ಸಂಜೆಗತ್ತಲಾಗುತ್ತಿದ್ದಂತೆ ತಮಿಳುನಾಡಿನ ವದನಮೆಲ್ಲಿ ಗ್ರಾಮದಲ್ಲಿ ಶ್ರೀ ಪೊನ್ನಿಯಮ್ಮನ್ ತೆರುಕೂತ್ತು ಮಂಡ್ರಂನ ಸದಸ್ಯರು ಕರಿಯಕೂತ್ತು ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ. ಸಂಜೆ ಶುರುವಾದರೆ ಬೆಳಗ್ಗಿನವರೆಗೆ ಅನೇಕ ಪಾತ್ರಗಳು, ನಿರಂತರವಾಗಿ ವೇಷಭೂಷಣಗಳನ್ನು ಬದಲಾಯಿಸಿಕೊಂಡು ರಂಗಪ್ರವೇಶ ಮಾಡುತ್ತವೆ.
ತೆರೆಯ ಹಿಂದೆ 33 ವರ್ಷದ ಪ್ರಾಯದ ಶರ್ಮಿ ಬಣ್ಣ ಹಚ್ಚಲು ಶುರು ಮಾಡಿದ್ದಾರೆ. ಕೆಂಪು ಪುಡಿಯನ್ನು ಎಣ್ಣೆಯೊಂದಿಗೆ ಬೆರೆಸಿ ತುಟಿಗೆ ಹಚ್ಚಿಕೊಳ್ಳುವ ಬಣ್ಣವನ್ನು ತಯಾರಿಸುವಾಗ, ಅವರು ಅರಿತಾರಂ (ಮೇಕಪ್) ನ ಕೆಲವು ಮೂಲಭೂತ ನಿಯಮಗಳ ಬಗ್ಗೆ ವಿವರಿಸುತ್ತಾರೆ: “ಪುರುಷರ ಮತ್ತು ಮಹಿಳೆಯರ ಅರಿತಾರಂ ಬೇರೆ ಬೇರೆಯಾಗಿರುತ್ತದೆ. ಇದು ಪಾತ್ರ ಮತ್ತು ಪಾತ್ರ ಪ್ರದರ್ಶನದ ಅವಧಿಗೆ ಅನುಗುಣವಾಗಿ ಭಿನ್ನವಾಗುತ್ತದೆ.”
ಶ್ರೀ ಪೊನ್ನಿಯಮ್ಮನ್ ತೆರುಕೂತ್ತು ಮಂಡ್ರಂ ತಮಿಳುನಾಡಿನ ಪುರಾತನ ಕಲಾ ಪ್ರಕಾರಗಳಲ್ಲಿ ಒಂದಾದ ಈ ಪ್ರದರ್ಶನ ಕಲೆಯನ್ನು ಆಡಿ ತೋರಿಸುವ ನಾಟಕ ಕಂಪನಿ. 17 ಮಂದಿ ಸದಸ್ಯರಿರುವ ಈ ತಂಡದ ನಾಲ್ಕು ಟ್ರಾನ್ಸ್‌ಜೆಂಡರ್ ಕಲಾವಿದೆಯರಲ್ಲಿ ಶರ್ಮಿ ಕೂಡ ಒಬ್ಬರು. "ನನ್ನ ಹಿಂದಿನ ತಲೆಮಾರಿನವರೂ ತೆರುಕೂತ್ತನ್ನು ಪ್ರದರ್ಶಿಸಿದ್ದಾರೆ. ಇದು ಎಷ್ಟು ಪ್ರಾಚೀನ ಎಂದು ನಿಖರವಾಗಿ ಹೇಳಲು ನನಗೆ ಸಾಧ್ಯವಿಲ್ಲ," ಎಂದು ಶರ್ಮಿ ಹೇಳುತ್ತಾರೆ.
ತೆರುಕೂತ್ತು, ಅಥವಾ ಬೀದಿನಾಟಕದಲ್ಲಿ ಸಾಮಾನ್ಯವಾಗಿ ಮಹಾಭಾರತ ಮತ್ತು ರಾಮಾಯಣದಂತಹ ಮಹಾಕಾವ್ಯಗಳ ಕಥನಗಳನ್ನು ಆಧರಿಸಿದ ಪ್ರಸಂಗಗಳನ್ನು ರಾತ್ರಿಯಿಡೀ ಪ್ರದರ್ಶಿಸಲಾಗುತ್ತದೆ. ಸಾಮಾನ್ಯವಾಗಿ ಪಂಗುನಿ (ಏಪ್ರಿಲ್) ಮತ್ತು ಪುರಟ್ಟಸ್ಸಿ (ಸೆಪ್ಟೆಂಬರ್) ತಿಂಗಳ ನಡುವೆ ತೆರುಕೂತ್ತು ಸೀಸನ್ ಬರುತ್ತದೆ. ಈ ಅವಧಿಯಲ್ಲಿ ಶರ್ಮಿ ಮತ್ತು ಅವರ ತಂಡ ಪ್ರತಿ ವಾರದ ದಿನವೂ ಪ್ರದರ್ಶನ ನಡೆಸುತ್ತದೆ. ಒಂದು ತಿಂಗಳಿಗೆ ಸುಮಾರು 15-20 ಆಟಗಳು ನಡೆಯುತ್ತವೆ. ಪ್ರತಿ ಆಟಕ್ಕೂ ಕಲಾವಿದರಿಗೆ 700-800 ರುಪಾಯಿ ಸಂಭಾವನೆ ನೀಡಲಾಗುತ್ತದೆ. ಅಂದರೆ ಒಂದು ತಿಂಗಳಿಗೆ ಪ್ರತಿ ಕಲಾವಿದರಿಗೆ ಸುಮಾರು 10,000-15,000 ರುಪಾಯಿ ಸಿಗುತ್ತದೆ.
ಹಾಗಿದ್ದೂ ಕೂಡ, ಸೀಸನ್ ಮುಗಿದ ಮೇಲೆ ಕಲಾವಿದರು ಆದಾಯದ ಇತರ ಮೂಲಗಳನ್ನು ಹುಡುಕಬೇಕಾಗುತ್ತದೆ. ಈ ಸಂದರ್ಭದಲ್ಲಿ ಅಂತ್ಯಕ್ರಿಯೆಗಳಲ್ಲಿ ಮಾತ್ರ ಪ್ರದರ್ಶಿಸಲಾಗುವ ತೆರುಕೂತ್ತಿನ ಆರಾಧನಾ ಸ್ವರೂಪವಾದ ಕರಿಯಕ್ಕೂತ್ತನ್ನೂ ಮಾಡುತ್ತಾರೆ. ತಿರುವಳ್ಳೂರು ಜಿಲ್ಲೆಯ ಪಟ್ಟರೈಪೆರಂಬದೂರಿನಲ್ಲಿರುವ ತಮ್ಮ ನಾಟಕ ಕಂಪನಿಯ ಕಟ್ಟಡದಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ವದನಮೆಲ್ಲಿಯಲ್ಲಿ ನಡೆಯಲಿರುವ ಕರಿಯಕೂತ್ತು ಪ್ರದರ್ಶನಕ್ಕೆ ತಯಾರಿ ನಡೆಸುತ್ತಾ, "ಯಾರಾದರೂ ಸತ್ತರೆ ನಮಗೆ ವಾರಕ್ಕೆ ಒಂದೆರಡು ಆಟಗಳು ಸಿಗುತ್ತವೆ," ಎಂದು ಶರ್ಮಿ ಹೇಳುತ್ತಾರೆ.
























