ಪರಿಯ ಅಧಿಕೃತ ಆರಂಭಕ್ಕೆ ಇದೀಗ ಹತ್ತು ವರ್ಷ. 2014ರ ಡಿಸೆಂಬರ್ 20ರಂದು ನಮ್ಮ ಪ್ರಯಾಣ ಆರಂಭಗೊಂಡಿತ್ತು.
ಹಾಗಿದ್ದರೆ ಈ ಹತ್ತು ವರ್ಷಗಳಲ್ಲಿ ನಮ್ಮ ದೊಡ್ಡ ಸಾಧನೆ ಯಾವುದು? ನಾವಿನ್ನೂ ಇಲ್ಲಿಯೇ ಉಳಿದಿದ್ದೇವೆ. ಸದ್ಯದ ಮಟ್ಟಿಗೆ ಅದಕ್ಕಿಂತ ದೊಡ್ಡ ಸಾಧನೆ ಇನ್ನೊಂದಿರಲು ಸಾಧ್ಯವಿಲ್ಲ. ಇಂದು ನಾವು ಒಂದು ಸ್ವತಂತ್ರ ಮಾಧ್ಯಮವಾಗಿ ಕಾರ್ಪೋರೇಟ್ ಶಕ್ತಿಯಾಗಿ ಬೆಳೆಯುತ್ತಿರುವ ಮಾಧ್ಯಮ ಶಕ್ತಿಗಳ ನಡುವೆ ಉಳಿದಿದ್ದೇವೆ ಮತ್ತು ಬೆಳೆಯುತ್ತಿದ್ದೇವೆ. ಪರಿ ಇಂದು ಪ್ರತಿದಿನ ಹದಿನೈದು ಭಾಷೆಗಳಲ್ಲಿ ತನ್ನ ಬರೆಹಗಳನ್ನು ಪ್ರಕಟಿಸುತ್ತಿದೆ. ಯಾವುದೇ ಆಸ್ತಿಯಿಲ್ಲದೆ ರಚಿಸಲಾದ ಟ್ರಸ್ಟ್ ತನ್ನ ಚಟುವಟಿಕೆಗಳಿಗೆ ಸರ್ಕಾರಿ ಹಣಕಾಸು ಸಹಾಯವನ್ನು ಪಡೆದಿಲ್ಲ ಮತ್ತು ಕೇಳಿಲ್ಲ. ಯಾವುದೇ ನೇರ ಕಾರ್ಪೊರೇಟ್ ದೇಣಿಗೆಯನ್ನು ಪಡೆದಿಲ್ಲ ಅಥವಾ ಜಾಹೀರಾತು ಆದಾಯ ಪಡೆದಿಲ್ಲ (ಪ್ರಜ್ಞಾಪೂರ್ವಕವಾಗಿ). ಇದಲ್ಲದೆ ನಾವು ಪರಿಯ ಯಾವುದೇ ಓದುಗರು, ನೋಡುಗರು ಮತ್ತು ಕೇಳುಗರನ್ನು ಚಂದಾ ಶುಲ್ಕದ ಹೆಸರಿನಲ್ಲಿ ಹೊರಗಿಟ್ಟಿಲ್ಲ. ನಮ್ಮ ಪರಿಯ ಬೆನ್ನೆಲುಬೆಂದರೆ ಬದ್ಧತೆಯನ್ನು ಹೊಂದಿರುವ ಸ್ವಯಂಸೇವಕರ ದೊಡ್ಡ ಜಾಲ. ಇದರಲ್ಲಿ ಪತ್ರಕರ್ತರು, ಟೆಕ್ಕಿಗಳು, ಕಲಾವಿದರು, ಶಿಕ್ಷಣ ತಜ್ಞರು ಮುಂತಾದವರಿದ್ದಾರೆ. ಇವರೆಲ್ಲರೂ ಅನುಭವಿಗಳು ಆದರೆ ಉಚಿತವಾಗಿ ತಮ್ಮ ಸೇವೆಗಳನ್ನು ಒದಗಿಸುವ ಮೂಲಕ ಪರಿಯ ಚಾಲಕ ಶಕ್ತಿಗಳಾಗಿ ಹೊರಹೊಮ್ಮಿದ್ದಾರೆ. ಇದರ ಜೊತೆಗೆ ಸ್ವಾತಂತ್ರ್ಯವನ್ನು ಎಂದಿಗೂ ಹತ್ತಿಕ್ಕಲು ಪ್ರಯತ್ನಿಸದ ಪ್ರತಿಷ್ಠಾನಗಳಿಂದ ಉದಾರ ದೇಣಿಗೆಗಳನ್ನು ಪಡೆದು ಪರಿ ಮುಂದಕ್ಕೆ ಸಾಗುತ್ತಿದೆ.
ಪ್ರಸ್ತುತ ಪ್ರಾಮಾಣಿಕ ಮತ್ತು ಅತ್ಯಂತ ಶ್ರದ್ಧೆಯ ಸಿಬ್ಬಂದಿಯಿಂದ ನಡೆಸಲ್ಪಡುವ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ ಭಾರತದ ಸರಿಸುಮಾರು 95 ನೈಸರ್ಗಿಕ-ಭೌತಿಕ ಅಥವಾ ಐತಿಹಾಸಿಕವಾಗಿ ವಿಕಸನಗೊಂಡ ಪ್ರದೇಶಗಳಿಂದ ವ್ಯವಸ್ಥಿತವಾಗಿ ವರದಿ ಮಾಡಲು ಪ್ರಯತ್ನಿಸುತ್ತಿರುವ ಏಕೈಕ ವೆಬ್ಸೈಟ್. ಪರಿ ಎನ್ನುವುದು 90 ಕೋಟಿ ಜನರ ಜೀವನ, ಅವರ ಜೀವನೋಪಾಯ, ಅವರ ಸಂಸ್ಕೃತಿಗಳು, ಅವರು ಮಾತನಾಡುವ 800 ಬೇರೆ ಬೇರೆ ಭಾಷೆಗಳನ್ನು ಪ್ರತಿನಿಧಿಸುವ ವೇದಿಕೆ. ಪರಿ ಎಂದಿಗೂ ಜನಸಾಮನ್ಯರ ಬದುಕಿನ ದೈನಂದಿನ ಕತೆಗಳನ್ನು ದಾಖಲಿಸುವ ತನ್ನ ಗುರಿಗೆ ಸದಾ ಬದ್ಧವಾಗಿರುತ್ತದೆ. ನಗರಗಳಲ್ಲಿ ವಾಸಿಸುತ್ತಿರುವ ವಲಸೆ ಕಾರ್ಮಿಕರ ಕುರಿತಾಗಿಯೂ ನಾವು ವರದಿ ಮಾಡುತ್ತೇವೆಯಾದ ಕಾರಣ ಒಟ್ಟಾರೆಯಾಗಿ ನಾವು ಸುಮಾರ ಒಂದು ಶತಕೋಟಿ ಜನರನ್ನು ಪ್ರತಿನಿಧಿಸುತ್ತೇವೆ.
ಸಂಸ್ಥಾಪಕರು ಮೊದಲಿನಿಂದಲೂ ಪರಿ ಪತ್ರಿಕೋದ್ಯಮ ಮತ್ತು ಒಂದು ಜೀವಂತ ಆರ್ಕೈವ್ ಎರಡೂ ಆಗಿರಬೇಕು ಎನ್ನುವ ಸ್ಪಷ್ಟ ಗುರಿಯನ್ನು ಹೊಂದಿದ್ದರು. ಮತ್ತು ನಾವು ಇಂದಿನ ಕಾರ್ಪೊರೇಟ್ ವ್ಯಾಖ್ಯಾನದ ʼಪ್ರೊಫೆಷನಲ್ʼ ಸುದ್ದಿ ವಾಹಿನಿ ಆಗದಿರಲು ಸಹ ನಿರ್ಧರಿಸಿದ್ದೆವು. ಮಾನವಿಕಗಳ ಬಲ, ವಿಜ್ಞಾನಗಳು ಮತ್ತು ಮುಖ್ಯವಾಗಿ ಸಾಮಾಜಿಕ ವಿಜ್ಞಾನಗಳ ಜ್ಞಾನ ಮತ್ತು ಸಾಮರ್ಥ್ಯಗಳನ್ನು ಆಳವಡಿಸಿಕೊಳ್ಳುವುದು ನಮ್ಮ ಗುರಿಯಾಗಿತ್ತು. ಮೊದಲ ದಿನದಿಂದಲೂ ನಾವು ಅನುಭವಿ ಪತ್ರಕರ್ತರ ಜೊತೆಗೆ ಈ ಇತರ ವರ್ಗಗಳ ಅನುಭವಿಗಳನ್ನು ಸಹ ಒಟ್ಟುಗೂಡಿಸಿಕೊಂಡು ಕೆಲಸ ಮಾಡುತ್ತಿದ್ದೇವೆ.
ಇದು ಗೊಂದಲ, ಸಂಘರ್ಷ, ತಪ್ಪು ತಿಳುವಳಿಕೆ, ವಾದ (ಕೆಲವೊಮ್ಮೆ ಕಹಿಯಾದ ರೂಪದಲ್ಲಿ)ಕ್ಕೆ ಕಾರಣವಾಯಿತು ಮತ್ತು ಫಲಿತಾಂಶವಾಗಿ ಇವೆಲ್ಲದ ಮಿಶ್ರಣವು ಒಂದು ಅಸಾಧರಣ ಫಲಿತಾಂಶವೂ ದೊರಕಿತು. ನಮ್ಮ ದನಿ ನಾವು ಉತ್ಪಾದಿಸುವ ವಿಷಯದ ಮೇಲೆ ಯಾಜಮಾನ್ಯವನ್ನು ಸಾಧಿಸುವುದಿಲ್ಲ ಎನ್ನುವುದು ಎಲ್ಲಾ ವಿಭಾಗಗಳೂ ಒಪ್ಪಿರುವ ತತ್ವ. ಇಲ್ಲಿ ಸದಾ ಮೇಲುಗೈ ಸಾಧಿಸುವುದು ಜನಸಾಮಾನ್ಯರ ಬದುಕು. ನಮ್ಮ ದನಿಯಲ್ಲ. ಇದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಜನರ ದನಿಯಲ್ಲಿ ಕತೆಗಳನ್ನು ಹೇಳುತ್ತೇವೆಯೇ ಹೊರತು ಬುಲೆಟಿನ್ ಅಥವಾ ಅಕಾಡೆಮಿಕ್ ಅಥವಾ ಅಧಿಕಾರಶಾಹಿ ಶೈಲಿಯಲ್ಲಿ ವರದಿಗಳನ್ನು ನೀಡುವುದಿಲ್ಲ. ನಾವು ನಮ್ಮ ವರದಿಗಾರರಿಗೂ ಅವರ ವರದಿಗಳಲ್ಲಿ ಕೇಳುವ ದನಿ ಜನರದ್ದಾಗಿರಬೇಕೇ ಹೊರತು ನಿಮ್ಮದಲ್ಲ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತೇವೆ. ಈ ನಿಟ್ಟಿನಲ್ಲಿ ನಮಗೆ ಸಾಧ್ಯವಾದಷ್ಟು, ರೈತರು, ಅರಣ್ಯವಾಸಿಗಳು, ಕಾರ್ಮಿಕರು, ನೇಕಾರರು, ಮೀನುಗಾರರು ಮತ್ತು ಅಸಂಖ್ಯಾತ ಇತರ ಜೀವನೋಪಾಯಗಳ ಜನರಿಂದಲೇ ಅವರ ಕತೆಗಳನ್ನು ಬರಹ ರೂಪಕ್ಕೆ ತರುವ ಪ್ರಯತ್ನವನ್ನು ಸಹ ನಾವು ಮಾಡುತ್ತಿದ್ದೇವೆ.














