ದಿಲ್ಲಿ ಹಮಾರಿ ಹೈ!
ದೇಶ್ ಪರ್ ವಹೀ ರಾಜ್
ಕರೇಗಾ,
ಜೋ ಕಿಸಾನ್ ಮಜ್ದೂರ್
ಕಾ ಬಾತ್ ಕರೇಗಾ!
[ದಿಲ್ಲಿ ನಮ್ಮದು!
ಯಾರು ರೈತರ ಪರವಾಗಿ
ಮಾತಾಡುವರೋ
ಅವರೇ ದೇಶವನ್ನು ಆಳುವರು]
ದೇಶದ ರಾಜಧಾನಿ ಹೊದೆಹಲಿಯ ರಾಮಲೀಲಾ ಮೈದಾನದಲ್ಲಿ ಗುರುವಾರ - ಮಾರ್ಚ್ 14, 2024ರಂದು ಆಯೋಜಿಸಲಾದ ಕಿಸಾನ್ ಮಜ್ದೂರ್ ಮಹಾಪಂಚಾಯತ್‌ನಲ್ಲಿ ಭಾಗವಹಿಸಲು ನೆರೆದಿದ್ದ ಸಾವಿರಾರು ರೈತರು ಈ ಘೋಷಣೆಯನ್ನು ಕೂಗುತ್ತಿದ್ದರು.
ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಮಹಿಳಾ ರೈತರ ಗುಂಪು ರಾಮಲೀಲಾ ಮೈದಾನದಲ್ಲಿ ಪರಿಯೊಂದಿಗೆ ಮಾತನಾಡುತ್ತಾ, "ನಾವು ಮೂರು ವರ್ಷಗಳ ಹಿಂದೆ [2020-21] ಟಿಕ್ರಿ ಗಡಿಯಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ಪ್ರತಿಭಟನೆಯ ಸಮಯದಲ್ಲಿ ಸಹ ಇದ್ದೆವು. ಮತ್ತೆ ಪ್ರತಿಭಟಿಸಬೇಕಾಗಿ ಬಂದರೆ, ನಾವು ಮತ್ತೆ ಬರುತ್ತೇವೆ.”
ರಾಮಲೀಲಾ ಮೈದಾನದ ಬಳಿಯ ರಸ್ತೆಗಳಲ್ಲಿ ಬಸ್‌ಗಳ ಉದ್ದನೆಯ ಸರತಿ ಸಾಲುಗಳಿದ್ದವು, ಇದರಲ್ಲಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಕೆಲವು ಪ್ರದೇಶಗಳಿಂದ ರೈತರು ಇಲ್ಲಿಗೆ ಬಂದಿದ್ದರು. ಬೆಳಿಗ್ಗೆ 9 ಗಂಟೆಯಾಗಿತ್ತು, ಮತ್ತು ಈ ಐತಿಹಾಸಿಕ ಮೈದಾನಕ್ಕೆ ಹೋಗುವ ರಸ್ತೆಗಳ ಕಾಲುದಾರಿಗಳಲ್ಲಿ ಬಸ್ಸುಗಳ ಹಿಂದೆ, ಗಂಡಸರು ಮತ್ತು ಹೆಂಗಸರ ಸಣ್ಣ ಗುಂಪುಗಳು ಇಟ್ಟಿಗೆ ಹೂಡಿ ಸೌದೆ ಒಲೆಯಲ್ಲಿ ಸುಟ್ಟ ರೊಟ್ಟಿಗಳನ್ನು ತಿನ್ನುತ್ತಿದ್ದವು.
ಚೈತನ್ಯದಿಂದ ಕೂಡಿದ್ದ ಈ ಮುಂಜಾನೆ ಅವರಿಗೆ ಈ ಸ್ಥಳವೇ ಅವರ ಊರಾಗಿ ಮಾರ್ಪಟ್ಟಿತ್ತು. ಅಲ್ಲಿದ್ದ ಪುರುಷ ಮತ್ತು ಮಹಿಳಾ ರೈತರು ಧ್ವಜಗಳೊಂದಿಗೆ ರಾಮಲೀಲಾ ಮೈದಾನವನ್ನು ಪ್ರವೇಶಿಸುತ್ತಿದ್ದರು. ‘ಕಿಸಾನ್ ಮಜ್ದೂರ್ ಏಕತಾ ಜಿಂದಾಬಾದ್’ ಎಂಬ ಘೋಷಣೆಗಳಿಂದ ಆಕಾಶವೇ ಪ್ರತಿಧ್ವನಿಸುತ್ತಿತ್ತು! ಬೆಳಿಗ್ಗೆ 10:30ರ ಹೊತ್ತಿಗೆ ನೂರಾರು ರೈತರು ಮತ್ತು ಕೃಷಿ ಕಾರ್ಮಿಕರು ನೆಲದ ಮೇಲೆ ಹಸಿರು ಪಾಲಿಥಿನ್ ಶೀಟುಗಳ ಮೇಲೆ ಸಂಘಟಿತವಾಗಿ ಕುಳಿತು ರೈತ ಕಾರ್ಮಿಕ ಮಹಾಪಂಚಾಯತ್ ಪ್ರಾರಂಭವಾಗುವುದನ್ನು ಕಾತುರದಿಂದ ಕಾಯುತ್ತಿದ್ದರು.
ಮೈದಾನದಲ್ಲಿ ನೀರು ತುಂಬಿದೆ ಎಂದು ಆಡಳಿತ ಅಧಿಕಾರಿಗಳು ತಿಳಿಸಿದ್ದರಿಂದ ರಾಮಲೀಲಾ ಮೈದಾನದ ಬಾಗಿಲುಗಳನ್ನು ಬೆಳಿಗ್ಗೆ ತೆರೆಯಲಾಯಿತು. ಮಹಾಪಂಚಾಯತ್ ಗೆ ಅಡ್ಡಿಪಡಿಸಲು ಉದ್ದೇಶಪೂರ್ವಕವಾಗಿ ನೀರು ತುಂಬಿಸುವ ಯತ್ನ ನಡೆದಿದೆ ಎಂದು ರೈತ ಮುಖಂಡರು ಆರೋಪಿಸಿದರು. ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದೆಹಲಿ ಪೊಲೀಸರು ಸಭೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನು 5,000 ಕ್ಕೆ ಸೀಮಿತಗೊಳಿಸಬೇಕು ಎಂದು ಹೇಳಿದ್ದಾರೆ. ಆದರೆ, ರಾಮಲೀಲಾ ಮೈದಾನದಲ್ಲಿ ಸುಮಾರು ಹತ್ತು ಪಟ್ಟು ಹೆಚ್ಚು ರೈತರು ಸೇರಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಉತ್ತಮ ಉಪಸ್ಥಿತಿಯೂ ಇತ್ತು.
ಫೆಬ್ರವರಿ 21ರಂದು ಪಟಿಯಾಲಾದ ಧಾಭಿ ಗುಜ್ರಾನ್‌ನಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದಾಗ ತಲೆಗೆ ಗಾಯವಾಗಿ ಸಾವನ್ನಪ್ಪಿದ ಬಟಿಂಡಾ ಜಿಲ್ಲೆಯ ಬಲ್ಲೋ ಗ್ರಾಮದ ರೈತ ಶುಭಕರಣ್ ಸಿಂಗ್ ಅವರ ಸ್ಮರಣೆಯಲ್ಲಿ ಮೌನ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಅಧಿವೇಶನ ಪ್ರಾರಂಭವಾಯಿತು.
ಮಹಾಪಂಚಾಯತ್‌ನಲ್ಲಿ ಮೊದಲಿಗೆ ಡಾ.ಸುನೀಲಂ ಅವರು ಸಂಯುಕ್ತ ಕಿಸಾನ್ ಮೋರ್ಚಾದ (ಎಸ್‌ಕೆಎಂ) ನಿರ್ಣಯ ಪತ್ರವನ್ನು ಓದಿದರು. ವೇದಿಕೆಯಲ್ಲಿ SKM ಮತ್ತು ಅದರ ಸಹವರ್ತಿ ಸಂಘಟನೆಗಳ 25ಕ್ಕೂ ಹೆಚ್ಚು ಮುಖಂಡರು ಉಪಸ್ಥಿತರಿದ್ದರು; ಮೂವರು ಮಹಿಳಾ ನಾಯಕಿಯರಲ್ಲಿ ಮೇಧಾ ಪಾಟ್ಕರ್ ಕೂಡ ಸೇರಿದ್ದರು. ಬೆಂಬಲ ಬೆಲೆಗೆ ಕಾನೂನಾತ್ಮಕ ಗ್ಯಾರಂಟಿ ಮತ್ತು ಇತರ ವಿವಿಧ ಬೇಡಿಕೆಗಳ ಕುರಿತು ಎಲ್ಲರೂ 5ರಿಂದ 10 ನಿಮಿಷಗಳ ಕಾಲ ಮಾತನಾಡಿದರು.
2024ರ ಫೆಬ್ರವರಿಯಲ್ಲಿ ಪಂಜಾಬ್ ಮತ್ತು ಹರಿಯಾಣದ ಶಂಭು ಮತ್ತು ಖನೌರಿ ಗಡಿಗಳಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಅಶ್ರುವಾಯು ಶೆಲ್ ಮತ್ತು ಲಾಠಿಚಾರ್ಜ್ ರೀತಿಯ ಕೇಂದ್ರ ಸರ್ಕಾರದ ದಮನಕಾರಿ ಕ್ರಮಗಳನ್ನು ಕೈಗೊಂಡ ಬಗ್ಗೆ ರೈತರು ಆಕ್ರೋಶಿತರಾಗಿದ್ದಾರೆ. ಓದಿ: ‘ ನಾನು ಶಂಭು ಗಡಿಯಲ್ಲಿ ಬಂಧಿಯಾಗಿದ್ದೇನೆ ʼ
ರೈತರು ದೆಹಲಿಗೆ ಪ್ರವೇಶಿಸುವುದನ್ನು ತಡೆಯಲು ಸರ್ಕಾರ ವಿಧಿಸಿರುವ ರಸ್ತೆ ತಡೆ ಮತ್ತು ವಿವಿಧ ನಿರ್ಬಂಧಗಳಿಗೆ ಪ್ರತಿಕ್ರಿಯಿಸಿದ ಭಾಷಣಕಾರರೊಬ್ಬರು ಬಲವಾದ ಕರೆ ನೀಡಿದರು: “ದಿಲ್ಲಿ ಹಮಾರಾ ಹೈ,. ದೇಶ್ ಪರ್ ವಹೀ ರಾಜ್ ಕರೇಗಾ, ಜೋ ಕಿಸಾನ್ ಮಜ್ದೂರ್ ಕಾ ಬಾತ್ ಕರೇಗಾ [ದೆಹಲಿ ನಮ್ಮದು. ರೈತರು ಮತ್ತು ಕಾರ್ಮಿಕರ ಬಗ್ಗೆ ಮಾತನಾಡುವವರು ಮಾತ್ರವೇ ದೇಶವನ್ನು ಆಳಲು ಸಾಧ್ಯ!]
ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಕರ್ನಾಟಕ, ಕೇರಳ, ಮಧ್ಯಪ್ರದೇಶ ಮತ್ತು ಉತ್ತರಾಖಂಡದ ರೈತ ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರು ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿಯಲ್ಲಿ ಕೆಲಸ ಮಾಡುತ್ತಿರುವ ಕೋಮುವಾದಿ, ಸರ್ವಾಧಿಕಾರಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ರಾಕೇಶ್ ಟಿಕಾಯತ್ ತಮ್ಮ ಭಾಷಣದಲ್ಲಿ, “ಜನವರಿ 22, 2021ರ ನಂತರ ಸರ್ಕಾರವು ರೈತ ಸಂಘಟನೆಗಳೊಂದಿಗೆ ಮಾತನಾಡಿಲ್ಲ. ಮಾತುಕತೆ ನಡೆಯದೇ ಸಮಸ್ಯೆಗಳು ಹೇಗೆ ಬಗೆಹರಿಯುತ್ತವೆ?” ಎಂದು ಕೇಳಿದರು. ಟಿಕಾಯತ್ ಅವರು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನ ರಾಷ್ಟ್ರೀಯ ವಕ್ತಾರ ಮತ್ತು ಯುನೈಟೆಡ್ ಕಿಸಾನ್ ಮೋರ್ಚಾದ ನಾಯಕ.
ಅಖಿಲ ಭಾರತ ಕಿಸಾನ್ ಸಭಾದ (ಎಐಕೆಎಸ್) ಪ್ರಧಾನ ಕಾರ್ಯದರ್ಶಿ ಡಾ.ವಿಜು ಕೃಷ್ಣನ್ ಮಾತನಾಡಿ, “2020-21ನೇ ಸಾಲಿನಲ್ಲಿ ರೈತ ಚಳವಳಿಯ ಕೊನೆಯ ದಿನಗಳಲ್ಲಿ ನರೇಂದ್ರ ಮೋದಿ ಸರಕಾರವು ಎಂಎಸ್‌ಪಿ [ಕನಿಷ್ಠ ಬೆಂಬಲ ಬೆಲೆ] ನೀಡುವುದಾಗಿ ಭರವಸೆ ನೀಡಿತ್ತು. ಕಾನೂನುಬದ್ಧವಾಗಿ C2 + 50 ಪ್ರತಿಶತಕ್ಕೆ ನಿಗದಿಪಡಿಸಲಾಗಿತ್ತು. ಆ ಭರವಸೆ ಜಾರಿಯಾಗಿಲ್ಲ. "ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಅವರು ಭರವಸೆ ನೀಡಿದ್ದರು, ಆದರೆ ಅದು ಇನ್ನೂ ಈಡೇರಿಲ್ಲ." ಓದಿರಿ : ರೈತ ಆಂದೋಲನದ ಸಂಪೂರ್ಣ ವರದಿ
ವೇದಿಕೆಯಲ್ಲಿದ್ದ ಕೃಷ್ಣನ್ ಮಾತನಾಡಿ, ವರ್ಷವಿಡೀ ನಡೆದ ಅಂದಿನ ರೈತ ಪ್ರತಿಭಟನೆಯಲ್ಲಿ ಮೃತಪಟ್ಟ 736 ರೈತರ ಕುರಿತು ಪ್ರಸ್ತಾಪಿಸಿದರು, ಅವರ ಕುಟುಂಬಗಳಿಗೆ ಪರಿಹಾರ ನೀಡುವ ಸರ್ಕಾರದ ಭರವಸೆ ಇನ್ನೂ ಈಡೇರಿಲ್ಲ. ಧರಣಿ ನಿರತರ ಮೇಲೆ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯುವ ಭರವಸೆ ಇನ್ನೂ ಈಡೇರಿಲ್ಲ ಎಂದರು. ಮಹಾಪಂಚಾಯತ್ ವೇಳೆ ಪರಿ ಜತೆ ಮಾತನಾಡಿದ ಅವರು, ‘ಭರವಸೆಯಂತೆ ವಿದ್ಯುತ್ ಕಾಯ್ದೆಯಲ್ಲಿ ಮಾಡಿರುವ ತಿದ್ದುಪಡಿಗಳನ್ನೂ ಹಿಂಪಡೆಯಬೇಕು, ಅದೂ ಆಗಿಲ್ಲ” ಎಂದು ಹೇಳಿದರು.
ಸಂಯುಕ್ತ ಕಿಸಾನ್ ಮೋರ್ಚಾದ ಭಾರೀ ವಿರೋಧದ ನಡುವೆಯೂ ಸರ್ಕಾರದ ಸಚಿವ ಅಜಯ್ ಮಿಶ್ರಾ ತೇನಿ ಅವರು ಕಚೇರಿಯಲ್ಲಿ ಮುಂದುವರಿದಿರುವ ವಿಷಯವನ್ನು ಕೃಷ್ಣನ್ ಪ್ರಸ್ತಾಪಿಸಿದರು, ಅವರ ಪುತ್ರ ಆಶಿಶ್ ಮಿಶ್ರಾ ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ಐವರು ರೈತರು ಮತ್ತು ಪತ್ರಕರ್ತರ ಮೇಲೆ ಕಾರು ಹತ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
“ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷ ಚುನಾಯಿತರಾಗಲಿ, ರೈತರು ಮತ್ತು ಕಾರ್ಮಿಕರ ಸಮಸ್ಯೆಗಳು ಇತ್ಯರ್ಥವಾಗುವವರೆಗೆ ದೇಶದ ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿರುವ ಚಳವಳಿಗಳು ಮುಂದುವರಿಯುತ್ತವೆ” ಎಂದು ಟಿಕಾಯತ್ ಹೇಳಿದರು.
ತಮ್ಮ ಸಂಕ್ಷಿಪ್ತ ಹೇಳಿಕೆಯ ಕೊನೆಯಲ್ಲಿ, ರಾಕೇಶ್ ಟಿಕಾಯತ್ ಅವರು ಮಹಾಪಂಚಾಯತ್‌ನ ನಿರ್ಣಯಗಳನ್ನು ಅಂಗೀಕರಿಸಿ ತಮ್ಮ ಕೈಗಳನ್ನು ಮೇಲಕ್ಕೆತ್ತಲು ಅಲ್ಲಿದ್ದ ಎಲ್ಲರಿಗೂ ಕರೆ ನೀಡಿದರು. ಮಧ್ಯಾಹ್ನ 1:30ಕ್ಕೆ, ಸಾವಿರಾರು ರೈತರು ಮತ್ತು ಕಾರ್ಮಿಕರು ಅಲ್ಲಿ ಜಮಾಯಿಸಿ ಪ್ರಸ್ತಾವನೆಗಳನ್ನು ಬೆಂಬಲಿಸಿ ಧ್ವಜಗಳೊಂದಿಗೆ ಕೈ ಬೀಸಿದರು. ಕಣ್ಣು ಹಾಯಿಸಿದಷ್ಟು ದೂರದಲ್ಲಿ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಕೆಂಪು, ಹಳದಿ, ಹಸಿರು, ಬಿಳಿ ಮತ್ತು ನೀಲಿ ಬಣ್ಣದ ಪೇಟಗಳು, ಗಮ್ಚಾಗಳು, ದುಪಟ್ಟಾಗಳು ಮತ್ತು ಟೋಪಿಗಳು ಮಾತ್ರವೇ ಗೋಚರಿಸುತ್ತಿದ್ದವು.
ಅನುವಾದ: ಶಂಕರ. ಎನ್. ಕೆಂಚನೂರು