ಸುಮಾರು 200 ವರ್ಷಗಳಷ್ಟು ಪುರಾತನವಾದ ಶ್ರೀ ಭದ್ರೀಯ ಮಾತಾಜಿ ದೇವಾಲಯದ ಮೆಟ್ಟಿಲುಗಳನ್ನು ಇಳಿಯುತ್ತಿದ್ದಂತೆ ಹಾಡುಗಾರರ ಸ್ವರ ಮಂದವಾಗುತ್ತಾ ಹೋಯಿತು. ಇದ್ದಕ್ಕಿದ್ದಂತೆ ಎಲ್ಲಾ ಶಬ್ದಗಳೂ ಸಂಪೂರ್ಣ ಮಾಯವಾಗುವಾಗ ನಾವು 20 ಅಡಿ ಕೆಳಗೆ ನೆಲದ ಮೇಲಿದ್ದೆವು.
ಮುಂದೆ 15,000 ಚದರ ಅಡಿಗಳಷ್ಟು ವಿಸ್ತಾರವಾದ ಚಕ್ರವ್ಯೂಹದಂತ ಗ್ರಂಥಾಲಯವೊಂದು ತೆರೆದುಕೊಳ್ಳುತ್ತದೆ. ಕಿರಿದಾದ ಕಾರಿಡಾರ್‌ಗಳಲ್ಲಿ 562 ಕಪಾಟುಗಳನ್ನು ಮೇಲೆ ಎರಡು ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಜೋಡಿಸಲಾಗಿತ್ತು. ಲೆದರ್- ಬೈಂಡ್ ಮಾಡಿರುವ ಪುಸ್ತಕಗಳು, ತೊಗಟೆ ಮೇಲೆ ಬರೆದಿರುವ ಹಳೆಯ ಹಸ್ತಪ್ರತಿ, ಹಿಂದೂ ಧರ್ಮ, ಇಸ್ಲಾಂ, ಕ್ರಿಶ್ಚಿಯಾನಿಟಿ ಮತ್ತು ಇತರ ಧರ್ಮಗಳಿಂದ ಹಿಡಿದು ಕಾನೂನು, ವೈದ್ಯಕೀಯ, ತತ್ವಶಾಸ್ತ್ರ, ಭೂಗೋಳ, ಇತಿಹಾಸ ಮೊದಲಾದ ಬಗ್ಗೆ ಇರುವ ಪುಸ್ತಕಗಳು ಇಲ್ಲಿವೆ. ಫಿಕ್ಷನ್ ಸಾಹಿತ್ಯಗಳಿಗೆ ಸಂಬಂಧಿಸಿದಂತೆ ಕ್ಲಾಸಿಕ್ ಹಾಗೂ ಹೊಸ ಹೊಸ ಕಾದಂಬರಿಗಳು ಇಲ್ಲಿವೆ. ಹೆಚ್ಚಿನ ಪುಸ್ತಕಗಳು ಹಿಂದಿಯಲ್ಲಿದ್ದು, ಕೆಲವು ಇಂಗ್ಲಿಷ್ ಮತ್ತು ಸಂಸ್ಕೃತದಲ್ಲಿವೆ.
ಈ ಗ್ರಂಥಾಲಯದ ಆಲೋಚನೆ ಪಂಜಾಬ್‌ನ ಧಾರ್ಮಿಕ ವಿದ್ವಾಂಸರಾದ ಹರ್ವಂಶ್ ಸಿಂಗ್ ನಿರ್ಮಲ್ ಅವರದ್ದು. 25 ವರ್ಷಗಳಿಂದ ದೇವಾಲಯದ ಆವರಣದಲ್ಲಿರುವ ಗುಹೆಯಲ್ಲಿ ಏಕಾಂತದಲ್ಲಿದ್ದ ಇವರು ಅದರ ಕೆಳಗೆ ಗ್ರಂಥಾಲಯವನ್ನು ನಿರ್ಮಿಸಲು ನಿರ್ಧರಿಸಿದರು ಎಂದು ಹೇಳಲಾಗುತ್ತದೆ. ಆದರೆ 2010 ರಲ್ಲಿ, ಶಿಕ್ಷಣ ಮತ್ತು ಪಶು ಕಲ್ಯಾಣಕ್ಕಾಗಿ ಹಣವನ್ನು ಸಂಗ್ರಹಿಸಿದ ನಂತರವೇ, ಅವರು ನಿಧನರಾದರು.
“ಅವರು ಮಹಾನ್ ಮಾನವತಾವಾದಿಯಾಗಿದ್ದರು. ಎಲ್ಲಾ ಧರ್ಮಗಳು ಒಂದೇ ನೀತಿಯನ್ನು ಹೇಳುತ್ತವೆ: ಮನುಷ್ಯನ ಚರ್ಮದ ಬಣ್ಣ ಬೇರೆ ಬೇರೆ ಇರಬಹುದು, ಕೂದಲಿನ ಬಣ್ಣ ವಿಭಿನ್ನವಾಗಿರಬಹುದು, ಆಂತರ್ಯದಲ್ಲಿ ನಾವೆಲ್ಲರೂ ಒಂದೇ,” ಎಂದು ದೇವಸ್ಥಾನ ಮತ್ತು ಗ್ರಂಥಾಲಯದ ಟ್ರಸ್ಟ್ ಶ್ರೀ ಜಗದಂಬಾ ಸೇವಾ ಸಮಿತಿಯ ಕಾರ್ಯದರ್ಶಿ ಜುಗಲ್ ಕಿಶೋರ್ ಹೇಳುತ್ತಾರೆ. 40,000 ಕ್ಕೂ ಹೆಚ್ಚು ಗೋವುಗಳಿಗೆ ಈ ಟ್ರಸ್ಟ್ ಆಶ್ರಯ ನೀಡಿದೆ.






















