ಅದು 2023ರ ಫೆಬ್ರವರಿ ತಿಂಗಳ ಸಂಜೆ ಆರು ಗಂಟೆಯ ಸಮಯ. ಅತ್ತ ಪಶ್ಚಿಮದಲ್ಲಿ ಆಕಾಶವನ್ನು ಕೆಂಪಾಗಿಸಿ ಸೂರ್ಯ ಮುಳುಗುತ್ತಿದ್ದರೆ ಇತ್ತ ಖೊಲ್ದೋಡಾ ಗ್ರಾಮದ ರೈತ ರಾಮಚಂದ್ರ ದೊಡಕೆಯವರು (35) ಮುಂದಿನ ದೀರ್ಘ ರಾತ್ರಿಗಾಗಿ ಸಿದ್ಧವಾಗುತ್ತಿದ್ದರು. ಅವರು ಅವರೊಡನೆ ಬಹಳ ದೂರದವರೆಗೆ ಬೆಳಕು ಬೀರುವ ʼಕಮಾಂಡರ್ʼ ಟಾರ್ಚನ್ನೂ ತಮ್ಮೊಂದಿಗೆ ಇರಿಸಿಕೊಂಡಿದ್ದರು.
ಅವರ ಮನೆಯಲ್ಲಿ ಅವರ ಪತ್ನಿಯಾದ ಜಯಶ್ರೀಯವರು ರಾತ್ರಿಯ ಊಟಕ್ಕಾಗಿ ದಾಲ್ ಮತ್ತು ತರಕಾರಿ ಪಲ್ಯವನ್ನು ತಯಾರಿಸುತ್ತಿದ್ದರು. ಅವರ ಚಿಕ್ಕಪ್ಪ 70 ವರ್ಷದ ದಾದಾಜಿ ದೊಡಕೆ ಕೂಡ ರಾತ್ರಿಯ ತಯಾರಿಯಲ್ಲಿ ನಿರತರಾಗಿದ್ದರು. ಅವರ ಪತ್ನಿ ಶಕುಬಾಯಿ ಅವರು ತಮ್ಮ ಜಮೀನಿನಲ್ಲಿ ಬೆಳೆಯುವ ಪರಿಮಳಯುಕ್ತ ಅಕ್ಕಿಯಿಂದ ಅನ್ನ ಮಾಡುತ್ತಿದ್ದರು ಮತ್ತು ಜೊತೆಗೆ ಚಪಾತಿಗಳನ್ನು ಸಹ ತಯಾರಿಸುತ್ತಿದ್ದರು.
“ನಾವು ತಯಾರಿದ್ದೇವೆ. ಊಟ ತಯಾರಾದ ತಕ್ಷಣ ಹೊರಡುವುದೇ” ಜಯಶ್ರೀ ಮತ್ತು ಸಕ್ಕುಬಾಯಿ ನಮಗೆ ಊಟ ಕಟ್ಟಿ ಕೊಡುತ್ತಾರೆ ಎಂದು 35 ವರ್ಷದ ರೈತ ನನ್ನ ಬಳಿ ಹೇಳಿದರು.
ದಾದಾಜಿ ಮತ್ತು ರಾಮಚಂದ್ರ ಇಬ್ಬರೂ ಮನಾ ಸಮುದಾಯಕ್ಕೆ ಸೇರಿದವರಾಗಿದ್ದು. ರಾಜ್ಯದಲ್ಲಿ ಪರಿಶಿಷ್ಟ ಪಂಗಡದಡಿ ಪಟ್ಟಿ ಮಾಡಲಾಗಿದೆ) ಈ ಎರಡು ತಲೆಮಾರಿನ ಸಂಬಂಧಿಗಳು ಇಂದು ನನ್ನ ಅತಿಥೇಯರಾಗಿದ್ದರು. ಈ ರೈತ ಕೀರ್ತನಕಾರರಾಗಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಅವರ ನಿಷ್ಠಾವಂತ ಅನುಯಾಯಿಯೂ ಹೌದು. ರೈತರಾಗಿರುವ ಅವರು ತನ್ನ ತಂದೆ, ದಾದಾಜಿಯವರ ಅಣ್ಣನೂ ಆದ ಬಿಕಾಜಿಯವರು ದುಡಿಯಲು ಅಸಮರ್ಥರಾದ ನಂತರ 5 ಎಕರೆ ಜಮೀನನ್ನು ಪೂರ್ತಿಯಾಗಿ ವಹಿಸಿಕೊಂಡು ದುಡಿಯುತ್ತಿದ್ದಾರೆ. ಭಿಕಾಜಿ ಒಂದು ಕಾಲದಲ್ಲಿ ಗ್ರಾಮದ 'ಪೊಲೀಸ್ ಪಾಟೀಲ್' ಆಗಿದ್ದರು, ಇದು ಗ್ರಾಮ ಮತ್ತು ಪೊಲೀಸರ ನಡುವಿನ ಸಂಪರ್ಕವಾಗಿ ಕಾರ್ಯನಿರ್ವಹಿಸುವ ಪ್ರಮುಖ ಹುದ್ದೆಯಾಗಿದೆ.
ಅಂದು ನಾಗಪುರ ಜಿಲ್ಲೆಯ ಭಿವಾಪುರ್ ತಹಸಿಲ್‌ಗೆ ಸೇರಿದ ಒಂದೆರಡು ಮೈಲಿ ದೂರದಲ್ಲಿರುವ ಹೊಲಕ್ಕೆ ರಾತ್ರಿ ಕಾವಲಿಗೆಂದು ನಾವೆಲ್ಲ ಹೊರಟಿದ್ದೆವು. ಅಲ್ಲಿರುವ ರಾಮಚಂದ್ರ ಅವರ ಜಮೀನನಲ್ಲಿನ ಬೆಳೆಗಳಿಗೆ ಕಾಡುಪ್ರಾಣಿಗಳು ದಾಳಿ ಮಾಡದಂತೆ ಕಾಯುವ ಜಗ್ಲಿ ಅಥವಾ ರಾತ್ರಿ ಕಾವಲಿಗೆ ಹೊರಟಿದ್ದ ಗುಂಪಿನಲ್ಲಿ ರಾಮಚಂದ್ರರ ಹಿರಿಯ ಮಗ ಒಂಬತ್ತು ವರ್ಷದ ಅಶುತೋಷ್ ಸೇರಿದಂತೆ ಏಳು ಜನರಿದ್ದೆವು.
ಇದೆಲ್ಲ ನಗರದ ಜನರಿಗೆ ಸಾಹಸದಂತೆ ಕಾಣುತ್ತದೆ. ಆದರೆ ಇಲ್ಲಿನ ಜನರ ಪಾಲಿಗೆ ಇದು ವರ್ಷವಿಡೀ ಮಾಡಬೇಕಾದ ದೈನಂದಿನ ಕೆಲಸ. ಪ್ರಸ್ತುತ ಅವರ ಹೊಲದಲ್ಲಿ ಕೊಯ್ಲಿಗೆ ಬಂದಿರುವ ರಬಿ ಹಂಗಾಮಿನ ಮೆಣಸು, ತೊಗರಿ, ಗೋದಿ ಹಾಗೂ ಉದ್ದಿನ ಬೆಳೆಗಳಿವೆ.
ದಾದಾಜಿಯವರ ಹೊಲವು ಇನ್ನೊಂದು ಬದಿಯಲ್ಲಿತ್ತು. ಅಂದು ನಾವು ರಾಮಚಂದ್ರ ಅವರ ಹೊಲದಲ್ಲಿ ಇರುಳು ಕಳೆಯಲಿದ್ದೆವು. ರಾತ್ರಿ ಊಟ ಮುಗಿದ ನಂತರ ಅಲ್ಲೇ ಚಳಿಯ ಕಾರಣ ಒಂದಷ್ಟು ಬೆಂಕಿ ಹಚ್ಚಿದೆವು. ಆ ದಿನಗಳಲ್ಲಿ ಚಳಿ ಕಡಿಮೆಯಾಗುತ್ತಿತ್ತು. ಆ ದಿನ ರಾತ್ರಿ 14 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಡಿಸೆಂಬರ್ 2022 ಮತ್ತು 2023ರ ಜನವರಿಯಲ್ಲಿ ಅಸಾಧಾರ ಚಳಿಯಿತ್ತು, ರಾತ್ರಿಯಲ್ಲಿ ತಾಪಮಾನವು 6-7 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತಿತ್ತು ಎಂದು ರಾಮಚಂದ್ರ ಹೇಳುತ್ತಾರೆ.
ಈ ಊರುಗಳಲ್ಲಿ ಕಾವಲಿರುವ ಸಲುವಾಗಿ ಕುಟುಂಬದ ಕನಿಷ್ಠ ಒಬ್ಬ ಸದಸ್ಯ ರಾತ್ರಿ ವೇಳೆ ಹೊಲದಲ್ಲಿರಲೇಬೇಕಾಗುತ್ತದೆ. ಹೀಗೆ ಹಗಲಿರುಳು ಕೆಲಸ ಮಾಡುವುದು ಹಾಗೂ ರಾತ್ರಿಯ ಚಳಿಯನ್ನು ಸಹಿಸುವುದು ಹಲವು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ನಿದ್ರಾಹೀನತೆ, ಒತ್ತಡ ಹಾಗೂ ಚಳಿಯ ಕಾರಣದಿಂದ ಜ್ವರ ಮತ್ತು ತಲೆನೋವು ಬರುವುದು ಸದ್ಯ ರಾಮಚಂದ್ರ ಅವರು ಎದುರಿಸುತ್ತಿರುವ ಕೆಲವು ಸಮಸ್ಯೆಗಳು.
ಹೊರಡುವ ಸಮಯದಲ್ಲಿ ದಾದಾಜಿ ತನ್ನ ಪತ್ನಿಯನ್ನು ಕರೆದು ತಮ್ಮ ಕುತ್ತಿಗೆಯ ಬೆಲ್ಟ್ ಕೊಡುವಂತೆ ಕೇಳಿದರು. “ಡಾಕ್ಟರ್ ಅದನ್ನು ಸದಾ ಧರಿಸಿರಲು ಹೇಳಿದ್ದಾರೆ” ಎಂದು ಅವರು ವಿವರಿಸುತ್ತಾರೆ.
ಯಾಕೆ, ಅವರಿಗೆ ಕುತ್ತಿಗೆಗೆ ಬೆಲ್ಟ್ ಯಾಕೆ ಹಾಕುತ್ತಾರೆ? ಎಂದು ನಾನು ಕೇಳಿದೆ.
“ಮಾತನಾಡೋದಕ್ಕೆ ಇಡೀ ರಾತ್ರಿಯಿದೆ. ಈಗ ಸದ್ಯಕ್ಕೆ ನಿಮ್ಮ ಪ್ರಶ್ನೆಗಳನ್ನು ನಿಮ್ಮ ಬಳಿಯೇ ಇರಿಸಿಕೊಳ್ಳಿ.”
ಆದರೆ ರಾಮಚಂದ್ರ ನಗುತ್ತಾ ನನ್ನ ಪ್ರಶ್ನೆಗೆ ಉತ್ತರಿಸಿದರು: “ಮುದುಕಪ್ಪ 8 ಅಡಿ ಎತ್ತರದ ಮಚಾನಿನ ಕೆಳಗೆ ಬಿದ್ದು ಕುತ್ತಿಗೆಗೆ ಪೆಟ್ಟಾಗಿದೆ. ಅವರ ಅದೃಷ್ಟ ಚೆನ್ನಾಗಿತ್ತು ಇಲ್ಲದೇ ಹೋಗಿದ್ದರೆ ಇಂದು ಅವರು ನಮ್ಮೊಡನೆ ಇರುತ್ತಿರಲಿಲ್ಲ.”
*****
ಖೊಲ್ದೋಡಾ, ನಾಗಪುರದಿಂದ ಸುಮಾರು 120 ಕಿಲೋಮೀಟರ್ ದೂರದಲ್ಲಿರುವ ಭಿವಾಪುರ್ ತಹಸಿಲ್ ಅಲೆಸೂರ್ ಗ್ರಾಮ ಪಂಚಾಯತಿಯ ಭಾಗವಾಗಿದೆ. ತಡೋಬಾ ಅಂಧಾರಿ ಹುಲಿ ಮೀಸಲು ಪ್ರದೇಶದ (ಟಿಎಟಿಆರ್) ವಾಯುವ್ಯ ಅಂಚಿನಲ್ಲಿರುವ ಚಂದ್ರಾಪುರ ಜಿಲ್ಲೆಯ ಚಿಮೂರ್ ತಹಸಿಲ್‌ನ ಕಾಡುಗಳು ಇದರ ಗಡಿಯಲ್ಲಿವೆ.
ಮಹಾರಾಷ್ಟ್ರ ರಾಜ್ಯದ ಪೂರ್ವದ ವಿದರ್ಭ ಅರಣ್ಯ ಪ್ರದೇಶದ ನೂರಾರು ಹಳ್ಳಿಗಳಂತೆ, ಖೊಲ್ದೋಡಾ ಕಾಡು ಪ್ರಾಣಿಗಳಿಂದ ತೊಂದರೆಗೀಡಾಗಿದೆ - ಗ್ರಾಮಸ್ಥರು ಆಗಾಗ್ಗೆ ತಮ್ಮ ಬೆಳೆಗಳು ಮತ್ತು ಜಾನುವಾರುಗಳನ್ನು ಕಳೆದುಕೊಳ್ಳುತ್ತಿರುರೆ. ಹೆಚ್ಚಿನ ಹೊಲಗಳಿಗೆ ಬೇಲಿ ಹಾಕಲಾಗಿದೆ, ಆದರೆ ರಾತ್ರಿ ಕಾವಲು ಕಾಯುವುದು ಇಲ್ಲಿನ ಜೀವನ ವಿಧಾನವಾಗಿ ಮಾರ್ಪಟ್ಟಿದೆ.
ದಿನವಿಡೀ, ಜನರು ದೈನಂದಿನ ಕೃಷಿ ಕೆಲಸಗಳನ್ನು ಮಾಡುತ್ತಾ ಬೆಳೆಗಳನ್ನು ನೋಡಿಕೊಳ್ಳುತ್ತಾರೆ. ಆದರೆ ರಾತ್ರಿಯಲ್ಲಿ, ಮುಖ್ಯವಾಗಿ ಕೊಯ್ಲಿನ ಸಮಯದಲ್ಲಿ, ಪ್ರತಿ ಕುಟುಂಬವು ತಮ್ಮ ಬೆಳೆದು ನಿಂತಿರುವ ಬೆಳೆಗಳನ್ನು ಕಾಡು ಪ್ರಾಣಿಗಳಿಂದ ರಕ್ಷಿಸಲು ತನ್ನ ಜಮೀನಿಗೆ ಸ್ಥಳಾಂತರಗೊಳ್ಳುತ್ತದೆ. ಬೇಸಾಯ ಚಟುವಟಿಕೆ ಹೆಚ್ಚು ನಡೆಯುವ ಅಗಸ್ಟ್ ತಿಂಗಳಿನಿಂದ ಮಾರ್ಚಿಯ ತನಕ ಈ ಕೆಲಸ ಚಾಲೂ ಇರುತ್ತದೆ. ಮತ್ತು ಉಳಿದ ಸಮಯದಲ್ಲೂ ಈ ಕೆಲಸ ಮಾಡಬೇಕಿರುತ್ತದೆ.
ಹಿಂದಿನ ದಿನ ನಾನು ಊರಿಗೆ ಬಂದಾಗ ಇಳಿ ಮಧ್ಯಾಹ್ನದ 4 ಗಂಟೆ. ಹೊಲದಲ್ಲಿ ಯಾರೂ ಇದ್ದಿರಲಿಲ್ಲ. ಎಲ್ಲ ಹೊಲಗಳಿಗೂ ನೈಲಾನ್ ಸೀರೆಗಳ ಬೇಲಿ ಹಾಕಲಾಗಿತ್ತು. ಇತ್ತ ಊರಿಗೆ ಬಂದರೂ ಊರಿನ ಬೀದಿಗಳಲ್ಲಿ ನಾಯಿಗಳಿದ್ದವೇ ಹೊರತು ಒಬ್ಬರೇ ಒಬ್ಬ ಮನುಷ್ಯರಿರಲಿಲ್ಲ.
"ಮಧ್ಯಾಹ್ನ 2ರಿಂದ 4:30ರವರೆಗೆ ಎಲ್ಲರೂ ಮಲಗುತ್ತಾರೆ, ನಾವು ರಾತ್ರಿ ಮಲಗಲು ಸಾಧ್ಯವಾಗುತ್ತದೆಯೆನ್ನುವ ಕುರಿತು ಯಾವ ಗ್ಯಾರಂಟಿಯೂ ಇಲ್ಲ" ಎಂದು ಅವರ ಮನೆಗೆ ಬಂದು ಊರು ಏಕೆ ಮೌನವಾಗಿದೆ ಎಂದು ವಿಚಾರಿಸಿದಾಗ ದಾದಾಜಿ ಹೇಳುತ್ತಾರೆ.
"ಅವರು [ರೈತರು] ದಿನವಿಡೀ ಹೊಲಗಳಲ್ಲಿ ಸುತ್ತಾಡುತ್ತಲೇ ಇರುತ್ತಾರೆ. ಇದು 24 ಗಂಟೆಗಳ ಕರ್ತವ್ಯದಂತೆ" ಎಂದು ಅವರು ವ್ಯಂಗ್ಯವಾಗಿ ಹೇಳುತ್ತಾರೆ.
ಮುಸ್ಸಂಜೆಯಾಗುತ್ತಿದ್ದಂತೆ, ಗ್ರಾಮವು ಮತ್ತೆ ಚಟುವಟಿಕೆಗೆ ಮರಳುತ್ತದೆ - ಹೆಂಗಸರು ಅಡುಗೆ ಮಾಡಲು ಪ್ರಾರಂಭಿಸುತ್ತಾರೆ, ಗಂಡಸರು ರಾತ್ರಿ ಜಾಗರಣೆಗೆ ಸಿದ್ಧರಾಗುತ್ತಾರೆ, ಮತ್ತು ದನಗಳು ತಮ್ಮ ದನಗಾಹಿಗಳೊಂದಿಗೆ ಕಾಡಿನಿಂದ ಮನೆಗೆ ಮರಳುತ್ತವೆ.
ದಟ್ಟವಾದ ಕಾಡುಗಳು, ತೇಗ ಮತ್ತು ಇತರ ಮರಗಳ ಮಿಶ್ರಣದಿಂದ ಸುತ್ತುವರೆದಿರುವ ಖೊಲ್ದೋಡಾ ತಡೋಬಾ ಕಾಡಿನ ಭಾಗವಾಗಿದೆ, ಇದು ಸುಮಾರು 108 ಕುಟುಂಬಗಳನ್ನು ಹೊಂದಿರುವ ಹಳ್ಳಿಯಾಗಿದೆ (ಜನಗಣತಿ 2011). ಹೆಚ್ಚಿನವರು ಎರಡು ಪ್ರಮುಖ ಸಾಮಾಜಿಕ ವರ್ಗಗಳಿಗೆ ಸೇರಿದ ಸಣ್ಣ ಮತ್ತು ಅತಿಸಣ್ಣ ರೈತರು: ಮನಾ ಆದಿವಾಸಿಗಳು ಮತ್ತು ಮಹರ್ ದಲಿತರು, ಮತ್ತು ಇತರ ಜಾತಿಗಳ ಕೆಲವು ಕುಟುಂಬಗಳೂ ಇಲ್ಲಿವೆ.
ಇಲ್ಲಿನ ಕೃಷಿ ಹಿಡುವಳಿಗಳು ಸುಮಾರು 110 ಹೆಕ್ಟೇರ್ ಭೂಮಿಯನ್ನು ಹೊಂದಿದ್ದು, ಈ ಫಲವತ್ತಾದ, ಸಮೃದ್ಧ ಮಣ್ಣು ಹೆಚ್ಚಾಗಿ ಮಳೆಯ ಮೇಲೆ ಅವಲಂಬಿತವಾಗಿದೆ. ಇಲ್ಲಿನ ಬೆಳೆಗಳೆಂದರೆ ಭತ್ತ, ಬೇಳೆಕಾಳುಗಳು, ಮತ್ತು ಕೆಲವರು ಗೋಧಿ, ರಾಗಿ ಮತ್ತು ತರಕಾರಿಗಳನ್ನು ಬೆಳೆಯುತ್ತಾರೆ. ಇಲ್ಲಿನ ರೈತರು ತಮ್ಮ ಸ್ವಂತ ಹೊಲಗಳಲ್ಲಿ ಕೆಲಸ ಮಾಡುತ್ತಾರೆ, ಜೊತೆಗೆ ಸಣ್ಣ ಅರಣ್ಯ ಉತ್ಪನ್ನಗಳು ಮತ್ತು ಕೂಲಿ ಕೆಲಸಗಳನ್ನು ಸಹ ಅವಲಂಬಿಸಿ ಬದುಕುತ್ತಾರೆ. ವ್ಯವಸಾಯವನ್ನು ನಂಬಿ ಬದುಕುವುದು ಮುಂದೆ ಸಾಧ್ಯವಿಲ್ಲದ ಕಾರಣ ಕೆಲವು ಯುವಕರು ಜೀವನೋಪಾಯಕ್ಕಾಗಿ ಇತರ ಪಟ್ಟಣಗಳಿಗೆ ತೆರಳಿದ್ದಾರೆ. ದಾದಾಜಿಯವರ ಮಗ ನಾಗ್ಪುರದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದಾರೆ. ಹಳ್ಳಿಯ ಕೆಲವು ಜನರು ಕೂಲಿ ಕೆಲಸ ಹುಡುಕಲು ಭಿವಾಪುರಕ್ಕೆ ಹೋಗುತ್ತಾರೆ.
*****
ಊಟ ತಯಾರಾಗುವ ಹೊತ್ತಿಗೆ ನಾವು ಊರಿಗೆ ಒಂದು ಸುತ್ತು ಹೋಗಿ ಎಲ್ಲರನ್ನೂ ಮಾತನಾಡಿಸಿಕೊಂಡು ಬರಲೆಂದು ಹೊರಟೆವು.
ಶಕುಂತಲಾ ಗೋಪಿಚಂದ್ ನನ್ನವರೆ, ಶೋಭಾ ಇಂದ್ರಪಾಲ್ ಪೆಂಡಂ, ಮತ್ತು ಪರ್ಬತ ತುಳಶಿರಾಮ್ ಪೆಂಡಂ ಎನ್ನುವ ಮೂವರು ಮಹಿಳೆಯರನ್ನು ನಾವು ದಾರಿಯಲ್ಲಿ ಭೇಟಿಯಾದೆವು. ತಮ್ಮ ಬದುಕಿನ ಐದನೇ ಧಶಕದಲ್ಲಿದ್ದ ಈ ಮಹಿಳೆಯರು ತಮ್ಮ ಹೊಲಗಳಿಗೆ ಬೇಗ ಹೊರಟಿದ್ದರು. ಅವರ ಜೊತೆಗೆ ಒಂದು ನಾಯಿಯೂ ಇತ್ತು. ಮನೆಗೆಲಸ ಬೇಸಾಯದ ಕೆಲಸ ಮತ್ತು ಅದರ ನಡುವೆ ಈ ರಾತ್ರಿ ಹೊಲ ಕಾಯುವ ಕೆಲಸ ಹೇಗನ್ನಿಸುತ್ತದೆ ಎಂದು ಕೇಳಿದ್ದಕ್ಕೆ ಶಕುಂತಲಾ ಅವರು, “ನಮಗೆ ಹೊಲದಲ್ಲಿ ಭಯವಾಗುತ್ತದೆ. ಆದರೆ ಏನು ಮಾಡುವುದು?” ಎಂದು ಹೇಳಿದರು.
ಹಾಗೇ ನಡೆದು ಬರುತ್ತಿರುವಾಗ ದಾದಾಜಿಯವರ ಮನೆಯೆದುರು ಮುಖ್ಯ ರಸ್ತೆಯಲ್ಲಿ ನಿಂತು ತನ್ನ ಗೆಳೆಯರೊಡನೆ ಮಾತನಾಡುತ್ತಾ ನಿಂತಿದ್ದ ಗುಣವಂತ ಗಾಯಕವಾಡ್ ಸಿಕ್ಕರು. ಅವರು “ಇಂದು ಅದೃಷ್ಟ ಇದ್ದರೆ ನಿಮಗೆ ನೋಡಲು ಹುಲಿ ಸಿಗಬಹುದು” ಎಂದರು. “ನಾವು ಆಗಾಗ ಹುಲಿ ನಮ್ಮ ಹೊಲವನ್ನು ದಾಟಿ ಹೋಗುವುದನ್ನು ನೋಡುತ್ತಿರುತ್ತೇವೆ” ಎಂದು ಅವರ ಜೊತೆಗಿದ್ದವರೊಬ್ಬರು ಹೇಳಿದರು
ಹಾಗೆಯೇ ನಾವು ಊರಿನ ಉಪಸರ ಪಂಚರಾದ ರಾಜಹಂಸ ಬಣಕಾರ್ ಅವರನ್ನು ಭೇಟಿಯಾದೆವು. ಅವರು ತಮ್ಮ ಮನೆಯಲ್ಲಿ ಊಟ ಮಾಡುತ್ತಿದ್ದರು. ತಮ್ಮ ಊಟದ ನಂತರ ಅವರು ಹೊಲಕ್ಕೆ ತೆರಳಲಿದ್ದಾರೆ. ಪಂಚಾಯಿತಿಯ ಆಡಳಿತ ಕೆಲಸಗಳನ್ನು ಮಾಡಿ ದಣಿದು ಮನೆಗೆ ಬಂದಿದ್ದರಾದರೂ ಅವರು ಹೊಲಕ್ಕೆ ಹೋಗಲೇಬೇಕಿತ್ತು.
ನಂತರ ನಾವು ಸುಷ್ಮಾ ಘುಟ್ಕೆ ಅವರನ್ನು ಭೇಟಿಯಾದೆವು. ಇವರು ಈ ಊರಿನ ಮಹಿಳಾ ಪೊಲೀಸ್ ಪಾಟೀಲ್. ತಮ್ಮ ಗಂಡನೊಂದಿಗೆ ಕುಳಿತು ಗಾಡಿಯಲ್ಲಿ ಹೊಲಕ್ಕೆ ಹೋಗುತ್ತಿದ್ದವರು ಊಟವನ್ನು ಕಟ್ಟಿಕೊಂಡಿದ್ದರು. ಜೊತೆಯಲ್ಲಿ ಒಂದು ಜೊತೆ ಕಂಬಳಿ, ಮರದ ದೊಣ್ಣೆ ಹಾಗೂ ದೂರದವರೆಗೂ ಬೆಳಕು ಹೋಗುವ ಟಾರ್ಚ್ ಒಂದನ್ನು ಇಟ್ಟುಕೊಂಡಿದ್ದರು. ದಾರಿಯಲ್ಲಿ ಹೊಲಕ್ಕೆ ಹೋಗುತ್ತಿದ್ದ ಇತರರು ನಮ್ಮನ್ನು ಭೇಟಿಯಾದರು, ಅವರ ಕೈಗಳಲ್ಲೂ ಉರಿಯುವ ಟಾರ್ಚುಗಳು ಮತ್ತು ದೊಣ್ಣೆಗಳು ಹಾಗೂ ಕಂಬಳಿಗಳಿದ್ದವು.
“ಚಲಾ ಅಮ್ಚ್ಯಾ ಬರೋಬರ್” ಎಂದು ಮರಾಠಿಯಲ್ಲಿ ನಮ್ಮ ಸರಿಯಾಗಿ ನಡೆಯಿರಿ ನೋಡೋಣ ಎಂದು ಸುಷ್ಮಾ ನಗುತ್ತಾ ಆಹ್ವಾನವನ್ನು ನೀಡಿದರು. “ರಾತ್ರಿಯಲ್ಲಿ ನೀವು ಬಹಳಷ್ಟು ಸದ್ದುಗಳನ್ನು ಕೇಳಲಿದ್ದೀರಿ ಕನಿಷ್ಠ ಬೆಳಗಿನ ಜಾವದ 2:30ರ ತನಕ ಎಚ್ಚರವಾಗಿದ್ದು ಈ ಅನುಭವವನ್ನು ಪಡೆಯಿರಿ” ಎಂದು ಆಕೆ ಹೇಳಿದರು.
ಕಾಡು ಹಂದಿಗಳು, ನೀಲಗಾಯಿಗಳು, ಸಾಂಬಾರ್ ಜಿಂಕೆಗಳು, ನವಿಲುಗಳು, ಮೊಲಗಳು ಹೀಗೆ ಹಲವು ಪ್ರಾಣಿಗಳು ಆಹಾರ ಹುಡುಕಿಕೊಂಡು ಹೊಲಕ್ಕೆ ಬರುತ್ತವೆ ಎಂದ ಅವರು “ ನಮ್ಮ ಹೊಲ ಒಂದು ರೀತಿಯ ಪ್ರಾಣಿ ಸಂಗ್ರಹಾಲಯವಿದ್ದಂತೆ” ಎನ್ನುತ್ತಾ ನಕ್ಕರು.
ಕೆಲವು ಮನೆಗಳ ಆಚೆಗಿನ ಆತ್ಮರಾಮ್ ಸಾವಸ್ಕಳೆ ತಮ್ಮ ಹಿರಿಯರಿಂದ ಬಂದ 23 ಎಕರೆ ಜಮೀನಿನ ಕಾವಲಿಗೆ ಹೊರಟಿದ್ದರು. 55 ವರ್ಷದ ಈ ಸ್ಥಳೀಯ ರಾಜಕೀಯ ನಾಯಕ ಕೂಡ ರಾತ್ರಿ ನಿದ್ದೆಗೆಟ್ಟು ಹೊಲ ಕಾಯುತ್ತಾರೆ. ಗಡಿಬಿಡಿಯಲ್ಲಿದ್ದ ಅವರು ತಾನು ಈಗಾಗಲೇ ಹೊಲದಲ್ಲಿರಬೇಕಿತ್ತು ಎಂದರು. “ ನನ್ನ ಹೊಲವು ದೊಡ್ಡದಾಗಿರುವುದರಿಂದ ಅದನ್ನು ಕಾಯುವುದು ಕಷ್ಟ” ಎನ್ನುತ್ತಾರೆ ಅವರು. ಅವರ ಹೊಲದಲ್ಲಿ ಕನಿಷ್ಠ ಆರೆಳು ಮಚ್ಚಾಣೆಗಳಿದ್ದವು. ದೊಡ್ಡ ಹೊಲವನ್ನು ಕಾಯಲು ಅವು ಬೇಕಾಗುತ್ತವೆ. ಪ್ರಸ್ತುತ ಅವರ ಹೊಲದಲ್ಲಿ ಗೋಧಿ ಮತ್ತು ಕಪ್ಪು ಕಡಲೆ ಬೆಳೆ ಬೆಳೆದು ನಿಂತಿದೆ.
ರಾತ್ರಿ 8.30ರ ಹೊತ್ತಿಗೆ ಖಾಲ್ದೋಡದ ಕುಟುಂಬಗಳೆಲ್ಲ ಅವರ ಎರಡನೇ ಮನೆಯಾದ ಹೊಲಗಳಲ್ಲಿ ತಂಗಿದ್ದವು.
*****
ರಾಮಚಂದ್ರ ಅವರು ತಮ್ಮ ಹೊಲದಲ್ಲಿ ಹಲವು ಮಚಾನುಗಳನ್ನು ಕಟ್ಟಿದ್ದಾರೆ ಅವು ಪರಸ್ಪರ ದೂರದಲ್ಲಿದ್ದು ಅಲ್ಲಿಂದ ಒಬ್ಬರಿಗೊಬ್ಬರು ಕಾಣುವುದಿಲ್ಲ ಆದರೆ ಮಾತುಗಳನ್ನು ಕೇಳಿಸಿಕೊಳ್ಳಬಹುದು. ಮತ್ತು ಅಲ್ಲಿ ಮಲಗಿ ಸುರಕ್ಷಿತವಾಗಿ ನಿದ್ರಿಸಬಹುದು. ಮಚಾನ್ ಎನ್ನುವುದು ಎತ್ತರದ ಮರದ ವೇದಿಕೆಯಾಗಿದ್ದು ಸುಮಾರು ಏಳರಿಂದ ಎಂಟು ಅಡಿ ಎತ್ತರವಿರುತ್ತದೆ. ಅದರ ಛಾವಣಿಗೆ ಹುಲ್ಲು ಅಥವಾ ಟಾರ್ಪಲಿನ್ ಶೀಟ್ ಮುಚ್ಚಲಾಗಿರುತ್ತದೆ. ಕೆಲವು ಮಚಾನುಗಳು ಇಬ್ಬರು ಮಲಗುವಷ್ಟು ಜಾಗವನ್ನು ಹೊಂದಿರುತ್ತವೆಯಾದರೂ ಹೆಚ್ಚಿನವು ಒಬ್ಬರು ಮಲಗಬಹುದಾದ ಜಾಗವನ್ನು ಹೊಂದಿರುತ್ತವೆ.
ಕಾಡಿಗೆ ಹತ್ತಿರದಲ್ಲಿರುವ ಭಿವಾಪುರದ ಈ ಭಾಗದಲ್ಲಿ ಕೆಲವು ವಿಧದ ರಚನೆಗಳನ್ನು ನೋಡಬಹುದು. ಇವುಗಳಲ್ಲಿ ಇಲ್ಲಿ ರಾತ್ರಿ ಕಳೆಯುವ ರೈತರ ಕರಕುಶಲತೆಯನ್ನು ನೋಡಬಹುದು
“ ನಿಮಗೆ ಇಷ್ಟ ಬಂದ ಮಚ್ಚಾನಿನಲ್ಲಿ ಮಲಗಬಹುದು” ನಾನು ಹೊಲದ ಮಧ್ಯದಲ್ಲಿದ್ದ ಪ್ಲಾಸ್ಟಿಕ್ ಶೀಟ್ ಓದಿಸಿದ್ದ ಮನೆಯನ್ನು ಆರಿಸಿಕೊಂಡೆ ಆ ಹೊಲದಲ್ಲಿ ಕಡಲೆ ಬೆಳೆಯಲಾಗಿತ್ತು. ಹುಲ್ಲು ಮುಚ್ಚಿದ ಚಾವಣಿಗಳಲ್ಲಿ ಹಾವು ಚೇಳುಗಳು ಇರುವ ಸಾಧ್ಯತೆ ಇರುತ್ತದೆ ಎನ್ನುವುದು ನನ್ನ ಅನುಮಾನವಾಗಿತ್ತು. ಮೇಲೆರತೊಡಗಿದಂತೆ ಮಚಾನ್ ಅಲುಗಾಡುತ್ತಿತ್ತು. ಅಗ ರಾತ್ರಿಯ 9.30ರ ಸಮಯ, ನಾವು ಅಲ್ಲೇ ಹಚ್ಚಲಾಗಿದ್ದ ಬೆಂಕಿಯ ಸುತ್ತ ಕುಳಿತೆವು ವಾತಾವರಣದಲ್ಲಿ ಚಳಿ ತುಂಬಿಕೊಳ್ಳುತ್ತಿತ್ತು ಸಂಪೂರ್ಣ ಕತ್ತಲೆಯಾಗಿತ್ತು ಆದರೆ ಆಕಾಶ ಸ್ವಚ್ಚವಾಗಿತ್ತು.
ದಾದಾಜಿ ಊಟದ ಸಮಯದ ಮಾತನ್ನು ಮುಂದುವರಿಸಿದರು:
“ನಾಲ್ಕು ತಿಂಗಳ ಕೆಳಗೆ ನಾನು ಮಲಗಿದ್ದ ಮಚಾನ್ ಕುಸಿದು ನಾನು ಏಳು ಅಡಿ ಎತ್ತರದಿಂದ ತಲೆ ಕೆಳಗಾಗಿ ಬಿದ್ದೆ. ಇದರಿಂದಾಗಿ ನನ್ನ ಕುತ್ತಿಗೆ ಮತ್ತು ಬೆನ್ನಿಗೆ ತೀವ್ರ ಗಾಯವಾಯಿತು.”
ಇದು ನಡೆದಿದ್ದು ಮುಂಜಾನೆ 2:30ರ ವೇಳೆಗೆ ಅದೃಷ್ಟವಶಾತ್ ಅವರು ಬಿದ್ದ ಸ್ಥಳ ಮೆತ್ತಗಿತ್ತು. ಆಘಾತ ಹಾಗೂ ನೋವಿನಿಂದ ಬಳಲುತ್ತಾ ಕನಿಷ್ಠ ಒಂದೆರಡು ಗಂಟೆಗಳ ಕಾಲ ಅವರು ಅಲ್ಲೇ ಮಲಗಿದ್ದರು. ಮಚಾನ್ ತಯಾರಿಸಲು ಹೂತಿದ್ದ ಕಂಬವೊಂದು ಬೇರು ಬಿಟ್ಟಿದ್ದರಿಂದಾಗಿ ಮಣ್ಣು ಸಡಿಲಗೊಂಡು ಮಚಾನ್ ಕುಸಿದಿತ್ತು.
“ಆ ಕ್ಷಣದಲ್ಲಿ ನನ್ನಿಂದ ನಡೆಯವುದು ಸಾಧ್ಯವಿರಲಿಲ್ಲ. ಸಹಾಯ ಕೇಳಲು ಅಕ್ಕಪಕ್ಕ ಯಾರೂ ಇದ್ದಿರಲಿಲ್ಲ.” ಅಕ್ಕಪಕ್ಕದ ಹೊಲಗಳಲ್ಲಿ ಕಾವಲಿಗೆ ಇರುತ್ತಾರಾದರೂ ಅವರೆಲ್ಲ ಒಬ್ಬೊಬ್ಬರೇ ದೂರ ದೂರ ಇರುತ್ತಾರೆ. “ನಾನು ಸತ್ತೇ ಹೋಗುತ್ತೇನೇನೊ ಅನ್ನಿಸಿತ್ತು ಆಗ” ಎಂದು ಅವರು ಹೇಳುತ್ತಾರೆ.
ಬೆಳಕು ಮೂಡುವ ಹೊತ್ತಿಗೆ ಅವರು ಎದ್ದು ನಿಲ್ಲುವಲ್ಲಿ ಸಫಲರಾದರು. ಕತ್ತು ನೋವು ಮತ್ತು ಬೆನ್ನು ನೋವಿನ ನಡುವೆಯೂ ಹೇಗೋ ನಡೆದು ಒಂದು ಕಿಲೋಮೀರ್ ದೂರದಲ್ಲಿರುವ ತಮ್ಮ ಮನೆಯನ್ನು ಸೇರಿಕೊಂಡರು. ಮನೆಗೆ ಬಂದ ನಂತರ, ನನ್ನ ಕುಟುಂಬ ಮತ್ತು ನೆರೆಹೊರೆಯವರೆಲ್ಲರೂ ಸಹಾಯ ಮಾಡಲು ಧಾವಿಸಿದರು." ದಾದಾಜಿಯ ಪತ್ನಿ ಶಕುಬಾಯಿ ಹೆದರಿಹೋಗಿದ್ದರು.
ರಾಮಚಂದ್ರ ಅವರನ್ನು ಭಿವಾಪುರದ ತಹಸಿಲ್ ಪಟ್ಟಣದ ವೈದ್ಯರ ಬಳಿಗೆ ಕರೆದೊಯ್ದರು, ಅಲ್ಲಿಂದ ಅವರನ್ನು ಆಂಬ್ಯುಲೆನ್ ಮೂಲಕ ನಾಗ್ಪುರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅವರ ಮಗ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಿದರು.
ಎಕ್ಸರೇ ಮತ್ತು ಎಮ್‌ಆರ್‌ಐ ಸ್ಕ್ಯಾನ್ ಫಲಿತಾಂಶಗಳು ಮೆದುಳಿಗೆ ಆಘಾತವಾಗಿರುವುದನ್ನು ಸೂಚಿಸಿದವು. ಅದೃಷ್ಟವಶಾತ್ ಯಾವುದೇ ಯಾವುದೇ ಮೂಳೆ ಮುರಿದಿರಲಿಲ್ಲ. ಆದರೆ ಈಗ ಈ ಎತ್ತರಕ್ಕೆ ತೆಳ್ಳಗಿರುವ ಮನುಷ್ಯನಿಗೆ ತುಂಬಾ ಹೊತ್ತು ಕುಳಿತಿದ್ದು ಎದ್ದರೆ, ಅಥವಾ ನಿಂತಿದ್ದರೆ ತಲೆ ಸುತ್ತು ಬರುತ್ತದೆ. ಹೀಗಾಗಿ ಅವರು ಮಲಗಿಕೊಂಡೇ ಭಜನೆಗಳನ್ನು ಹಾಡುತ್ತಾರೆ.
“ಇದು ನಾನು ಬೇಸಾಯಕ್ಕೆ ತೆತ್ತ ಬೆಲೆ. ಈ ರಾತ್ರಿ ಕಾವಲಿಗೆ ಬಾರದೆ ಹೋದರೆ ಕಾಡುಪ್ರಾಣಿಗಳು ಕೊಯ್ಲಿಗೆ ಬೆಳೆಯನ್ನೇ ಉಳಿಸುವುದಿಲ್ಲ.” ಎಂದು ಅವರು ಹೇಳುತ್ತಾರೆ.
ತಾನು ಸಣ್ಣವನಿದ್ದ ಸಮಯದಲ್ಲಿ ರಾತ್ರಿ ಕಾವಲು ಅಗತ್ಯವಿದ್ದಿರಲಿಲ್ಲ ಎನ್ನುತ್ತಾರೆ. ಕಳೆದ 20 ವರ್ಷಗಳಲ್ಲಿ ಪ್ರಾಣಿಗಳ ದಾಳಿಯ ತೀವ್ರತೆ ಹೆಚ್ಚಾಗಿದೆ. ಕಾಡುಗಳ ವಿಸ್ತೀರ್ಣ ಕುಗ್ಗಿರುವುದರ ಜೊತೆಗೆ ಅವುಗಳಿಗೆ ಅಲ್ಲಿ ಸರಿಯಾಗಿ ಆಹಾರ ಮತ್ತು ನೀರು ದೊರೆಯುತ್ತಿಲ್ಲ. ಅಲ್ಲದೆ ಅವುಗಳ ಸಂಖ್ಯೆಯೂ ಈಗೀಗ ಹೆಚ್ಚಿದೆ. ಹೀಗಾಗಿ ಸಾವಿರಾರು ರೈತರು ಬೆಳೆಗಳನ್ನು ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿ ತಮ್ಮ ರಾತ್ರಿಗಳನ್ನು ಮನೆಯ ಬದಲು ಹೊಲಗಳಲ್ಲಿ ಕಳೆಯಬೇಕಾಗಿ ಬಂದಿದೆ.
ಅಪಘಾತಗಳು, ಬೀಳುವಿಕೆ, ಕಾಡು ಪ್ರಾಣಿಗಳೊಂದಿಗಿನ ಕೆಟ್ಟ ಮುಖಾಮುಖಿ, ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ನಿದ್ರೆಯ ಕೊರತೆ ಮತ್ತು ಸಾಮಾನ್ಯ ಕಾಯಿಲೆಗಳು - ಇದು ಖೊಲ್ದೋಡಾ ಮತ್ತು ವಿದರ್ಭದ ದೊಡ್ಡ ಪ್ರದೇಶದ ರೈತರಿಗೆ ಅಭ್ಯಾಸವಾಗಿ ಹೋಗಿದೆ, ಇದು ಈಗಾಗಲೇ ತೊಂದರೆಯಲ್ಲಿರುವ ರೈತಾಪಿ ವರ್ಗದ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಕಳೆದ ಒಂದೆರಡು ವರ್ಷಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ನನ್ನ ಪ್ರಯಾಣದ ಸಮಯದಲ್ಲಿ, ಸ್ಲೀಪ್ ಅಪ್ನಿಯಾದಿಂದಾಗಿ (sleep apnea) ಒತ್ತಡದಿಂದ ಬಳಲುತ್ತಿರುವ ರೈತರನ್ನು ನಾನು ಭೇಟಿಯಾಗಿದ್ದೇನೆ, ಇದು ನಿದ್ರೆಯಲ್ಲಿರುವಾಗ ಉಸಿರಾಟವು ನಿಂತು ಪುನರಾರಂಭಗೊಳ್ಳುವ ಒಂದು ಸಮಸ್ಯೆ.
"ಇದು ನಿಮ್ಮ ದೇಹಕ್ಕೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತದೆ - ನಾವು ಹೆಚ್ಚು ನಿದ್ರೆ ಇಲ್ಲದೆ ಹಗಲು ಮತ್ತು ರಾತ್ರಿಯೂ ಕೆಲಸ ಮಾಡಬೇಕು" ಎಂದು ರಾಮಚಂದ್ರ ವಿಷಾದಿಸುತ್ತಾರೆ. "ನಾವು ಒಂದು ದಿನವೂ ನಮ್ಮ ಹೊಲದಿಂದ ಹೊರಗಿರಲು ಸಾಧ್ಯವಾಗದ ಸಂದರ್ಭಗಳಿವೆ."
ನೀವು ಈ ಹೊಲದ ಅಕ್ಕಿ ಅಥವಾ ಬೇಳೆಕಾಳುಗಳನ್ನು ತಿನ್ನುತ್ತಿದ್ದೀರಿ ಎಂದಾದರೆ ಅದನ್ನು ಯಾವುದೋ ಒಬ್ಬ ರೈತ ತನ್ನ ರಾತ್ರಿಗಳನ್ನು ಹೊಲದಲ್ಲಿ ಸುಡುತ್ತಾ, ತನ್ನ ಬೆಳೆಗಳನ್ನು ಕಾಡುಪ್ರಾಣಿಗಳಿಂದ ಕಾಪಾಡಿಕೊಂಡಿದ್ದಾನೆ ಎಂದು ಅರ್ಥ.
"ನಾವು ಅಲಾರಂಗಳನ್ನು ನುಡಿಸುತ್ತೇವೆ, ಬೆಂಕಿ ಹಚ್ಚುತ್ತೇವೆ, ಹೊಲಗಳಿಗೆ ಬೇಲಿ ಹಾಕುತ್ತೇವೆ, ಆದರೆ ರಾತ್ರಿ ಹೊತ್ತು ಜಮೀನಿನಲ್ಲಿ ಇಲ್ಲದೆ ಹೋದರೆ, ನೀವು ಬೆಳೆದ ಎಲ್ಲವನ್ನೂ ಕಳೆದುಕೊಳ್ಳುವ ಸಾಧ್ಯತೆಯಿದೆ" ಎಂದು ರಾಮಚಂದ್ರ ಹೇಳುತ್ತಾರೆ.
*****
ಊಟದ ನಂತರ ರಾಮಚಂದ್ರ ಅವರ ಹಿಂದೆ ನಡೆಯತೊಡಗಿದೆವು. ನಮ್ಮ ಕೈಯಲ್ಲಿದ್ದ ಟಾರ್ಚುಗಳು ಹೊಲದ ಸುತ್ತು ಬಳಸಿನ ಹಾದಿಯ ದಾರಿ ತೋರಿಸುತ್ತಿದ್ದವು.
11 ಗಂಟೆಯ ಹೊತ್ತಿಗೆ ಜನರು “ಹೋಯ್... ಹೋಯ್... ಹೇ...” ಎಂದು ಪ್ರಾಣಿಗಳನ್ನು ಹೆದರಿಸಲು ಮತ್ತು ಅವುಗಳಿಗೆ ತಮ್ಮ ಇರುವಿಕೆಯನ್ನು ಗೊತ್ತು ಮಾಡಿಸಲು ಕೂಗುತ್ತಿದ್ದ ಸದ್ದು ಕೇಳುತ್ತಿತ್ತು.
ರಾಮಚಂದ್ರ ಒಬ್ಬರೇ ಇರುವ ದಿನಗಳಲ್ಲಿ ಕೈಯಲ್ಲಿ ದೊಣ್ಣೆಯೊಂದನ್ನು ಹಿಡಿದು ಪ್ರತಿ ಗಂಟೆಗೊಮ್ಮೆ ಹೊಲಕ್ಕೆ ಸುತ್ತು ಹಾಕುತ್ತಾರೆ. ಅವರು ಬೆಳಗಿನ ಜಾವ 2ರಿಂದ 4 ಗಂಟೆಯ ಅವಧಿಯಲ್ಲಿ ಹೆಚ್ಚು ಎಚ್ಚರವಾಗಿರುತ್ತಾರೆ. ಈ ಸಮಯದಲ್ಲಿ ಪ್ರಾಣಿಗಳು ಹೆಚ್ಚು ಸಕ್ರಿಯವಾಗಿರುತ್ತವೆ ಎನ್ನುವದು ಅವರ ಅನುಭವದ ಮಾತು. ಅದರ ನಡುವೆ ಸಣ್ಣ ನಿದ್ರೆ ಮಾಡುತ್ತಾರೆಯಾದರೂ ಎಚ್ಚರಿಕೆಯಿಂದ ಇರುತ್ತಾರೆ.
ಮಧ್ಯ ರಾತ್ರಿ ಸಮಯದಲ್ಲಿ ಬೈಕಿನಲ್ಲಿ ಬಂದ ಗ್ರಾಮಸ್ಥರೊಬ್ಬರು ಅಲೆಸೂರು ಎನ್ನುವಲ್ಲಿ ಕಬ್ಬಡ್ಡಿ ಪಂದ್ಯವಿರುವುದಾಗಿ ಹೇಳಿದರು. ನಾವು ಆ ಪಂದ್ಯ ನೋಡಲು ಹೋಗುವುದೆಂದು ತೀರ್ಮಾನಿಸಿದೆವು. ಹೊಲದಲ್ಲಿ ರಾಮಚಂದ್ರರ ಮಗ ಮತ್ತು ದಾದಾಜಿ ಉಳಿದುಕೊಂಡರು. ಉಳಿದವರು ಅಲ್ಲಿಂದ ಒಂದು ಕಿಲೋಮೀಟರ್ ದೂರದಲ್ಲಿ ನಡೆಯುತ್ತಿರುವ ಪಂದ್ಯ ನೋಡಲು ಹೊರಟೆವು.
ಅಲೆಸೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ ಕಬಡ್ಡಿ ಆಟವನ್ನು ವೀಕ್ಷಿಸಲು ರೈತರು ರಾತ್ರಿ ಜಾಗರಣೆಯ ನಡುವೆ ಜಮಾಯಿಸುತ್ತಾರೆ
ದಾರಿಯುದ್ದಕ್ಕೂ, ಕಾಡು ಹಂದಿಗಳ ಹಿಂಡು ರಸ್ತೆಯನ್ನು ದಾಟುತ್ತಿರುವುದನ್ನು ನೋಡಿದೆವು, ನಂತರ ಎರಡು ನರಿಗಳು. ಸ್ವಲ್ಪ ಸಮಯದ ನಂತರ, ಕಾಡಿನ ಉದ್ದಕ್ಕೂ ಜಿಂಕೆಗಳ ಹಿಂಡು ಕಂಡುಬಂದವು. ಆದರೆ ಇಲ್ಲಿಯವರೆಗೆ, ಹುಲಿಯ ಯಾವುದೇ ಕುರುಹು ಕಂಡುಬಂದಿರಲಿಲ್ಲ.
ಅಲೆಸೂರಿನಲ್ಲಿ, ಹತ್ತಿರದ ಹಳ್ಳಿಗಳ ಇಬ್ಬರು ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಕಬಡ್ಡಿ ಆಟವನ್ನು ಹತ್ತಿರದಿಂದ ವೀಕ್ಷಿಸುವಲ್ಲಿ ದೊಡ್ಡ ಜನಸಮೂಹವು ಮಗ್ನವಾಗಿತ್ತು. ಅವರ ಉತ್ಸಾಹ ಎದ್ದು ಕಾಣುವಂತಿತ್ತು. ಪಂದ್ಯಾವಳಿಯಲ್ಲಿ 20ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು ಮತ್ತು ಪಂದ್ಯಗಳು ಬೆಳಿಗ್ಗೆಯವರೆಗೆ ಮುಂದುವರಿಯುತ್ತವೆ; ಫೈನಲ್ ಪಂದ್ಯ ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಗ್ರಾಮಸ್ಥರು ತಮ್ಮ ಹೊಲಗಳು ಮತ್ತು ಪಂದ್ಯಾವಳಿಯ ಸ್ಥಳದ ನಡುವೆ ರಾತ್ರಿಯಿಡೀ ಪ್ರಯಾಣಿಸುತ್ತಾರೆ.
ರೈತರ ನಡುವೆ ಹುಲಿಯ ಇರುವಿಕೆಯ ಕುರಿತು ಚರ್ಚೆಗಳಾದವು. ಅವರಲ್ಲಿ ಒಬ್ಬರು ರಾಮಚಂದ್ರರ ಬಳಿ “ನೀವು ಹುಷಾರಾಗಿರಿ” ಎಂದರು. ಅಲೆಸೂರಿನ ಗ್ರಾಮಸ್ಥರೊಬ್ಬರು ಅಂದು ಸಂಜೆ ಹುಲಿ ನೋಡಿದ್ದರು.
ಹುಲಿ ನೋಡುವುದು ಇಲ್ಲಿ ಒಂದು ಬಗೆಯ ಮಿಸ್ಟರಿಯಾಗಿದೆ.
ಸ್ವಲ್ಪ ಸಮಯದ ನಂತರ ನಾವು ರಾಮಚಂದ್ರರ ತೋಟಕ್ಕೆ ಮರಳಿದೆವು. ಆಗ ಮುಂಜಾನೆ 2 ಗಂಟೆಯಾಗಿತ್ತು. ಅಶುತೋಷ್ ಎಂಬ ಪುಟ್ಟ ಹುಡುಗ ಕೊಟ್ಟಿಗೆಯ ಬಳಿಯ ಚಾರ್ಪಾಯ್ ಮೇಲೆ ಮಲಗಿದ್ದ; ದಾದಾಜಿ ಸದ್ದಿಲ್ಲದೆ ಅವನನ್ನು ನೋಡುತ್ತಾ ಬೆಂಕಿಯಲ್ಲಿ ಚಳಿ ಕಾಯಿಸುತ್ತ ಕುಳಿತಿದ್ದರು. ನಾವು ದಣಿದಿದ್ದೆವು, ಆದರೆ ನಿದ್ರೆ ಬರುತ್ತಿರಲಿಲ್ಲ. ಇನ್ನೊಂದು ಬಾರಿ ಜಮೀನು ಸುತ್ತಿ ಬಂದೆವು.
ರಾಮಚಂದ್ರ 10 ನೇ ತರಗತಿಯ ತನಕ ಓದಿದ್ದು ಆಗ ಬೇರೆ ಕೆಲಸ ಸಿಕ್ಕಿದ್ದರೆ ಬೇಸಾಯ ಮಾಡುತ್ತಿರಲಿಲ್ಲ ಎಂದು ಹೇಳುತ್ತಾರೆ. ಅವರು ತಮ್ಮ ಇಬ್ಬರು ಮಕ್ಕಳನ್ನು ನಾಗ್ಪುರದ ಬೋರ್ಡಿಂಗ್ ಶಾಲೆಗೆ ಹಾಕಿದ್ದಾರೆ. ಅವರು ದೊಡ್ಡವರಾದ ನಂತರ ಬೇಸಾಯಕ್ಕೆ ಬರುವುದು ಈ ತಂದೆಗೆ ಇಷ್ಟವಿಲ್ಲ. ಅಶುತೋಷ್ ರಜೆಯ ಕಾರಣ ಮನೆಯಲ್ಲಿದ್ದ.
ಇದ್ದಕ್ಕಿದ್ದಂತೆ, ಎಲ್ಲಾ ದಿಕ್ಕುಗಳಿಂದ ಕಾಡು ಹಂದಿಗಳ ಸದ್ದು ಹೊರಹೊಮ್ಮಿದವು. ರೈತರು ತಟ್ಟೆಗಳನ್ನು ಬಡಿಯುತ್ತಾ ದೊಡ್ಡ ದನಿಯಲ್ಲಿ ಕೂಗತೊಡಗಿದರು. ಪ್ರಾಣಿಗಳನ್ನು ಹೆದರಿಸಲು ಅವರು ಇದನ್ನು ಆಗಾಗ್ಗೆ ಮಾಡುತ್ತಿರುತ್ತಾರೆ.
ನನ್ನ ದಿಗ್ಭ್ರಮೆಗೊಂಡ ಮುಖಭಾವವನ್ನು ನೋಡಿ ದಾದಾಜಿ ಮುಗುಳ್ನಕ್ಕರು. ರಾಮಚಂದ್ರ ಕೂಡ ನಕ್ಕರು. "ಇದು ನಿಮಗೆ ವಿಲಕ್ಷಣವಾಗಿ ತೋರಬಹುದು" ಎಂದು ಅವರು ಹೇಳಿದರು, "ಆದರೆ ಇದು ರಾತ್ರಿಯಿಡೀ ನಡೆಯುತ್ತದೆ. ಇತರ ಹೊಲಗಲ ರೈತರಿಗೆ ಗೊತ್ತಾಗಲೆಂದು ಸಹ ಅವರು ಕಿರುಚುತ್ತಾರೆ. ಪ್ರಾಣಿಗಳನ್ನು ಒಂದು ಹೊಲವನ್ನು ದಾಟಿ ಇನ್ನೊಂದು ಹೊಲಕ್ಕೆ ಹೋಗಬಹುದೆನ್ನುವುದು ಇದಕ್ಕೆ ಕಾರಣ" 15 ನಿಮಿಷಗಳ ನಂತರ, ಗದ್ದಲ ಕೊನೆಗೊಳ್ಳುತ್ತದೆ ಮತ್ತು ಎಲ್ಲವೂ ಮತ್ತೆ ಶಾಂತವಾಯಿತು.
ಮುಂಜಾನೆ 3:30 ರ ಸುಮಾರಿಗೆ, ನಕ್ಷತ್ರಗಳಿಂದ ಕೂಡಿದ ಆಕಾಶದ ಕೆಳಗೆ, ನಾವು ಬೇರೆ ಬೇರೆಯಾಗಿ ನಮ್ಮ ನಮ್ಮ ಮಚಾನುಗಳಲ್ಲಿ ಮಲಗಲು ಹೋದೆವು, ನನ್ನ ಸುತ್ತಲೂ ಕೀಟಗಳ ಶಬ್ದ ಜೋರಾಗಿತ್ತು. ನಾನು ಅಂಗಾತ ಮಲಗಿದ್ದೆ. ಇಲ್ಲಿ ಸ್ಥಳ ವಿಶಾಲವಾಗಿತ್ತು. ಹರಿದ ಬಿಳಿ ಟಾರ್ಪಾಲಿನ್ ಶೀಟ್ ಗಾಳಿಯೊಂದಿಗೆ ಹಾರುತ್ತಿತ್ತು. ನಕ್ಷತ್ರಗಳನ್ನು ಎಣಿಸುತ್ತಾ ಸ್ವಲ್ಪ ಹೊತ್ತು ನಿದ್ರಿಸಿದೆ. ಆಗಾಗ ರೈತರು ಕೂಗುವ ಸದ್ದು ಕೇಳುತ್ತಿತ್ತು. ಎಚ್ಚರವಾದಾಗ ಎದ್ದು ಹೊರಗೆ ನೋಡಿದರೆ ಎಲ್ಲೆಡೆ ಇಬ್ಬನಿ ಸುರಿದು ಹೊಲಗಳನ್ನು ಆವರಿಸಿತ್ತು.
ರಾಮಚಂದ್ರ ಮತ್ತು ದಾದಾಜಿ ಸ್ವಲ್ಪ ಹೊತ್ತಿಗೂ ಮೊದಲೇ ಎದ್ದಿದ್ದರು. ದಾದಾಜಿ ಜಮೀನಿನಲ್ಲಿದ್ದ ಏಕೈಕ ಕಿತ್ತಳೆ ಮರದಿಂದ ಕೆಲವು ಹಣ್ಣುಗಳನ್ನು ಕಿತ್ತು ಮನೆಗೆ ತೆಗೆದುಕೊಂಡು ಹೋಗಲು ಕೊಟ್ಟರು.
ರಾಮಚಂದ್ರ ಹೊಲದ ಬೆಳೆಗಳನ್ನು ಪ್ರಾಣಿಗಳು ಮುಟ್ಟಿವೆಯೇ ಎಂದು ಪರಿಶೀಲನೆ ನಡೆಸಲು ಹೊಲದ ಸುತ್ತ ಹೊರಟರು. ನಾನು ಅವರನ್ನು ಹಿಂಬಾಲಿಸಿದೆ.
ನಾವು ಬೆಳಿಗ್ಗೆ 7 ಗಂಟೆಗೆ ಊರಿಗೆ ಮರಳಿದೆವು. ಅದೃಷ್ಟಕ್ಕೆ ಬೆಳೆಗೆ ಯಾವುದೇ ಹಾನಿಯಾಗಿಲ್ಲವೆಂದು ಅವರು ನಿಟ್ಟುಸಿರಿಟ್ಟರು.
ದಿನದ ಸ್ವಲ್ಪ ಹೊತ್ತು ಕಳೆದ ನಂತರ ಅವರಿಗೆ ಊರಿನ ಇತರ ರೈತರ ಹೊಲದ ಕತೆ ತಿಳಿಯಿದೆ.
ನಾನು ಆ ಕುಟುಂಬಕ್ಕೆ ವಿದಾಯ ಹೇಳಿ ಹೊರಡುವಾಗ ರಾಮಚಂದ್ರ ಹೊಸದಾಗಿ ಮಿಲ್ ಮಾಡಿಸಿದ್ದ ಅಕ್ಕಿಯ ಪೊಟ್ಟಣವೊಂದನ್ನು ನನ್ನ ಕೈಯಲ್ಲಿರಿಸಿದರು. ಅದು ಪರಿಮಳಯುಕ್ತ ತಳಿಯಾಗಿತ್ತು. ಅವರು ಅದನ್ನು ಬೀಜದಿಂದ ಭತ್ತವಾಗಿಸುವ ದಾರಿಯಲ್ಲಿ ಹಲವು ರಾತ್ರಿಗಳನ್ನು ನಿದ್ರೆಯಿಲ್ಲದೆ ಕಳೆದಿದ್ದಾರೆ.
ಖೊಲ್ಡೋಡಾವನ್ನು ಬಿಟ್ಟು ಹೊಲಗಳನ್ನು ದಾಟುವಾಗ, ಪುರುಷರು ಮತ್ತು ಮಹಿಳೆಯರು ಸದ್ದಿಲ್ಲದೆ ಹೊಲಗಳಿಂದ ಮನೆಗೆ ಹಿಂತಿರುಗುತ್ತಿರುವುದನ್ನು ನೋಡಿದೆ. ನನ್ನ ಸಾಹಸ ಮುಗಿದಿತ್ತು. ಅವರ ಬೆನ್ನು ಮುರಿಯುವ ಕೆಲಸಗಳ ದಿನಚರಿ ಆಗಷ್ಟೇ ಪ್ರಾರಂಭವಾಗಿತ್ತು.
ಅನುವಾದ: ಶಂಕರ. ಎನ್. ಕೆಂಚನೂರು