ನಾನು ನನ್ನ ಇಡೀ ಬದುಕನ್ನು ಜಾನುವಾರುಗಳನ್ನು ನೋಡಿಕೊಂಡು ಕಳೆದಿದ್ದೇನೆ. ರಾಯಿಕಗಳಾಗಿ ಜಾನುವಾರುಗಳನ್ನು ನೋಡಿಕೊಳ್ಳುವುದು ನಮ್ಮ ಕೆಲಸ.
ನನ್ನ ಹೆಸರು ಸೀತಾದೇವಿ. ನನಗೀಗ 40 ವರ್ಷ. ನಮ್ಮ ಸಮುದಾಯದ ಕೆಲಸ ಹಿಂದಿನಿಂದಲೂ ಜಾನುವಾರುಗಳನ್ನು ನೋಡಿಕೊಳ್ಳುವುದು. ಅವುಗಳಲ್ಲಿ ಮುಖ್ಯವಾಗಿ ಒಂಟೆ. ಇತ್ತೀಚಿನ ದಿನಗಳಲ್ಲಿ ಕುರಿ, ಮೇಕೆ, ದನ ಮತ್ತು ಎಮ್ಮೆಗಳನ್ನು ಸಹ ಸಾಕುತ್ತಿದ್ದೇವೆ. ನಮ್ಮ ಈ ಕೇರಿಯ ಹೆಸರು ತಾರಮಗರಿ ಇದು ರಾಜಸ್ಥಾನದ ಪಾಲಿ ಜಿಲ್ಲೆಯ ಜೇಟರಾಮ್ ಬ್ಲಾಕಿನ ಕುರ್ಕಿ ಗ್ರಾಮದಿಂದ ಒಂದು ಕಿಲೋಮೀಟರ ದೂರದಲ್ಲಿದೆ.
ನನ್ನ ಪತಿಯ ಹೆಸರು ಹರಿ ರಾಮ್ ದೇವಸಿ [46] ನಮಗೆ ಸವಾಯಿ ರಾಮ್ ದೇವಸಿ ಮತ್ತು ಜಾಮ್ತಾ ರಾಮ್ ದೇವಸಿ ಎನ್ನುವ ಮಕ್ಕಳಿದ್ದಾರೆ. ಅವರು ತಮ್ಮ ಪತ್ನಿಯರಾದ ಆಚು ದೇವಿ ಮತ್ತು ಸಂಜು ದೇವಿಯ ಜೊತೆಗೆ ನಮ್ಮೊಂದಿಗೆ ಬದುಕುತ್ತಿದ್ದಾರೆ. ಆಚು ಮತ್ತು ಸವಾಯಿಗೆ 10 ತಿಂಗಳ ಗಂಡು ಮಗುವಿದೆ. ಇವರೆಲ್ಲರ ಜತೆಗೆ ನನ್ನಮ್ಮ 64 ವರ್ಷದ ಶಾಯರಿ ದೇವಿ ಕೂಡಾ ನಮ್ಮೊಂದಿಗೆ ಇರುತ್ತಾರೆ.
ನನ್ನ ದಿನಚರಿ ಬೆಳಗಿನ 6 ಗಂಟೆಗೆ ಆರಂಭಗೊಳ್ಳುತ್ತದೆ. ಬೆಳಗ್ಗೆ ಎದ್ದ ತಕ್ಷಣ ನನ್ನ ಸೊಸೆ ಅಥವಾ ನಾನೇ ಮಾಡಿದ ಮೇಕೆ ಹಾಲಿನ ಚಹಾವನ್ನು ಕುಡಿಯುತ್ತೇನೆ. ನಂತರ ಅಡುಗೆ ಮಾಡಿ ಬಾಡ [ಕೊಟ್ಟಿಗೆ] ಕಡೆ ನಡೆಯುತ್ತೇವೆ. ಅಲ್ಲಿ ಹೋಗಿ ನಂತರದ ಬಳಕೆಗಾಗಿ ಕುರಿ ಮತ್ತು ಮೇಕೆಗಳ ಹಿಕ್ಕೆಯನ್ನು ನೆಲದಿಂದ ಎತ್ತಿ ಪಕ್ಕಕ್ಕಿಡುತ್ತೇವೆ.
ಬಾಡಾ ನಮ್ಮ ಮನೆಯ ಹಿಂದೆಯೇ ಇದ್ದು ಅಲ್ಲಿ ಸುಮಾರು 60 ಕುರಿ ಮತ್ತು ಆಡುಗಳಿವೆ. ಅದರಲ್ಲೇ ಒಂದು ಸಣ್ಣ ವಿಭಾಗವಿದ್ದು ಅಲ್ಲಿ ಕುರಿ ಮತ್ತು ಆಡುಗಳ ಮರಿಗಳನ್ನು ಬಿಡಲಾಗಿದೆ. ಬಾಡದ ಒಂದು ತುದಿಯಲ್ಲಿ ಅವುಗಳಿಗೆ ಹಾಕುವ ಒಣ ಮೇವು ಇರಿಸಿದ್ದೇವೆ. ಮೇವಿಗೆ ಸಾಮಾನ್ಯವಾಗಿ ಒಣ ಹುಲ್ಲನ್ನು ಬಳಸಲಾಗುತ್ತದೆ. ನಮ್ಮಲ್ಲಿ ಕುರಿ, ಮೇಕೆಗಳಲ್ಲದೆ ಎರಡು ದನಗಳೂ ಇದ್ದು ಅವುಗಳನ್ನು ಮನೆಯ ಮುಂದಿನ ಕೊಟ್ಟಿಗೆಯಲ್ಲಿ ಕಟ್ಟುತ್ತೇವೆ.
ದಿನಸಿ, ಆಸ್ಪತ್ರೆ, ಬ್ಯಾಂಕ್, ಶಾಲೆ ಅಥವಾ ಇನ್ಯಾವುದೇ ವಿಷಯಕ್ಕೂ ನಾವು ಕುರ್ಕಿ ಗ್ರಾಮಕ್ಕೆ ಹೋಗಬೇಕು. ಮೊದಲು ನಮ್ಮ ಕ್ಯಾಂಪ್ ಮತ್ತು ಪ್ರಾಣಿ ಹಿಂಡಿನ ಜೊತೆ ಹೋಗುವಾಗ ಜಮ್ನಾ ಜೀ (ಯಮುನಾ ನದಿ) ಬಳಿ ಖರೀದಿ ಮಾಡುತ್ತಿದ್ದೆವು. ಈಗ ನಮ್ಮ ಪ್ರಾಣಿಗಳ ಹಿಂಡು ಚಿಕ್ಕದಾಗಿದ್ದು ದೂರ ಹೋದರೆ ಗಿಟ್ಟುವುದಿಲ್ಲ. ಅಲ್ಲದೆ ನಮಗೂ ವಯಸ್ಸಾಗುತ್ತಿದೆ. ಹೀಗಾಗಿ ಪ್ರಾಣಿಗಳನ್ನು ಹೆಚ್ಚು ದೂರ ಮೇಯಲು ಕೊಂಡೊಯ್ಯುವುದಿಲ್ಲ.
ನಾನು ಬಾಡದ ಕೆಲಸ ಮುಗಿಸುತ್ತಿದ್ದಂತೆ, ನನ್ನ ಸೊಸೆ ಸಂಜು ಆಡಿನ ಹಾಲು ಕರೆಯುತ್ತಾಳೆ. ಚಿಕ್ಕವರು ಹಾಲು ಕರೆಯುವಾಗ ಆಡನ್ನು ಹಿಡಿದುಕೊಳ್ಳಲು ಒಬ್ಬರು ಬೇಕಾಗುತ್ತದೆ. ಇಲ್ಲದಿದ್ದರೆ ಅವು ಹಾಲು ಕರೆಯಲು ಬಿಡುವುದಿಲ್ಲ. ಹೀಗಾಗಿ ನಾನಾಗಲೀ, ನನ್ನ ಗಂಡನಾಗಲೀ ಅವಳಿಗೆ ಸಹಾಯ ಮಾಡುತ್ತೇವೆ. ನಾವಿದ್ದಾಗ ಅವು ಆರಾಮವಾಗಿ ಹಾಲು ಕೊಡುತ್ತವೆ.
ನಮ್ಮಲ್ಲಿ ಜಾನುವಾರುಗಳನ್ನು ಮೇಯಿಸಲು ಕರೆದುಕೊಂಡು ಹೋಗುವುದು ನನ್ನ ಗಂಡ. ಇದಕ್ಕಾಗಿ ನಾವು ಹತ್ತಿರದಲ್ಲೇ ಒಂದು ಜಮೀನು ಮತ್ತು ಮರಗಳನ್ನು ಬಾಡಿಗೆಗೆ ಪಡೆದಿದ್ದೇವೆ. ಅವು ಅಲ್ಲಿ ಮೇಯುತ್ತವೆ. ನನ್ನ ಗಂಡ ಮರ ಹತ್ತಿ ಕೊಂಬೆಗಳನ್ನು ಕಡಿದು ಕುರಿ, ಮೇಕೆಗಳ ಮುಂದೆ ಹರಡುತ್ತಾರೆ. ಅವು ಅದರ ಎಲೆಗಳನ್ನು ತಿನ್ನುತ್ತವೆ. ಅವುಗಳಿಗೆ ಖೇಜ್ರಿ (ಬನ್ನಿ/ಶಮಿ) ಮರದ ಎಲೆಗಳು ಬಹಳ ಇಷ್ಟ.
ಸಣ್ಣ ಮರಿಗಳು ದೊಡ್ಡ ಪ್ರಾಣಿಗಳೊಡನೆ ಹೊರಗೆ ಹೋಗದಂತೆ ನೋಡಿಕೊಳ್ಳುತ್ತೇವೆ. ಅವುಗಳನ್ನು ಹೊರಗೆ ಬಿಡುವುದು ಅಪಾಯಕ್ಕೆ ಕಾರಣವಾಗಬಹುದು. ಹೀಗಾಗಿ ಪ್ರಾಣಿಗಳನ್ನು ಬಾಡದಿಂದ ಹೊರಗೆ ಬಿಡುವಾಗ ಸಾಕಷ್ಟು ಸರ್ಕಸ್ ಮಾಡಬೇಕಾಗುತ್ತದೆ. ನಮ್ಮಲ್ಲಿ ಒಬ್ಬರು ಹೊರಗೆ ಬಾಗಿಲಿನ ಬಳಿ ನಿಂತು ದೊಡ್ಡ ಪ್ರಾಣಿಗಳ ಜೊತೆ ಹೊರಗೆ ಬರುವ ಮರಿಗಳನ್ನು ಹಿಡಿದು ಒಳಗೆ ತಂದು ಬಿಡುತ್ತೇವೆ. ನಮ್ಮ ಕೈ ತಟ್ಟಿ ಸದ್ದು ಮಾಡುವ ಮೂಲಕ ಮತ್ತೆ ಒಳಗೆ ಬರುವ ಕುರಿ ಮೇಕೆಗಳನ್ನು ಮತ್ತೆ ಹೊರಗೆ ಕಳುಹಿಸುತ್ತೇವೆ ಇದಕ್ಕೆಲ್ಲ ಸುಮಾರು ಹತ್ತು ನಿಮಿಷ ಹಿಡಿಯುತ್ತದೆ. ನಂತರ ಅವುಗಳನ್ನು ಮೇಯಲು ಹೊಡೆದುಕೊಂಡು ಹೋಗಲಾಗುತ್ತದೆ.
ತಾಯಿ ಪ್ರಾಣಿಗಳು, ಸಣ್ಣವು ಮತ್ತು ಹುಷಾರಿಲ್ಲದವುಗಳನ್ನು ಹೊರತುಪಡಿಸಿ ಉಳಿದೆಲ್ಲ ಪ್ರಾಣಿಗಳು ಹೊರ ಹೋದ ನಂತರ ಬಾಡದಲ್ಲಿ ಗದ್ದಲ ಕಡಿಮೆಯಾಗುತ್ತದೆ. ಆಗ ನಾನು ಇನ್ನೊಂದು ಸಲ ಬಾಡವನ್ನು ಗುಡಿಸಿ ಹಿಕ್ಕೆಯನ್ನು ಸಂಗ್ರಹಿಸುತ್ತೇನೆ. ನಂತರ ಅದನ್ನು ಎತ್ತಿಕೊಂಡು ನಮ್ಮ ಮನೆಯಿಂದ ನೂರು ಮೀಟರ್ ದೂರದಲ್ಲಿರುವ ಗುಂಡಿಗೆ ಹಾಕುತ್ತೇನೆ. ಸಾಕಷ್ಟು ಪ್ರಮಾಣದಲ್ಲಿ ಹಿಕ್ಕೆ ಸಂಗ್ರವಾದ ನಂತರ ಅದನ್ನು ಮಾರುತ್ತೇವೆ. ಕುರಿ ಗೊಬ್ಬರ ಉತ್ತಮ ಗೊಬ್ಬರವಾಗಿದ್ದು ಒಂದು ಲೋಡ್ ಗೊಬ್ಬರ ಮಾರಿದರೆ ಸುಮಾರು 8,000-10,000 ರೂಪಾಯಿಗಳ ಆದಾಯ ದೊರೆಯುತ್ತದೆ.
ನಮಗಿರುವ ಇತರ ದೊಡ್ಡ ಆದಾಯ ಮೂಲವೆಂದರೆ ಕುರಿಗಳನ್ನು ಮಾರಿದಾದ ಸಿಗುವ ಹಣ. ಅದರಲ್ಲಿ 12,000 to 15,000 [ರೂಪಾಯಿ] ತನಕ ದೊರೆಯುತ್ತದೆ. ನಮಗೆ ಹಣದ ತುರ್ತು ಇದ್ದಾಗ ಅವುಗಳನ್ನು ಮಾರುತ್ತೇವೆ. ವ್ಯಾಪಾರಿಯು ನಮ್ಮಿಂದ ಖರೀದಿಸಿದ ಕುರಿಗಳನ್ನು ದೂರದ ದೆಹಲಿಯಂತಹ ದೊಡ್ಡ ಮಾರುಕಟ್ಟೆಯಲ್ಲಿ ಮಾರುತ್ತಾನೆ.
ಮೊದಲು ಕುರಿಯ ಉಣ್ಣೆಯಿಂದ ಕೂಡಾ ಒಳ್ಳೆಯ ಆದಾಯ ಬರುತ್ತಿತ್ತು. ನಮಗೆ ಅದೊಂದು ಮುಖ್ಯ ಆದಾಯ ಮೂಲವಾಗಿತ್ತು. ಆದರೆ ಈಗ ಉಣ್ಣೆಯ ದರ ಕುಸಿದಿದ್ದು ಕೆಲವೆಡೆ ಕೇಜಿಗೆ ಎರಡು ರೂಪಾಯಿ ಬೆಲೆಯಿದೆ. ಅಲ್ಲದೆ ಈಗ ಖರೀದಿದಾರರೂ ಕಡಿಮೆಯಾಗಿದ್ದಾರೆ.
ಒಮ್ಮೆ ಮೀಂಗಣಿಯನ್ನು ಗೊಬ್ಬರದ ಗುಂಡಿಗೆ ಎಸೆದು ಬರುವಷ್ಟರಲ್ಲಿ ಬಾಡದಲ್ಲಿ ಪುಟ್ಟ ಬಾಯಿಗಳು ಹಸಿದ ಕಣ್ಣುಗಳನ್ನು ತೆರೆದು ನನಗಾಗಿ ಕಾಯುತ್ತಿರುತ್ತವೆ. ನಾನು ಅವುಗಳಿಗಾಗಿ ಡಾಲಿ (ಕೊಂಬೆ) ತರುತ್ತೇನೆ.ಚಳಿಗಾಲದಲ್ಲಿ ಒಂದಷ್ಟು ದಿನ ಅವುಗಳಿಗೆ ನೀಮ್ (ಬೇವು) ಕೊಂಬೆಗಳನ್ನು ನೀಡುತ್ತೇನೆ. ಉಳಿದ ದಿನಗಳಲ್ಲಿ ಬೊರ್ಡಾ (ಮುಳ್ಳು ಹಣ್ಣು ಗಿಡದ ಎಲೆ) ನೀಡಲಾಗುತ್ತದೆ. ಅಲ್ಲದೆ ನಾನು ಹೊಲಕ್ಕೆ ಹೋಗಿ ಉರುವಲು ಸೌದೆ ಕೂಡಾ ತರುತ್ತೇನೆ.
ಡಾಲಿ[ಕೊಂಬೆ] ಯನ್ನು ನನ್ನ ಮಗ ಅಥವಾ ಗಂಡ ಕಡಿಯುತ್ತಾರೆ. ಕೆಲವೊಮ್ಮೆ ನಾನೇ ಹೋಗುವುದೂ ಇದೆ. ಮನೆಯ ಹೊರಗಿನ ಬಹುತೇಕ ಕೆಲಸವನ್ನು ಗಂಡಸರೇ ಮಾಡುತ್ತಾರೆ. ಮರಗಳ ಖರೀದಿ, ಮೇವಿನ ಜಾಗಗಳ ಬಾಡಿಗೆ ಮಾತಾಡುವುದು, ಗೊಬ್ಬರ ಮಾರಾಟದ ಚರ್ಚೆ, ಔಷಧ ತರುವಂತಹ ವ್ಯವಹಾರಗಳನ್ನೆಲ್ಲ ಅವರೇ ಮಾಡುತ್ತಾರೆ. ಹೊರಗೆ ಮರಗಳ ಕೊಂಬೆ ಕಡಿದು ಪ್ರಾಣಿಗಳಿಗೆ ಹಾಕುವುದು, ಅವುಗಳಿಗೆ ಗಾಯವಾದಾಗ ಆರೈಕೆ ಮಾಡುವು್ಉ ಕೂಡಾ ಅವರ ಕೆಲಸ.
ಒಂದು ವೇಳೆ ಜಾನುವಾರುಗಳು ಹುಷಾರು ತಪ್ಪಿದರೆ ನಾನು ನೋಡಿಕೊಳ್ಳುತ್ತೇನೆ. ದನಗಳಿಗೆ ಒಣ ಹುಲ್ಲು ಮತ್ತು ಅಡುಗೆ ಮನೆಯ ಉಳಿಕೆ ಪದಾರ್ಥಗಳನ್ನು ಹಾಕುತ್ತೇನೆ. ನನ್ನಮ್ಮ ಕೂಡಾ ಇದಕ್ಕೆ ಸಹಾಯ ಮಾಡುತ್ತಾರೆ. ಅವರು ದಿನಸಿ ತರುವುದಕ್ಕೆ ಸಹ ಸಹಾಯ ಮಾಡುತ್ತಾರೆ.
ಕುರಿಗಳು ಮತ್ತು ಮೇಕೆಗಳಿಗೆ ಮೇವು ಹಾಕಿದ ನಂತರ ಸಾಮಾನ್ಯವಾಗಿ ಬಾಜ್ರ [ನವಣೆ] ದಿಂದ ಮಾಡಿದ ಯಾವುದಾದರೂ ತಿಂಡಿಯನ್ನು ತಿನ್ನುತ್ತೇವೆ. ಕೆಲವೊಮ್ಮೆ ಗೋಧಿಯ[ರೇಷನ್ ಅಂಗಡಿಯದು] ತಿಂಡಿ ಕೂಡ ಇರುತ್ತದೆ. ಜೊತೆಗೆ ಹೆಸರು, ಅಥವಾ ಇನ್ಯಾವುದಾದರೂ ಬೇಳೆ, ಆಯಾ ಕಾಲದ ತರಕಾರಿ ಇರುತ್ತದೆ. ಜೊತೆಗೆ ಬಕ್ರೀ ಕೇ ಧೂದ್ ಕಾ ದಹಿ [ಆಡಿನ ಹಾಲಿನ ಮೊಸರು] ಊಟದಲ್ಲಿರುತ್ತದೆ. ನಮಗೆ ಎರಡು ಬಿಘಾ ಜಮೀನಿದ್ದು ಅದರಲ್ಲಿ ಹೆಸರು ಮತ್ತು ನವಣೆ ಬೆಳೆಯುತ್ತೇವೆ.
ನಾನು ಮನರೇಗಾ ಸೈಟುಗಳಲ್ಲಿ ಕೂಡಾ ಕೆಲಸ ಮಾಡುತ್ತೇನೆ. ಇಲ್ಲಿ ಕುರ್ಕಿ ಗ್ರಾಮದ ಮತ್ತು ನಮ್ಮ ಸಮುದಾಯದ ಇತರ ಮಹಿಳೆಯರು ಕೂಡಾ ಕೆಲಸ ಮಾಡುತ್ತಾರೆ. ಮನರೇಗಾ ಕೆಲಸದಿಂದ ನಮಗೆ ವಾರಕ್ಕೆ ಎರಡು ಸಾವಿರ ರೂಪಾಯಿ ಬಟವಾಡೆ ದೊರೆಯುತ್ತದೆ. ಇದರಿಂದ ಮನೆ ಖರ್ಚುಗಳನ್ನು ಸರಿದೂಗಿಸಲು ಸುಲಭವಾಗುತ್ತದೆ.
ಇದೆಲ್ಲ ಮುಗಿದ ನಂತರ ಒಂದಷ್ಟು ಹೊತ್ತು ಕೂರುತ್ತೇನೆ ಅಥವಾ ಬಟ್ಟೆ ಒಗೆಯುವುದು, ಬಟ್ಟೆ ಒಗೆಯುವುದು ಅಥವಾ ಇತರ ಸಣ್ಣಪುಟ್ಟ ಕೆಲಸಗಳನ್ನು ಮುಗಿಸುತ್ತೇನೆ. ಕೆಲವೊಮ್ಮೆ ಅಕ್ಕಪಕ್ಕದ ಮಹಿಳೆಯರು ಒಟ್ಟುಗೂಡಿಕೊಂಡು ಕೆಲಸಗಳನ್ನು ಮುಗಿಸುತ್ತೇವೆ. ಚಳಿಗಾಲದ ದಿನಗಳಲ್ಲಿ ನಾವು ಖೀಚಿಯಾ ಮತ್ತು ರಬೂಡಿ [ಜೋಳದ ಹಿಟ್ಟು ಮತ್ತು ಮಜ್ಜಿಗೆ ಬೆರೆಸಿ ಮಾಡುವ ತಿನಿಸು] ಎನ್ನುವ ತಿನಿಸನ್ನು ತಯಾರಿಸುತ್ತೇವೆ.
ಈಗಿನ ಯುವ ಪೀಳಿಗೆಯ ಸಾಕಷ್ಟು ಜನರಿಗೆ ಈ [ಪಶುಪಾಲನೆ] ಕೌಶಲ ತಿಳಿದಿಲ್ಲ. ನಾನು ಯುವಜನರಿಗೆ ಚೆನ್ನಾಗಿ ಓದುವಂತೆ ಹೇಳುತ್ತಿರುತ್ತೇನೆ. ಒಂದು ದಿನ ನಾವು ನಮ್ಮೆಲ್ಲ ಹಿಂಡನ್ನು ಮಾರಬೇಕಾಗಿ ಬಂದು ಅವರು ಬೇರೆ ಕೆಲಸ ಹುಡುಕಬೇಕಾಗಿ ಬರಬಹುದು. ಈಗಿನ ಕಾಲ ಮೊದಲಿನಂತಿಲ್ಲ.
ಸಂಜೆ ಎಲ್ಲರಿಗಾಗಿ ಅಡುಗೆ ಮಾಡುತ್ತೇನೆ. ನಂತರ ಸಂಜೆ ನಮ್ಮ ಪ್ರಾಣಿಗಳು ಬಾಡಕ್ಕೆ ಮರಳುವುದನ್ನು ಕಾಯುತ್ತಾ ಕೂರುತ್ತೇನೆ. ಅವು ಬಂದ ನಂತರ ಹಾಲು ಕರೆದು ಅವುಗಳಿಗೆ ಮೇವು ಹಾಕಿದರೆ ಆ ದಿನದ ಕೆಲಸ ಮುಗಿದ ಹಾಗೆ.
ಅನುವಾದ: ಶಂಕರ. ಎನ್. ಕೆಂಚನೂರು