“ನನಗೆ ಒಂದೇ ಒಂದು ಮೀನು ಸಿಕ್ಕದೆ ಇವತ್ತಿಗೆ ಆರು ದಿನ ಆಯ್ತು” ಎಂದು ವುಲಾರ್ ಸರೋವರದ ದಡದಲ್ಲಿ ನಿಂತಿರುವ ಅಬ್ದುಲ್ ರಹೀಮ್ ಕಾವಾ ಹೇಳುತ್ತಾರೆ. 65 ವರ್ಷದ ಈ ಮೀನುಗಾರ ತನ್ನ ಪತ್ನಿ ಮತ್ತು ಮಗನೊಂದಿಗೆ ಇಲ್ಲಿ ಒಂದು ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಬಂಡಿಪೊರ್ ಜಿಲ್ಲೆಯ ಕಾನಿ ಬಾತಿ ಪ್ರದೇಶದಲ್ಲಿ ನೆಲೆಗೊಂಡಿರುವ ಮತ್ತು ಝೀಲಂ ನದಿ ಮತ್ತು ಮಧುಮತಿ ಹೊಳೆಯಿಂದ ಪೋಷಿಸಲ್ಪಡುವ ವುಲಾರ್ ಸರೋವರ ತನ್ನ ಸುತ್ತಲೂ ವಾಸಿಸುವ ಜನರ ಪಾಲಿಗೆ ಏಕೈಕ ಜೀವನೋಪಾಯ ಮೂಲ - ಸರಿಸುಮಾರು 18 ಹಳ್ಳಿಗಳ ಕನಿಷ್ಠ 100 ಕುಟುಂಬಗಳು ಈ ಸರೋವರದ ದಡದಲ್ಲಿ ಬದುಕುತ್ತಿವೆ.
“ಮೀನು ಹಿಡಿಯುವುದೊಂದೇ ನಮಗಿರುವ ಹೊಟ್ಟೆಪಾಡಿನ ದಾರಿ” ಎನ್ನುತ್ತಾರೆ ಅಬ್ದುಲ್. ಆದರೆ “ಸರೋವರದಲ್ಲಿ ನೀರಿಲ್ಲ. ಈಗ ನೀರಿನಲ್ಲಿ ನಡೆದುಕೊಂಡು ಈ ಕೆರೆಯನ್ನು ದಾಟಬಹುದು ಏಕೆಂದರೆ, ಮೂಲೆಗಳಲ್ಲಿ ನೀರಿನ ಆಳ ಕೇವಲ ನಾಲ್ಕೈದು ಅಡಿಗಳಿಗೆ ಇಳಿದಿದೆ” ಎಂದು ಅವರು ಸರೋವರದ ಅಂಚುಗಳನ್ನು ತೋರಿಸುತ್ತಾ ಹೇಳುತ್ತಾರೆ.
ಮೀನುಗಾರ ಕುಟುಂಬದ ಮೂರನೇ ತಲೆಮಾರಿನವರಾದ ಅವರು ಈ ಸರೋವರದಲ್ಲಿ ಕಳೆದ 40 ವರ್ಷಗಳಿಂದ ಮೀನುಗಾರಿಕೆ ನಡೆಸುತ್ತಿದ್ದಾರೆ. “ನಾನು ಸಣ್ಣವನಿರುವಾಗ ಅಪ್ಪ ಮೀನು ಹಿಡಿಯಲು ಹೋಗುವಾಗ ನನ್ನನ್ನೂ ಕರೆದೊಯ್ಯುತ್ತಿದ್ದರು. ಅವರು ಮೀನು ಹಿಡಿಯುವುದನ್ನು ನೋಡುತ್ತಾ ನಾನೂ ಅದನ್ನು ಕಲಿತುಕೊಂಡೆ” ಎಂದು ಅವರು ಹೇಳುತ್ತಾರೆ. ಅಬ್ದುಲ್ ಅವರ ಮಗ ಕೂಡ ಕುಟುಂಬದ ವೃತ್ತಿಯನ್ನು ಅನುಸರಿಸಿದ್ದಾರೆ.
ಪ್ರತಿ ದಿನ ಬೆಳಗ್ಗೆ ಅಬ್ದುಲ್ ಮತ್ತು ಅವರ ಸಹಚರಿ ಮೀನುಗಾರರು ತಮ್ಮ ಜಾಲ್ ಜೊತೆ ವುಲರ್ ಕಡೆ ಹೊರಡುತ್ತಾರೆ (ಜಾಲ್ - ನೈಲಾನ್ ಹಗ್ಗ ಬಳಸಿ ಅವರೇ ನೇಯ್ದ ಬಲೆ). ಬಲೆಯನ್ನು ನೀರಿಗೆ ಎಸೆಯುವ ಅವರು ಕೆಲವೊಮ್ಮೆ ಮೀನುಗಳನ್ನು ಆಕರ್ಷಿಸುವ ಸಲುವಾಗಿ ತಾವೇ ಕೈಯಿಂದ ತಯಾರಿಸಿದ ಸಣ್ಣ ಡೋಲನ್ನು ಬಾರಿಸುತ್ತಾರೆ.
ವುಲಾರ್ ಭಾರತದಲ್ಲೇ ಅತಿದೊಡ್ಡ ಸಿಹಿನೀರಿನ ಸರೋವರ ಆದರೆ ಕಳೆದ ನಾಲ್ಕು ವರ್ಷಗಳಲ್ಲಿ, ವುಲಾರ್ ಸರೋವರದ ನೀರು ಹೆಚ್ಚು ಮಲಿನಗೊಂಡಿರುವುದರಿಂದಾಗಿ ವರ್ಷಪೂರ್ತಿ ಮೀನು ಹಿಡಿಯಲು ಸಾಧ್ಯವಾಗುತ್ತಿಲ್ಲ. "ಈ ಮೊದಲು, ನಾವು ವರ್ಷದಲ್ಲಿ ಕನಿಷ್ಠ ಆರು ತಿಂಗಳು ಮೀನು ಹಿಡಿಯುತ್ತಿದ್ದೆವು. ಆದರೆ ಈಗ ನಾವು ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಮಾತ್ರ ಮೀನು ಹಿಡಿಯುತ್ತೇವೆ" ಎಂದು ಅಬ್ದುಲ್ ಹೇಳುತ್ತಾರೆ.


