ನಾನು ನನ್ನನ್ನು ಓರ್ವ ಚಿತ್ರ ಕಲಾವಿದೆಯಾಗಿ ನೋಡುವುದಿಲ್ಲ. ನನ್ನ ಬಳಿ ಚಿತ್ರ ಕಲಾವಿದರಿಗೆ ಇರಬೇಕಾದ ಗುಣಗಳಿಲ್ಲ. ಆದರೆ ನನ್ನೊಳಗೆ ಹೇ ಳಲೇಬೇಕಾದ ಕತೆಗಳಿವೆ. ನಾನು ಬ್ರಷ್ ಬಳಸಿ ಆ ಕತೆಗಳನ್ನು ಹೇಳಲು ಪ್ರಯತ್ನಿಸುತ್ತೇನೆ. ನನ್ನ ಚಿತ್ರಗಳು ಪರಿಪೂರ್ಣ ಎಂದು ನಾನು ಹೇಳುವುದಿಲ್ಲ. ನಾನು ಈಗ ಕಳೆದ ಎರಡು ಮೂರು ವರ್ಷಗಳಿಂದ ಇತರ ಕಲಾವಿದರ ಕೆಲಸಗಳನ್ನು ಗಮನಿಸಲು ಆರಂಭಿಸಿದ್ದೇನೆ. ಅವುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಅದರ ಹೊರತು ನನಗೆ ಕಲೆಯ ಕುರಿತು ಅಷ್ಟೇನು ತಿಳಿದಿಲ್ಲ. ನಾನು ಕತೆ ಹೇಳುವ ಸಲುವಾಗಿ ಚಿತ್ರ ಬಿಡಿಸಲಾರಂಭಿಸಿದೆ. ಕಥೆಯೊಂದನ್ನು ಚಿತ್ರದ ಮೂಲಕ ವ್ಯಕ್ತಪಡಿಸಲು ಸಾಧ್ಯವಾದಾಗ ನನಗೆ ಖುಷಿಯಾಗುತ್ತದೆ. ಚಿತ್ರ ಬಿಡಿಸುವಾಗ ನಾನು ಒಂದು ಕತೆ ಹೇಳುತ್ತಿರುವೆ ಎನ್ನುವ ಭಾವನೆಯಲ್ಲೇ ಬಿಡಿಸುತ್ತೇನೆ."

ಲಾಬನಿಯವರು ಓರ್ವ ಕಲಾವಿದೆ. ಅವರು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ದುಬುಲಿಯಾ ಎನ್ನುವ ಸಣ್ಣ ಹಳ್ಳಿಯವರು. ಈ ಊರು ಹಿಂದೆ ಸೈನಿಕರ ನೆಲೆಯಾಗಿತ್ತು. ಎರಡನೇ ವಿಶ್ವಯುದ್ಧದ ಸಮಯದಲ್ಲಿ ಇಲ್ಲಿ ಏರ್ ಫೀಲ್ಡ್ ಕೂಡಾ ಇತ್ತು. ಬ್ರಿಟಿಷರು ಇಲ್ಲಿ ಕ್ಯಾಂಪ್ ನಿರ್ಮಿಸಿದ ಸಮಯದಲ್ಲಿ ಬಹುತೇಕ ಮುಸ್ಲಿಮ್ ಜನರು ತಮ್ಮ ನೆಲೆ ಕಳೆದುಕೊಂಡರು. ಮುಂದೆ ದೇಶ ಇಬ್ಭಾಗವಾದ ಸಂದರ್ಭದಲ್ಲಿ ಕೆಲವರು ದೇಶದ ಇನ್ನೊಂದು ಗಡಿಗೆ ಹೋದರು. “ಆದರೆ ನಾವು ಹೋಗಲಿಲ್ಲ” ಎನ್ನುತ್ತಾರೆ ಲಾಬನಿ “ನಮ್ಮ ಹಿರಿಯರು ಇಲ್ಲಿಂದ ಹೋಗಲು ಬಯಸಿರಲಿಲ್ಲ. ಅವರನ್ನು ಇಲ್ಲಿಯೇ ಮಣ್ಣು ಮಾಡಲಾಗಿದೆ. ನಾವು ಇಲ್ಲಿಯೇ ಬದುಕಿ ಸಾಯಲು ಬಯಸುತ್ತೇವೆ.” ಈ ನೆಲದೊಂದಿಗಿನ ಸಂಬಂಧ ಮತ್ತು ಅದರ ಹೆಸರಿನಲ್ಲಿ ನಡೆಯುತ್ತಿರುವ ಈ ಎಲ್ಲಾ ಘಟನೆಗಳು ಈ ಕಲಾವಿದೆಯ ಸಂವೇದನೆಯನ್ನು ಬಾಲ್ಯದಿಂದಲೇ ನಿರೂಪಿಸಿವೆ.

ಅವರಿಗೆ ಚಿತ್ರ ಬಿಡಿಸಲು ಬೆಂಬಲ ದೊರಕಿದ್ದು ಅವರ ತಂದೆಯಿಂದ. ಅವರು ತನ್ನ ಶಾಲೆಗೆ ಹೋಗುತ್ತಿದ್ದ ಮಗಳನ್ನು ಕೆಲವು ವರ್ಷಗಳ ಕಾಲ ಟ್ಯೂಷನ್ ಕ್ಲಾಸಿಗೆ ಕರೆದೊಯ್ಯುತ್ತಿದ್ದರು. ಲಾಬನಿಯವರ ತಂದೆ ತನ್ನ ಹತ್ತು ಮಂದಿ ಒಡಹುಟ್ಟಿದವರ ನಡುವೆ ಬೆಳೆದವರು. ಅವರಲ್ಲಿ ಶಾಲೆಗೆ ಹೋದವರೆಂದರೆ ಅವರೊಬ್ಬರೇ. ಮತ್ತು ಅವರು ಶಾಲೆ ಮೆಟ್ಟಿಲು ಹತ್ತಿದ ಕುಟುಂಬದ ಮೊದಲ ತಲೆಮಾರು. ಮುಂದೆ ವಕೀಲರಾದ ಅವರು ಸಮಾಜದ ಅಂಚಿನಲ್ಲಿದ್ದ ರೈತರು ಮತ್ತು ಕಾರ್ಮಿಕರೊಂದಿಗೆ ದುಡಿಯುತ್ತಾ, ಅವರಿಗಾಗಿ ಸಹಕಾರಿ ಸಂಘಗಳನ್ನು ರಚಿಸಿದ್ದರು. ಆದರೆ ಅಷ್ಟೇನೂ ಸಂಪಾದನೆ ಇರಲಿಲ್ಲ. “ಸಿಕ್ಕಿದ ಹಣದಲ್ಲೇ ಅವರು ನನಗೆ ಪುಸ್ತಕ ತರುತ್ತಿದ್ದರು” ಎನ್ನುತ್ತಾರೆ ಲಾಬನಿ. ಮಾಸ್ಕೋ ಪ್ರೆಸ್, ರಾದುಗ ಪ್ರೆಸ್ ಪ್ರಕಟಣೆಯ ಹತ್ತು ಹಲವು ಮಕ್ಕಳ ಪುಸ್ತಕಗಳು ಆಗ ಸಿಗುತ್ತಿದ್ದವು. ಬಾಂಗ್ಲಾ ಅನುವಾದದ ಮೂಲಕ ಅವುಗಳನ್ನು ನಾವು ಓದುತ್ತಿದ್ದೆವು. ಆ ಪುಸ್ತಕಗಳಲ್ಲಿ ಇರುತ್ತಿದ್ದ ಚಿತ್ರಗಳು ನನ್ನನ್ನು ಸೆಳೆಯುತ್ತಿದ್ದವು. ಬಹುಶಃ ಇಲ್ಲಿಂದ ಚಿತ್ರಗಳ ಕುರಿತಾದ ನನ್ನ ಆಸಕ್ತಿ ಆರಂಭವಾಯಿತು.“

ಅವರ ತಂದೆ ಕರೆದುಕೊಂಡು ಹೋಗುತ್ತಿದ್ದ ಬಾಲ್ಯದ ಟ್ಯೂಷನ್ ಕ್ಲಾಸ್ ಬಹಳ ಸಮಯ ನಡೆಯಲಿಲ್ಲ. ಆದರೆ ಚಿತ್ರಕಲೆ ಕುರಿತಾದ ಲಾಬನಿಯವರ ಪ್ರೇಮ ಎದೆಯೊಳಗೆ ಉಳಿದೇ ಇತ್ತು. 2016ರಲ್ಲಿ ಭಾಷೆಯೆನ್ನುವುದು ಅವರನ್ನು ಅಕ್ಷರಶಃ ದೂರವಿಟ್ಟುಬಿಟ್ಟಿತು. ಆಗ ಮತ್ತೆ ಅವರ ಒಳಗಿದ್ದ ಕಲಾವಿದೆ ಎದ್ದು ನಿಂತಳು. ಆ ಸಮಯದಲ್ಲಿ ದೇಶ ಸಾಮೂಹಿಕ ಹಲ್ಲೆ ಮತ್ತು ಹತ್ಯೆಗಳಿಗೆ ಸಾಕ್ಷಿಯಾಗುತ್ತಿತ್ತು. ಇಂತಹ ಹಿಂಸೆಯ ಕುರಿತಂತೆ ಸರ್ಕಾರದ ಉದಾಸೀನತೆ ಹಾಗೂ ಹಿಂಸೆಗೆ ಸಂಬಂಧಿಸಿದ ವಿಷಯಗಳ ಬಹುಸಂಖ್ಯಾತರ ನಿರಾಕರಣೆ ಎದ್ದು ಕಾಣುತ್ತಿತ್ತು. ಲಾಬನಿ ಆಗಷ್ಟೇ ಕೋಲ್ಕತ್ತಾದ ಜಾಧವಪುರ ವಿಶ್ವವಿದ್ಯಾಲಯದಲ್ಲಿ ತಮ್ಮ ಎಮ್.ಫಿಲ್ ಮುಗಿಸಿದ್ದರು. ದೇಶದಲ್ಲಿ ನಡೆಯುತ್ತಿದ್ದ ಘಟನೆಗಳಿಂದ ಬಹಳ ವಿಚಲಿತರಾಗಿದ್ದರು, ಆದರೆ ಅದರ ಕುರಿತು ಬರೆಯಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗುತ್ತಿರಲಿಲ್ಲ.

“ಬಹಳ ಕಿರಿಕಿರಿಯನ್ನು ಅನುಭವಿಸುತ್ತಿದ್ದೆ ಆ ಸಮಯದಲ್ಲಿ. ನನಗೆ ಬರವಣಿಗೆ ಬಹಳ ಇಷ್ಟದ ಕೆಲಸವಾಗಿತ್ತು. ಜೊತೆಗೆ ಈಗಾಗಲೇ ನನ್ನ ಹಲವು ಲೇಖನಗಳು ಬಂಗಾಳಿ ಭಾಷೆಯಲ್ಲಿ ಪ್ರಕಟವಾಗಿದ್ದವು ಸಹ. ಆದರೆ ಇದ್ದಕ್ಕಿದ್ದಂತೆ ಭಾಷೆ ಏಕೋ ಅಸಮರ್ಪಕ ಎನ್ನಿಸತೊಡಗಿತು. ಇದನ್ನೆಲ್ಲಾ ಬಿಟ್ಟು ದೂರ ಓಡಿಹೋಗಬೇಕು ಎನ್ನಿಸುತ್ತಿತ್ತು. ಇದೇ ಸಮಯದಲ್ಲಿ ನನಗೆ ಬಣ್ಣಗಳ ಕಡೆ ಮತ್ತೆ ಮನಸ್ಸು ಮೂಡಿದ್ದು. ಸಿಕ್ಕ ಸಿಕ್ಕ ಸಣ್ಣ ಪುಟ್ಟ ಕಾಗದಗಳ ಮೇಲೆಲ್ಲ ಸಮುದ್ರ ಮತ್ತು ಅದರ ಉಬ್ಬರವಿಳಿತಗಳನ್ನು ಮತ್ತೆ ಮತ್ತೆ ಚಿತ್ರಿಸುತ್ತಿದ್ದೆ. ಆಗ ನಾನು ಚಿತ್ರಗಳಿಗೆ ವಾಟರ್ ಕಲರ್ ಬಳಸುತ್ತಿದ್ದೆ. ಆ ಸಮಯದಲ್ಲಿ [2016-17] ನಾನು ಒಂದರ ಹಿಂದೆ ಒಂದರಂತೆ ಸಮುದ್ರದ ಚಿತ್ರಗಳನ್ನು ಬಿಡಿಸುತ್ತಿದ್ದೆ. ಚಿತ್ರಕಲೆ ಎನ್ನುವುದು ನನಗೆ ಈ ಗದ್ದಲದ ಜಗತ್ತಿನಿಂದ ಬಿಡುಗಡೆ ನೀಡುವ ತಾಣವಾಗಿತ್ತು.”

ಇಂದಿಗೂ ಲಾಬನಿ ಚಿತ್ರಕಲೆ ಕಲಿಕೆಗಾಗಿ ಯಾವುದೇ ಗುರುಗಳ ಮೊರೆ ಹೋಗಿಲ್ಲ. ಅವರದು ಅಭಿಜಾತ ಪ್ರತಿಭೆ.

PHOTO • Labani Jangi
PHOTO • Labani Jangi

ಲಾಬನಿ ತಮ್ಮ ಬಾಲ್ಯದ ದಿನಗಳಲ್ಲಿ ತಮ್ಮ ತಂದೆ ಸೇರಿಸಿದ್ದ ಟ್ಯೂಷನ್ ತರಗತಿಗೆ ಹೋಗಿದ್ದರು. ಆದರೆ ಅದು ಹೆಚ್ಚು ದಿನ ನಡೆಯಲಿಲ್ಲ

PHOTO • Labani Jangi
PHOTO • Labani Jangi

ಸ್ವತಃ ತಾನೇ ಚಿತ್ರ ಬಿಡಿಸುವುದನ್ನು ಕಲಿತ ಲಾಬನಿ 2016 ಮತ್ತು 2017ರಲ್ಲಿ ಹೆಚ್ಚುತ್ತಿದ್ದ ಕೋಮು ದ್ವೇಷದ ಘಟನೆಗಳಿಂದ ವಿಚಲಿತರಾಗಿ ಮತ್ತೆ ಚಿತ್ರ ಬಿಡಿಸಲು ಆರಂಭಿಸಿದರು. ಹೀಗೆ ಅಂದಿಗೆ 25 ವರ್ಷವರಾಗಿದ್ದ ಕಲಾವಿದೆ ಕಲೆಯನ್ನು ತನ್ನೊಳಗಿನ ಮತ್ತು ಹೊರಗಿನ ಪ್ರಕ್ಷುಬ್ಧತೆಯನ್ನು ಸಂಭಾಳಿಸುವ ದಾರಿಯಾಗಿ ಕಂಡುಕೊಂಡರು

2017ರಲ್ಲಿ, ಪ್ರತಿಷ್ಠಿತ ಯುಜಿಸಿ-ಮೌಲಾನಾ ಆಜಾದ್ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುವ ರಾಷ್ಟ್ರೀಯ ಫೆಲೋಶಿಪ್ (2016-20) ಪಡೆದ ನಂತರ ಅವರು ಕಲ್ಕತ್ತಾದ ಜಾದವಪುರ ವಿಶ್ವವಿದ್ಯಾನಿಲಯದೊಂದಿಗೆ ಸಂಯೋಜಿತಗೊಂಡಿರುವ ಸಮಾಜ ವಿಜ್ಞಾನಗಳ ಅಧ್ಯಯನ ಕೇಂದ್ರದಲ್ಲಿ ಡಾಕ್ಟರೇಟ್ ಕಲಿಕೆಗೆ ಸೇರಿಕೊಂಡರು. ಈ ಮೂಲಕ ಅವರು ಈ ಹಿಂದೆ ಪ್ರಾರಂಭಿಸಿದ್ದ ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಕೆಲಸವನ್ನು ಮುಂದುವರೆಸಿದರು, ಆದರೆ ಈ ಬಾರಿ 'ಬಂಗಾಳಿ ವಲಸೆ ಕಾರ್ಮಿಕರ ಜೀವನ ಮತ್ತು ಅವರ ಜಗತ್ತು’ ಎನ್ನುವ ಬೃಹತ್ ಪ್ರಬಂಧ ಯೋಜನೆಯ ಭಾಗವಾಗಿ ಆ ಜಗತ್ತಿನ ಆಳವಾದ ನೇರ ಅನುಭವದೊಂದಿಗೆ ಮುಖಾಮುಖಿಯಾಗಲಿದ್ದರು.

ಲಾಬನಿ ತನ್ನ ಊರಿನ ಜನರು ಗಾರೆ ಕೆಲಸ ಹುಡುಕಿಕೊಂಡು ಕೇರಳಕ್ಕೆ ಅಥವಾ ಹೋಟೆಲ್ಲುಗಳಲ್ಲಿ ಕೆಲಸ ಮಾಡಲು ಮುಂಬಯಿಗೆ ಹೋಗುವುದನ್ನು ನೋಡಿದ್ದರು. “ನನ್ನ ಅಪ್ಪನ ಅಣ್ಣ-ತಮ್ಮಂದಿರು ಮತ್ತು ಅವರ ಸಂಬಂಧಿಕರು ಈಗಲೂ ಬಂಗಾಳದ ಹೊರಗೆ ವಲಸೆ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ” ಎಂದು ಅವರು ಹೇಳುತ್ತಾರೆ. ಈ ಅಧ್ಯಯನದ ವಿಷಯ ಅವರ ಹೃದಯಕ್ಕೆ ಬಹಳ ಹತ್ತಿರದ ವಿಷಯವಾಗಿದ್ದರೂ, ಇದಕ್ಕೆ ಸಾಕಷ್ಟು ಕ್ಷೇತ್ರಕಾರ್ಯದ ಅಗತ್ಯವೂ ಇತ್ತು. “ಆದರೆ ಅದೇ ಹೊತ್ತಿಗೆ ಸಾಂಕ್ರಾಮಿಕ ಪಿಡುಗು ವಕ್ಕರಿಸಿಕೊಂಡಿತು. ಇದರಿಂದ ಅತಿ ಹೆಚ್ಚು ಹಾನಿಗೊಳಗಾದವರು ವಲಸೆ ಕಾರ್ಮಿಕರು. ಆದರೆ ಆ ಸಂದರ್ಭದಲ್ಲಿ ನನಗೆ ಸಂಶೋಧನೆಯ ಕೆಲಸ ಮಾಡಬೇಕು ಅನ್ನಿಸಲಿಲ್ಲ. ಆ ಜನರು ಮನೆಗೆ ತಲುಪಲು, ಆರೋಗ್ಯ ಸೇವೆ ಪಡೆಯಲು ಸ್ಮಶಾನಗಳಲ್ಲಿ ಹೆಣ ಸುಡಲು, ಹೂಳಲು ಪರದಾಡುತ್ತಿರುವ ಸಂದರ್ಭದಲ್ಲಿ ಅವರ ಬಳಿ ಹೋಗಿ ನಾನು ನನ್ನ ಅಕಾಡೆಮಿಕ್‌ ಪ್ರಶ್ನೆಗಳನ್ನು ಹೇಗೆ ಕೇಳಲಿ? ಹಾಗೆ ಕೇಳುವುದು ನನಗೆ ಸರಿಯೆನ್ನಿಸಲಿಲ್ಲ. ಅವರ ನೋವಿನಲ್ಲಿ ನನ್ನ ಲಾಭ ಹುಡುಕುವುದು ತಪ್ಪೆನ್ನಿಸಿತು. ನನಗೆ ಕ್ಷೇತ್ರಕಾರ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ನನ್ನ ಪಿಎಚ್‌ಡಿ ಮುಂದಕ್ಕೆ ಹೋಗುತ್ತಲೇ ಇದೆ” ಎಂದು ಅವರು ಹೇಳಿದರು.

ಈ ಬಾರಿ ಪೀಪಲ್ಸ್ ಆರ್ಕೈವ್ಸ್ ಆಫ್ ರೂರಲ್ ಇಂಡಿಯಾ (ಪರಿ) ಪುಟಗಳಲ್ಲಿ ವಲಸೆ ಕಾರ್ಮಿಕರ ಜೀವನವನ್ನು ದಾಖಲಿಸುವ ಸಲುವಾಗಿ ಲಾಬನಿ ಮತ್ತೆ ತಮ್ಮ ಕುಂಚವನ್ನು ಕೈಗೆತ್ತಿಕೊಂಡರು. “ಆ ದಿನಗಳಲ್ಲಿ ಸಾಯಿನಾಥ್ ಅವರ ಕೆಲವು ಲೇಖನಗಳು ಬಂಗಾಳಿ ದಿನಪತ್ರಿಕೆ ʼಗಣಶಕ್ತಿʼಯ ಸಂಪಾದಕೀಯ ಪುಟಗಳಲ್ಲಿ ಪ್ರಕಟವಾಗುತ್ತಿದ್ದವು. ಹೀಗಾಗಿ ನನಗೆ ಪಿ ಸಾಯಿನಾಥ್‌ ತಮ್ಮ ಬರಹಗಳ ಮೂಲಕ ನನಗೆ ಚಿರಪರಿಚಿತರಾಗಿದ್ದರು. ಒಂದು ದಿನ ಸ್ಮಿತಾ ದೀ ನನ್ನ ಬಳಿ ಪರಿಯಲ್ಲಿ ಪ್ರಕಟವಾಗುವ ಲೇಖನವೊಂದಕ್ಕೆ ಚಿತ್ರ ಬಿಡಿಸಿಕೊಡುವಂತೆ ಕೇಳಿಕೊಂಡರು. ನಂತರ ಕವಿತೆಗಳಿಗೂ ಚಿತ್ರಗಳನ್ನು ಕೇಳಿದರು.” (ಸ್ಮಿತಾ ಖಾಟೋರ್‌ ಪರಿಯ ಮುಖ್ಯ ಅನುವಾದ ಸಂಪಾದಕರು). 2020ರ ವರ್ಷದಲ್ಲಿ ಲಾಬನಿ ಅವರಿಗೆ ಪರಿ ಫೆಲೋಷಿಪ್‌ ಗೌರವ ದೊರಕಿತ್ತು, ಇದರಡಿ ಅವರು ಆ ವರ್ಷವಿಡೀ ತಮ್ಮ ಪ್ರಬಂಧದ ವಿಷಯಗಳನ್ನು ಚಿತ್ರಿಸಿದರು. ಜೊತೆಗೆ ಸಾಂಕ್ರಾಮಿಕ ಪಿಡುಗು ಮತ್ತು ಲಾಕ್‌ಡೌನ್‌ ಹೇರಿಕೆಯಿಂದ ತೊಂದರೆಗೊಳಗಾಗಿದ್ದ ರೈತರು ಮತ್ತು ಗ್ರಾಮೀಣ ಮಹಿಳೆಯರ ಕುರಿತಾದ ಚಿತ್ರಗಳನ್ನೂ ರಚಿಸಿದರು.

“ಪರಿಯೊಂದಿಗೆ ನಾನು ಮಾಡಿದ ಕೆಲಸಗಳು ವ್ಯವಸ್ಥಿತ ಸವಾಲುಗಳು ಮತ್ತು ಗ್ರಾಮೀಣ ಜೀವನದ ಕಷ್ಟಸಹಿಷ್ಣು ಮನೋಭಾವವನ್ನು ಬಿಂಬಿಸುತ್ತಿದ್ದವು. ಈ ನಿರೂಪಣೆಗಳನ್ನು ಸಂಯೋಜಿಸುವ ಮೂಲಕ ನಾನು ಈ ಜನರ ಬದುಕಿನ ಸಂಕೀರ್ಣತೆಗಳನ್ನು ಅನುರಣಿಸುವ ದೃಶ್ಯ ಅಭಿವ್ಯಕ್ತಿಗಳನ್ನು ರಚಿಸಲು ನಾನು ಪ್ರಯತ್ನಿಸುತ್ತೇನೆ. ಗ್ರಾಮೀಣ ಭಾರತದ ಸಾಂಸ್ಕೃತಿಕ ಮತ್ತು ಸಾಮಾಜಿಕ ವಾಸ್ತವತೆಗಳ ಶ್ರೀಮಂತ ವೈವಿಧ್ಯತೆಯನ್ನು ಸಂರಕ್ಷಿಸಲು ಮತ್ತು ಹಂಚಿಕೊಳ್ಳಲು ಕಲೆ ನನಗೆ ಒಂದು ಮಾಧ್ಯಮವಾಗಿ ಒದಗಿದೆ.”

PHOTO • Labani Jangi
PHOTO • Labani Jangi

ದೇಶದಲ್ಲಿ ಸಾಂಕ್ರಾಮಿಕ ಪಿಡುಗು ಆವರಿಸಿದ್ದ ಸಮಯದಲ್ಲಿ ನಡೆದ ರೈತ ಪ್ರತಿಭಟನೆ ಮತ್ತು ವಲಸೆ ದುರಂತದ ಕುರಿತು ಅವರು ಪರಿಗಾಗಿ ಬಿಡಿಸಿದ ಚಿತ್ರಗಳು ವರದಿಗಳ ಅಗತ್ಯತೆ ಮತ್ತು ದೃಷ್ಟಿಕೋನಗಳನ್ನು ಬಿಂಬಿಸುತ್ತಿದ್ದವು

PHOTO • Labani Jangi
PHOTO • Labani Jangi

2020ರ ಪರಿ ಫೆಲೋಷಿಪ್‌ ಗೌರವ ಪಡೆದ ಲಾಬನಿ ಆ ವರ್ಷ ಬಿಡಿಸಿದ ಚಿತ್ರಗಳು ಹಲವು ಸರಣಿ ವರದಿಗಳಿಗೆ ಉತ್ಕೃಷ್ಟತೆಯನ್ನು ಒದಗಿಸಿದವು

ಲಾಬನಿ ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡವರಲ್ಲ. ಅವರು ತನ್ನ ಕಲೆಯನ್ನೇ ರಾಜಕಾರಣವಾಗಿ ನೋಡುತ್ತಾರೆ. “ನಾನು ಜಾದವಪುರ ಯುನಿವರ್ಸಿಟಿಗೆ ಓದಲು ಬಂದ ನಂತರ ಹಲವು ಹಲವು ಚಿತ್ರಗಳು ಮತ್ತು ಪೋಸ್ಟರುಗಳನ್ನು ನೋಡಿದೆ. ನಾನು ನಮ್ಮ ಸುತ್ತ ನಡೆಯುವ ಘಟನೆಗಳ ಕುರಿತಾಗಿ ಬಿಡಿಸುವ ಚಿತ್ರಗಳು ಇವುಗಳ ನೋಡುವಿಕೆ ಮತ್ತು ನನ್ನ ಸ್ವಂತ ಸಂವೇದನೆಗಳಿಂದ ಮೂಡಿದ್ದು.” ಸಮಾಜದ ದೈನಂದಿನ ಬದುಕಿನಲ್ಲಿ ಸಹಜಗೊಳ್ಳುತ್ತಿರುವ ಅಸಹನೆ ಮತ್ತು ಸರ್ಕಾರಿ ಪ್ರಾಯೋಜಿತ ಹಿಂಸೆಯ ನಡುವೆ, ಓರ್ವ ಮುಸ್ಲಿಂ ಮಹಿಳೆಯಾಗಿ ತಾನು ಎದುರಿಸುವ ದೈನಂದಿನ ವಾಸ್ತವದ ಮೂಲಕ ತನ್ನ ಕಲೆಗೆ ಸ್ಫೂರ್ತಿಯನ್ನು ಗಳಿಸುತ್ತಾರೆ.

“ಈ ಜಗತ್ತು ನಮ್ಮ ಕೌಶಲ, ನಮ್ಮ ಪ್ರತಿಭೆ ಮತ್ತು ನಮ್ಮ ಕಠಿಣ ಪರಿಶ್ರಮವನ್ನು ಗುರುತಿಸಲು ಬಯಸುವುದಿಲ್ಲ” ಎನ್ನುತ್ತಾರೆ ಲಾಬನಿ. ಸಮಾಜದಿಂದ ಅಳಿಸಿ ಹಾಕುವ ಈ ಪ್ರಕ್ರಿಯೆಯಲ್ಲಿ ನಮ್ಮ ಗುರುತು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಇಂದಿಗೂ ಮುಂದುವರೆದಿದೆ. ಬಹಳ ದೊಡ್ಡ ಜನಸಂಖ್ಯೆಯ ಪ್ರಕಾರ, ವಿಶೇಷವಾಗಿ ಮುಸ್ಲಿಂ ಮಹಿಳೆಯ ಕಲೆಯನ್ನುವುದು ಅಸ್ತಿತ್ವದಲ್ಲಿಲ್ಲ.” ಕೆಲವೊಮ್ಮೆ ಅದೃಷ್ಟವಶಾತ್‌ ಅವಳನ್ನು ಗುರುತಿಸುವವರು ಸಿಕ್ಕರೆ ಒಮ್ಮೊಮ್ಮೆ ಅವಳ ಕಲೆಗೆ ಬೆಲೆ ಬರುತ್ತದೆ. “ಆದರೆ ಯಾರೂ ಹಾಗೆ ಮುಂದೆ ಬರುವುದಿಲ್ಲ. ಯಾರೂ ಮುಸ್ಲಿಂ ಮಹಿಳೆಯರ ಕಲೆಗೆ ವೇದಿಕೆ ನೀಡುವುದಿಲ್ಲ, ಅದರೊಂದಿಗೆ ತೊಡಗಿಸಿಕೊಳ್ಳುವುದಿಲ್ಲ ಅಥವಾ ಅದರ ವಿಮರ್ಶೆಯನ್ನೂ ಮಾಡುವುದಿಲ್ಲ. ಹೀಗಾಗಿಯೇ ಇದನ್ನು ನಾನು ಅಳಿಸಿಹಾಕುವಿಕೆ ಎಂದು ಕರೆಯುತ್ತೇನೆ. ಇದು ಅನೇಕ ಕ್ಷೇತ್ರಗಳ ಇತಿಹಾಸದಲ್ಲಿ ಪ್ರಕಟವಾಗುತ್ತದೆ" ಎಂದು ಅವರು ಹೇಳುತ್ತಾರೆ. ಆದರೆ ಲಾಬನಿ ಇನ್ಸ್ಟಾಗ್ರಾಮ್‌, ಫೇಸ್ಬುಕ್‌ ರೀತಿಯ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಚಿತ್ರಗಳನ್ನು ಪೋಸ್ಟ್‌ ಮಾಡುವ ಮೂಲಕ ತಮ್ಮದೇ ಆದ ಒಂದು ಸ್ಪೇಸ್‌ ನಿರ್ಮಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಮತ್ತು ಫೇಸ್‌ಬುಕ್‌ ಮೂಲಕವೇ ಚಟ್ಟೋಗ್ರಾಮ್‌ ಎನ್ನುವಲ್ಲಿರುವ ಚಿತ್ರಭಾಷಾ ಎನ್ನುವ ಆರ್ಟ್‌ ಗ್ಯಾಲರಿಯು ಅವರನ್ನು ಸಂಪರ್ಕಿಸಿ ಅವರ ಮೊದಲ ಏಕವ್ಯಕ್ತಿ ಚಿತ್ರಕಲೆ ಪ್ರದರ್ಶನಕ್ಕೆ ಆಹ್ವಾನಿಸಿತು. ಹೀಗೆ ಅವರ ಕಲಾಕೃತಿಗಳ ಮೊದಲ ಏಕವ್ಯಕ್ತಿ ಪ್ರದರ್ಶನ ʼಬೀಬಿರ್‌ ದರ್ಗಾʼ 2022ರ ಡಿಸೆಂಬರ್‌ ತಿಂಗಳಿನಲ್ಲಿ ನಡೆಯಿತು.

PHOTO • Courtesy: Labani Jangi
PHOTO • Courtesy: Labani Jangi

ಚಟ್ಟೋಗ್ರಾಮ್ ಎನ್ನುವಲ್ಲಿನ ಚಿತ್ರಭಾಷಾ ಆರ್ಟ್ ಗ್ಯಾಲರಿಯಲ್ಲಿ 2022ರಲ್ಲಿ ನಡೆದ ಲಾಬನಿ ಅವರ ವರ್ಣಚಿತ್ರಗಳ ಏಕವ್ಯಕ್ತಿ ಪ್ರದರ್ಶನ

PHOTO • Labani Jangi
PHOTO • Labani Jangi

ಪೀರ್‌ ಆಗಿ ಗುರುತಿಸಿಕೊಂಡಿದ್ದ ಮಹಿಳೆಯರನ್ನು ಗೌರವಿಸುವ ಹಳೆಯ ಕಾಲದ ದರ್ಗಾಗಳು ಕಣ್ಮರೆಯಾಗಿರಬಹುದು, ಆದರೆ ಅವರ ಸ್ಫೂರ್ತಿ ಇಂದಿಗೂ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಮಹಿಳೆಯರಲ್ಲಿ ಬದುಕುಳಿದಿದೆ. ಅದರ ನೆನಪಿಗಾಗಿ ಲಾಬನಿಯವರ ಕೆಲಸ ಮುಂದುವರಿಯುತ್ತದೆ

ಬೀಬಿರ್‌ ದರ್ಗಾಗಳಿಗೆ ಸಂಬಂಧಿಸಿದ ಕಲಾಕೃತಿಗಳಿಗೆ ಸಂಬಂಧಿಸಿದಂತೆ ಅವರ ಪರಿಕಲ್ಪನೆಗೆ ಕಾರಣವಾಗಿದ್ದು ಪ್ರಸ್ತುತ ಬಾಂಗ್ಲಾದೇಶದ ಪರಿಸ್ಥಿತಿ. ಇಲ್ಲಿ ಅವರು ಮತ್ತೊಮ್ಮೆ ಸಂಪ್ರದಾಯವಾದಿ ಇಸ್ಲಾಂ ಉದಯವಾಗಿರುವುದನ್ನು ಗುರುತಿಸುತ್ತಾರೆ. ಬೀಬಿ ಕಾ ದರ್ಗಾ ಎನ್ನುವುದು ಈ ಹಿಂದೆ ಪೀರ್‌ (ಧಾರ್ಮಿಕ ಮಾರ್ಗದರ್ಶಕರು) ಆಗಿದ್ದ ಮಹಿಳೆಯರ ನೆನಪಿನಲ್ಲಿ ನಿರ್ಮಿಸಲಾಗಿರುವ ಸ್ಮಾರಕಗಳು. “ನಾನು ಸಣ್ಣವಳಿದ್ದ ಸಮಯದಲ್ಲಿ ನಮ್ಮೂರಿನಲ್ಲಿ ಎರಡು ಮಹಿಳಾ ಪೀರ್‌ಗಳ ದರ್ಗಾಗಳಿದ್ದವು. ಅಲ್ಲಿ ಕೆಲವು ಪಾರಂಪರಿಕ ಆಚರಣೆಗಳಿದ್ದವು, ಮನ್ನತ್‌ ಎನ್ನುವ ದಾರ ಕಟ್ಟುವ ಹರಕೆಯ ಪದ್ಧತಿ ಸಹ ಇತ್ತು. ನಮ್ಮ ಹರಕೆಗಳು ಪೂರ್ಣಗೊಂಡ ನಂತರ ನಾವು ಆ ದರ್ಗಾಕ್ಕೆ ಭೇಟಿ ನೀಡಿ ಅಲ್ಲಿಅಡುಗೆ ಅಲ್ಲಿದ್ದವರೊಂದಿಗೆ ಕುಳಿತು ಊಟ ಮಾಡುತ್ತಿದ್ದೆವು. ಇಲ್ಲಿನ ಇಡೀ ಪರಿಸರದಲ್ಲಿ ಅಂದು ಒಂದು ಸೌಹಾರ್ದಯುತ ವಾತಾವರಣವಿತ್ತು.

“ಆದರೆ ಇವೆಲ್ಲವು ಕೂಡಾ ಈಗ ನನ್ನ ಕಣ್ಣುಗಳ ಮುಂದೆಯೇ ಮಾಯವಾಗುತ್ತಿರುವುದಕ್ಕೆ ಸಾಕ್ಷಿಯಾಗಿದ್ದೇನೆ. ಮುಂದೆ ಈ ಸ್ಥಳಗಳಲ್ಲಿ ಮಕ್ತಾಬ್‌ ಎನ್ನುವ ಲೈಬ್ರರಿ ಬಂದು ಕುಳಿತಿತು. ಇಂದು ಮಝರ್‌ [ಸಮಾಧಿ] ಅಥವಾ ದರ್ಗಾಗಳಲ್ಲಿ ನಂಬಿಕೆಯಿಲ್ಲದ ಮುಸ್ಲಿಂ ಸಂಪ್ರಾದಾಯವಾದಿಗಳು ಇಂತಹ ದರ್ಗಾಗಳನ್ನು ಒಡೆಯುವ ಅಥವಾ ಅಲ್ಲಿ ಮಸೀದಿ ನಿರ್ಮಿಸುವ ಪ್ರಯತ್ನಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಕೆಲವು ದರ್ಗಾಗಳು ಉಳಿದುಕೊಂಡಿವೆ ಆದರೆ ಅವು ಪುರುಷ ಪೀರ್‌ಗಳ ಸಮಾಧಿಯನ್ನು ಹೊಂದಿರುವಂತಹವು. ಈಗ ಒಂದೂ ಮಹಿಳಾ ಪೀರ್‌ಗಳ ದರ್ಗಾ ಉಳಿದಿಲ್ಲ, ಅವುಗಳನ್ನು ನಮ್ಮ ಸಾಂಸ್ಕೃತಿಕ ನೆನಪಿನಿಂದ ಅಳಿಸಿಹಾಕಲಾಗಿದೆ.”

ಇಂತಹ ವಿನಾಶಕಾರಿ ಮಾದರಿ ವ್ಯಾಪಕವಾಗಿ ಹರಡಿದ್ದರೂ, ಅದಕ್ಕೆ ಸಮಾನಾಂತರವಾಗಿ ಇನ್ನೊಂದು ಮಾದರಿ ಇರುವುದನ್ನೂ ಲಾಬನಿ ಗುರುತಿಸುತ್ತಾರೆ. ಈ ಮಾದರಿ ಅಂತಹ ಹಿಂಸಾತ್ಮಕವಾಗಿ ನೆನಪುಗಳನ್ನು ಅಳಿಸಿಹಾಕುವುದರ ವಿರುದ್ಧ ನಿಲ್ಲುತ್ತದೆ. “ಬಾಂಗ್ಲಾದೇಶದ ಚಿತ್ರ ಪ್ರದರ್ಶನದ ಸಮಯ ಬಂದಂತೆ ನಾನು ಒಂದು ಕಡೆ ಈ ಮಝರ್‌ ನಾಶದ ಕುರಿತು ಯೋಚಿಸಿದೆ ಇನ್ನೊಂದೆಡೆ ತಾವು ಕಳೆದುಕೊಂಡ ಭೂಮಿಯ ಸಲುವಾಗಿ ಇಂದಿಗೂ ಛಲ ಬಿಡದೆ ಹೋರಾಡುತ್ತಿರುವ ಮಹಿಳೆಯರ ಪ್ರತಿರೋಧದ ಕುರಿತು ಯೋಚಿಸಿದೆ. ಈ ಪ್ರತಿರೋಧ ಮತ್ತು ಚೇತರಿಕೆ ದರ್ಗಾಗಳಿಗೆ ಸ್ಫೂರ್ತಿಯಾಗಿದ್ದು, ಈ ರಚನೆಗಳು ನಾಶವಾದ ನಂತರವೂ ಜನಮಾನಸದಲ್ಲಿ ಉಳಿದಿರುತ್ತವೆ. ಇದನ್ನೇ ನಾನು ನನ್ನ ಏಕವ್ಯಕ್ತಿ ಪ್ರದರ್ಶನದಲ್ಲಿ ಪ್ರತಿಬಿಂಬಿಸಲು ಪ್ರಯತ್ನಿಸಿದೆ.” ಈ ಪ್ರದರ್ಶನ ಮುಗಿದು ಬಹಳ ಸಮಯ ಕಳೆದಿದೆಯಾದರೂ ಲಾಬನಿ ಈಗಲೂ ಈ ವಿಷಯದ ಮೇಲೆ ಕೆಲಸ ಮುಂದುವರೆಸಿದ್ದಾರೆ.

ಲಾಬನಿಯವರ ಚಿತ್ರಗಳು ಜನರ ದನಿಗೆ ಬಲ ನೀಡಿವೆ. ಅನೇಕ ಕವಿತೆಗಳು ಮತ್ತು ಲೇಖನಗಳಿಗೆ ಜೀವ ತುಂಬಿವೆ. “ಬರಹಗಾರರು ಮತ್ತು ಕಲಾವಿದರು ಪರಸ್ಪರ ಬೇರೆಯಲ್ಲ. ನಮ್ಮನ್ನು ಕಲೆ ಬೆಸೆಯುತ್ತದೆ. ಒಮ್ಮೆ ಕೇಶವ್‌ ಭಾವು, ಅವರ ಲೇಖನಕ್ಕೆ [ ಅಂಬೇಡ್ಕರ್ ಸ್ಫೂರ್ತಿ: ಸಾಳ್ವೆಯವರ ವಿಮೋಚನಾ ಗೀತೆ ] ನಾನು ಬರೆದ ಚಿತ್ರವನ್ನು ನೋಡಿ ʼನೀವು ಶಾಹಿರ್‌ ಹೇಗಿರುತ್ತಾರೋ ಹಾಗೆಯೇ ಕಲ್ಪಿಸಿಕೊಂಡು ಬರೆದಿದ್ದೀರಿʼ ಎಂದಿದ್ದು ನನಗಿನ್ನೂ ನೆನಪಿದೆ. ಆದರೆ ನನಗೆ ಇದೇನೂ ಆಶ್ಚರ್ಯ ಹುಟ್ಟಿಸಲಿಲ್ಲ. ಏಕೆಂದರೆ. ನಾವು ವೈಯಕ್ತಿಕವಾಗಿ ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕ ಗುರುತುಗಳಲ್ಲಿ ಬೇರೆಯಾಗಿ ಕಂಡರೂ, ನಾವೆಲ್ಲ ಒಂದೇ ಬಗೆಯ ಕಲ್ಪನೆ, ಸಾಮಾಜಿಕ ನೆನಪು, ಮತ್ತು ಒಂದೇ ಬಗೆಯ ಆತ್ಮಕಥನಗಳನ್ನು ಹೊಂದಿರುತ್ತೇವೆ” ಎನ್ನುತ್ತಾರೆ ಲಾಬನಿ.

PHOTO • Courtesy: Labani Jangi
PHOTO • Courtesy: Labani Jangi
PHOTO • Courtesy: Labani Jangi
PHOTO • Courtesy: Labani Jangi

ಲಾಬನಿಯವರ ಚಿತ್ರಗಳು ಭಾರತದ ಒಳಗೆ ಮತ್ತು ಹೊರಗೆ ಪ್ರಕಟವಾದ ಸೃಜನಾತ್ಮಕ ಮತ್ತು ಸೃಜನೇತರ ಸಂಶೋಧನಾ ಕೃತಿಗಳೆರಡರಲ್ಲೂ ಸ್ಥಳ ಪಡೆದಿವೆ

PHOTO • Courtesy: Labani Jangi
PHOTO • Labani Jangi

ಎಡ : ಲಾಬನಿಯವರು ತಮ್ಮ ಕೃತಿಗಳನ್ನು 2024 ಮಾರ್ಚ್‌ ತಿಂಗಳಿನಲ್ಲಿ ಅಹಮದಾಬಾದ್‌ ನಗರದ ಐಐಟಿ ಗಾಂಧಿನಗರದಲ್ಲಿ ಏರ್ಪಡಿಸಲಾಗಿದ್ದ ಕಾಮಿಕ್ಸ್‌ ಕಾನ್ಕ್ಲೇವ್‌ 2.0 ಕಾರ್ಯಕ್ರಮದಲ್ಲೂ ಪ್ರದರ್ಶಿಸಿದ್ದರು . ಬಲ : 2022 ಆಗಸ್ಟ್ ತಿಂಗಳಿನಲ್ಲಿ ಮಲ್ಲಿಕಾ ಸಾರಾಭಾಯ್ ಅವರ ನೇತೃತ್ವದ ಥಿಯೇಟರ್ ಫ್ರಮ್ ದಿ ಸ್ಟ್ರೀಟ್ಸ್ ಆಯೋಜಿಸಿದ್ದ ಪ್ರಾಜೆಕ್ಟ್‌ ಒಂದರಲ್ಲಿ ಭಾರತ, ವೆನೆಜುವೆಲಾ, ಪ್ಯಾಲೆಸ್ಟೈನ್ ಮತ್ತು ಲೆಬನಾನ್ ದೇಶಗಳ ಇತರ ಕವಿಗಳು ಮತ್ತು ಕಲಾವಿದರೊಂದಿಗೆ ಅವರು ತಮ್ಮ ಕೃತಿಗಳನ್ನು ಸಹ ಪ್ರಸ್ತುತಪಡಿಸಿದರು

ದಿಟ್ಟ ಬಣ್ಣಗಳು, ಶಕ್ತಿಯುತ ಗೆರೆಗಳು, ಮತ್ತು ಮನುಷ್ಯ ಬದುಕಿನ ಕಚ್ಚಾ ನಿರೂಪಣೆಯ ಲಾಬನಿಯವರ ಚಿತ್ರಗಳು ಸಾಂಸ್ಕೃತಿಕ ಏಕರೂಪತೆಯ ವಿರುದ್ಧದ ಪ್ರತಿರೋಧದ ಕಥೆಗಳನ್ನು, ಸಾಮೂಹಿಕ ಸ್ಮರಣೆಯ ಕಥೆಗಳನ್ನು, ಅಸ್ಮಿತೆಗಳು ಮತ್ತು ಸಂಸ್ಕೃತಿಗಳ, ವಿಘಟನೆಯ ನಡುವೆ ಸಂಪರ್ಕಗಳನ್ನು ನಿರ್ಮಿಸುವ ಕಥೆಗಳನ್ನು ಹೇಳುತ್ತವೆ. “ನಾನು ಒಂದು ಬಗೆಯ ಕಾಲ್ಪನಿಕ ಯುಟೋಪಿಯದ ಅಗತ್ಯತೆಯಿಂದ ಪ್ರೇರಿತಳಾಗಿದ್ದೇನೆ ಎಂದು ನನಗೆ ಅನ್ನಿಸುತ್ತದೆ. ನಡೆಯುತ್ತಿರುವ ಹಿಂಸಾಚಾರಕ್ಕೆ ಪ್ರತಿಯಾಗಿ ಹೊಸ ಬಗೆಯ ಸಮಾಜವೊಂದನ್ನು ಕಲ್ಪಿಸಿಕೊಳ್ಳುವುದು ಅನಿವಾರ್ಯವೂ ಹೌದು” ಎನ್ನುತ್ತಾರೆ ಲಾಬನಿ. “ಇಂದಿನ ಜಗತ್ತಿನಲ್ಲಿ ರಾಜಕೀಯ ಚರ್ಚೆಗಳು ವಿನಾಶದತ್ತಲೇ ಮುಖ ಮಾಡಿರುವ ಹೊತ್ತಿನಲ್ಲಿ ನಾನು ಬರೆಯುವ ಚಿತ್ರಗಳು ಪ್ರತಿರೋಧ ಮತ್ತು ಹೊಂದಾಣಿಕೆಯ ಕುರಿತು ತಣ್ಣಗೆ ಆದರೆ ಶಕ್ತಿಯುತವಾದ ಭಾಷೆಯಲ್ಲಿ ಮಾತನಾಡುತ್ತವೆ.”

ಈ ಭಾಷೆ ಅವರಿಗೆ ಲಭಿಸಿದ್ದು ತನ್ನ ಬದುಕಿನ ಮೊದಲ 10 ವರ್ಷಗಳ ಕಾಲ ಲಾಲನೆ ಪಾಲನೆ ಮಾಡಿದ ಅಜ್ಜಿಯಿಂದ. "ನಮ್ಮಿಬ್ಬರನ್ನು, ಎಂದರೆ ಸಹೋದರ ಮತ್ತು ನನ್ನನ್ನು ನೋಡಿಕೊಳ್ಳುವುದು ತಾಯಿಗೆ ಕಷ್ಟವಾಯಿತು. ಮನೆ ಕೂಡ ಚಿಕ್ಕದಾಗಿತ್ತು. ಹೀಗಾಗಿ ಅವರು ನನ್ನನ್ನು ನನ್ನ ನಾನಿಯ [ತಾಯಿಯ ಅಮ್ಮ] ಮನೆಗೆ ಕಳುಹಿಸಿದರು, ಅಲ್ಲಿ ಅವರು ಮತ್ತು ಖಾಲಾ [ಅಮ್ಮನ ಸಹೋದರಿ] ಒಂದು ದಶಕದ ಕಾಲ ನನ್ನನ್ನು ನೋಡಿಕೊಂಡರು. ಅವರ ಮನೆಯ ಬಳಿ ಒಂದು ಕೊಳವಿತ್ತು, ಅಲ್ಲಿ ನಾವು ಪ್ರತಿದಿನ ಮಧ್ಯಾಹ್ನ ಕಾಂತಾ [ಕಸೂತಿ] ಕೆಲಸವನ್ನು ಮಾಡುತ್ತಿದ್ದೆವು" ಎಂದು ಲಾಬನಿ ನೆನಪಿಸಿಕೊಳ್ಳುತ್ತಾರೆ. ಅವರ ಅಜ್ಜಿ ಸರಳವಾದ ಹೊಲಿಗೆ ಕೌಶಲವನ್ನು ಬಳಸಿಕೊಂಡು ವರ್ಣರಂಜಿತ ಕಸೂತಿ ಕೆಲಸದಲ್ಲಿ ಸಂಕೀರ್ಣ ಕಥೆಗಳನ್ನು ಹೆಣೆಯುತ್ತಿದ್ದರು. ಸಂಕೀರ್ಣ ಕಥೆಗಳನ್ನು ಸರಳವಾಗಿ ಹೇಳುವ ಕಲೆಯು ಲಬಾನಿಯವರಿಗೆ ಅವರ ಅಜ್ಜಿಯಿಂದ ಬಂದಿರಬಹುದು, ಆದರೆ ಅವರು ಪ್ರಸ್ತುತ ಬದುಕುತ್ತಿರುವ ಹತಾಶೆ ಮತ್ತು ಭರವಸೆಯ ನಡುವೆ ಒಂದು ಸ್ಥಳವನ್ನು ನಿರ್ಮಿಸಿಕೊಳ್ಳಲು ಕಲಿಸಿದ್ದು ಅವರ ತಾಯಿ.

PHOTO • Courtesy: Labani Jangi
PHOTO • Courtesy: Labani Jangi

ಎಡ: ಅಬ್ಬಾ (ತಂದೆ) ಮತ್ತು ಅಮ್ಮ ಲಾಬನಿಯವರ ಜೀವನದಲ್ಲಿ ಇಂದಿಗೂ ಇಬ್ಬರು ಪ್ರಮುಖ ವ್ಯಕ್ತಿಗಳಾಗಿ ಉಳಿದಿದ್ದಾರೆ. ಇವರಿಬ್ಬರು ಲಾಬನಿಯವರ ಸ್ಥಿತಿಸ್ಥಾಪಕ ಮನೋಭಾವವನ್ನು ರೂಪಿಸಿದ್ದಾರೆ. ಬಲ: ಲಾಬನಿ ತನ್ನ ಬದುಕಿನ ಮೊದಲ ಹತ್ತು ವರ್ಷಗಳನ್ನು ತನ್ನ ನಾನಿಯೊಂದಿಗೆ ಕಳೆದರು. ಅವರು ಅಲ್ಲಿ ಕಾಂತಾ ಕಸೂತಿ ಕೌಶಲ ಮತ್ತು ಕಥೆ ಹೇಳುವ ಕಲೆಯನ್ನು ಕಲಿತರು

PHOTO • Courtesy: Labani Jangi
PHOTO • Courtesy: Labani Jangi

ಉತ್ತರ ಪ್ರದೇಶದ ಗಿರಿರಾಜಪುರ ಗ್ರಾಮದಲ್ಲಿ ಲಾಬನಿ ಮತ್ತು ಹಲವು ಇತರ ಕಲಾವಿದರು ಸೇರಿ ಮಕ್ಕಳು ಮತ್ತು ಯುವಕರಿಗಾಗಿ ಖಂಡೇರಾ ಆರ್ಟ್ ಸ್ಪೇಸ್ ಎಂಬ ಸಮುದಾಯ ಕಲಾ ವೇದಿಕೆಯೊಂದನ್ನು ರಚಿಸಿದ್ದಾರೆ. ಬಲ: ಅವರು ಪಂಜೇರಿ ಕಲಾವಿದರ ಸಂಘದ ಸದಸ್ಯರಾಗಿಯೂ ಗುರುತಿಸಿಕೊಂಡಿದ್ದಾರೆ

“ಸಣ್ಣವಳಿದ್ದಾಗ ನಾನು ಪರೀಕ್ಷೆಗಳಲ್ಲಿ ಬಹಳ ಕಡಿಮೆ ಅಂಕಗಳನ್ನು ಗಳಿಸುತ್ತಿದ್ದೆ. ಅದರಲ್ಲೂ ಕೆಲವೊಮ್ಮೆ ವಿಜ್ಞಾನ ಮತ್ತು ಗಣಿತದಂತಹ ವಿಷಯಗಳಲ್ಲಿಯಂತೂ ಸೊನ್ನೆ ಪಡೆಯುತ್ತಿದ್ದೆ. ಆ ದಿನಗಳಲ್ಲಿ ಅಪ್ಪ ನನ್ನ ಭವಿಷ್ಯದ ವಿಷಯದಲ್ಲಿ ಅನುಮಾನ ಹೊಂದಿದ್ದರಾದರೂ, ಅದೇನು ಕಾರಣವೋ ಗೊತ್ತಿರಲಿಲ್ಲ ಅಮ್ಮ ಸದಾ ನನ್ನ ಮೇಲೆ ನಂಬಿಕೆಯಿಟ್ಟಿದ್ದರು. ಅವರು ಯವಾಗಲೂ ಮುಂದಿನ ಸಲ ನೀನು ಒಳ್ಳೆಯ ಅಂಕಗಳನ್ನು ಗಳಿಸುವೆ ಎಂದು ಭರವಸೆ ನೀಡುತ್ತಿದ್ದರು. ಮತ್ತು ಅಮ್ಮ ಬಹಳ ಆಸೆಪಟ್ಟಿದ್ದರಾದರೂ ಅವರಿಗೆ ಕಾಲೇಜು ಮೆಟ್ಟಿಲು ಹತ್ತು ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಅವರು ತನ್ನ ಕಲ್ಪನೆಯ ಬದುಕನ್ನು ನನ್ನ ಮೂಲಕ ನಿಜವಾಗಿಸುತ್ತಿದ್ದಾರೆ. ನಾನು ಕೋಲ್ಕತ್ತಾದಿಂದ ಊರಿಗೆ ಹೋದಾಗಲೆಲ್ಲ, ಅಮ್ಮ ನನ್ನ ಪಕ್ಕ ಬಂದು ಕುಳಿತು ಹೊರಜಗತ್ತಿನ ಕತೆಗಳನ್ನು ಕುತೂಹಲದಿಂದ ತನ್ನೊಳಗೆ ತುಂಬಿಕೊಳ್ಳುತ್ತಾರೆ. ಅವರು ಆ ಜಗತ್ತನ್ನು ನನ್ನ ಕಣ್ಣುಗಳ ಮೂಲಕ ನೋಡುತ್ತಾರೆ.”

ಆದರೆ ಈ ಜಗತ್ತು ಭಯಾನಕವಾದದ್ದು, ವೇಗವಾಗಿ ವಾಣಿಜ್ಯ ರೂಪಕ್ಕೆ ತೆರೆದುಕೊಳ್ಳುತ್ತಿರುವ ಕಲಾ ಜಗತ್ತು ಕೂಡಾ ಇಂದು ಭಯಾನಕವಾಗಿದೆ. “ನನಗೆ ನನ್ನೊಳಗಿನ ಭಾವುಕ ಜಗತ್ತು ಕಳೆದು ಹೋಗಬಹುದೆನ್ನುವ ಭಯ ಸದಾ ಕಾಡುತ್ತಿರುತ್ತದೆ. ದೊಡ್ಡ ಕಲಾವಿದೆಯಾಗಿ ಗುರುತಿಸಿಕೊಳ್ಳುವ ಬಯಕೆಯಲ್ಲಿ ನನ್ನ ಭಾವನೆಗಳ ಜಗತ್ತನ್ನು ತೊರೆಯಲು, ನನ್ನ ಜನರಿಂದ ದೂರವಾಗಲು ಮತ್ತು ನನ್ನ ಕಲೆಯ ನೆಲೆಯಾಗಿರುವ ಮೌಲ್ಯಗಳಿಂದ ದೂರವಾಗಲು ನಾನು ಸಿದ್ಧಳಿಲ್ಲ. ಹಣ ಮತ್ತು ಸಮಯದ ವಿಷಯದಲ್ಲಿ ಹೆಣಗಾಟ ಸಾಕಷ್ಟು ದೊಡ್ಡ ಮಟ್ಟದಲ್ಲೇ ನಡೆಯುತ್ತಿದೆ. ಆದರೆ ಆತ್ಮವನ್ನು ಮಾರಿಕೊಳ್ಳದೆ ಬದುಕುವುದೇ ನಾನು ಬದುಕಿನಲ್ಲಿ ಸಾಧಿಸಲು ಬಯಸುವ ದೊಡ್ಡ ಗುರಿ.”

PHOTO • Courtesy: Labani Jangi
PHOTO • Labani Jangi
PHOTO • Labani Jangi

ಓರ್ವ ಪಂಜೇರಿ ಕಲಾವಿದರ ಒಕ್ಕೂಟದ ಸದಸ್ಯರಾಗಿ, ಲಾಬನಿ ಸಾಂಸ್ಕೃತಿಕ ಮತ್ತು ಬೌದ್ಧಿಕ ವಿಷಯಗಳಿಗೆ ಸಂಬಂಧಿಸಿದಂತೆ ಸಾಂಘಿಕ ಸಂವಾದದಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ಈ ನಿಟ್ಟಿನಲ್ಲಿ ಭಾರತದಾದ್ಯಂತ ನಾಲ್ಕು ಗುಂಪು ಕಲಾಕೃತಿ ಪ್ರದರ್ಶನಗಳಲ್ಲಿ ಭಾಗವಹಿಸಿ ಇತರ ಕಲಾವಿದರೊಂದಿಗೆ ತಮ್ಮ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ

PHOTO • Ritayan Mukherjee

ಈ ಪ್ರಶಸ್ತಿ ವಿಜೇತ ಕಲಾವಿದೆ ಹೇಳುವಂತೆ  ಅವರ ಬದುಕಿನ ಅತಿದೊಡ್ಡ ಹೋರಾಟವೆಂದರೆ, 'ನನ್ನ ಆತ್ಮವನ್ನು ಮಾರುಕಟ್ಟೆಗೆ ಮಾರಾಟ ಮಾಡದೆ ಈ ಜಗತ್ತಿನಲ್ಲಿ ಬದುಕುವುದು' ಎಂದು ಅವರು ಹೇಳುತ್ತಾರೆ

ಮುಖ್ಯ ಚಿತ್ರ: ಜಯಂತಿ ಬುರೂಡಾ
ಅನುವಾದ: ಶಂಕರ. ಎನ್. ಕೆಂಚನೂರು

Pratishtha Pandya

ਪ੍ਰਤਿਸ਼ਠਾ ਪਾਂਡਿਆ PARI ਵਿੱਚ ਇੱਕ ਸੀਨੀਅਰ ਸੰਪਾਦਕ ਹਨ ਜਿੱਥੇ ਉਹ PARI ਦੇ ਰਚਨਾਤਮਕ ਲੇਖਣ ਭਾਗ ਦੀ ਅਗਵਾਈ ਕਰਦੀ ਹਨ। ਉਹ ਪਾਰੀਭਾਸ਼ਾ ਟੀਮ ਦੀ ਮੈਂਬਰ ਵੀ ਹਨ ਅਤੇ ਗੁਜਰਾਤੀ ਵਿੱਚ ਕਹਾਣੀਆਂ ਦਾ ਅਨੁਵਾਦ ਅਤੇ ਸੰਪਾਦਨ ਵੀ ਕਰਦੀ ਹਨ। ਪ੍ਰਤਿਸ਼ਠਾ ਦੀਆਂ ਕਵਿਤਾਵਾਂ ਗੁਜਰਾਤੀ ਅਤੇ ਅੰਗਰੇਜ਼ੀ ਵਿੱਚ ਪ੍ਰਕਾਸ਼ਿਤ ਹੋ ਚੁੱਕਿਆਂ ਹਨ।

Other stories by Pratishtha Pandya

ਪੀ ਸਾਈਨਾਥ People’s Archive of Rural India ਦੇ ਮੋਢੀ-ਸੰਪਾਦਕ ਹਨ। ਉਹ ਕਈ ਦਹਾਕਿਆਂ ਤੋਂ ਦਿਹਾਤੀ ਭਾਰਤ ਨੂੰ ਪਾਠਕਾਂ ਦੇ ਰੂ-ਬ-ਰੂ ਕਰਵਾ ਰਹੇ ਹਨ। Everybody Loves a Good Drought ਉਨ੍ਹਾਂ ਦੀ ਪ੍ਰਸਿੱਧ ਕਿਤਾਬ ਹੈ। ਅਮਰਤਿਆ ਸੇਨ ਨੇ ਉਨ੍ਹਾਂ ਨੂੰ ਕਾਲ (famine) ਅਤੇ ਭੁੱਖਮਰੀ (hunger) ਬਾਰੇ ਸੰਸਾਰ ਦੇ ਮਹਾਂ ਮਾਹਿਰਾਂ ਵਿਚ ਸ਼ੁਮਾਰ ਕੀਤਾ ਹੈ।

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru