ಜಸ್‌ದೀಪ್ ಕೌರ್ ಅವರಿಗೆ ತನ್ನ ಓದಿನ ವಿಷಯಕ್ಕಾಗಿ ಒಂದು ಸ್ಮಾರ್ಟ್ ಫೋನ್ ಖರೀದಿಸಬೇಕಿತ್ತು. ಇದಕ್ಕಾಗಿ ಅವರ ಪೋಷಕರು ಅವರಿಗೆ 10,000 ರೂ.ಗಳನ್ನು ಸಾಲವಾಗಿ ನೀಡಿದರು.
ಪಂಜಾಬಿನ ಮುಕ್ತಸರ್ ಸಾಹಿಬ್ ಜಿಲ್ಲೆಯಲ್ಲಿ ಈ ದಲಿತ ಯುವತಿಯಂತೆಯೇ, ಹೀಗೆ ಕುಟುಂಬಕ್ಕೆ ನೆರವಾಗುವ ಸಲುವಾಗಿ ಹೊಲದಲ್ಲಿ ದುಡಿಯುವ ವಿದ್ಯಾರ್ಥಿಗಳ ಸಂಖ್ಯೆ ಬಹಳಷ್ಟಿದೆ.
"ನಾವೇನೋ ಖುಷಿಗಾಗಿ ಹೀಗೆ ಹೊಲದಲ್ಲಿ ದುಡಿಯುವುದಲ್ಲ, ನಮ್ಮ ಕುಟುಂಬದ ಅಸಹಾಯಕತೆ ನಮ್ಮನ್ನು ಹೀಗೆ ದುಡಿಯುವ ಅನಿವಾರ್ಯತೆಗೆ ನೂಕಿದೆ" ಎನ್ನುತ್ತಾರೆ ಜಸ್ದೀಪ್. ಅವರ ಕುಟುಂಬ ಮಜಹಬಿ ಸಿಖ್ ಎನ್ನುವ ಸಮುದಾಯಕ್ಕೆ ಸೇರಿದೆ. ಈ ಸಮುದಾಯವನ್ನು ಪಂಜಾಬಿನಲ್ಲಿ ಪರಿಶಿಷ್ಟ ಜಾತಿಗಳಡಿ ಪಟ್ಟಿ ಮಾಡಲಾಗಿದೆ. ಅವರ ಸಮುದಾಯದ ಬಹುತೇಕ ಜನರ ಬಳಿ ಸ್ವಂತ ಭೂಮಿಯಿಲ್ಲ, ಹೀಗಾಗಿ ಅವರು ಮೇಲ್ಜಾತಿಗರ ಭೂಮಿಯಲ್ಲಿ ಕೆಲಸ ಮಾಡುತ್ತಾರೆ.
ಜಸ್ದೀಪ್ ಅವರ ಪೋಷಕರು ಆಕೆಗೆ ನೀಡಿದ ಹಣವು ಮೈಕ್ರೋ ಫೈನಾನ್ಸ್ ಕಂಪನಿಯಿಂದ ಹಸು ಖರೀದಿಸಲು ಪಡೆದ 38,000 ರೂಪಾಯಿ ಸಾಲದ ಒಂದು ಭಾಗವಾಗಿತ್ತು. ಇಲ್ಲಿ ಹಸುವಿನ ಹಾಲನ್ನು ಮಾರಿದರೆ ಸುಮಾರು 40 ರೂಪಾಯಿಯ ತನಕ ದೊರೆಯುತ್ತದೆ. ಇದು ಕುಟುಂಬದ ಮನೆ ಖರ್ಚಿಗಾಗುತ್ತದೆ ಎನ್ನುವ ಯೋಚನೆಯಿಂದ ಕುಟುಂಬ ಹಸು ಖರೀದಿಸಲು ನಿರ್ಧರಿಸಿತು. ಮುಕ್ತಸರ್ ಸಾಹಿಬ್ ಜಿಲ್ಲೆಯಲ್ಲಿನ ಆಕೆಯ ಊರಾದ ಖುಂಡೆ ಹಲಾಲ್ ಗ್ರಾಮದಲ್ಲಿ ದುಡಿಮೆಯ ಅವಕಾಶಗಳು ಬಹಳ ಕಡಿಮೆ. ಹೀಗಾಗಿ ಇಲ್ಲಿನ ಶೇಕಡಾ 33ರಷ್ಟು ಜನರು ಕೃಷಿ ಕಾರ್ಮಿಕರು.
ಸ್ಮಾರ್ಟ್ ಫೋನ್ ಎನ್ನುವುದು ಜಸ್ದೀಪ್ ಪಾಲಿಗೆ ಅಮೂಲ್ಯ ವಸ್ತುವಾಗಿ ಒದಗಿದೆ. ಅವರು ತನ್ನ ಗದ್ದೆ ಕೆಲಸದ ನಡುವೆ ದೊರೆತ ಎರಡು ಗಂಟೆಗಳ ಕಾಲದ ವಿರಾಮದ ಸಮಯದಲ್ಲಿ - ಜೂನ್ ತಿಂಗಳಲ್ಲಿ - ತನ್ನ ಕಾಲೇಜು ಪರೀಕ್ಷೆಗೆ ಈ ಫೋನ್ ಮೂಲಕವೇ ಹಾಜರಾದರು. "ನಾನು ಕೆಲಸ ಬಿಟ್ಟು ಹೋಗುವ ಪರಿಸ್ಥಿತಿಯಲ್ಲಿ ಇದ್ದಿರಲಿಲ್ಲ. ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗಿದ್ದರೆ ನನ್ನ ಒಂದು ದಿನದ ಸಂಪಾದನೆ ಕಳೆದುಕೊಳ್ಳಲು ತಯಾರಿರಬೇಕಿತ್ತು. ಅದು ನನ್ನಿಂದ ಸಾಧ್ಯವಿಲ್ಲ" ಎಂದು ಅವರು ಹೇಳಿದರು.



















