ಖುಮಾ ಥೀಕ್‌ಗೆ ಮಣಿಪುರದ ಚುರಾಚಂದ್‌ಪುರ ಜಿಲ್ಲೆಯಲ್ಲಿರುವ ತನ್ನ ಹಳ್ಳಿ ಲ್ಯಾಂಗ್ಜಾಗೆ ಮರಳುವುದನ್ನು ನೆನೆಸಿಕೊಂಡಗಾಲೇ ಮೈ ಅದುರಿಹೋಗುತ್ತದೆ. 64 ವರ್ಷ ಪ್ರಾಯದ ಈ ರೈತನಿಗೆ ಲ್ಯಾಂಗ್ಜಾ 30 ವರ್ಷಗಳಿಂದ ನೆಲೆಯನ್ನು ನೀಡಿದೆ. ತನ್ನ ಮಗ ಡೇವಿಡ್‌ನನ್ನು ಬೆಳೆಸಿದ, ಅವನಿಗಾಗಿ ಶಾಲೆಗೆ ಮಧ್ಯಾಹ್ನದ ಊಟಕ್ಕೆ ಬುತ್ತಿಯನ್ನು ಕಟ್ಟಿದ, ತನ್ನ ಭತ್ತದ ಗದ್ದೆಯಲ್ಲಿ ಒಟ್ಟಾಗಿ ಕೆಲಸ ಮಾಡಿದ ಈ ಹಳ್ಳಿಯಲ್ಲಿ ಅವರು ಬೆಚ್ಚಗಿನ ಬದುಕನ್ನು ಕಟ್ಟಿಕೊಂಡಿದ್ದರು. ಮೊದಲ ಬಾರಿಗೆ ಅಜ್ಜನೆಂದು ಕರೆಸಿಕೊಂಡದ್ದು ಇಲ್ಲೇ. ಲಾಂಗ್ಜಾವೇ ಖುಮಾ ಅವರ ಪ್ರಪಂಚವಾಗಿತ್ತು. ಅದು ಅವರು ತೃಪ್ತನಾಗಿ ಬದುಕಿದ ಜಗತ್ತು.
ಇದು ಜುಲೈ 2, 2023ರವರೆಗಿನ ಕತೆ.
ಆ ಒಂದು ದಿನ ಅವರ ಜೀವಮಾನದ ಇಡೀ ನೆನಪುಗಳನ್ನು ನಿರ್ದಯವಾಗಿ ಅಳಿಸಿಹಾಕಿತ್ತು. ಅವರು ಹೊರಬರಲಾಗದಂತಹ ಒಂದು ಚಿತ್ರವನ್ನು ಅವರ ಮೆದುಳಿನಲ್ಲಿ ಉಳಿಸಿಹೋಗಿತ್ತು. ಅದು ಅವರನ್ನು ಮತ್ತೆಂದು ನೆಮ್ಮದಿಯಿಂದ ಮಲಗಲು ಬಿಡದ ಚಿತ್ರ. ಮತ್ತೆಂದೂ ಅವರು ಎದ್ದು ನಿಲ್ಲದಂತೆ ಮಾಡಿದ ಚಿತ್ರ. ಅದು ಲಾಂಗ್ಜಾದ ಹೆಬ್ಬಾಗಿಲ ಬಳಿ ಬಿದಿರಿನ ಬೇಲಿಯ ಮೇಲೆ ಇರಿಸಲಾದ ದೇಹದಿಂದ ಬೇರ್ಪಟ್ಟ ಅವರ ಮಗನ ತಲೆಯ ಚಿತ್ರ.
ಭಾರತದ ಈಶಾನ್ಯದಲ್ಲಿರುವ ಖುಮಾ ಅವರ ತವರು ರಾಜ್ಯ ಮಣಿಪುರವು ಮೇ 3, 2023ರಿಂದ ಜನಾಂಗೀಯ ಹಿಂಸಾಚಾರದಲ್ಲಿ ಸಿಲುಕಿ ಹೈರಾಣಾಗಿ ಹೋಗಿದೆ. ಮಾರ್ಚ್ ತಿಂಗಳ ಕೊನೆಯಲ್ಲಿ ಮಣಿಪುರ ಹೈಕೋರ್ಟ್ ಅಲ್ಲಿನ ಪ್ರಬಲ ಸಮುದಾಯವಾದ ಮೈತೇಯಿಗಳಿಗೆ “ಬುಡಕಟ್ಟು ಸ್ಥಾನಮಾನ” ನೀಡಿತು. ಇದು ಅವರಿಗೆ ಆರ್ಥಿಕ ಪ್ರಯೋಜನಗಳು ಮತ್ತು ಕೋಟಾ ಮೂಲಕ ಸರ್ಕಾರಿ ಉದ್ಯೋಗಗಳನ್ನು ಪಡೆಯುವ ಅವಕಾಶವನ್ನು ನೀಡುತ್ತದೆ. ಈ ತೀರ್ಪಿನಿಂದ ಕುಕಿ ಬುಡಕಟ್ಟು ಜನಾಂಗದವರು ಹೇರಳವಾಗಿರುವ ಗುಡ್ಡಗಾಡು ಪ್ರದೇಶಗಳಲ್ಲಿ ಮೈತೇಯಿಗಳು ಭೂಮಿಯನ್ನು ಖರೀದಿಸಲು ಸಾಧ್ಯವಾಗುತ್ತದೆ. ನಂತರ ಈ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.
ರಾಜ್ಯದ ಜನಸಂಖ್ಯೆಯ ಶೇಕಡಾ 28ರಷ್ಟಿರುವ ಕುಕಿಗಳು ಈ ತೀರ್ಪಿನ ಫಲವಾಗಿ ಈಗಾಗಲೇ 53 ಶೇಕಡಾ ಇರುವ ಮೈತೇಯಿಗಳು ರಾಜ್ಯದ ಮೇಲೆ ತಮ್ಮ ಪ್ರಾಬಲ್ಯವನ್ನು ಇನ್ನೂ ಹೆಚ್ಚು ಬಲಪಡಿಸಿಕೊಳ್ಳುತ್ತಾರೆ ಎಂದು ನಂಬಿದ್ದಾರೆ.











