ಮೀರಟ್‌ನ ಕೇರಂ ಬೋರ್ಡ್ ಕಾರ್ಖಾನಾದಲ್ಲಿ (ಕಾರ್ಖಾನೆ) ಐದು ಮಂದಿ ಕಾರಿಗಾರರು 40 ಬೋರ್ಡುಗಳ ಬ್ಯಾಚ್ ಒಂದನ್ನು ಸಿದ್ಧಪಡಿಸಲು ದಿನಕ್ಕೆ ಎಂಟು ಗಂಟೆಗಳಂತೆ ಸತತ ಐದು ದಿನಗಳವರೆಗೆ ಕೆಲಸ ಮಾಡುತ್ತಾರೆ. ಈ ವರ್ಕ್‌ಶಾಪಿನ ಪ್ರತಿಯೊಬ್ಬ ಕುಶಲಕರ್ಮಿಗೂ ಸ್ಟ್ರೈಕರ್ ಮತ್ತು ಕಾಯಿನ್‌ಗಳನ್ನು ಕೇರಂ ಬೋರ್ಡಿನ ಚೌಕಟ್ಟಿನ ನಡುವೆ ವೇಗವಾಗಿ ಚಲಿಸುವಂತೆ ಮಾಡಲು ಏನು ಮಾಡಬೇಕು ಎನ್ನುವುದು ತಿಳಿದಿದೆ. ಇದು ಗರಿಷ್ಠ ನಾಲ್ಕು ಆಟಗಾರರು ಆಡಬಹುದಾದ ಆಟವಾಗಿದೆ - ಆದರೆ ಇಲ್ಲಿ ಒಂದೆಡೆ ಐದು ಕುಶಲಕರ್ಮಿಗಳು ಕೆಲಸ ಮಾಡುತ್ತಿದ್ದಾರೆ. ಅವರು ಕೇರಂ ಕ್ರೀಡೆಯನ್ನು ಸಾಧ್ಯವಾಗಿಸಲು ಸಹಾಯ ಮಾಡುತ್ತಾರೆ, ಆದರೆ ಅದನ್ನು ಎಂದಿಗೂ ಸ್ವತಃ ಆಡಿದವರಲ್ಲ.
"ನಾನು 1981ರಿಂದ ಕೇರಂ ಬೋರ್ಡುಗಳನ್ನು ತಯಾರಿಸುತ್ತಿದ್ದೇನೆ, ಆದರೆ ಎಂದಿಗೂ ಬೋರ್ಡ್ ಖರೀದಿಸಿದವನಲ್ಲ ಅಥವಾ ಕೇರಂ ಆಡಿದವನಲ್ಲ. ಅದಕ್ಕೆಲ್ಲ ಸಮಯ ಎಲ್ಲಿದೆ?" ಎಂದು 62 ವರ್ಷದ ಮದನ್ ಪಾಲ್ ಕೇಳುತ್ತಾರೆ. ನಾವು ಹರಟೆ ಹೊಡೆಯುತ್ತಿರುವಾಗಲೂ, ಅವರು ಮತ್ತು ಅವರ ಜೊತೆಗಾರರು ನಿಖರವಾಗಿ 2,400 ದಂಡಗಳನ್ನು ಅಥವಾ ಕತ್ತರಿಸಿದ ಬಬೂಲ್ ಮರದ ತುಂಡುಗಳನ್ನು ಜೋಡಿಸುತ್ತಿದ್ದರು. ಇವು ಪ್ರತಿಯೊಂದೂ 32 ಅಥವಾ 36 ಇಂಚುಗಳಷ್ಟು ಉದ್ದವಿರುತ್ತವೆ ಮತ್ತು ಕಾರ್ಮಿಕರು ಅವುಗಳನ್ನು ಕಾರ್ಖಾನಾದ ಹೊರಗಿನ ಗೋಡೆಯ ಉದ್ದಕ್ಕೂ ಗಲ್ಲಿಯಲ್ಲಿ (ಓಣಿ) ಜೋಡಿಸುತ್ತಾರೆ.
"ಬೆಳಗ್ಗೆ 8:45ಕ್ಕೆ ಇಲ್ಲಿಗೆ ತಲುಪುತ್ತೇನೆ. ಒಂಬತ್ತು ಗಂಟೆಗೆ ಕೆಲಸ ಶುರು ಮಾಡುತ್ತೇವೆ. ಮನೆಗೆ ತಲುಪುವ ಹೊತ್ತಿಗೆ ಸಂಜೆ 7-7:30 ಆಗಿರುತ್ತದೆ" ಎಂದು ಮದನ್ ಪಾಲ್ ಹೇಳುತ್ತಾರೆ. ಅವರ ಕೇರಂ ಬೋರ್ಡ್ ಕಾರ್ಖಾನಾ ಇರುವುದು ಉತ್ತರ ಪ್ರದೇಶ ರಾಜ್ಯದ ಮೀರತ್ ನಗರದ ಸೂರಜ್ ಕುಂಡ್ ಸ್ಪೋರ್ಟ್ಸ್ ಕಾಲೋನಿಯಲ್ಲಿ.
ಮದನ್ ಪಾಲ್ ಅವರು ಮೀರತ್ ಜಿಲ್ಲೆಯ ಪುಟ್ಟಾ ಗ್ರಾಮದಲ್ಲಿರುವ ತನ್ನ ಮನೆಯಿಂದ ವಾರದಲ್ಲಿ ಆರು ದಿನ ಬೆಳಗ್ಗೆ ಏಳು ಗಂಟೆಗೆ ತನ್ನ ಮನೆಯಿಂದ ಸೈಕಲ್ಲಿನಲ್ಲಿ ಹೊರಟು 16 ಕಿಲೋಮೀಟರ್ ಪ್ರಯಾಣಿಸುತ್ತಾರೆ.
ಛೋಟಾ ಹಾಥಿಯಲ್ಲಿರುವ (ಅಕ್ಷರಶಃ ಅರ್ಥ ಸಣ್ಣ ಆನೆ - ಮಿನಿ ಟೆಂಪೊ ಟ್ರಕ್) ಇಬ್ಬರು ಸಾಗಣೆದಾರರು ಮೀರತ್ ನಗರದ ತಾರಾಪುರಿ ಮತ್ತು ಇಸ್ಲಾಮಾಬಾದ್ ಪ್ರದೇಶಗಳಲ್ಲಿನ ಮರಗೆಲಸದ ಗಿರಣಿಗಳಿಂದ ಕತ್ತರಿಸಿದ ಮರದ ತುಂಡುಗಳನ್ನು ಇಲ್ಲಿಗೆ ತಲುಪಿಸಿದ್ದಾರೆ.
"ಈ ತುಂಡುಗಳನ್ನು ಕೇರಂ ಬೋರ್ಡಿನ ಹೊರ ಚೌಕಟ್ಟನ್ನು ತಯಾರಿಸಲು ಬಳಸಲಾಗುತ್ತದೆ ಆದರೆ ಮೊದಲು ಅವುಗಳನ್ನು ನಾಲ್ಕರಿಂದ ಆರು ತಿಂಗಳವರೆಗೆ ಬಯಲಿನಲ್ಲಿ ಒಣಗಲು ಇಡಬೇಕು. ಮರವನ್ನು ಗಾಳಿ ಮತ್ತು ಬಿಸಿಲಿನಲ್ಲಿ ಒಣಗಿಸುವುದರಿಂದ ಅದು ತೇವಾಂಶ ಮುಕ್ತವಾಗುತ್ತದೆ, ಅವುಗಳನ್ನು ನೇರವಾಗಿರಿಸುತ್ತದೆ ಮತ್ತು ಶಿಲೀಂಧ್ರಗಳ ಬೆಳವಣಿಗೆಯನ್ನು ತಡೆಯುತ್ತದೆ" ಎಂದು ಮದನ್ ವಿವರಿಸುತ್ತಾರೆ.



























