"ನಾನು 108 [ಆಂಬ್ಯುಲೆನ್ಸ್ ಸೇವೆ] ಗೆ ಅನೇಕ ಬಾರಿ ಕರೆ ಮಾಡಲು ಪ್ರಯತ್ನಿಸಿದೆ. ಆದರೆ ಅದರ ಲೈನ್ ಬ್ಯುಸಿ ಇರುತ್ತಿತ್ತು ಅಥವಾ ನಾಟ್ ರೀಚಬಲ್ ಆಗಿರುತ್ತಿತ್ತು.” ಅವರ ಪತ್ನಿ ಗರ್ಭಾಶಯದ ಸೋಂಕಿನಿಂದ ಬಳಲುತ್ತಿದ್ದರು. ಔಷಧಿಗಳನ್ನು ತೆಗೆದುಕೊಂಡಿದ್ದರೂ, ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ರಾತ್ರಿಯ ಹೊತ್ತಿಗೆ ಅವರಿಗೆ ನೋವು ವಿಪರೀತವಾಗಿತ್ತು. ಗಣೇಶ್ ಪಹಾಡಿಯಾ ವೈದ್ಯಕೀಯ ಸಹಾಯ ಪಡೆಯಲು ಮತ್ತೆ ಮತ್ತೆ ಪ್ರಯತ್ನಿಸುತ್ತಿದ್ದರು.
“ಕೊನೆಗೆ ನಾನು ಸಹಾಯ ಸಿಗಬಹುದೆನ್ನುವ ನಿರೀಕ್ಷೆಯೊಂದಿಗೆ ಸ್ಥಳೀಯ ಸಚಿವರ ಸಹಾಯಕರೊಬ್ಬರನ್ನು ಸಂಪರ್ಕಿಸಿದೆ. “ಅವರು ತಮ್ಮ [ಚುನಾವಣಾ] ಪ್ರಚಾರದ ಸಮಯದಲ್ಲಿ ನಮಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು" ಎಂದು ಗಣೇಶ್ ನೆನಪಿಸಿಕೊಳ್ಳುತ್ತಾರೆ. ಆದರೆ ಆ ಸಹಾಯಕ ತಾನು ಊರಿನಲ್ಲಿಲ್ಲ ಎಂದು ಹೇಳಿದ. “ಅವರು ನನಗೆ ಸಹಾಯ ಮಾಡದೆ ತಪ್ಪಿಸಿಕೊಳ್ಳಲು ನೋಡುತ್ತಿದ್ದರು.”
“ಅಂದು ಆಂಬುಲೆನ್ಸ್ ಸಿಕ್ಕಿದ್ದರೆ ಅವಳನ್ನು ಬೊಕಾರೊ ಅಥವಾ ರಾಂಚಿಯಂತಹ [ದೊಡ್ಡ ನಗರಗಳ] ತ್ತಮ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಬಹುದಿತ್ತು" ಎಂದು ಗಣೇಶ್ ಹೇಳುತ್ತಾರೆ. ಕೊನೆಗೆ ಅವರು ತನ್ನ ಹೆಂಡತಿಯನ್ನು ಸಂಬಂಧಿಕರೊಬ್ಬರ ಬಳಿ 60,000 ಸಾಲ ಪಡೆದು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಿದರು.
“ಚುನಾವಣೆಯ ಸಮಯದಲ್ಲಿ ಅವರು ಏನೆಲ್ಲಾ ಭರವಸೆಗಳನ್ನು ನೀಡುತ್ತಾರೆ. ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ ನಮ್ಮನ್ನು ಗೆಲ್ಲಿಸಿ ಎನ್ನುತ್ತಾರೆ. ಆದರೆ ಗೆದ್ದ ನಂತರ ಅವರನ್ನು ಬೇಟಿಯಾಗಲು ಹೋದರೆ ಅವರ ಬಳಿ ನಿಮ್ಮನ್ನು ಭೇಟಿಯಾಗುವಷ್ಟು ಸಮಯವಿರುವುದಿಲ್ಲ” ಎಂದು ಗ್ರಾಮದ ಮುಖ್ಯಸ್ಥರೂ ಆಗಿರುವ 42 ವರ್ಷದ ಅವರು ಹೇಳುತ್ತಾರೆ. ತನ್ನ ಪಹಾಡಿಯಾ ಸಮುದಾಯದ ಜನರಿಗೆ ಮೂಲಭೂತ ಸೌಕರ್ಯ ನೀಡುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಅವರು ಹೇಳುತ್ತಾರೆ.
ಧನಗಢಾ ಎನ್ನುವುದು ಪಾಕುರ್ ಜಿಲ್ಲೆಯ ಹಿರಣ್ ಪುರ್ ವಿಭಾಗದ ಸಣ್ಣ ಊರು. ಇಲ್ಲಿ ಪಹಾಡಿಯಾ ಸಮುದಾಯಕ್ಕೆ ಸೇರಿದ 50 ಕುಟುಂಬಗಳು ನೆಲೆಸಿವೆ. ಈ ಹಳ್ಳಿಯನ್ನು ತಲುಪಲು, ರಾಜಮಹಲ್ ಶ್ರೇಣಿಯ ಬೆಟ್ಟದ ಬದಿಯಲ್ಲಿರುವ ಈ ದುರ್ಗಮ ನೆಲೆಯನ್ನು ತಲುಪಲು ಕಳಪೆ ನಿರ್ವಹಣೆ ಹೊಂದಿರುವ ರಸ್ತೆಯಲ್ಲಿ ಎಂಟು ಕಿಲೋಮೀಟರ್ ಪ್ರಯಾಣ ಮಾಡಬೇಕು.
“ನಮ್ಮ ಊರಿನ ಸರ್ಕಾರಿ ಶಾಲೆ ದುರ್ಬಲಗೊಂಡಿದೆ. ನಾವು ಹೊಸ ಶಾಲೆ ಕೇಳಿದ್ದೆವು, ಅದು ಎಲ್ಲಿದೆ? ಎಂದು ಗಣೇಶ ಕೇಳುತ್ತಾರೆ. ಸಮುದಾಯದ ಹೆಚ್ಚಿನ ಮಕ್ಕಳು ಶಾಲೆಗೆ ದಾಖಲಾಗಿಲ್ಲದ ಕಾರಣ ಸರ್ಕಾರವು ಕಡ್ಡಾಯಗೊಳಿಸಿರುವ ಮಧ್ಯಾಹ್ನದ ಬಿಸಿಯೂಟದ ಯೋಜನೆಯ ಲಾಭ ಅವರಿಗೆ ಸಿಗುತ್ತಿಲ್ಲ.










