ಇತ್ತ ಸೂರ್ಯ ತನ್ನ ದಿನದ ಕೆಲಸ ಮುಗಿಸಿ ಮರಳುತ್ತಿದ್ದರೆ ಅತ್ತ ಕತ್ತಲಿನ ನಡುವಿನಿಂದ ಓಂ ಶಕ್ತಿ ಅಮ್ಮ ಆಕೃತಿಯಿರುವ ಸೀರಿಯಲ್ ಸೆಟ್‌ಗಳ ಬೆಳಕು ಜೀವ ಪಡೆಯತೊಡಗುತ್ತದೆ. ಅಂದು ಬಂಗಳಮೇಡುವಿನ ಇರುಳರು ತಮ್ಮ ವಾರ್ಷಿಕ ಹಬ್ಬವಾದ ಓಂ ಸಕ್ತಿ ತೀಮಿದಿ ತಿರುವುಳಾ ಎನ್ನುವ ಕೆಂಡ ಹಾಯುವ ವಾರ್ಷಿಕ ಹಬ್ಬದ ಆಚರಣೆಯಲ್ಲಿದ್ದರು.
ಒಂದು ಮಧ್ಯಾಹ್ನದಿಂದ ಉರಿಯುತ್ತಿದ್ದ ಸೌದೆಯ ಕೊಳ್ಳಿಗಳು ಉರಿದು ಕೆಂಡಗಳಾಗಲು ಪ್ರಾರಂಭಿಸಿದ್ದವು. ಅಲ್ಲಿದ್ದ ಸ್ವಯಂಸೇವಕರು ಆ ಕೆಂಡದ ರಾಶಿಯನ್ನು ಹೊಳೆಯುವ ಹೂವಿನ ರಾಶಿಯನ್ನು ನೆಪಿಸುವಂತೆ ತೆಳ್ಳಗೆ ಹರಡಿದರು. ಇದು ಇರುಳ ಜನರಿಗೆ ತೀಮಿದಿಯನ್ನು ʼಪೂ-ಮಿದಿಯಾಗಿʼ ಅಥವಾ ಹೂವಿನ ಮೇಲಿನ ನಡಿಗೆಯನ್ನಾಗಿ ತೋರಿಸುವ ಪ್ರಯತ್ನದಂತೆ ಕಾಣುತ್ತಿತ್ತು.
ವಾತಾವರಣದಲ್ಲಿ ಕುತೂಹಲ ಹೆಪ್ಪುಗಟ್ಟಿತ್ತು. ನೂರಾರು ಜನರು ಅಂದು ನಡೆಯಲಿರುವ ಇರುಳರ ಕೆಂಡ ಹಾಯುವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲೆಂದು ಬಂದಿದ್ದರು. ಅವರಲ್ಲಿ ಅಕ್ಕಪಕ್ಕದ ಊರುಗಳ ಜನರೂ ಇದ್ದರು. ಇದು ಓಂ ಶಕ್ತಿ ಎನ್ನುವ ತಮಿಳುನಾಡಿನಾದ್ಯಂತ ಪಸರಿಸಿರುವ ಶಕ್ತಿ ಮತ್ತು ಅಧಿಕಾರದ ಪ್ರತೀಕವಾಗಿರುವ ದೇವಿಯ ಆರಾಧನೆಯಾಗಿದೆ.
ತಮಿಳುನಾಡಿನಲ್ಲಿ ಇರುಳರ್ (ಇರುಳ ಎಂದೂ ಕರೆಯಲಾಗುತ್ತದೆ) ಸಮುದಾಯವನ್ನು ಪರಿಶಿಷ್ಟ ಪಂಗಡದಡಿ ಪಟ್ಟಿ ಮಾಡಲಾಗಿದೆ. ಅವರು ಸಾಂಪ್ರದಾಯಿಕವಾಗಿ ಕನ್ನೈಯಮ್ಮ ಎನ್ನುವ ದೇವಿಯನ್ನು ಪೂಜಿಸುತ್ತಿದ್ದರು. ಅವರು ಆಕೆಯನ್ನು ಸಪ್ತ ಕನ್ನಿಕೆಯರಲ್ಲಿ ಒಬ್ಬಳೆಂದು ಪರಿಗಣಿಸುತ್ತಾರೆ. ಪ್ರತಿಯೊಂದು ಇರುಳರ ಮನೆಯಲ್ಲೂ ಈ ದೇವಿಯನ್ನು ಪ್ರತಿನಿಧಿಸುವ ಒಂದು ಮಣ್ಣಿನ ಕಳಶವಿರುತ್ತದೆ. ಅದರೊಳಗೆ ಬೇವಿನ ಎಲೆಗಳನ್ನು ಇರಿಸಲಾಗಿರುತ್ತದೆ.
ಹಾಗಿದ್ದರೆ ಬಂಗಳಮೇಡುವಿನ ಓಮ್ ಸಕ್ತಿ ಪೂಜೆಯ ಹಿಂದಿರುವ ಕತೆಯೇನು?
ಇದಕ್ಕೆ ಜಿ. ಮಣಿಗಂಡನ್ (36) ಅವರು 1990ರ ಸಮಯದ ಒಂದು ಕತೆಯನ್ನು ಹೇಳುತ್ತಾರೆ. ಆಗ ಅವರ ಕುಟುಂಬವು ಬಲವಂತವಾಗಿ ಚೆರುಕನ್ನೂರು ಗ್ರಾಮವನ್ನು ತೊರೆಯಬೇಕಾಗಿ ಬಂದಿತ್ತು. ಇದಕ್ಕೆ ಕಾರಣ ಅವರ ಸಹೋದರಿಯೊಬ್ಬರು ಜಾತಿಯಿಂದ ಇರುಳನಲ್ಲದ ಹುಡುಗನ ಜೊತೆ ಪ್ರೇಮದಲ್ಲಿ ಬಿದ್ದಿದ್ದೇ ಕಾರಣವಾಗಿತ್ತು. ಇದು ಊರಿನಲ್ಲಿ ಜಾತಿ ಜಗಳ ಭಯವನ್ನು ಹುಟ್ಟುಹಾಕಿತ್ತು. ಆಗ ಅವರ ಕುಟುಂಬವು ಚೆರುಕನ್ನೂರ್ ಕೆರೆಯ ಬಳಿ ಸಣ್ಣದೊಂದು ಗುಡಿಸಲು ಕಟ್ಟಿಕೊಂಡು ಆಶ್ರಯ ಪಡೆದಿತ್ತು.
“ಅಂದು ಇಡೀ ರಾತ್ರಿ ಅಲ್ಲೊಂದು ಗೊವ್ಳಿ [ಉಡ] ಸದ್ದು ಮಾಡುತ್ತಿತ್ತತು. ನಮಗೆ ಅದು ಅಭಯದ ಸದ್ದಿನಂತೆ ಕೇಳಿತು. ಅದನ್ನು ನಮಗೆ ಅಮ್ಮನ್ [ದೇವತೆ] ನೀಡಿದ ಶುಭ ಶಕುನವೆಂದು ಭಾವಿಸಿದೆವು. ಆ ರಾತ್ರಿ ತಮ್ಮನ್ನು ಉಳಿಸಿದ್ದು ಓ ಶಕ್ತಿ ಅಮ್ಮನ್ ಎನ್ನುವುದು ಅವರ ನಂಬಿಕೆ.
*****
“ನಾವು ಊರು ಬಿಟ್ಟು ಬಂದ ಗಳಿಗೆ, ಊಟ ಮತ್ತು ಕೆಲಸದ ವ್ಯವಸ್ಥೆ ಮಾಡಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ನಮ್ಮ ಅಮ್ಮ ಗದ್ದೆಗಳಿಂದ ಕಡಲೆಕಾಯಿ ಕಿತ್ತು ತರುವುದು ಮತ್ತು ಸಣ್ಣ ಪ್ರಾಣಿಗಳನ್ನು ಬೇಟೆಯಾಡುವುದರ ಮೂಲಕ ನಮ್ಮ ಹೊಟ್ಟೆಗೆ ಆಹಾರದ ವ್ಯವಸ್ಥೆ ಮಾಡುತ್ತಿದ್ದರು. ಆಗ ಅಮ್ಮನ್ ಮಾತ್ರ ನಮ್ಮ ಬೆನ್ನಿಗಿದ್ದಿದ್ದು” ಎಂದು ಅವರು ನೆನಪಿಸಿಕೊಳ್ಳುತ್ತಾರೆ. [ಓದಿ: ಬಂಗಳಮೇಡುವಿನ ಇಲಿ ಬೇಟೆ ]
ಮಣಿಗಂಡನ್ ಕುಟುಂಬ ಮತ್ತು ಅವರೊಡನೆ ಅಂದು ಊರು ಬಿಟ್ಟಿದ್ದ ಇನ್ನೂ ಕೆಲವು ಕುಟುಂಬಗಳು ಬಂಗಳಮೇಡುವಿನಲ್ಲಿ ನೆಲೆಗೊಂಡರು. ಇದು ಚೆರುಕ್ಕನ್ನೂರ್ ಕೆರೆಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದೆ. ಜೊತೆಗೆ ಕರೆಯ ಪಕ್ಕದಲ್ಲಿನ ಹೊಲಗಳಲ್ಲೇ ಅವರಿಗೆ ಕೆಲಸವೂ ದೊರಕಿತು.
ಒಂದು ಕಾಲದಲ್ಲಿ 10 ಕುಟುಂಬಗಳಷ್ಟೇ ಇದ್ದ ಬಂಗಳಮೇಡುವಿನಲ್ಲಿ ಇಂದು 55 ಇರುಳರ ಕುಟುಂಬಗಳಿವೆ. ಇದನ್ನು ಅಧಿಕೃತವಾಗಿ ಚೆರುಕನ್ನೂರ್ ಇರುಳರ ಕಾಲೋನಿ ಎಂದು ಕರೆಯಲಾಗುತ್ತದೆ. ಇದೊಂದು ಒಂದೇ ಬೀದಿಯ ಊರಾಗಿದ್ದು, ಬೀದಿಯ ಎರಡೂ ಬದಿಗೆ ಮನೆಗಳಿವೆ. ಉಳಿದಂತೆ ಸುತ್ತಮುತ್ತ ಪೊದೆಗಳು. ಈ ಊರು ಕರೆಂಟ್ ಬೆಳಕನ್ನು ಕಂಡಿದ್ದು 2018ರಲ್ಲಿ. ಈಗ ಒಂದಷ್ಟು ಪಕ್ಕಾ ಮನೆಗಳೂ ಇಲ್ಲಿ ನಿರ್ಮಾಣಗೊಂಡಿವೆ. ಇಲ್ಲಿನ ಇರುಳರ್ ಕುಟುಂಬಗಳು ಜೀವನೋಪಾಯಕ್ಕಾಗಿ ದಿನಗೂಲು ಹಾಗೂ ಮನರೇಗಾ ಯೋಜನೆಯಡಿಯ ಕೆಲಸಗಳನ್ನು ನಂಬಿಕೊಂಡಿವೆ, ಇಲ್ಲಿನ ಕೆಲವೇ ಕೆಲವು ಮಾಧ್ಯಮಿಕ ಹಂತದ ಶಿಕ್ಷಣ ಪಡೆದವರಲ್ಲಿ ಮಣಿಗಂಡನ್ ಕೂಡಾ ಒಬ್ಬರು.
ಇಲ್ಲಿ ನೆಲೆಯಾದ ಕೆಲವು ವರ್ಷಗಳ ನಂತರ ಮಣಿಗಂಡನ್ ಅವರ ತಂದೆ – ಹಿರಿಯ ಇರುಳರ್ ಪಿ. ಗೋಪಾಲ್ ಅವರು ಕಷ್ಟದ ಸಮಯದಲ್ಲಿ ತಮಗೆ ನೆಲೆ ನೀಡಿದ ಅಮ್ಮನಿಗೆ ಕೃತಜ್ಞತೆ ಅರ್ಪಿಸಲೆಂದು ಕೆರೆ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಓಂ ಸಕ್ತಿ ಅಮ್ಮನ್ ದೇವಸ್ಥಾನವನ್ನು ನಿರ್ಮಿಸಿದರು. 2018ರಲ್ಲಿ ಅವರು ತೀರಿಕೊಳ್ಳುವ ತನಕವೂ ಅವರೇ ಈ ದೇವಸ್ಥಾನದ ಪೂಜಾರಿಯಾಗಿದ್ದರು. “ದೇವಸ್ಥಾನವೆಂದರೆ ಸಣ್ಣ ಗುಡಿಸಲಾಗಿತ್ತು. ಕೆರೆಯ ಮಣ್ಣನ್ನು ತಂದು ನಾವೇ ವಿಗ್ರಹ ತಯಾರಿಸಿದ್ದೆವು. ನಮ್ಮ ತಂದೆಯೇ ಅಂದು ಆಡಿ ತೀಮಿದಿ ತಿರುವಿಳಾ ಆರಂಭಿಸಿದ್ದು” ಎನ್ನುತ್ತಾರೆ ಮಣಿಗಂಡನ್.
ಗೋಪಾಲ್ ಅವರ ಮರಣದ ನಂತರ ಮಣಿಗಂಡನ್ ಅವರ ಅಣ್ಣ ಜಿ. ಸುಬ್ರಮಣಿ ತಮ್ಮ ತಂದೆಯ ಪೂಜಾರಿ ಕೆಲಸವನ್ನು ವಹಿಸಿಕೊಂಡರು. ಸುಬ್ರಮಣಿ ವಾರದ ಒಂದು ದಿನವನ್ನು ದೇವರ ಪೂಜೆಗೆಂದು ಮೀಸಲಿಡುತ್ತಾರೆ. ಉಳಿದ ಆರು ದಿನ ಸಿಕ್ಕರೆ ದಿನಗೂಲಿ ಮಾಡುತ್ತಾರೆ.
ಸುಮಾರು 15ಕ್ಕೂ ಹೆಚ್ಚು ವರ್ಷಗಳಿಂದ ಬಂಗಳಮೇಡುವಿನ ಇರುಳರು ತಮ್ಮ ಕೃತಜ್ಞತೆಯ ರೂಪದಲ್ಲಿ ಓಮ್ ಶಕ್ತಿ ಅಮ್ಮನಿಗೆ ವರ್ಷಕ್ಕೊಮ್ಮೆ ಇಡೀ ದಿನದ ಜಾತ್ರಯನ್ನು ಆಚರಿಸುತ್ತಾರೆ. ಇದರಲ್ಲಿ ಕೆಂಡ ಹಾಯುವುದು ಕೂಡಾ ಸೇರಿದೆ. ಈ ಹಬ್ಬವನ್ನು ತಮಿಳು ತಿಂಗಳಾದ ಆಡಿ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಜುಲೈ-ಆಗಸ್ಟ್ ತಿಂಗಳಿನಲ್ಲಿ ಬರುತ್ತದೆ. ಈ ತಿಂಗಳು ಸುಡುವ ಬೇಸಿಗೆಯಿಂದ ಬಿಡುಗಡೆ ನೀಡಿ ಮುಂಗಾರು ಮಳೆಯ ಭರವಸೆ ನೀಡುವ ತಿಂಗಳಾಗಿದೆ. ಈ ಹಬ್ಬವು ಇರುಳರ ನಡುವೆ ಹೊಸ ಹಬ್ಬವಾದರೂ, ತೀಮಿದಿ ಎನ್ನುವುದು ತಿರುವಳ್ಳೂರ್ ಜಿಲ್ಲೆಯ ತಿರುತ್ತನಿ ತಾಲ್ಲೂಕಿನಾದ್ಯಂತ ಹಲವು ವರ್ಷಗಳಿಂದ ಪ್ರಚಲಿತದಲ್ಲಿರುವ ಹಬ್ಬ. ಆಷಾಢದಲ್ಲಿ ಜನರು ಮಹಾಭಾರತದ ದ್ರೌಪದಿ ಅಮ್ಮನ್, ರೋಜಾ ಅಮ್ಮನ್ ಮಾರಿಯಮ್ಮನ್, ರೇವತಿ ಅಮ್ಮನ್ ಮೊದಲಾದ ದೇವತೆಗಳಿಗೆ ತೀಮಿದಿ ಸೇವೆಯನ್ನು ಅರ್ಪಿಸುತ್ತಾರೆ.
“ಬೇಸಗೆಯಲ್ಲಿ ಜನರಿಗೆ ಕೆಲವೊಮ್ಮೆ ಅಮ್ಮ [ದಡಾರ] ಬರುತ್ತದೆ. ಈ ತಿಂಗಳುಗಳಲ್ಲಿ ನಮ್ಮನ್ನು ಕಾಪಾಡುವಂತೆ ಬೇಡಿ ನಾವು ಅಮ್ಮನ್‌ಗೆ ಪ್ರಾರ್ಥನೆ ಸಲ್ಲಿಸುತ್ತೇವೆ” ಎನ್ನುತ್ತಾರೆ ಮಣಿಗಂಡನ್. ಇಲ್ಲಿ ದೇವರು ಮತ್ತು ಕಾಯಿಲೆ ಎರಡಕ್ಕೂ ಅಮ್ಮನ್ ಎನ್ನುವ ಹೆಸರಿರುವುದು ತನ್ನನ್ನು ನಂಬಿದವರನ್ನು ಈ ದೇವತೆ ಕಾಯಿಲೆಯಿಂದ ಕಾಪಾಡುತ್ತಾಳೆನ್ನುವ ನಂಬಿಕೆಯನ್ನು ಸೂಚಿಸುತ್ತದೆ.
ಗೋಪಾಲ್ ಅವರು ಬಂಗಳಮೇಡುವಿನಲ್ಲಿ ತೀಮಿದಿ ಹಬ್ಬವನ್ನು ಆರಂಭಿಸಿದಾಗಿನಿಂದ, ಹತ್ತಿರದ ಗುಡಿಗುಂಟ ಎನ್ನುವ ಊರಿನ ಒಂದು ಇರುಳೇತರ ಕುಟುಂಬವು ಈ ಹಬ್ಬದ ತಯಾರಿಗಳಲ್ಲಿ ಭಾಗವಹಿಸುತ್ತಿದೆ. ಇರುಳರು ಊರು ಬಿಟ್ಟು ಓಡಿ ಬಂದ ಸಂದರ್ಭದಲ್ಲಿ ಇದೇ ಕುಟುಂಬದ ಜಮೀನಿನಲ್ಲಿ ನೆಲೆ ಪಡೆದಿದ್ದು.
“ಇರುಳರಲ್ಲದೆ ನಮ್ಮ ಕುಟುಂಬದ ಹತ್ತು ಜನ ಮತ್ತು ನಮ್ಮ ಸ್ನೇಹಿತರು ಇಲ್ಲಿ ಮೊದಲಿನಿಂದಲೂ ಕೆಂಡ ಹಾಯುತ್ತಿದ್ದಾರೆ” ಎನ್ನುತ್ತಾರೆ 57 ವರ್ಷದ ಟಿ. ಎನ್. ಕೃಷ್ಣನ್. ತಮ್ಮ ಸ್ನೇಹಿತರ ನಡುವೆ ಪಳನಿ ಎನ್ನುವ ಹೆಸರಿನಿಂದ ಗುರುತಿಸಲ್ಪಡುವ ಇವರು ಈ ಜಮೀನಿನ ಮಾಲಿಕರಲ್ಲಿ ಒಬ್ಬರು. ತಾವು ಓಂ ಶಕ್ತಿಯ ಪೂಜರ ಮಾಡಲು ಆರಂಭಿಸಿದ ನಂತರವೇ ತಮಗೆ ಮಕ್ಕಳಾಗಿದ್ದು ಎನ್ನುವುದು ಕೃಷ್ಣನ್ ಕುಟುಂಬದ ನಂಬಿಕೆ.
ಅವರು ಇದಕ್ಕೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಮೊದಲು ಇರುಳರು ನಿರ್ಮಿಸಿದ್ದ ಅಮ್ಮನ ಗುಡಿಸಲನ್ನು ಕಿತ್ತು ಒಂದು ಸಣ್ಣ ಪಕ್ಕಾ ಗುಡಿಯನ್ನು ಕಟ್ಟಿಸಿದ್ದಾರೆ. ಜೊತೆಗೆ ಇರುಳರು ತಯಾರಿಸಿದ ಮಣ್ಣಿನ ಮೂರ್ತಿಯ ಬದಲಿಗೆ ಕಲ್ಲಿನ ಮೂರ್ತಿಯನ್ನು ಪ್ರತಿಷ್ಟಾಪಿಸಿದ್ದಾರೆ.
*****
ಬಂಗಳಮೇಡುವಿನ ಇರುಳರ ಪಾಲಿಗೆ ಬಹುನಿರೀಕ್ಷೆಯ ಹಬ್ಬವಾದ ಆದಿ ತೀಮಿದಿಯ ತಯಾರಿಯು ಕೆಲವು ದಿನಗಳ ಮೊದಲೇ ಆರಂಭಗೊಳ್ಳುತ್ತದೆ. ಹಬ್ಬದ ದಿನ ಕೆಂಡದ ಮೇಲೆ ನಡೆಯುವವರು ಕೈಗೆ ಕಾಪ್ಪು ಎಂದು ಕರೆಯಲ್ಪಡುವ ಕಂಕಣವನ್ನು ಕಟ್ಟಿಕೊಳ್ಳುತ್ತಾರೆ. ಮತ್ತು ಹಬ್ಬದ ದಿನದವರೆಗೂ ಕಟ್ಟುನಿಟ್ಟಾಗಿ ಕೆಲವು ನಿಯಮಗಳನ್ನು ಪಾಲಿಸುತ್ತಾರೆ.
“ಒಮ್ಮೆ ಕೈಗೆ ಕಾಪ್ಪು ಕಟ್ಟಿಕೊಂಡ ನಂತರ ನಾವು ದಿನವೂ ತಲೆ ಸ್ನಾನ ಮಾಡಿ, ದಿನಕ್ಕೆ ಎರಡು ಬಾರಿ ದೇವಸ್ಥಾನಕ್ಕೆ ಹೋಗುತ್ತೇವೆ. ಈ ದಿನಗಳಲ್ಲಿ ಹಳದಿ ಬಟ್ಟೆ ತೊಡುವ ನಾವು, ಮಾಂಸ ತಿನ್ನುವುದು ಮತ್ತು ಊರಿನಿಂದ ಹೊರಗೆ ಹೋಗುವುದನ್ನು ತಪ್ಪಿಸುತ್ತೇವೆ” ಎನ್ನುತ್ತಾರೆ ಸುಮತಿ. ಇವರು ಬಂಗಳಮೇಡುವಿನಲ್ಲಿ ಒಂದು ಸಣ್ಣ ಪೆಟ್ಟಿ ಅಂಗಡಿಯಿಟ್ಟುಕೊಂಡಿದ್ದಾರೆ. ಕೆಲವರು ಈ ವೃತವನ್ನು ವಾರದ ಮಟ್ಟಿಗೆ ಆಚರಿಸಿದರೆ, ಇನ್ನೂ ಕೆಲವರು ಅದಕ್ಕೂ ಹೆಚ್ಚು ದಿನಗಳ ಕಾಲ ಆಚರಿಸುತ್ತಾರೆ. “ಅವರಿಂದ ಎಷ್ಟು ದಿನ ಸಾಧ್ಯವೋ ಅಷ್ಟು ದಿನ ಇರುತ್ತಾರೆ. ಕಾಪ್ಪು ಕಟ್ಟಿದ ನಂತರ ನಾವು ಊರು ಬಿಟ್ಟು ತೆರಳುವಂತಿಲ್ಲ” ಎನ್ನುತ್ತಾರೆ ಮಣಿಗಂಡನ್.
ಸರ್ಕಾರೇತರ ಸಂಸ್ಥೆಯಾದ ಏಡ್ ಇಂಡಿಯಾ ಸಂಸ್ಥೆಯೊಡನೆ ಸೇರಿ ಹಲವು ವರ್ಷಗಳಿಂದ ಸಮುದಾಯದೊಡನೆ ಕೆಲಸ ಮಾಡುತ್ತಿರುವ ಡಾ. ಎಮ್. ಧಾಮೋದರನ್ ಈ ಆಚರಣೆಗಳು ಸಂಸ್ಕೃತಿಗಳ ನಡುವೆ ಆಲೋಚನೆಗಳು ಅಥವಾ ಆಚರಣೆಗಳ ಪ್ರಸರಣವನ್ನು ಸೂಚಿಸುತ್ತವೆ ಎಂದು ವಿವರಿಸುತ್ತಾರೆ. "ಪ್ರತಿಜ್ಞೆ, ಉಪವಾಸ, ನಿರ್ದಿಷ್ಟ ಬಣ್ಣದ ಬಟ್ಟೆಗಳನ್ನು ಧರಿಸುವುದು ಮತ್ತು ಸಮುದಾಯ ಕಾರ್ಯಕ್ರಮವನ್ನು ನಡೆಸುವುದು ಮುಂತಾದ ಕೆಲವು ಅಭ್ಯಾಸಗಳು ಅನೇಕ [ಇರುಳರ್ ಅಲ್ಲದ] ಸಮುದಾಯಗಳಲ್ಲಿ ಸಾಮೂಹಿಕ ಸ್ವೀಕಾರವನ್ನು ಗಳಿಸಿವೆ. ಈ ಸಂಸ್ಕೃತಿಯು ಇರುಳ ಸಮುದಾಯದ ವಿಭಾಗಗಳಿಗೂ ಹರಡಿದೆ" ಎಂದು ಅವರು ಹೇಳುತ್ತಾರೆ. "ಎಲ್ಲಾ ಇರುಳ ಕುಗ್ರಾಮಗಳೂ ಈ ಅಭ್ಯಾಸಗಳನ್ನು ಅನುಸರಿಸುವುದಿಲ್ಲ."
ಬಂಗಳಮೇಡುವಿನಲ್ಲಿ ಹಬ್ಬದ ಅಲಂಕಾರದ ಖರ್ಚುಗಳನ್ನು ಸಾಮೂಹಿಕವಾಗಿ ಸಣ್ಣ ಸಣ್ಣ ಮೊತ್ತಗಳನ್ನು ನೀಡುವ ಮೂಲಕ ಭರಿಸುತ್ತಾರೆ. ಹಬ್ಬದ ದಿನ ಬೆಳಗ್ಗೆ ದೇವಸ್ಥಾನದ ದಾರಿಯಲ್ಲಿನ ಮರಗಳ ನಡುವೆ ಬೇವಿನ ಎಲೆಯ ತೋರಣವನ್ನು ಕಟ್ಟಲಾಗಿರುತ್ತದೆ. ದೇವರ ಭಕ್ತಿಗೀತೆಗಳನ್ನು ಸೌಂಡ್ ಬಾಕ್ಸ್ ಮೂಲಕ ಜೋರಾಗಿ ಹಾಕಲಾಗುತ್ತದೆ. ನೇಯ್ದ ಹಸಿ ತೆಂಗಿನ ಗರಿ ಮತ್ತು ಬಾಳೆ ಗಿಡಗಳು ದೇವಸ್ಥಾನದ ಬಾಗಿಲನ್ನು ಅಲಂಕರಿಸುತ್ತವೆ.
ಕಾಪ್ಪು ಕಟ್ಟಿಕೊಂಡವರು ಅಂದು ಹಳದಿ ಬಟ್ಟೆ ತೊಟ್ಟು ಹರಕೆ ಸಲ್ಲಿಸಲು ದೇವಸ್ಥಾನಕ್ಕೆ ಬರುತ್ತಾರೆ. ಆ ದಿನದ ಆಚರಣೆ ಅರುಳ್‌ವಾಕ್‌ನೊಂದಿಗೆ ಆರಂಭಗೊಳ್ಳುತ್ತದೆ. ಇದೊಂದು ದೇವ ವಾಕ್ಯವಾಗಿದ್ದು ಅಂದು ಅಮ್ಮ ಅದನ್ನು ಮಾಧ್ಯಮವೊಂದರ ಮೂಲಕ ಕೊಡುತ್ತಾಳೆಂದು ಜನರು ನಂಬುತ್ತಾರೆ. “ಅಂದು ಅಮ್ಮ ಯಾರದ್ದಾದರೂ ಮೈಮೇಲೆ ಬಂದು ಅವರ ಮೂಲಕ ನುಡಿ ಕೊಡುತ್ತಾಳೆ” ಎನ್ನುತ್ತಾರೆ ಮಣಿಗಂಡನ್. “ನಂಬಿಕೆಯಿಲ್ಲದವರಿಗೆ ದೇವಸ್ಥಾನದಲ್ಲಿ ಕೇವಲ ಕಲ್ಲು ಮಾತ್ರ ಕಾಣುತ್ತದೆ. ನಮ್ಮ ಪಾಲಿಗೆ ಕಲ್ಲು ನಿಜವಾದುದು, ಅದಕ್ಕೆ ಜೀವವಿದೆ. ಅವಳು ನಮ್ಮ ತಾಯಿಯಿದ್ದಂತೆ. ಅವಳ ಜೊತೆ ನಾವು ನಮ್ಮವರೊಡನೆ ಮಾತನಾಡುವಂತೆ ಮಾತನಾಡುತ್ತೇವೆ. ಒಬ್ಬ ತಾಯಿ ತನ್ನ ಮಕ್ಕಳ ಸಮಸ್ಯೆಗಳ್ನು ಅರ್ಥ ಮಾಡಿಕೊಳ್ಳುತ್ತಾಳೆ ಹಾಗೂ ಪರಿಹಾರವಾಗಿ ಸಲಹೆಗಳನ್ನೂ ನೀಡುತ್ತಾಳೆ.”
ಪ್ರತಿವರ್ಷ ಅರುಳ್‌ವಾಕ್ಕು ನೀಡುವ ಮಣಿಗಂಡನ್ ಅವರ ಸಹೋದರಿ ಕನ್ನಿಯಮ್ಮ ಕುರಿ ಮತ್ತು ಕೋಳಿಯ ರಕ್ತವನ್ನು ಮಿಶ್ರಣ ಮಾಡಿದ ಪವಿತ್ರ ಅಕ್ಕಿಯನ್ನು ದೇವಸ್ಥಾನದ ಸುತ್ತಲೂ ಹಾಗೂ ಊರಿನ ಸುತ್ತ ಚಿಮುಕಿಸುತ್ತಾರೆ. ಸ್ವಯಂ ಸೇವಕರು ರಾಗಿ ಮತ್ತು ಅಕ್ಕಿಯಿಂದ ಮಾಡಿದ ಕೂಳು ಎನ್ನುವ ಗಂಜಿಯನ್ನು ಸಮುದಾಯದ ಎಲ್ಲರಿಗೂ ಹಂಚುತ್ತಾರೆ. ಮಧ್ಯಾಹ್ನವನ್ನು ತೋರಾ ಕಟ್ಟುವುದರೊಂದಿಗೆ ಕಳೆಯಾಲಾಗುತ್ತದೆ. ಇದು ಮೆರವಣಿಗೆಯಲ್ಲಿ ದೇವರಿಗೆ ಹಾಕುವ ಸಲುವಾಗಿ ಬಾಳೆ ಮೊಗ್ಗು ಹೂವಿನಿಂದ ಕಟ್ಟಲಾಗುವ ಹಾರ.
ವರ್ಷಗಳು ಕಳೆದು, ಮಣ್ಣಿನ ಗುಡಿಸಿಲಿನಿಂದ ಪಕ್ಕಾ ಕಟ್ಟಡಕ್ಕೆ ದೇವಸ್ಥಾನವು ಅಭಿವೃದ್ಧಿ ಹೊಂದಿದ ಹಬ್ಬವೂ ತನ್ನ ಗಾತ್ರದಲ್ಲಿ ಹಿಗ್ಗಿದೆ. ಈಗ ಪಳನಿಯವರ ಊರಾದ ಗುಂಡಿಗುಂಟ ಸೇರಿದಂತೆ ಅಕ್ಕಪಕ್ಕದ ಊರಿನ ಜನರು ಬಂಗಳಮೇಡುವಿನ ಜನರು ಕೆಂಡ ಹಾಯುವುದನ್ನು ನೋಡಲು ನೆರೆಯುತ್ತಾರೆ. “ಹಬ್ಬ ಇದುವರೆಗೆ ಒಮ್ಮೆಯೂ ನಿಂತಿಲ್ಲ. ಕೊವಿಡ್ ಸಮಯದ ಎರಡು ವರ್ಷ ಜನರು ಕಡಿಮೆಯಿದ್ದರಾದರೂ ಹಬ್ಬ ಮಾಡಿದ್ದೆವು” ಎನ್ನುತ್ತಾರೆ ಮಣಿಗಂಡನ್. ಕೊವಿಡ್‌ಗೂ ಮೊದಲು 2019ರಲ್ಲಿ ಈ ಹಬ್ಬಕ್ಕೆ ಸುಮಾರು 800 ಮಂದಿ ಸಾಕ್ಷಿಯಾಗಿದ್ದರು.
ಇತ್ತೀಚಿನ ವರ್ಷಗಳಲ್ಲಿ ಪಳನಿಯವರ ಕುಟುಂಬವು ಹಬ್ಬಕ್ಕೆ ಬರುವ ಜನರಿಗೆ ಅನ್ನದಾನವನ್ನು ಏರ್ಪಡಿಸುತ್ತದೆ. “2019ರಲ್ಲಿ ಕೇವಲ 140 ಕೇಜಿ ಚಿಕನ್ ಬಿರಿಯಾನಿಗಾಗಿ ಒಂದು ಲಕ್ಷಕ್ಕೂ ಮಿಕ್ಕಿ ಹಣವನ್ನು ಖರ್ಚು ಮಾಡಿದ್ದೆವು” ಎನ್ನುತ್ತಾರೆ ಪಳನಿ. ಕೊವಿಡ್ ಪಿಡುಗಿಗೂ ಬರುತ್ತಿದ್ದ ಜನಸಂಖ್ಯೆಯ ಕುರಿತು ಹೇಳುತ್ತಾ ಅವರು ಈ ಮಾತುಗಳನ್ನು ಹೇಳಿದರು. “ಪ್ರತಿಯೊಬ್ಬರೂ ಸಹಾಯ ಮಾಡುತ್ತಾರೆ” ಎನ್ನುವ ಪಳನಿ, ಹೆಚ್ಚುತ್ತಿರುವ ವೆಚ್ಚವನ್ನು ಭರಿಸುವ ಸಲುವಾಗಿ ಸ್ನೇಹಿತರಿಂದಲೂ ದೇಣಿಗೆ ಪಡೆಯುತ್ತಾರೆ.
“ನಾವು ದೇವಸ್ಥಾನ ಕಟ್ಟಿದಾಗಿನಿಂದ, ಇಲ್ಲಿಗೆ ಬರುವ ಜನಸಂಖ್ಯೆಯಷ್ಟೇ ಏರಿದೆ. ಇರುಳರ್ ಸಮುದಾಯಕ್ಕೆ ಇದೆಲ್ಲವನ್ನೂ ಭರಿಸಲು ಕಷ್ಟವಾಗುತ್ತದೆಯಲ್ಲವೆ?” ಎಂದು ಅವರು ತಮ್ಮ ದೇವಸ್ಥಾನದ ಹೆಸರು ಹೇಳುವಾಗ, ತಮ್ಮ ಊರಿನ ಹೆಸರನ್ನು ಸೇರಿಸಿ ಗುಡಿಗುಂಟ ಓಂ ಶಕ್ತಿ ದೇವಸ್ಥಾನ ಎಂದು ಹೇಳುತ್ತಾರೆ.
*****
“ಹೊಸ ದೇವಾಲಯವನ್ನು ಕಟ್ಟಿದ ಸಂದರ್ಭದಲ್ಲಿ ನಾವು ಸ್ಥಾಪಿಸಿದ್ದ ಮಣ್ಣಿನ ಮೂರ್ತಿಯನ್ನು ತೆಗೆದು ಕಲ್ಲಿನ ಮೂರ್ತಿಯನ್ನು ಪ್ರತಿಷ್ಟಾಪಿಸಲಾಯಿತು. ದೇವಸ್ಥಾನವನ್ನು ಪವಿತ್ರೀಕರಿಸಲು ಹೀಗೆ ಮಾಡಬೇಕು ಎನ್ನುವ ಕಾರಣವನ್ನು ಆಗ ನೀಡಿದ್ದರು” ಎನ್ನುತ್ತಾರೆ ಮಣಿಗಂಡನ್. “ನಾವು ಮಣ್ಣಿನ ಮೂರ್ತಿಯನ್ನು ಅದರ ಪಕ್ಕವೇ ಇಟ್ಟು ಉಳಿಸಿಕೊಂಡಿದ್ದೇವೆ. ನಮ್ಮನ್ನು ಕಾಪಾಡಿದ್ದು ಇದೇ ಮಣ್ಣು.”
“ಅವರು ಒಬ್ಬ ಐಯ್ಯರ್ [ಬ್ರಾಹ್ಮಣ ಪೂಜಾರಿ] ಅವರನ್ನು ಕರೆದಿದ್ದರು, ಅವರು ನಾವು ನೈವೇದ್ಯವಾಗಿ ಇರಿಸಿದ್ದ ಅಕ್ಕಿ ಮತ್ತು ಕಹಿಬೇವನ್ನು ತೆಗೆದು ಹಾಕಿದರು. “ಅದು ನಾವು ಮಾಡುವ ಪೂಜೆಗಿಂತಲೂ ಬೇರೆ ರೀತಿಯಲ್ಲಿತ್ತು” ಎಂದು ಅಸಮಾಧಾನದ ದನಿಯಲ್ಲಿ ಹೇಳಿದರು.
"ಕನ್ನಿಯಮ್ಮನಂತಹ ದೇವತೆಗಳ ಪೂಜೆಯು ಸಾಮಾನ್ಯವಾಗಿ ವಿಸ್ತಾರವಾದ ಮತ್ತು ರಚನಾತ್ಮಕ ಆಚರಣೆಗಳನ್ನು ಅಥವಾ ಇಡೀ ಸಮುದಾಯವನ್ನು ಒಳಗೊಂಡಿರುವುದಿಲ್ಲ" ಎಂದು ಮಾನವಶಾಸ್ತ್ರದಲ್ಲಿ ಉನ್ನತ ಪದವಿ ಪಡೆದಿರುವ ಡಾ. ಧಾಮೋದರನ್ ಹೇಳುತ್ತಾರೆ. "ಆಚರಣೆಗಳಿಗೆ ಒತ್ತು ನೀಡುವುದು ಮತ್ತು ಅವುಗಳನ್ನು ಮಾಡುವ ಒಂದು ನಿರ್ದಿಷ್ಟ ವಿಧಾನ ಹೊಂದುವುದು, ಮತ್ತು ನಂತರ [ಹೆಚ್ಚಾಗಿ ಬ್ರಾಹ್ಮಣ] ಪುರೋಹಿತರನ್ನು ಒಳಗೊಳ್ಳುವ ಮೂಲಕ ಅದನ್ನು ಮೌಲ್ಯೀಕರಿಸುವುದು ಒಂದು ಮಾದರಿಯಾಗಿದೆ. ಇದು ಆಚರಣೆಯನ್ನು ಪ್ರಮಾಣೀಕರಿಸುತ್ತದೆ, ವಿವಿಧ ಸಂಸ್ಕೃತಿಗಳ ಪೂಜೆಯ ವಿಶಿಷ್ಟ ವಿಧಾನಗಳನ್ನು ಅಳಿಸಿಹಾಕುತ್ತದೆ."
ಬಂಗಳಮೇಡುವಿನ ತೀಮಿದಿ ಹಬ್ಬವು ವರ್ಷದಿಂದ ವರ್ಷಕ್ಕೆ ಅದ್ದೂರಿಯಾಗುತ್ತ ಸಾಗುತ್ತಿರುವ ಹೊತ್ತಿನಲ್ಲೇ, ಮಣಿಗಂಡನ್ ಮತ್ತು ಅವರ ಕುಟುಂಬದವರಿಗೆ ಈ ಹಬ್ಬವು ಅವರ ಕೈಯಿಂದ ನಿಧಾನವಾಗಿ ಜಾರುತ್ತಿರುವ ಅನುಭವವೂ ಆಗುತ್ತಿದೆ.
“ಹಿಂದೆ ನನ್ನ ತಂದೆ ಊಟದ ಖರ್ಚನ್ನು ಮೊಯ್ [ಊಟದ ನಂತರ ಬಂದ ಅತಿಥಿಗಳು ಸಂತೋಷದಿಂದ ಕೊಡುವ ಉಡುಗೊರೆ ಹಣ] ಹಣದಿಂದ ನಿಭಾಯಿಸುತ್ತಿದ್ದರು. ಈಗ ಅವರು [ಪಳನಿ ಕುಟುಂಬ] ಎಲ್ಲ ಖರ್ಚುಗಳ ಜವಬ್ದಾರಿಯನ್ನು ಹೊತ್ತುಕೊಂಡು ʼಮಣಿ ನೀವು ಕಾಪ್ಪು ಆಚರಣೆ ಕಡೆ ಗಮನ ಕೊಡಿʼ ಎನ್ನುತ್ತಾರೆ” ಎಂದು ಮಣಿಗಂಡನ್ ಹೇಳುತ್ತಾರೆ. ಇವರ ಕುಟುಂಬ ಆಗಾಗ ಪಳನಿಯವರ ಜಮೀನಿನಲ್ಲೂ ಕೆಲಸ ಮಾಡುತ್ತದೆ.
ಕೇವಲ ದಿವಂಗತ ಗೋಪಾಲ್ ವಳಿಮುರೈ (ಪರಂಪರೆ) ಎನ್ನುವ ಸಾಲನ್ನು ಹೊರತುಪಡಿಸಿದರೆ, ಕಾರ್ಯಕ್ರಮದ ಕುರಿತಾದ ಕರಪತ್ರದಲ್ಲಿ ಇರುಳರ್ ಸಮುದಾಯದ ಪ್ರಸ್ತಾಪವೇ ಇರುವುದಿಲ್ಲ. “ನಮ್ಮ ತಂದೆಯವರ ಹೆಸರನ್ನು ಹಾಕಿಸುವುದಕ್ಕೂ ಅನವು ಬಲವಂತ ಮಾಡಬೇಕಾಯಿತು. ಅವರಿಗೆ ನಮ್ಮವರ ಹೆಸರು ಅದರಲ್ಲಿ ಕಾಣುವುದು ಬೇಕಿರಲಿಲ್ಲ” ಎನ್ನುತ್ತಾರೆ ಮಣಿಗಂಡನ್.
ಅದೇನೇ ಇದ್ದರು ತೀಮಿದಿ ಹಬ್ಬದ ದಿನ ಕೆಂಡ ಹಾಯುವ ಭಕ್ತರು ಇದೆಲ್ಲ ಅಸಮಾಧಾನಗಳನ್ನು ಬದಿಗಿಟ್ಟು ತಮ್ಮ ಭಕ್ತಿಪರೀಕ್ಷೆಗೆ ತಯಾರಾಗುತ್ತಾರೆ. ಅಂದು ಶುದ್ಧವಾಗಿ ಸ್ನಾನ ಮಾಡಿ, ಅರಿಶಿನ ಬಟ್ಟೆ ಧರಿಸಿ, ಕುತ್ತಿಗೆ ಹೂವಿನ ಹಾರ, ಕೂದಲಿಗೆ ಹೂ ಮುಡಿದು, ಹಣೆಗೆ ಗಂಧ ಪ್ರಸಾದ ಹಚ್ಚಿ, ಕೈಯಲ್ಲಿ ಬೇವಿನ ಗೊಂಚಲು ಹಿಡಿದು ಕೆಂಡ ತುಳಿಯಲು ಸಿದ್ಧರಾಗುತ್ತಾರೆ. “ಆ ದಿನ ಅಮ್ಮನ್ ನಮ್ಮೊಳಗೇ ಇರುವಂತೆ ನಮಗೆ ಭಾಸವಾಗುತ್ತಿರುತ್ತದೆ. ಹೀಗಾಗಿ ಅಂದು ಗಂಡಸರು ಕೂಡಾ ಹೂವು ಮುಡಿಯುತ್ತಾರೆ” ಎನ್ನುತ್ತಾರೆ ಕನ್ನಿಯಮ್ಮ.
ಕೆಂಡ ತುಳಿಯುವುದು ಆರಂಭಗೊಳ್ಳುತ್ತಿದ್ದಂತೆ ವಾತಾವರಣದಲ್ಲೊಂದು ಭಕ್ತಿ ಪರವಶತೆ ಎದ್ದು ಕಾಣತೊಡಗುತ್ತದೆ. ಕೆಲವು ಭಕ್ತರು ಜನರನ್ನು ಪ್ರೋತ್ಸಾಹಿಸಿದರೆ ಉಳಿದವರು ಭಕ್ತಿಯಿಂದ ಪ್ರಾರ್ಥಿಸುತ್ತಾರೆ. ಇನ್ನೂ ಕೆಲವರು ತಮ್ಮ ಮೊಬೈಲ್ ಹೊರತೆಗೆದು ಈ ಕ್ಷಣವನ್ನು ಸೆರೆಹಿಡಿಯಲು ಆರಂಭಿಸುತ್ತಾರೆ.
ಒಂದು ಕಾಲದಲ್ಲಿ ವಿನಮ್ರ ಭಕ್ತಿಯ ಸಂಕೇತವಾಗಿದ್ದ ಇರುಳರ್ ದೇವಾಲಯ, ಹೊಸ ವಿಗ್ರಹ ಮತ್ತು ದೇವಾಲಯ ಮತ್ತು ಉತ್ಸವ ನಿರ್ವಹಣೆಯ ವಿಷಯದಲ್ಲಿ ವರ್ಷ ವರ್ಷ ಬದಲಾಗುತ್ತಿರುವ ಸಂಗತಿಗಳ ಹೊರತಾಗಿಯೂ, ಮಣಿಗಂಡನ್ ಮತ್ತು ಅವರ ಕುಟುಂಬವು ತಮ್ಮ ದಿವಂಗತ ತಂದೆಯು ಅಮ್ಮನ್‌ಗೆ ನೀಡಿದ ಭಾಷೆಯನ್ನು ಉಳಿಸಿಕೊಂಡಿದೆ, ತಮ್ಮ ಜೀವವನ್ನು ರಕ್ಷಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದೆ. ತೀಮಿ ದಿ ಯ ಸಮಯದಲ್ಲಿ , ಅವರು ತಮ್ಮೆಲ್ಲ ಚಿಂತೆಗಳಿಗಳನ್ನು ಪಕ್ಕಕ್ಕಿರಿಸಿ ಭಾಗವಹಿಸುತ್ತಾರೆ.
ಸೂಚನೆ: ಈ ವರದಿಯೊಂದಿಗಿನ ಛಾಯಾಚಿತ್ರಗಳನ್ನು 2019ರಲ್ಲಿ ವರದಿಗಾರ ರು ತೀಮಿದಿ ಉತ್ಸವವನ್ನು ವೀಕ್ಷಿಸಲು ಬಂಗ ಳ ಮೇಡುಗೆ ಭೇಟಿ ನೀಡಿ ದ ಸಂದರ್ಭದಲ್ಲಿ ತೆಗೆದುಕೊಳ್ಳಲಾಗಿದೆ.
ಅನುವಾದ: ಶಂಕರ. ಎನ್. ಕೆಂಚನೂರು