ವ್ಯಕ್ತಿಯೊಬ್ಬ ತನ್ನ ಏಳು ವರ್ಷದ ಮಗಳೊಂದಿಗೆ ರಾಜ್ಯದಾದ್ಯಂತ ಸಾವಿರಾರು ವಾರ್ಕರಿಗಳು ಭಗವಾನ್ ವಿಠ್ಠಲನ ದೇವಾಲಯಕ್ಕೆ ಕಾಲ್ನಡಿಗೆಯಲ್ಲಿ ಸಾಗುವ ವಾರ್ಷಿಕ ತೀರ್ಥಯಾತ್ರೆಯಾದ ಆಷಾಢ ವಾರಿ ಯಾತ್ರೆಗೆ ಹೋಗುತ್ತಿದ್ದ. ದಾರಿಯಲ್ಲಿ ಅವರು ಮೈಸ್‌ಗಾಂವ್ ಎನ್ನುವಲ್ಲಿ ತಂಗಲು ತೀರ್ಮಾನಿಸಿದರು. ಸಂಜೆಯಾಗುತ್ತಿದ್ದಂತೆ ಗಾಳಿಯಲ್ಲಿ ಕೀರ್ತನೆಯ ಅಲೆ ಹಾಯ್ದು ಬರತೊಡಗಿತು. ಪುಟ್ಟ ಹುಡುಗಿಗೆ ಖಾಂಜಿರಿ (ಡಫ್ಲಿ) ದನಿ ಕೇಳಿ ತನಗೂ ಅದನ್ನು ಕೇಳಬೇಕೆನ್ನಿಸಿತು. ಅವಳು ತನ್ನ ಅಪ್ಪನನ್ನು ಈ ಕುರಿತು ಪೀಡಿಸತೊಡಗಿದಳು.
ಆದರೆ ಅವಳ ತಂದೆ ಹಿಂಜರಿಯುತ್ತಿದ್ದರು. “ಇಲ್ಲಿನ ಜನರು ನಮ್ಮಂತಹ ಮಹರ್ ಮತ್ತು ಮಾಂಗ್ ಜನರನ್ನು ಮುಟ್ಟುವುದಿಲ್ಲ” ಎಂದು ಮಗಳಿಗೆ ಅರ್ಥ ಮಾಡಿಸಲು ಪ್ರಯತ್ನಿಸಿದರು. “ಅವರು ನಮ್ಮನ್ನು ನಿಷ್ಪ್ರಯೋಜಕರಂತೆ ಕಾಣುತ್ತಾರೆ. ನಮ್ಮನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ.” ಆದರೆ ಬಾಲಕಿ ತನ್ನ ಹಟ ಬಿಡಲಿಲ್ಲ. ಕೊನೆಗೆ ತಂದೆ ದೂರ ನಿಂತು ವೀಕ್ಷಿಸುವ ಒಪ್ಪಂದದೊಂದಿಗೆ ಮಗಳನ್ನು ಅಲ್ಲಿಗೆ ಕರೆದೊಯ್ಯುತ್ತಾರೆ. ಸಂಗೀತದ ಅಲೆಯನ್ನು ಅನುಸರಿಸಿ ಅಪ್ಪ ಮಗಳಿಬ್ಬರೂ ಚಪ್ಪರ ಇರುವ ಕಡೆ ಸಾಗುತ್ತಾರೆ. ಅಲ್ಲಿ ಮಹಾರಾಜ್ ಖಂಜರಿ ನುಡಿಸುವುದನ್ನು ಅಪ್ಪ ಮಗಳಿಬ್ಬರೂ ತನ್ಮಯರಾಗಿ ನೋಡುತ್ತಿರುತ್ತಾರೆ. ಅದನ್ನು ನೋಡುತ್ತಾ ಬಾಲಕಿಗೆ ವೇದಿಕೆಯ ಮೇಲೆ ಹೋಗುವ ಆಸೆಯನ್ನು ತಡೆಯಲು ಸಾಧ್ಯವಾಗುವುದಿಲ್ಲ. ಕೊನೆಗೆ ಅವಳು ವೇದಿಕೆ ಮೇಲೆ ಹೋಗಿಯೇ ಬಿಡುತ್ತಾಳೆ.
"ನಾನು ಒಂದು ಭರೂದ್ (ಸಾಮಾಜಿಕ ಜ್ಞಾನೋದಯಕ್ಕಾಗಿ ಸಂಯೋಜಿಸಿದ ಹಾಡುಗಳಲ್ಲಿ ವಿಡಂಬನೆ ಮತ್ತು ಹಾಸ್ಯವನ್ನು ಬಳಸುವ ಪ್ರಾಚೀನ ಕಾವ್ಯದ ಒಂದು ರೂಪ) ಹಾಡಲು ಬಯಸುತ್ತೇನೆ" ಎಂದು ಅವಳು ವೇದಿಕೆಯಲ್ಲಿದ್ದ ಸಂತ ಪ್ರದರ್ಶಕರ ಬಳಿ ಹೇಳುತ್ತಾಳೆ. ಪ್ರೇಕ್ಷಕರು ದಿಗ್ಭ್ರಮೆಗೊಂಡಿದ್ದಾರೆ. ಆದರೆ ಮಹಾರಾಜರು ಅವಳಿಗೆ ಹಾಡಲು ಅವಕಾಶ ನೀಡುತ್ತಾರೆ. ಮತ್ತು ಮುಂದಿನ ಕೆಲವು ನಿಮಿಷಗಳವರೆಗೆ, ಯುವತಿಯು ಲಯಕ್ಕಾಗಿ ಲೋಹದ ಕೊಡವೊಂದನ್ನು ಬಾರಿಸುತ್ತಾ ವೇದಿಕೆಯನ್ನು ತನ್ನದಾಗಿಸಿಕೊಳ್ಳುತ್ತಾಳೆ, ಅಂದು ಅವಳು ಅಲ್ಲಿ ಅದೇ ಮಹಾರಾಜರು ಬರೆದು ಸಂಯೋಜಿಸಿದ ಹಾಡನ್ನು ಹಾಡುತ್ತಾಳೆ.
माझा रहाट गं साजनी
गावू चौघी जनी
माझ्या रहाटाचा कणा
मला चौघी जनी सुना
ಬಾವಿಯ ಮೇಲಿದೆ ಮರದ ರಾಟೆ
ನಾವು ನಾಲ್ವರು ಜೊತೆಗೂಡಿ ಹಾಡೋಣ ಚಿನ್ನಾ
ಮರದ ರಾಟೆ ಮತ್ತು ಅದರಲ್ಲಿನ ಕಡ್ಡಿಗಳಂತೆ
ನನಗೂ ನಾಲ್ಕು ಸೊಸೆಯಂದಿರು
ಈ ಬಾಲ ಗಾಯಕಿಯ ಹಾಡಿನಿಂದ ಪ್ರಭಾವಿತರಾದ ಸಂತ ಆಕೆಗೆ ತನ್ನ ಖಂಜಿರಿಯನ್ನು ಉಡುಗೊರೆಯಾಗಿ ನೀಡುತ್ತಾರೆ. “ನಿನಗೆ ಸದಾ ನನ್ನ ಆಶೀರ್ವಾದವಿರುತ್ತದೆ. ನೀನು ಈ ಜಗತ್ತಿಗೆ ಜ್ಞಾನೋದಯ ಮಾಡಿಸುವೆ” ಎಂದು ಹರಸುತ್ತಾರೆ.













