ಹಂಚಿಕೊಳ್ಳಲು ಅನೇಕ ವಿಷಯಗಳಿವೆ ಆದರೆ ನಾನು ಹಂಚಿಕೊಳ್ಳುವುದಿಲ್ಲ. ನನಗೀಗ 89 ವರ್ಷ. ನನ್ನೊಳಗೆ ಅನೇಕ ಕಥೆಗಳಿವೆ. ಆದರೆ ನಾನು ಅವುಗಳನ್ನು ಯಾರಿಗೂ ಹೇಳುವುದಿಲ್ಲ. ಅವುಗಳನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. ಅನೇಕ ವರದಿಗಾರರು ಮತ್ತು ಪತ್ರಕರ್ತರು ಬಂದು ನನ್ನ ಕಥೆಯನ್ನು ಬರೆಯುತ್ತಾರೆ. ಅವರು ಪುಸ್ತಕಗಳನ್ನು ಪ್ರಕಟಿಸುತ್ತಾರೆ ಮತ್ತು ಅವರು ನನ್ನನ್ನು ಪ್ರಸಿದ್ಧಗೊಳಿಸಿರುವುದಾಗಿ ಜಗತ್ತಿಗೆ ಹೇಳುತ್ತಾರೆ. ಅನೇಕ ಸಂಗೀತಗಾರರು ಬಂದು ನನ್ನ ಸಂಗೀತವನ್ನು ಕದಿಯಲು ಪ್ರಯತ್ನಿಸುತ್ತಾರೆ. ಆದ್ದರಿಂದ, ನಾನು ಎಲ್ಲರನ್ನೂ ಭೇಟಿಯಾಗುವುದಿಲ್ಲ. ನನ್ನನ್ನು ಭೇಟಿಯಾದ ನೀವು ಅದೃಷ್ಟವಂತರು.
ನನಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸಿಕ್ಕಿತು. ಸಮಾರಂಭ ದೆಹಲಿಯಲ್ಲಿ ನಡೆಯಿತು. ಪ್ರಶಸ್ತಿಯನ್ನು ಸ್ವೀಕರಿಸಿದಾಗ, ನನ್ನ ಕಣ್ಣುಗಳು ತುಂಬಿದವು. ನನ್ನ ತಂದೆ ನನ್ನನ್ನು ಶಾಲೆಗೆ ಕಳುಹಿಸಿರಲಿಲ್ಲ. ಆ ಶಿಕ್ಷಣದಿಂದ ನನಗೆ ಕೆಲಸ ಸಿಗಬಹುದು ಅಥವಾ ಸಿಗದಿರಬಹುದು ಎನ್ನುವುದು ಅವರ ಯೋಚನೆಯಾಗಿತ್ತು. ಆದರೆ ಅವರು 'ಈ ವಾದ್ಯವು ನಮ್ಮ ದೇವತೆ' ಎಂದು ಹೇಳಿದರು. ಇದು ನಿಜವಾಗಿಯೂ ಒಂದು ದೇವತೆ. ಅದು ನನಗೆ ಎಲ್ಲವನ್ನೂ ನೀಡಿತು. ಇದು ನನಗೆ ಮಾನವೀಯತೆಯನ್ನು ಕಲಿಸಿತು. ಪ್ರಪಂಚದಾದ್ಯಂತ ಜನರಿಗೆ ನನ್ನ ಹೆಸರು ತಿಳಿದಿದೆ. ನನ್ನ ತಾಡ್ಪಾವನ್ನು ಅಂಚೆ ಲಕೋಟೆಯ ಮೇಲೆ [ಅಂಚೆ ಚೀಟಿ] ಮುದ್ರಿಸಲಾಗಿದೆ. ನಿಮ್ಮ ಫೋನಿನಲ್ಲಿ ನನ್ನ ಹೆಸರಿನಲ್ಲಿ ಬಟನ್ ಒತ್ತಿದರೆ, ನೀವು ನನ್ನ ವೀಡಿಯೊವನ್ನು ನೋಡುತ್ತೀರಿ... ಇನ್ನೇನು ಬೇಕು? ಬಾವಿಯಲ್ಲಿರುವ ಕಪ್ಪೆಗೆ ಅದರ ಹೊರಗೆ ಏನಿದೆ ಎಂದು ತಿಳಿದಿರುವುದಿಲ್ಲ. ಆದರೆ ನಾನು ಆ ಬಾವಿಯಿಂದ ಹೊರಬಂದೆ... ಜಗತ್ತನ್ನು ನೋಡಿದೆ.
ಇಂದಿನ ಯುವಜನರು ತಾಡ್ಪಾ ರಾಗಕ್ಕೆ ಕುಣಿಯುವುದಿಲ್ಲ. ಅವರಿಗೆ ಡಿಜೆ ಬೇಕು. ಅದನ್ನು ಅವರು ಮಾಡಲಿ. ಆದರೆ ಒಂದು ವಿಷಯ ತಿಳಿಸಿ ನನಗೆ. ನಾವು ಬೆಳೆಯನ್ನು ಹೊಲದಿಂದ ತರುವಾಗ, ಗಾಂವ್ ದೇವಿಗೆ ನೈವೇದ್ಯ ಕೊಡಲು ಹೋಗುವಾಗ, ಅವಳ ಹೆಸರು ಕೂಗಿ ಪ್ರಾರ್ಥಿಸುವಾಗ ಡಿಜೆ ನುಡಿಸಲು ಸಾಧ್ಯವೆ? ಆ ಕ್ಷಣಗಳಲ್ಲಿ ತಾಡ್ಪಾ ಮಾತ್ರವೇ ಬೇಕಾಗುವುದು. ಬೇರೆ ಯಾವುದಕ್ಕೂ ಅಲ್ಲಿ ಬೆಲೆಯಿಲ್ಲ.
ಈ ದಾಖಲೀಕರಣದಲ್ಲಿ ಸಹಾಯ ಮಾಡಿದ್ದಕ್ಕಾಗಿ ಅರೋಹಣ್ ಸಂಸ್ಥೆಯ ಮಾಧುರಿ ಮುಕಾನೆ ಅವರಿಗೆ ಪರಿ ಧನ್ಯವಾದಗಳನ್ನು ಅರ್ಪಿಸುತ್ತದೆ.
ಸಂದರ್ಶನ, ಪ್ರತಿಲೇಖನ ಮತ್ತು ಇಂಗ್ಲಿಷ್ ಅನುವಾದ: ಮೇಧಾ ಕಾಳೆ
ಛಾಯಾಚಿತ್ರಗಳು ಮತ್ತು ವೀಡಿಯೊ: ಸಿದ್ಧಿತಾ ಸೋನಾವನೆ
ಈ ಲೇಖನವು ಪರಿಯ ಅಳಿವಿನಂಚಿನಲ್ಲಿರುವ ಭಾಷೆಗಳ ದಾಖಲಾತಿ ಯೋಜನೆಯ ಭಾಗವಾಗಿದೆ, ಇದು ದೇಶದ ದುರ್ಬಲ ಮತ್ತು ಅಳಿವಿನಂಚಿನಲ್ಲಿರುವ ಭಾಷೆಗಳನ್ನು ದಾಖಲಿಸುವ ಗುರಿಯನ್ನು ಹೊಂದಿದೆ.
ವಾರ್ಲಿ ಭಾರತದ ಗುಜರಾತ್, ದಮನ್ ಮತ್ತು ದಿಯು, ದಾದ್ರಾ ಮತ್ತು ನಗರ್ ಹವೇಲಿ, ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾದಲ್ಲಿ ವಾಸಿಸುವ ಭಾರತದ ವಾರ್ಲಿ ಅಥವಾ ವರ್ಲಿ ಆದಿವಾಸಿಗಳು ಮಾತನಾಡುವ ಇಂಡೋ-ಆರ್ಯನ್ ಭಾಷೆಯಾಗಿದೆ. ಯುನೆಸ್ಕೋದ ಅಟ್ಲಾಸ್ ಆಫ್ ಲ್ಯಾಂಗ್ವೇಜಸ್ ವರ್ಲಿಯನ್ನು ಭಾರತದ ದುರ್ಬಲ ಭಾಷೆಗಳಲ್ಲಿ ಒಂದಾಗಿದೆ ಎಂದು ಪಟ್ಟಿ ಮಾಡಿದೆ.
ನಾವು ವರ್ಲಿ ಭಾಷೆಯನ್ನು ಮಹಾರಾಷ್ಟ್ರದಲ್ಲಿ ಮಾತನಾಡುವ ಭಾಷೆಯನ್ನಾಗಿ ದಾಖಲಿಸುವ ಗುರಿಯನ್ನು ಹೊಂದಿದ್ದೇವೆ.
ಅನುವಾದ: ಶಂಕರ. ಎನ್. ಕೆಂಚನೂರು