ವರದಿಗಾರರಾದ ಅನನ್ಯಾ ಟೋಪ್ನೋ, ರೋಹಿತ್ ಗಾಗ್ರಾಯಿ, ಆಕಾಶ್ ಏಕಾ ಮತ್ತು ಪಲ್ಲಬಿ ಲುಗುನ್ ತಮ್ಮ ವರದಿಗಾರಿಕೆಯ ಅನುಭವವನ್ನು ಪರಿಯೊಡನೆ ಹಂಚಿಕೊಂಡಿದ್ದು ಹೀಗೆ, “ನಾವು ಈ ರೀತಿಯ ಸಂಶೋಧನೆ ಮಾಡುತ್ತಿರುವುದು ಇದೇ ಮೊದಲು. ಸಂತೆಯಲ್ಲಿ ತರಕಾರಿ ಮಾರುವವರೊಂದಿಗೆ ಚೌಕಾಸಿ ಮಾಡುವವರನ್ನು ನೋಡಿದ್ದೇವೆ, ಆದರೆ ತರಕಾರಿಗಳನ್ನು ಬೆಳೆಯುವುದು ಎಷ್ಟು ಕಷ್ಟ ಎನ್ನುವುದು ನಮಗೆ ಗೊತ್ತು. ಜನರು ರೈತರೊಂದಿಗೆ ಬೆಲೆಯ ವಿಷಯದಲ್ಲಿ ಏಕೆ ಜಗಳವಾಡುತ್ತಾರೆ ಎನ್ನುವುದು ನಮಗೆ ಬಗೆಹರಿಯದ ಪ್ರಶ್ನೆಯಾಗಿತ್ತು."
ಗ್ರಾಮೀಣ ಪ್ರದೇಶಕ್ಕೆ ಹೋಗಲಾಗದ ವಿದ್ಯಾರ್ಥಿಗಳು ನಗರ ಪ್ರದೇಶಗಳಲ್ಲೇ ಜನರ ಬದುಕನ್ನು ದಾಖಲಿಸಿದ್ದಾರೆ. ತಿರುವನಂತಪುರದ ಗುಜರಿ ವಸ್ತುಗಳನ್ನು ಹೆಕ್ಕುವ ಸಾರಮ್ಮನವರ ಕುರಿತಾದ ವರದಿ ಅವುಗಳಲ್ಲಿ ಒಂದು. ಈ ವರದಿಯಲ್ಲಿ ಸಾರಮ್ಮ "ನನ್ನ ಬಾಲ್ಯದಲ್ಲಿ ನಾನು ತೀವ್ರ ಬಡತನವನ್ನು ಎದುರಿಸಿದ್ದರಿಂದ ಯಾರೂ ಹಸಿವಿನಿಂದ ಇರಬಾರದು ಎಂಬ ನಿಯಮವನ್ನು ನಾನು ಕಟ್ಟುನಿಟ್ಟಾಗಿ ಪಾಲಿಸುತ್ತೇನೆ" ಎಂದು ಹೇಳಿಕೊಂಡಿದ್ದಾರೆ.
ಈ ವರದಿಯನ್ನು ಬರೆದವರು ಆಯಿಷಾ ಜಾಯ್ಸ್. ಅದಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ಹಲವರು ಸಾರಮ್ಮನಿಗೆ ಸಹಾಯ ಮಾಡಲು ಮುಂದೆ ಬಂದರು. ಈ ವರದಿ ಸಾವಿರಾರು ಲೈಕ್ಸ್ ಮತ್ತು ಕಮೆಂಟ್ಸ್ ಪಡೆದಿತ್ತು. ಈ ವರದಿಯಲ್ಲಿ ನಿಮ್ಮ ಮಗಳು ಏಕೆ ಇದೇ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಸಾರಮ್ಮ, “ದಲಿತರಿಗೆ ಯಾರು ಕೆಲಸ ಕೊಡುತ್ತಾರೆ?” ಎಂದು ಕೇಳಿದ್ದಾರೆ. “ಜನರು ಇನ್ನೊಬ್ಬರ ಜೊತೆ ಬೆರೆಯುವ ಮೊದಲು ಅವರು ಯಾರೆನ್ನುವುದನ್ನು ಪರಿಶೀಲಿಸುತ್ತಾರೆ. ನಾವು ಎಷ್ಟು ಬುದ್ಧಿವಂತಿಕೆಯಿಂದ ಇದ್ದರೂ, ಏನೇ ಕೆಲಸ ಮಾಡಿದರೂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ವರದಿ ಮಾಡಿದ್ದ ಆಯಿಷಾ ಅವರ ಬಳಿ ಹೇಳಿದ್ದರು.
ಸಂದರ್ಶನ ತಂತ್ರಗಳು, ಸಂದರ್ಶಕರಿಂದ ಮಾಹಿತಿಯುತ ಸಮ್ಮತಿಯನ್ನು ಪಡೆಯುವುದು ಮತ್ತು ಓದುಗರನ್ನು ತೊಡಗಿಸಿಕೊಳ್ಳುವಂತೆ ಮಾಡಬಲ್ಲ ಇತರ ವಿವರಗಳನ್ನು ಸೆರೆಹಿಡಿಯುವ ಅಗತ್ಯತೆಯ ಬಗ್ಗೆಯೂ ನಾವು ಅವರಿಗೆ ತರಬೇತಿ ನೀಡುತ್ತೇವೆ. ಮುಖ್ಯವಾಗಿ, ವಿದ್ಯಾರ್ಥಿಗಳು ಈ ಬರಹಗಳು ವೈಯಕ್ತಿಕ ಬ್ಲಾಗ್ ಆಗುವುದರ ಬದಲು ವಸ್ತುನಿಷ್ಠ ವರದಿಯ ತುಣುಕುಗಳಾಗಿ ಕಾಣುವಂತೆ ಈ ಕಥೆಗಳನ್ನು ಹೇಗೆ ಬರೆಯುವುದು ಮತ್ತು ರಚಿಸುವುದು ಎಂಬುದನ್ನು ಸಹ ಕಲಿಯುತ್ತಾರೆ.
ಪತ್ರಿಕೋದ್ಯಮ ಎನ್ನುವುದು ಅನೇಕ ಮೂಲಗಳು ಮತ್ತು ಅಂಕಿ-ಅಂಶಗಳಿಂದ ಬೆಂಬಲಿತವಾದ ದೀರ್ಘ-ರೂಪದ ತನಿಖಾ ತುಣುಕುಗಳೊಂದಿಗೆ ಸಂಬಂಧ ಹೊಂದಿದ್ದರೂ, ಜನರ ಬದುಕಿನ ಸರಳ ವಿವರಗಳನ್ನು ಬರೆಯಲು ನಾವು ನಮ್ಮ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತೇವೆ. ಈ ವಿವರಗಳು ವ್ಯಕ್ತಿಗಳ ದೈನಂದಿನ ಬದುಕಿನ ಅನುಭವಗಳು, ಅವರ ಕೆಲಸದ ಸ್ವರೂಪ, ಅವರು ಕೆಲಸ ಮಾಡುವ ಸಮಯ, ಅವರು ಪಡೆಯುವ ಸಂತೋಷ, ಅವರು ಎದುರಿಸುತ್ತಿರುವ ಹೋರಾಟಗಳು, ಅಡೆತಡೆಗಳ ಎದುರಿನಲ್ಲಿ ಅವರ ಸ್ಥಿತಿಸ್ಥಾಪಕತ್ವ, ಅವರ ಜೀವನದ ಆರ್ಥಿಕತೆ ಮತ್ತು ಅವರ ಮಕ್ಕಳ ಬಗ್ಗೆ ಅವರು ಹೊಂದಿರುವ ಆಕಾಂಕ್ಷೆಗಳನ್ನು ದಾಖಲಿಸುತ್ತವೆ.
ಪರಿ ಎಜುಕೇಷನ್ ಪ್ರಾಮಾಣಿಕ ಪತ್ರಿಕೋದ್ಯಮದ ದೃಷ್ಟಿಕೋನವನ್ನು ಬಳಸಿಕೊಂಡು ಸಾಮಾಜಿಕ ವಿಷಯಗಳನ್ನು ಗುರುತಿಸಲು ಮತ್ತು ಪ್ರಶಂಸಿಸುವತ್ತ ಯುವಜನರನ್ನು ಸೆಳೆಯುವ ನಮ್ಮ ಪ್ರಯತ್ನವಾಗಿದೆ. ಜನರು ಮತ್ತು ಅವರ ಕಥೆಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳುವ ಮೂಲಕ, ವಿದ್ಯಾರ್ಥಿಗಳು ಮಾನವೀಯ ಸ್ಪರ್ಶವನ್ನು ಪತ್ರಿಕೋದ್ಯಮಕ್ಕೆ ಮತ್ತು ತಮ್ಮ ತರಗತಿಗಳಿಗೆ ಮರಳಿ ತರುತ್ತಾರೆ.
ನಿಮ್ಮ ಸಂಸ್ಥೆಯೊಂದಿಗೂ ಪರಿ ಕೆಲಸ ಮಾಡಬೇಕೆನ್ನುವುದು ನಿಮ್ಮ ಬಯಕೆಯಾಗಿದ್ದಲ್ಲಿ, ದಯವಿಟ್ಟು [email protected] ಬರೆಯಿರಿ.
ಈ ಲೇಖನದಲ್ಲಿನ ಫೀಚರ್ ಚಿತ್ರವನ್ನು ಪರಿಯ ಫೋಟೋ ಸಂಪಾದಕರಾದ ಬಿನೈಫರ್ ಭರೂಚಾ ಸೆರೆಹಿಡಿದಿದ್ದಾರೆ.
ಅನುವಾದ: ಶಂಕರ. ಎನ್. ಕೆಂಚನೂರು