಕೊಂಡರು.
ಆಲಿವ್ ರಿಡ್ಲೆ ಆಮೆಗಳನ್ನು (ಲೆಪಿಡೋಚೆಲಿಸ್ ಒಲಿವೇಸಿಯಾ) ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (ಐಯುಸಿಎನ್) 'ದುರ್ಬಲ ಜಾತಿ' ಎಂದು ಪರಿಗಣಿಸಿ ಕೆಂಪು ಪಟ್ಟಿಯಡಿ ವರ್ಗೀಕರಿಸಿದೆ. ಮತ್ತು ಭಾರತೀಯ ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972 (ತಿದ್ದುಪಡಿ 1991) ರ ಶೆಡ್ಯೂಲ್ -1 ರ ಅಡಿಯಲ್ಲಿ ಅವುಗಳನ್ನು ಸಂರಕ್ಷಿಸಲಾಗಿದೆ.
ಕರಾವಳಿ ನಾಶ, "ಮುಖ್ಯವಾಗಿ ಅಭಿವೃದ್ಧಿಯ ಹೆಸರಿನಲ್ಲಿ ಅವು ಗೂಡುಕಟ್ಟುವ ಆವಾಸಸ್ಥಾನಗಳ ನಾಶ ಮತ್ತು ಹವಾಮಾನ ಬದಲಾವಣೆಯಿಂದಾಗಿ ಉಂಟಾಗುತ್ತಿರುವ ಸಮುದ್ರ ಆವಾಸಸ್ಥಾನಗಳ ನಷ್ಟದಂತಹ ಹಲವಾರು ಅಂಶಗಳಿಂದಾಗಿ ಆಮೆಗಳು ಅಪಾಯದಲ್ಲಿವೆ" ಎಂದು ವಿಶಾಖಪಟ್ಟಣಂನ ಕಂಬಲಕೊಂಡ ವನ್ಯಜೀವಿ ಅಭಯಾರಣ್ಯದ ಯೋಜನಾ ವಿಜ್ಞಾನಿ ಯಜ್ಞಪತಿ ಅದಾರಿ ಹೇಳುತ್ತಾರೆ. ಕಡಲಾಮೆಗಳನ್ನು ಅವುಗಳ ಮಾಂಸ ಮತ್ತು ಮೊಟ್ಟೆಗಳಿಗಾಗಿ ಬೇಟೆಯಾಡಲಾಗುತ್ತದೆ.
"ತಾಯಿ ಆಮೆ ಮೊಟ್ಟೆಗಳನ್ನು ಎಷ್ಟು ಆಳವಾಗಿ ಹೂಳಿದರೂ, ಅವುಗಳನ್ನು ಕಂಡುಹಿಡಿಯಲು ಸಾಧ್ಯವಿದೆ. ಜನರು ಅವುಗಳ ಮೇಲೆ ಕಾಲಿಡಬಹುದು, ಅಥವಾ ಅದಕ್ಕಿಂತಲೂ ಕೆಟ್ಟ ಸಂಗತಿಯಾಗಿ - ನಾಯಿಗಳು ಅವುಗಳನ್ನು ಹೊರತೆಗೆಯಬಹುದು" ಎಂದು ಮೊಟ್ಟೆಗಳನ್ನು ರಕ್ಷಿಸುವ ಅಗತ್ಯವನ್ನು ಒತ್ತಿಹೇಳುತ್ತಾ ಲಕ್ಷ್ಮಯ್ಯ ಹೇಳುತ್ತಾರೆ. "ಹ್ಯಾಚರಿಯಲ್ಲಿ ಅವು ಸುರಕ್ಷಿತವಾಗಿರುತ್ತವೆ" ಎಂದು 32 ವರ್ಷದ ಅವರು ಹೇಳುತ್ತಾರೆ.
ಈ ಕಾರಣಕ್ಕಾಗಿ ಲಕ್ಷ್ಮಯ್ಯನವರಂತಹ ಕಾವಲುಗಾರರು ಈ ಆಮೆಗಳ ಉಳಿವಿಗೆ ನಿರ್ಣಾಯಕರಾಗಿದ್ದಾರೆ. ಆಲಿವ್ ರಿಡ್ಲೆ ಆಮೆಗಳು ಅತ್ಯಂತ ಚಿಕ್ಕ ಸಮುದ್ರ ಆಮೆ ಜಾತಿಗಳಾಗಿವೆ ಮತ್ತು ಅವುಗಳ ಆಲಿವ್-ಹಸಿರು ಬಣ್ಣದ ಚಿಪ್ಪಿನಿಂದ ಆ ಹೆಸರನ್ನು ಪಡೆದುಕೊಂಡಿವೆ.
ಆಮೆ ಮೊಟ್ಟೆಗಳನ್ನು ಹುಡುಕಲು ಮತ್ತು ಅವುಗಳನ್ನು ಹ್ಯಾಚರಿಯಲ್ಲಿ ಇರಿಸಲು ಅವರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ, ಅವು ಮರಿಯಾದ ನಂತರ ಅವುಗಳನ್ನು ಮತ್ತೆ ಸಮುದ್ರಕ್ಕೆ ಬಿಡಲಾಗುತ್ತದೆ. ಆರ್‌ಕೆ ಬೀಚ್ ಹ್ಯಾಚರಿ ಆಂಧ್ರಪ್ರದೇಶದ ನಾಲ್ಕು ಹ್ಯಾಚರಿಗಳಲ್ಲಿ ಒಂದು- ಸಾಗರ್ ನಗರ, ಪೆಡನಗಮಯ್ಯಪಾಲೆಂ ಮತ್ತು ಚೆಪಲುಪ್ಪಡ ಇತರವು.
ಸಾಗರ್ ನಗರ ಹ್ಯಾಚರಿಯಲ್ಲಿನ ಕಾವಲುಗಾರೆಲ್ಲರೂ ಮೀನುಗಾರರಲ್ಲ - ಕೆಲವರು ಹೆಚ್ಚುವರಿ ಆದಾಯಕ್ಕಾಗಿ ಈ ಅರೆಕಾಲಿಕ ಕೆಲಸವನ್ನು ಕೈಗೆತ್ತಿಕೊಂಡಿರುವ ವಲಸೆ ಕಾರ್ಮಿಕರು. ರಘು ಒಬ್ಬ ಚಾಲಕನಾಗಿದ್ದು, ಬದುಕು ನಡೆಸಲು ಒಂದಷ್ಟು ಹೆಚ್ಚು ಸಂಪಾದಿಸುವ ಸಲುವಾಗಿ ಈ ಕೆಲಸಕ್ಕೆ ಸೇರಿದ್ದಾರೆ. ರಘು ಅವರು 22 ವರ್ಷದವರಿದ್ದಾಗ ಶ್ರೀಕಾಕುಳಂನಿಂದ ವಿಶಾಖಪಟ್ಟಣಂಗೆ ವಲಸೆ ಬಂದರು. ಅವರು ಸ್ವಂತ ವಾಹನವನ್ನು ಹೊಂದಿಲ್ಲ ಆದರೆ ಚಾಲಕನಾಗಿ ಕೆಲಸ ಮಾಡುತ್ತಾರೆ ಮತ್ತು ಆ ಮೂಲಕ 7,000 ರೂ.ಗಳನ್ನು ಗಳಿಸುತ್ತಾರೆ.
ಈ ಅರೆಕಾಲಿಕ ಕೆಲಸದಿಂದಾಗಿ ನನಗೆ ಸಹಾಯವಾಗುತ್ತಿದೆ: "ಈ ಕೆಲಸದಿಂದಾಗಿ ಊರಿನಲ್ಲಿರುವ ಹೆತ್ತವರಿಗೆ 5,000-6,000 [ರೂಪಾಯಿಗಳನ್ನು] ಕಳುಹಿಸಲು ಸಾಧ್ಯವಾಗುತ್ತಿದೆ."
ಪ್ರತಿ ವರ್ಷ ಡಿಸೆಂಬರ್ ತಿಂಗಳಿನಿಂದ ಮೇ ತನಕ, ಕಾವಲುಗಾರರು ಆರ್ ಕೆ ಬೀಚ್ ಉದ್ದಕ್ಕೂ ಏಳೆಂಟು ಕಿಲೋಮೀಟರ್ ದೂರವನ್ನು ಕ್ರಮಿಸುತ್ತಾರೆ, ಮೊಟ್ಟೆಗಳನ್ನು ಹುಡುಕಲು ಪ್ರತಿ ಕೆಲವು ನಿಮಿಷಗಳಿಗೊಮ್ಮೆ ನಿಲ್ಲುತ್ತಾರೆ. ಭಾರತದಲ್ಲಿ ಆಲಿವ್ ರಿಡ್ಲೆ ಆಮೆಗಳಿಗೆ ಗೂಡುಕಟ್ಟುವ ಕಾಲವು ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಮೇ ತನಕ ಇರುತ್ತದೆ, ಆದರೆ ಗರಿಷ್ಠ ಸಂಖ್ಯೆಯ ಮೊಟ್ಟೆಗಳು ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಕಂಡುಬರುತ್ತವೆ.
“ಕೆಲವೊಮ್ಮೆ ತಾಯಿ ಆಮೆಯ ಹೆಜ್ಜೆಗುರುತುಗಳ್ನು ನೋಡುತ್ತೇವೆ. ಇನ್ನೂ ಕೆಲವೊಮ್ಮೆ ತಾಯಿ [ಆಮೆ]ಯೇ ಕಾಣಸಿಗುತ್ತದೆ” ಎನ್ನುತ್ತಾರೆ ಜಲ್ಲಿ ಬಾಬು.
ಒಂದು ವೇಳೆ ದಾರಿಯಲ್ಲಿ ಮೊಟ್ಟೆ ದೊರೆತರೆ, ಅವುಗಳನ್ನುಅಲ್ಲಿಯ ಒಂದಷ್ಟು ಮರಳಿನೊಂದಿಗೆ ಎಚ್ಚರಿಕೆಯಿಂದ ಇರಿಸಲಾಗುತ್ತದೆ. ಈ ಮರಳನ್ನು ಹ್ಯಾಚರಿಯಲ್ಲಿ ಮತ್ತೆ ಮೊಟ್ಟೆ ಮುಚ್ಚಿಡಲು ಬಳಸಲಾಗುತ್ತದೆ.
ಅವರು ದೊರೆತ ಮೊಟ್ಟೆಗಳ ಸಂಖ್ಯೆ, ಅವರು ಮರಿಯಾಗಬಹುದಾದ ಅಂದಾಜು ದಿನಾಂಕವನ್ನು ಬರೆದು ಮೊಟ್ಟೆಯನ್ನು ಮುಚ್ಚಿಟ್ಟ ಸ್ಥಳದಲ್ಲಿ ಒಂದು ಕೋಲನ್ನು ನೆಟ್ಟು ಅದಕ್ಕೆ ಅಂಟಿಸಿ ಇಡುತ್ತಾರೆ. ಇದು ಅವು ಮರಿಯಾಗಬಹುದಾದ ಸಮಯವನ್ನು ಟ್ರ್ಯಾಕ್ ಮಾಡಲು ಸಹಾಯವಾಗುತ್ತದೆ. ಸಾಮಾನ್ಯವಾಗಿ ಒಂದು ಮೊಟ್ಟೆ ಮರಿಯಾಗಲು 45-60 ದಿನಗಳು ಬೇಕಾಗುತ್ತವೆ.
ಕಾವಲುಗಾರರು ಬೆಳಿಗ್ಗೆ 9 ಗಂಟೆಯವರೆಗೆ ಹ್ಯಾಚರಿಯಲ್ಲಿ ಇದ್ದು ನಂತರ ತಮ್ಮ ಮುಖ್ಯ ಆದಾಯದ ಮೂಲವಾದ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳುತ್ತಾರೆ. ಅವರ ಈ ಸಂರಕ್ಷಣಾ ಕಾರ್ಯಗಳಿಗಾಗಿ ತಿಂಗಳಿಗೆ 10,000 ರೂ. ವೇತನ ನೀಡಲಾಗುತ್ತದೆ. 2021-22ರವರೆಗೆ ಈ ಕೆಲಸಕ್ಕಾಗಿ 5,000 ರೂ. ನೀಡಲಾಗುತ್ತಿತ್ತು. “ಈ ಕೆಲಸದಿಂದ ಸಿಗುವ ಹಣವು ನಮ್ಮ ಪಾಲಿಗೆ ಉಪಯುಕ್ತವಾಗಿದೆ” ಎನ್ನುತ್ತಾರೆ ಜಲ್ಲಿಬಾಬು.
“ಏಪ್ರಿಲ್ 15ರಿಂದ ಜೂನ್ 14ರವರೆಗೆ ಮೀನುಗಳ ಸಂತಾನೋತ್ಪತ್ತಿ ಸಮಯವೆಂದು ಮೀನುಗಾರಿಕೆಗೆ ರಜಾ ನೀಡಲಾಗುತ್ತದೆ. ಅಂತಹ ಸಮಯದಲ್ಲಿ ಈ ಕೆಲಸದಿಂದ ಸಿಗುವ ಸಂಪಾದನೆ ನಮಗೆ ನಿಜಕ್ಕೂ ಸಹಾಯವಾಗಿ ಒದಗುತ್ತದೆ. ಎಂದು ಲಕ್ಷ್ಮಯ್ಯ ಹೇಳುತ್ತಾರೆ. ಆದರೆ ಈ ತಿಂಗಳುಗಳಲ್ಲಿ ಅವರಿಗೆ ಸಂಬಳ ಬಂದಿರಲಿಲ್ಲ. ಜೂನ್ ತಿಂಗಳಿನಲ್ಲಿ ಪರಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಅವರಿಗೆ ಮೊದಲ ಮೂರು ತಿಂಗಳುಗಳಾದ ಡಿಸೆಂಬರ್, ಜನವರಿ ಮತ್ತು ಫೆಬ್ರವರಿಯ ಬಾಕಿಯನ್ನು ಮಾತ್ರವೇ ಪಾವತಿ ಮಾಡಲಾಗಿತ್ತು.
ಮೀನುಗಾರಿಕೆಗೆ ನಿಷೇಧವಿರುವ ಸಮಯದಲ್ಲಿ ಅವರಿಗೆ ಸಂಪಾದನೆಯಿರುವುದಿಲ್ಲ. “ಆ ಸಮಯದಲ್ಲಿ ಹೆಚ್ಚಾಗಿ ನಾವು ನಿರ್ಮಾಣ ಸ್ಥಳಗಳಲ್ಲಿ ಹಾಗೂ ಇತರೆಡೆ ಯಾವುದಾದರೂ ಕೆಲಸ ಮಾಡುತ್ತೇವೆ. ಈ ಕೆಲಸದಿಂದ ಸಿಗುವ ಹಣ ನಮ್ಮ ಪಾಲಿಗೆ ಬಹಳ ಉಪಯುಕ್ತವಾದದ್ದು. ಉಳಿದ ಹಣ ಆದಷ್ಟು ಬೇಗ ಸಿಗುವ ಭರವಸೆಯಿದೆ” ಎಂದು ಲಕ್ಷ್ಮಯ್ಯ ಜೂನ್ ತಿಂಗಳಿನಲ್ಲಿ ಹೇಳಿದ್ದರು.
ಅವರಲ್ಲಿ ಕೆಲವರಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಹಣ ದೊರಕಿದರೆ, ಇನ್ನೂ ಕೆಲವರಿಗೆ ನಿಷೇದ ಕೊನೆಗೊಂಡ ಒಂದು ತಿಂಗಳ ನಂತರ ಎಂದರೆ ಆಗಸ್ಟ್ ತಿಂಗಳಿನಲ್ಲಿ ದೊರೆಯಿತು.
ಆಮೆಗಳು ಮರಿಯಾದ ನಂತರದ ಕೆಲಸ ನನಗೆ ಬಹಳ ಪ್ರಿಯವಾದುದು ಎನ್ನುತ್ತಾರೆ ರಘು. ಕಾವಲುಗಾರರು ಪುಟ್ಟ ಮರಿಗಳನ್ನು ಬುಟ್ಟಾ (ಬುಟ್ಟಿ) ಯಲ್ಲಿ ಇರಿಸಿಕೊಂಡು ಅವುಗಳನ್ನು ಕಡಲಿಗೆ ಬಿಡುತ್ತಾರೆ,
“ಅವು ತಮ್ಮ ಪುಟ್ಟ ಕಾಲುಗಳಿಂದ ಮರಳನ್ನು ಬೇಗ ಬೇಗನೆ ಅಗೆದು ಕಡಲಿನತ್ತ ಓಡುತ್ತವೆ. ಅವು ಸಮುದ್ರವನ್ನು ತಲುಪುವ ತನಕವೂ ನಿಲ್ಲುವುದಿಲ್ಲ. ನೀರಿನ ಬಳಿ ಬರುತ್ತಿದ್ದಂತೆ ಕಡಲ ಅಲೆಗಳು ಆ ಪುಟ್ಟ ಮರಿಗಳನ್ನು ತನ್ನ ಮಡಿಲಿಗೆ ಕರೆದುಕೊಳ್ಳುತ್ತವೆ” ಎಂದು ಅವರು ಹೇಳುತ್ತಾರೆ.
ಈ ವರ್ಷದ ಜೂನ್ ತಿಂಗಳಿನಲ್ಲಿ ಕೊನೆಯ ಹಂತದ ಮೊಟ್ಟೆಗಳು ಹೊರಬಂದವು. ಎಪಿಎಫ್‌ಡಿ ಪ್ರಕಾರ, ರಾಜ್ಯದ ಎಲ್ಲಾ ನಾಲ್ಕು ಹ್ಯಾಚರಿಗಳಲ್ಲಿನ 21 ಗಾರ್ಡುಗಳು, 46,754 ಮೊಟ್ಟೆಗಳನ್ನು ಸಂಗ್ರಹಿಸಿ 37,630 ಮರಿಗಳನ್ನು ಸಮುದ್ರಕ್ಕೆ ಬಿಡುಗಡೆ ಮಾಡಿದ್ದಾರೆ. ಉಳಿದ 5,655 ಮೊಟ್ಟೆಗಳು ಮರಿಯಾಗಲಿಲ್ಲ.
“ಬಹಳಷ್ಟು ಮೊಟ್ಟೆಗಳು 2023ರ ಮಾರ್ಚಿಯಲ್ಲಿ ಬಂದ ಭಾರೀ ಮಳೆಗೆ ನಾಶಗೊಂಡವು. ಇದು ನಿಜಕ್ಕೂ ನೋವಿನ ಸಂಗತಿ. ಮೇ ತಿಂಗಳಲ್ಲಿ ಮರಿಗಳು ಹೊರಬಂದಾಗ ಅವುಗಳ ಮೈಮೇಲೆ ಒಡೆದ ಮೊಟ್ಟೆಯ ಚೂರುಗಳಿದ್ದವು” ಎನ್ನುತ್ತಾರೆ ಲಕ್ಷ್ಮಯ್ಯ.
ಮರಿಗಳ ಮನಸ್ಸಿನಲ್ಲಿ ತಾವು ಹುಟ್ಟಿದ ಸ್ಥಳ ಅಚ್ಚೊತ್ತಿರುತ್ತದೆ ಎನ್ನುತ್ತಾರೆ ಆದಾರಿ. 5 ವರ್ಷಕ್ಕೆ ಲೈಂಗಿಕ ಪ್ರಬುದ್ಧತೆಯನ್ನು ಹೊಂದುವ ಹೆಣ್ಣು ಆಮೆ ಮೊಟ್ಟೆಯಿಡಲು ತಾನು ಹುಟ್ಟಿದ ಕಡಲ ತೀರವನ್ನೇ ಮತ್ತೆ ಹುಡುಕಿಕೊಂಡು ಬರುತ್ತದೆ.
“ಈ ಕಾರ್ಯದ ಭಾಗವಾಗಿರುವುದು ನನಗೆ ಸಂತಸ ತಂದಿದೆ. ಈ ಆಮೆ ಮೊಟ್ಟೆಗಳು ಬಹಳ ಸೂಕ್ಷ್ಮ ಮತ್ತು ಅವುಗಳ ರಕ್ಷಣೆ ಬಹಳ ಅಗತ್ಯವಾದುದು ಎನ್ನುವುದು ನನಗೆ ಅರ್ಥವಾಗಿದೆ” ಎನ್ನುತ್ತಾರೆ ಲಕ್ಷ್ಮಯ್ಯ.
ಇದು ರಂಗ್‌ದೇ ಅನುದಾನ ಬೆಂಬಲಿತ ವರದಿ.
ಅನುವಾದ: ಶಂಕರ. ಎನ್. ಕೆಂಚನೂರು