“ಅಲ್ಲಿ ಗೊರಲ್ ನೋಡಿ!” ಎಂದು ಅರುಣಾಚಲ ಪ್ರದೇಶದ ಪಶ್ಚಿಮ ಕಾಮೆಂಗ್ ಜಿಲ್ಲೆಯ ಸಿಂಗ್ಚುಂಗ್ ಪಟ್ಟಣದ ತಿರುವಿನ ರಸ್ತೆಗಳಲ್ಲಿಶಾಂತ ರಸ್ತೆಯಲ್ಲಿ ಡ್ರೈವ್ ಮಾಡುತ್ತಿದ್ದ ಡಾ.ಉಮೇಶ್ ಶ್ರೀನಿವಾಸನ್ ಕೂಗಿದರು.
ದೂರದಲ್ಲೊಂದು ಸಣ್ಣ ಬೂದು ಬಣ್ಣದ ಮೇಕೆ ಜಾತಿಯ ಪ್ರಾಣಿಯೊಂದು ನಮ್ಮ ರಸ್ತೆಗೆ ಸಮಾನಂತರದಲ್ಲಿ ಪೂರ್ವ ಹಿಮಾಲಯದ ಕಾಡುಗಳತ್ತ ಓಡುತ್ತಿತ್ತು.
“ನೀವು ಇದನ್ನು ಈ ಹಿಂದೆ ನೋಡಿರಲು ಸಾಧ್ಯವಿಲ್ಲ” ಎಂದು ಹಿಂದೆಂದೂ ನೋಡಿರಲಿಲ್ಲ" ಎಂದು ಪಶ್ಚಿಮ ಕಾಮೆಂಗ್ ಪ್ರದೇಶದ ಕಾಡುಗಳಲ್ಲಿ 13 ವರ್ಷಗಳಿಂದ ಕೆಲಸ ಮಾಡುತ್ತಿರುವ ವನ್ಯಜೀವಿ ಜೀವಶಾಸ್ತ್ರಜ್ಞ ಅಚ್ಚರಿಯೊಂದಿಗೆ ಹೇಳುತ್ತಾರೆ.
ಬೂದು ಗೋರಲ್ ( Naemorhedus goral ) ಹಿಮಾಲಯದ ಗುಂಟ ಭೂತಾನ್, ಚೀನಾ, ಉತ್ತರ ಭಾರತ, ನೇಪಾಳ ಮತ್ತು ಪಾಕಿಸ್ತಾನಗಳಲ್ಲಿ ಕಂಡುಬರುವ ಸಾರಂಗ ಜಾತಿಯ ಪ್ರಾಣಿ. ಆದರೆ 2008ರ ಹೊತ್ತಿಗೆ , ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ದಿ ಕನ್ಸರ್ವೇಶನ್ ಆಫ್ ನೇಚರ್ (ಐಯುಸಿಎನ್) ಆವಾಸಸ್ಥಾನದ ನಷ್ಟ ಮತ್ತು ಬೇಟೆಯ ಕಾರಣದಿಂದಾಗಿ ಇದನ್ನು " ಅಳಿವಿನಂಚಿನಲ್ಲಿರುವ ಪ್ರಾಣಿ " ಎಂದು ಪಟ್ಟಿ ಮಾಡಿದೆ.
ಹಿಮಾಲಯದ ಕೆಳಭಾಗ ಮತ್ತು ಈಶಾನ್ಯ ಭಾರತದಲ್ಲಿ ಮಾನವ ಉಪಸ್ಥಿತಿ ಹೆಚ್ಚಿರುವ ಕುರಿತಾಗಿ ಹೇಳುತ್ತಾ “ಅವು ಹೆಚ್ಚಾಗಿ ಕಾಡಿ ತೀರಾ ಒಳ ಭಾಗದಲ್ಲಿರುತ್ತಿದ್ದವು. ಅವು ಬಹಳ ಹೆದರಿಕೆ ಸ್ವಭಾವದ ಪ್ರಾಣಿಗಳು” ಎಂದು ಉಮೇಶ್ ಹೇಳುತ್ತಾರೆ.
ಗೋರಲ್ ಅನ್ನು ನೋಡಿದ ಸ್ವಲ್ಪ ಸಮಯದ ನಂತರ, ಸಿಂಗ್ಚುಂಗ್ ಎನ್ನುವಲ್ಲಿನ ರೈತರಾದ ನಿಮಾ ತ್ಸೆರಿಂಗ್ ಮೊನ್ಪಾ ನಮಗೆ ಕುಡಿಯಲು ಚಹಾ ನೀಡಿ ಮತ್ತೊಂದು ಪ್ರಾಣಿ ವೀಕ್ಷಣೆಯ ಬಗ್ಗೆ ಕೆಲವು ಮಾಹಿತಿಯನ್ನು ನೀಡುತ್ತಾರೆ, "ಕೆಲವು ವಾರಗಳ ಹಿಂದೆ, ನಾನು ಇಲ್ಲಿಂದ ಸ್ವಲ್ಪ ದೂರದಲ್ಲಿರುವ ಕೃಷಿ ಭೂಮಿಯಲ್ಲಿ ಕೆಂಪು ಪಾಂಡಾ ( Ailurus fulgens ) ನೋಡಿದೆ." ಅಳಿವಿನಂಚಿನಲ್ಲಿರುವ ಜಾತಿಯ ಕೆಂಪು ಪಾಂಡಾ ಚೀನಾ, ಮ್ಯಾನ್ಮಾರ್, ಭೂತಾನ್, ನೇಪಾಳ ಮತ್ತು ಭಾರತದಲ್ಲಿ ಕಂಡುಬರುತ್ತದೆ ಆದರೆ ಕಳೆದ ಮೂರು ತಲೆಮಾರುಗಳಲ್ಲಿ ಅದರ ಸಂಖ್ಯೆ ಶೇಕಡಾ 50ರಷ್ಟು ಕುಸಿದಿದೆ ಮತ್ತು ಮುಂದಿನ ಎರಡು ದಶಕಗಳಲ್ಲಿ ಹದಗೆಡುವ ನಿರೀಕ್ಷೆಯಿದೆ ಎಂದು ಐಯುಸಿಎನ್ ಎಚ್ಚರಿಸಿದೆ .
ಸಿಂಗ್ಚುಂಗ್ ಬಳಿ ಕಾಡು ಪ್ರಾಣಿಗಳು ಕಾಣಿಸಿಕೊಂಡಿರುವುದು ಕಾಕತಾಳೀಯವಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಈ ಹಿಂದೆ ವರ್ಗೀಕೃತವಲ್ಲದ ಸಮುದಾಯ ಅರಣ್ಯಗಳಿಂದ ಸಿಂಗ್ಚುಂಗ್ ಬುಗುನ್ ಗ್ರಾಮ ಸಮುದಾಯ ಮೀಸಲು ಅರಣ್ಯ (ಎಸ್‌ಬಿವಿಸಿಆರ್) ರಚಿಸಲು ಅರುಣಾಚಲ ಅರಣ್ಯ ಇಲಾಖೆ ಇಲ್ಲಿ ವಾಸಿಸುವ ಬುಡಕಟ್ಟು ಸಮುದಾಯವಾದ ಬುಗುನ್ ಜೊತೆ ಕೈಜೋಡಿಸಿ, 2017ರಲ್ಲಿ ಪ್ರಾರಂಭಿಸಿದ ನಿರಂತರ ಸಂರಕ್ಷಣಾ ಪ್ರಯತ್ನದ ಫಲಿತಾಂಶ ಎನ್ನುವದು ಅವರ ಅಭಿಪ್ರಾಯ.
ಈ ಸಮುದಾಯ ಮೀಸಲು ಅರಣ್ಯ ಪ್ರದೇಶದ ಕಥೆಯು ತೀವ್ರ ಅಳಿವಿನಂಚಿನಲ್ಲಿರುವ ಪಕ್ಷಿಗಳಲ್ಲಿ ಒಂದಾದ ಬುಗುನ್ ಲಿಯೋಸಿಚ್ಲಾ ( Liocichla bugunorum ) ಆವಿಷ್ಕಾರದೊಂದಿಗೆ ಪ್ರಾರಂಭವಾಗುತ್ತದೆ; ಹಕ್ಕಿ ಸಿಂಗ್ಚುಂಗ್ ಸುತ್ತಮುತ್ತಲಿನ ಕಾಡುಗಳ ಸಣ್ಣ ವ್ಯಾಪ್ತಿಯಲ್ಲಿ ಮಾತ್ರ ಕಂಡುಬರುತ್ತದೆ.
ಗುರುತಿಸಲು ಕಷ್ಟಕರವಾದ ಆಲಿವ್ ಹಸಿರು ಬಣ್ಣದ ಈ ಹಕ್ಕಿಯು ತಲೆಯ ಭಾಗದಲ್ಲಿ ಅಚ್ಚುಕಟ್ಟಾದ ಕಪ್ಪು ಟೋಪಿ, ಪ್ರಕಾಶಮಾನವಾದ ಹಳದಿ ಹುಬ್ಬುಗಳು ಮತ್ತು ಕೆಂಪು-ಟಿಪ್ಪಿಂಗ್ ರೆಕ್ಕೆಗಳನ್ನು ಹೊಂದಿದೆ. 2006ರಲ್ಲಿ ಔಪಚಾರಿಕವಾಗಿ ಒಂದು ಪ್ರಭೇದವೆಂದು ಗುರುತಿಸಲ್ಪಟ್ಟ ಈ ಹಕ್ಕಿಗೆ ಈ ಕಾಡು ಪ್ರದೇಶದ ಆದಿವಾಸಿ ಸಮುದಾಯವಾದ ಬುಗುನ್ಸ್ ಸಮುದಾಯದ ಹೆಸರನ್ನು ಇಡಲಾಗಿದೆ.
"ಜಗತ್ತಿನೆಲ್ಲೆಡೆಯ ಜನರು ಈ ಪಕ್ಷಿಯ ಬಗ್ಗೆ ತಿಳಿದಿದ್ದರು" ಎಂದು ಶಲೀನಾ ಫಿನ್ಯಾ ಹೇಳುತ್ತಾರೆ. ಅವರ ಕೋಣೆಯಿಂದ ಈ ಪ್ರದೇಶದ ಉಷ್ಣವಲಯದ ಮಾಂಟೆನ್ (ಪರ್ವತ) ಕಾಡುಗಳ ದೃಶ್ಯ ಒಂದು ಚೌಕಟ್ಟು ಹಾಕಿದ ಚಿತ್ರದಂತೆ ಕಾಣುತ್ತಿತ್ತು
ಐದು ವರ್ಷಗಳ ಹಿಂದೆ, ಬುಗುನ್ ಲಿಯೋಸಿಚ್ಲಾ ಅಸ್ತಿತ್ವದ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ಫಿನ್ಯಾ ಹೇಳುತ್ತಾರೆ, ಆದರೆ ಇಂದು 24 ವರ್ಷದ ಅವರು ಸಿಂಗ್ಚುಂಗ್ ಬುಗುನ್ ಗ್ರಾಮ ಸಮುದಾಯ ಮೀಸಲು (ಎಸ್‌ಬಿವಿಸಿಆರ್) ಅರಣ್ಯದಲ್ಲಿ ಮೊದಲ ಮಹಿಳಾ ಗಸ್ತು ಅಧಿಕಾರಿಯಾಗಿ ಕಾರ್ಯ ನಿರ್ವಹಿವುದರ ಜೊತೆಗೆ ಪೂರ್ವ ಹಿಮಾಲಯದ ಈ ಕಾಡುಗಳನ್ನು ದಾಖಲಿಸುವ ಚಲನಚಿತ್ರ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ.
ಸಿಂಗ್ಚುಂಗ್ ಬುಗುನ್ ಗ್ರಾಮ ಸಮುದಾಯ ಮೀಸಲು ಅರಣ್ಯ ರಚನೆಯೊಂದಿಗೆ 2017ರಲ್ಲಿ ಪ್ರಾರಂಭವಾದ ನಿರಂತರ ಸಂರಕ್ಷಣಾ ಪ್ರಯತ್ನದ ಪರಿಣಾಮವಾಗಿ ಇಲ್ಲಿ ಅಪರೂಪದ ಪ್ರಭೇದಗಳು ಕಾಣಿಸಿಕೊಳ್ಳತೊಡಗಿವೆ
1996ರಲ್ಲಿ ಈ ಪಕ್ಷಿಯನ್ನು ಮೊದಲು ನೋಡಿದ ರಾಮನ್ ಆತ್ರೇಯ ಹೇಳುವಂತೆ, “ಸಮುದಾಯದವರಿಗೆ ಕಾಡಿನ ಮೇಲೆ ಅಧಿಕಾರವಿದೆ ಎಂದು ಭಾವಿಸುವಂತೆ ಎಸ್‌ಬಿವಿಸಿಆರ್ ಕೆಲಸ ಮಾಡುತ್ತಿದೆ. ಸಮುದಾಯವು ತನ್ನ ಜೀವವೈವಿಧ್ಯತೆಯನ್ನು ಸಂರಕ್ಷಿಸಲು ಸಮರ್ಥವಾಗಿದೆ ಮತ್ತು ಭವಿಷ್ಯದಲ್ಲಿ ಸಮುದಾಯವು ಹೇಗೆ ಮುಂದುವರಿಯಲು ಬಯಸುತ್ತದೆ ಎಂಬುದಕ್ಕೆ ಅರಣ್ಯ ಪ್ರದೇಶವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಕುರಿತು ಅರಿವು ಮೂಡಿಸುತ್ತದೆ.”
ಮೀಸಲು ಪ್ರದೇಶಕ್ಕೆ ಬುಗುನ್‌ಗಳ ಹೆಸರನ್ನು ಇಡಬೇಕೆಂದು ಅವರು ಒತ್ತಾಯಿಸಿದರು, ಇದರಿಂದಾಗಿ ಇಂದು ಸಮುದಾಯವು ಯುವ ಹಕ್ಕಿಯ ಆವಾಸಸ್ಥಾನವನ್ನು ಸಂರಕ್ಷಿಸುವಲ್ಲಿ ನಿಕಟವಾಗಿ ತೊಡಗಿಸಿಕೊಂಡಿದೆ ಮತ್ತು ಹೀಗಾಗಿ ಪಕ್ಷಿಗಳ ಮನೆ ಈಗ ಸುರಕ್ಷಿತ ಮತ್ತು ಸಂರಕ್ಷಿತವಾಗಿದೆ.
ಅರುಣಾಚಲ ಪ್ರದೇಶದ ಪಶ್ಚಿಮ ಕಾಮೆಂಗ್ ಜಿಲ್ಲೆಯ ಈಗಲ್ನೆಸ್ಟ್ ವನ್ಯಜೀವಿ ಅಭಯಾರಣ್ಯದ ಕೆಳ ಪ್ರಾಂತ್ಯದಲ್ಲಿರುವ ಎಸ್‌ಬಿವಿಸಿಆರ್ ಅರಣ್ಯವನ್ನು ಭಾರತದ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಅಡಿಯಲ್ಲಿ ರಚಿಸಲಾಗಿದೆ. ಪ್ರಾರಂಭವಾದ ಐದು ವರ್ಷಗಳಲ್ಲಿ, ಈ 17 ಚದರ ಕಿಲೋಮೀಟರ್ ಸಮುದಾಯ ಮೀಸಲು ಅರಣ್ಯ ಸಂರಕ್ಷಣೆಯ ದೃಷ್ಟಿಯಿಂದ ಅನುಕರಣೀಯವಾಗಿದೆ.
ಸ್ಥಳೀಯ ಬುಗುನ್ ಸಮುದಾಯದ ಪಿನ್ಯಾಗಳು ಈ ಕಾಡುಗಳು ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಿದ್ದಾರೆ. ಇತರ 10 ಅರಣ್ಯ ಅಧಿಕಾರಿಗಳೊಂದಿಗೆ ಈ ಪ್ರದೇಶದಲ್ಲಿ ಗಸ್ತು ತಿರುಗುವುದು ಮತ್ತು ಕಳ್ಳ ಬೇಟೆಗಾರರಿಂದ ಅರಣ್ಯವನ್ನು ಉಳಿಸುವುದು ಅವರ ಕೆಲಸ.
ಎಸ್‌ಬಿವಿಸಿಆರ್ ಪ್ರದೇಶದಲ್ಲಿ ಗಸ್ತು ಅಧಿಕಾರಿಯಾಗಿರುವ ಲೆಕಿ ನೊರ್ಬು, ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಮರಗಳನ್ನು ಕಡಿಯುವುದು, ಬೇಟೆಯಾಡುವುದು, ಉರುಳು ಇಡುವುದು ಮುಂತಾದ ಕಾನೂನುಬಾಹಿರ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಾರೆ. "ಮರ ಕಡಿಯುವವರಿಗೆ 1,00,000 ರೂ.ಗಳವರೆಗೆ ದಂಡ ವಿಧಿಸಬಹುದು, ಅದೇ ರೀತಿ, ಬೇಟೆಯಾಡಿದರೆ ಇನ್ನೂ ದೊಡ್ಡ ಮೊತ್ತವನ್ನು ದಂಡವಾಗಿ ತೆರಬೇಕಾಗುತ್ತದೆ" ಎಂದು ಬುಗುನ್ ಸಮುದಾಯದ 33 ವರ್ಷದ ನರ್ಬು ಹೇಳುತ್ತಾರೆ.
ಮಾನವ ಚಟುವಟಿಕೆಗಳು ಇಲ್ಲವಾಗಿರುವುದರಿಂದ ಪ್ರಾಣಿಗಳು ದಟ್ಟವಾದ ಕಾಡುಗಳಿಂದ ಹೊರಬಂದು ಎಸ್‌ಬಿವಿಸಿಆರ್ ಪ್ರವೇಶಿಸುತ್ತಿವೆ. ಹುಲ್ಲುಗಾವಲುಗಳಲ್ಲಿ ತಿರುಗಾಡುವ ಜಾನುವಾರುಗಳ ಅತಿದೊಡ್ಡ ತಳಿಯಾದ ಮೆಥಾನ್ ಅಪರೂಪವಾಗುತ್ತಿರುವ ಪ್ರಾಣಿಗಳ ಪಟ್ಟಿಯಲ್ಲಿದೆ, ಆದರೆ ಎಸ್‌ಬಿವಿಸಿಆರ್ ಪ್ರದೇಶದಲ್ಲಿ, ಲೆಕ್ಕಿ ಹೇಳುತ್ತಾರೆ, "ನಂಬರ್ ಯೂಂ ಜಾದಾ ಹುವಾ ಜೆಸಾ ಹೈ. ಪೆಹ್ಲೆ ಸೆ ಆತಾ ಥಾ, ಪರ್ ಜ್ಯಾದಾ ನಂಬರ್ ಮೇನ್ ನಹೀ ಆತಾ ಹೈ, ಸಿಂಗಲ್ ಹಿ ಆತಾ ಥಾ [ಮೊದಲು ಇಲ್ಲಿ ಒಂದು ಎರಡು ಕಾಣಿಸಿಕೊಳ್ಳುತ್ತಿದ್ದವು. ಈಗೀಗ ಗುಂಪುಗಳಲ್ಲಿ ಕಾಣಿಸಿಕೊಳ್ಳುತ್ತಿವೆ]. "
ಇಲ್ಲಿ ಇತರ ಪ್ರಾಣಿಗಳನ್ನು ಸಹ ಗುರುತಿಸಲಾಗಿದೆ. "ಧೋಲೆ [ Cuon alpinus ] ಎನ್ನುವಕಾಡು ನಾಯಿಗಳ ಸಂಖ್ಯೆಯೂ ಹೆಚ್ಚಾಗಿದೆ, ಕಳೆದ 3-4 ವರ್ಷಗಳಲ್ಲಿ ಎಸ್‌ಬಿವಿಸಿಆರ್ ಪ್ರದೇಶದಲ್ಲಿ ಈ ಕಾಡು ನಾಯಿಯ ಚಟುವಟಿಕೆಯಲ್ಲಿ ಹೆಚ್ಚಳ ಕಂಡುಬಂದಿದೆ" ಎಂದು ಸಿಂಗ್ಚುಂಗ್ ನಿವಾಸಿ ಬುಗುನ್ ಸಮುದಾಯದ ಖಂಡು ಗ್ಲೋ ಹೇಳುತ್ತಾರೆ. ಅವರು ಎಸ್‌ಬಿವಿಸಿಆರ್ ಸಮಿತಿಯ ಅಧ್ಯಕ್ಷರೂ ಹೌದು.
ಈ ಅರಣ್ಯವು ತ್ಸಿಂಗ್‌ಚುಂಗ್ ನಗರ ಮತ್ತು ಈಗಲ್ನೆಸ್ಟ್ ವನ್ಯಜೀವಿ ಅಭಯಾರಣ್ಯದ ನಡುವೆ ಬಫರ್ ವಲಯವಾಗಿ ಕಾರ್ಯನಿರ್ವಹಿಸುತ್ತದೆ. ಅಭಯಾರಣ್ಯವು ಘೇಂಡಾಮೃಗಗಳು, ಪಟ್ಟೆ ಬೆಕ್ಕುಗಳು, ಏಷ್ಯನ್ ಗೋಲ್ಡನ್ ಬೆಕ್ಕುಗಳು ಮತ್ತು ಚಿರತೆಗಳಂತಹ ವಿವಿಧ ವನ್ಯಜೀವಿಗಳಿಗೆ ನೆಲೆಯಾಗಿದೆ. ಈ ಅರಣ್ಯವು ಅಳಿವಿನಂಚಿನಲ್ಲಿರುವ ಲಂಗೂರ್, ಗೋರಲ್, ಕೆಂಪು ಪಾಂಡಾ, ಏಷ್ಯನ್ ಕಪ್ಪು ಕರಡಿ ಮತ್ತು ಅಳಿವಿನಂಚಿನಲ್ಲಿರುವ ಅರುಣಾಚಲ ಮಕಾಕ್ ಮತ್ತು ಗೌರ್ ಪ್ರಾಣಿಗಳಿಗೆ ನೆಲೆಯಾಗಿದೆ. ಈಗಲ್ನೆಸ್ಟ್ ಅರಣ್ಯವು 3,250 ಮೀಟರ್ ಎತ್ತರದಲ್ಲಿ ಆನೆಗಳನ್ನು ಹೊಂದಿರುವ ವಿಶ್ವದ ಏಕೈಕ ಅರಣ್ಯವಾಗಿದೆ.
ಆದರೆ ಇಲ್ಲಿನ ಪಕ್ಷಿಗಳು ವಿಶೇಷವಾಗಿ ದೇಶೀಯ ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಈಗಲ್ನೆಸ್ಟ್ 600ಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ, ಅವುಗಳಲ್ಲಿ ಕೆಲವೆಂದರೆ ಸ್ಕಾರ್ಲೆಟ್ ಬೆಲ್ಲಿಡ್ ವಾರ್ಡ್ಸ್ ಟ್ರೊಗಾನ್ ( ಅಳಿವಿನಂಚಿನಲ್ಲಿವೆ ), ಬೇಟೆ ಹಕ್ಕಿ ಜಾತಿಯ ಡೋರಿಕ್ಸ್ ಟ್ರೆಗೊಪನ್ ( ದುರ್ಬಲ ಪರಿಸ್ಥಿತಿಯಲ್ಲಿವೆ ) ಮತ್ತು ಪ್ರಕಾಶಮಾನವಾದ ನೀಲಿ-ಬೂದಿ ಬಣ್ಣದ ಸುಂದ ನಾಚ್ಸ್ ( ದುರ್ಬಲ ಪರಿಸ್ಥಿತಿಯಲ್ಲಿವೆ ) ನಂತಹ ದೊಡ್ಡ ದುರ್ಬಲ ಪಕ್ಷಿಗಳು.
ಪ್ರಸ್ತುತ ಈಗಲ್ನೆಸ್ಟ್ ಬಳಿಯ ಟಿಂಗ್ಸಂಗ್ಖ್ ಜನಪ್ರಿಯ ಪ್ರವಾಸಿ ಪಕ್ಷಿ ತಾಣವಾಗಿದೆ. ತೀವ್ರ ಅಳಿವಿನಂಚಿನಲ್ಲಿರುವ ಬುಗುನ್ ಲಿಯೋಸಿಚ್ಲಾ ಹಕ್ಕಿಗಳ ಮೋಡಿಮಾಡುವ ಸುಮಧುರ ಧ್ವನಿಯನ್ನು ಕೇಳಲು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಜಗತ್ತಿನಲ್ಲಿ ಕೇವಲ 14ರಿಂದ 20 ಸಂತಾನೋತ್ಪತ್ತಿ ಮಾಡಬಲ್ಲ ವಯಸ್ಕ ಬುಗುನ್ ಲಿಯೋಸಿಚ್ಲಾ ಉಳಿದಿರುವುದರಿಂದ, ಪಕ್ಷಿ ವೀಕ್ಷಕರು ಈ ಪಕ್ಷಿಯನ್ನು ಒಂದು ಕ್ಷಣ ನೋಡುವುದನ್ನು ಅದೃಷ್ಟದ ವಿಷಯವೆಂದು ಪರಿಗಣಿಸುತ್ತಾರೆ.
ಬುಗುನ್ ಲಿಯೋಸಿಚ್ಲಾ ಸಾಮಾನ್ಯವಾಗಿ ಜೋಡಿಗಳಲ್ಲಿ ಅಥವಾ ಸಣ್ಣ ಗುಂಪುಗಳಲ್ಲಿ ಕಂಡುಬರುತ್ತವೆ. ಪೂರ್ವ ಹಿಮಾಲಯದ ದಟ್ಟವಾದ ಕಾಡುಗಳು (ಸಮುದ್ರ ಮಟ್ಟದಿಂದ 2,060-2,340 ಮೀಟರ್ ಎತ್ತರದಲ್ಲಿದೆ) ಈ ಪಕ್ಷಿಯು ಏಕೈಕ ಆವಾಸಸ್ಥಾನವಾಗಿದೆ
“ಈಗಲ್‌ನೆಸ್ಟ್, ನಾಮದಾಫ ರಾಷ್ಟ್ರೀಯ ಉದ್ಯಾನವನ (ಅರುಣಾಚಲ ಪ್ರದೇಶದಲ್ಲಿಯೂ ಸಹ) ಮತ್ತು ಅಸ್ಸಾಂನಲ್ಲಿ ಅನೇಕ ಪಕ್ಷಿಗಳು ಕಂಡುಬರುತ್ತವೆ, ಆದರೆ ಲಿಯೋಸಿಚ್ಲಾ ತ್ಸಿಂಗ್‌ಚುಂಗ್‌ನಲ್ಲಿ ಮಾತ್ರ ಕಾಣಸಿಗುತ್ತದೆ. ಈ ಹಕ್ಕಿ ಇಲ್ಲದೇ ಹೋಗಿದ್ದರೆ ಇಲ್ಲಿಗೆ ಜನ ಬರುತ್ತಿರಲಿಲ್ಲ’ ಎಂದು ಲಾಮಾ ಕ್ಯಾಂಪ್ ಎಂಬ ಪರಿಸರ ಸ್ನೇಹಿ ಪರಿಸರ ಶಿಬಿರ ನಡೆಸುತ್ತಿರುವ ಇಂಡಿ ಗ್ಲೋ ಹೇಳಿದರು. "ಜನರು ಹಕ್ಕಿ ಸಿಗದಿದ್ದರೆ ಹೆಚ್ಚುವರಿ ಒಂದೆರಡು ದಿನ ಇಲ್ಲಿಯೇ ಇರುತ್ತಾರೆ" ಎಂದು ಗ್ಲೋ ಹೇಳಿದರು.
ಇಲ್ಲಿಗೆ ನೂರಾರು ಪ್ರವಾಸಿಗರು ಭೇಟಿ ನೀಡುವುದರಿಂದ ಸ್ಥಳೀಯರಿಗೆ ಪ್ರಯೋಜನವಾಗುತ್ತಿದೆ. "ಇಂದಿನ ದಿನಗಳಲ್ಲಿ, ವಾರ್ಷಿಕವಾಗಿ 300ರಿಂದ 400 ಪ್ರವಾಸಿಗರು ತ್ಸಿಂಗ್‌ಚುಂಗ್‌ಗೆ ಬರುತ್ತಾರೆ ಮತ್ತು ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ." ಮಳೆಗಾಲಕ್ಕೂ ಮೊದಲು ಏಪ್ರಿಲ್‌ನಿಂದ ಜೂನ್‌ವರೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿರುತ್ತದೆ.
ಏನೇ ಟೀಕೆಗಳಿದ್ದರೂ ಆತ್ರೇಯ ಅವರು ಹಣ ನೀಡಬಲ್ಲ ಪ್ರವಾಸಿಗರು ಬರುವುದನ್ನು ಸ್ವಾಗತಿಸುತ್ತಾರೆ. “ಇಲ್ಲಿ ಹಣ ಬೇಕು. ಸಂಬಳವೆಂದು ಬರುವುದು (ಸಂರಕ್ಷಣಾ ಉಪಕ್ರಮಕ್ಕಾಗಿ) ವರ್ಷಕ್ಕೆ 15 ಲಕ್ಷ ರೂ. ಮಾತ್ರ” ಎನ್ನುವ ವೃತ್ತಿಯಲ್ಲಿ ರೇಡಿಯೋ ಖಗೋಳಶಾಸ್ತ್ರಜ್ಞರಾದ ಆತ್ರೇಯ ಅವರು ಅರುಣಾಚಲ ಪ್ರದೇಶದ ಸಂರಕ್ಷಣೆಯಲ್ಲಿ ನಿಕಟವಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ಬುಗುನ್‌ಗಳ ಉಪಕ್ರಮವನ್ನು ಶ್ಲಾಘಿಸುತ್ತಾರೆ. ಅವರು ನಾವು ನಿರೀಕ್ಷಿಸಿದ್ದಕ್ಕಿಂತ ಚೆನ್ನಾಗಿ ಮಾಡಿದ್ದಾರೆ.” ಎನ್ನುತ್ತಾರೆ.
ಈ ದಿನಗಳಲ್ಲಿ, ಸಮುದಾಯದ ಜನರು ಪರಿಸರ ಸ್ನೇಹಿ ಶಿಬಿರಗಳನ್ನು ನಡೆಸುತ್ತಾರೆ, ನಿಯಮಿತವಾಗಿ ಗಸ್ತು ತಿರುಗುತ್ತಾರೆ ಮತ್ತು ಪ್ರದೇಶದ ಶಾಲೆಗಳಲ್ಲಿ ಜಾಗೃತಿ ಅಭಿಯಾನಗಳನ್ನು ನಡೆಸುತ್ತಾರೆ. ಬುಗುನ್ ಪರಿಶಿಷ್ಟ ಪಂಗಡಕ್ಕೆ ಸೇರಿದ್ದು ಹಾಗೂ ಇವರು 2013ರ ವರದಿ ಯ ಪ್ರಕಾರ, 1,432 ಜನಸಂಖ್ಯೆಯನ್ನು ಹೊಂದಿದ್ದಾರೆ. ಆದರೆ ಅವರ ಜನಸಂಖ್ಯೆ ಇದರ ಕನಿಷ್ಠ ಎರಡು ಪಟ್ಟು ಇದೆ ಎಂದು ಅವರು ಹೇಳುತ್ತಾರೆ.
ಪಿನ್ಯಾ ಅವರಂತಹ ಸ್ಥಳೀಯರು ಪಶ್ಚಿಮ ಕಮೆಂಗ್ ಜಿಲ್ಲೆಯ ಶಾಲೆಗಳಲ್ಲಿ ಕಾಡುಗಳು ಮತ್ತು ಅವುಗಳ ಜೀವವೈವಿಧ್ಯದ ಅಗತ್ಯತೆಗಳ ಬಗ್ಗೆ ವನ್ಯಜೀವಿ ವಾರವನ್ನು ಆಚರಿಸುತ್ತಾರೆ. ಬಾಲ್ಯದಲ್ಲಿ ಆಗಾಗ ಕಂಡ ಘಟನೆಗಳಿಂದ ಸಂರಕ್ಷಣಾ ಜಾಗೃತಿಯ ಅಗತ್ಯವನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ. “ನನ್ನ ಸ್ನೇಹಿತರು ಹೇಗೆ ಕಾಡಿಗೆ ಹೋಗಿ ಪುಟ್ಟ ಪಕ್ಷಿಗಳನ್ನು ಕೊಂದು ತಿನ್ನುತ್ತಿದ್ದರೆನ್ನುವುದನ್ನು ನಾನು ನೋಡಿದ್ದೆ. ಇದರಿಂದ ನನಗೆ ಬಹಳ ನೋವಾಗುತ್ತಿತ್ತು. ತಿನ್ನಲು ಕೋಳಿ ಇರುವಾಗ ಬೇರೆ ಹಕ್ಕಿಗಳನ್ನು ಏಕೆ ತಿನ್ನುತ್ತೀರಿ? ಎಂದು ನಾನು ಅವರನ್ನು ಕೇಳುತ್ತಿದ್ದೆ.”
"ನಾವು ಅಧ್ಯಯನ ಮಾಡಲು ಬಯಸಿರಲಿಲ್ಲ" ಎಂದು ಅವರ ಸಹೋದ್ಯೋಗಿ ನಾರ್ಬು ಹೇಳುತ್ತಾರೆ. ನಾವು ಗುಂಪು ಗುಂಪಾಗಿ ಕಾಡಿಗೆ ಹೋಗುತ್ತಿದ್ದೆವು, ಕೆಲವೊಮ್ಮೆ ಬೇಟೆಯಾಡುತ್ತಿದ್ದೆವು - ಕೆಲವೊಮ್ಮೆ ತೋಳಗಳು, ಮರಕುಟಿಗಗಳು, ಕಾಡುಹಂದಿಗಳು ಇತ್ಯಾದಿ ಸಿಗುತ್ತಿದ್ದವು. ಆಗ ಬೇಟೆಯಾಡುವುದು ಹವ್ಯಾಸವಾಗಿತ್ತು, ಯಾರೂ ಅಧ್ಯಯನ ಮಾಡುವ ಬಗ್ಗೆ ಕಾಳಜಿ ವಹಿಸಿರಲಿಲ್ಲ” ಎಂದು ಅವರು ಹೇಳುತ್ತಾರೆ.
"ಕೆಲವೊಮ್ಮೆ ಅವರು ಆಹಾರಕ್ಕಾಗಿ ಬೇಟೆಯಾಡಿದರು, ಕೆಲವೊಮ್ಮೆ ಸುಮ್ಮನೆ" ಎಂದು ನಾರ್ಬು ಹೇಳಿದರು, ಅವರು ಈಗ ಅಳಿವಿನಂಚಿನಲ್ಲಿರುವ ವನ್ಯಜೀವಿ ಕಾಡಿನಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ನಿಕಟವಾಗಿ ನಿಗಾ ಇಡುತ್ತಾರೆ.
ರಿಸರ್ವ್‌ನ ಹಿಂದಿನ ಪ್ರೇರಕ ಶಕ್ತಿಗಳಲ್ಲಿ ಒಬ್ಬರು ಮಾಜಿ ಜಿಲ್ಲಾ ಅರಣ್ಯ ಅಧಿಕಾರಿ (D.F.O.) ಮಿಲೋ ತಾಸರ್, ಅವರು ಕಳೆದ ಎಂಟು ವರ್ಷಗಳಿಂದ ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಮುದಾಯದ ಜನರಿಗೆ ಮೊದಲ ಸ್ಥಾನ ನೀಡದಿದ್ದರೆ ಈ ಅಭಯಾರಣ್ಯವನ್ನು ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಝೀರೋ ವ್ಯಾಲಿ ಡಿಎಫ್‌ಒ ತಾಸರ್ ಹೇಳುತ್ತಾರೆ. "ಇದು ನೇರವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಮತ್ತು ಸಮುದಾಯವನ್ನು ಒಳಗೊಳ್ಳದೆ ಹೋಗಿದ್ದರೆ ಎಸ್‌ಬಿವಿಸಿಆರ್ ರಚನೆಯ ಪ್ರಕ್ರಿಯೆಯು ಸಾಧ್ಯವಾಗುತ್ತಿರಲಿಲ್ಲ,” ಎಂದು ಅರಣ್ಯ ಅಧಿಕಾರಿಯು ಸಾಮುದಾಯಿಕ ಭಾಗವಹಿಸುವಿಕೆಯ ಅಗತ್ಯವನ್ನು ಒತ್ತಿ ಹೇಳಿದರು.
ಅನೇಕ ಕುಟುಂಬಗಳ ಕನಿಷ್ಠ ಒಬ್ಬ ಸದಸ್ಯ ಇಲ್ಲಿ ಅಡುಗೆಯವರು, ಅರಣ್ಯಾಧಿಕಾರಿಗಳು, ವಾಹನ ಚಾಲಕರಾಗಿ ಹಾಗೂ ಇತರ ಸೇವೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಂಚೂಣಿ ಕಾರ್ಮಿಕರಿಗೆ ಆಗಾಗ್ಗೆ ರಾಜ್ಯ ಅನುದಾನದ ಅಡಿಯಲ್ಲಿ ಸಿಗುವ ಸಂಬಳವನ್ನು ತಡವಾಗಿ ಬರುತ್ತದೆ ಮತ್ತು ಅಂತಹ ಸಂದರ್ಭದಲ್ಲಿ ಪ್ರವಾಸೋದ್ಯಮದ ಕಡೆಯಿಂದ ಬರುವ ಆದಾಯವು ಅತ್ಯಗತ್ಯವಾಗುತ್ತದೆ.
ಆದಾಗ್ಯೂ, ಬುಗುನ್ ಜನರು ಈ ಪುಟ್ಟ ಹಕ್ಕಿಯನ್ನು ಪಟ್ಟಣದ ರೂಪಾಂತರಕ್ಕೆ ಕಾರಣವಾದ ವರವೆಂದು ಪರಿಗಣಿಸುತ್ತಾರೆ, " ಲಿಯೋಸಿಚ್ಲಾ ಇಲ್ಲದಿದ್ದರೆ, ಸಿಂಗ್ಚುಂಗ್ ಈ ರೀತಿ ರೂಪಾಂತರಗೊಳ್ಳುತ್ತಿರಲಿಲ್ಲ" ಎಂದು ಗ್ಲೋ ಹೇಳುತ್ತಾರೆ.
*****
ಈ ಪಕ್ಷಿಯ ಅರ್ಧ ಹೆಸರು ಸಮುದಾಯದಿಂದ ಬಂದಿದೆ, ಆದರೆ "ಇನ್ನರ್ಧ ಹೆಸರಾದ ಲಿಯೋಸಿಚ್ಲಾ ಎನ್ನುವುದು ರೋಮನ್ ಭಾಷೆಯ ಉತ್ತಮ ಪಕ್ಷಿ ಎನ್ನುವ ಪದದಿಂದ ಬಂದಿದೆ" ಎಂದು ನಾವು ಎಸ್‌ಬಿವಿಸಿಆರ್ ಒಳಗೆ ನಡೆದು ಹೋಗುವಾಗ ಉಮೇಶ್ ವಿವರಿಸಿದರು; ಗಾಢ ಹಸಿರಿನಿಂದ ಕೂಡಿದ ಬೆಟ್ಟ ಮತ್ತು ಕಾಡಿನ ಈ ಪ್ರದೇಶದಲ್ಲಿ ನಮ್ಮ ಮೌನದ ಕ್ಷಣಗಳನ್ನು ಇಲ್ಲಿನ ಹಕ್ಕಿಗಳು ತುಂಬುತ್ತಿದ್ದವು.
ಈ ದಟ್ಟ ಹಸಿರು ಕಾಡಿನಲ್ಲಿ ಸಮಸ್ಯೆಯೂ ಇರುವುದು ನಮ್ಮ ಗಮನಕ್ಕೆ ಬಂತು.
ಈಗಲ್ ನೆಸ್ಟ್ ವನ್ಯಜೀವಿ ಅಭಯಾರಣ್ಯದ ಪಕ್ಷಿಶಾಸ್ತ್ರಜ್ಞ ಶ್ರೀನಿವಾಸನ್, ಪರ್ವತಗಳಲ್ಲಿ ತಾಪಮಾನವು ಏರುತ್ತಿದೆ, ಬಿಳಿ ಬಾಲದ ರಾಬಿನ್ ಹಕ್ಕಿಗಳು ಮತ್ತು ಸಾಮಾನ್ಯ ಹಸಿರು ಮಡಿವಾಳ ಹಕ್ಕಿಗಳು ಹೆಚ್ಚುತ್ತಿರುವ ತಾಪಮಾನದಿಂದಾಗಿ ಶಾಖವನ್ನು ಸಹಿಸಲಾಗದೆ ಪರ್ವತದ ಎತ್ತರದ ಸ್ಥಳಗಳಿಗೆ ಚಲಿಸುತ್ತಿವೆ ಎಂದು ಹೇಳುತ್ತಾರೆ.
ಈಗ ಹೆಸರುವಾಸಿಯಾಗಿರುವ ಪಕ್ಷಿ "ಪ್ರಸ್ತುತ ಸಮುದ್ರ ಮಟ್ಟದಿಂದ 2,000-2,300 ಮೀಟರ್ ಎತ್ತರದಲ್ಲಿ 2 ಚದರ ಕಿಲೋಮೀಟರ್ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತದೆ" ಎಂದು ಅವರು ಹೇಳಿದರು. "ಆದರೆ ಲಿಯೋಸಿಚ್ಲಾ ಸಹ ಮೇಲ್ಭಾಗಕ್ಕೆ ಚಲಿಸಬೇಕಾಗುತ್ತದೆ." ಇದನ್ನು ಗಮನದಲ್ಲಿಟ್ಟುಕೊಂಡು, ಹಲವಾರು ಎತ್ತರದ ಪರ್ವತಗಳ ಸುತ್ತಲೂ ಸಾಮೂಹಿಕ ಮೀಸಲು ಅರಣ್ಯ ನಿರ್ಮಿಸಲಾಗಿದೆ. "ಎಸ್‌ಬಿವಿಸಿಆರ್ ಅರಣ್ಯವನ್ನು 1,300ರಿಂದ 3,300 ಮೀಟರ್‌ಗಳ ಎತ್ತರವನ್ನು ಆವರಿಸುವಂತೆ ವಿನ್ಯಾಸಗೊಳಿಸಲಾಗಿದೆ" ಎಂದು ಶ್ರೀನಿವಾಸನ್ ಹೇಳಿದರು. ಜಾಗತಿಕ ತಾಪಮಾನವನ್ನು ನಿಭಾಯಿಸಲು ಸಾಧ್ಯವಾಗದೆ ಪಕ್ಷಿಗಳು ಕ್ರಮೇಣ ಪರ್ವತಗಳ ತುದಿಗೆ ಹೇಗೆ ಚಲಿಸುತ್ತಿವೆ ಎಂಬುದರ ಕುರಿತು ಈ ವರದಿಯನ್ನು ಓದಿ: ಅರುಣಾಚಲದ ಹಕ್ಕಿಗಳು: ಕಲ್ಲಿದ್ದಲು ಗಣಿಯಲ್ಲಿನ ಕ್ಯಾನರಿ ಹಕ್ಕಿ
ಆದರೆ ಸಿಎಫ್ಆರ್ ಸ್ಥಾಪನೆಯು ಕೆಲವು ಅಪಸ್ವರಗಳನ್ನೂ ಹೊಂದಿದೆ.
"ನಾವು ನಮ್ಮ ಕಾಡುಗಳೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿದ್ದೇವೆ. ಮೊದಲು ಇದೇ ಕಾರಣಕ್ಕಾಗಿ ನಾವು ಸಮುದಾಯ ಮೀಸಲು ಅರಣ್ಯ ರಚನೆಯನ್ನು ಆಕ್ಷೇಪಿಸಿದ್ದೆವು" ಎಂದು ಸ್ಥಳೀಯ ಗುತ್ತಿಗೆದಾರ ಚಾಂಗ್ ನೊರ್ಬು ಸರಾಯ್ ಹೇಳುತ್ತಾರೆ. "ಅರಣ್ಯ ಇಲಾಖೆಯು ಭೂಮಿಯನ್ನು ಕಸಿದುಕೊಳ್ಳುತ್ತದೆ ಆದರೆ ಅದಕ್ಕೆ ಪ್ರತಿಯಾಗಿ ಜನರಿಗೆ ಏನೂ ಸಿಗುವುದಿಲ್ಲ" ಎಂದು ಸಿಂಗ್ಚುಂಗ್ ನಿವಾಸಿ ಬುಗುನ್ ಸಮುದಾಯದ ನರ್ಬು ಸರಾಯ್ ಹೇಳುತ್ತಾರೆ.
ಆದರೆ ಮೀಸಲು ಅರಣ್ಯದಲ್ಲಿನ ಜಲಮೂಲವು ಅವರನ್ನು ಮತ್ತು ಇತರ ಪ್ರತಿಭಟನಾಕಾರರನ್ನು ಯೋಚಿಸುವಂತೆ ಮಾಡಿತು. "ಸಿಂಗ್ಚುಂಗ್ ಜಲಮೂಲದ ಹೆಸರಿನಲ್ಲಿದೆ ಮತ್ತು ಅಲ್ಲಿಂದ ನಗರಕ್ಕೆ ನೀರು ಸಿಗುತ್ತದೆ. ಜಲಮೂಲವನ್ನು ರಕ್ಷಿಸಲು, ನಾವು ಅರಣ್ಯವನ್ನು ಸಂರಕ್ಷಿಸಬೇಕು, ವಿಶೇಷವಾಗಿ ಕಡಿಯುವುದು ಮತ್ತು ಅರಣ್ಯನಾಶವನ್ನು ನಿಲ್ಲಿಸಬೇಕಿತ್ತು" ಎಂದು ಮಾಜಿ ಸ್ಥಳೀಯ ಗುತ್ತಿಗೆದಾರ ಸರಾಯ್ ಹೇಳುತ್ತಾರೆ.
ಅಸ್ಸಾಂನ ತೇಜ್ಪುರದಿಂದ ಅರುಣಾಚಲ ಪ್ರದೇಶದ ಈಗಲ್ ನೆಸ್ಟ್ ತನಕ, ನೀವು ಈ ಪ್ರದೇಶದಾದ್ಯಂತ ಬುಗುನ್ ಲಿಯೋಸಿಚ್ಲಾ ಪಕ್ಷಿಯನ್ನು ನೋಡಬಹುದು. ಪಕ್ಷಿ ಈಗ ಜನಪ್ರಿಯವಾಗಿರುವುದು ಬುಗುನ್ ಸಮುದಾಯದ ಸಂರಕ್ಷಣಾ ಪ್ರಯತ್ನಗಳಿಗೆ ಹೆಗ್ಗುರುತಿನಂತಿದೆ ಮತ್ತು. "ಇಂದು, ನಾವು ಜಗತ್ತಿಗೆ ನಮ್ಮ ಹೆಸರು ಗೊತ್ತು, ನಾವು ಜನರಿಗೆ ಪರಿಚಿತರಾಗಿದ್ದೇವೆ" ಎಂದು ಸರಾಯ್ ಹೇಳುತ್ತಾರೆ. "ಇದಕ್ಕಿಂತ ನಮಗೆ ಇನ್ನೇನು ಬೇಕು?"
ಅನುವಾದ: ಶಂಕರ. ಎನ್. ಕೆಂಚನೂರು