ಸೆಂಟ್ರಲ್ ಮುಂಬೈನಿಂದ ಸುಮಾರು 95 ಕಿಲೋಮೀಟರ್ ದೂರದಲ್ಲಿರುವ ಥಾಣೆ ಜಿಲ್ಲೆಯ ನಿಂಬಾವಳಿ ಗ್ರಾಮದ ಸಪ್ರಿಯಾ ಬೆಟ್ಟದ ತಪ್ಪಲಿನಲ್ಲಿ ನಮ್ಮ ಗಾರೆಲ್ಪಾಡವಿದೆ. ವಾರ್ಲಿ ಆದಿವಾಸಿಗಳ ಈ ಸಣ್ಣ ಕುಗ್ರಾಮದಲ್ಲಿ ಕೇವಲ 20-25 ಬೆರಳೆಣಿಕೆಯಷ್ಟು ಮನೆಗಳಿವೆ.
ಪ್ರತಿ ವರ್ಷದಂತೆ ಈ ವರ್ಷವೂ ದೀಪಾವಳಿ ಹಬ್ಬವನ್ನು ತನ್ನದೇ ಆದ ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಿದೆವು. ಈ ತಿಂಗಳ ಆರಂಭದಲ್ಲಿ ಎಲ್ಲರೂ ಹಬ್ಬದ ತಯಾರಿಯಲ್ಲಿದ್ದರು.
ವಾಘಬರ್ಸಿ, ಬಾರ್ಕಿ ತಿವ್ಲಿ, ಮೋತಿ ತಿವ್ಲಿ ಮತ್ತು ಬಲಿಪ್ರತಿಪಾಡವು ನಮ್ಮ ಸಮುದಾಯದ ನಾಲ್ಕು ಮುಖ್ಯ ದೀಪಾವಳಿಯ ದಿನಗಳು. ಈ ವರ್ಷ ನವೆಂಬರ್ 5ರಿಂದ 8ರವರೆಗೆ ನಾವು ಈ ಹಬ್ಬಗಳನ್ನು ಆಚರಿಸಿದ್ದೇವೆ.
ವಾರ್ಲಿಗಳಾದ ನಾವು ಹುಲಿಯನ್ನು ದೇವರೆಂದು ನಂಬಿ, ವಾಘಬರ್ಸಿಯಲ್ಲಿ ಪ್ರಾರ್ಥಿಸುತ್ತೇವೆ. ಆದಿವಾಸಿ ಪಾಡಗಳು ಸಾಮಾನ್ಯವಾಗಿ ಕಾಡಿನಲ್ಲಿರುತ್ತವೆ. ಹಿಂದೆಯಿಂದಲೂ ವಾರ್ಲಿಗಳು ಕಾಡನ್ನೇ ಅವಲಂಬಿಸಿ ತಮ್ಮ ಬದುಕನ್ನು ಕಟ್ಟಿಕೊಂಡವರು. ಆಗಲೂ ಈಗಿನಂತೆ ಅನೇಕರು ತಮ್ಮ ಜಾನುವಾರುಗಳನ್ನು ಕಾಡಿಗೆ ಮೇಯಿಸಲು ಕರೆದುಕೊಂಡು ಹೋಗುತ್ತಿದ್ದರು. ಆಗ ತಮ್ಮ ಮೇಲೆ ಹುಲಿ ದಾಳಿಯಾಗದಂತೆ ಹುಲಿಯನ್ನು ಪ್ರಾರ್ಥಿಸುತ್ತಿದ್ದರು. ಇದು ಭಯದಿಂದ ಹುಟ್ಟಿದ ಗೌರವ ಭಾವ.
ಸೆಂಟ್ರಲ್ ಮುಂಬೈನಿಂದ ಸುಮಾರು 95 ಕಿಲೋಮೀಟರ್ ದೂರದಲ್ಲಿರುವ ಥಾಣೆ ಜಿಲ್ಲೆಯ ನಿಂಬಾವಳಿ ಗ್ರಾಮದ ಸಪ್ರಿಯಾ ಬೆಟ್ಟದ ತಪ್ಪಲಿನಲ್ಲಿ ನಮ್ಮ ಗಾರೆಲ್ಪಾಡವಿದೆ. ಈ ವರ್ಷವೂ ನಮ್ಮ ಪಾಡ ತನ್ನದೇ ಆದ ಸಾಂಪ್ರದಾಯಿಕ ರೀತಿಯಲ್ಲಿ ದೀಪಾವಳಿಯನ್ನು ಆಚರಿಸಿತು
ಗಾವೋದೇವಿ ದೇವಸ್ಥಾನದಲ್ಲಿರುವ ಮರದ ಹಲಗೆಯೊಂದರ ಮಧ್ಯದಲ್ಲಿ ಹುಲಿ ಆಕೃತಿಯನ್ನು ಕೆತ್ತಲಾಗಿದೆ. ಹಳ್ಳಿಗರು ತೆಂಗಿನಕಾಯಿ ಒಡೆದು, ಅಗರಬತ್ತಿ ಹಚ್ಚಿ ಅದನ್ನು ದೇವರೆಂದು ಪೂಜಿಸುತ್ತಾರೆ. ಪಾಡದ ಸಮೀಪ ಇರುವ ಕಾಡಿನ ಸ್ವಲ್ಪ ದೂರದಲ್ಲಿ ಇರುವ ಸಿಂಧೂರ ಲೇಪಿತ ದೊಡ್ಡ ಕಲ್ಲೇ ನಮ್ಮ ವಾಘಾಯ (ಹುಲಿ) ದೇವಾಲಯ.
ಬಾರ್ಕಿ ತಿವಿಲಿ (‘ಸಣ್ಣ ಹಣತೆʼ) ದಿನದಂದು ನನ್ನ ತಾಯಿ ಪ್ರಮೀಳಾ ಕಾಡಿಗೆ ಹೋಗಿ ಸ್ವಲ್ಪ ಚಿರೋಟಿಯನ್ನು ತರುತ್ತಾರೆ. 46 ವರ್ಷ ಪ್ರಾಯದ ನನ್ನ ತಾಯಿ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಗೆ, ಕಪ್ಪು ಬೆಲ್ಲದಿಂದ ವೈನ್ ತಯಾರಿಸಿ ಮಾರುತ್ತಿದ್ದರು. ಆದರೆ ಈಗ ನಮ್ಮದೇ ಕಾಡು ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಅವರು ಸೌತೆಯ ಪ್ರಬೇಧಕ್ಕೆ ಸೇರಿದ ಚಿರೋಟಿ ಎಂಬ ಸಣ್ಣ ಮತ್ತು ಕಹಿಯಾದ ಕಾಡು ಹಣ್ಣನ್ನು ಎರಡು ಹೋಳಾಗಿ ಕತ್ತರಿಸಿ, ಒಳಗಿರುವುದನ್ನು ತೆಗೆದು ತಿರುಳನ್ನು ಸಣ್ಣ ಹಣತೆಯಂತೆ ಮಾಡಿ ದೀಪ ಹಚ್ಚಲು ಬಳಸುತ್ತಾರೆ.
ಹಸುವಿನ ಸಗಣಿ ಮತ್ತು ಮಣ್ಣನ್ನು ಬೆರೆಸಿ ಮಾಡಿದ ಬೋವಾಲಾ ಎಂಬ ವೃತ್ತಾಕಾರದ ದೀಪದ ಹಿಡಿಕೆಯೊಂದನ್ನು ಗೋಡೆಯ ಮೇಲೆ ಅಂಟಿಸುತ್ತಾರೆ. ಈ ಹಿಡಿಕೆಯನ್ನು ಚೆಂಡುಹೂವುಗಳಿಂದ ಅಲಂಕರಿಸುತ್ತಾರೆ. ಸಂಜೆ ಹೊತ್ತು ದೀಪವನ್ನು ಆ ಬೌಲ್‌ನಂತಿರುವ ಹಿಡಿಕೆಯ ಮೇಲೆ ಇರಿಸಿ ಉರಿಸುತ್ತಾರೆ. ಇದನ್ನು ಎತ್ತರದಲ್ಲಿ ಇರಿಸಿರುವುದರಿಂದ ಈ ದೀಪವು ಇಡೀ ಜಾಗವನ್ನು ಬೆಳಗಿಸುತ್ತದೆ.
ಹಿಂದೆ ನಮ್ಮ ಪಾಡದ ಎಲ್ಲಾ ಮನೆಗಳನ್ನು ಕರವಿ ಕಡ್ಡಿ ಮತ್ತು ಮರಮುಟ್ಟಿಗಳಿಂದ ನಿರ್ಮಿಸುತ್ತಿದ್ದರು. ಮೇಲ್ಛಾವಣಿ ಮೇಲೆ ಹುಲ್ಲನ್ನು ಹೊದಿಸುತ್ತಿದ್ದರು. ಆ ಸಂದರ್ಭದಲ್ಲಿ, ಈ ಸಗಣಿ ಬೋವಲವು ಗುಡಿಸಲಿಗೆ ಬೆಂಕಿ ಬೀಳದಂತೆ ರಕ್ಷಿಸುತ್ತದೆ. (2010 ರ ಆಸುಪಾಸಿನಲ್ಲಿ ನಮ್ಮ ಗ್ರಾಮದ ಕುಟುಂಬಗಳು ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ನಿರ್ಮಿಸಲಾದ ಸಿಮೆಂಟ್ ಮತ್ತು ಇಟ್ಟಿಗೆ ಮನೆಗಳನ್ನು ಕಂಡವು.)
ಗ್ರಾಮದ ಮನೆಗಳ ಮುಂಭಾಗದ ಗೋಡೆಗಳನ್ನು ಬಾರ್ಕಿ ಮತ್ತು ಮೋತಿ ತಿವ್ಲಿಗಳಿಂದ ('ದೊಡ್ಡ ದೀಪ) ಬೆಳಗುತ್ತಾರೆ. ಈ ಎರಡೂ ರಾತ್ರಿಗಳಲ್ಲಿ, ತಿವ್ಳಿಗಳ ಬೆಳಕು ಪಾಡದ ಅಂಧಕಾರವನ್ನು ದೂರ ಮಾಡುತ್ತದೆ. ದನದ ಕೊಟ್ಟಿಗೆ, ಶೆಂಕಾಯ್ (ಸಗಣಿ ಸಂಗ್ರಹದ ಕೋಣೆ) ಮತ್ತು ಬಾವಿಯ ಕಟ್ಟೆ – ಎಲ್ಲೆಲ್ಲೂ ನಂದಾದೀಪಗಳು ತಂಗಾಳಿಯಲ್ಲಿ ಉರಿಯುತ್ತಿರುವುದನ್ನು ನೋಡಬಹುದು.
ಬಲಿಪ್ರತಿಪಾಡದಂದು ಮುಂಜಾನೆಯೇ ಹಬ್ಬದ ಸಡಗರ ಆರಂಭವಾಗುತ್ತವೆ. ಅದು 'ಡಂಬ್' ಚೇಷ್ಟೆಯ ದಿನವಾಗಿತ್ತು. ಬೀಡಿಯ ತುಂಡೊಂದನ್ನು ಉರಿಸಿ ಗೊತ್ತಾಗದಂತೆ, ಮೆಲ್ಲಗೆ ಕುಟುಂಬ ಸದಸ್ಯರೊಬ್ಬರಿಗೆ ಬಿಸಿಮುಟ್ಟಿಸಿ ಚೇಷ್ಟೆ ಮಾಡುತ್ತಾರೆ. “ಎಲ್ಲರೂ ಬೇಗ ಏಳಬೇಕು, ಬೇಗ ಬೇಗ ಸ್ನಾನ ಮುಗಿಸಬೇಕು. ಹಾಗಾಗಿ ಮಲಗಿರುವವರನ್ನು ಎಬ್ಬಿಸಲು ಡಂಬ್ ಮಾಡುತ್ತಾರೆ,” ಎಂದು 42 ವರ್ಷ ಪ್ರಾಯದ ರಾಮ್ ಪರೇದ್ ಹೇಳುತ್ತಾರೆ. ಅವರು ನನ್ನ ಚಿಕ್ಕಪ್ಪ. ಅವರ ಕುಟುಂಬ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಿತ್ತು; ಈಗ ಅವರು ಗುತ್ತಿಗೆ ಕಾರ್ಮಿಕರಾಗಿ, ಮಳೆಗಾಲದಲ್ಲಿ ಕಾಡು ಭೂಮಿಯಲ್ಲಿ ಕೃಷಿ ಮಾಡುತ್ತಾರೆ.
ಬಲಿಪ್ರತಿಪಾಡದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆ ಮುಂಭಾಗದ ಅಂಗಳಕ್ಕೆ ಸಗಣಿ ಸಾರಿಸಿ, ದನದ ಕೊಟ್ಟಿಗೆಗಳನ್ನು ಸ್ವಚ್ಛಗೊಳಿಸುತ್ತಾರೆ. ನಮ್ಮ ಎಲ್ಲಾ ದನಕರುಗಳನ್ನು ಅಲಂಕರಿಸಿ ಪೂಜೆ ಮಾಡುತ್ತೇವೆ. "ಇದು ಆದಿವಾಸಿ ಸಂಪ್ರದಾಯ" ಎಂದು ಕೈಯಿಂದ ಗೇರು ಮಣ್ಣನ್ನು ಅಕ್ಕಿ ಗಂಜಿಯಲ್ಲಿ ಬೆರೆಸುತ್ತಾ 70 ವರ್ಷ ವಯಸ್ಸಿನ ದನಗಾಹಿ ಅಶೋಕ್ ಕಾಕಾ ಗರೆಲ್ ಹೇಳುತ್ತಾರೆ. ಈ ಕೆಂಪು-ಕಂದು ಬಣ್ಣವನ್ನು ಜಾನುವಾರುಗಳ ಮೇಲೆ ಹಸ್ತದ ಅಚ್ಚು ಹಾಕಿ ಅಲಂಕರಿಸಲು ಬಳಸುತ್ತಾರೆ. ಅವುಗಳ ಕೊಂಬುಗಳಿಗೂ ಅದೇ ಬಣ್ಣವನ್ನು ಬಳಿಯುತ್ತಾರೆ.
ಪಾಡದಲ್ಲಿ ಪುರುಷರು ಜಾನುವಾರುಗಳನ್ನು ಅಲಂಕರಿಸುತ್ತಿದ್ದರೆ, ಮಹಿಳೆಯರು ದೀಪಾವಳಿಯ ವಿಶೇಷ ಖಾದ್ಯಗಳನ್ನು ತಯಾರಿಸುವಲ್ಲಿ ಮಗ್ನರಾಗಿದ್ದರು. ಪನ್ಮೋಡಿ, ಚವ್ಲಿ ಮತ್ತು ಕರಂಡೆ ಪ್ರಮುಖ ಖಾದ್ಯಗಳು. ಇವೆಲ್ಲವನ್ನೂ ಆದಿವಾಸಿಗಳು ತಾವೇ ಬೆಳೆದ ಆಹಾರ ವಸ್ತುಗಳನ್ನು ಬಳಸಿ ತಯಾರಿಸುತ್ತಾರೆ.
“ನಮ್ಮ ಸಣ್ಣ ಹೊಲಗಳಿಂದ ಹೊಸದಾಗಿ ಕೊಯ್ಲು ಮಾಡಿದ ಭತ್ತವನ್ನು ಚೆನ್ನಾಗಿ ಪುಡಿ ಮಾಡಿ ಹುಡಿ ತಯಾರಿಸುತ್ತೇವೆ. ಇದಕ್ಕೆ ತುರಿದ ಸೌತೆಕಾಯಿ ಮತ್ತು ಸ್ವಲ್ಪ ಬೆಲ್ಲವನ್ನು ಸೇರಿಸುತ್ತೇವೆ. ನಂತರ ಈ ಹಿಟ್ಟನ್ನು ಚಾಯ್ ಎಲೆಯ ಮೇಲಿಟ್ಟು ಮಡಚುತ್ತೇವೆ. ಆಮೇಲೆ, ಅದನ್ನು ಹಬೆಯಲ್ಲಿ ಬೇಯಿಸುತ್ತೇವೆ," ಎಂದು ಪನ್ಮೋಡಿ ಮಾಡುವ ವಿಧಾನವನ್ನು ನನ್ನ ತಾಯಿ ಪ್ರಮೀಳಾ ವಿವರಿಸುತ್ತಾರೆ. “ಇದನ್ನು ತಯಾರಿಸುವಾಗ, ಮನೆಯನ್ನು ಗುಡಿಸಬಾರದು. ಇಲ್ಲದಿದ್ದರೆ ಪನ್ಮೋಡಿ ಬೇಯುವುದಿಲ್ಲ!” ಎಂದು ಅವರು ಹೇಳುತ್ತಾರೆ.
ಮಳೆಗಾಲದಲ್ಲಿ ಕರಂಡೆ ಬಿತ್ತನೆಗಾಗಿ ಸಣ್ಣ, ಸಮತಟ್ಟಾದ ಮಣ್ಣಿನ ದಿಬ್ಬವನ್ನು ಮಾಡಲಾಗುತ್ತದೆ. ದೀಪಾವಳಿ ಸಮಯದಲ್ಲಿ ಕರಂಡೆಗಳು ಬಳ್ಳಿಗಳಲ್ಲಿ ಬೆಳೆದಿರುತ್ತವೆ. ಕೆಲವು ಕಪ್ಪಾಗಿದ್ದರೆ, ಕೆಲವು ಬಿಳಿಯಾಗಿರುತ್ತವೆ. ಕೆಲವು ದುಂಡಾಗಿದ್ದರೆ, ಕೆಲವಕ್ಕೆ ಆಕಾರವಿರುವುದಿಲ್ಲ. ಇವು ಆಲೂಗಡ್ಡೆಯಂತಹ ರುಚಿಯನ್ನು ಹೊಂದಿವೆ. ಕಾಡಿನ ಒಂದು ಸಣ್ಣ ಭಾಗದಲ್ಲಿ ತರಗೆಲೆ, ಒಣಹುಲ್ಲು ಮತ್ತು ಬೆರಣಿಗಳನ್ನು ಸುಟ್ಟು ಚವ್ಲಿಯನ್ನು ಬೆಳೆಸಲು ಭೂಮಿಯನ್ನು ಸಿದ್ಧಪಡಿಸಲಾಗುತ್ತದೆ. ಭೂಮಿಯನ್ನು ಉಳುಮೆ ಮಾಡಿ ನಾವು ಚವ್ಲಾ ಎಂದು ಕರೆಯುವ ಚವ್ಲಿ (ಅಲಸಂಡೆ ಬೀಜಗಳು) ಅನ್ನು ಬಿತ್ತಲಾಗುತ್ತದೆ. ಬಲಿಪ್ರತಿಪಾಡದಲ್ಲಿ ಕರಂಡೆ ಮತ್ತು ಚವ್ಲಾವನ್ನು ಸ್ವಲ್ಪ ಉಪ್ಪಿನೊಂದಿಗೆ ನೀರಿನಲ್ಲಿ ಕುದಿಸಲಾಗುತ್ತದೆ.
ಅಡುಗೆ ಕೆಲಸ ಮುಗಿದ ನಂತರ ಮಹಿಳೆಯರು ದನದ ಕೊಟ್ಟಿಗೆಗೆ ಬರುತ್ತಾರೆ. ಭತ್ತದ ತೆನೆಗಳು, ಒಂದು ಒನಕೆ, ಅಗೆಯಲು ಬಳಸುವ ಕಬ್ಬಿಣದ ಸರಳು ಮತ್ತು ಕೆಲವು ಚೆಂಡುಹೂವುಗಳನ್ನು ಹೊರಗೆ ತೆಗೆದಿಡಲಾಗಿದೆ. ಜಾನುವಾರುಗಳು ಹೊರಬಂದ ತಕ್ಷಣ ಚಿರೋಟಿ ಹಣ್ಣುಗಳನ್ನು ಅವುಗಳ ಕಾಲುಗಳ ಕೆಳಗೆ ಎಸೆಯಲಾಗುತ್ತದೆ. ಜಾನುವಾರುಗಳ ಗೊರಸಿಗೆ ಸಿಕ್ಕಿ ಪುಡಿಯಾದ ಚಿರೋಟಿಯ ಬೀಜಗಳು ಸಿಹಿಯಾದ ಫಲವನ್ನು ನೀಡುತ್ತದೆ ಎಂದು ನಂಬಲಾಗುತ್ತದೆ.
ಜಾನುವಾರುಗಳು ಕೃಷಿ ಬದುಕಿನ ಅವಿಭಾಜ್ಯ ಭಾಗಗಳು. ಮನೆಗೆ ಸಮೃದ್ಧ ಬೆಳೆಯನ್ನು ತರಲು ರೈತರೊಂದಿಗೆ ಅವೂ ಶ್ರಮಿಸುತ್ತವೆ. ಜಾನುವಾರುಗಳಿಗೂ ದುಷ್ಟಶಕ್ತಿಗಳು ಹಾನಿಯನ್ನುಂಟು ಮಾಡುತ್ತವೆ ಎಂದು ವಾರ್ಲಿಗಳು ನಂಬುತ್ತಾರೆ. ಈ ದುಷ್ಟ ಶಕ್ತಿಯನ್ನು ತೊಡೆದುಹಾಕಲು ಆದಿವಾಸಿಗಳು 'ಅಗ್ನಿ ಪೂಜೆ' ಅಥವಾ ಬೆಂಕಿಯ ಆಚರಣೆಯನ್ನು ಮಾಡುತ್ತಾರೆ. ಕುಗ್ರಾಮದ ಹಸುಗಳು, ಹೋರಿಗಳು, ಎಮ್ಮೆಗಳು ಮತ್ತು ಮೇಕೆಗಳು ಸೇರಿದಂತೆ ಎಲ್ಲಾ ಜಾನುವಾರುಗಳನ್ನು ಉರಿಯುವ ಬೈಹುಲ್ಲಿನ ಬೆಂಕಿಯಲ್ಲಿ ಹಾಯಿಸುತ್ತಾರೆ.
ಆ ದಿನ ವಾರ್ಲಿಗಳು ವಾಘಾಯ (ಹುಲಿ), ಹಿರ್ವಾ (ಹಸಿರು), ಹಿಮಾಯಿ (ಪರ್ವತ ದೇವತೆ), ಕನ್ಸಾರಿ (ಧಾನ್ಯಗಳು), ನಾರಂದೇವ್ (ರಕ್ಷಕ) ಮತ್ತು ಚೆಡೋಬಾ (ಕೆಟ್ಟತನದಿಂದ ರಕ್ಷಿಸುವ ದೇವರು) ದೇವರನ್ನು ಪೂಜಿಸುತ್ತಾರೆ. ಚೆಂಡುಹೂವುಗಳನ್ನು ಶುದ್ಧಗೊಳಿಸಿ, ನಂತರ ಚಾವ್ಲಾ, ಕರಂಡೆ ಮತ್ತು ಪಾನ್ಮೋಡಿಗಳೊಂದಿಗೆ ದೇವರಿಗೆ ಅರ್ಪಿಸುತ್ತಾರೆ. ಇಲ್ಲಿಂದ ತೊಡಗಿ ಅನೇಕ ವಾರ್ಲಿ ಮಹಿಳೆಯರು ಮಾನ್ಸೂನ್ ಪ್ರಾರಂಭವಾಗುವವರೆಗೆ ತಮ್ಮ ಕೂದಲಿಗೆ ಚೆಂಡುಹೂಗಳನ್ನು ಧರಿಸಲು ಶುರು ಮಾಡುತ್ತಾರೆ. ಅದರ ನಂತರ, ಮುಂದಿನ ದೀಪಾವಳಿಯವರೆಗೆ ಚೆಂಡುಹೂವುಗಳನ್ನು ಪ್ರಾರ್ಥನೆಗಾಗಿ, ಇಲ್ಲವೇ ಅಲಂಕಾರಕ್ಕಾಗಿ ಬಳಸುವಂತಿಲ್ಲ.
ಮಳೆಗಾಲದಲ್ಲಿ ಆದಿವಾಸಿಗಳು ಕಾಡಿನ ತಮ್ಮ ಸಣ್ಣ ಭೂಮಿಯಲ್ಲಿ ದುಡಿಯುತ್ತಾರೆ. ಬೆಟ್ಟಗಳಲ್ಲಿರುವ ಕಲ್ಲು ತುಂಬಿದ ಭೂಮಿಯಲ್ಲೂ ಕೃಷಿ ಮಾಡಲು ಶ್ರಮಿಸುತ್ತಾರೆ. ದೀಪಾವಳಿಯ ಹೊತ್ತಿಗೆ, ಅಕ್ಕಿ, ಉದ್ದು, ಜೋಳ ಮತ್ತು ಇತರ ಬೆಳೆಗಳು ಕೊಯ್ಲಿಗೆ ಸಿದ್ಧವಾಗುತ್ತವೆ. ಪ್ರಕೃತಿಯ ಕೃಪೆಯಿಂದ ಉತ್ತಮ ಇಳುವರಿ ಬಂದರೆ, ಕೆಲವು ಕುಟುಂಬಗಳು ತಮ್ಮ ಉತ್ಪಾದನೆಯನ್ನು ಮಾರಾಟ ಮಾಡಿ ಸ್ವಲ್ಪ ಹೆಚ್ಚುವರಿ ಆದಾಯವನ್ನು ಪಡೆಯುತ್ತವೆ. ಈ ಸಂತೋಷದಲ್ಲಿ ಆದಿವಾಸಿಗಳು ದೀಪಾವಳಿಯನ್ನು ಆಚರಿಸುತ್ತಾರೆ. ಹೊಸ ಸುಗ್ಗಿಯನ್ನು ಪೂಜಿಸಿದ ನಂತರವೇ ತಾವು ಬೆಳೆದದ್ದನ್ನು ತಿನ್ನಲು ಪ್ರಾರಂಭಿಸುತ್ತಾರೆ.
ಆದರೆ ಮುಂಗಾರು ಮುಗಿದ ನಂತರ ಹೊಲಗಳಲ್ಲಿ ಕೆಲಸ ಮಾಡಲು ಆಗುವುದಿಲ್ಲ. ಈ ಸಂದರ್ಭದಲ್ಲಿ ಬದುಕು ಕಟ್ಟಿಕೊಳ್ಳಲು ಹೊಸ ದಾರಿಯನ್ನು ಕಂಡುಕೊಳ್ಳುತ್ತಾರೆ. ಕೆಲವರು ಕೆಲವು ತಿಂಗಳುಗಳ ಕಾಲ ಹತ್ತಿರದ ಹಳ್ಳಿಗಳಲ್ಲಿರುವ ಇಟ್ಟಿಗೆ ಕಾರ್ಖಾನೆಗಳಿಗೆ, ಇಲ್ಲವೇ ಮುಂಬೈನ ಉತ್ತರದ ಉಪನಗರಗಳಲ್ಲಿ ಸಿಗುವ ಕಟ್ಟಡ ನಿರ್ಮಾಣ ಕೆಲಸಗಳಿಗೆ, ಕಲ್ಲು ಕ್ವಾರಿಗಳಿಗೆ, ಕಬ್ಬಿನ ಗದ್ದೆಗಳಿಗೆ ಕೆಲಸಕ್ಕೆ ಹೋಗುತ್ತಾರೆ.
ಮರಾಠಿಯಿಂದ ಇಂಗ್ಲಿಷಿಗೆ ಸಂಯುಕ್ತಾ ಶಾಸ್ತ್ರಿಯವರು ಅನುವಾದಿಸಿದ್ದಾರೆ.
ಕನ್ನಡ ಅನುವಾದ: ಚರಣ್ ಐವರ್ನಾಡು