ಸರಸ್ವತಿ ಬಾವ್ರಿಗೆ ಭಾರೀ ನಷ್ಟವಾಗಿದೆ.
ಇವಳ ಸಬೂಜ್ ಸಾಥಿ ಸೈಕಲ್ ಕಳವಾದ ಮೇಲೆ ಶಾಲೆಗೆ ಹೋಗುವುದೇ ದೊಡ್ಡ ಸವಾಲಾಗಿ ಹೋಗಿದೆ. ಸರ್ಕಾರಿ ಶಾಲೆಗಳ 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ನೀಡುವ ಈ ಸುಂದರವಾದ ಯಂತ್ರವನ್ನು ಪಡೆದುಕೊಂಡ ದಿನವನ್ನು ಸರಸ್ವತಿ ನೆನಪಿಸಿಕೊಳ್ಳುತ್ತಾಳೆ. ಓಹ್! ಸೂರ್ಯನ ಬೆಳಕಿನಡಿ ಅದು ಹೊಳೆಯುತ್ತಿತ್ತು!
ಇಂದು ಒಂದು ನಂಬಿಕೆಯನ್ನು ಇಟ್ಟುಕೊಂಡು ಹೊಸ ಸೈಕಲ್‌ಗಾಗಿ ಮನವಿ ಸಲ್ಲಿಸಲು ಗ್ರಾಮಪ್ರಧಾನರ ಬಳಿಗೆ ಬಂದಿದ್ದಾಳೆ. "ಸೈಕಲ್ ತೋ ಪೇ ಜಬಿ ರೆ ಚುರಿ, ಕಿಂತು ತೋರ್ ಇಸ್ಕುಲ್-ತಾ ಅರ್ ಕೊಡಿನ್ ಥಕ್ಬೆ ಸೇಟಾ ದ್ಯಾಖ್ ಅಗೇ [ಮಗೂ, ನಿಂಗೆ ಸೈಕಲ್ ಏನೋ ಸಿಗಬಹುದು, ಆದರೆ ನಿನ್ನ ಶಾಲೆ ಹೆಚ್ಚು ಕಾಲ ಇಲ್ಲಿ ಇರುವುದಿಲ್ಲ]," ಎಂದು ಸರಪಂಚರು ಭುಜ ತಟ್ಟುತ್ತಾ, ಮುಗುಳು ನಗುತ್ತಾ ಹೇಳಿದರು. ಇದನ್ನು ಕೇಳಿ ಸರಸ್ವತಿಯ ಪಾದದ ಕೆಳಗಿನ ನೆಲ ಅದುರಿ ಹೋದಂತೆ ಅನ್ನಿಸಿತು. ಗ್ರಾಮಪ್ರಧಾನರ ಮಾತಿನ ಅರ್ಥವಾದರೂ ಏನು? ಶಾಲೆಗೆ ಹೋಗಲು ಪ್ರತಿದಿನ ಅವಳು 5 ಕಿಲೋಮೀಟರ್ ಸೈಕಲ್ ತುಳಿಯಬೇಕು. ಈಗ ಇಲ್ಲಿ ಶಾಲೆ ಇಲ್ಲವಾದರೆ, ಮುಂದೆ ಹತ್ತಿಪ್ಪತ್ತು ಕಿಲೋ ಮೀಟರ್ ಅಥವಾ ಅದಕ್ಕಿಂತಲೂ ಹೆಚ್ಚು ದೂರ ಸೈಕಲ್ ತುಳಿದು ಹೋಗಬೇಕಾಗುತ್ತದೆ, ಅಲ್ಲಿಗೆ ಎಲ್ಲವೂ ಮುಗಿದಂತೆ. ಕನ್ಯಾಶ್ರೀ ಯೋಜನೆಯಲ್ಲಿ ವರ್ಷಕ್ಕೆ ಒಂದು ಸಾವಿರ ರೂಪಾಯಿ ಬರುತ್ತದೆ. ಆದರೆ ತನಗೆ ಮದುವೆಯಾಗಲು ಒತ್ತಾಯಿಸುತ್ತಿರುವ ತನ್ನ ತಂದೆಯೊಂದಿಗೆ ಹೋರಾಡಲು ಆ ಹಣ ಸಾಕಾಗುವುದಿಲ್ಲ.
ಸೈಕಲ್
ಶಾಲೆಗೆ ಹೊರಟಳು ಪುಟ್ಟಿ ಶಾಲೆಗೆ ಹೊರಟಳು
ಸರ್ಕಾರಿ ಸೈಕಲ್ಲನ್ನೇರಿ ʼಮೊಹುಲ್ ದಾಟುತ್ತಾ..
ಬಲಶಾಲಿ ಉಕ್ಕಿನ ನೇಗಿಲಿನ ಹಾಗೆ
ಈಗ ಬಾಬೂಗಳಿಗೆ ಬೇಕಂತೆ ಈ ಭೂಮಿ
ಹಾಗಿದ್ದರೆ ಈ ಶಾಲೆ ಮುಚ್ಚಿ ಹೋಗಲಿದೆಯೇ?
ಯಾಕೆ ಪುಟ್ಟಿ ನೀನು ಇಷ್ಟು ಬೇಸರದಲ್ಲಿರುವೆ?


