ಇದೆಲ್ಲವೂ ಒಂದು ಕಾಗದದ ತುಂಡು ಮತ್ತು ಅಪರಿಚಿತರೊಬ್ಬರ ಪ್ರಶ್ನೆಯೊಂದಿಗೆ ಪ್ರಾರಂಭವಾಯಿತು.
12 ವರ್ಷದ ಕಮಲೇಶ್ ಡಾಂಡೋಲಿಯಾ ರಾಥೇಡ್ ಗ್ರಾಮದಲ್ಲಿರುವ ತನ್ನ ಮನೆಯ ಸಮೀಪವಿರುವ ಪ್ರವಾಸಿ ಅತಿಥಿ ಗೃಹದ ಬಳಿ ಅಲೆದಾಡುತ್ತಿದ್ದಾಗ ಪರದೇಸಿ (ಅಪರಿಚಿತ) ಯನ್ನು ಕಂಡರು. ಮೊದಲಿಗೆ ಅವರು ನನ್ನ ಬಳಿ ಭರಿಯಾ ಭಾಷೆ ಬರುತ್ತದೆಯೇ ಎಂದು ಕೇಳಿದರು." ಕಮಲೇಶ್ ಉತ್ತರಿಸುವ ಮೊದಲೇ, "ಆ ವ್ಯಕ್ತಿ ನನಗೆ ಒಂದು ಕಾಗದವನ್ನು ಕೊಟ್ಟು ಓದಲು ಕೇಳಿದರು."
ಆ ಅಪರಿಚಿತ ಸರಿಯಾದ ವ್ಯಕ್ತಿಯ ಬಳಿಯೇ ಕೇಳಿದ್ದರು. ಇಲ್ಲಿನ ತಮಿಯಾ ಬ್ಲಾಕ್ ಪಾತಾಲ್‌ಕೋಟ್ ಕಣಿವೆಯಲ್ಲಿ ಮಧ್ಯಪ್ರದೇಶದಲ್ಲಿ ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪಿನಡಿ (ಪಿವಿಟಿಜಿ) ಬರುವ ಭರಿಯಾ ಸಮುದಾಯದ ಅನೇಕ ಸದಸ್ಯರಿದ್ದಾರೆ. ಕಮಲೇಶ್ ಭರಿಯಾ ಸಮುದಾಯದವರು ಮತ್ತು ಅವರಿಗೆ ತಮ್ಮ ಸಮುದಾಯದ ಭಾಷೆಯಾದ ಭರಿಯಾಟಿಯಲ್ಲಿ ನಿರರ್ಗಳವಾಗಿ ಮಾತನಾಡಲು ಬರುತ್ತಿತ್ತು.
ಪುಟ್ಟ ಹುಡುಗ ಕಾಗದವನ್ನು ಆತ್ಮವಿಶ್ವಾಸದಿಂದ ಓದಿದ. ಅದರಲ್ಲಿ ಅ ರ ಸಮುದಾಯದ ಕುರಿತಾದ ಸಾಮಾನ್ಯ ಮಾಹಿತಿಯನ್ನು ಬರೆಯಲಾಗಿತ್ತು. ದೇವನಾಗರಿ ಲಿಪಿಯಲ್ಲಿದ್ದ ಕಾರಣ, "ಓದುವುದು ಸುಲಭವೆಂದು ಅನಿಸಿತು." ವಸ್ತುಗಳ ಹೆಸರುಗಳನ್ನು ಒಳಗೊಂಡ ಎರಡನೇ ವಿಭಾಗದಲ್ಲಿ, ಕಮಲೇಶ್ ಎಡವತೊಡಗಿದರು. "ಆ ಪದಗಳು ಖಂಡಿತವಾಗಿಯೂ ಭರಿಯಾಟಿಯಲ್ಲಿದ್ದವು, ಆ ಶಬ್ದಗಳು ತುಂಬಾ ಪರಿಚಿತವಾಗಿದ್ದವು, ಆದರೆ ಆ ಪದಗಳು ಅಪರಿಚಿತವಾಗಿದ್ದವು" ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಏನನ್ನೋ ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಾ ಅವರು ಒಂದು ನಿಮಿಷ ವಿರಾಮ ತೆಗೆದುಕೊಂಡರು. "ನಿರ್ದಿಷ್ಟವಾಗಿ ಒಂದು ಪದವಿತ್ತು. ಅದು ಒಂದು ರೀತಿಯ ಜಂಗ್ಲೀ ಜಡಿಬೂಟಿ [ಔಷಧೀಯ ಸಸ್ಯ]. ನಾನು ಅದನ್ನು ಬರೆದಿಟ್ಟುಕೊಂಡಿದ್ದರೆ ಚೆನ್ನಾಗಿರುತ್ತಿತ್ತು", ಎಂದು ಅವರು ನಿರಾಶೆಯಿಂದ ತಲೆ ಅಲ್ಲಾಡಿಸುತ್ತ ಹೇಳುತ್ತಾರೆ. "ಈಗ ನನಗೆ ಆ ಪದ ಅಥವಾ ಅದರ ಅರ್ಥವೂ ನೆನಪಿಲ್ಲ."
ಕಮಲೇಶ್ ಅವರ ವಿಷಾದವು ಅವರನ್ನು ಯೋಚಿಸುವಂತೆ ಮಾಡಿತು: "ಭರಿಯಾಟಿಯಲ್ಲಿ ಇನ್ನೂ ಎಷ್ಟೋ ಪದಗಳು ನನಗೆ ತಿಳಿದಿಲ್ಲ ಎನ್ನುವುದು ತಿಳಿದು ನನಗೆ ಕಸಿವಿಸಿಯಾಯಿತು." ಅವರಿಗೆ ತಾನು ನಿರರ್ಗಳವಾಗಿ ಮಾತನಾಡುತ್ತೇನೆ ಎನ್ನುವುದು ತಿಳಿದಿತ್ತು - ಅವರು ತನ್ನನ್ನು ಬೆಳೆಸಿದ ತನ್ನ ಅಜ್ಜ-ಅಜ್ಜಿಯರೊಂದಿಗೆ ಭರಿಯಾಟಿ ಮಾತನಾಡುತ್ತಾ ಬೆಳೆದವರು. "ನನ್ನ ಹದಿಹರೆಯದ ವರ್ಷಗಳ ತನಕ ಅದು ನಾನು ಮಾತನಾಡುತ್ತಿದ್ದ ಏಕೈಕ ಭಾಷೆಯಾಗಿತ್ತು. ನಿರರ್ಗಳವಾಗಿ ಹಿಂದಿ ಮಾತನಾಡಲು ನಾನು ಈಗಲೂ ಹೆಣಗಾಡುತ್ತೇನೆ" ಎಂದು ಅವರು ನಗುತ್ತಾ ಹೇಳುತ್ತಾರೆ.





















