ದೇವತೆಗಳು ಕೆಲವೊಮ್ಮೆ ತಮ್ಮ ಭಕ್ತರೊಂದಿಗೆ ಸಂಚಾರ ಹೊರಡುತ್ತಾರೆ. ಮಾ ಅಂಗರಮೋತಿ ಕೂಡ.
ಸುಮಾರು 45 ವರ್ಷಗಳ ಹಿಂದೆ ಈ ದೇವಿ ಧಯ್-ಚನ್ವಾರ್ ಗ್ರಾಮದಲ್ಲಿ ನೆಲೆಸಿದ್ದಳು. "ಮಹಾನದಿ ಮತ್ತು ಸುಖ ನದಿ ಎಂಬ ಎರಡು ನದಿಗಳ ನಡುವೆ ಮಾ ಅಂಗರಮೋತಿ ನಲೆಸಿದ್ದಳು," ಎಂದು ಸುಮಾರು 50 ವರ್ಷ ಪ್ರಾಯದ, ಈ ಬುಡಕಟ್ಟು ದೇವತೆಯ ಮುಖ್ಯ ಅರ್ಚಕ ಅಥವಾ ಬೈಗಾ ಆಗಿರುವ ಗೊಂಡ ಸಮುದಾಯದ ಈಶ್ವರ್ ನೇತಮ್ ಹೇಳುತ್ತಾರೆ.
ಊರಿಗೆ ಊರೇ ಸ್ಥಳಾಂತರಗೊಂಡರೂ ಮಾ ಅಂಗರಮೋತಿಯ ಜನಪ್ರಿಯತೆಯೇನು ಕಮ್ಮಿಯಾಗಿಲ್ಲ. ಈಗಲೂ ಊರು -ಪರ ಊರುಗಳಿಂದ 500 ರಿಂದ 1,000 ಭಕ್ತರು ಪ್ರತಿದಿನ ದೇವಾಲಯಕ್ಕೆ ಬೇಟಿ ನೀಡುತ್ತಾರೆ. ಈ ಜಾತ್ರೆಗೆ ದೇವತೆಯ ಹೆಸರನ್ನೇ ಇಡಲಾಗಿದೆ. ಆದರೆ ಗಂಗ್ರೇಲ್ ಮಾದಾಯಿ ಎಂದೂ ಕರೆಯುತ್ತಾರೆ. ಇದು ಗ್ರಾಮದ ಹೆಸರೂ ಹೌದು. ಅಲ್ಲದೇ ಹತ್ತಿರದ ಅಣೆಕಟ್ಟನ್ನೂ ಹಾಗೆಯೇ ಕರೆಯುತ್ತಾರೆ. ದೇವಿ ತನ್ನ ಸ್ನೇಹಿತರನ್ನೇನು ಕಳೆದುಕೊಂಡಿಲ್ಲ. ವರ್ಷಂಪ್ರತಿ ದೀಪಾವಳಿಯ ನಂತರ ಬರುವ ಮೊದಲ ಶುಕ್ರವಾರದಂದು ಮಾ ಅಂಗರಮೋತಿ ತನ್ನ ವಾರ್ಷಿಕ ಜಾತ್ರೆಗೆ ನೆರೆಯ ಗ್ರಾಮಗಳ ದೇವತೆಗಳನ್ನು ಆಹ್ವಾನಿಸುತ್ತಾಳೆ.
"ನಮ್ಮ ಹಿರಿಯರ ಕಾಲದಿಂದಲೂ ನಮ್ಮ ಬುಡಕಟ್ಟು ಇರುವ ಪ್ರತಿಯೊಂದು ಹಳ್ಳಿಯಲ್ಲೂ ಈ ಮಾದಾಯಿಯನ್ನು ಪೂಜಿಸುತ್ತೇವೆ," ಎಂದು ಗೊಂಡ ಸಮುದಾಯದ ಬುಡಕಟ್ಟು ನಾಯಕ ಮತ್ತು ಗಂಗ್ರೇಲ್‌ನಲ್ಲಿ ಜಾತ್ರೆಯನ್ನು ಆಯೋಜಿಸುವ ಮಂಡಳಿಯ ಸದಸ್ಯ ವಿಷ್ಣು ನೇತಮ್ ಹೇಳುತ್ತಾರೆ.
"ಮಾದಾಯಿ ನಮ್ಮ ಬುಡಕಟ್ಟಿನ ಪಾರಂಪರಿಕ ಸಂಸ್ಕೃತಿಯ ಭಾಗ," ಎಂದು ಅವರು ಹೇಳುತ್ತಾರೆ. ಸ್ಥಳೀಯರು ಮತ್ತು ಬೇರೆ ಗ್ರಾಮದವರು ಜಾತ್ರೆಗೆ ಬರುತ್ತಾರೆ, ಉತ್ತಮ ಫಸಲು ಸಿಕ್ಕಿದ್ದಕ್ಕೆ ಕೃತಜ್ಞತೆ ಹೇಳಲು ದೇವಿಗೆ ಹೂವುಗಳನ್ನು ಹರಕೆಯಾಗಿ ಅರ್ಪಿಸುತ್ತಾರೆ, ಮುಂಬರುವ ವರ್ಷದುದ್ದಕ್ಕೂ ತಮ್ಮನ್ನು ಆಶೀರ್ವದಿಸುವಂತೆ ಕೋರುತ್ತಾರೆ. ಜಿಲ್ಲೆಯಲ್ಲಿ ಪ್ರತಿ ವರ್ಷ ನಡೆಯುವ ಸುಮಾರು 50 ಮಾದಾಯಿಗಳಲ್ಲಿ ಇದೂ ಒಂದು. ಇದು ಮಧ್ಯ ಭಾರತದ ರಾಜ್ಯವಾದ ಛತ್ತೀಸ್‌ಗಢದ ಈ ಜಿಲ್ಲೆಯಲ್ಲಿ ನಡೆಯುವ ಮೊದಲ ಮಾದಾಯಿ.
ಸ್ಥಳೀಯ ಗ್ರಾಮಸ್ಥರು ಮತ್ತು ಪರಊರಿನವರು ಈ ಜಾತ್ರೆಗೆ ಬಂದು ಒಳ್ಳೆಯ ಫಸಲು ನೀಡಿದಕ್ಕೆ ದೇವರಿಗೆ ಹೂವುಗಳನ್ನು ಹರಕೆಯಾಗಿ ಅರ್ಪಿಸಿ ಆಶೀರ್ವಾದ ಪಡೆಯುತ್ತಾರೆ
1978 ರಲ್ಲಿ ನೀರಾವರಿಗಾಗಿ ಮತ್ತು ಭಿಲಾಯಿ ಉಕ್ಕಿನ ಸ್ಥಾವರಕ್ಕೆ ನೀರು ನೀಡಲು ಮಹಾನದಿಗೆ ಅಣೆಕಟ್ಟು ಕಟ್ಟಲಾಯಿತು. ಪಂಡಿತ್ ರವಿಶಂಕರ್ ಅಣೆಕಟ್ಟು ಎಂದು ಹೆಸರಿಡಲಾಗಿರುವ ಈ ಅಣೆಕಟ್ಟು, ದೇವತೆ ಮತ್ತು ಅವಳನ್ನು ಆರಾಧಿಸುವ ಗ್ರಾಮಸ್ಥರಿಗೆ ಸಮಸ್ಯೆಯನ್ನುಂಟು ಮಾಡಿತು.
ಅಣೆಕಟ್ಟು ಕಟ್ಟುವಾಗ ಮತ್ತು ಆನಂತರ ಉಂಟಾದ ಪ್ರವಾಹದಿಂದಾಗಿ ಚನ್ವಾರ್ ಗ್ರಾಮಸ್ಥರು ತಮ್ಮ ಮನೆಮಠಗಳನ್ನು ತೊರೆದು ಬೇರೆ ಸ್ಥಳಕ್ಕೆ ವಲಸೆ ಹೋದರು. "ಸುಮಾರು 52-54 ಹಳ್ಳಿಗಳು ನೀರಿನಲ್ಲಿ ಮುಳುಗಿ ಹೋದವು ಮತ್ತು ಜನರು ಗುಳೆಹೋದರು," ಎಂದು ಈಶ್ವರ್ ಹೇಳುತ್ತಾರೆ.
ತಾವು ಊರು ಬಿಡುವಾಗ ತಮ್ಮ ದೇವಿಯನ್ನೂ ಕರೆದುಕೊಂಡು ಹೋದರು. ಅಣೆಕಟ್ಟಿನಿಂದ ಸುಮಾರು 16 ಕಿಲೋಮೀಟರ್ ದೂರದಲ್ಲಿರುವ ಧಮ್ತಾರಿಯ ಗಂಗ್ರೇಲ್‌ನಲ್ಲಿ ಹೊಸ ಬದುಕು ಕಟ್ಟಿಕೊಂಡರು.
ಸುಮಾರು ಐದು ದಶಕಗಳ ನಂತರ ಈ ಅಣೆಕಟ್ಟು ಈಗ ಜನಪ್ರಿಯ ಪ್ರವಾಸಿ ಸ್ಥಳವಾಗಿ ಬದಲಾಗಿದೆ, ಆದರೆ ತಮ್ಮ ಊರು ತೊರೆದ ಹಳ್ಳಿಗರು ಮಾತ್ರ ಇನ್ನೂ ಸರ್ಕಾರ ಕೊಡುವ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ.
ಮಾದಾಯಿಯಲ್ಲಿ ದಿನವಿಡೀ ನಡೆಯುವ ಈ ಜಾತ್ರೆ ಮಧ್ಯಾಹ್ನ ಆರಂಭವಾಗಿ, ಸಂಜೆಯ ವರೆಗೆ ನಡೆಯುತ್ತದೆ. ದೇವಿಯನ್ನು ಅಣೆಕಟ್ಟಿನ ಹತ್ತಿರ ಕೂರಿಸುತ್ತಾರೆ. ಭಕ್ತರು ಬೆಳಿಗ್ಗೆಯೇ ಬರಲು ಶುರು ಮಾಡುತ್ತಾರೆ. ಅವರಲ್ಲಿ ಕೆಲವರು ಅಣೆಕಟ್ಟಿನಲ್ಲಿ ಫೋಟೋ ಶೂಟ್ ಮಾಡುವುದು, ಸೆಲ್ಫಿ ತೆಗೆಯುವುದನ್ನು ಮಾಡುತ್ತಾರೆ.
ಮಾದಾಯಿಗೆ ಹೋಗುವ ರಸ್ತೆಯುದ್ದಕ್ಕೂ ಸಿಹಿತಿಂಡಿಗಳ ಅಂಗಡಿಗಳನ್ನು ಹಾಕಲಾಗಿದೆ. ಈ ಸಂತೆಯಲ್ಲಿ ಕೆಲವು ಅಂಗಡಿಗಳು ಹಳೆಯದಾಗಿದ್ದರೆ, ಇನ್ನು ಕೆಲವನ್ನು ಜಾತ್ರೆಗಾಗಿ ಹಾಕಲಾಗಿದೆ.
ಮಾದಾಯಿ ಆಚರಣೆ ನಡೆಯುವ ಸಮಯಕ್ಕೆ ದೂರ ದೂರದ ಗ್ರಾಮಗಳಿಂದ ಸುಮಾರು ಐದಾರು ಸಾವಿರ ಮಂದಿ ಸೇರಿರುತ್ತಾರೆ. ಧಮತರಿ ಪಟ್ಟಣದ ನಿವಾಸಿ ನೀಲೇಶ್ ರಾಯಚುರ ಅವರು ರಾಜ್ಯಾದ್ಯಂತ ನಡೆಯುವ ಹಲವು ಮಾದಾಯಿಗಳನ್ನು ನೋಡಿದ್ದಾರೆ. "ನಾನು ಕಂಕೇರ್, ನರಹರ್‌ಪುರ್, ನಗ್ರಿ-ಸಿಹವಾ, ಚರಮಾ, ಪಖಂಜೂರ್, ಹೀಗೆ ಇನ್ನೂ ಅನೇಕ ಸ್ಥಳಗಳಲ್ಲಿ ನಡೆಯುವ ಮಾದಾಯಿಗಳಿಗೆ ಭೇಟಿ ಕೊಟ್ಟಿದ್ದೇನೆ, ಆದರೆ ಗಂಗೇಲ್‌ನಲ್ಲಿ ನಡೆಯುವ ಮಾದಾಯಿ ಮಾತ್ರ ಎಲ್ಲಕ್ಕಿಂತ ಭಿನ್ನ," ಎಂದು ಅವರು ಹೇಳುತ್ತಾರೆ.
ಈ ಮಾದಾಯಿಗೆ ಮಕ್ಕಳಾಗದ ಮಹಿಳೆಯರೂ ಹರಕೆ ಹೇಳಿಕೊಳ್ಳುತ್ತಾರೆ. “ಮಕ್ಕಳಿಲ್ಲದ ಮಹಿಳೆಯರು ಮಾ ಅಂಗರಮೋತಿಯ ಆಶೀರ್ವಾದ ಪಡೆಯಲು ಬರುತ್ತಾರೆ. ಅವರಲ್ಲಿ ಹಲವರ ಬಯಕೆ ಈಡೇರಿದೆ,” ಎನ್ನುತ್ತಾರೆ ಬುಡಕಟ್ಟು ಮುಖಂಡ ಮತ್ತು ಹೋರಾಟಗಾರ ಈಶ್ವರ ಮಾಂಡವಿ.
ರಾಯ್‌ಪುರ (85 ಕಿಮೀ), ಜಾಂಜ್‌ಗಿರ್ (265 ಕಿಮೀ) ಮತ್ತು ಬೆಮೆತಾರಾ (130 ಕಿಮೀ) ಹೀಗೇ ಹತ್ತಿರದ ಮತ್ತು ದೂರದ ಸ್ಥಳಗಳಿಂದ ಬಂದಿರುವ ಮಹಿಳೆಯರನ್ನು ನೋಡಬಹುದು. ಅವರು ಸರದಿ ಸಾಲಿನಲ್ಲಿ ನಿಂತು ದರ್ಶನಕ್ಕಾಗಿ ಕಾಯುತ್ತಿರುತ್ತಾರೆ.
ಅವರಲ್ಲಿ ಒಬ್ಬರು ಹೀಗೆ ಹೇಳುತ್ತಾರೆ: "ನನಗೆ ಮದುವೆಯಾಗಿ ಐದು ವರ್ಷಗಳಾಗಿವೆ, ಆದರೆ ಇನ್ನೂ ಮಗುವಾಗಿಲ್ಲ. ಹಾಗಾಗಿ ಆಶೀರ್ವಾದ ಪಡೆಯಲು ಬಂದಿದ್ದೇನೆ.” ಹೆಸರು ಹೇಳಲು ಬಯಸದ ಈ ಮಹಿಳೆ, ಜಾತ್ರೆಗೆ ಬಂದು ಬೆಳಿಗ್ಗೆಯಿಂದ ಉಪವಾಸ ಮಾಡುವ ಮುನ್ನೂರು ನಾನೂರು ಮಹಿಳೆಯರಲ್ಲಿ ಒಬ್ಬರು.
ಇತರ ಗ್ರಾಮಗಳಿಂದ, ಆರಾಧಕರು ತಮ್ಮ ಡಾಂಗುಗಳನ್ನು ಹಿಡಿದುಕೊಂಡು (ದೇವತೆಗಳ ಧ್ವಜಗಳನ್ನು ಕಟ್ಟಿರುವ ಬಿದಿರಿನ ಕಂಬಗಳು) ಅಂಗಗಳ (ದೇವತೆಗಳ) ಜೊತೆಗೆ ದೇವ ನಾಚ್ (ದೇವತೆಗಳ ನರ್ತನ) ನಲ್ಲಿ ಭಾಗವಹಿಸಲು ಬರುತ್ತಾರೆ. ಅವರು ಈ ಕಂಬಗಳು ಮತ್ತು ಮರದ ಪಲ್ಲಕ್ಕಿಗಳನ್ನು ಆ ಪ್ರದೇಶದ ಸುತ್ತಮುತ್ತ ತೆಗೆದುಕೊಂಡು ಹೋಗುತ್ತಾರೆ. ಭಕ್ತರು ಆ ದೇವತೆಗಳ ದರ್ಶನ ಪಡೆಯುತ್ತಾರೆ.
"ಈ ಮಾದಾಯಿಗಳು, ಬುಡಕಟ್ಟು ಸಂಸ್ಕೃತಿ ಮತ್ತು ಬುಡಕಟ್ಟು ಜನಜೀವನವನ್ನು ಹತ್ತಿರದಿಂದ ನೋಡಲು ನನಗೆ ಒಂದು ಅವಕಾಶ ನೀಡುತ್ತವೆ," ಎಂದು ನೀಲೇಶ್ ಹೇಳುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು