ಸರು ಮನೆಯ ಹೊರಗಿನ ಮಾವಿನ ಮರದ ಕೆಳಗೆ ಕುಳಿತಿದ್ದರು. ಅವರ ತೋಳಿನಲ್ಲಿದ್ದ ಮಗು ಕೊಸರಾಡುತ್ತ ಅಳುತ್ತಿತ್ತು. ಆಕೆಯ ಮುಖದಲ್ಲಿ ದುಃಖ ಮಡುಗಟ್ಟಿತ್ತು. "ಮುಟ್ಟಿನ ದಿನಗಳು ಹತ್ತಿರದಲ್ಲಿವೆ, ಕುರ್ಮಾ ಘರ್ ಒಳಗೆ ಹೋಗಿ ಉಳಿಯಬೇಕು" ಎಂದು ಅವರು ಹೇಳುತ್ತಾರೆ. ಮುಟ್ಟನ್ನು ಮಡಿಯಾ ಭಾಷೆಯಲ್ಲಿ ಕುರ್ಮಾ ಎಂದು ಕರೆಯಲಾಗುತ್ತದೆ. ಸರು ಅವರು ತಾನು ಮುಟ್ಟಾದ ನಂತರ 4-5 ದಿನಗಳನ್ನು ಅದೇ ಕುರ್ಮಾ ಮನೆಯಲ್ಲಿ ಏಕಾಂಗಿಯಾಗಿ ಕಳೆಯಬೇಕಾಗುತ್ತದೆ.
ಮುಂಬರುವ ಮುಟ್ಟಿನ ದಿನಗಳ ಕುರಿತಾದ ಆಲೋಚನೆಯೇ ಸರುವಿನ (ಹೆಸರು ಬದಲಾಯಿಸಲಾಗಿದೆ) ಚಡಪಡಿಕೆಯನ್ನು ಹೆಚ್ಚಿಸುತ್ತದೆ. “ಕುರ್ಮಾ ಘರ್ ಒಳಗೆ ಉಳಿದುಕೊಳ್ಳುವುದೆಂದರೆ ಉಸಿರುಘಟ್ಟಿಸುವ ಅನುಭವ. ಇಷ್ಟು ಚಿಕ್ಕ ಮಕ್ಕಳಿಂದ ದೂರವಿರುವುದು ನನ್ನಿಂದ ಸಾಧ್ಯವಿಲ್ಲ” ಎಂದು ಹೇಳಿದ ಅವರು, ತನ್ನ 9 ತಿಂಗಳ ಕೂಸನ್ನು ಕೈಯಲ್ಲಿಎತ್ತಿಕೊಂಡು ನಮ್ಮೊಡನೆ ಮಾತನಾಡುತ್ತಿದ್ದರು. ಅವರಿಗೆ ಮೂರೂವರೆ ರ್ಷದ ಕೋಮಲ್ (ಹೆಸರು ಬದಲಾಯಿಸಲಾಗಿದೆ) ಎನ್ನುವ ಮಗಳಿದ್ದು, ಅವಳು ನರ್ಸರಿ ಶಾಲೆಗೆ ಹೋಗುತ್ತಿದ್ದಾಳೆ. “ಒಂದು ದಿನ ಅವಳ ಪಾಲಿ (ಋತುಚಕ್ರ) ಕೂಡಾ ಆರಂಭವಾಗಲಿದೆ ಎನ್ನುವುದನ್ನು ಕಲ್ಪಿಸಿಕೊಂಡರೂ ನನಗೆ ಭಯವಾಗುತ್ತದೆ” ಎನ್ನುವ 30 ವರ್ಷದ ಸರು, ತನ್ನ ಮಗಳೂ ತನ್ನಂತೆ ಈ ಮುರುಕಲು ಕೊಳಕು ಗುಡಿಸಲಿನಲ್ಲಿ ಮೂರ್ನಾಲ್ಕು ದಿನಗಳನ್ನು ಕಳೆಯಬೇಕಾಗುತ್ತದಲ್ಲ ಎನ್ನುವ ಚಿಂತೆಯಲ್ಲಿದ್ದಾರೆ. ಏಕೆಂದರೆ ಮಡಿಯಾ ಸಮುದಾಯದ ಪ್ರತಿಯೊಬ್ಬ ಮಹಿಳೆಯೂ ಈ ಸಂಪ್ರದಾಯವನ್ನು ಅನುಸರಿಸುವುದು ಕಡ್ಡಾಯ.
ಸರು ಅವರ ಊರಿನಲ್ಲಿ ಒಟ್ಟು ನಾಲ್ಕು ಕುರ್ಮಾ ಗುಡಿಸಲುಗಳಿವೆ. ಅವುಗಳಲ್ಲಿ ಒಂದು ಅವರ ಮನೆಯಿಂದ 100 ನೂರು ಮೀಟರಿಗಿಂತಲೂ ಹತ್ತಿರದಲ್ಲಿದೆ. ಈ ಗುಡಿಸಲುಗಳನ್ನು ಊರಿನ 27 ಮುಟ್ಟಾಗುವ ವಯಸ್ಸಿನ ಹುಡುಗಿಯರು ಮತ್ತು ಮಹಿಳೆಯರು ಬಳಸುತ್ತಿದ್ದಾರೆ. “ನಾನು ನನ್ನ ಅಮ್ಮ ಮತ್ತು ಅವರ ಅಮ್ಮ ಈ ಕುರ್ಮಾ ಗುಡಿಸಲುಗಳಲ್ಲಿ ಕೂರುವುದನ್ನು ನೋಡುತ್ತಲೇ ಬೆಳೆದೆ. ಆದರೆ ಕೋಮಲ್ ಕೂಡಾ ಈ ಕಷ್ಟವನ್ನು ಎದುರಿಸುವುದನ್ನು ನಾನು ನೋಡಬಯಸುವುದಿಲ್ಲ” ಎಂದು ಸರು ಹೇಳುತ್ತಾರೆ.
ಮಡಿಯಾ ಸಮುದಾಯದಲ್ಲಿ, ಮುಟ್ಟಿನ ಸಮಯದಲ್ಲಿ ಮಹಿಳೆಯರನ್ನು ಅಶುದ್ಧ ಮತ್ತು ಅಸ್ಪೃಶ್ಯರೆಂದು ಪರಿಗಣಿಸಲಾಗುತ್ತದೆ ಮತ್ತು ಅವರನ್ನು ಮನೆಯ ಹೊರಗೆ ಪ್ರತ್ಯೇಕವಾಗಿ ಇರಿಸಲಾಗುತ್ತದೆ. "ನಾನು 13 ವರ್ಷದವಳಿದ್ದಾಗಿನಿಂದಲೂ ಈ ಕುರ್ಮಾ ಘರ್ ವ್ಯವಸ್ಥೆಯನ್ನು ಬಳಸುತ್ತಿದ್ದೇನೆ” ಎಂದು ಸರು ಹೇಳುತ್ತಾರೆ. ಆಗ ಅವರು ಗಡ್ ಚಿರೋಲಿ ಜಿಲ್ಲೆಯ ಪೂರ್ವ ಭಾಗದಲ್ಲಿರುವ ತನ್ನ ಈಗಿನ ಮನೆಯಿಂದ 50 ಕಿಲೋಮೀಟರ್ ದೂರದಲ್ಲಿನ ಹಳ್ಳಿಯಲ್ಲಿರುವ ತನ್ನ ಹೆತ್ತವರ ಮನೆಯಲ್ಲಿದ್ದರು.
ಕಳೆದ ಹದಿನೆಂಟು ವರ್ಷಗಳಲ್ಲಿ ಸರು ತನ್ನ ಬದುಕಿನ ಸುಮಾರು 1,000 ದಿನಗಳನ್ನು ಈ ಕುರ್ಮಾ ಗುಡಿಸಲಿನಲ್ಲಿ ಕಳೆದಿದ್ದಾರೆ. ಪ್ರತಿ ತಿಂಗಳು ಮುಟ್ಟಾದ ದಿನದಿಂದ ಸುಮಾರು ಐದು ದಿನಗಳ ಕಾಲ ಅವರು ಬಚ್ಚಲು, ಶುದ್ಧ ನೀರು, ವಿದ್ಯುತ್, ಹಾಸಿಗೆ ಮತ್ತು ಫ್ಯಾನ್ ಇಲ್ಲದ ಈ ಗುಡಿಸಲಿನಲ್ಲಿ ವಾಸಿಸುತ್ತಾರೆ. “ಒಳಗೆ ಭಯಂಕರ ಕತ್ತಲೆಯಿರುತ್ತದೆ. ಇಲ್ಲಿ ರಾತ್ರಿಗಳೆಂದರೆ ಭಯಾನಕವಾಗಿರುತ್ತದೆ. ಒಮ್ಮೊಮ್ಮೆ ನನಗೆ ಈ ಕತ್ತಲೆ ನನ್ನನ್ನು ನುಂಗಿ ಬಿಡಬಹುದೇನೋ ಎನ್ನಿಸಿ ಭಯವಾಗುತ್ತದೆ” ಎನ್ನುವ ಅವರು, “ಇಲ್ಲಿಂದ ಜೋರಾಗಿ ನನ್ನ ಮನೆಗೆ ಓಡಿ, ನನ್ನ ಮಕ್ಕಳನ್ನು ಎದೆಗೆ ಬಿಗಿದಪ್ಪಿಕೊಳ್ಳಬೇಕು ಎನ್ನಿಸುತ್ತದೆ… ಆದರೆ ಅದು ಸಾಧ್ಯವಿಲ್ಲ” ಎಂದು ಅವರು ನೋವಿನಿಂದ ಹೇಳುತ್ತಾರೆ.
ಗುಡಿಸಲನ್ನು ಹಳ್ಳಿಯ ಅನೇಕ ಮಹಿಳೆಯರು ಬಳಸುತ್ತಾರೆ. ಈ ಗುಡಿಸಲಿನಲ್ಲಿ ಸ್ವಚ್ಛತೆಯಿಲ್ಲ ಜೊತೆಗೆ ಮೃದುವಾದ ಹಾಸಿಗೆಯೂ ಇಲ್ಲ. ಅಂತಹದ್ದೊಂದು ಹಾಸಿಗೆಯಿದ್ದರೆ ಮುಟ್ಟಿನ ನೋವಿನಿಂದ ಬಳಲುತ್ತಿರುವ ದೇಹಕ್ಕೆ ಒಂದಷ್ಟು ಆರಾಮ ಸಿಗುತ್ತಿತ್ತು, ಬೆಚ್ಚಗಿನ ಹೊದಿಕೆಯಿದ್ದಿದ್ದರೆ ಅದು ಪ್ರೀತಿ ಪಾತ್ರರ ಅಪ್ಪುಗೆಯಂತಿರುತ್ತಿತ್ತು ಎನ್ನುವುದು ಸರು ಅವರ ಆಲೋಚನೆ. ಆದರೆ ಮಣ್ಣಿನ ಗೋಡೆ ಮತ್ತು ಬಿದಿರು ಗಳುವಿನ ಬೆಂಬಲದಲ್ಲಿ ಹೊದೆಸಲಾಗಿರುವ ಈ ಮುರುಕಲು ಗುಡಿಸಲು ನಿರಾಶೆಯ ಹೊರತು ಯಾವುದೇ ಭಾವವನ್ನೂ ಹುಟ್ಟಿಸುವುದಿಲ್ಲ. ಅವರು ಮಲಗಬೇಕಿರುವ ಗುಡಿಸಲಿನ ನೆಲವೂ ಸಮತಟ್ಟಾಗಿಲ್ಲ. “ಅವರು [ಅತ್ತೆ ಅಥವಾ ಪತಿ] ಕಳುಹಿಸುವ ಕಂಬಳಿ ಮೇಲೆ ಮಲಗುತ್ತೇನೆ. ಬೆನ್ನು ನೋವು ಮತ್ತು ಮೈಕೈನೋವು ಜೀವ ಹಿಂಡುತ್ತಿರುತ್ತದೆ. ತೆಳುವಾದ ವಲ್ಲಿಯ ಮೇಲೆ ಮಲಗಿದರೆ ಆರಾಮವೆನ್ನಿಸುವುದಿಲ್ಲ” ಎಂದು ಅವರು ಹೇಳುತ್ತಾರೆ.
ಅಸ್ವಸ್ಥತೆ ಮತ್ತು ನೋವಿನ ಜೊತೆಗೆ ಮಕ್ಕಳಿಂದ ದೂರವಿರಬೇಕಾದ ಸ್ಥಿತಿಯು ಅವರ ಸಂಕಟವನ್ನು ಇನ್ನಷ್ಟು ಹೆಚ್ಚಿಸುತ್ತದೆ. "ನನ್ನ ಹತ್ತಿರದವರು ಸಹ ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದಿರುವುದು ನೋವುಂಟುಮಾಡುತ್ತದೆ" ಎಂದು ಅವರು ಹೇಳುತ್ತಾರೆ.
ಮುಟ್ಟಿನ ಮೊದಲು ಮತ್ತು ಮುಟ್ಟಿನ ಸಮಯದಲ್ಲಿ ಮಹಿಳೆಯರು ಆತಂಕ, ಒತ್ತಡ ಮತ್ತು ಖಿನ್ನತೆಯಂತಹ ರೋಗಲಕ್ಷಣಗಳನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಮುಂಬೈ ಮೂಲದ ಮನೋವೈದ್ಯರಾದ ಸ್ವಾತಿ ದೀಪಕ್ ಹೇಳುತ್ತಾರೆ. "ರೋಗಲಕ್ಷಣಗಳ ತೀವ್ರತೆಯು ಮಹಿಳೆಯಿಂದ ಮಹಿಳೆಗೆ ಬದಲಾಗಬಹುದು. ಕಾಳಜಿ ವಹಿಸದಿದ್ದರೆ, ರೋಗಲಕ್ಷಣಗಳು ತೀವ್ರಗೊಳ್ಳಬಹುದು" ಎಂದು ಅವರು ಹೇಳುತ್ತಾರೆ. ತಾರತಮ್ಯ ಮತ್ತು ಪ್ರತ್ಯೇಕತೆಯು ಮನಸ್ಸಿನ ಮೇಲೆ ಆಘಾತವನ್ನು ಉಂಟುಮಾಡಬಹುದು. ಈ ದಿನಗಳಲ್ಲಿ ಮಹಿಳೆಯರು ತಮ್ಮ ಕುಟುಂಬಗಳಿಂದ ವಾತ್ಸಲ್ಯ ಮತ್ತು ಕಾಳಜಿಯನ್ನು ಪಡೆಯುವುದು ಮುಖ್ಯ ಎಂದು ಡಾ.ಸ್ವಾತಿ ಹೇಳುತ್ತಾರೆ.
ಮಡಿಯಾ ಆದಿವಾಸಿ ಮಹಿಳೆಯರಿಗೆ ತಮ್ಮ ಮುಟ್ಟಿನ ಬಟ್ಟೆಗಳನ್ನು ಮನೆಯಲ್ಲಿ ಸ್ವಚ್ಛವಾಗಿ ಮತ್ತು ಸುರಕ್ಷಿತವಾಗಿಡಲು ಅನುಮತಿಯಿಲ್ಲ. "ಬಟ್ಟೆಗಳನ್ನು ಗುಡಿಸಲಿನ ಒಳಗೆ ಬಿಡಬೇಕು, ಇದು ಎಲ್ಲಾ ಮಹಿಳೆಯರಿಗೂ ಅನ್ವಯ” ಎಂದು ಸರು ಹೇಳುತ್ತಾರೆ. ಇಲ್ಲಿನ ಕುರ್ಮಾ ಗುಡಿಸಲುಗಳ ಮೂಲೆಗಳಲ್ಲಿ, ಪ್ಲಾಸ್ಟಿಕ್ ಚೀಲಗಳನ್ನು ಬಿದಿರಿನ ಕಂಬಗಳಿಗೆ ನೇತು ಹಾಕಲಾಗಿರುತ್ತದೆ. ಈ ಚೀಲಗಳಲ್ಲಿ, ಮಹಿಳೆಯರು ಹಳೆಯ ಲಂಗದ ಬಟ್ಟೆಯಿಂದ ತಯಾರಿಸಿದ ಮುಟ್ಟಿನ ಬಟ್ಟೆಗಳನ್ನು ಇಡುತ್ತಾರೆ. "ಇಲ್ಲಿ ಹಲ್ಲಿಗಳು, ಇಲಿಗಳು ಓಡಾಡುತ್ತಿರುತ್ತವೆ ಅವು ಈ ಬಟ್ಟೆಗಳ ಮೇಲೂ ಕೂರುತ್ತವೆ." ಈ ಕಲುಷಿತ ಬಟ್ಟೆಗಳು ಸೋಂಕು ಮತ್ತು ಕಿರಿಕಿರಿಗೆ ಕಾರಣವಾಗುತ್ತವೆ.
ಈ ಗುಡಿಸಲುಗಳಿಗೆ ಯಾವುದೇ ಕಿಟಕಿಗಳಿಲ್ಲದ ಕಾರಣ ಒಳಗೆ ಸರಿಯಾದ ಗಾಳಿಯ ಓಡಾಟವೂ ಇರುವುದಿಲ್ಲ. ಗಾಳಿಯ ಕೊರತೆಯು ಬಟ್ಟೆಯಿಂದ ವಾಸನೆ ಹೊರಡುವಂತೆ ಮಾಡುತ್ತವೆ. “ಮಳೆ ಸಮಯದಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿರುತ್ತದೆ” ಎನ್ನುತ್ತಾರೆ ಸರು. “ಮಳೆಗಾಲದಲ್ಲಿ ಬಟ್ಟೆ ಸರಿಯಾಗಿ ಒಣಗುವುದಿಲ್ಲ. ಈ ಕಾರಣಕ್ಕಾಗಿ ನಾನು ಈ ಸಮಯದಲ್ಲಿ [ಸ್ಯಾನಿಟರಿ] ಪ್ಯಾಡ್‌ಗಳನ್ನು ಬಳಸುತ್ತೇನೆ” ಎಂದು ಅವರು ಹೇಳುತ್ತಾರೆ. ಸರು 90 ರೂಪಾಯಿ ಕೊಟ್ಟು 20 ಪ್ಯಾಡುಗಳ ಒಂದು ಪೊಟ್ಟಣವನ್ನು ತರುತ್ತಾರೆ. ಇದು ಅವರಿಗೆ ಎರಡು ತಿಂಗಳಿಗೆ ಸಾಲುತ್ತದೆ.
ಅವರು ಪ್ರಸ್ತುತ ಬಳಸುತ್ತಿರುವ ಕುರ್ಮಾ ಘರ್ ಕನಿಷ್ಠ 20 ವರ್ಷಗಳಷ್ಟು ಹಳೆಯದು. ಆದರೆ ಅದರ ನಿರ್ವಹಣೆಯನ್ನು ಯಾರೂ ಮಾಡುವುದಿಲ್ಲ. ಬಿದಿರಿನ ಗಳುವಿನ ಮಾಡು ಒಡೆದಿಎ, ಗೋಡೆಗಳು ಬಿರುಕು ಬಿಟ್ಟಿವೆ. “ಈ ಗುಡಿಸಲು ಎಷ್ಟು ಹಳೆಯದೆಂದು ನಿಮಗೇ ಅರ್ಥವಾಗಿರಬಹುದು. ಇದನ್ನು ಮುಟ್ಟಾದ ಹೆಂಗಸರು ಬಳಸಿದ್ದಾರೆನ್ನುವ ಕಾರಣಕ್ಕೆ ಗಂಡಸರು ಇದನ್ನು ಸರಿಪಡಿಸುವುದಕ್ಕೆ ಒಪ್ಪುವುದಿಲ್ಲ” ಎನ್ನುತ್ತಾರೆ ಸರು. ಇದರ ರಿಪೇರಿ ಕಾರ್ಯಗಳೇನಿದ್ದರೂ ಹೆಂಗಸರೇ ಮಾಡಿಕೊಳ್ಳಬೇಕು.
*****
ಆಶಾ ಕಾರ್ಯಕರ್ತೆಯಾಗಿದ್ದರೂ ಸರು ಅವರಿಗೆ ಈ ಆಚರಣೆಯಿಂದ ಮುಕ್ತಿ ಸಿಕ್ಕಿಲ್ಲ. “ನಾನು ಆಶಾ ಕಾರ್ಯಕರ್ತೆಯಾಗಿದ್ದರೂ ಇಲ್ಲಿನ ಹೆಂಗಸರು ಮತ್ತು ಗಂಡಸರ ಮನಸ್ಥಿತಿ ಬದಲಾಯಿಸಲು ಸಾಧ್ಯವಾಗಿಲ್ಲ” ಎಂದು ಅವರು ನಿರಾಶೆಯಿಂದ ಹೇಳುತ್ತಾರೆ. ಮುಟ್ಟಿನ ಬಗೆಗಿನ ಮೂಢನಂಬಿಕೆಯೇ ಈ ಆಚರಣೆಗೆ ಕಾರಣ ಎನ್ನುತ್ತಾರೆ ಸರು. “ನಾವು [ಮುಟ್ಟಾದ ಮಹಿಳೆಯರು] ಮನೆಯಲ್ಲಿ ಉಳಿದುಕೊಂಡರೆ ಗ್ರಾಮದೇವಿ ಕೋಪಗೊಂಡು ಇಡೀ ಗ್ರಾಮಕ್ಕೆ ಶಾಪ ಕೊಡುತ್ತಾಳೆ” ಅವರ ಗಂಡ ಕಾಲೇಜು ಪದವೀಧರ “ಆದರೆ ಅವರು ಕೂಡಾ ಕುರ್ಮಾ ವ್ಯವಸ್ಥೆಯನ್ನು ಬೆಂಬಲಿಸುತ್ತಾರೆ,”
ಕುರ್ಮಾ ಪದ್ಧತಿಯನ್ನು ಪಾಲಿಸಲು ವಿಫಲವಾದರೆ ಊರ ದೇವರಿಗೆ ಕೋಳಿ ಅಥವಾ ಮೇಕೆಯನ್ನು ಗ್ರಾಮ ದೇವತೆಗೆ ಬಲಿ ನೀಡಲಾಗುತ್ತದೆ. ಗಾತ್ರವನ್ನು ಅವಲಂಬಿಸಿ, ಮೇಕೆಯ ಬೆಲೆ 4,000-5,000 ರೂ.ಗಳವರೆಗೆ ಇರಬಹುದು ಎಂದು ಸರು ಹೇಳುತ್ತಾರೆ.
ವಿಪರ್ಯಾಸದ ಸಂಗತಿಯೆಂದರೆ ಮುಟ್ಟಿನ ದಿನಗಳಲ್ಲಿ ಮನೆಯಲ್ಲಿ ಇರುವಂತಿಲ್ಲವಾದರೂ, ಕುಟುಂಬದ ಜಮೀನಿನಲ್ಲಿ ದುಡಿಯುವುದು, ಜಾನುವಾರುಗಳನ್ನು ಮೇಯಿಸುವುದನ್ನು ಮಾಡಬೇಕು. ಕುಟುಂಬವು ಎರಡು ಎಕರೆ ಮಳೆಯಾಶ್ರಿತ ಕೃಷಿಭೂಮಿಯನ್ನು ಹೊಂದಿದೆ, ಅಲ್ಲಿ ಅವರು ಜಿಲ್ಲೆಯ ಮುಖ್ಯ ಬೆಳೆಯಾದ ಭತ್ತವನ್ನು ಬೆಳೆಯುತ್ತಾರೆ. “ಮುಟ್ಟಿನ ದಿನಗಳಲ್ಲಿ ಮನೆಯಿಂದ ದೂರವಿದ್ದ ಮಾತ್ರಕ್ಕೆ ವಿಶ್ರಾಂತಿಯಲ್ಲಿರುತ್ತಾರೆ ಎಂದು ಅರ್ಥವಲ್ಲ. ನಾನು ಮನೆಯ ಹೊರಗಿನ ಕೆಲಸಗಳನ್ನು ಮಾಡುತ್ತೇನೆ. ಇದು ನೋವು ತರುತ್ತದೆ” ಇದನ್ನು ಜನರ ಬೂಟಾಟಿಕೆಯೆಂದು ಕರೆಯುವ ಅವರು “ಆದರೆ ಇದನ್ನು ತಡೆಯವುದು ಹೇಗೆನ್ನುವುದು ನನಗೂ ತಿಳಿಯುತ್ತಿಲ್ಲ” ಎನ್ನುತ್ತಾರೆ.
ಸರು ತಮ್ಮ ಆಶಾ ಕೆಲಸದ ಮೂಲಕ ತಿಂಗಳಿಗೆ 2,000-2,500 ರೂ.ಗಳನ್ನು ಗಳಿಸುತ್ತಾರೆ. ಆದರೆ, ದೇಶದ ಇತರ ಆಶಾ ಕಾರ್ಯಕರ್ತರಂತೆ, ಅವರಿಗೂ ತಿಂಗಳಿಗೆ ಸರಿಯಾಗಿ ಸಂಬಳ ಸಿಗುವುದಿಲ್ಲ. ಓದಿ: ಹಳ್ಳಿಗಳ ಆರೋಗ್ಯ, ಅನಾರೋಗ್ಯಗಳ ಕಾಳಜಿ ಮಾಡುವ ತಾಯಂದಿರು . “ಮೂರ್ನಾಲ್ಕು ತಿಂಗಳು ಕಳೆದ ನಂತರ ನನ್ನ ಬ್ಯಾಂಕ್ ಖಾತೆಗೆ ಹಣ ಬರುತ್ತದೆ” ಎನ್ನುತ್ತಾರೆ ಅವರು.
ಸರುತಾಯಿಯಂತಹ ಅನೇಕ ಮಹಿಳೆಯರು ಮತ್ತು ಹುಡುಗಿಯರು ಕುರ್ಮಾ ವ್ಯವಸ್ಥೆಯಿಂದ ಬಳಲುತ್ತಿದ್ದಾರೆ. ತಲೆಮಾರುಗಳಿಂದ ನಡೆಯುತ್ತಿರುವ ಈ ದುಷ್ಟ ಅಭ್ಯಾಸವನ್ನು ಗಡ್ ಚಿರೋಲಿಯ ಅನೇಕ ಭಾಗಗಳಲ್ಲಿ ಅನುಸರಿಸಲಾಗುತ್ತದೆ. ಈ ಜಿಲ್ಲೆಯನ್ನು ಮಹಾರಾಷ್ಟ್ರದ ಅಭಿವೃದ್ಧಿ ಹೊಂದದ ಜಿಲ್ಲೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.ಇಲ್ಲಿನ ಶ್ರೀಮಂತ ಮತ್ತು ದಟ್ಟವಾದ ಅರಣ್ಯ ಪ್ರದೇಶದಲ್ಲಿ ಮಡಿಯಾ ಸೇರಿದಂತೆ ಶೇ.39ರಷ್ಟು ಆದಿವಾಸಿ ಮುದಾಯಗಳಿವೆ. ಸುಮಾರು 76% ಭೂಪ್ರದೇಶವು ಅರಣ್ಯದಿಂದ ಆವೃತವಾಗಿದೆ. ಗಡ್ ಚಿರೋಲಿ ಜಿಲ್ಲೆಯನ್ನು ಆಡಳಿತವು 'ಹಿಂದುಳಿದ ಜಿಲ್ಲೆ' ಎಂದು ಪಟ್ಟಿ ಮಾಡಿದೆ. ಇಲ್ಲಿ ನಿಷೇಧಿತ ನಕ್ಸಲ್ ಗುಂಪುಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ, ಹೀಗಾಗಿ ಇಲ್ಲಿ ಸದಾ ಭದ್ರತಾ ಸಿಬ್ಬಂದಿ ಪಡೆ ಗಸ್ತು ತಿರುಗುತ್ತದೆ.
ಕುರ್ಮಾ ಪದ್ಧತಿಯನ್ನು ಅನುಸರಿಸುವ ಹಳ್ಳಿಗಳು ಮತ್ತು ಕುಗ್ರಾಮಗಳ ನಿಖರ ಸಂಖ್ಯೆಯನ್ನು ಇನ್ನೂ ಅಧ್ಯಯನ ಮಾಡಲಾಗಿಲ್ಲ, ಹೀಗಾಗಿ ಈ ಕುರಿತು ಯಾವುದೇ ಲಿಖಿತ ದತ್ತಾಂಶ ಲಭ್ಯವಿಲ್ಲ. "ನಾವು ಕನಿಷ್ಠ 20 ಹಳ್ಳಿಗಳಲ್ಲಿ ಕುರ್ಮಾ ಅಭ್ಯಾಸವನ್ನು ನೋಡಿದ್ದೇವೆ" ಎಂದು ಸಚಿನ್ ಆಶಾ ಸುಭಾಷ್ ಹೇಳುತ್ತಾರೆ. ಅವರ ಸರ್ಕಾರೇತರ ಸಂಸ್ಥೆ ಸಮಾಜಬಂಧನ್ 2016ರಿಂದ ಗಡ್ ಚಿರೋಲಿಯ ಭಮ್ರಾಗಡ್ ತಾಲ್ಲೂಕಿನಲ್ಲಿ ಮಹಿಳೆಯರ ಆರೋಗ್ಯದ ವಿಷಯದಲ್ಲಿ ಕೆಲಸ ಮಾಡುತ್ತಿದೆ. ತಮ್ಮ ಸ್ವಯಂಸೇವಕರ ಸಹಾಯದಿಂದ, ಸಮಾಜಬಂದ್ ಇಲ್ಲಿನ ಬುಡಕಟ್ಟು ಮಹಿಳೆಯರಿಗೆ ಮುಟ್ಟಿನ ಹಿಂದಿನ ವಿಜ್ಞಾನ ಮತ್ತು ನೈರ್ಮಲ್ಯದ ಮಹತ್ವವನ್ನು ಕಲಿಸುತ್ತಿದೆ. ಇದರೊಂದಿಗೆ, ಕುರ್ಮಾ ಅಭ್ಯಾಸದಿಂದ ಮಹಿಳೆಯರ ಆರೋಗ್ಯಕ್ಕೆ ಅಪಾಯವಿದೆ ಎಂದು ಹಿರಿಯ, ವಯಸ್ಸಾದ ಮಹಿಳೆಯರು ಮತ್ತು ಪುರುಷರಿಗೆ ವಿವರಿಸಲು ಪ್ರಯತ್ನಿಸುತ್ತಿದೆ.
ಆದರೆ ಈ ಅರಿವು ಮೂಡಿಸುವ ಕೆಲಸವು ಸವಾಲಿನದಾಗಿತ್ತು ಎನ್ನುವುದನ್ನು ಸಚಿನ್ ಒಪ್ಪುತ್ತಾರೆ. ಅವರ ಜಾಗೃತಿ ಅಭಿಯಾನಗಳು ಮತ್ತು ಕಾರ್ಯಾಗಾರಗಳು ಬಲವಾದ ವಿರೋಧವನ್ನೂ ಎದುರಿಸಿವೆ. "ಕುರ್ಮಾ ವ್ಯವಸ್ಥೆಯನ್ನು ಇದ್ದಕ್ಕಿದ್ದಂತೆ ನಿಲ್ಲಿಸುವಂತೆ ಅವರಿಗೆ ಹೇಳುವುದು ಸುಲಭವಲ್ಲ. ಇದು ಅವರ ಸಂಸ್ಕೃತಿಯ ಒಂದು ಭಾಗವಾಗಿದೆ ಮತ್ತು ಹೊರಗಿನವರು ಅದರಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಅವರು ಹೇಳುತ್ತಾರೆ”. ಈ ತಂಡಕ್ಕೆ ಹಳ್ಳಿಗಳ ಪ್ರಭಾವಿ ವ್ಯಕ್ತಿಗಳಾದ ಭೂಮಿಯಾ ಮತ್ತು ಪೆರ್ಮಾ, ಪಟೇಲರು ಮತ್ತು ಮುಖ್ಯ ಅರ್ಚಕರು ಎಚ್ಚರಿಕೆ ನೀಡಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ. "ನಾವು ಈ ವಿಷಯದಲ್ಲಿ ಅವರಲ್ಲಿ ಅರಿವು ಮೂಡಿಸಲು ಪ್ರಯತ್ನಿಸುತ್ತಿರುವುದಕ್ಕೆ ಮುಖ್ಯ ಕಾರಣ ಇಲ್ಲಿನ ಹೆಂಗಸರು ಈ ಕುರಿತು ಏನನ್ನೂ ಮಾತನಾಡುವ ಸ್ಥಿತಿಯಲ್ಲಿಲ್ಲದಿರುವುದು” ಎನ್ನುತ್ತಾರೆ ಸಚಿನ್.
ಸಚಿನ್ ಮತ್ತು ಅವರ ತಂಡದ ಸದಸ್ಯರ ಪ್ರಯತ್ನಗಳು ನಿಧಾನವಾಗಿ ಫಲ ನೀಡುತ್ತಿವೆ. ಬದಲಾವಣೆಯ ಆರಂಭವೆನ್ನುವಂತೆ, ಕೆಲವು ಹಳ್ಳಿಗಳಲ್ಲಿನ ಭೂಮಿಯಾಗಳು ಕುರ್ಮಾ ಗುಡಿಸಲುಗಳಿಗೆ ಕನಿಷ್ಠ ವಿದ್ಯುತ್, ನೀರು, ಫ್ಯಾನ್ ಮತ್ತು ಹಾಸಿಗೆಯಂತಹ ಸೌಲಭ್ಯಗಳನ್ನು ಒದಗಿಸಲು ಒಪ್ಪುತ್ತಿದ್ದಾರೆ. ಕೆಲವು ಹಳ್ಳಿಗಳಲ್ಲಿ, ಮಹಿಳೆಯರಿಗೆ ಅವರ ಮುಟ್ಟಿನ ಬಟ್ಟೆಗಳನ್ನು ಮನೆಯ ಒಳಗೆ ಟ್ರಂಕುಗಳಲ್ಲಿ ಇಡಲು ಅನುಮತಿಸಲಾಗಿದೆ. "ಕೆಲವು ಭೂಮಿಯಾಗಳು ಅನುಮತಿಯನ್ನು ಲಿಖಿತ ರೂಪದಲ್ಲಿ ನೀಡಿದ್ದಾರೆ. ಆದರೂ, ಕುರ್ಮಾದಲ್ಲಿ ಇರಲು ಒಪ್ಪದ ಮಹಿಳೆಯರನ್ನು ಬಹಿಷ್ಕರಿಸಬಾರದು ಎಂಬ ಷರತ್ತನ್ನು ಒಪ್ಪಿಕೊಳ್ಳಲು ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ" ಎಂದು ಸಚಿನ್ ಹೇಳುತ್ತಾರೆ.
*****
“ನನಗೆ ಈ ಗುಡಿಸಲಿನಲ್ಲಿ ಉಳಿಯುವುದು ಇಷ್ಟವಿಲ್ಲ” ಆತಂಕದಿಂದ ಹೇಳುತ್ತಾಳೆ 17 ವರ್ಷದ ಪಾರ್ವತಿ. ಬೆಜುರ್ ಎನ್ನುವ ಊರಿಗೆ ಸೇರಿದ ಪಾರ್ವತಿ ಮುಟ್ಟಿನ ದಿನಗಳಲ್ಲಿ ಉಳಿದುಕೊಳ್ಳುವ ಕುರ್ಮಾ ಘರ್ ಹತ್ತು ಅಡಿ ಅಗಲ ಹತ್ತು ಅಡಿ ಉದ್ದವಿದೆ. 35 ಮನೆಗಳು ಮತ್ತು 200ಕ್ಕಿಂತ ಸ್ವಲ್ಪ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಬೆಜುರ್ ಭಮ್ರಾಗಡ್ ತಾಲ್ಲೂಕಿನ ಒಂದು ಸಣ್ಣ ಹಳ್ಳಿಯಾಗಿದೆ. ಆದಾಗ್ಯೂ, ಅಲ್ಲಿನ ಮಹಿಳೆಯರ ಪ್ರಕಾರ, ಗ್ರಾಮದಲ್ಲಿ ಒಂಬತ್ತು ಮುಟ್ಟಿನ ಗುಡಿಸಲುಗಳಿವೆ.
ಆ ಗುಡಿಸಲಿನಲ್ಲಿ ಇರುವ ಏಕೈಕ ಉತ್ತಮ ಅಂಶವೆಂದರೆ ಗೋಡೆಯ ಬಿರುಕಿನ ಮೂಲಕ ಒಳಗೆ ಇಣುಕುವ ಬೆಳದಿಂಗಳು. “ಒಮ್ಮೊಮ್ಮೆ ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗುತ್ತದೆ. ಆಗ ಹತ್ತಿರದ ಕಾಡಿನಿಂದ ಕೇಳಿ ಬರುವ ಕಾಡುಪ್ರಾಣಿಗಳ ಸದ್ದು ಭಯ ಹುಟ್ಟಿಸುತ್ತದೆ” ಎನ್ನುತ್ತಾಳೆ ಪಾರ್ವತಿ.
ಈ ಗುಡಿಸಲಿನಿಂದ 200 ಮೀಟರಿಗೂ ಕಡಿಮೆ ಅಂತರದಲ್ಲಿರುವ ಅವರ ಒಂದು ಅಂತಸ್ತಿನ ಮನೆಯ ಸಾಕಷ್ಟು ವ್ಯವಸ್ಥಿತವಾಗಿದೆ. ಅಲ್ಲಿ ವಿದ್ಯುತ್ ಸೌಲಭ್ಯ ಕೂಡಾ ಇದೆ. “ನನಗೆ ಮನೆಯಲ್ಲಿ ಆರಾಮವೆನ್ನಿಸುತ್ತದೆ, ಆದರೆ ಇಲ್ಲಿ ಭಯವಾಗುತ್ತದೆ. ಮನೆಯವರು ನಿಷೇಧಕ್ಕೆ ಹೆದರುತ್ತಾರೆ” ಎಂದು ಹೇಳುತ್ತಾ ನಿಡುಸುಯ್ಯುತ್ತಾಳೆ ಪಾರ್ವತಿ. “ಬೇರೆ ದಾರಿಯೇ ಇಲ್ಲ. ಈ ವಿಷಯದಲ್ಲಿ ಊರಿನ ಗಂಡಸರು ಬಹಳ ಕಟ್ಟುನಿಟ್ಟಾಗಿದ್ದಾರೆ” ಎಂದು ಅವರು ಹೇಳುತ್ತಾರೆ.
ಪಾರ್ವತಿ ಹನ್ನೊಂದನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅವಳು ಗಡ್ ಚಿರೋಲಿಯ ಎಟಪಲ್ಲಿ ತಾಲ್ಲೂಕಿನ ಭಗವಂತರಾವ್ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿ. ಕಾಲೇಜು ಮನೆಯಿಂದ 50 ಕಿ.ಮೀ ದೂರದಲ್ಲಿದೆ. ಅವಳು ಹಾಸ್ಟೆಲ್ಲಿನಲ್ಲಿ ಉಳಿದುಕೊಂಡು ರಜಾದಿನಗಳಲ್ಲಿ ಮನೆಗೆ ಬರುತ್ತಾಳೆ. "ನನಗೆ ಮನೆಗೆ ಬರಬೇಕು ಎನ್ನಿಸುವುದಿಲ್ಲ" ಎಂದು ಅವಳು ಹೇಳುತ್ತಾಳೆ. "ಒಳಗೆ ತುಂಬಾ ಸೆಕೆಯಿರುತ್ತದೆ. ಬೇಸಿಗೆಯಲ್ಲಂತೂ ಈ ಪುಟ್ಟ ಗುಡಿಸಲಿನಲ್ಲಿ ಮೈಯೆಲ್ಲ ಬೆವರಿ ಹೋಗುತ್ತದೆ."
ಕುರ್ಮಾ ಮನೆಗಳಲ್ಲಿನ ಶೌಚಾಲಯಗಳು ಮತ್ತು ನೀರಿನ ಕೊರತೆಯು ಇಲ್ಲಿನ ಮಹಿಳೆಯರಿಗೆ ದೊಡ್ಡ ಸಮಸ್ಯೆಯಾಗಿದೆ. ಪಾರ್ವತಿ ಗುಡಿಸಲಿನ ಹಿಂದೆ ಪೊದೆಗಳ ನಡುವೆ ಮಲ-ಮೂತ್ರ ವಿಸರ್ಜನೆಗೆ ಹೋಗಬೇಕು. "ರಾತ್ರಿಯಲ್ಲಿ ಕತ್ತಲೆಯಿರುತ್ತದೆ, ಅಲ್ಲಿ ಸ್ಥಳ ಸುರಕ್ಷಿತವಲ್ಲ. ಜನರೂ ಓಡಾಡುತ್ತಿರುತ್ತಾರೆ" ಎಂದು ಆಕೆ ಹೇಳುತ್ತಾಳೆ. ಮನೆಯ ಯಾರಾದರೂ ಬಂದು ಗುಡಿಸಲಿನ ಹೊರೆಗೆ ಒಂದು ಬಕೆಟಿನಲ್ಲಿ ನೀರಿಟ್ಟು ಹೋಗುತ್ತಾರೆ. ನೀರು ಕುಡಿಯಲು ಕಲ್ಶಿ ಅಥವಾ ಚೊಂಬನ್ನು ಸಹ ಇಟ್ಟುಕೊಳ್ಳುತ್ತಾರೆ. “ಆದರೆ ಸ್ನಾನ ಮಾಡುವಂತಿಲ್ಲ” ಎನ್ನುತ್ತಾಳೆ ಪಾರ್ವತಿ.
ಪಾರ್ವತಿ ಗುಡಿಸಲಿನ ಹೊರಗೆ ಒಲೆಯನ್ನು ಹೂಡಿ ಅಡುಗೆ ಮಾಡಿಕೊಳ್ಳುತ್ತಾಳೆ. ಕತ್ತಲಾದ ನಂತರ ಅಡುಗೆ ಬಹಳ ಕಷ್ಟ. "ಮನೆಯಲ್ಲಾದರೆ ಮಸಾಲೆ ಅನ್ನ, ಕೆಲವೊಮ್ಮೆ ಕುರಿ, ಕೋಳಿ, ಹೊಳೆ ಮೀನು ಸಾರು ಕೂಡಾ ಇರುತ್ತದೆ" ಎನ್ನುತ್ತಾಳೆ ಪಾರ್ವತಿ. ಆದರೆ ಮುಟ್ಟಿನ ಸಮಯದಲ್ಲಿ ಒಂದೇ ಅಡುಗೆ. ಅದನ್ನೂ ಅವಳೇ ಬೇಯಿಸಿಕೊಳ್ಳಬೇಕು. “ಆ ದಿನಗಳಲ್ಲಿ ಬಳಸುವುದಕ್ಕೆಂದೇ ಮೆನಯಿಂದ ಪಾತ್ರೆಗಳನ್ನು ಕಳುಹಿಸಲಾಗುತ್ತದೆ.”
ಕುರ್ಮಾ ಗುಡಿಸಲಿನಲ್ಲಿ ಇರುವ ಸಮಯದಲ್ಲಿ ಸ್ನೇಹಿತರು, ನೆರೆಹೊರೆಯವರು ಅಥವಾ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸುವಂತಿಲ್ಲ. “ಹಗಲಿನಲ್ಲಿ ಗುಡಿಸಲಿನಿಂದ ಹೊರಗೆ ಬರುವಂತಿಲ್ಲ. ಹಳ್ಳಿಯೊಳಗೆ ತಿರುಗಾಡುವುದಾಗಲೀ, ಯಾರೊಂದಿಗಾದರೂ ಮಾತನಾಡುವುದನ್ನಾಗಲಿ ಮಾಡುವಂತಿಲ್ಲ” ಎಂದು ಪಾರ್ವತಿ ನಿಷೇಧಗಳ ಪಟ್ಟಿಯನ್ನು ನೀಡುತ್ತಾಳೆ.
*****
ಮುಟ್ಟಾದ ಮಹಿಳೆಯರನ್ನು ಹೀಗೆ ದೂರವಿಡುವ ಅಭ್ಯಾಸವು ಭಮ್ರಗಢದಲ್ಲಿ ಹಲವು ಅಪಘಾತಗಳು ಮತ್ತು ಸಾವಿಗೆ ಕಾರಣವಾಗಿದೆ. “ಕಳೆದ ಐದು ವರ್ಷಗಳಲ್ಲಿ ಕುರ್ಮಾ ಘರ್ ವಾಸದಲ್ಲಿದ್ದ ಸಮಯದಲ್ಲಿ ಹಾವು ಮತ್ತು ಚೇಳು ಕಡಿತದಿಂದ ನಾಲ್ವರು ಮಹಿಳೆಯರು ಸಾವಿಗೀಡಾಗಿದ್ದಾರೆ” ಎಂದು ಭಮ್ರಗಡದ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ (ಸಿಡಿಪಿಒ) ಆರ್ ಎಸ್ ಚವಾಣ್ ಹೇಳುತ್ತಾರೆ. ಅವರು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಪ್ರತಿನಿಧಿಸುತ್ತಾರೆ.
ಮುರುಕಲು ಕುರ್ಮಾ ರಚನೆಗಳಿಗೆ ಬದಲಾಗಿ ಜಿಲ್ಲಾಡಳಿತವು 2019ರಲ್ಲಿ ಏಳು ʼಮನೆʼ ಮನೆಗಳನ್ನು ಕಟ್ಟಿಸಿದೆ ಎನ್ನುತ್ತಾರೆ ಚವಾಣ್. ಒಂದು ಮನೆಯಲ್ಲಿ ಕನಿಷ್ಠ 10 ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಇದನ್ನು ನಿರ್ಮಿಸಲಾಗಿದೆ. ಈ ವೃತ್ತಾಕಾರದ ರಚನೆಗಳಲ್ಲಿ ಸಾಕಷ್ಟು ಗಾಳಿ ಬರುವಂತೆ ಕಿಟಕಿಗಳು, ಮತ್ತು ಶೌಚಾಲಯ ಮತ್ತು ಹಾಸಿಗೆಗಳನ್ನು ಹೊಂದಿರಬೇಕು ಎಂದು ಯೋಜನೆಯಲ್ಲಿ ಹೇಳಲಾಗಿತ್ತು.
ಜೂನ್ 2022ರ ಸರ್ಕಾರದ ಪತ್ರಿಕಾ ಪ್ರಕಟಣೆಯ ಪ್ರಕಾರ, ಗಡ್ ಚಿರೋಲಿಯಲ್ಲಿ ಅಂತಹ 23 'ಮಹಿಳಾ ವಿಸಾವ ಕೇಂದ್ರ' ಅಥವಾ 'ಮಹಿಳಾ ವಿಶ್ರಾಂತಿ ಕೇಂದ್ರಗಳನ್ನು' ನಿರ್ಮಿಸಲಾಗಿದೆ. ಯುನಿಸೆಫ್ ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರದ ತಾಂತ್ರಿಕ ನೆರವಿನೊಂದಿಗೆ, ಮುಂದಿನ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಇಂತಹ 400 ಮಹಿಳಾ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.
ಆದರೆ, ಮೇ 2023ರಲ್ಲಿ ಪರಿ ಗಮನಿಸಿದಂತೆ ಅಲ್ಲಿನ ವಾಸ್ತವ ಪರಿಸ್ಥಿತಿ ಬೇರೆಯಿದೆ. ಕೃಷ್ಣಾರ್, ಕಿಯಾರ್ ಮತ್ತು ಕುಮಾರಗುಡ ಗ್ರಾಮಗಳಲ್ಲಿ, ಸರ್ಕಾರಿ ಕುರ್ಮಾ ಮನೆಗಳು ಅರೆ-ಬರೆ ಪೂರ್ಣಗೊಂಡಿವೆ, ಶಿಥಿಲಗೊಂಡಿವೆ ಮತ್ತು ವಾಸಯೋಗ್ಯವಾಗಿಲ್ಲ. ಸರ್ಕಾರಿ ಅಧಿಕಾರಿ ಆರ್ ಎಸ್ ಚವಾಣ್ ಅವರಿಗೆ ಬಳಕೆಯಲ್ಲಿರುವ ಸರ್ಕಾರಿ ಕುರ್ಮಾ ಮನೆಗಳ ಸಂಖ್ಯೆಯ ನಿಖರವಾದ ವಿವರಗಳನ್ನು ನೀಡಲು ಸಾಧ್ಯವಾಗಲಿಲ್ಲ. "ನಿಖರವಾಗಿ ಹೇಳುವುದು ಕಷ್ಟ. ಆದರೆ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಕೆಲವು ಸ್ಥಳಗಳಲ್ಲಿ ಪರಿಸ್ಥಿತಿ ತೀರಾ ಕೆಟ್ಟದಾಗಿದೆ, ಹಣದ ಕೊರತೆಯಿಂದಾಗಿ ಕೆಲಸ ಅರ್ಧಕ್ಕೆ ನಿಂತಿದೆ."
ಇಲ್ಲಿ ಮೂಡುವ ಪ್ರಶ್ನೆಯೆಂದರೆ, ಇಂತಹ ಪರ್ಯಾಯ ವ್ಯವಸ್ಥೆಯು ಕುರ್ಮಾ ವ್ಯವಸ್ಥೆಯನ್ನು ತೊಡೆದುಹಾಕಲು ಹೇಗೆ ಸಹಾಯ ಮಾಡುತ್ತದೆ ಎನ್ನುವುದು. "ಇದನ್ನು ಬೇರು ಸಮೇತ ನಿರ್ಮೂಲನೆ ಮಾಡಬೇಕಾಗಿದೆ" ಎಂದು ಸಮಾಜಬಂಧ್ ಸಂಸ್ಥೆಯ ಸಚಿನ್ ಆಶಾ ಸುಭಾಷ್ ಹೇಳುತ್ತಾರೆ. "ಸರ್ಕಾರಿ ಕುರ್ಮಾ ಮನೆ ಪರಿಹಾರವಲ್ಲ. ಒಂದು ರೀತಿಯಲ್ಲಿ, ಇದು ಪ್ರೋತ್ಸಾಹದಂತೆ."
ಮುಟ್ಟಿನ ಸಮಯದಲ್ಲಿ ಮಹಿಳೆಯರನ್ನು ದೂರವಿಡುವುದು ಭಾರತೀಯ ಸಂವಿಧಾನದ ಉಲ್ಲಂಘನೆಯಾಗಿದೆ. ಅಸ್ಪೃಶ್ಯತೆಯನ್ನು ನಿಷೇಧಿಸುವ ಸಂವಿಧಾನದ 17ನೇ ವಿಧಿ ಇದನ್ನೇ ಹೇಳುತ್ತದೆ. 2018ರಲ್ಲಿ ದೇಶದ ಸುಪ್ರೀಂ ಕೋರ್ಟಿನಲ್ಲಿ ನಡೆದ ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಷನ್ ವರ್ಸಸ್ ಕೇರಳ ಸ್ಟೇಟ್ ಪ್ರಕರಣವನ್ನು ಇಲ್ಲಿ ಉಲ್ಲೇಖಿಸುವುದು ಅವಶ್ಯಕ. ಈ ಪ್ರಕರಣದಲ್ಲಿ ನ್ಯಾಯಾಧೀಶರ ತೀರ್ಪು ಹೇಳುವಂತೆ , "ಮುಟ್ಟಿನ ಕಾರಣಕ್ಕೆ ಮಹಿಳೆಯರನ್ನು ಸಾಮಾಜಿಕವಾಗಿ ಹೊರಗಿಡುವುದು ಅಸ್ಪೃಶ್ಯತೆಯ ಒಂದು ರೂಪವಲ್ಲದಿದ್ದರೆ, ಮತ್ತೇನು? ಮತ್ತು ಇದು ಸಾಂವಿಧಾನಿಕ ಮೌಲ್ಯಗಳ ಉಲ್ಲಂಘನೆಯಾಗಿದೆ. ವ್ಯಕ್ತಿಯನ್ನು ಕಳಂಕಕ್ಕೆ ಒಳಪಡಿಸುವ 'ಶುದ್ಧತೆ ಮತ್ತು ಪರಿಶುದ್ಧತೆ'ಯಂತಹ ಪರಿಕಲ್ಪನೆಗಳಿಗೆ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಸ್ಥಾನವಿಲ್ಲ.”
ಆದಾಗ್ಯೂ, ಈ ತಾರತಮ್ಯದ ಅಚರಣೆಯು ಪಿತೃಪ್ರಧಾನ ವ್ಯವಸ್ಥೆಯಲ್ಲಿ ಉಳಿದುಕೊಂಡು ಬಂದಿದೆ.
"ಅದು ದೇವರಿಗೆ ಸಂಬಂಧಿಸಿದ್ದು. ನಮ್ಮ ದೇವರು ಇದನ್ನು ನಾವು ಅನುಸರಿಸಬೇಕು ಎಂದಯ ಬಯಸುತ್ತದೆ. ಒಂದು ವೇಳೆ ಅದನ್ನು ಪಾಲಿಸದೆ ಹೋದರೆ ಕೆಡುಕಾಗುತ್ತದೆ” ಎಂದು ಭಮ್ರಗಡದ ಗೋಲಗುಡ ಗ್ರಾಮದ ಮುಖ್ಯ ಅರ್ಚಕ ಲಕ್ಷ್ಮಣ್ ಹೊಯಾಮಿ ಬಹಳ ವಿಶ್ವಾಸದಿಂದ ಹೇಳುತ್ತಾರೆ. "ಸಂಪ್ರದಾಯವನ್ನು ಉಲ್ಲಂಘಿಸಿದರೆ ಮುಟ್ಟಾದ ಮಹಿಳೆಯರು ತೊಂದರೆ ಅನುಭವಿಸುತ್ತಾರೆ, ಗ್ರಾಮಸ್ಥರು ತೊಂದರೆ ಅನುಭವಿಸುತ್ತಾರೆ. ರೋಗ ಹೆಚ್ಚಾಗಲಿದೆ. ನಮ್ಮ ಕೋಳಿ, ಕುರಿ ಸಾಯುತ್ತವೆ... ಅದು ನಮ್ಮ ಸಂಪ್ರದಾಯ. ನಾವು ಸಂಪ್ರದಾಯವನ್ನು ಹೇಗೆ ಬಿಡಲು ಸಾಧ್ಯ? ಬಿಟ್ಟರೆ ನಮ್ಮನ್ನು ದೇವರು ಬರ, ನೆರೆ ಇತ್ಯಾದಿ ಪ್ರಾಕೃತಿಕ ವಿಕೋಪದ ಮೂಲಕ ಶಿಕ್ಷಿಸುತ್ತದೆ. ಇದು ನಮ್ಮ ಸಂಪ್ರದಾಯ ಮತ್ತು ಇದು ಸದಾ ಇರುತ್ತದೆ ..." ಎಂದು ಅವರು ಹೇಳುತ್ತಾರೆ
ಹೊಯಾಮಿ ಅವರಂತಹ ಹಲವರು ಈ ಪದ್ಧತಿಯನ್ನು ಮುಂದುವರೆಸಬೇಕೆನ್ನುವ ಹಠದಲ್ಲಿದ್ದರೂ, ಕೆಲವು ಯುವತಿಯರು ಈ ಅನಿಷ್ಠದ ವಿರುದ್ಧ ನಿಧಾನವಾಗಿ ತಿರುಗಿ ಬೀಳುತ್ತಿದ್ದಾರೆ. ಅಂತಹ ಯುವತಿಯರಲ್ಲಿ ಕೃಷ್ಣಾರ್ ಗ್ರಾಮದ ಅಶ್ವಿನಿ ವೆಳಾಂಜಿ ಕೂಡಾ ಒಬ್ಬರು. “ನಾನು ಕರ್ಮಾ ಪದ್ಧತಿ ಅನುಸರಿಸುವುದಿಲ್ಲ ಎನ್ನುವ ಷರತ್ತನ್ನು ವಿಧಿಸಿ ಮದುವೆಯಗಿದ್ದೇನೆ. ಈ ಪದ್ಧತಿ ನಿಲ್ಲಬೇಕು” ಎನ್ನುತ್ತಾರೆ ಅವರು. 2021ರಲ್ಲಿ 12ನೇ ತರಗತಿ ಮುಗಿಸಿದ ಅವರು ತನ್ನ ಷರತ್ತನ್ನು ಒಪ್ಪಿಕೊಂಡ ನಂತರವೇ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಅಶೋಕ್ ಎನ್ನುವ ಯುವಕನನ್ನು ಮದುವೆಯಾದರು.
ಅಶ್ವಿನಿ 14 ವಯಸ್ಸಿನವರಾಗಿದ್ದಾಗಿನಿಂದಲೂ ಕುರ್ಮಾ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದ್ದರು. “ಮನೆಯಲ್ಲೂ ಅಪ್ಪ ಅಮ್ಮನ ಜೊತೆ ಈ ಕುರಿತು ವಾದಿಸುತ್ತಿದ್ದೆ. ಆದರೆ ಸಾಮಾಜಿಕ ಒತ್ತಡದ ಕಾರಣದಿಂದಾಗಿ ನಾವು ಅಸಹಾಯಕರಾಗಿದ್ದೆವು” ಎಂದು ಆಕೆ ಹೇಳುತ್ತಾರೆ. ಮದುವೆಯ ನಂತರ ಅಶ್ವಿನಿ ಮುಟ್ಟಾದ ಸಮಯದಲ್ಲಿ ಮನೆಯ ವರಾಂಡದಲ್ಲಿ ಇರುತ್ತಾರೆ. ಜೊತೆಗೆ ಈ ನಿಟ್ಟಿನಲ್ಲಿ ಊರಿನ ಜನರ ಕೊಂಕು ಮಾತುಗಳ ನಡುವೆಯೂ, ವ್ಯವಸ್ಥೆಯ ವಿರುದ್ಧದ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. “ನಾನು ಕುರ್ಮಾ ಗುಡಿಸಲಿನಿಂದ ಮನೆಯ ವರಾಂಡದ ತನಕ ತಲುಪಿದ್ದೇನೆ. ಆದಷ್ಟು ಬೇಗ ಮುಟ್ಟಿನ ಸಮಯದಲ್ಲಿ ಒಳಮನೆಯಲ್ಲೇ ಇರಲಿದ್ದೇನೆ” ಎನ್ನುತ್ತಾರೆ ಅಶ್ವಿನಿ. “ನಾನು ಖಂಡಿತವಾಗಿಯೂ ನಮ್ಮ ಮನೆಯೊಳಗೆ ಬದಲಾವಣೆ ತಂದೇ ತರುತ್ತೇನೆ.”
ಅನುವಾದ: ಶಂಕರ. ಎನ್. ಕೆಂಚನೂರು