ಪ್ರತಿ ಬಾರಿ ಅನರುಲ್ ಇಸ್ಲಾಂ, ತನ್ನ ಜಮೀನಿನಲ್ಲಿ ಕೆಲಸ ಮಾಡಲು ಹೋದಾಗ, ಅಂತರರಾಷ್ಟ್ರೀಯ ಗಡಿಯನ್ನು ದಾಟಬೇಕಾಗುತ್ತದೆ. ಅದಕ್ಕೂ ಮೊದಲು, ವಿಸ್ತೃತ ಶಿಷ್ಟಾಚಾರ ಮತ್ತು ಭದ್ರತಾ ಪರಿಶೀಲನೆಯನ್ನು ಅನುಸರಿಸಬೇಕು ಹಾಗೂ ಗುರುತಿನ ಪುರಾವೆಯನ್ನು ಸಿಬ್ಬಂದಿಗೆ ಒಪ್ಪಿಸಬೇಕಲ್ಲದೆ (ಅವರು ತಮ್ಮ ಮತದಾರರ ಕಾರ್ಡ್ ಅನ್ನು ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ), ರಿಜಿಸ್ಟರ್‌ಗೆ ಸಹಿ ಮಾಡಿ ಶೋಧನೆಗೆ ಒಳಪಡತಕ್ಕದ್ದು. ಇವರು ಒಯ್ಯವ ಯಾವುದೇ ಕೃಷಿ ಉಪಕರಣಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಅವರ ಜೊತೆಗೆ ಬರುವ ಯಾವುದೇ ಹಸುಗಳ ಛಾಯಾಚಿತ್ರಗಳ ಮುದ್ರಿತ ಪ್ರತಿಯನ್ನು ಸಹ ಒಪ್ಪಿಸಬೇಕು.
"ಎರಡಕ್ಕಿಂತ ಹೆಚ್ಚು ಹಸುಗಳನ್ನು [ಒಂದು ಬಾರಿಗೆ] ಅನುಮತಿಸಲಾಗುವುದಿಲ್ಲ" ಎಂದು ಅನರುಲ್ ಹೇಳುತ್ತಾರೆ. "ಹಿಂದಿರುಗುವಾಗ, ನಾನು ಮತ್ತೆ ಸಹಿ ಮಾಡಬೇಕಲ್ಲದೆ, ನನ್ನ ದಾಖಲೆಗಳನ್ನು ಹಿಂತಿರುಗಿಸಲಾಗುತ್ತದೆ. ಗುರುತಿನ ಪುರಾವೆ ಇಲ್ಲದಿದ್ದರೆ, ಆ ವ್ಯಕ್ತಿಯು ಹಾದುಹೋಗಲು ಅನುಮತಿಸುವುದಿಲ್ಲ.”
ಇಲ್ಲಿ ಎಲ್ಲರೂ ಬಾಬುಲ್ ಎಂಬ ಹೆಸರಿನಿಂದ ಗುರುತಿಸುವ ಅನರುಲ್ ಇಸ್ಲಾಂ, ಮೇಘಾಲಯದ ನೈಋತ್ಯ ಭಾಗದಲ್ಲಿನ ಗಾರೋ ಬೆಟ್ಟಗಳ ಜಿಲ್ಲೆಯ ಬಗಿಚ ಗ್ರಾಮದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ರಾಜ್ಯದ ಗಡಿಯ ಸುಮಾರು 443 ಕಿಲೋಮೀಟರ್, ಬಾಂಗ್ಲಾದೇಶದ ಜೊತೆಗೆ ಸಾಗುತ್ತದೆ - ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸುಮಾರು 4,140 ಕಿಲೋಮೀಟರ್ ಉದ್ದದ ಅಂತರಾಷ್ಟ್ರೀಯ ಗಡಿಯು, ವಿಶ್ವದಲ್ಲಿ ಐದನೇ ಸ್ಥಾನವನ್ನು ಪಡೆದ-ಉದ್ದನೆಯ ಭೂ ಗಡಿಯಾಗಿದೆ. ಮೇಘಾಲಯದ ಹರವು, ಮುಳ್ಳುತಂತಿ ಮತ್ತು ಕಾಂಕ್ರೀಟ್‌ನ ಬೇಲಿಯಿಂದ ಸುತ್ತುವರಿದಿದೆ.
ಶತಮಾನಗಳಿಂದಲೂ ವಲಸೆಯು ಈ ಪ್ರದೇಶದ ಆರ್ಥಿಕತೆ ಮತ್ತು ಗ್ರಾಮೀಣ ಜೀವನೋಪಾಯಗಳ ಭಾಗವಾಗಿದ್ದಾಗ್ಯೂ, ಸುಮಾರು 1980ರ ದಶಕದಲ್ಲಿ ಬೇಲಿ ಹಾಕುವುದನ್ನು ಪ್ರಾರಂಭಿಸಲಾಯಿತು. ಉಪಖಂಡದ ವಿಭಜನೆ ಮತ್ತು ನಂತರದ ಬಾಂಗ್ಲಾದೇಶದ ರಚನೆಯು ಈ ಚಲನಗಳನ್ನು ಸ್ಥಗಿತಗೊಳಿಸಿತು. ಉಭಯ ದೇಶಗಳ ನಡುವಿನ ಒಪ್ಪಂದದ ಭಾಗವಾಗಿ, ಬೇಲಿಯ ಜೊತೆಗೆ 150 ಗಜಗಳ ದೂರವನ್ನು ಒಂದು ರೀತಿಯ 'ಬಫರ್ ವಲಯ'ವೆಂಬಂತೆ ನಿರ್ವಹಿಸಲಾಗುತ್ತದೆ.
ಈಗ 47ರ ವಯಸ್ಸಿನ ಅನರುಲ್ ಇಸ್ಲಾಂ ಅವರಿಗೆ ಈ ಪರಂಪರೆಯು ವಂಶಪಾರಂಪರ್ಯವಾಗಿ ಬಂದಿದೆ. ಅವರು ಏಳು ವರ್ಷದವರಿದ್ದಾಗ ತನ್ನ ತಂದೆಗೆ ಉಳುಮೆಯಲ್ಲಿ ಸಹಾಯ ಮಾಡಲು ಶಾಲೆಯನ್ನು ತೊರೆದರು. ಅವರ ಮೂವರು ಸಹೋದರರು ಸಹ ಭೂಮಿಯನ್ನು ಪಿತ್ರಾರ್ಜಿತವಾಗಿ ಪಡೆದಿದ್ದು, ಅದನ್ನು ಕೃಷಿಯಲ್ಲಿ ತೊಡಗಿಸುತ್ತಾರೆ ಅಥವಾ ಗುತ್ತಿಗೆ ನೀಡುತ್ತಾರೆ (ಅವರ ನಾಲ್ಕು ಸಹೋದರಿಯರು ಗೃಹಿಣಿಯರು).









