ಮಮತಾ ಪರೇದ್ ಪರಿಯಲ್ಲಿ ನಮ್ಮ ಸಹೋದ್ಯೋಗಿಯಾಗಿದ್ದರು. ಅಪರೂಪದ ಪ್ರತಿಭೆ ಮತ್ತು ಬದ್ಧತೆಯನ್ನು ಹೊಂದಿದ್ದ ಯುವ ಪತ್ರಕರ್ತರಾಗಿದ್ದ ಅವರು ಡಿಸೆಂಬರ್ 11, 2022ರಂದು ದುರಂತ ಸಾವನ್ನು ಕಂಡರು.
ಅವರು ನಮ್ಮ ಅಗಲಿ ಇಂದಿಗೆ ಒಂದು ವರ್ಷ. ನಾವು ಅವರ ನೆನಪಿನಲ್ಲಿ ವಿಶೇಷ ಪಾಡ್‌ಕಾಸ್ಟ್ ಒಂದನ್ನು ನಿಮಗಾಗಿ ತಂದಿದ್ದೇವೆ. ಇದರಲ್ಲಿ ಅವರು ತನ್ನ ಜನರ ಕುರಿತಾಗಿ ಮಾತನಾಡಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಾಡಾ ತಾಲ್ಲೂಕಿನ ಆದಿವಾಸಿ ಸಮುದಾಯವಾದ ವಾರ್ಲಿ ಸಮುದಾಯಕ್ಕೆ ಸೇರಿದವರಾದ ಮಮತಾ ಸಾಯುವ ಕೆಲವು ತಿಂಗಳ ಮೊದಲು ಈ ಆಡಿಯೋ ರೆಕಾರ್ಡ್ ಮಾಡಿದ್ದರು.
ಈ ವರದಿಯಲ್ಲಿ ಮೂಲಭೂತ ಸೌಕರ್ಯಗಳು ಮತ್ತು ಹಕ್ಕುಗಳನ್ನು ಪಡೆಯಲು ನಡೆಸುತ್ತಿದ್ದ ಹೋರಾಟಗಳ ಬಗ್ಗೆ ಬರೆದಿದ್ದಾರೆ. ಧೈರ್ಯಶಾಲಿ ಪತ್ರಕರ್ತರಾಗಿದ್ದ ಅವರು ಸಣ್ಣ ಕುಗ್ರಾಮಗಳಿಂದ ವರದಿ ಮಾಡಿದ್ದರು. ಅಂತಹ ಹಳ್ಳಿಗಳಲ್ಲಿ ಕೆಲವನ್ನು ಭೂಪಟದಲ್ಲೂ ನೋಡಲು ಸಾಧ್ಯವಿಲ್ಲ. ಹಸಿವು, ಬಾಲಕಾರ್ಮಿಕತೆ, ಜೀತದಾಳು, ಶಾಲಾ ಶಿಕ್ಷಣದ ಲಭ್ಯತೆ, ಭೂ ಹಕ್ಕುಗಳು, ಸ್ಥಳಾಂತರ, ಜೀವನೋಪಾಯ ಮುಂತಾದ ವಿಷಯಗಳ ಕುರಿತು ವರದಿ ಮಾಡುವಲ್ಲಿ ಅವರು ತೀವ್ರ ಬದ್ಧತೆಯನ್ನು ತೋರಿಸಿದ್ದರು.



