"ಏಥೆ ರೋಟಿ ಕಥ್ ಮಿಲ್ದಿ ಹೈ, ಚಿಟ್ಟಾ ಸಾರೆ ಆಮ್ ಮಿಲ್ದಾ ಹೈ [ಇಲ್ಲಿ, ತಿನ್ನಲು ಊಟ ಸಿಗದೇ ಇದ್ದರೂ, ಹೆರಾಯಿನ್ ಸುಲಭವಾಗಿ ಸಿಗುತ್ತದೆ]."
ಹರ್ವನ್ಸ್ ಕೌರ್ ಅವರಿಗೆ ಇರುವ ಒಬ್ಬನೇ ಒಬ್ಬ ಮಗ ಕೂಡ ಮಾದಕ ವ್ಯಸನಿ. "ನಾವು ಅವನನ್ನು ತಡೆಯಲು ಪ್ರಯತ್ನಿಸುತ್ತಿದ್ದರೆ, ಅವನು ಇನ್ನೂ ತನ್ನದೇ ದಾರಿಯಲ್ಲಿ ಹೋಗುತ್ತಿದ್ದಾನೆ, ಇರುವ ಎಲ್ಲಾ ಹಣ ತೆಗೆದುಕೊಂಡು ಡ್ರಗ್ಸ್‌ಗೆ ಖರ್ಚು ಮಾಡುತ್ತಾನೆ," ಎಂದು 25 ವರ್ಷದ ಯುವಕನ ತಾಯಿ ನೋವಿನಿಂದ ಹೇಳುತ್ತಾರೆ. ಅವರ ಮಗ ಆಗಷ್ಟೇ ಮಗುವಿನ ತಂದೆಯಾಗಿದ್ದ. ಚಿಟ್ಟಾ (ಹೆರಾಯಿನ್), ಚುಚ್ಚುಮದ್ದು ಮತ್ತು ಸೈಕೋಟ್ರೋಪಿಕ್ ಮಾದಕ ಗುಳಿಗೆಗಳು ತಮ್ಮ ಹಳ್ಳಿಯಲ್ಲಿ ಸುಲಭವಾಗಿ ಸಿಗುತ್ತವೆ ಎಂದು ಅವರು ಹೇಳುತ್ತಾರೆ.
“ಸರ್ಕಾರ ಮನಸ್ಸು ಮಾಡಿದರೆ ಮಾದಕ ವ್ಯಸನವನ್ನು ತಡೆಯಬಹುದು. ಇಲ್ಲವಾದರೆ ನಮ್ಮ ಮಕ್ಕಳು ಸಾಯುತ್ತಾರೆ." ಹರ್ವನ್ಸ್ ಕೌರ್ ಅವರು ರಾವೋಕೆ ಕಲನ್ ಗ್ರಾಮದ ಆಲೂಗಡ್ಡೆ ಶೇಖರಣಾ ಘಟಕದಲ್ಲಿ ದಿನಗೂಲಿ ಕೆಲಸ ಮಾಡುತ್ತಾರೆ. ಪ್ಯಾಕ್ ಮಾಡುವ ಕೆಲಸದಲ್ಲಿ ಪ್ರತಿ ಚೀಲಕ್ಕೆ ಅವರಿಗೆ 15 ರುಪಾಯಿ ಸಿಗುತ್ತದೆ. ಒಂದು ದಿನಕ್ಕೆ ಸುಮಾರು 12 ಪ್ಯಾಕ್ ಮಾಡುವ ಇವರಿಗೆ 180 ರುಪಾಯಿ ಸಂಪಾದನೆಯಾಗುತ್ತದೆ. 45 ವರ್ಷ ಪ್ರಾಯದ ಇವರ ಪತಿ, ಸುಖದೇವ್ ಸಿಂಗ್, ತಮ್ಮ ಗ್ರಾಮ ನಂಗಲ್‌ನಿಂದ ನಾಲ್ಕು ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ನಿಹಾಲ್ ಸಿಂಗ್ ವಾಲಾದ ಗೋದಾಮೊಂದರಲ್ಲಿ ದಿನಗೂಲಿ ಕೆಲಸ ಮಾಡುತ್ತಾರೆ. ಗೋಧಿ ಅಥವಾ ಅಕ್ಕಿ ಚೀಲಗಳನ್ನು ಪ್ಯಾಕ್ ಮಾಡುವ ಇವರು, ಕೆಲಸ ಇದ್ದಾಗ ದಿನಕ್ಕೆ 300 ರೂಪಾಯಿ ಸಂಪಾದನೆ ಮಾಡುತ್ತಾರೆ. ಇವರ ಸಂಪಾದನೆಯಲ್ಲಿಯೇ ಕುಟುಂಬ ನಡೆಯುತ್ತದೆ.
ವಿಷಯಕ್ಕೆ ಬರುತ್ತಾ, ಪಂಜಾಬ್‌ನ ಮೋಗಾ ಜಿಲ್ಲೆಯ ಈ ಹಳ್ಳಿಯಲ್ಲಿರುವ ಹರ್ವನ್ಸ್ ಕೌರ್ ಅವರ ನೆರೆಮನೆಯ ಕಿರಣ್ ಕೌರ್, "ನಮ್ಮ ಹಳ್ಳಿಯಲ್ಲಿ ಡ್ರಗ್ಸ್ ನಿರ್ಮೂಲನೆ ಮಾಡುವ ಭರವಸೆ ಯಾರು ಕೊಡುತ್ತಾರೋ, ಅವರಿಗೆ ನಮ್ಮ ವೋಟು," ಎಂದು ಹೇಳುತ್ತಾರೆ.
ಕಿರಣ್ ಅವರ ಈ ಸ್ಪಷ್ಟ ಮಾತುಗಳಲ್ಲಿ ಅವರ ಪತಿ ಕೂಡ ಮಾದಕ ವ್ಯಸನಿಯಾಗಿರುವ ನೋವು ಕಂಡುಬರುತ್ತದೆ. ಮೂರು ವರ್ಷದ ಮಗಳು ಮತ್ತು ಆರು ತಿಂಗಳ ಮಗನ ತಾಯಿಯಾಗಿರುವ ಇವರು, “ನನ್ನ ಪತಿ ಸಾಮಾನ್ಯ ಕಾರ್ಮಿಕನಾಗಿ ಕೆಲಸ ಮಾಡುತ್ತಾರೆ. ಅವರು ಒಬ್ಬ ಮಾದಕ ವ್ಯಸನಿ. ಕಳೆದ ಮೂರು ವರ್ಷಗಳಿಂದ ಅವರು ಹಾಗೆಯೇ ಇದ್ದಾರೆ. ಅವರು ತಾವು ಸಂಪಾದನೆ ಮಾಡಿದ ಎಲ್ಲವನ್ನೂ ಡ್ರಗ್ಸ್‌ಗೆ ಖರ್ಚು ಮಾಡುತ್ತಾರೆ," ಎಂದು ಹೇಳುತ್ತಾರೆ.
ಎಂಟು ಮಂದಿ ವಾಸಿಸುವ ತಮ್ಮ ಮನೆಯ ಗೋಡೆಗಳ ಮೇಲಿನ ದೊಡ್ಡ ದೊಡ್ಡ ಬಿರುಕುಗಳನ್ನು ನೋಡುತ್ತಾ, "ಮನೆ ರಿಪೇರಿ ಮಾಡಲು ಮಾಡಲು ಹಣ ಎಲ್ಲಿಂದ ಬರಬೇಕು?" ಎಂದು ಹೇಳುತ್ತಾರೆ.









