ರೇಷ್ಮೆ ಅಥವಾ ಹತ್ತಿ ಬಟ್ಟೆಗಳನ್ನು ಬಳಸಿ ರಚಿಸಲಾಗಿರುವ ಬೌದ್ಧ ದೇವತೆಯ ಚಿತ್ರಗಳಾದ ಥಾಂಕ್ಗಳಿಗೆ ಮರುಜೀವ ನೀಡುವುದು ಸಣ್ಣ ಕೆಲಸವೇನಲ್ಲ. "ಈ ಸಂರಕ್ಷಣೆಯ ಕೆಲಸದಲ್ಲಿ ಒಂದು ಸಣ್ಣ ತಪ್ಪಾದರೂ, ಕಿವಿಯ ಆಕಾರವು ಸ್ವಲ್ಪ ತಿರುಚಿ ಹೋದರೂ, ಜನರು ತಪ್ಪಾಗಿ ಭಾವಿಸುತ್ತಾರೆ," ಎಂದು ಮಾಥೋ ಗ್ರಾಮದ ದೋರ್ಜಯ್ ಆಂಗ್ಚೋಕ್ ಹೇಳುತ್ತಾರೆ.
ಲೇಹ್ನಿಂದ 26 ಕಿಲೋಮೀಟರ್ಗಳಷ್ಟು ದೂರ ಇರುವ ಮಾಥೋ ಎಂಬ ಹಳ್ಳಿಯ ನಿವಾಸಿಯಾದ ಇವರು "ಇದೊಂದು ಅತ್ಯಂತ ಸೂಕ್ಷ್ಮ ಕೆಲಸ" ಎಂದು ಹೇಳುತ್ತಾರೆ. ಮಾಥೋ 1,165 ಜನಸಂಖ್ಯೆ (ಜನಗಣತಿ 2011), ಅದರಲ್ಲೂ ಬಹುತೇಕ ಸಂಪೂರ್ಣವಾಗಿ ಬೌದ್ಧರೇ ಇರುವ ಹಳ್ಳಿ.
ಆಂಗ್ಚೋಕ್ ಮತ್ತು ಅವರ ಸಮುದಾಯದ ಇತರರಿಗೆ ಇದ್ದ ಭಯವನ್ನು ಒಂಬತ್ತು ನುರಿತ ಥಂಕಾಗಳು ಕಲಾಕೃತಿಗಳಿಗೆ ಪುನರುಜ್ಜೀವ ನೀಡುವ ತಂಡ ಕಡಿಮೆಮಾಡಿದೆ. ಈ ತಂಡ ನೂರಾರು ವರ್ಷಗಳ ಹಿಂದೆ ಹೋಗಿ ಶತಮಾನದಷ್ಟು ಹಳೆಯದಾದ ಈ ಕಲಾಕೃತಿಗಳ ಒಳಗೆ ಅಡಗಿರುವ ಪ್ರಾಚೀನ ಚಿತ್ರಕಲೆಯ ಮಾದರಿಗಳನ್ನು ಅರ್ಥೈಸಿಕೊಂಡು, ಗುರುತಿಸಿ ಗ್ರಹಿಸಲು ಪ್ರಯತ್ನಿಸುತ್ತಿದೆ. ಪ್ರತಿ ಶತಮಾನವೂ ತನ್ನದೇ ಆದ ಅಂಶ, ಶೈಲಿ ಮತ್ತು ಪ್ರತಿಮಾಶಾಸ್ತ್ರವನ್ನು ಹೊಂದಿತ್ತು.
ಈ ಮಹಿಳೆಯರು ಮಾಥೋದಲ್ಲಿ ಪುನರುಜ್ಜೀವ ನೀಡಿದ ಎಲ್ಲಾ ಥಾಂಕಾಗಳು 15-18 ನೇ ಶತಮಾನಕ್ಕೆ ಸೇರಿದವು ಎಂದು ನೆಲ್ಲಿ ರಿಯುಫ್ ಹೇಳುತ್ತಾರೆ. ಫ್ರಾನ್ಸ್ನ ಕಲಾ ಪುನರುಜ್ಜೀವಕ ನೆಲ್ಲಿ ರಿಯುಫ್ ಈ ಮಹಿಳೆಯರಿಗೆ ಕಲಾಕೃತಿಗಳಿಗೆ ಪುನರುಜ್ಜೀವ ನೀಡುವ ತರಬೇತಿ ನೀಡಿದ್ದಾರೆ. "ಮೊದಮೊದಲು ಗ್ರಾಮದ ಜನರು ಮಹಿಳೆಯರು ಥಂಕಾಗಳ ದುರಸ್ತಿ ಮಾಡುವುದನ್ನು ವಿರೋಧಿಸುತ್ತಿದ್ದರು. ಆದರೆ ನಾವು ಯಾವುದೇ ತಪ್ಪು ಕೆಲಸ ಮಾಡುತ್ತಿಲ್ಲ ಎಂದು ನಮಗೆ ಗೊತ್ತಿತ್ತು; ನಾವು ನಮ್ಮ ಇತಿಹಾಸಕ್ಕಾಗಿ ಇದನ್ನು ಮಾಡುತ್ತಿದ್ದೇವೆ,” ಎಂದು ತ್ಸೆರಿಂಗ್ ಸ್ಪ್ಯಾಲ್ದಾನ್ ಹೇಳುತ್ತಾರೆ.
ಬೌದ್ಧ ಸನ್ಯಾಸಿನಿ ಥುಕ್ಚೆ ದೋಲ್ಮಾ "ಥಾಂಕಾಗಳು ಬುದ್ಧನ ಜೀವನದ ಬಗ್ಗೆ ಮತ್ತು ಇತರ ಪ್ರಮುಖ ಲಾಮಾಗಳು ಹಾಗೂ ಬೋಧಿಸತ್ವರ ಬೋಧನೆಗಳನ್ನು ತಿಳಿಸುವ ಸಾಧನಗಳು," ಎಂದು ಹೇಳುತ್ತಾರೆ. ದೋಲ್ಮಾ ಹೊಸದಾಗಿ ರಚನೆಯಾಗಿರುವ ಕೇಂದ್ರಾಡಳಿತ ಪ್ರದೇಶ ಲಡಾಖ್ನ ಕಾರ್ಗಿಲ್ ಜಿಲ್ಲೆಯ ಕೆಲವೇ ದೂರದಲ್ಲಿರುವ ಝನ್ಸ್ಕಾರ್ ತೆಹಸಿಲ್ನಲ್ಲಿರುವ ಕರ್ಶಾ ಸನ್ಯಾಸಿನಿಯರ ಮಠದಲ್ಲಿ ಇರುತ್ತಾರೆ.













