ನಾನು ದೂರ ಹೋಗುತ್ತಿರುವೆ, ನಾನು ವಿದೇಶಿ ನೆಲದತ್ತ ಹೋಗುತ್ತಿರುವೆ
ಇದು ದೂರದ ದಾರಿ, ಓ ಕುಂಜ್ ಹಕ್ಕಿಯೇ ನಾನು ದೂರದೂರಿಗೆ ಹೋಗುತ್ತಿರುವೆ
ಹೊಸದಾಗಿ ಮದುವೆಯಾದ ಯುವತಿಯೊಬ್ಬಳು ಡೆಮೊಸಿಲ್ ಕ್ರೇನ್ ಅಥವಾ ಕುಂಜ್ ಎನ್ನುವ ಬೂದು ಬಣ್ಣದ ಕೊಕ್ಕರೆ ಜಾತಿಯ ಹಕ್ಕಿಗೆ ಸಮರ್ಪಿತವಾದ ಈ ಹಾಡನ್ನು ಹಾಡುತ್ತಾಳೆ. ಮದುವೆಯಾಗಿ ತನ್ನ ಗಂಡನ ಮನೆಗೆ ಹೊರಟ ಮದುಮಗಳು ತನ್ನ ಬದುಕು ಕೂಡಾ ಈ ಕೊಕ್ಕರೆಯ ಬದುಕಿನಂತೆಯೇ ಎಂದು ಈ ಹಾಡಿನ ಮೂಲಕ ತಿಳಿಸುತ್ತಾಳೆ.
ಪ್ರತಿ ವರ್ಷ ಈ ಸೂಕ್ಷ್ಮ ಸ್ವಭಾವದ, ಬೂದು ಗರಿಗಳ ಸಾವಿರಾರು ಹಕ್ಕಿಗಳು ಮಧ್ಯ ಏಷ್ಯಾದ ತಮ್ಮ ಸಂತಾನೋತ್ಪತ್ತಿ ಉದ್ದೇಶಕ್ಕಾಗಿ ಪಶ್ಚಿಮ ಭಾರತದ ಶುಷ್ಕ ಪ್ರದೇಶಗಳಿಗೆ, ವಿಶೇಷವಾಗಿ ಗುಜರಾತ್ ಮತ್ತು ರಾಜಸ್ಥಾನಕ್ಕೆ ವಲಸೆ ಬರುತ್ತವೆ. ಅವು ಈ ನಿಟ್ಟಿನಲ್ಲಿ 5,000 ಕಿಲೋಮೀಟರಿಗಿಂತಲೂ ಹೆಚ್ಚು ದೂರವನ್ನು ಕ್ರಮಿಸುತ್ತವೆ ಮತ್ತು ತಮ್ಮ ಆವಾಸ ಸ್ಥಾನಕ್ಕೆ ತೆರಳುವ ಮೊದಲು ನವೆಂಬರ್ ತಿಂಗಳಿನಿಂದ ಮಾರ್ಚ್ ತನಕ ಇಲ್ಲಿಯೇ ತಂಗುತ್ತವೆ.
ಆಂಡ್ರ್ಯೂ ಮಿಲ್ಹಾಮ್ ತನ್ನ ಸಿಂಗಿಂಗ್ ಲೈಕ್ ಲಾರ್ಕ್ಸ್ ಪುಸ್ತಕದಲ್ಲಿ ಹೀಗೆ ಹೇಳುತ್ತಾರೆ, "ಪಕ್ಷಿಶಾಸ್ತ್ರೀಯ ಜಾನಪದ ಹಾಡುಗಳು ಅಳಿವಿನಂಚಿನಲ್ಲಿರುವ ಪ್ರಕಾರವಾಗಿದೆ - ಇಂದಿನ ವೇಗದ ತಾಂತ್ರಿಕ ಜಗತ್ತಿನಲ್ಲಿ ಅವುಗಳಿಗೆ ಸ್ಥಾನವಿಲ್ಲ." ಈ ವಿಷಯದಲ್ಲಿ ಹಕ್ಕಿಗಳು ಮತ್ತು ಜಾನಪದ ಗೀತೆಗಳು ಒಂದೇ ಹಾದಿಯಲ್ಲಿವೆ ಎಂದು ಅವರು ಹೇಳುತ್ತಾರೆ – ಅವುಗಳಿಗೆ ನಮ್ಮನ್ನು ಮನೆ ಬಾಗಿಲಿನಿಂದಾಚೆ ತಮ್ಮ ರೆಕ್ಕೆಗಳ ಮೇಲೆ ಹೊತ್ತೊಯ್ಯುವ ಸಾಮರ್ಥ್ಯವಿದೆ.
ಜಾನಪದ ಗೀತೆಗಳು ವೇಗವಾಗಿ ಅಳಿವಿನಂಚಿಗೆ ಸಾಗುತ್ತಿರುವ ಯುಗದಲ್ಲಿ ನಾವು ವಾಸಿಸುತ್ತಿದ್ದೇವೆ, ತಲೆಮಾರಿನಿಂದ ತಲೆಮಾರಿಗೆ ನಡೆದುಕೊಂಡು ಬಂದ ಸಂಪ್ರದಾಯ ಇಂದು ಸತ್ತು ಹೋಗಿದೆ. ಒಂದಾನೊಂದು ಕಾಲದಲ್ಲಿ, ಈ ಹಾಡುಗಳನ್ನು ರಚಿಸಿದವರು, ಕಲಿತವರು ಮತ್ತು ಹಾಡುವವರು ಆಕಾಶ, ಜಗತ್ತು ಮತ್ತು ಸುತ್ತಮುತ್ತಲಿನ ಜನರಲ್ಲಿ ಸೃಜನಶೀಲ ಸ್ಫೂರ್ತಿ, ಶಿಕ್ಷಣ ಮತ್ತು ಮನರಂಜನೆಯನ್ನು ಕಂಡುಕೊಳ್ಳುತ್ತಿದ್ದರು.
ಈ ನಿಟ್ಟಿನಲ್ಲಿ ನೋಡಿದಾಗ, ಈ ಹಕ್ಕಿಗಳು ಕಚ್ ಕಥೆಗಳು ಮತ್ತು ಹಾಡುಗಳ ರೆಂಬೆ-ಕೊಂಬೆಗಳ ಮೇಲೆ ಕುಳಿತು ಹಾಡುವುದು ಆಶ್ಚರ್ಯವೇನಿಲ್ಲ. ಮುಂಡ್ರಾ ತಾಲೂಕಿನ ಭದ್ರೇಸರ ಗ್ರಾಮದ ಜುಮಾ ವಾಘರ್ ಅವರು ಈ ಹಾಡನ್ನು ತಮ್ಮ ಕಂಠ ಮಾಧುರ್ಯದಿಂದ ಮಂತ್ರಮುಗ್ಧಗೊಳಿಸುವಂತೆ ಹಾಡಿದ್ದಾರೆ.
કરછી
ડૂર તી વિના પરડેસ તી વિના, ડૂર તી વિના પરડેસ તી વિના.
લમી સફર કૂંજ મિઠા ડૂર તી વિના,(૨)
કડલા ગડાય ડયો ,વલા મૂંજા ડાડા મિલણ ડયો.
ડાડી મૂંજી મૂકે હોરાય, ડાડી મૂંજી મૂકે હોરાય
વલા ડૂર તી વિના.
લમી સફર કૂંજ વલા ડૂર તી વિના (૨)
મુઠીયા ઘડાઈ ડયો વલા મૂંજા બાવા મિલણ ડયો.
માડી મૂંજી મૂકે હોરાઈધી, જીજલ મૂંજી મૂકે હોરાઈધી
વલા ડૂર તી વિના.
લમી સફર કૂંજ વલા ડૂર તી વિના (૨)
હારલો ઘડાય ડયો વલા મૂંજા કાકા મિલણ ડયો,
કાકી મૂંજી મૂકે હોરાઈધી, કાકી મૂંજી મૂકે હોરાઈધી
વલા ડૂર તી વિના.
લમી સફર કૂંજ વલા ડૂર તી વિના (૨)
નથડી ઘડાય ડયો વલા મૂંજા મામા મિલણ ડયો.
મામી મૂંજી મૂકે હોરાઈધી, મામી મૂંજી મૂકે હોરાઈધી
વલા ડૂર તી વિના.
ಕನ್ನಡ
ನಾನು ದೂರ ಹೋಗುತ್ತಿರುವೆ, ನಾನು ವಿದೇಶಿ ನೆಲದತ್ತ ಹೋಗುತ್ತಿರುವೆ (2)
ಇದು ದೂರದ ದಾರಿ, ಓ ಕುಂಜ್ ಹಕ್ಕಿಯೇ ನಾನು ದೂರದೂರಿಗೆ ಹೋಗುತ್ತಿರುವೆ
(2)
ಕದಲಾ ಮಾಡಿ ಕೊಡು ನನಗೆ, ಕಾಲುಗಳ ಅಲಂಕರಿಸು
ಒಮ್ಮೆ ನನ್ನ ದಾದಾನನ್ನು ನೋಡಿಬಿಡುತ್ತೇನೆ, ನನ್ನ ಅಜ್ಜನನ್ನು ನೋಡಿ ಬಿಡುತ್ತೇನೆ
ನನ್ನ ದಾದಿ ನನ್ನನ್ನು ಬೀಳ್ಕೊಡುವವರಿದ್ದಾರೆ, ನನ್ನ ಅಜ್ಜಿ ನನ್ನನ್ನು ಬೀಳ್ಕೊಡುವವರಿದ್ದಾರೆ
ಓ ಮುದ್ದು ಹಕ್ಕಿಯೇ, ನಾನು ಇಲ್ಲಿಂದ ದೂರದೂರಿಗೆ ಹೋಗುತ್ತಿರುವೆ
ಇದು ದೂರದ ದಾರಿ, ಓ ಕುಂಜ್ ಹಕ್ಕಿಯೇ ನಾನು ದೂರದೂರಿಗೆ ಹೋಗುತ್ತಿರುವೆ
(2)
ನನ್ನ ತಂದೆಯನ್ನು ಮಾತನಾಡಿಸುವ, ನಾನು ಖಂಡಿವಾಗಿಯೂ ನನ್ನಪ್ಪನ ಮಾತನಾಡಿಸಬೇಕು
ಬಂಗಾಡಿ ಮಾಡಿ ಕೊಡು ನನಗೆ, ಕೈ ತುಂಬಾ ಬಳೆಯ ತೊಡಿಸು ನನಗೆ
ನನ್ನ ಮಾತಾ ನನ್ನನ್ನು ಬೀಳ್ಕೊಡುವಳು, ನನ್ನಮ್ಮ ನನ್ನ ಬೀಳ್ಕೊಡುವಳು
ಓ ಮುದ್ದು ಹಕ್ಕಿಯೇ, ನಾನು ಇಲ್ಲಿಂದ ದೂರದೂರಿಗೆ ಹೋಗುತ್ತಿರುವೆ
ಇದು ದೂರದ ದಾರಿ, ಓ ಕುಂಜ್ ಹಕ್ಕಿಯೇ ನಾನು ದೂರದೂರಿಗೆ ಹೋಗುತ್ತಿರುವೆ
(2)
ಹಾರಾಲೋ ಮಾಡಿಕೊಡು ನನಗೆ, ಅದರಿಂದ ನನ್ನ ಕುತ್ತಿಗೆ ಅಲಂಕರಿಸು
ನನ್ನ ಕಾಕಾನನ್ನು ಮಾತನಾಡಿಸಿ ಬರುವೆನು, ಚಿಕ್ಕಪ್ಪನ ಮಾತನಾಡಿಸಿ ಬರುವೆನು
ನನ್ನ ಕಾಕಿ ನನ್ನ ಬೀಳ್ಕೊಡುವಳು, ನನ್ನ ಚಿಕ್ಕಮ್ಮ ನನ್ನ ಬೀಳ್ಕೊಡುವಳು
ಓ ಮುದ್ದು ಹಕ್ಕಿಯೇ, ನಾನು ಇಲ್ಲಿಂದ ದೂರದೂರಿಗೆ ಹೋಗುತ್ತಿರುವೆ
ಇದು ದೂರದ ದಾರಿ, ಓ ಕುಂಜ್ ಹಕ್ಕಿಯೇ ನಾನು ದೂರದೂರಿಗೆ ಹೋಗುತ್ತಿರುವೆ
(2)
ನತನಿ ಮಾಡಿ ಕೊಡು ನನಗೆ, ಮೂಗಿಗೆ ನತ್ತು ಮಾಡಿ ಕೊಡು ನನಗೆ
ನಾನು ನನ್ನ ಮಾಮನನ್ನು ಮಾತನಾಡಿಸಿ ಬರುವೆನು, ನನ್ನ ಮಾವನ ಮಾತನಾಡಿಸಿ ಬರುವೆನು
ನನ್ನ ಮಾಮಿ ನನ್ನ ಬೀಳ್ಕೊಡುವಳು, ನನ್ನತ್ತೆ ನನ್ನ ಬೀಳ್ಕೊಡುವಳು
ಓ ಮುದ್ದು ಹಕ್ಕಿಯೇ, ನಾನು ಇಲ್ಲಿಂದ ದೂರದೂರಿಗೆ ಹೋಗುತ್ತಿರುವೆ
ಇದು ದೂರದ ದಾರಿ, ಓ ಕುಂಜ್ ಹಕ್ಕಿಯೇ ನಾನು ದೂರದೂರಿಗೆ ಹೋಗುತ್ತಿರುವೆ
(2)
ಹಾಡಿನ ಪ್ರಕಾರ : ಸಾಂಪ್ರದಾಯಿಕ ಜಾನಪದ ಹಾಡು
ಕ್ಲಸ್ಟರ್ : ಮದುವೆಯ ಹಾಡುಗಳು
ಹಾಡು : 9
ಹಾಡಿನ ಶೀರ್ಷಿಕೆ : ದೂರ್ ತೀ ವಿನಾ, ಪರ್ದೇಸ್ ತೀ ವಿನಾ
ಸಂಗೀತ : ದೇವಲ್ ಮೆಹ್ತಾ
ಗಾಯಕರು : ಮುಂದ್ರಾ ತಾಲ್ಲೂಕಿನ ಭದ್ರೇಸರ್ ಗ್ರಾಮದ ಜುಮಾ ವಘೇರ್
ಬಳಸಲಾಗಿರುವ ವಾದ್ಯಗಳು : ಡ್ರಮ್, ಹಾರ್ಮೋನಿಯಂ, ಬಾಂಜೊ
ರೆಕಾರ್ಡಿಂಗ್ ಮಾಡಿದ ವರ್ಷ : 2012, ಕೆಎಂವಿಎಸ್ ಸ್ಟುಡಿಯೋ
ಸಮುದಾಯ ಚಾಲಿತ ರೇಡಿಯೋ ಸೂರ್ವಾಣಿ ರೆಕಾರ್ಡ್ ಮಾಡಿದ 341 ಹಾಡುಗಳು ಕಚ್ ಮಹಿಳಾ ವಿಕಾಸ್ ಸಂಘಟನೆ (ಕೆಎಂವಿಎಸ್) ಮೂಲಕ ಪರಿಗೆ ಬಂದಿವೆ. ಇನ್ನಷ್ಟು ಇಂತಹ ಹಾಡುಗಳಿಗಾಗಿ ಈ ಪುಟಕ್ಕೆ ಭೇಟಿ ನೀಡಿ: ರಣ್ ಪ್ರದೇಶದ ಹಾಡುಗಳು: ಕಚ್ಛೀ ಜಾನಪದ ಗೀತೆಗಳ ಸಂಗ್ರಹ
ಪ್ರೀತಿ ಸೋನಿ, ಕೆಎಂವಿಎಸ್ ಕಾರ್ಯದರ್ಶಿ ಅರುಣಾ ಧೋಲಾಕಿಯಾ, ಕೆಎಂವಿಎಸ್ ಯೋಜನಾ ಸಂಯೋಜಕ ಅಮದ್ ಸಮೇಜಾ ಮತ್ತು ಭಾರತಿಬೆನ್ ಗೋರ್ ಇವರುಗಳಿಗೆ ಅಮೂಲ್ಯ ಸಹಾಯಕ್ಕಾಗಿ ವಿಶೇಷ ಧನ್ಯವಾದಗಳು.
ಅನುವಾದ: ಶಂಕರ. ಎನ್. ಕೆಂಚನೂರು