"ಕಳೆದ ವರ್ಷ ರಾತ್ರೋರಾತ್ರಿ ನಾವು ಒಂದು ಲಕ್ಷ ರೂಪಾಯಿ ಕಳೆದುಕೊಂಡೆವು," ಎಂದು ಮಂಜುನಾಥ್ ಗೌಡ ಹೇಳುತ್ತಾರೆ. “ಕೀಟಗಳು ದಾಳಿ ಮಾಡಿ ನಮ್ಮ ತೋಟದಲ್ಲಿನ ಹಣ್ಣನ್ನು ನಾಶಮಾಡಿದವು. ಬೆಳಗ್ಗೆ ಹಣ್ಣಿನ ಮೇಲೆ ಯಾರೋ ಸೂಜಿಯಿಂದ ಚುಚ್ಚಿದಂತೆ ಸಣ್ಣ ಸಣ್ಣ ತೂತುಗಳಾಗಿದ್ದವು. ಹಾಗಾಗಿ ಈ ವರ್ಷ (2023) ಈ ರೀತಿ ಆಗಬಾರದು ಎಂದು ಗಡೇನಹಳ್ಳಿಯಲ್ಲಿರುವ ತಮ್ಮ ಎರಡು ಎಕರೆ ದಾಳಿಂಬೆ ತೋಟದ ಸುತ್ತಲೂ ಬೇಲಿ ಹಾಕಿದ್ದಾರೆ. ಈ ರೀತಿ ರೋಗಗಳು, ಪಕ್ಷಿಗಳು ಮತ್ತು ಕೀಟಗಳಿಂದ ಬೆಳೆಯನ್ನು ರಕ್ಷಿಸಬಹುದು ಎಂದು 34 ವರ್ಷ ಪ್ರಾಯದ ಮಂಜುನಾಥ್ ನಂಬಿದ್ದಾರೆ.
ಹಣ್ಣುಗಳು ಬಹಳ ಸೂಕ್ಷ್ಮ ಮತ್ತು ಸುಲಭವಾಗಿ ನಾಶವಾಗುತ್ತವೆ ಎಂದು ಹೇಳುವ ಮಂಜುನಾಥ್ ಅವರು ಪ್ರತಿ ವರ್ಷ ಔಷಧಿ ಮತ್ತು ರಸಗೊಬ್ಬರಗಳಿಗಾಗಿ 2.5 ಲಕ್ಷ ರುಪಾಯಿ ವ್ಯಯಿಸುತ್ತಾರೆ.
ಅವರು ಮತ್ತು ಅವರ ಪತ್ನಿ ಈ ವಾರ್ಷಿಕ ಖರ್ಚನ್ನು ಬರಿಸಲು ಕಳೆದ ವರ್ಷ ಸಾಲ ತೆಗೆದುಕೊಂಡಿದ್ದರು. "ಈ ವರ್ಷ ನಾವು ಸ್ವಲ್ಪ ಲಾಭ ಗಳಿಸಿ, ಎಲ್ಲಾ ಸಾಲವನ್ನು ತೀರಿಸುತ್ತೇವೆ ಎಂದು ನಂಬಿದ್ದೇವೆ," ಎಂದು ಮಂಜುನಾಥ್ ಅವರೊಂದಿಗೆ ಜಮೀನಿನಲ್ಲಿ ಕೆಲಸ ಮಾಡುತ್ತಾ, ಮನೆಗೆಲಸವನ್ನೂ ನಿಭಾಯಿಸುವ ಅವರ ಪತ್ನಿ ಪ್ರಿಯಾಂಕಾ ಹೇಳುತ್ತಾರೆ.
ಕೆಲವೇ ಕಿಲೋಮೀಟರ್ ದೂರದ ಮೋಹನ್ ಗೌಡ ಅವರ ಜಮೀನಿನಲ್ಲಿರುವ 400 ದಾಳಿಂಬೆ ಗಿಡಗಳು ಬ್ಯಾಕ್ಟೀರಿಯಾ ಬ್ಲೈಟ್‌ನಿಂದ (ಕ್ಸಾನ್ಥೋಮೋನಸ್ ಆಕ್ಸೋನೋಪೋಡಿಸ್ ಪಿವಿ. ಪುನಿಕಾ) ಬಾಧಿಸಲ್ಪಟ್ಟಿವೆ. "ಇದು ಎಲ್ಲಾ ಸಸಿಗಳಿಗೆ, ಒಂದು ತೋಟದಿಂದ ಇನ್ನೊಂದಕ್ಕೆ ಹರಡುತ್ತದೆ," ಎಂದು ಅವರು ಹೇಳುತ್ತಾರೆ. ಎಲೆಗಳಿಗೆ ಶಿಲೀಂಧ್ರನಾಶಕಗಳನ್ನು ಸಿಂಪಡಿಸುವುದೇ ಇದಕ್ಕಿರುವ ಪರಿಹಾರ.
ಮೋಹನ್ ಎರಡು ವರ್ಷಗಳ ಹಿಂದೆ ಮೆಣಸಿನಕಾಯಿ ಮತ್ತು ಚೆಂಡುಹೂವಿನ ಕೃಷಿಯಿಂದ ದಾಳಿಂಬೆ ಕೃಷಿಗೆ ಹೊರಳಿದರು. "ಇಲ್ಲಿ ಕಡಿಮೆ ಕೆಲಸ ಮತ್ತು ಹೆಚ್ಚು ಲಾಭ ಸಿಗುವುದರಿಂದ ನಾನು ಬೆಳೆಯನ್ನು ಬದಲಾಯಿಸಿದೆ," ಎಂದು ಅವರು ಹೇಳುತ್ತಾರೆ. ಆದರೆ "ದಾಳಿಂಬೆ ಬೆಳೆಯುವಾಗ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ," ಎಂಬುದು ಅವರಿಗೆ ತುಂಬಾ ಬೇಗ ಅರಿವಾಯ್ತು.
ರಾಸಾಯನಿಕ ಗೊಬ್ಬರಗಳು ಆರೋಗ್ಯಕ್ಕೆ ಹಾನಿಕರ ಎಂದು ಇದೇ ಗ್ರಾಮದ ದಾಳಿಂಬೆ ರೈತ ಚೇತನ್‌ಕುಮಾರ್ ಹೇಳುತ್ತಾರೆ. "ಮಾಸ್ಕ್ ಧರಿಸಿದರೂ ಸಮಸ್ಯೆ ಆಗಿಯೇ ಆಗುತ್ತದೆ. ರಾಸಾಯನಿಕಗಳು ನನ್ನ ಕಣ್ಣುಗಳಿಗೆ ಹೋಗುತ್ತವೆ. ಕೆಮ್ಮು ಬರುತ್ತದೆ ಮತ್ತು ಉಸಿರಾಡಲು ಕಷ್ಟವಾಗುತ್ತದೆ,” ಎಂದು ಕೆಂಪಾದ ತಮ್ಮ ಕಣ್ಣುಗಳನ್ನು ತೋರಿಸುತ್ತಾ ಚೇತನ್ ಹೇಳುತ್ತಾರೆ. 36 ವರ್ಷದ ಈ ರೈತ ತನ್ನ ನಾಲ್ಕು ಎಕರೆ ಜಮೀನಿನಲ್ಲಿ ಕಳೆದ ಮೂರು ವರ್ಷಗಳಿಂದ ದಾಳಿಂಬೆ ಕೃಷಿ ಮಾಡುತ್ತಿದ್ದಾರೆ.
ಆದರೆ ದಾಳಿಂಬೆ ಕೃಷಿಕರ ನಡುವೆ ಪೈಪೋಟಿ ಹೆಚ್ಚುತ್ತಿದೆ. “ನಾನು ಅರ್ಧ ಲೀಟರ್ ಗೊಬ್ಬರ ಹಾಕಿದರೆ, ಇನ್ನೊಬ್ಬ ಒಂದು ಲೀಟರ್ ಹಾಕುತ್ತಾನೆ. ಹಾಗಾಗಿದೆ ಈಗ,” ಎಂದು ಚೇತನ್ ವಿವರಿಸುತ್ತಾರೆ.
ವರ್ಷಪೂರ್ತಿ ನಡೆಯುವ ದಾಳಿಂಬೆ ಬೆಳೆಯುವ ಪ್ರಕ್ರಿಯೆಯು ಸೆಪ್ಟೆಂಬರ್ ಮತ್ತು ನವೆಂಬರ್‌ನಲ್ಲಿ ಕಳೆಗಳನ್ನು ಕೀಳುವುದರೊಂದಿಗೆ ಆರಂಭವಾಗುತ್ತದೆ. ಸಸಿಗಳು 5-6 ವರ್ಷಗಳವರೆಗೆ ಫಲ ನೀಡುತ್ತವೆ. ಮಾರ್ಚ್‌ನಲ್ಲಿ ಆಗಾಗ ಗಿಡಗಳನ್ನು ಟ್ರಿಮ್ ಮಾಡಿ ನೀರು ಹಾಯಿಸಿ, ನಾಲ್ಕು ದಿನಕ್ಕೊಮ್ಮೆ ಗೊಬ್ಬರ, ಔಷಧ ಸಿಂಪಡಿಸಬೇಕು ಎನ್ನುತ್ತಾರೆ ಕೃಷಿಕರು.
“ಮೊದಲು ಗೊಬ್ಬರ ಮಾತ್ರ ಬಳಸುತ್ತಿದ್ದೆವು. ಈಗ ನಾವು ರಾಸಾಯನಿಕ ಗೊಬ್ಬರಗಳನ್ನು ಬಳಸಬೇಕಾಗಿದೆ,” ಎಂದು ನಾಲ್ಕು ದಶಕಗಳಿಂದ ತೋಟದಲ್ಲಿ ಕೆಲಸ ಮಾಡುತ್ತಿರುವ ಮಂಜುನಾಥ್ ಅವರ 56 ವರ್ಷ ಪ್ರಾಯದ ತಾಯಿ ಪಾರ್ವತಮ್ಮ ಹೇಳುತ್ತಾರೆ, “ಮೊದಲೆಲ್ಲಾ ಹಣ್ಣುಗಳು ತುಂಬಾ ಚೆನ್ನಾಗಿದ್ದವು, ಅದರಲ್ಲಿ ಎಲ್ಲಾ ಜೀವಸತ್ವಗಳಿರುತ್ತಿದ್ದವು. ಈಗ ಅವುಗಳಲ್ಲಿ ಏನೂ ಇಲ್ಲ. ಅವುಗಳಲ್ಲಿ ಯಾವುದೇ ಶಕ್ತಿಯಿಲ್ಲ,” ಎಂದು ಹಣ್ಣಿನ ರುಚಿ ಮೇಲಾಗಿರುವ ಪರಿಣಾಮವನ್ನು ವಿವರಿಸುತ್ತಾ, "ಹವಾಮಾನ ತುಂಬಾ ಬದಲಾಗಿದೆ," ಎಂದು ಹೇಳುತ್ತಾರೆ.
ಮಂಜುನಾಥ್ ತಮ್ಮ ತಾಯಿಯ ಮಾತನ್ನು ಒಪ್ಪುತ್ತಾರೆ, ಅಕಾಲಿಕ ಮಳೆಯು ಇಳುವರಿ ಮೇಲೆ ಪರಿಣಾಮ ಬೀರಿದೆ ಎಂದು ಹೇಳುತ್ತಾರೆ. ಜನವರಿ ಮತ್ತು ಫೆಬ್ರವರಿಯಲ್ಲಿ ಮಳೆ ಇಲ್ಲದೇ ಇದ್ದರೆ ಸಸಿಗಳು ಹುಲುಸಾಗಿ ಬೆಳೆಯುತ್ತವೆ. "ಕಳೆದ ಮೂರು ವರ್ಷಗಳಲ್ಲಿ ಭಾರೀ [ಆರಂಭಿಕ] ಮಳೆಯಾಗಿ, ಸಾಕಷ್ಟು ಹಣ್ಣುಗಳು ಹಾನಿಗೊಳಗಾಗಿವೆ. ಅವು ಕಪ್ಪು ಬಣ್ಣಕ್ಕೆ ತಿರುಗುತ್ತಿವೆ. ನಾವು ಅದನ್ನು ಬಳಸಲು ಅಥವಾ ಮಾರಾಟ ಮಾಡಲು ಸಾಧ್ಯವಿಲ್ಲ,” ಎಂದು ಅವರು ಹೇಳುತ್ತಾರೆ.
ಕಳೆದ ಸೀಸನ್‌ನಲ್ಲಿ (2022) ಸುಮಾರು 8 ಟನ್ (8000 ಕಿಲೋಗ್ರಾಂ) ಹಣ್ಣು ಸಿಕ್ಕಿತ್ತು ಎನ್ನುತ್ತಾರೆ ಮಂಜುನಾಥ್.
"ಮಳೆಯಲ್ಲಿ ಬದಲಾವಣೆಯಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಇಳುವರಿಯಲ್ಲಿ ಆಗಿರುವ ಇಳಿಕೆಯನ್ನು ನಾನು ನೋಡುತ್ತಿದ್ದೇನೆ. ಕಳೆದ ವರ್ಷ ಒಂದು ಮರದಲ್ಲಿ 150-180 ದಾಳಿಂಬೆಗಳಾಗಿದ್ದವು. ಆದರೆ ಈ ವರ್ಷ 60-80 ದಾಳಿಂಬೆ ಮಾತ್ರ ಆಗಿವೆ. ಹವಾಮಾನ ಮತ್ತು ಆರಂಭಿಕ ಮಳೆ ಇದಕ್ಕೆ ಕಾರಣ,” ಎಂದು ಅವರು ಹೇಳುತ್ತಾರೆ.
*****
ಚೇತನ್ ಅವರಂತಹ ರೈತರ ಬಳಿ ಕೂಲಿ ಕೆಲಸ ಮಾಡುವ ಕೃಷಿ ಕಾರ್ಮಿಕರು, ಹೆಚ್ಚಾಗಿ ಮಹಿಳೆಯರು ಕಳೆ ತೆಗೆಯುವುದು, ರಸಗೊಬ್ಬರಗ ಹಾಕುವುದು ಮತ್ತೂ ಬೇರೆ ಬೇರೆ ಕೆಲಸಗಳನ್ನು ಮಾಡುತ್ತಾರೆ.
ಪಳಪಳ ಹೊಳೆಯುವ ಕೆಂಪು ದಾಳಿಂಬೆ ಹೂವುಗಳು ಮೇ ತಿಂಗಳಲ್ಲಿ ಅರಳುತ್ತವೆ. ಗಂಡು ಹೂವುಗಳನ್ನು ಮತ್ತು ಕಳೆ ಗಿಡಗಳನ್ನು ಕೀಳಬೇಕು. “ಮುಳ್ಳುಗಳಿಂದಾಗಿ ನಾನು ಕೆಲಸ ಮಾಡುವಾಗ ಈ ಕೈಗವಸುಗಳನ್ನು ಧರಿಸಬೇಕಾಗಿದೆ. ಕೆಲವೊಮ್ಮೆ ಸರಿಯಾಗಿ ಗಮನಿಸದೆ ಕಳೆ ಕೀಳುವಾಗ ಅವು ಚುಚ್ಚಿ ನೋವಾಗುತ್ತದೆ,” ಎಂದು ಶಿವಮ್ಮ ಕೆ ಎಂ ಅವರು ಹೇಳುತ್ತಾರೆ. ಚೇತನ್ ಅವರ ಜಮೀನಿನಲ್ಲಿ ಕೆಲಸ ಮಾಡುವ ಆರು ಮಹಿಳೆಯರಲ್ಲಿ ಒಬ್ಬರಾಗಿರುವ ಇವರನ್ನು ಜೂನ್ 2023ರಲ್ಲಿ ಪರಿ ಭೇಟಿ ಮಾಡಿತ್ತು.
ಬೆಳಿಗ್ಗೆ 6:30ಕ್ಕೆ ತನ್ನ ಮನೆಯನ್ನು ಸ್ವಚ್ಛಗೊಳಿಸಿ, ಮನೆಯವರಿಗೆ ಅಡುಗೆ ಸಿದ್ಧಮಾಡುವ ಮೂಲಕ ಶಿವಮ್ಮನವರ ದಿನ ಆರಂಭವಾಗುತ್ತದೆ. ನಂತರ ಅವರು ಒಂದು ಕಿಲೋಮೀಟರ್ ನಡೆದು ಹೊಲಕ್ಕೆ ಬರುತ್ತಾರೆ. ಅಲ್ಲಿಂದ ಸಂಜೆ 6:30ರವರೆಗೆ ಕೆಲಸ ಮಾಡುತ್ತಾರೆ. ಇತರ ಕೂಲಿ ಕಾರ್ಮಿಕರಂತೆ ಅವರೂ ದಿನಕ್ಕೆ 350-400 ರೂಪಾಯಿ ಸಂಬಳಕ್ಕೆ, ವಾರದ ಆರು ದಿನ ಕೆಲಸ ಮಾಡುತ್ತಾರೆ. "ನನಗೆ ಬಿಡುವಿನ ಸಮಯವೇ ಸಿಗುವುದಿಲ್ಲ, ವಿಶ್ರಾಂತಿಯೂ ಇಲ್ಲ. ಭಾನುವಾರ ಒಂದು ರಜೆ ಸಿಗುತ್ತದೆ. ಆದರೆ ಆ ದಿನವೂ ಮನೆಯನ್ನು ಸ್ವಚ್ಛಗೊಳಿಸಿವುದು ಮತ್ತು ಬಟ್ಟೆ ಒಗೆಯುವುದು ಮಾಡಬೇಕು,” ಎಂದು 36 ವರ್ಷದ ಇಬ್ಬರು ಮಕ್ಕಳ ತಾಯಿ ಹೇಳುತ್ತಾರೆ.
ಜೂನ್‌ನಲ್ಲಿ ಮಾನ್ಸೂನ್ ಪ್ರಾರಂಭವಾಗುವ ಮೊದಲು, ಕಾರ್ಮಿಕರು ಬೆಳೆಯುತ್ತಿರುವ ಹಣ್ಣುಗಳನ್ನು ತಂತಿಗಳಿಗೆ ಕಟ್ಟಿ ಭದ್ರಪಡಿಸಬೇಕು. ಇದರಿಂದ ಭಾರವಾಗಿರುವ ಹಣ್ಣುಗಳು ಗಿಡದಿಂದ ಬಾಗಿ ಬೀಳುವುದಿಲ್ಲ. "ಈ ಬಿಸಿಲಿನಲ್ಲಿ ಕೆಲಸ ಮಾಡುವುದರಿಂದ ನನಗೆ ತುಂಬಾ ಸಮಸ್ಯೆಯಾಗುತ್ತದೆ. ನನ್ನ ತಲೆ, ಬೆನ್ನು ಮತ್ತು ಭುಜ ಎಲ್ಲವೂ ನೋಯುತ್ತವೆ,” ಎಂದು 43 ವರ್ಷದ ಕೃಷಿ ಕಾರ್ಮಿಕರಾದ ನರಸಮ್ಮ ಈ ಕೆಲಸ ಮಾಡುತ್ತಾ ಹೇಳುತ್ತಾರೆ.
"ನಾನು ಇಲ್ಲಿ ನನ್ನ ಸ್ನೇಹಿತರೊಂದಿಗೆ ಸಂತೋಷವಾಗಿದ್ದೇನೆ. ನಾವೆಲ್ಲರೂ ಮೊದಲಿನಿಂದಲೂ ಒಟ್ಟಿಗೆ ಕೆಲಸ ಮಾಡುತ್ತೇವೆ,” ಎಂದು ಅವರು ಹೇಳುತ್ತಾರೆ.
*****
ಸೆಪ್ಟೆಂಬರ್ ವೇಳೆಗೆ ಹಣ್ಣುಗಳು ಕಟಾವಿಗೆ ಸಿದ್ಧವಾಗುತ್ತವೆ. "ಒಂದು ದಾಳಿಂಬೆ 250-300 ಗ್ರಾಂ ತೂಗುತ್ತದೆ," ಎಂದು ಚೇತನ್ ಹೇಳುತ್ತಾರೆ.
ದೇಶದ ಬೇರೆ ಬೇರೆ ಕಡೆಗಳಿಂದ ಬಿಡ್ದರ್‌ಗಳು ಬರುತ್ತಾರೆ. ವರ್ತಕರು ದಾಳಿಂಬೆ ಹಣ್ಣಿನ ಗುಣಮಟ್ಟವನ್ನು ಎಚ್ಚರಿಕೆಯಿಂದ ನೋಡಿ ಅವುಗಳ ದರವನ್ನು ಪ್ರಸ್ತಾಪಿಸುತ್ತಾರೆ ಎಂದು ರೈತರು ಹೇಳುತ್ತಾರೆ. ಒಂದು ವೇಳೆ ರೈತರಿಗೆ ಈ ಆಫರ್ ತೃಪ್ತಿ ತಂದರೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಒಪ್ಪುತ್ತಾರೆ. "ನಿಮಗೆ ಲಾಭವಾಗುತ್ತದೆಯೋ ಇಲ್ಲ ನಷ್ಟವಾಗುತ್ತದೆಯೋ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಇದು ಸೀಸನ್ ಮತ್ತು ಮಾರ್ಕೆಟ್ ಮೇಲೆ ಅವಲಂಬಿಸಿರುತ್ತದೆ. ಒಂದು ಬಾರಿ ನಮಗೆ 2.5 ಲಕ್ಷ ನಷ್ಟವಾಗಿತ್ತು,” ಎಂದು ಕೃಷಿಕ ಮೋಹನ್ ಗೌಡ ನೆನಪಿಸಿಕೊಳ್ಳುತ್ತಾರೆ.
“ಕಳೆದ ವರ್ಷ ನಾವು ಕೆಜಿಗೆ 120 ರೂಪಾಯಿ ರೇಟಿನಲ್ಲಿ ಮಾರಾಟ ಮಾಡಿದ್ದೆವು. ಒಂದು ವಾರದ ಹಿಂದೆ ಕೆಜಿಗೆ 180 ರೂಪಾಯಿ ಇತ್ತು. ಮತ್ತೆ ಹೆಚ್ಚಾಗುತ್ತದೆ ಎಂದು ನಾವು ಭಾವಿಸಿದ್ದೇವೆ. ಆದ್ದರಿಂದ ನಾವು ಆ ರೇಟಿಗೆ ಒಪ್ಪಲಿಲ್ಲ. ಆದರೆ ಈಗ ಬೆಲೆ ಕಡಿಮೆಯಾಗಿದೆ. ನಾವು ಏನು ಮಾಡಬೇಕು?" ಎನ್ನುತ್ತಾರೆ ಪ್ರಿಯಾಂಕಾ.
ಅನುವಾದ: ಚರಣ್ ಐವರ್ನಾಡು