ಮೊಹಮ್ಮದ್ ಅಸ್ಲಾಮ್‌ರವರು ಕರಗಿರುವ ಬಿಸಿ ಹಿತ್ತಾಳೆಯನ್ನು ಸಂಚಾಗೆ (ಅಚ್ಚು ಪಾತ್ರೆ) ಸುರಿಯುತ್ತಿದ್ದಂತೆ ಸಣ್ಣಸಣ್ಣ ಕಣಗಳು ಗಾಳಿಯಲ್ಲಿ ಹಾರುತ್ತವೆ. ಹೀಗೆ ಹಿತ್ತಾಳೆಯಿಂದ ಗಟ್ಟಿಯಾದ ಚಂದನ್ ಪಿಯಾಲ್ (ಪೂಜೆಗೆ ಬಳಸುವ ಹರಿವಾಣ) ತಯಾರಾಗುತ್ತದೆ.
ಹಿತ್ತಾಳೆಯ ಕೆಲಸದಲ್ಲಿ ಅನುಭವಿಯಾಗಿರುವ ಲೋಹ ಕುಶಲಕರ್ಮಿ ಅಸ್ಲಾಮ್‌ರವರ ಕೈಗಳು ಕೊಂಚವೂ ಅಲ್ಲಾಡದೆ, ಜಾಗ್ರತೆಯಿಂದ ಕೆಲಸ ಮಾಡುತ್ತವೆ. ಬಿಸಿ ಹಿತ್ತಾಳೆಯನ್ನು ಸುರಿಯುವಾಗ ಕಂಟೈನರ್ ಮೇಲೆ ಒತ್ತಡವನ್ನು ಅಳೆಯುತ್ತಾರೆ, ಒಳಗೆ ಮರಳನ್ನು ಹಾಕಲಾಗಿದೆಯೇ ಎಂದು ಎಚ್ಚರದಿಂದ ನೋಡುತ್ತಾರೆ. ಇದು ದ್ರವ ಹಿತ್ತಾಳೆ ಚೆಲ್ಲದಂತೆ ತಡೆದು, ಉತ್ಪನ್ನಕ್ಕೆ ಸರಿಯಾದ ಆಕಾರವನ್ನು ನೀಡುತ್ತದೆ.
"ನಿಮ್ಮ ಕೈಗಳು ಅಲುಗಾಡಬಾರದು, ಇಲ್ಲದಿದ್ದರೆ ಸಂಚಾದ ಒಳಗಿನ ರಚನೆಗೆ ಧಕ್ಕೆಯಾಗುತ್ತದೆ. ಆದತ್[ಅಚ್ಚಿನ ಉತ್ಪನ್ನ] ಹಾಳಾಗುತ್ತದೆ,” ಎಂದು 55 ವರ್ಷ ವಯಸ್ಸಿನ ಅಸ್ಲಾಮ್ ಹೇಳುತ್ತಾರೆ. ಹಾಗಿದ್ದೂ ಕೂಡ, ಸೋರುವ ಮರಳು ಗಾಳಿಯಲ್ಲಿ ಏಳುವ ಕಣಗಳಷ್ಟು ಅವರನ್ನು ಚಿಂತೆಗೆ ಈಡು ಮಾಡುವುದಿಲ್ಲ. "ಇದನ್ನು ನೋಡಿದ್ರಾ? ಇದು ಹಿತ್ತಾಳೆ ಮತ್ತು ಇದಿನ್ನು ವೇಸ್ಟ್. ನಾವು ಇದರ ವೆಚ್ಚವನ್ನೂ ಭರಿಸಬೇಕಾಗುತ್ತದೆ,” ಎಂದು ಅವರು ಹೇಳುತ್ತಾರೆ. ಅವರು ತಯಾರಿಸುವ ಪ್ರತಿ 100 ಕಿಲೋಗ್ರಾಂಗಳಷ್ಟು ಹಿತ್ತಾಳೆಯಲ್ಲಿ, ಸುಮಾರು 3 ಕಿಲೋಗಳಷ್ಟು ಗಾಳಿಯಲ್ಲಿ ಹಾರಿಹೋಗುತ್ತದೆ. ಅಂದರೆ ಸುಮಾರು 50 ರೂಪಾಯಿ ಗಾಳಿಯಲ್ಲಿ ಮಾಯವಾಗುತ್ತದೆ.
ಮೊರಾದಾಬಾದ್‌ನ ಪೀರ್ಜಾದಾ ಪ್ರದೇಶದಲ್ಲಿರುವ ಇಂತಹ ಅನೇಕ ಭಟ್ಟಿಗಳಲ್ಲಿ (ಕುಲುಮೆಗಳು) ಕೆಲಸ ಮಾಡುವ ಅನೇಕ ಕುಶಲಕರ್ಮಿಗಳಲ್ಲಿ ಅಸ್ಲಾಮ್ ಕೂಡ ಒಬ್ಬರು. ಈ ಪ್ರದೇಶ ಹಿತ್ತಾಳೆ ಕೆಲಸಕ್ಕೆ ಹೆಸರುವಾಸಿಯಾಗಿದೆ. ಕರಕುಶಲತೆಯನ್ನು ಸ್ಥಳೀಯವಾಗಿ ದಲಾಯಿ ಕ ಕಾಮ್ ಅಥವಾ ಎರಕಹೊಯ್ಯುವುದು ಎಂದು ಕರೆಯಲಾಗುತ್ತದೆ. ಈ ಕೆಲಸದಲ್ಲಿ ಕುಶಲಕರ್ಮಿಗಳು ಹಿತ್ತಾಳೆಯ ಸಿಲ್ಲಿ ತುಂಡುಗಳನ್ನು (ಇಂಗಟ್) ಕರಗಿಸಿ ಬೇರೆ ಬೇರೆ ಆಕಾರಗಳಿಗೆ ಅಚ್ಚು ಹಾಕುತ್ತಾರೆ.
ಕಲ್ಲಿದ್ದಲು, ಮರಳು, ಮರದ ಹಲಗೆಗಳು, ಕಬ್ಬಿಣದ ರಾಡ್‌ಗಳು, ಹಿಡಿಕೆ ಮತ್ತು ವಿವಿಧ ಗಾತ್ರದ ಇಕ್ಕುಳಗಳು - ಇವು ಇವರು ಕೆಲಸಕ್ಕೆ ಬಳಸುವ ಸಲಕರಣೆಗಳು. ಅಸ್ಲಾಮ್ ಮತ್ತು ಅವರ ಸಹಾಯಕ ರಯೀಸ್ ಜಾನ್‌ರವರ ಸುತ್ತ ದಿನದ 12 ಗಂಟೆಗಳ ಕಾಲ ಇವು ಹರಡಿಕೊಂಡಿರುತ್ತವೆ. ಅಸ್ಲಾಮ್ ಅವರು ಸದಾ ಜನಸಂದಣಿಯಿಂದ ಕೂಡಿರುವ ಈ ಐದು ಚದರ ಅಡಿಯ ಜಾಗಕ್ಕೆ ಪ್ರತಿ ತಿಂಗಳು 1,500 ರುಪಾಯಿ ಬಾಡಿಗೆ ಕೊಡುತ್ತಾರೆ.




















